ಉತ್ಸಾಹದ ಚಿಲುಮೆಗಳ ನಡುವೆ ಕ್ಯಾಂಪಸ್ ಕಪ್‌ಗಾಗಿ ಕಾದಾಟ
ವಿಶ್ವದೆಲ್ಲೆಡೆ ವಿಶ್ವಕಪ್ ಜ್ವರದಲ್ಲಿದ್ದರೆ, ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲೂ ಕ್ರೀಡಾ ಜ್ವರ ಏರತೊಡಗಿದೆ. ಕಳೆದ ಆರು ದಿನಗಳಿಂದ ಮಂಗಳೂರು ವಿವಿಯ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಅಂತರ್‌ವಿಭಾಗ ಮಟ್ಟದ ಈ ಕ್ರೀಡಾ ಕೂಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರದ ಉತ್ಸಾಹ. ಇಲ್ಲಿ ಒಂದಲ್ಲ ಎರಡಲ್ಲ ಹತ್ತು ಹನ್ನೆರಡಕ್ಕಿಂತ ಹೆಚ್ಚು ಆಟಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಕೆಲವು ಸಲ ಆಟಗಾರರ ಸಂಖ್ಯೆ ಕಡಿಮೆ ಇದ್ದಲ್ಲಿ ಹುಡುಗರು, ಹುಡುಗಿಯರು ಒಟ್ಟಿಗೆ ಒಂದು ತಂಡವಾಗಿ ಆಡುವುದುಂಟು. ವಿಶೇಷವೆಂದರೆ ನಮ್ಮ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರೇ ಜಾಸ್ತಿ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಕ್ರೀಡಾಕೂಟ ಈಗಾಗಲೇ ಒಂದು ಸುತ್ತಿನ ಪಂದ್ಯಾಟಗಳು ಮುಗಿದಿವೆ. ಸೋತ ತಂಡಗಳು ತಮ್ಮ ದಿನನಿತ್ಯದ ಓದಿನ ಬಗ್ಗೆ ಗಮನವನ್ನರಿಸಿದರೆ, ಗೆದ್ದ ತಂಡಗಳು ಎರಡನೇ ಸುತ್ತಿನ ಸ್ಪರ್ಧೆಗೆ ಸಿದ್ಧತೆಯನ್ನು ನಡೆಸಿದೆ.
ಈ ಕ್ರೀಡಾಕೂಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲದೆ ಸಂಶೋಧನಾ ವಿದ್ಯಾರ್ಥಿಗಳೂ ಒಂದಾಗಿ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿರೋದು ಒಂದು ವಿಶೇಷ. ಇಲ್ಲಿಯ ಕೆಲವು ವಿಭಾಗದ ವಿದ್ಯಾರ್ಥಿಗಳಿಗೆ ಈ ಗೇಮ್ಸ್‌ನ ಬಗ್ಗೆ ಇರೋ ಪ್ರೀತಿ ನೋಡಿದ್ರೇ ತುಂಬಾ ಸಂತೋಷವಾಗುತ್ತೆ. ಯಾಕಂದ್ರೇ ಇವರು ತಮ್ಮ ತಮ್ಮ ಕೈಯಿಂದಲೇ ಹಣವನ್ನು ಹಾಕೊಂಡು ಬಣ್ಣ ಬಣ್ಣದ ಕಲರ್ಸ್‌ನ್ನು ತರಿಸಿಕೊಂಡು, ಆಯಾ ದಿನದ ಗೇಮ್ಸಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಮಯಕ್ಕೆ ಮುಂಚೆಯೇ ಮೈದಾನದಲ್ಲಿ ಹಾಜರ್. ಈ ವಾತಾವರಣವನ್ನು, ಆಟವನ್ನು ನೋಡೋದಕ್ಕೆ ನೀವು ಈ ತಿಂಗಳಿನಲ್ಲಿ ಒಮ್ಮೆ ಮಂಗಳಗಂಗೋತ್ರಿಯ ಆಟದ ಮೈದಾನಕ್ಕೆ ಬನ್ನಿ.
ಮೈದಾನದಲ್ಲಿ ಎಲ್ಲಿ ನೋಡಿದ್ರೂ ತಮ್ಮ ತಂಡವನ್ನು ಬೆಂಬಲಿಸೋ ಹುಡುಗ, ಹುಡುಗಿಯರ ಗುಂಪು. ಇಲ್ಲಿ ಆಟಗಾರರ ನಡುವಿನ ಪೈಪೋಟಿಗಿಂತ ಬೆಂಬಲಿಗರ ನಡುವೆಯೇ ಹೆಚ್ಚು ಪೈಪೋಟಿ. ನಾವು ಜೋರಾಗಿ ಬೊಬ್ಬೆ ಹಾಕುವುದಾ ಇಲ್ಲ ನೀವಾ ಎಂಬ ಪೈಪೋಟಿಯೇ ಹೆಚ್ಚು ಕಂಡುಬರುತ್ತೆ. ಹುಡುಗ ಮತ್ತು ಹುಡುಗಿಯರ ನಡುವೆ ಬೊಬ್ಬೆ ಹಾಕುವ ಸ್ಪರ್ಧೆಯೇ ನಡೆದುಹೋಗುತ್ತದೆ.
ಇಲ್ಲಿ ನಡೆಯೋ ಗೇಮ್ಸ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿರೋ ಮತ್ತು ಮಜ ನೀಡೋ ಪಂದ್ಯಗಳಾವುದು ಗೊತ್ತಾ! ಅದೇ ಕಬ್ಬಡಿ ಮತ್ತೆ ಕೊಕ್ಕೋ. ಇವೆರಡು ಪಂದ್ಯಗಳು ನಡೆಯುತ್ತಿರಬೇಕಾದ್ರೆ ನಮ್ ಮೈದಾನದ ಸುತ್ತಮುತ್ತ ಒಮ್ಮೆ ನೋಡಬೇಕ್ರಿ. ಕಿಕ್ಕಿರಿದ ವಿದ್ಯಾರ್ಥಿಗಳ ಗುಂಪಿನ್ ಜೊತೆಗೆ ಸ್ಥಳೀಯರು, ದಾರಿಹೋಕರು ಆಟ ನೋಡೋದಕ್ಕೇ ಬಂದು ನಿಂತು ಬಿಡ್ತಾರೆ. ಇಲ್ಲಿ ಆಟಗಾರನ್ನು ಬೆಂಬಲಿಸೋ ಬರದಲ್ಲಿ ಏನೇನ್ ನಡೆಯುತ್ತೆ ಗೊತ್ತಾ? ಪರಿಚಯವಿಲ್ಲದವನ ಹೆಗಲಿಗೆ ಕೈಹಾಕೋದು, ಕೈ ಹೆಗಲಿಗಾಕಿದರೂ ಅದರ ಪರಿವೇ ಇಲ್ಲದೇ ಆಟವನ್ನು ನೋಡುವುದರಲ್ಲಿಯೇ ತಲ್ಲೀನರಾಗಿರುವಂತವರು, ಪರಿಚಯವಿಲ್ಲದ ಹುಡುಗ ಹುಡುಗಿಯರು ಗೊತ್ತಿದ್ದೋ ಗೊತ್ತಿಲ್ಲದೆಯೋ ಪರಿಚಯವಾಗಿ ಬಿಡುವುದು ಹೀಗೆ ಸಮ್‌ಥಿಂಗ್ ಸಮ್‌ಥಿಂಗ್. ಪ್ರ್ರಾರಂಭದಲ್ಲಿ ಅವರವರ ತಂಡಕ್ಕೆ ಬೆಂಬಲ ನೀಡುವ ಬರದಲ್ಲಿ ಒಬ್ಬರಿಗೊಬ್ಬರು ವಿರೋಧಿಗಳಂತೆ ಕಂಡು ಬರೋ ಇವರು ಪಂದ್ಯ ಮುಗಿಯುವ ವೇಳೆಗೆ ಸಕ್ಕತ್ ಸ್ನೇಹಿತರಾದ ಎಷ್ಟೋ ಪ್ರಸಂಗಗಳು ನಡೆದಿವೆ.
ಈ ರೀತಿಯ ಕ್ರೀಡಾಕೂಟದಲ್ಲಿ ಪ್ರತಿ ವರ್ಷವೂ ಎಷ್ಟೋ ಪ್ರತಿಭಾವಂತ ಕ್ರೀಡಾಪಟುಗಳ ಪರಿಚಯವಾಗುತ್ತದೆ. ಇಲ್ಲಿಯ ಇನ್ನೊಂದು ಗಮ್ಮತ್ತು ಗೊತ್ತಾ, ವರ್ಷವಿಡೀ ಮೌನದಿಂದ ಯಾವ ರಗಳೆಗೂ ಹೋಗದೇ ಇರೋ ‘ಗಾಂಧಿ’ವಿದ್ಯಾರ್ಥಿಗಳೂ ಕೂಡ ನಮ್ಮ ಕಣ್ಣನ್ನು ನಾವೇ ನಂಬದ ರೀತಿಯಲ್ಲಿ, ಬಹುಮಾನವನ್ನು ಗೆದ್ದು ಎಲ್ಲರ ಗೌರವಕ್ಕೆ ಪಾತ್ರರಾಗುವ ಸನ್ನಿವೇಶಗಳು ಇರುತ್ತವೆ.
ಕ್ರೀಡಾಕೂಟವು ಕ್ರೀಡೆಯ ಹೆಸರಿನಲ್ಲಿ ಪ್ರತೀ ವಿಭಾಗಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಕೆಲಸವನ್ನು ಮಾಡುವ ಪ್ರಯತ್ನ ಮಾಡುತ್ತಿದೆ ಅನ್ನೋದೇ ನನ್ ಅಭಿಪ್ರಾಯ. ಯಾಕೆಂದರೇ ಈ ಕ್ಯಾಂಪಸ್ನಲ್ಲಿ ಒಬ್ಬರಿಗೊಬ್ಬರ ಪರಿಚಯನೇ ಇರಲ್ಲ. ಇದ್ರೂನೂ ಅದು ಕೇವಲ ಅವರವರ ತರಗತಿಗಳಿಗೆ ಮಾತ್ರ ಸೀಮಿತವಾಗಿರುತ್ತೆ. ಅದಕ್ಕೆ ಈ ರೀತಿಯ ಕ್ರೀಡಾಕೂಟವನ್ನು ದೀರ್ಘಕಾಲ ನಡೆಸೋದ್ರಿಂದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆಯಾಗಿ ಒಬ್ಬರಿಗೊಬ್ಬರು ಬೆರೆಯುವಂತಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ನಡುವೆ ಸ್ನೇಹ ಸಂಬಂಧಗಳನ್ನು ಬೆಸೆಯುವ ಮತ್ತು ಅದನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಅದಲ್ಲದೇ ಗೆದ್ದವರಿಗೆ ಸೂಕ್ತವಾದ ಬಹುಮಾನಗಳನ್ನು ನೀಡುವ ಮೂಲಕ ಪ್ರತಿಭೆಗಳನ್ನು ಸನ್ಮಾನಿಸಲಾಗುತ್ತಿದೆ.
ಇಷ್ಟೆಲ್ಲಾ ವಿವರಣೆಯನ್ನು ನೀಡಿದ ನಂತರ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರ ಬಗ್ಗೆ ಹೇಳದಿದ್ದರೆ ಹೇಗೆ? ಇದನ್ನೆಲ್ಲಾ ಅಚ್ಚುಕಟ್ಟಾಗಿ ಆಯೋಜಿಸುತ್ತಿರುವುದು ಮಂಗಳಗಂಗೋತ್ರಿಯ ಎಂ.ಪಿ.ಎಡ್ ಮತ್ತು ಬಿ.ಪಿ.ಎಡ್ ವಿಭಾಗಗಳು. ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರ ಸಹಕಾರದೊಂದಿಗೆ ಮತ್ತು ತಮ್ಮ ಕಲಿಕೆಯ ಉದ್ದೇಶದಿಂದ ‘ಸ್ವಾಮಿ ಕಾರ್ಯ ಮತ್ತು ಸ್ವ ಕಾರ್ಯ’ ವೆನ್ನುವಂತೆ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇವರು ಕ್ರೀಡೆಯಲ್ಲಿ ಭಾಗವಹಿಸುವ ಯಾವುದೇ ವಿದ್ಯಾರ್ಥಿಗಳ ಮನಸ್ಸಿಗೆ ಯಾವುದೇ ರೀತಿಯಲ್ಲೂ ನೋವಾಗದ ಹಾಗೆ ನಡೆಸಿಕೊಂಡು ಬರುತ್ತಿದ್ದಾರೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದಲ್ಲದೇ, ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧ ಮೂಡಿಸುವ ಈ ಕ್ರೀಡೆ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಮಾತ್ರ ಕಾಣಲು ಸಾಧ್ಯ. ಬನ್ನಿ, ಎರಡನೇ ಸುತ್ತಿನ ಗೇಮ್ಸ್‌ಗಳಿಗೆ ಭಾಗವಹಿಸುವ ತಂಡಗಳಿಗೆ ಮತ್ತು ಆಯೋಜಕರಿಗೆ ಶುಭ ಹಾರೈಸೋಣ.





