ಸಂಶೋಧನೆಯ ಸತ್ಯಕ್ಕೆ ಸಂದ ಜಯ: ಚಿಮೂ.ಗೆ ಗೌರವ ಡಾಕ್ಟರೇಟ್ ನೀಡಲು ಒಪ್ಪಿಗೆ
ಕನ್ನಡದ ಹಿರಿಯ ಸಂಶೋಧಕರಾದ ಡಾ.ಎಂ. ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ್ದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೊನೆಗೂ ಗೌರವ ಡಾಕ್ಟರೇಟ್ ನೀಡಲು ಸಮ್ಮತಿಸಿದ್ದಾರೆ. ಕನ್ನಡಿಗರ, ಸಾಹಿತಿಗಳ, ಸಂಘಟನೆಗಳ ಒತ್ತಾಯಕ್ಕೆ ಒಪ್ಪಿಗೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಚರ್ಚ್ ಮೇಲಿನ ದಾಳಿಯ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ನೀಡಿದ ವರದಿಯನ್ನು ಚಿದಾನಂದಮೂರ್ತಿಯವರು ಸಮರ್ಥಿಸಿದ್ದಾರೆ. ಅಲ್ಲದೇ ಡಾಕ್ಟರೇಟ್ ನೀಡಲು ಸಾಹಿತ್ಯಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕಾಳಜಿಯೂ ಮಾನದಂಡ ಎಂದು ಹೇಳುವ ಮೂಲಕ ಗೌರವ ಡಾಕ್ಟರೇಟ್ ಗೆ ಹೊಸ ಮಾನದಂಡವೊಂದನ್ನು ಸೇರ್ಪಡೆಗೊಳಿಸಿದ್ದರು.
ರಾಜ್ಯಪಾಲರ ಈ ನಿರ್ಧಾರವನ್ನು ಸಾಹಿತಿಗಳು, ಹಲವು ಕನ್ನಡಪರ ಸಂಘಟನೆಗಳು, ಕನ್ನಡ ಪ್ರೇಮಿಗಳು ವಿರೋಧಿಸಿದ್ದರು. ಚಿದಾನಂದಮೂರ್ತಿಯವರನ್ನು ಕೋಮುವಾದಿಯೆಂದು ಸಹ ಹೇಳುವಲ್ಲಿ ರಾಜ್ಯಪಾಲರು ಹಿಂದೆ ಬಿದ್ದಿರಲಿಲ್ಲ. ಇದನ್ನು ತೀವ್ರವಾಗಿ ವಿರೋಧಿಸಿದ್ದ ಸಾಹಿತ್ಯ ಪ್ರೇಮಿಗಳು, ಸಂಶೋಧನಾ ಆಸಕ್ತರು ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.
ನಿನ್ನೆ ಮುಕ್ತಾಯಗೊಂಡ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ತಮ್ಮ ನಡುವಿನ ವೈಚಾರಿಕ ಭಿನ್ನತೆಗಳನ್ನು ಮರೆತು ಕನ್ನಡ ಸಂಶೋಧಕನಿಗೆ ಸಲ್ಲಬೇಕಿದ್ದ ಸ್ಥಾನಮಾನಗಳನ್ನು ಕೊಡಿಸುವಲ್ಲಿ ಎಲ್ಲ ಕನ್ನಡ ಸಾಹಿತಿಗಳು ಒಂದಾದದ್ದು ಮತ್ತು ಒಕ್ಕೊರಲಿನಲ್ಲಿ ಆಗ್ರಹಪಡಿಸಿದ್ದು ವಿಶೇಷವಾಗಿತ್ತು.
ಎಲ್ಲರ ಒತ್ತಾಯದ ಮೇರೆಗೆ ಇಂದು ಚಿದಾನಂದ ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡಲು ರಾಜ್ಯಪಾಲರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೊನೆಗೂ ಅರ್ಹರಿಗೆ ಸಲ್ಲಬೇಕಾದ ಗೌರವ ಸಲ್ಲುವಂತಾಗಿದೆ
ಈ ಕುರಿತು ಲೇಖನಗಳ ಮೂಲಕ ನಿಲುಮೆ ತನ್ನ ವಿರೋಧವನ್ನು ದಾಖಲಿಸಿತ್ತು. ಓದುಗರು ತಮ್ಮ ಮೊನಚಾದ ಕಾಮೆಂಟ್ ಗಳ ಮೂಲಕ ನಿಲುಮೆಯ ನಿಲುವನ್ನು ಬೆಂಬಲಿಸಿದ್ದರು. ಇದೀಗ ರಾಜಕೀಯ ಬಿಟ್ಟು ಹಿರಿಯ ಸಾಹಿತಿಗೆ ಗೌರವ ಡಾಕ್ಟರೇಟ್ ಕೊಡಲು ಒಪ್ಪಿರುವುದಕ್ಕೆ ‘ನಿಲುಮೆ’ ಹರ್ಷ ವ್ಯಕ್ತಪಡಿಸುತ್ತಿದೆ.
ಚಿತ್ರಕೃಪೆ: ellakavi.wordpress.com






ಇಂತಹ ರಾಜ್ಯಪಾಲರು ಕರ್ನಾಟಕಕ್ಕೆ ಬೇಕೆ?
ಚಿ.ಮೂ ಮತ್ತು ಇಡೀ ಕರ್ನಾಟಕ ಈ ಗೌರವ ಡಾಕ್ಟರೇಟ್ ತಿರಸ್ಕರಿಸಬೇಕು.
ಕನ್ನಡಕ್ಕೆ ಮತ್ತು ಕರ್ನಾಟಕಕ್ಕಾದ ಈ ಅನ್ಯಾಯವನ್ನು ಇಷ್ಟು ಸುಲಭದಲ್ಲಿ ನಾವು ಒಪ್ಪಿಕೊಳ್ಳಲಾಗುವುದಿಲ್ಲ.
ಈ ತಪ್ಪಿಗೆ ರಾಜ್ಯಪಾಲರಿಗೆ ಶಿಕ್ಷೆಯಾಗಲೇಬೇಕು – ಈ ರಾಜ್ಯಪಾಲರನ್ನು ರಾಜ್ಯದಿಂದ ಹೊರಕ್ಕೆ ಹಾಕಿ.
ಕರ್ನಾಟಕ ಕಂಡ ಅತ್ಯಂತ ಕೆಟ್ಟ ರಾಜ್ಯಪಾಲರು ಇವರು.
ಇಂತಹವರಿಂದ ಮುಂದೆಯೂ ಇದೇ ರೀತಿಯ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ.
ಇವರು ಪಕ್ಷಪಾತಿ ಮತ್ತು ಕಾಂಗ್ರೆಸ್ ಏಜೆಂಟ್ ಎಂಬುದನ್ನು ಒಂದಕ್ಕಿಂತ ಹೆಚ್ಚು ಬಾರಿ ಸಾಬೀತು ಮಾಡಿದ್ದಾರೆ.
ಚಿ.ಮೂ ಡಾಕ್ಟರೇಟ್ ಪ್ರಸಂಗವಂತೂ ಕನ್ನಡಿಗರ ಸಹನೆಯನ್ನೇ ಪರೀಕ್ಷಿಸುವ ಸಮಯವಾಗಿತ್ತು.
ಇಂತಹ ಘಟನೆ ಮಹಾರಾಷ್ಟ್ರದಲ್ಲೋ, ತಮಿಳುನಾಡಿನಲ್ಲೋ ಆಗಿದ್ದಿದ್ದರೆ, ಮಾರನೆಯ ದಿನದಿಂದಲೇ ರಾಜ್ಯಾಪಾಲರನ್ನು ಎತ್ತಂಗಡಿ ಮಾಡಲಾಗುತ್ತಿತ್ತು.
ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಇದು. ಈ ರಾಜ್ಯಪಾಲರನ್ನು ಹೊರಹಾಕುವ ತನಕ “ಅಸಹಕಾರ” ನಡೆಸಬೇಕು.
ಡಾಕ್ಟರೇಟ್ ಪದವಿಯನ್ನು ಚಿಮೂ ಮತ್ತು ಕನ್ನಡಿಗರು ತಿರಸ್ಕರಿಸಬೇಕಿಲ್ಲ. ತಿರಸ್ಕರಿಸಬೇಕಾದ್ದು ರಾಜ್ಯಪಾಲನನ್ನು. ಅಷ್ಟಕ್ಕೂ ಕೋಮುವಾದ ಎಂದರೇನು? ಯಾರು ಕೋಮುವಾದಿ? ಈ ಚರ್ಚೆಯನ್ನು ನಿಲುಮೆ ಬಳಗದವರು ಹುಟ್ಟುಹಾಕಬೇಕೆಂದು ವಿನಂತಿ.