ವಾಘಾ ಮತ್ತು ದೇಶಭಕ್ತಿಯ ಮಧ್ಯೆ ಅರ್ಧ ಘಂಟೆ
ಸಂತೋಷ್ ಎನ್. ಆಚಾರ್ಯ
ತಲೆದಿಂಬಿನ ಒಳಗೆ ಮುಖ ಹುದುಗಿಸಿ ಮಲಗಿದ್ದ ರವಿಂದರ್ ನನ್ನು ನೋಡಿ ನನ್ನ ನಿದ್ದೆಯ ಎರಡನೆ ಶಿಫ್ಟಿಗೆ ಏನೂ ಸಂಚಕಾರ ಇಲ್ಲ ಎಂದು ಪುನಃ ಹಾಸಿಗೆಯ ಮೇಲೆ ಬಿದ್ದುಕೊಂಡೆ. ಅವತ್ತು ಅಮೃತ್ ಸರ್ ತಿರುಗುವ ಪ್ಲಾನ್ ಇತ್ತಾದರೂ ಯಾರೂ ಎದ್ದಿರಲಿಲ್ಲ. ಪರಾಟಗಳು, ಚಪಾತಿಗಳು, ಘೀ ರೈಸ್, ಡ್ರೈ ಫ್ರುಟ್ಸ್ ಮತ್ತು ಪ್ರತಿ ಪಲ್ಯದಲ್ಲೂ ಮೆರೆದ ದೇಸಿ ಘೀ ಪ್ರಭಾವದಿಂದ ಆಹಾರದ ಟ್ಯಾಂಕ್ ಆಗಿದ್ದ ಹೊಟ್ಟೆ ಮೆಲ್ಲಗೆ ನರಳುತ್ತಿತ್ತು. ಅಚೆ ಈಚೆ ತಡಕಾಡಿದಾಗ ಸಿಕ್ಕ ಮೊಬೈಲು ಘಂಟೆ ಒಂಭತ್ತು ತೋರಿಸುತ್ತಿತ್ತು. ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿರುವಾಗ ಒಳಗಿನಿನಿಂದ ರವಿಂದರನ ಅಮ್ಮನ ಕರೆ ಬಂತು. ಅಪ್ಪ ಅಮ್ಮನ ಆಜ್ಞೆಗಳ ಕಟ್ಟಾ ಪಾಲಕನಾದ ರವಿಂದರ್ ಪಟ್ಟನೆ ಎದ್ದ. ನನಗೂ ಮಲಗಿದ್ದು ಸಾಕು ಎಂದು ಅನಿಸಿದ್ದರಿಂದ ಎದ್ದು ಬ್ರಶ್ ಮಾಡತೊಡಗಿದೆ.
ಅಮೃತ್ ಸರ್ ನಮ್ಮ ಉತ್ತರ ಭಾರತದ ಪಯಣದ ಪ್ರಮುಖ ಗುರಿಯಾಗಿತ್ತು. ಪಂಜಾಬಿನ ಸಾಂಸ್ಕೃತಿಕ ರಾಜಧಾನಿಯನ್ನು ಅದಕ್ಕೂ ನನಗೆ ಟಿವಿಯಲ್ಲಿ ನೋಡಿದ್ದ ಚಿನ್ನದ ಗುರುದ್ವಾರವನ್ನು ನೋಡಲೇ ಬೇಕೆಂಬುದು ಮಹಾದಾಸೆಯಾಗಿತ್ತು. ಕಳೆದ ೩ ದಿನಗಳಂತೆ ಪರಾಟದ ನಿರೀಕ್ಷೆಯಿದ್ದವರಿಗೆ ಬಂದದ್ದು ಪೂರಿ. ‘ದಿನ ಈ ರೀತಿ ಆರಂಭವಾಗಬೇಕೆ?’ ಎಂದು ಅತುಲ್ ಬಳಿ ಅತ್ತು ಕಷ್ಟ ಪಟ್ಟು ತಿಂದೆ. ಪರಾಟ, ತಿಂದ ನಂತರ ಹೊಟ್ಟೆ ಭಾರ ಮಾಡಿಸಿದರೆ ಪೂರಿ, ಮನಸ್ಸು ನೋಡಿದ ಕೂಡಲೇ ಬೇಡ ಅನ್ನುವುದು ಆಫೀಸಿನ ಕ್ಯಾಂಟಿನ್ ನಲ್ಲಿ ಒಮ್ಮೆ ತಿಂದ ಕಚಡಾ ಪೂರಿ ಕಾರಣವೋ ಅಥವಾ ನಾವು ಒಮ್ಮೆ ಮನೆಯಲ್ಲಿ ಮಾಡಿದ ಪ್ರಯೋಗ ಕಾರಣವೋ ಗೊತ್ತಿಲ್ಲ. ಆದರೆ ಅದರ ನಂತರ ಮಾತ್ರ ಪೂರಿ ಮತ್ತು ನಾನು ತುಂಬಾ ದೂರ!! ಬೇಗ ಬೇಗ ಸ್ನಾನ ಮಾಡಿ ನಾನು ಮತ್ತು ಅತುಲ್ ತಯಾರಾದರೆ ರವಿಂದರ್ ಇನ್ನೂ ತಯಾರಾಗಿರಲಿಲ್ಲ. ಎಲ್ಲಾ ಗಡಿಬಿಡಿಯಲ್ಲಿ ಹೊರಟಾಗ ಅವನ ತಂಗಿ ಕೂಡ ಬಂದಿದ್ದು ಮನಸ್ಸಿಗೆ ಸರಿಯೆನಿಸಲಿಲ್ಲ. ಹುಡುಗಿಯೊಂದಿಗೆ ಸುತ್ತಾಡಲು ನನಗೇನು ಅಭ್ಯಂತರವಿಲ್ಲ ಆದರೆ ನಾವು ಹುಡುಗರು ಗುಂಪಿನಲ್ಲಿರುವಾಗ ಯಾರಾದರೂ ಹುಡುಗಿಯರು ನಮ್ಮೊಂದಿಗಿರುವುದು ಸ್ವಲ್ಪ ನನಗೂ ಮತ್ತು ನನ್ನ ಗೆಳೆಯರಿಗೂ ಕಸಿವಿಸಿ. ಎಲ್ಲಾ ಮುಗಿಸಿ ಅಮೃತ್ ಸರ್ ಬಸ್ ಹಿಡಿದೆವು. ಬಸ್ಸಿನಲ್ಲಿ ಇನ್ನೊಂದು ರೌಂಡು ನಿದ್ದೆ ಮುಗಿಸಿ ಅಮೃತ್ ಸರ್ ನಲ್ಲಿ ಇಳಿಯುವಾಗ ತಲೆಯ ಮೇಲೆ ಬೆಂಕಿ ಇಟ್ಟಂತಾಯಿತು. ಲಗುಬಗನೆ ಜೇಬಿನಿಂದ ಕರವಸ್ತ್ರ ತೆಗೆದುಕೊಂಡು ತಲೆಗೆ ಕಟ್ಟಿಕೊಂಡೆವು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಜಲಿಯನ್ ವಾಲ ಬಾಗ್ ಮತ್ತು ಗೋಲ್ದನ್ ಟೆಂಪಲ್ ನ ದರ್ಶನ ಮಾಡಿ ಲಂಗರಿನಲ್ಲಿ ಗಡದ್ದಾಗಿ ಊಟ ಮಾಡುವಾಗ ಘಂಟೆ ೪. ಎಲ್ಲಾ ಬೇಗ ಮುಗಿದಿದ್ದು ಅತುಲ್ ಮತ್ತು ರವಿಂದರ್ ನ ವಾಘಾ ಬಾರ್ಡರ್ ನೋಡುವ ಅಸೆಯನ್ನು ಇನ್ನೂ ಜೀವಂತವಾಗಿ ಉಳಿಸಿತ್ತು. ನಿಜವಾಗಿ ಹೇಳುವುದಾದರೆ ನನಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಬಾಡಿಗೆಗೆ ಸಿಕ್ಕ ಓಮ್ನಿಯಲ್ಲಿ ಕೂತು ಹೊರಟೆವು.
ಜೀವನವೆಂದರೆ ಅಲ್ಪವಿರಾಮಗಳ ಸಂತೆ,ಕೊನೆಗೊಂದು ಪೂರ್ಣವಿರಾಮ – ೧
– ಚೇತನ್ ಕೋಡುವಳ್ಳಿ
ಇಂಜಿನಿಯರಿಂಗ್ ಮುಗಿಸಿಕೊಂಡು ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಇಳಿದ ಹುಡುಗ, ಕಣ್ಣುಗಳಲ್ಲಿ ಕನುಸುಗಳ ರಾಶಿ, ಕಷ್ಟಪಟ್ಟು ಓದಿಸಿದ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ, ತಂಗಿಯ ಮದುವೆಯ ಜವಾಬ್ದಾರಿ, ಅದಕ್ಕಿಂತ ಮೊದಲು ತನಗೊಂದು ಸೂರು ಹುಡುಕಿಕೊಳ್ಳುವ, ಆಮೇಲೆ ಬದುಕಿಗೊಂದು ಕೆಲಸ ಪಡೆಯುವ ಸಾಹಸ, ಗೆಳೆಯರ ಜೊತೆಗೂಡಿ ಒಂದು ಬಾಡಿಗೆ ಮನೆ, ನಂತರ ಕೆಲಸ ಹುಡುಕುವ ನಿರಂತರ ಕಾಯಕ, ಬಿ, ಎಂ, ಟಿ, ಸಿಯ ಡೈಲಿ ಪಾಸ್ ತೆಗೆದುಕೊಂಡು ಕಂಡ ಕಂಡ ಕಂಪನಿಗಳಲ್ಲಿ ರೆಸ್ಯುಮ್ಗಳನ್ನು ಸುರಿದು ಸಂಜೆಯ ಹೊತ್ತಿಗೆ ಬಸವಳಿದು ಮನೆಗೆ ಬಂದು ಸೇರಿ, ಅಡಿಗೆ ಮಾಡಿ ತಿಂದು, ಹಾಸಿಗೆಯ ಮೇಲೆ ಬಿದ್ದಾಕ್ಷಣ ನಾಳೆಯೋ ನಾಡಿದ್ದೋ ರೆಸ್ಯುಮ್ಗಳನ್ನು ಕೊಟ್ಟು ಬಂದ ಕಂಪನಿಗಳಿಂದ ಕಾಲ್ ಬರುವುದೋ ಎನ್ನುವ ಕನಸುಗಳು, ಬುಧವಾರದ ಅಸೆಂಟ್ ನೋಡಿ ಶನಿವಾರದ ವಾಕ್ ಇನ್ಗೆ ಸಿದ್ಧತೆ, ಶನಿವಾರ ಅಲ್ಲಿ ಹೋಗಿ ನೋಡಿದರೆ ಜನಸಾಗರ, ಇಷ್ಟು ಜನದಲ್ಲಿ ಕೆಲಸ ಸಿಗುವುದೋ ಇಲ್ಲವೋ ಎನ್ನುವ ಹತಾಶೆಯ ನಡುವೆ ಕಷ್ಟಪಟ್ಟು ನಿಂತು ರಿಟನ್ ಟೆಸ್ಟ್ ಬರೆದು, ಕೊನೆಗೆ ಫಲಿತಾಂಶ ಬಂದ ಮೇಲೆ ಮೊದಲನೇ ಸುತ್ತಿನಲ್ಲೇ ಹೊರಬಿದ್ದು, ತನ್ನ ಗೆಳೆಯರ ಪರಿಸ್ಥಿತಿಯೂ ಹಾಗೆಯೇ ಆಗಿ, ಅಲ್ಲಿಂದ ಮಜೆಸ್ಟಿಕ್ಗೆ ಬಂದು ಕಪಾಲಿಯಲ್ಲೋ ಸಂತೋಷ್ ಥಿಯೇಟರ್ನಲ್ಲೋ ಒಂದು ಸಿನೆಮಾ ನೋಡಿ ಮತ್ತೆ ಮನೆ ಕಡೆಗೆ ಪ್ರಯಾಣ, ಹೀಗೆ ಅಲ್ಲಿ ಇಲ್ಲಿ ಹುಡುಕಿ ಕೊನೆಗೊಂದು ದಿನ ಯಾವುದೋ ಕಂಪನಿಯಲ್ಲಿ ಕೆಲಸ, ತನ್ನ ಗೆಳೆಯರಿಗೂ ಹಾಗೆ ಒಂದೊಂದು ಕಡೆ, ಕೆಲಸ ಸಿಕ್ಕಾಗಲೆಲ್ಲ ಒಬ್ಬೊಬ್ಬರಿಂದ ಪಾರ್ಟಿ, ಈ ನಡುವೆ ಊರಿನಲ್ಲಿ ಕಷ್ಟವಿದ್ದರೂ ತನಗೆ ಬರುತ್ತಿರುವ ಸಂಬಳ ಕಡಿಮೆ ಎಂದುಕೊಂಡು ಸ್ವಲ್ಪವನ್ನೂ ಕಳಿಸದೆ, ವೀಕೆಂಡ್ ಸಿನೆಮಾ, ವಿಂಡೋ ಶಾಪಿಂಗ್, ಬಟ್ಟೆ ಖರೀದಿ, ಬಣ್ಣದ ಲೋಕ, ಅಲ್ಲಲ್ಲಿ ಸುತ್ತಾಟ, ತನಗಾಗಿ ಹೊಸ ಮೊಬೈಲ್, ಲ್ಯಾಪ್ ಟಾಪ್, ತನ್ನ ಆಫೀಸಿನಲ್ಲೇ ತನ್ನೊಂದಿಗೆ ಕೆಲಸ ಮಾಡುತ್ತಿರುವ ಹುಡುಗಿಯೊಂದಿಗೆ ಒಡನಾಟ, ಅವಳ ಜೊತೆ ಸುತ್ತಾಡಲು ಸಾಲದಿಂದ ತೆಗೆದುಕೊಂಡ ಬೈಕ್, ಬಂದ ಸಂಬಳವೆಲ್ಲ ತಮ್ಮಿಬ್ಬರ ಸುತ್ತಾಟಕ್ಕೆ, ತನ್ನ ಮಗ ನೋಡಲು ಬರಲೇ ಇಲ್ಲ ಎಂದು ಅಮ್ಮನ ಚಡಪಡಿಕೆ, ತನ್ನ ಮಗನನ್ನು ಹೋಗಿ ನೋಡಿಕೊಂಡು ಬರಲು ಹೊರಟ ಅಪ್ಪ, ತನ್ನ ಮಗ ಸಾವಿರ ಸಾವಿರ ದುಡಿಯುತ್ತಿದ್ದರೂ ಅದೇ ಕೆಂಪು ಬಸ್ಸಿನಲ್ಲಿ ಬೆಂಗಳೂರಿಗೆ ಪಯಣ, ಸಂಜೆ ತಲುಪಿ ಕಾಯಿನ್ ಬೂತಿಂದ ಕರೆ ಮಾಡಿದರೆ ಮಗನಿಂದ ಬಂದ ಉತ್ತರ ಸ್ವಲ್ಪ ಹೊತ್ತು ಕಾಯಿ ಎಂದು, ಅಲ್ಲಿ ಇವನು ತನ್ನ ಹುಡುಗಿಯೊಂದಿಗೆ ಊರೆಲ್ಲ ಸುತ್ತಾಡಿ ಐಶಾರಾಮಿ ಹೋಟೆಲ್ಲಿನಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುವಾಗ ರಾತ್ರಿ!





