
ನಿನ್ನೆಗೆ ಕ್ಯಾಪ್ಟನ್ ಗೋಪೀನಾಥರ Simply Fly ಪುಸ್ತಕವನ್ನು ಓದಿ ಮುಗಿಸಿದೆ. ರೆಟ್ಟೆಗಾತ್ರದ ಈ ಪುಸ್ತಕವನ್ನು ಒಂದೂವರೆ ತಿಂಗಳಿನ ಹಿಂದೆಯೇ ಓದಲು ಶುರುಮಾಡಿದ್ದರೂ ಮಧ್ಯೆ ಮಧ್ಯೆ ನಾನಾ ಕಾರಣಗಳಿಂದ ಅದನ್ನು ಮುಗಿಸಲಾಗದೇ ಇಷ್ಟು ತಡವಾಯಿತು. ಆ ಪುಸ್ತಕ ಕನ್ನಡದಲ್ಲಿ ’ಬಾನಯಾನ’ವಾಗಿ ಹೊರಬಂದಿದ್ದರೂ ಕೂಡ ಇಂಗ್ಲೀಷಲ್ಲಿ ಮೂಲ ಪುಸ್ತಕವನ್ನೇ ಓದೋಣ ಎಂದು ಹೊರಟಿದ್ದೂ ತಡವಾಗಿ ಮುಗಿದುದ್ದಕ್ಕೆ ಒಂದು ಕಾರಣ ಎನ್ನಬಹುದು. ಇರಲಿ. ಸಾಮಾನ್ಯವಾಗಿ ನನಗೆ ಮೊದಲು ಆತ್ಮಕತೆಗಳನ್ನು ಓದಲು ಇಷ್ಟವಾಗುತ್ತಿರಲಿಲ್ಲ. ಅದ್ಯಾವ ಗಳಿಗೆಯಲ್ಲೋ ಲಂಕೇಶರ ಆತ್ಮಕತೆ ’ಹುಳಿಮಾವಿನಮರ’ವನ್ನು ಓದಿದ ಮೇಲೆ ಆತ್ಮಕತೆಗಳ ಬಗ್ಗೆ ಆಸಕ್ತಿ ಹೊರಟುಹೋಗಿತ್ತು. ಆಗಿನ್ನೂ ಸಣ್ಣವಯಸ್ಸಿದ್ದುದರಿಂದ ಹಾಗೆನ್ನಿಸಿತ್ತೋ ಅಥವಾ ಆ ಪುಸ್ತಕವೇ ಹಾಗಿತ್ತೋ ನೆನಪಿಲ್ಲ. ಆತ್ಮಕತೆಗಳು ಎಂದರೆ ಕೇವಲ ನಿರುಪಯೋಗಿ ವೈಯಕ್ತಿಕ ವಿವರಗಳು, ಅದು ಯಾರದ್ದಾದರೂ ಸರಿ, ಓದಿ ಮಾಡುವುದಾದರೂ ಏನು ಎನ್ನಿಸಿಬಿಟ್ಟಿತ್ತು. ಆದರೆ ನನ್ನ ಈ ಭಾವನೆಯನ್ನು ಬದಲಿಸಿದ್ದು ಶಿವರಾಮಕಾರಂತರ ’ಹುಚ್ಚುಮನಸ್ಸಿನಹತ್ತುಮುಖಗಳು’. ಒಮ್ಮೆ ಗೆಳೆಯನೊಬ್ಬನ ಮನೆಗೆ ಹೋದಾಗ ಕಂಡಪುಸ್ತಕವನ್ನು ಸುಮ್ಮನೇ ಕೈಗೆತ್ತಿಕೊಂಡು ಓದಿದ್ದು ಆತ್ಮಕತೆಗಳ ಬಗ್ಗೆ ನನ್ನ ಭಾವನೆಯನ್ನು ಬದಲಿಸಿತು. ಎಲ್ಲಾ ಆತ್ಮಕತೆಗಳು ಆಸಕ್ತಿದಾಯಕವಾಗಿರಬೇಕಂತಿಲ್ಲ, ಆದರೆ ಅದರಿಂದ ತಿಳಿದುಕೊಳ್ಳುವುದು ಬಹಳಾ ಇರುತ್ತದೆ ಎಂಬುದು ಅರ್ಥವಾಗಿತ್ತು. ಹಿರಿಯರ ಅನುಭವವು ತಿಳಿಸಿಕೊಡುವಷ್ಟು ಮತ್ತೆಲ್ಲೂ ಸಿಗುವುದಿಲ್ಲ ಎಂದು ಖಾತ್ರಿಯಾಗಿತ್ತು. ಒಬ್ಬರ ಬಗ್ಗೆ ಮತ್ತೊಬ್ಬರು ಬರೆದ ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಸರಿಯಾದ ಚಿತ್ರಣವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿದುಕೊಂಡಷ್ಟು ಮತ್ಯಾರಿಗೂ ತಿಳಿಯಲು ಸಾಧ್ಯವಿಲ್ಲವಲ್ಲ ಅಂತೆಯೇ ಶಿವರಾಮ ಕಾರಂತರ ಆತ್ಮಕತೆ ಓದಿ ಅವರ ಬಗ್ಗೆ ಅಚ್ಚರಿಪಟ್ಟೆ. ಎಲ್ಲಾ ಕ್ಷೇತ್ರಗಳಲ್ಲೂ ಅವರ ಒಂದೊಂದು ಕೆಲಸದ ಬಗ್ಗೆಯೂ ಅವರಿಟ್ಟುಕೊಂಡ ನೋಟಗಳು, ಅದನ್ನು ಕಾರ್ಯಗತಗೊಳಿಸಿದ, ಅನುಭವಗಳ ವಿವರಗಳು ಮನಸ್ಸಿನಲ್ಲಿ ಕೂತವು. ಅದರಿಂದ ನನ್ನಲ್ಲಿ ಏನೋ ಅದ್ಭುತ ಬದಲಾವಣೆಯಾಗಿ ಹೋಯಿತು ಅಂತೇನೂ ಇಲ್ಲ , ಆದರೆ ಅದರಿಂದಾಗಿ ಜೀವನದ ಕೆಲ ವಿಷಯಗಳ ಬಗ್ಗೆ ನನ್ನ ಧೋರಣೆ ಬದಲಾಯಿಸಿಕೊಂಡೆ. ಹೊಸನೋಟ ಬೆಳೆಸಿಕೊಂಡೆ. ಅದು ಬಹಳ ಸಹಾಯಕಾರಿಯೂ ಆಯಿತು.
ಮತ್ತಷ್ಟು ಓದು 