ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 17, 2010

2

ಲಲಿತ ಪ್ರಬಂಧ: ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!

‍ನಿಲುಮೆ ಮೂಲಕ

ಸುಪ್ರೀತ್ ಕೆ ಎಸ್

‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!

ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ.

ಕಾಫಿಗೆ ದಂಡು ಕಟ್ಟಿಕೊಂಡು ಹೋಗುವ ಸಮಯ ಬರುತ್ತಿದ್ದ ಹಾಗೆಯೇ ಇಡೀ ಹಾಸ್ಟೆಲ್ಲಿನಲ್ಲಿ ಸದ್ದುಗದ್ದಲ ತಣ್ಣಗಾಗುತ್ತದೆ. ಆ ಮೌನದಲ್ಲಿ ಗಾಳಿ ಕೊಂಚ ವೇಗವಾಗಿ ಬೀಸಿದರೂ ಸದ್ದು ಮಾಡಿ ಅಸಭ್ಯ ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯಿಂದ ಬೀಸಲು ಶುರು ಮಾಡಿರುತ್ತದೆ. ಕಾಫಿಗೆ ಹೋಗಬೇಕೆಂಬುದು ಎಲ್ಲರ ಇರಾದೆಯಾದರೂ ಯಾರೂ ಏಕಾಏಕಿ ರೂಮುಗಳೆಂಬ ಗೂಡುಗಳಿಂದ ಹೊರಬಂದು ಬಿಡುವುದಿಲ್ಲ. ಮೇಲಿನ ಫ್ಲೋರಿನ ಕೊನೆಯ ರೂಮಿನ ದಂಡನಾಯಕ ತನ್ನ ಮೊಬೈಲಿಗೆ ಬಂದ ಮೆಸೇಜುಗಳನ್ನು ಓದಿಕೊಳ್ಳುತ್ತಾ ಮತ್ತೊಂದು ಕೈಯನ್ನು ಪ್ಯಾಂಟಿನ ಜೇಬಿನೊಳಕ್ಕೆ ಇಳಿಬಿಟ್ಟು ‘ಬನ್ರಪ್ಪಾ, ಕಾಫಿಗೆ.’ ಅನ್ನಬೇಕು. ಆಗ ಕಾವು ಇಳಿದ ಕುಕ್ಕರು ಉಶ್ ಎಂದು ನಿಟ್ಟುಸಿರಿಟ್ಟ ಹಾಗೆ ಸದ್ದು ಮಾಡಿ ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ಹೋಗಬೇಕೆಂಬ ನೋವನ್ನು ನಟಿಸಿ ಒಬ್ಬೊಬ್ಬರೇ ಚಪ್ಪಲಿ ಮೆಟ್ಟಿಕೊಂಡು ಹೊರಬರುತ್ತಾರೆ. ‘ಎಲ್ಗೆ? ಗೋವಿಂದಣ್ಣನಾ, ರಾಘವೇಂದ್ರನಾ?’ ಅಂತ ಕೆಲವರು ಚರ್ಚೆಗೆ ನಿಲ್ಲುತ್ತಾರೆ. ‘ಇಲ್ಲೇ ಗೋವಿಂದಣ್ಣನ ಅಂಗ್ಡಿಗೇ ಹೋಗಣ, ಅಷ್ಟು ದೂರ ಯಾರು ಹೋಗ್ತಾರೆ?’ ಎಂದು ಕೆಲವರು ಮೈಮುರಿದು ವಟಗುಟ್ಟುತ್ತಾರೆ. ಮತ್ತೆ ಕೆಲವರು, ‘ರಾಘವೇಂದ್ರದಲ್ಲಿ ಒಂದ್ರುಪಾಯಿ ಜಾಸ್ತಿ ಮಾಡಿದಾರೆ’ ಎಂದು ನೆನಪಿಸುತ್ತಾನೆ. ಮಳೆ ಬರುವ ಮುನ್ನ ಕಪ್ಪು ಮೋಡ ಮೆಲ್ಲ ಮೆಲ್ಲಗೆ ಸುತ್ತಮುತ್ತಲಿನ ಮೋಡದ ತುಣುಕುಗಳನ್ನು ಅಪ್ಪಿಕೊಂಡು ದೊಡ್ಡದಾಗಿ ವ್ಯಾಪಿಸಿಕೊಳ್ಳುತ್ತಾ ಹೋದಂತೆ ಒಬ್ಬೊಬ್ಬರನ್ನೇ ರೂಮಿನಿಂದ ಹೊರಗೆಳೆದು ತರುತ್ತಾ ನಮ್ಮ ಗುಂಪು ದೊಡ್ಡದಾಗುತ್ತದೆ. ಕೆಲವರು ಮೊಬೈಲು ತಮ್ಮ ಕಿವಿಯ ಜೊತೆಗೇ ಬ್ರಹ್ಮ ಕಳುಹಿಸಿಕೊಟ್ಟ accessory ಏನೋ ಎಂಬಂತೆ ವರ್ತಿಸುತ್ತಿರುತ್ತಾರೆ. ಅವರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದರೂ, ಅವರ ಒಡನಾಟವೆಲ್ಲಾ ‘ಅಶರೀರ ವಾಣಿ’ ಯ ಜೊತೆಗೇ.

ನಮ್ಮ ಹಾಸ್ಟೆಲ್ಲಿನ ಉದ್ದನೆಯ ಕಾರಿಡಾರನ್ನು ದಾಟಿ ರಸ್ತೆಗೆ ಕಾಲಿರಿಸುತ್ತಿದ್ದ ಹಾಗೆಯೇ ಇಡೀ ರಸ್ತೆಯ ತುಂಬ ಎಂಥದ್ದೋ ಕಂಪನ. ಸಲಗಗಳ ಗುಂಪು ನಡೆದದ್ದೇ ದಾರಿ ಎಂಬಂತೆ ನಾವು ನಮ್ಮೊಳಗೇ ಕಲಕಲ ಮಾತನಾಡುತ್ತಾ ಅಕ್ಕ ಪಕ್ಕದ ಮನೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳುತ್ತಾ ಸಾಗುತ್ತೇವೆ. ಗುಂಪಿಗೆ ಸೇರದ ಪದದ ಹಾಗೆ ಗುಂಪನ್ನು ಬಿಟ್ಟು ಹಿಂದೆ ಯಾರಾದರೂ ಒಬ್ಬರೇ ಸೆಲ್ ಫೋನಿನಲ್ಲಿ ಮಾತನಾಡುತ್ತಾ ಬರುತ್ತಿದ್ದಾರೆಂದರೆ ಅವರು ಮಾತನಾಡುತ್ತಿರುವುದು ಗರ್ಲ್ ಫ್ರೆಂಡ್ ಒಟ್ಟಿಗೆ ಇಲ್ಲವಾದರೆ ಮನೆಯಿಂದ ಫೋನ್ ಬಂದಿರುತ್ತದೆ ಎಂದೇ ತಿಳಿಯಬೇಕು. ಹಾಸ್ಟೆಲ್ಲಿನಲ್ಲಿರುವಾಗ ತೊಟ್ಟ ಬರ್ಮುಡಾ ಚೆಡ್ಡಿ, ನೈಟ್ ಪ್ಯಾಂಟುಗಳಲ್ಲೇ ಬೀದಿಗಿಳಿದ ಕೆಲವರಿಗೆ ಅಕ್ಕಪಕ್ಕದ ಮನೆಯ ಮಂದಿ ಏನೆಂದುಕೊಳ್ಳುತ್ತಾರೋ ಎಂಬ ಮುಜುಗರ. ಹಾಗೆ ದಂಡು ಕಾಫಿ ಹೀರುವ ಮಹೋದ್ದೇಶಕ್ಕಾಗಿ ಸಾಗುತ್ತಿರುವಾಗ ಮಾತಿಗೆ ಇಂಥದ್ದೇ ವಿಷಯಬೇಕು ಅಂತೇನಿಲ್ಲ. ಜಾರ್ಜ್ ಬುಶ್‌ನಿಂದ ಹಿಡಿದು ಹಾಸ್ಟೆಲ್ಲಿನ ಹಿಂದಿನ ಮನೆಗೆ ಹೊಸತಾಗಿ ಬಂದ ರಾಜಸ್ಥಾನದ ದಂಪತಿಗಳವರೆಗೆ ಯಾವುದಾದರೂ ನಡೆದೀತು. ಅಸಲಿಗೆ ಯಾವ ವಿಷಯವೂ ಇಲ್ಲದಿದ್ದರೂ ಆದೀತು. ಮಾತಿಗೆ ವಿಷಯವೇ ಬೇಕು ಎಂಬ ದಾರಿದ್ರ್ಯದ ಸ್ಥಿತಿಗೆ ಹುಡುಗರು ಎಂದೂ ತಲುಪೋದೇ ಇಲ್ಲ. ಅವರಿವರನ್ನು ರೇಗಿಸಿಕೊಂಡು, ಇಟ್ಟ ಅಡ್ಡ ಹೆಸರುಗಳನ್ನು ಕರೆದುಕೊಂಡು ಪೋಲಿ ಜೋಕುಗಳನ್ನು ಕಟ್ ಮಾಡುತ್ತಾ ಪರೇಡ್ ಸಾಗುತ್ತಿರುತ್ತದೆ.

ಗುಂಪಿನಲ್ಲಿ ಹತ್ತು ಹನ್ನೆರಡು ಮಂದಿ ಇದ್ದರೂ ಎಲ್ಲರೂ ಒಟ್ಟಾಗಿ ಹೋಗಲು ಅದೇನು ಮಾರ್ಚ್ ಫಾಸ್ಟೇ? ಮೂರು ನಾಲ್ಕು ಮಂದಿ ಕ್ಲಸ್ಟರ್ ಕ್ಲಸ್ಟರ್‌ಗಳಾಗಿ ಚದುರಿಕೊಂಡು ಗಲಗಲಿಸುತ್ತಾ ಸಾಗುತ್ತಿರುತ್ತೇವೆ. ಅನೇಕ ವೇಳೆ ಇಂಥ ಕ್ಲಸ್ಟರ್‌ಗಳು ಸಹಜವಾದ ಪರ್ಮುಟೇಶನ್, ಕಾಂಬಿನೇಶನ್ನಿನ ಮೇಲೆ ರೂಪುಗೊಂಡಿರುತ್ತದಾದರೂ ಕೆಲವೊಮ್ಮೆ ಗುಂಪುಗಾರಿಕೆ, ‘ಭಿನ್ನ ಮತೀಯತೆ’ಯಿಂದ ಹುಟ್ಟು ಪಡೆದಿರುತ್ತವೆ. ಹಾಸ್ಟೆಲ್ಲಿನಲ್ಲಿ ಯಾರೆಷ್ಟೇ ಗುಂಪುಗಾರಿಕೆ ಮಾಡಿಕೊಂಡು, ಒಬ್ಬರ ಮೋಲೊಬ್ಬರು ಕತ್ತಿ ಮಸೆಯುತ್ತಾ ಓಡಾಡಿಕೊಂಡರೂ ಕಾಫಿಗೆ ಹೊರಡುವಾಗ ಮಾತ್ರ ಎಲ್ಲರೂ ಬಂದೇ ಬರುವರು. ಅದೊಂದು ಕದನ ವಿರಾಮದ ಹಾಗೆ. ಹಾಗಂತ, ವೈರ ಕರಗಿ ಮಾತು ಅರಳಿಬಿಡುತ್ತದೆ ಅಂತಲ್ಲ. ಎಲ್ಲರೂ ಕಲೆತು ಹೊರಗಿನವರಿಗೆ ನಾವೆಲ್ಲರೂ ಒಂದು ಎಂದು ಕಂಡುಬಂದರೂ ಒಳಗೊಳಗೆ ಕ್ಲಸ್ಟರುಗಳಿಂದ ಹೊರಗೆ ಮಾತು ಹರಿಯುವುದಿಲ್ಲ. ಭಾಷೆ ಬೇರೆ, ಆಚಾರ ಬೇರೆಯಾದರೂ ಭಾರತವೆಂಬ ಒಂದೇ ದೇಶದ ಮುಖ ನೋಡಿಕೊಂಡು ಸುಮ್ಮಗಿರುವ ರಾಜ್ಯಗಳ ಹಾಗೆ ನಮ್ಮ ಗುಂಪುಗಾರಿಕೆ ತಣ್ಣಗೆ ಸಾಗುತ್ತಿರುತ್ತದೆ.

ಬೇರಾವ ಕೆಲಸಕ್ಕೆ ಪಾರ್ಟನರ್ ಇಲ್ಲದಿದ್ದರೂ ನದೆಯುತ್ತದೆಯೇನೋ, ಆದರೆ ಕಾಫಿ ಹೀರುವುದಕ್ಕೆ ಜೊತೆ ಇಲ್ಲವೆಂದರೆ ಏನನ್ನೋ ಕಳೆದುಕೊಂಡ ಭಾವ. ಜೊತೆಯಲ್ಲಿ ಹರಟೆಗೆ ಯಾರೂ ಇರದಿದ್ದರೆ ಹಬೆಯಾಡುವ ಕಾಫಿ ಗಂಟಲೊಳಕ್ಕೆ ಇಳಿಯುವುದೇ ಇಲ್ಲ. ಜೊತೆಗಿರುವ ಜನರ ಸಂಖ್ಯೆ ಹೆಚ್ಚಾದಷ್ಟೂ ಕಾಫಿ ರುಚಿಗಟ್ಟುತ್ತಾ ಹೋಗುತ್ತದೆ. ಆರೆಂಟು ಮಂದಿಯ ಗುಂಪು ಪುಟ್ಟ ಕಾಫಿ ಬಾರಿನೆದುರು ಜಮಾಯಿಸಿ ಒಬ್ಬೊಬ್ಬರು ತಮ್ಮ ಆಸಕ್ತಿ, ಅಭಿರುಚಿಗನುಸಾರವಾಗಿ ಕಾಫಿ, ಟೀ, ಬಾದಾಮಿ ಹಾಲುಗಳಿಗೆ ಆರ್ಡರ್ ಮಾಡುತ್ತಾರೆ. ಮುಂದುವರೆದ ವರ್ಗದ ಕೆಲವರು ನಮಗೆ ತಿಳಿಯದ ಕೋಡ್ ವರ್ಡ್‌ಗಳನ್ನು ಹೇಳಿ ಸಿಗರೇಟು ಪಡೆಯುತ್ತಾರೆ. ಹೊಸದಾಗಿ ಗುಂಪಿಗೆ ಸೇರಿದವರು ಈ ಮುಂದುವರಿದವರನ್ನು ತುಸು ಹೆಮ್ಮೆಯಿಂದ, ತುಸು ಕುತೂಹಲದಿಂದ ನೋಡುತ್ತಿರುತ್ತಾರೆ. ಉಳಿದವರಿಗೆ ಅಂಥಾ ಯಾವ ಕುತೂಹಲವೂ ಉಳಿದಿರುವುದಿಲ್ಲ. ತಿಂಗಳ ಕೊನೆ ಬರುತ್ತಿದ್ದಂತೆಯೇ ಈ ಮುಂದುವರಿದವರು ನಮ್ಮೆಲ್ಲರ ಮುಂದೆ ಮೊಣಕಾಲೂರಿ ಕುಳಿತು ಪ್ರಾರ್ಥಿಸಿ ಒಂದೊಂದು ಸಿಗರೇಟು ಗಿಟ್ಟಿಸಿಕೊಳ್ಳುವುದನ್ನು ಕಂಡ ನಾವು ಅವರ ಬಗ್ಗೆ ಹೆಚ್ಚೆಂದರೆ ಅನುಕಂಪವನ್ನು ತಾಳಬಹುದು ಅಷ್ಟೇ, ಹೆಮ್ಮೆಯಂತೂ ದೂರದ ಮಾತು!

ಕಂಠ ಬಿಟ್ಟು ಸೊಂಟ ಹಿಡಿದರೆ ನಲುಗಿ ಒಳಗಿರುವುದನ್ನೆಲ್ಲಾ ಹೊರಗೆ ಕಕ್ಕಿ ಕವುಚಿಕೊಳ್ಳುವ ಪುಟಾಣಿ ಪ್ಲಾಸ್ಟಿಕ್ ಕಪ್ಪುಗಳನ್ನು ಹಿಡಿದುಕೊಂಡು ಪಟ್ಟಾಂಗಕ್ಕೆ ಸೂಕ್ತ ಜಾಗವನ್ನು ಆಯ್ದುಕೊಂಡು ಎಲ್ಲರೂ ಆಸೀನರಾಗುವುದರೊಳಗೆ ಹತ್ತಾರು ಸಂಗತಿಗಳು ಚರ್ಚಿತವಾಗಿರುತ್ತವೆ. ಬರುಬರುತ್ತಾ ಕಾಫಿ ಲೋಟ ಸಣ್ಣದಾಗುತ್ತಿದೆಯಲ್ಲ ಎಂಬ ಕಳವಳ ಕೆಲವರದಾದರೆ, ಮುಂದಿನ ತಿಂಗಳಿನಿಂದ ಈ ಕಾಫಿ, ಟೀ ಅಭ್ಯಾಸವನ್ನೆಲ್ಲಾ ಬಿಟ್ಟು ಬಿಡಬೇಕು- ದಿನಕ್ಕೆ ಹತ್ತು ರೂಪಾಯಿ ಉಳಿಸಬಹುದು ಅನ್ನುವ ಯೋಜನೆ ಕೆಲವರದ್ದು. ಮೆಲ್ಲಗೆ ನಮ್ಮ ನಮ್ಮ ಕೈಲಿರುವ ಪಾನೀಯವನ್ನು ಹೀರುತ್ತಾ, ಧೂಮಪಾನಿಗಳ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತಾ ನಾವು ಮತ್ತೆ ನಮ್ಮ ಗಾಢ ಆಲೋಚನೆಗಳಲ್ಲಿ ಮುಳುಗಿಹೋಗುತ್ತೇವೆ. ಹುಡುಗರಿಗೆ ಸಾಮಾನ್ಯವಾಗಿ ಮಾತನಾಡುವುದಕ್ಕೆ ಏನಿರುತ್ತದೆ ಎಂಬುದು ಹಲವು ಹುಡುಗಿಯರ ಕುತೂಹಲದ ಪ್ರಶ್ನೆ. ಅವರ ಕುತೂಹಲ ಸಹಜವಾದದ್ದೇ, ಏಕೆಂದರೆ ಲೋಕದ ದೃಷ್ಟಿಯಲ್ಲಿ ಹೆಂಗಸರು ಮಾತುಗಾರ್ತಿಯರು. ಆದರೆ ಇಲ್ಲಿ ಲೋಕದ ದೃಷ್ಟಿ ಎಂದರೆ ‘ಗಂಡಸರ ದೃಷ್ಟಿ’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ! ಸೂಜಿ ಮೊನೆಯಿಂದ ಹಿಮಾಲಯದವರೆಗೆ ಯಾವ ವಿಷಯ ಸಿಕ್ಕರೂ ಬೇಜಾರಿಲ್ಲದೆ ಚಹಾದ ಜೊತೆಗೆ ಮೆಲ್ಲುವುದು ಹುಡುಗರಿಗೇನು ಕಷ್ಟವಲ್ಲ. ಮಾತುಕತೆಯ ಬಹುಪಾಲು ಸಮಯ ಹುಡುಗಿಯರ ವಿಷಯದಲ್ಲೇ ವ್ಯರ್ಥವಾಗುತ್ತದೆ ಎಂಬ ಆರೋಪ ಸತ್ಯವೇ ಆದರೂ ಆ ಜಾಗದಲ್ಲಿ ಬೇರೆ ವಿಷಯ ಇದ್ದರೆ ಆಗುವ ಉಪಯೋಗವೇನು ಎಂದು ಯಾರೂ ಹೇಳರು.

ಬರಿದಾದ ಕಾಫಿ ಕಪ್ಪುಗಳನ್ನು ಕುಳಿತಲ್ಲಿಂದಲ್ಲೇ ಗುರಿಯಿಟ್ಟು ಕಸದ ಬುಟ್ಟಿಗೆ ಎಸೆದು ಸಂಪಾದಕನೊಬ್ಬ ಪತ್ರಿಕೆಯ ಚಂದಾ ಹಣಕ್ಕಾಗಿ ಪರದಾಡುವಂತೆ ದಿನಕ್ಕೊಬ್ಬ ಚಿಲ್ಲರೆಯನ್ನು ಆಯುತ್ತಾ ಅಷ್ಟೂ ಮಂದಿಯ ಖರ್ಚನ್ನು ಹೊಂದಿಸಿ ಅಂಗಡಿಯವನಿಗೆ ಪಾವತಿಸಿ ಹಿಂದಿನ ಸಾಲಕ್ಕೆ ಕೆಲವೊಮ್ಮೆ ಬಾಲಂಗೋಚಿ ಅಂಟಿಸಿ ಕಾಲ್ಕಿತ್ತುವುದು ಸಂಪ್ರದಾಯ. ಕಾಫಿ ಬಾರಿನಿಂದ ವಾಪಸ್ಸು ಹಾಸ್ಟೆಲ್ಲಿಗೆ ಬರುವಾಗ ಹಿಂದೆ ಹೇಳಿದ ಸಂಗತಿಗಳೆಲ್ಲಾ ಪುನರಾವರ್ತನೆಗೊಳ್ಳುವುದು ಸಾಮಾನ್ಯ. ಹದಿನೇಳು ಬಾರಿ ಸೋಮನಾಥ ದೇವಾಲಯಕ್ಕೆ ದಂಡ ಯಾತ್ರೆ ಮಾಡಿದ ನಂತರ ಮಹಮ್ಮದ್ ಘೋರಿಯಾದರೂ ದಣಿದಿದ್ದನೇನೋ ನಾವು ಮಾತ್ರ ದಿನಕ್ಕೆ ಇಪ್ಪತ್ತು ಬಾರಿ ಯಾತ್ರೆ ಕೈಗೊಂಡರೂ ಚೂರೂ ದಣಿಯದೆ, ಕಾಫಿ ತುಂಬಿ ಕೊಂಡು ಚುರುಕಾದ ಮೈಮನಗಳೊಂದಿಗೆ ಹಿಂದಿರುಗುತ್ತೇವೆ.

2 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಡಿಸೆ 17 2010

    ಸೂಪರ್ ಅಂದರೆ ಸೂಪರ್.. ಇವುಗಳಲ್ಲದೆ ಕಾಫಿಬಾರಿಗೆ ಹೋಗುತ್ತಾ, ರಸ್ತೆಯಲ್ಲಿ ಓಡಾಡುವ ವಾಹನಗಳತ್ತ ಕತ್ತನ್ನು ತಿರುಗಿಸಿ ಸುಮ್ಮನೇ ಒಂದು ಬಾರಿ ನೋಡುವ ಹುಚ್ಚು, ತಮ್ಮ ತಮ್ಮ ಕ್ಲಾಸಿನ ಲೆಕ್ಚರುಗಳು ಎಷ್ಟು ಬೋಸ, ದುರುಳ ಅಥವಾ ಬೆಪ್ಪ ಎಂದು ಸಾಧಿಸಿ ತೋರಿಸುವ ಹುಚ್ಚು, ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳು ಎಷ್ಟು ಅಸಂಬಧ್ಧ ಎಂದು ಇನೊಬ್ಬನ ಜೊತೆ ನೋವು ಹಂಚಿಕೊಳ್ಳುವ ಹುಚ್ಚು.. ಇವೆಲ್ಲ ಇಲ್ಲವೇ? 🙂

    ಉತ್ತರ
  2. Mohan's avatar
    Mohan
    ಡಿಸೆ 18 2010

    Hey Supreeth!!!
    You are very good writer dear….
    Nice writing.
    Thanks
    Best Regards
    Mohan

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments