ಗೋಹತ್ಯೆ ನಿಷೇಧದ ಸುತ್ತ…!
ಗೋಹತ್ಯೆ ಹಾಗೂ ಗೋಹತ್ಯೆ ನಿಷೇಧಕಾಯಿದೆ/ಶಾಸನಬದ್ಧಗೊಳಿಸುವ ಕುರಿತಂತೆ ಬಿಡುವಿಲ್ಲದೇ ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲ ಓದುತ್ತಿದ್ದೇವೆ. ಹಳೆಯ ಒಂದು ಹಿಂದೂ ಪತ್ರಿಕೆಯಲ್ಲಿ ಬಂದ ‘Cow slaughter ban is a tool to oppress Dalits’ ಸಿಬ್ಬಂದಿ ಮಾಡಿದ್ದ ವರದಿಯಲ್ಲಿ, ಆರ್.ಎಸ್.ಎಸ್. ಮತ್ತು ಅದರ ವಿರೋಧಿ ಪಾಳೇಯದ ಟೀಕಾ ಪ್ರಹಾರಗಳು ಕಂಡುಬಂದವು.
ಆರ್.ಎಸ್.ಎಸ್.ಅನ್ನು ಟೀಕಿಸುವರು ಹೇಳುವುದೆನೆಂದರೆ, ಭಾರತೀಯ ಸ್ಥಳೀಯ ಸಂಸ್ಕೃತಿಗಳಿಗೆ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ವಿದೇಶದಿಂದ ಆಮದು ಮಾಡಿಕೊಂಡ ಸರಕು, ಆದರೆ ಆರ್.ಎಸ್,ಎಸ್.ನವರು ಬೇರೆ ಬೇರೆಯ ರೀತಿಯ ಆಹಾರ ಪದ್ದತಿಗಳನ್ನು ಹೊಂದಿರುವ ಸಂಸ್ಕೃತಿಗಳನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಗುರುತಿಸುವ ಮೂಲಕ, ಆಂತರೀಕವಾಗಿ ಶತ್ರುಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಪ್ರಕಾಶ ಅವರು ನೀಡಿದ್ದಾರೆ.
ಇನ್ನೂ ಆರ್.ಎಸ್.ಎಸ್. ವಿರೋಧಿಸುವವರ ನಿಲುವೆಂದರೆ, ಐತಿಹಾಸಿಕ, ಅಥವಾ ಪೌರಾಣಿಕ (ಪವಿತ್ರಗ್ರಂಥ ಎನಿಸಿರುವ) ಗ್ರಂಥಗಳೆ ಮಾಂಸಾಹಾರ ಮಾಡಲು ಅನುಮೋದನೆ ನೀಡಿರಬೇಕಾದರೆ ಸೇವಿಸುವುದರಲ್ಲಿ ತಪ್ಪೆನಿದೆ ಎಂಬುದು.
ಮೇಲ್ನೊಟಕ್ಕೆ ವಿರೋಧಿ ಬಣಗಳು ಆರ್.ಎಸ್.ಎಸ್.ಗಿಂತ ಭಿನ್ನ ನೆಲೆಯಲ್ಲಿ ಮಾತನಾಡುತ್ತಿದ್ದಾರೆ ಎನಿಸಿದರೂ ಸಹ ಇವರು ಕೂಡ ಆರ್.ಎಸ್.ಎಸ್ ಹೊಂದಿರುವ ಗ್ರಹಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರ ನಿಲುವುಗಳನ್ನು ಹೇಗೆ ಒಂದೆ ಚೌಕಟ್ಟಿನಡಿಯಲ್ಲಿ ಸಿದ್ಧಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಮೊದಲಿಗೆ ಆರ್.ಎಸ್.ಎಸ್.ನ ನಿಲುವಿನ ಕುರಿತು ಚರ್ಚಿಸುವುದಾದರೆ, ಏಕೆ ಬೇರೆ ಬೇರೆಯ ಆಹಾರ ಪದ್ದತಿಗಳು ಹೊಂದಿದ ಸಂಸ್ಕೃತಿಗಳನ್ನು ಆರ್.ಎಸ್.ಎಸ್ ಹಿಂದೂ ರಾಷ್ಟ್ರೀಯತೆಯ ವಿರೋಧಿಗಳು ಎಂದು ಪರಿಗಣಿಸಬೇಕು? ಬೇರೆ ಬೇರೆಯ ಸಂಸ್ಕೃತಿಗಳು ಬೇರೆ ಬೇರೆ ರೀತಿಯ ಜೀವನ ಶೈಲಿ ಹೊಂದಿದ್ದರೆ ಅವರು ರಾಷ್ಟ್ರೀಯತೆಯ ವಿರೋಧಿಯಾಗಲು ಹೇಗಾಗುತ್ತಾರೆ? ಅವರ ಪ್ರಕಾರ ವೈವಿಧ್ಯತೆಯು ಏಕತೆಗೆ ಧಕ್ಕೆ ತರುತ್ತಿದೆ ಎಂದರೆ ಅವರ ಏಕತೆಯ ಕಲ್ಪನೆ ಹಾಗೂ ರೂಪಗೊಂಡ ಹಿನ್ನೆಲೆ ಬೇರೆಯಾಗಿಯೇ ಇರಬೇಕು: ಆರ್.ಎಸ್.ಎಸ್.ನ ಹಿಂದೂ ರಾಷ್ಟ್ರ, ಸಂಸ್ಕೃತಿ, ಜೀವನ ಪದ್ದತಿ ಎಂದರೆ ಹೀಗೆ ಇರಬೇಕು ಎಂದು ಭಾವಿಸಿಕೊಂಡಂತಿದೆ. ಏಕೆಂದರೆ ಆರ್.ಎಸ್.ಎಸ್.ನ ಮುಖ್ಯ ಗುರಿ ಅಖಂಡ ಹಿಂದೂ ಸಾಮ್ರಾಜ್ಯ ಸ್ಥಾಪನೆ(ಒಂದೇ ಮೌಲ್ಯ, ರಾಷ್ಟ್ರೀಯತೆಯ ಕಲ್ಪನೆ, ಭಾಷೆ, ಧರ್ಮ). ಆದರೆ ಭಾರತದಲ್ಲಿನ ವೈವಿಧ್ಯತೆಯು ಹಿಂದೂ ರಾಷ್ಟ್ರೀಯತೆಯ ಅಖಂಡತೆಗೆ ಎಂದಿಗೂ ಮುಳುವೆ ಎಂದವರ ಅನಿಸಿಕೆ. ಆದ್ದರಿಂದ ವೈವಿಧ್ಯತೆಯು ಏಕೆ ರಾಷ್ಟ್ರೀಯತೆಗೆ ಧಕ್ಕೆ ತರಬೇಕು ಎಂಬಂಥ ಪ್ರಶ್ನೆಯು ಸಾಮಾನ್ಯ ಜನರಿಗೆ ಅಸಂಬದ್ಧವಾಗಿಯೇ ತೋರಿದರೂ, ಸೆಮೆಟಿಕ್ ರಿಲಿಜನ್( ಒಬ್ಬನೆ ಸತ್ಯವಾದ ದೇವರು, ಒಂದೇ ಪವಿತ್ರ ಗ್ರಂಥ, ಒಂದೇ ಪವಿತ್ರ ಸ್ಥಳ ಇರಲೇಬೇಕು) ಮಾದರಿಯಲ್ಲಿ ಹಿಂದೂ ಸಾಮ್ರಾಜ್ಯ/ರಿಲಿಜನ್ ಸ್ಥಾಪಿಸ ಹೊರಟ ಆರ್.ಎಸ್.ಎಸ್ ನವರಿಗೆ ಇವೆಲ್ಲ ಸುಸಂಬದ್ಧವಾಗಿಯೇ ತೋರುತ್ತವೆ. ಏಕೆಂದರೆ ಅವರ ಪ್ರಕಾರ ಹಿಂದೂಗಳು ಸತ್ಯವಾದ ಒಂದೇ ಪವಿತ್ರ ಗ್ರಂಥ, ಪೂಜಾ ಸ್ಥಳ, ಡಾಕ್ಟ್ರಿನ್, ಮೌಲ್ಯ, ಇತ್ಯಾದಿ ಹೊಂದಿದ್ದಾರೆ ಎಂದು. ಹಾಗಾಗಿಯೇ ಅವರಿಗೆ ವೈವಿಧ್ಯಮಯ ಆಹಾರ ಪದ್ದತಿಗಳು ಕೂಡ ಹಿಂದೂ ರಿಲಿಜನ್/ಸಾಮ್ರಾಜ್ಯಕ್ಕೆ ಮಾರಕವಾಗುತ್ತವೆ. ಆದರೆ ಅವರು ಸ್ಥಾಪಿಸಲು ಇಚ್ಛಿಸುತ್ತಿರುವ ಹಿಂದೂ ಧರ್ಮ( ರಿಲಿಜನ್ ಮಾದರಿಯ) ನಾವು ಹೊಂದಿದ್ದೇವೆಯೇ ಎಂಬುದು ಆಸಕ್ತಿದಾಯಕ ಪ್ರಶ್ನೆಯೆ ಸರಿ.
ಎರಡನೇಯದಾಗಿ ಇವರನ್ನು ದೂರುವ ಆರ್.ಎಸ್.ಎಸ್. ವಿರೋಧಿ ಪಾಳಯ ವಾದಿಸುವಂತೆ, ಏಕೆ ಮಾಂಸಾಹಾರ ಮಾಡಲು ಐತಿಹಾಸಿಕ, ಅಥವಾ ಪೌರಾಣಿಕ (ಪವಿತ್ರಗ್ರಂಥ ಎನಿಸಿರುವ) ಗ್ರಂಥಗಳ ಅನುಮೋದನೆ ಹುಡುಕುತ್ತಿವೆ ಅಥವಾ ಅದರ ಪುರಾವೆಯನ್ನು ಸೂಚಿಸುತ್ತಿವೆ ಎಂಬುದು ಒಂದು ಒಗಟೆ ಸರಿ. ಅವರೆ ಉಲ್ಲೇಖಿಸುವಂತೆ, “Valmiki Ramayana has sanctioned beef eating: historian”. “Prof. Narasimaiah pointed out several references that sanctioned eating beef”. ಮೇಲ್ನೊಟಕ್ಕೆ ಇದು ಕೇವಲ ಸಹಜವಾಗಿ ಕಂಡರು ಆಸಕ್ತಿದಾಯಕವಾಗಿದೆ. ಏಕೆಂದರೆ, ನಮ್ಮ ನಿತ್ಯ ಜೀವನದ ಆಗು ಹೋಗುಗಳನ್ನು ನಾವು ಗ್ರಂಥಗಳ ನಿರ್ದೇಶನದಿಂದಲೇ ರೂಪಿಸಿಕೊಳ್ಳುತ್ತೆವೆಯೇ? ಅಥವಾ ಗ್ರಂಥಗಳು ನಮ್ಮ ಸಮಾಜವನ್ನು ಹಾಗೂ ನಮ್ಮ ಜೀವನವನ್ನು ರೂಪಿಸುತ್ತಿವೆಯೇ? ಎಲ್ಲೋ ಕೆಲವು ಜನರು ಕೆಲವು ಗ್ರಂಥಗಳನ್ನು ಉಲ್ಲೇಖಿಸಿದರು ಉದಾ: ಭಗವದ್ಗೀತೆ, ರಾಮಾಯಾಣ, ಮಹಾಭಾರತ, ಇತ್ಯಾದಿ., ಅವುಗಳ ನಿರ್ದೇಶನನದಿಂದಲೇ ಜೀವನ ನಡೆಸುತ್ತಾರೆಯೇ? ಅಥವಾ ನಾವು ಯಾವುದೇ ಕೆಲಸ ಮಾಡಬೇಕಾದರು ಅವುಗಳನ್ನು ಓದಿಕೊಂಡು ಕೆಲಸ ಮಾಡುತ್ತೇವೆಯೇ? ವಾಸ್ತವ ಹೀಗಿರಬೇಕಾದರೆ, ಗೋಹತ್ಯೆ ಶಾಸನಬದ್ಧವಾಗಬೇಕಾದರೆ ಏಕೆ ನಮಗೆ ಗ್ರಂಥಗಳ ಅನುಮೋದನೆ ಬೇಕು? ಗ್ರಂಥಗಳ ಅನುಮೋದನೆ ಪಡೆಯುವುದು ನಮ್ಮ ನೈಜ ಜೀವನದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆಯೇ? ಏಕೆ ಮಾಂಸಾಹಾರ ಮಾಡಲು ಇವರು ಪವಿತ್ರ ಗ್ರಂಥಗಳ ಅನುಮೋದನೆ ಮೊರೆಹೋಗಿದ್ದಾರೆ?
ಇದರ ಜೊತೆಗೆ ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು. ಭಾರತದಲ್ಲಿ ಒಂದೇ ಗ್ರಂಥ ಇಲ್ಲ ಎಂಬುದು ಆರ್.ಎಸ್.ಎಸ್ ವಿರೋದಿಗಳ ಉಲ್ಲೇಖಗಳನ್ನು ನೋಡಿದರೆ ತಿಳಿಯುತ್ತದೆ, ಅವರೆ ರಾಮಾಯಾಣ, ಕಾಮಸೂತ್ರ, ಇನ್ನೂ ಅನೇಕ ಗ್ರಂಥಗಳಿವೆ ಎಂದು ತಿಳಿಸುತ್ತಾರೆ . ಹೀಗೆ ನೂರಾರು ಜನರು ನೂರಾರು ರೀತಿಯ ಗ್ರಂಥಗಳನ್ನು ಉಲ್ಲೇಖಿಸುತ್ತಾರಾದರೆ, ಅದರರ್ಥ ಯಾವುದೇ ಒಂದು ನಿರ್ದಿಷ್ಟವಾದಂತಹ ಒಂದು ಗ್ರಂಥ ಇಲ್ಲವೆಂಬುದು ಖಚಿತ. ಒಬ್ಬರು ಒಂದು ಗ್ರಂಥ ತೋರಿಸಿದರೆ ಮತ್ತೊಬ್ಬರು ಮತ್ತೊಂದು ಗ್ರಂಥವನ್ನು ತೋರಿಸುವ ಸಾಧ್ಯತೆ ಬಹಳವಾಗೆ ಇದೆ. ಇದು ಏನನ್ನು ಸೂಚಿಸುತ್ತದೆ? ನಮಗೆ ಯಾವುದೇ ನಿಖರವಾದ ಗ್ರಂಥವಿಲ್ಲ ಎಂದು. ಈ ಹಂತದಲ್ಲಿ ಆರ್.ಎಸ್.ಎಸ್ ವಿರೋದಿ ಗುಂಪಿನ ವಾದವು(ರಾಷ್ಟ್ರೀಯತೆ ಕಲ್ಪನೆ ಪರಕೀಯ, ಸ್ಥಳೀಯ ಸಂಸ್ಕೃತಿಗಳು ವೈವಿಧ್ಯಮಯವಾದ ಆಹಾರ ಪದ್ದತಿಗಳು ಹೊಂದಿವೆ ಒಂದೇ ತೆರನಾಗಿಲ್ಲ) ಕೊಂಚ ವಾಸ್ತವತೆಯ ಕಡೆಗೆ ಬೆರಳು ಮಾಡಿದರು ಪುನಃ ಅವರು ಗ್ರಂಥಗಳ ಅನುಮೋದನೆಗೆ ಜೋತು ಬಿದ್ದು, ಆರ್.ಎಸ್.ಎಸ್ ವಾದಿಸುವಂತೆಯೇ ವಾದಿಸುವುದು ಸ್ಪಷ್ಟವಾಗುತ್ತದೆ.
ಈಗ ನಾವು ಇವರಿಬ್ಬರ ವಾದಗಳಲ್ಲಿ ಒಂದು ಸಾಮ್ಯತೆಯನ್ನು ಗುರುತಿಸಬಹುದು: ಗ್ರಂಥಗಳ ಅನುಮೋದನೆ. ಆರ್.ಎಸ್.ಎಸ್.ನವರು ಹಿಂದೂ ಸಾಮ್ರಾಜ್ಯ ಕಟ್ಟುವ ನಿಟ್ಟಿನಲ್ಲಿ ಹಿಂದೂಗಳು ಪವಿತ್ರ ಗ್ರಂಥ ಹೊಂದಿದ್ದಾರೆ ಎಂದು ವಾದಿಸುತ್ತಾರೆ. ಹಾಗೆಯೇ ಅದರ ವಿರೋಧಿ ಬಣಗಳು ತಾವು ವೈವಿಧ್ಯತೆಯನ್ನು ಹೊಂದಿದವರು ಎಂದು ಹೇಳಿಕೊಳ್ಳುತ್ತಲೆ, ಒಂದು ಕಾರ್ಯಕ್ಕೆ( ಗೋಹತ್ಯೆ ಮುಂದುವರೆಯಲು) ಗ್ರಂಥಗಳ ಅನುಮೋದನೆ ಬೇಕು ಅದು ಇದೆ ಎಂದು ತೋರಿಸುತ್ತಾರೆ. ಹಾಗಾಗಿ ಮೇಲ್ನೊಟಕ್ಕೆ ಇವರಿಬ್ಬರು ವಿರೋಧಿಗಳು ಎನಿಸಿದರು ಆಳದಲ್ಲಿ ಇವರಿಬ್ಬರ ಆಲೋಚನೆಯು ಒಂದೇ ಚೌಕಟ್ಟಿನಡಿಯಲ್ಲಿ ಸಿದ್ಧಗೊಂಡಿದೆ. ಹಾಗಾಗಿ ವಿರೋಧದಲ್ಲಿಯೂ ಸಾಮತ್ಯೆಯು ಬರುವಂತೆ ಸಾಧ್ಯ ಮಾಡಿದ್ದು ಇವರು ಹಿಂಧೂ ಧರ್ಮ(ರಿಲಿಜನ್) ಕುರಿತು ಹೊಂದಿರುವ ಗ್ರಹಿಕೆ, ಈ ಎರಡು ಬಣಗಳ ವಾದ ಅವುಗಳಿಂದ ಏಳುವ ಪ್ರಶ್ನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಆದರೆ ನಮ್ಮ ಜವಾಬ್ದಾರಿ ಎಂದರೆ ಈ ಎರಡು ಬಣಗಳಲ್ಲಿ ನಾವು ಎಲ್ಲಿ ನಿಲ್ಲುತ್ತೇವೆ, ಅಥವಾ ಈ ಎರಡು ಬಣಗಳಿಂದ ಹೊರತಾದ ಇನ್ನೊಂದು ಸ್ಥಳವಿದೆಯಾ ಎಂದು ಕಂಡುಕೊಳ್ಳುವುದು.
ಚಿತ್ರ ಕೃಪೆ : http://www.johnbryan.ie





