ಮಕ್ಕಳೇ, ಕಿಂದರಿಜೋಗಿ ಇಂಟರ್ ನೆಟ್ ನಲ್ಲಿದ್ದಾನೆ
ಇವನು ತುತ್ತೂರಿ ಊದುವ ಕಿಂದರಿಜೋಗಿಯಲ್ಲ. ನಿಮಗೆ ತುತ್ತೂರಿ ಊದಲು, ಚಿತ್ರ ಬಿಡಿಸಲು, ಕತೆಕವನ ಬರೆಯಲು, ಮಕ್ಕಳ ಸೃಜನಾತ್ಮಕತೆ ಬೆಳೆಸಲು ಹೇಳಿಕೊಡುತ್ತಾನೆ. ಒಂದು ಲೆಕ್ಕದಲ್ಲಿ ಇವನು ಮಕ್ಕಳಿಗೆ ಇಂಟರ್ ನೆಟ್ ಮಾಮ. ಮಕ್ಕಳಿಗೆ ಬೇಕಾದ್ದು ಇಂದು ಇಂಟರ್ ನೆಟ್ ನಲ್ಲಿ ಕಡಿಮೆಯಿದೆ. ಅವರ ಸೃಜನಶೀಲತೆ ಬೆಳೆಸಲು ಪೂರಕವಾದ ವೆಬ್ ಸೈಟ್, ಬ್ಲಾಗ್ ಗಳು ಕನ್ನಡದಲ್ಲಿ ಬೆರಳೆಣಿಕೆಯಷ್ಟಿವೆ ಅಷ್ಟೇ. ಚಂದಮಾಮ, ಬಾಲವನ.. ಮತ್ತೊಂದಿಷ್ಟು ಬ್ಲಾಗ್ ಗಳಿವೆ ಅಷ್ಟೇ.
ಹೆಚ್ಚು ಮಕ್ಕಳಿಗೆ ಇಷ್ಟವಾಗುವ ಹೊಸ ಮಕ್ಕಳ ವೆಬ್ ಸೈಟ್ ಇನ್ನೊಂದಿದೆ. ಅದು ಕಿಂದರಿಜೋಗಿ ಅಂತ. “ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ” ಎಂದು ಕಿಂದರಿಜೋಗಿ ಹೇಳುತ್ತಾನೆ.
ಕಿಂದರಿಜೋಗಿ ಮಕ್ಕಳ ಎಲ್ಲ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಾನೆ ಅಂತ ವೆಬ್ ಸೈಟ್ ನೋಡಿದಾಗಲೇ ಅರಿವಾಗುತ್ತದೆ. ಅಲ್ಲಿ ಓದಿ ಕಲಿ, ಕಥೆ, ಕವನ, ಗಣಿತ, ಚಿತ್ರಕಥೆ, ನಾಟಕ, ನೋಡಿ ನಲಿ, ಪ್ರಯೋಗ, ಭೂಮಿ ಮೇಲೆ, ಮಕ್ಕಳ ಸುದ್ದಿ, ಮಾಡಿ ತಿಳಿ, ವಿಜ್ಞಾನ, ವ್ಯಂಗ್ಯಚಿತ್ರಗಳು, ಸಂಗೀತ ಎಲ್ಲವೂ ಇದೆ.
ಒಂದಿಷ್ಟು ಸ್ಯಾಂಪಲ್ ನೋಡಿ
ಇಲ್ಲಿ……………………
ನನ್ನ ನವಿಲೆ ನನ್ನ ನವಿಲೆ
ಬಾರೆ ಇಲ್ಲಿಗೆ
ಅಂಕು ಡೊಂಕು ಹೆಜ್ಜೆ ಹಾಕಿ
ಹೊರಟೆ ಎಲ್ಲಿಗೆ?
ನಿನ್ನ ದನಿಯು ಎಷ್ಟು ಮಧುರ
ಏನು ಹೇಳಲಿ!
ನಿನ್ನ ರೂಪ ಎನಿತು ಚೆಂದ
ಹೇಗೆ ಹೊಗಳಲಿ!
…………ಮುಂತಾದ ಚಂದದ ಕವಿತೆಗಳಿವೆ.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ 3 ಜನ ಮಕ್ಕಳು. ಹಿರಿಯ ರಾಜಕುಮಾರನ ಹೆಸರು ರಾಜೇಂದ್ರ. ಎರಡನೇ ರಾಜಕುಮಾರ ಸೋಮೆಂದ್ರ. ಹಾಗೂ ಮೂರನೇ ರಾಜಕುಮಾರ ದೇವೇಂದ್ರ. ಮೂವರೂ ರಾಜಕುಮಾರರೂ ವಿದ್ಯಾರ್ಜನೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮೇಲೆ ರಾಜನಿಗೆ ಒಂದು ಯೋಚನೆ ಬಂತು. ಮೂರು ಜನ ರಾಜಕುಮಾರರಲ್ಲಿ ಯಾರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಿರ್ಧರಿಸಿದ.
……………ಮುಂತಾದ ಅಜ್ಜಿ ಕತೆಗಳನ್ನೂ ಹೇಳುತ್ತಾನೆ.
ಮಕ್ಕಳಿಗೆ ಲೆಕ್ಕವನ್ನು ಆಟದಂತೆ ಹೇಳಿಕೊಡುತ್ತಾನೆ. ಅದು ಹೀಗೆ ” ದಿನಾಂಕ ಹೇಳಿದ್ರೆ ಅದು ಯಾವ ವಾರ ಅಂತ ಹೇಳೋಕೆ ಕ್ಯಾಲೆಂಡರ್ ಬೇಕೇ ಬೇಕಾ? ಹಾಗೇನಿಲ್ಲ. ಕೆಲವು ಅಂಕಿಗಳನ್ನು ನೆನಪಲ್ಲಿಟ್ಟುಕೊಳ್ಳಲು ಹಾಗೂ ಸುಲಭದ ಲೆಕ್ಕ ಮಾಡಲು ನೀವು ತಯಾರಿದ್ರೆ ಕ್ಯಾಲೆಂಡರ್ ಇಲ್ಲದೇ ಕೊಟ್ಟ ತಾರೀಖು ವಾರದ ಯಾವ ದಿನ ಬರುತ್ತೆ ಅಂತ ಹೇಳಿ ಬಿಡಬಹುದು” ಅಂತ ಮಕ್ಕಳಿಗೆ ಪೂಸಿ ಹೊಡೆದು ಜಾಣ್ಮೆ ಲೆಕ್ಕಗಳನ್ನು ಹೇಳಿಕೊಡುತ್ತಾನೆ.
ಕಿಂದರಿ ಜೋಗಿಯ ಬೇಡಿಕೆ: ನೀವೂ ಕಿಂದರಜೋಗಿಗೆ ಬರೆಯುತ್ತಾ ಮಕ್ಕಳಾಗಬಹುದು. ಮಕ್ಕಳೊಡನೆ ನಿಮ್ಮನ್ನು ನೀವು ಬೆರೆಸಿಕೊಂಡು ಮತ್ತೂ ಮಕ್ಕಳಾಗಬಹುದು. ಕಥೆ, ಕವನ, ನಾಟಕ, ದಿನಕ್ಕೊಂದು ಮಾತು, ನಾನ್ನುಡಿಗಳು, ಮಾಡಿ ಕಲಿ, ನೋಡಿ ನಲಿ, ಚಿತ್ರಗಳು, ಚಿತ್ರಕಥೆ, ವ್ಯಂಗ್ಯ ಚಿತ್ರ, ಹಾಸ್ಯ, ವಿಜ್ಞಾನ , ತಂತ್ರಜ್ಞಾನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ನೀವು ವಿಚಾರಗಳನ್ನು ಮಕ್ಕಳೊಡನೆ ಹಂಚಿಕೊಳ್ಳಬಹುದು. ಮತ್ತೆ ತಡ ಏಕೆ? info@kindarajogi.com ಗೆ ಒಂದು ಸಂದೇಶ ಕಳುಹಿಸಿ
ಕನ್ನಡಕ್ಕೆ ಲಿನಕ್ಸಾಯಣ ವೆಬ್ ಸೈಟ್ ಕೊಟ್ಟ Omಶಿವಪ್ರಕಾಶ್ ಎಂಬವರು ಕಿಂದರಿಜೋಗಿಯ ಚಾಲಕಶಕ್ತಿ. ಈ ವೆಬ್ ಸೈಟ್ ಗೆ ಮಕ್ಕಳೇ ಶಕ್ತಿ. ಇದು ನಿಮಗಿಷ್ಟವಾದ ಮಕ್ಕಳ ತಾಣ. ಯಾವುದಕ್ಕೂ ಒಮ್ಮೆ ಭೇಟಿ ನೀಡಿ http://kindarajogi.com/
ಈಗ ಮಕ್ಕಳಿಗೆ ಬಾಲಮಂಗಳ, ಚಂದಮಾಮ, ಚಂಪಕ, ತುಂತುರಿಗಿಂತ ಇಂಟರ್ ನೆಟ್ ಹೆಚ್ಚು ಇಷ್ಟವಾಗಿದೆ. ಅಲ್ಲೂ ಅವರಿಗೆ ಇಷ್ಟದ ಅನೇಕ ಸಂಗತಿಗಳು ದೊರಕುತ್ತಿವೆ.
ಇಂಟರ್ ನೆಟ್ ನಲ್ಲಿ ಕನ್ನಡದ ಮಕ್ಕಳಿಗೆ ಪುಟಗಳು ತುಂಬಾ ಕಡಿಮೆ ಇದೆ ಎಂದೇ ಹೇಳಬೇಕು. ಅದನ್ನು ತುಂಬುವ ನಿಟ್ಟಿನಲ್ಲಿ ಈಗ ಕಾಲ ತುಂಬಾ ಬದಲಾಗಿದೆ. ಬಾಲಮಂಗಳ ಚಂದಮಾಮ, ಚಂಪಕ ಅಂತ ಓದೋ ಮಕ್ಕಳು ಕಡಿಮೆಯಾಗಿದ್ದಾರೆ. ಹೆಚ್ಚಿನ ಮಕ್ಕಳಿಗೆ ಆನ್ ಲೈನ್ ತುಂಬಾ ಇಷ್ಟ. ಹೆಚ್ಚು ಹೊತ್ತು ಅದರಲ್ಲೇ ಕಾಲಕಳೆಯುತ್ತಾರೆ. ಆದರೆ ಅದರಲ್ಲಿ ಮಕ್ಕಳಿಗೆ ಬೇಕಾದ್ದು ಇದೆಯೋ, ಇಲ್ಲವೋ, ಬರೀ ಗೇಮ್ಸ್ ನಲ್ಲಿ ಮಗ್ನರಾಗೋದು ಹೆಚ್ಚು.
ಕಿಂದರಜೋಗಿ ನಿಮಗೆಲ್ಲಾ ಜೊತೆಯಾಗಿ ಆಡ್ಲಿಕ್ಕೆ ಇಷ್ಟಪಡ್ತಾನೆ. ಜೊತೆಗೆ ಎಷ್ಟೋಂದು ವಿಚಾರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತಿದ್ದಾನೆ. ಕೂಡಿ ಕಲಿತು, ಆಡಿ ನಗ್ತೀರಲ್ವಾ? ನೀವೂ ಕೂಡ ಇಲ್ಲಿ ಬರೀ ಬಹುದು, ನಿಮ್ಮ ಹಾಡುಗಳನ್ನು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನೀವು ಮಾಡ್ಬೇಕಾದ್ದು ಇಷ್ಟೆ. ಕಿಂದರ ಜೋಗಿಗೊಂದು ಮೈಲ್ ಹಾಕಿ. info@kindarajogi.com . ಮಕ್ಕಳ ದಿನಾಚರಣೆಯ ಶುಭಾಶಯಗಳು.
ಚಿತ್ರಕೃಪೆ: chandradasan.blogspot.com




