ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 4, 2010

ಸಾಂಸ್ಕೃತಿಕ ಕಾರ್ಯಕ್ರಮಗಳ ಔಚಿತ್ಯತೆ

‍ನಿಲುಮೆ ಮೂಲಕ

ಜಗನ್ನಾಥ್ ಶಿರ್ಲಾಲ್

ನಮ್ಮ ನೆಲದ ಸಾಂಸ್ಕೃತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮ ಎನ್ನಬಹುದು. ಇಂತಹ ಕಲಾ ಸಾಧ್ಯತೆಗಳನ್ನು ಆಸ್ವಾದಿಸುವ ಮೂಲಕ ಸಹೃದಯ ಪ್ರೇಕ್ಷಕರು ಮತ್ತಷ್ಟು ಸುಸಂಸ್ಕೃತರಾಗಿ ಬೆಳೆಯಬಹುದು. ಸಾಂಸ್ಕೃತಿಕ ಕಾರ್ಯಕ್ರಮ ಎಂದಾಕ್ಷಣ ಇಷ್ಟಪಡದವರು ಇಲ್ಲ. ದಾರಿಹೋಕರೂ ಕೂಡಾ ಆಸುಪಾಸಿನ ಶಾಲಾ ಕಾಲೇಜು, ಯುವಕ ಸಂಘ, ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷಣ ಮಾತ್ರದಲ್ಲಿ ದೃಷ್ಟಿ ಹಾಯಿಸುತ್ತಾರೆ. ಇನ್ನೂ ಕೆಲವರು ತನ್ನೆಲ್ಲ ಅತ್ಯಗತ್ಯ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮ ವೀಕ್ಷಿಸುವವರಿದ್ದಾರೆ.

       ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕ ಯುಗದಲ್ಲಿ ಮಕ್ಕಳು, ಯುವಕರು, ಹಿರಿಯರನ್ನು ಮನರಂಜಿಸುವ ಮಾಧ್ಯಮವಾಗಿವೆ. ಅಲ್ಲದೆ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗಿದೆ.
        ಇಂತಹ ಕಾರ್ಯಕ್ರಮಗಳು ಮೌಲ್ಯಯುತವಾಗಿ, ಮನೋರಂಜನೆ, ಸಮಯದ ಮಿತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ವಸ್ತು ದೃಷ್ಟಿಯಲ್ಲಿ ಸಂದೇಶದ ಸ್ಪಷ್ಟತೆಯಿದ್ದು ಸಕುಟುಂಬಿಕವಾಗಿ ನೋಡುವಂತಿದ್ದರೆ ಒಳ್ಳೆಯದು.
        ಇಂತಹ ಕಾರ್ಯಕ್ರಮಗಳಲ್ಲಿ ನಿರೂಪಕರಿಗೆ ತನ್ನ ಮಾತಿನ ಶೈಲಿಯ ಛಾಪು ಬೀರಲು ಮತ್ತು ಪ್ರತಿಭೆಯ ಅನಾವರಣಕ್ಕೆ ಬೆಳವಣಿಗೆಗೆ ವೇದಿಕೆಯೂ ಹೌದು. ಕಾರ್ಯಕ್ರಮಗಳಲ್ಲಿ ನಿರೂಪಕರು ಸಾಕಷ್ಟು ಪೂರ್ವ ತಯಾರಿಯೊಂದಿಗೆ ಸ್ಪಷ್ಟವಾಗಿ ಮೂಡಿಬರಲಿರುವ ತಂಡ, ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯಪಡಿಸಿದರೆ ಸಾಕು. ನಿರೂಪಕರು ವೇದಿಕೆಯ ಮೇಲೆ ಕೇವಲ ತನ್ನ ವಾಕ್ಚತುರ್ಯ ತೋರಿಸಿದರೆ ಸಾಲದು, ಪರದೆಯ ಹಿಂದೆ ಇಡೀ ಕಾರ್ಯಕ್ರಮದ ಸ್ಪಷ್ಟ ಚಿತ್ರಣ ಆತನ ಮನದಲ್ಲಿ ಇರಬೇಕು. ಜೊತೆಗೆ ಕಾರ್ಯಕ್ರಮದ ಪಟ್ಟಿಯು ಆತನ ಜೊತೆಯಲ್ಲಿರಬೇಕು. ಯಾವುದನ್ನು ಮೊದಲು, ನಂತರ ಎಂಬುದನ್ನು (priority) ಗುಣ ಮೌಲ್ಯದ ದೃಷ್ಟಿಯಿಂದ ಮತ್ತು ವೀಕ್ಷಕರು ಆಸ್ವಾದಿಸುವ, ಸ್ವೀಕರಿಸುವ ವಿವೇಚನಾ ಪರಿಧಿಯಲ್ಲಿ ಸಂಯೋಜಿಸಬೇಕು. ಕೆಲವೊಂದು ಸಂಸ್ಕೃತಿ ಹೀನ, ಅಸಂಬದ್ಧ ಕಾರ್ಯಕ್ರಮಗಳನ್ನು ತೋರಿಸುವಾಗ ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.
        ಸಹಜವಾಗಿ ಕೆಲವೊಂದು ಕಾರ್ಯಕ್ರಮಗಳಿಗೆ ಹೆಚ್ಚಿನ ಜನಾಕರ್ಷಣೆ ಇರುತ್ತದೆ. ಇಂತಹ ಕಾರ್ಯಕ್ರಮಗಳನ್ನು ಮೊದಲಿಗೆ ಪ್ರದರ್ಶಿಸಿದರೆ ಉಳಿದ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಲ್ಲ ಎಂದಾಗುತ್ತದೆ. ಹೀಗಾಗಬಾರದು. ಬಹಳ ಮುಖ್ಯವಾದ ವಿಚಾರವೆಂದರೆ ಕಾರ್ಯಕ್ರಮ ಪ್ರಸ್ತುತಪಡಿಸುವ ವೇದಿಕೆ ಮತ್ತು ಪರಿಸರ. ನಿರ್ದಿಷ್ಟ ಕಾರ್ಯಕ್ರಮಗಳನ್ನು ಅನುಶಾಸನದ ಚೌಕಟ್ಟಿನೊಳಗೆ ನಡೆಸಿದರೆ ಒಳ್ಳೆಯದು. ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಮಾತಿನ ಮಂಟಪ, ಮಿಮಿಕ್ರಿ, ರಂಗನಾಟಕಗಳು ಸೂಕ್ತವಾಗಿ ಸಾಹಿತ್ಯಾಸಕ್ತರಿಗೆ ಹಿಡಿಸಬಹುದು. ಅದೇ ರೀತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಜಾತೆಗಳ ವೇದಿಕೆಯಲ್ಲಿ ಯಕ್ಷಗಾನ, ಸಾಮಾಜಿಕ ನಾಟಕ, ಭಕ್ತಿರಸಮಂಜರಿ ಕಾರ್ಯಕ್ರಮಗಳು ಸಾಂದರ್ಭಿಕವಾದುದು. ಶಾಲಾ ಕಾಲೇಜಿನ ವಾರ್ಷಿಕೋತ್ಸವಗಳು ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳು ಮನೋರಂಜನೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಇತ್ತೀಚೆಗೆ ವಿವಾಹ ಸಮಾರಂಭಗಳಲ್ಲಿ ರಸಮಂಜರಿ, ಧಾರ್ಮಿಕ ಭಾಷಣಗಳು ನಡೆಯುತ್ತಿವೆ. ಒಟ್ಟು ವೇದಿಕೆ ಪರಿಸರಕ್ಕೆ ಹೊಂದಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಮನೋರಂಜನೆಯ ಮತ್ತು ಮೌಲ್ವಿಕ ದೃಷ್ಟಿಯಲ್ಲಿ ಸರಿಯಾದುದು.
        ಇತ್ತೀಚೆಗೆ ಮಂಗಳೂರಿನ ಪ್ರಖ್ಯಾತ ವಿದ್ಯಾಕೇಂದ್ರವೊಂದರಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತನಾಮರೊಬ್ಬರಿಂದ ಮಿಮಿಕ್ರಿ ಇಟ್ಟುಕೊಂಡಿದ್ದರು. ಕಾರ್ಯಕ್ರಮ ಸಂಯೋಜಕರ ಅಲ್ಪಜಾನ ಮತ್ತು ಬೇಜವಾಬ್ದಾರಿತನದಿಂದ, ರಾಜ್ಯಾದಂತ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟ ಅವರು ‘ದಮ್ಮಾಯ ಅವಕಾಶ ಮಾಡಿಕೊಡಿ’ ಎಂದು ವಿದ್ಯಾರ್ಥಿಗಳಲ್ಲಿ ಬೇಡುವ ಸ್ಥಿತಿ ಒದಗಿಬಂತು. ವಿದ್ಯಾರ್ಥಿಗಳ ಅಸಹಕಾರ, ಅವಮಾನಗಳು, ವಿದ್ಯಾಲಯದ ಪ್ರಮುಖರ ಸಮ್ಮುಖದಲ್ಲಿಯೇ ನಡೆಯಿತು. ಕಾರಣ ಕಾರ್ಯಕ್ರಮದ ಮೊದಲು ಜಗಮಗಿಸುವ ಬೆಳಕು ಮತ್ತು ಕಿವಿಗಡಚಿಕ್ಕುವ ಸೌಂಡ್‌ಬಾಕ್ಸ್‌ಗಳ ಶಬ್ದದೊಂದಿಗೆ ಹಾಡು, ಡ್ಯಾನ್ಸ್‌ಗಳ ಮಧ್ಯೆ ಮಿಮಿಕ್ರಿ, ಜೋಕ್ಸ್‌ಗಳು ವಿದ್ಯಾರ್ಥಿಗಳ ತಾಳ್ಮೆ ಕಟ್ಟೆಯೊಡೆಯಿತು. ಪ್ರಾರಂಭದಿಂದ ಕೊನೆತನಕ ಯಾವಾಗ ಮುಗಿಸುತ್ತಾರೋ ಎಂಬ ನಿರ್ಲಕ್ಷ್ಯದ ಭಾವನೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬರುತ್ತಿತ್ತು. ಮೊದಲೇ ನಗರದ ಕಾಲೇಜಿನ ಯುವಕ ಯುವತಿಯರಿಗೆ ಬಣ್ಣಬಣ್ಣದ ರಿಯಾಲಿಟಿ ಶೋ ಕುಣಿಯುವುದರಲ್ಲಿ ಹೆಚ್ಚು ಆಸಕ್ತಿ. ಮಿಮಿಕ್ರಿ, ಹರಿಕಥೆ ಎಂದರೆ ಅಷ್ಟಕಷ್ಟೇ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು ಇನ್ನಾವುದೋ ಸಾಹಿತ್ಯದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಬಹುದಿತ್ತು. ಆಹ್ವಾನಿಸಿಯಾಗಿದೆಯಾದರೂ ಕಾರ್ಯಕ್ರಮದ ನಿರೂಪಕರು ಮೊದಲು ಮಿಮಿಕ್ರಿ ಕಾರ್ಯಕ್ರಮ ನಡೆಸಿ ಆನಂತರ ಡ್ಯಾನ್ಸ್, ಹಾಡು, ನಡೆಸುತ್ತಿದ್ದರೆ ಒಳ್ಳೆಯದಿತ್ತು, ಆದರೆ ಹಾಗೆ ಯೋಚಿಸದೆ ಒಬ್ಬ ಶ್ರೇಷ್ಟ, ಪ್ರತಿಭಾನ್ವಿತ ಕಲಾವಿದರಿಗೆ ಅವಮಾನವಾಗುವ ಸಂದರ್ಭ ಏರ್ಪಟ್ಟಿತು.
        ನಮ್ಮ ಮನಸ್ಸಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದರೆ ಫಿಲ್ಮ್‌ಡ್ಯಾನ್ಸ್, ಟ್ರ್ಯಾಕ್ ಹಾಕಿ ಹಾಡುವುದೇ ಮನೋರಂಜನೆ ಕಲೆ ಎಂಬ ಮಾನಸಿಕ ಸೀಮಿತತೆ ಇದೆ. ಅದರಾಚೆ ಇನ್ನೂ ಇದೆ ಎಂಬ ಜಾನ ಇರಬೇಕು ಮತ್ತು ಎಲ್ಲಾ ಕಲೆಗಳಿಗೂ, ಕಲಾವಿದರಿಗೂ ಗೌರವ ನೀಡಬೇಕು. ಜೊತೆಗೆ ಕಾರ್ಯಕ್ರಮದ ವೇದಿಕೆ, ಪರಿಸರ, ಅನುಶಾಸನ, ಸರಿಯಾಗಿದೆಯೇ ಎಂದು ಮೊದಲೇ ತಿಳಿಯಬೇಕು. ನಿರ್ದಿಷ್ಟ ಸಮಯದ ಮಿತಿಯಲ್ಲಿ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವಾದರೆ ನಡೆಸಿದ ಕಾರ್ಯಕ್ರಮ ಸಾರ್ಥಕವಾದಿತು.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments