ರಾಮಾಯಣ-ಮಹಾಭಾರತವನ್ನ ಕನ್ನಡಿಗ್ರು ನೋಡ್ಬಾರ್ದಾ?
– ರಾಕೇಶ್ ಶೆಟ್ಟಿ
ಭಾನುವಾರ ಬೆಳಿಗ್ಗೆಯಾಗುವುದನ್ನೆ ಕಾಯುತಿದ್ದ ದಿನಗಳವು,ಆ ೪೫ ನಿಮಿಷಗಳು ರಸ್ತೆ ಬಿಕೋ ಅನ್ನುತಿತ್ತು.ಆಗ ನಮ್ಮ್ ಇಡಿ ಊರಿಗೆ ಇದ್ದಿದ್ದು ಮೇಷ್ಟ್ರ ಮನೆಯ ಟೀವಿ ಮಾತ್ರ ಅಲ್ಲಿ ಹೋಗಿ ಕೂತು …ಪರದೆಯಲ್ಲಿ ’ಕರ್ಮಣ್ಯೆ ವಾದಿಕಾ…’ ದನಿ ಕೇಳುತಿದ್ದಂತೆ ಕಣ್ಣು ಬಿಟ್ಟಂತೆ ನೋಡುತ್ತ ಕೂರುತಿದ್ದೆ.ಹೌದು ನಾನು ಮಾತಾಡುತ್ತಿರುವುದು ’ಮಹಾಭಾರತ’ ಧಾರವಾಹಿಯ ಬಗ್ಗೆ.ಅದರಲ್ಲಿ ಮಧ್ಯೆ ಬರುವ ಹಾಡುಗಳು, ಆ ಯುದ್ಧದ ದೃಶ್ಯಗಳನ್ನ ನೋಡುವುದೇ ಹಬ್ಬ,ಭಾಷೆ ಅರ್ಥವಾಗದಿದ್ದರೂ ನೋಡುತಿದ್ದೆ,ನೋಡಲೆಬೇಕಿತ್ತು!
ಯಾಕಂದ್ರೆ ಗೊತ್ತಲ್ಲ ನಮ್ಮ್ ಕನ್ನಡ ಚಿತ್ರರಂಗದವರ ’ಡಬ್ಬಿಂಗ್ ನಿಷೇಧ’ ನೀತಿ.ಈ ಹಿಂದೊಮ್ಮೆ ಇದರ ಬಗ್ಗೆ ಬರೆದಿದ್ದೆ, ಮತ್ತೆ ಬರೆಯುವಂತೆ ಮಾಡಿದ್ದು ಈ ಬಾರಿಯ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೈಗೊಂಡ ಡಬ್ಬಿಂಗ್ ವಿರೋಧಿ ನಿರ್ಣಯ.ಒಂದು ವೇದಿಕೆಯಲ್ಲಿ ವಿರುದ್ಧ ನಿಲುವು ತಳೆದರೆ ಮತ್ತೊಂದು ವೇದಿಕೆಯಲ್ಲಿ ಹಿರಿಯ ನಟಿ,ಚತುರ್ಭಾಷಾ ತಾರೆ ಬಿ.ಸರೋಜಾದೇವಿಯವ್ರು “ಚಲನಚಿತ್ರ ಹಾಗೂ ಕಿರುತೆರೆ” ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಅದೂ “ಡಬ್ಬಿಂಗ್ ವಿರೋಧ ಮತ್ತು ರಾಜಕೀಯ ಶಕ್ತಿಯಾಗಿ ಕನ್ನಡ-ಕನ್ನಡಿಗ” ಎಂಬ ಕೃತಿಯನ್ನು ಬಿಡುಗಡೆ ಮಾಡಿ ಡಬ್ಬಿಂಗ್ ಪರವಾಗಿ ಮಾತಾಡಿ,ಇತ್ತೀಚೆಗೆ ಡಬ್ಬಿಂಗ್ ನಮ್ಮ ಹಕ್ಕು ಅಂತ ಹೇಳಿಕೊಂಡು ಪತ್ರಿಕೆಗಳಿಗೆ ಬರೆಯುತ್ತ ಬಂದ ಗೆಳೆಯರ ಮಾತನ್ನ ಅನುಮೋದಿಸಿದ್ದಾರೆ.
ಎಂದಿನಂತೆ ಚಿತ್ರ ರಂಗದ ಮಂದಿ ಸರೋಜಾದೇವಿಯವರ ಮಾತಿಗೆ ವಿರೋಧ ಸೂಚಿಸಿದ್ದಾರೆ,ಕೆಲವು ಮಾಧ್ಯಮಗಳ ವರದಿಯಲ್ಲಂತೂ ಅವರೇನೊ ದೊಡ್ಡ ತಪ್ಪು ಮಾಡಿದಂತೆಯು ಹೇಳಿಬಿಟ್ಟರು,ಅಷ್ಟಕ್ಕೂ ಅವರು ಹೇಳಿದ್ರಲ್ಲಿ ತಪ್ಪೇನಿದೆ? ಅವ್ರ ಹೇಳಿಕೆ ಏನಿತ್ತು ಅಂತ ನೋಡಿ “ರಾಮಾಯಣ, ಮಹಾಭಾರತದಂತಹ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡುವುದರಿಂದ ನಮ್ಮ ಹಳ್ಳಿಯವರು ಅದನ್ನು ನೋಡಲು ಸಾಧ್ಯವಾಗುತ್ತದೆ” ಮತ್ತೆ ಕಡೆಗೆ ಅವ್ರು ತಮ್ಮ ಮಾತಿಗೆ ಬದ್ಧರಾಗಿ ಸ್ಪಷ್ಟನೆ ನೀಡಿದ್ದು ಹೀಗೆ “ರಾಮಾಯಣ, ಮಹಾಭಾರತವನ್ನು ಕನ್ನಡದಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕೆಲ್ಲಾ ಸಿಕ್ಕಾಪಟ್ಟೆ ಖರ್ಚಾಗುತ್ತದೆ. ರಾಮಾಯಣ, ಮಹಾಭಾರತ ನಮ್ಮ ಜನಕ್ಕೆ ತಲುಪಲಿ ಎಂಬುದು ನನ್ನ ಉದ್ದೇಶ.ನಿಯಮಗಳನ್ನು ಸಡಿಲಿಸಿ ಈ ರೀತಿಯ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಏನೂ ತೊಂದರೆ ಇಲ್ಲ”
ಸರೋಜಾದೇವಿಯವರ ಮಾತಿನಲ್ಲಿ ತಪ್ಪೇನಿದೆ? ಅವ್ರು ’ಸತ್ಯ’ವನ್ನೆ ತಾನೇ ಹೇಳಿರೋದು? ಕೆಲವ್ರಿಗೆ ’ಸತ್ಯ ಕಹಿ’ಯಲ್ವಾ ಹಾಗಾಗಿ ವಿರೋಧಿಸುತ್ತಾರೆ ಅಷ್ಟೆ!,ರಾಮಾಯಣ,ಮಹಭಾರತ ಬರುತಿದ್ದ ಕಾಲದಲ್ಲಿ ಚಿತ್ರರಂಗ ಬೆಳೆದಿರಲಿಲ್ಲ,ಆಗ ಡಬ್ಬಿಂಗ್ ನಿಲ್ಲಿಸಿದ್ದು ಓಕೆ,ಆದ್ರೆ ಈಗ ಚಿತ್ರರಂಗ ಬೆಳೆದಿಲ್ವಾ?,ಮತ್ತೆ ಈಗ್ಲೂ ಯಾಕೆ ಹಳೆ ಪುಂಗಿಯನ್ನೆ ಊದುತಿದ್ದಿರಾ? ಕನ್ನಡಿಗರಿಗೆ ಈ ಮಹಾಕಾವ್ಯಗಳನ್ನ ನೋಡದಂತೆ ವಂಚಿಸಲು ಚಿತ್ರರಂಗದವ್ರಿಗೇನು ಹಕ್ಕಿದೆ?
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಹಾಗೂ ನಟ ಅಶೋಕ್ “ಒಂದು ವೇಳೆ ಡಬ್ಬಿಂಗ್‌ಗೆ ಅನುಮತಿ ಕೊಟ್ಟಿದ್ದಿದ್ದರೆ ‘ಸೀತಾ’ ಎಂಬ ಧಾರಾವಾಹಿ ಕನ್ನಡದಲ್ಲಿ ಬರುತ್ತಿರಲಿಲ್ಲ” ಅಂದಿದ್ರು.ಅಲ್ರಿ ಸ್ವಾಮಿ. ಆ ಧಾರವಾಹಿ ತೆಗೆಯೋಕೆ ನಿಮಗೆಷ್ಟು ವರ್ಷ ಬೇಕಾಯ್ತು? ಅದು ಏನು, ಆಗಿನ ರಾಮಾಯಣಕ್ಕೊ ಈ ಧಾರವಾಹಿಗೂ ಹೋಲಿಸಿ ನೋಡಿದರೆ ತಮ್ಮ ಮಾತನ್ನ ತಾವೆ ನುಂಗಿಕೊಳ್ಳುತ್ತಿರಾ ಬಹುಷಃ! ಅಲ್ಲ ಈ ಚಿತ್ರರಂಗದವರ ಅನಗತ್ಯ ಭಯಕ್ಕೆ ಕನ್ನಡಿಗರೇಕೆ ಅರ್ಥವಾಗದ ಭಾಷೆಯ ಕಾರ್ಯಕ್ರಮ ನೋಡ್ಬೆಕ್ರಿ?
ಚಿತ್ರರಂಗದವ್ರ ದುಗುಡ ಏನಂದ್ರೆ ಡಬ್ಬಿಂಗ್ಗೆ ಅನುಮತಿ ನೀಡಿದ್ರೆ ಎಲ್ರೂ ಅದನ್ನೆ ಮಾಡ್ತಾರೆ,ಆಮೇಲೆ ಕನ್ನಡ ಸಿನೆಮಾಗಳೂ ಬರೋದೆ ಇಲ್ಲ ಅನ್ನೋದು.ಒಂದು ಹಂತದವರೆಗೂ ನಿಜವೂ ಹೌದು ಅನ್ನಿ,ಯಾಕಂದ್ರೆ ಈಗಾಗಲೆ ಇರೋ ರಿಮೇಕ್ ಸವಲತ್ತನ್ನೆ ಬಳಸೋ ಪರಿ ನೋಡಿ ಕಿತ್ತೊಗಿರೋ ತಮಿಳ್-ತೆಲುಗಿನ ಮಚ್ಚು,ಲಾಂಗಿನ ಚಿತ್ರಗಳು ಲಂಗು-ಲಗಾಮಿಲ್ಲದೆ ಇಲ್ಲಿಗೆ ರೀಮೆಕ್ ಆಗಿ ಬರ್ತಿವೆ,ಇಂತವರ ಕೈಗೆ ’ಡಬ್ಬಿಂಗ್ ಮಾಡ್ಕೊ ಹೋಗಿ’ ಅಂದ್ರೆ… ಕೊಡಬಾರದವ್ರ ಕೈಗೆ ಕೊಡಾಬಾರದ್ದನ್ನ ಕೊಟ್ಟಂಗಾಗುತ್ತೆ.
ಹಾಗಿದ್ರೆ ಡಬ್ಬಿಂಗ್ ಬೇಡ ಅನ್ನೋ ನಿರ್ಧಾರವೆ ಸರಿ ಅನ್ನಿಸುತ್ತಲ್ವಾ?,ರಿಮೇಕ್ ಮಾಡೋಕೆ ಇರೋ ನೀತಿಯನ್ನೆ ಅನುಸರಿಸಿದರೆ ಡಬ್ಬಿಂಗ್ ಬೇಡ ಅನ್ನಿಸಬಹುದು.ಆದರೆ ಡಬ್ಬಿಂಗ್ ಮಾಡುವ ಹಕ್ಕು ಕೇವಲ ’ವಾಣಿಜ್ಯ ಮಂಡಳಿ’ ಬಳಿ ಇಟ್ಕೊಂಡರೆ, ಮತ್ತು ಅದನ್ನ ಅವರು ಮಾತ್ರ ಮಾಡುತ್ತ ಬರುವ ಲಾಭವನ್ನ ಕನ್ನಡ ಚಿತ್ರರಂಗದ ಏಳಿಗೆಗೆ ಉಪಯೋಗಿಸಿಕೊಳ್ಳಬಹುದಲ್ವಾ?.ಓಳ್ಳೊಳ್ಳೆ ಪೌರಾಣಿಕ ಧಾರವಾಹಿ,ಮಾಹಿತಿಯುಳ್ಳ ಸಿನೆಮಾಗಳನ್ನೆಲ್ಲ ಖುದ್ದು ’ವಾಣಿಜ್ಯ ಮಂಡಳಿ’ಯೆ ಡಬ್ಬ್ ಮಾಡಬಹುದಲ್ವಾ?
ಇದನ್ನಾದ್ರು ಡಬ್ಬಿಂಗ್ ವಿರೋಧಿಸೋ ಮಂದಿ ಒಪ್ಪಬಲ್ಲರಾ?
(ಚಿತ್ರ ಕೃಪೆ : utopianvision.co.uk)





ಶೆಟ್ರೆ ನಿಮ್ಮ ಮಾತು ಖರೆಅದ. ಅವತಾರ್ ನಂಥ ಚಿತ್ರ ಕನ್ನಡದಲ್ಲಿ ಇದ್ದರೆ ಎಷ್ಟು ಛಲೋ ಇರತದ. ಹಂಗ
ಟಾಮ್ ಜೆರ್ರಿ ಮಂತಾದ ಕಾರ್ಟೂನುಗಳೂ ಕೂಡ.ರಿಮೇಕು ನೆಚ್ಚಿಕೊಂಡು ಬದುಕೋ ಮಂದಿ ವಿರೋಧ ಮಾಡತಾರ
ನಮ್ಮಲ್ಲಿ “ಡಬ್ಬಾ” ಸಿನಿಮಾ ಜಾಸ್ತಿ ಬರೋದಕ್ಕೆ ಡಬ್ಬಿಂಗ್ ಅವಕಾಶ ಇಲ್ಲದಿರುವುದೇ ಕಾರಣವಾಗಿರಬಹುದು.
ನೀವಂದುದು ನಿಜ ಶೆಟ್ಟರೇ
ನನ್ನದೂ ಒಂದು ಓಟು
KANNADA CHITRA GALU BERE RAAJAYDALLI ODALLA ( ALLINDA OODIDUTHARE) NAMAGE NACHIKE, MANA YENU ILLAVA, BERE RAJYA DALLI T.V. CHANNEL NALLI KANNADA ILLA, AADHARE NAMMA RAJYA DALLI BARI BERE BASHEYA CHANNEL GALU, ALLI ENGLISH FILMS KOODA TELUGU, TAMIL NALLI IRUTHE, ELLI NODIDHARU AVARA AVARA BASHEGALE, AADHARE NAMMA NAADINALLI PARA BASHEGALE, ADHAKKE IRABEKU SRI. GOWDARU YELIDHU KANNADA RAJYA DALLI HUTTBARADAGITTU ANTH. DUBBING VIRODA MADIDHARE INNU 10 VARUSHA DALLI NAMMA KANNADA NEGEDUBELUTHE.DUBBING VIRODISUVA JANARU REMAKE YAAKE MADUTHARE, ENJALU SAMSKRUTHI JASTI BEDA.
NONDA KANNDADIGA
ಇಂಗ್ಲೀಷ್ ಹಿಂದೀ ಯಾವ ಭಾಷೆಯು ಬಾರದ ನನ್ನಂಥ ವ್ಯಕ್ತಿಗಳು ಕೇವಲ ರಾಜಕುಮಾರ ಅವರ ಮಕ್ಕಳ ಸಿನಿಮಾ ನೋಡುತ್ತಾ ಎಷ್ಝ್ಟು ದಿನ ಇರಬೇಕು ನಮಗೂ ನ್ಯಾಷನಲ್ ಜಿಯಾಗ್ರಫಿ ಡಿಸ್ಕವರಿ ಮುಂತಾದ ಚಾನಲ್ ನೋಡಿ ಜ್ಞಾನ ಹೆಚ್ಚಿಸಿಕೊಳ್ಳುವ ಆಸೆ ಇರುವದಿಲ್ಲವೆ?? ಉತ್ತಮ ಜ್ಞಾನರ್ಜನೆ ಉಂಟುಮಾಡುವ ಇಂಗ್ಲೀಷ್ ಹಿಂದಿ ಚಲನ ಚಿತ್ರ ಡಬ್ ಆದರೆ ಯಾವ ತೊಂದರೆ?? ಕೇವಲ ಮನರಂಜನಾ ಪ್ರಧಾನ ಚಿತ್ರಗಳು ಡಬ್ ಆಗದಂತೆ ಸೆನ್ಸಾರ್ ತಡೆಹಿಡಿದರೆ ಆಯಿತಲ್ಲ? ಉತ್ತಮ ಚಿತ್ರಗಳು ಜ್ಞಾನಾತ್ಮಕ ಚಿತ್ರಗಳನ್ನು ಡಬ್ ಮಾಡಿದರೆ ಕನ್ನಡದ ಕೆಲವು ನುಡಿಗಟ್ಟು ಗಾದೆ ಹಾಡು ಇತ್ಯಾದಿಗಳನ್ನು ಯುವ ಜನತೆ ಬಳಸಲು ತೊಡಗಿದರೆ ಯಾರಿಗೆ ಲಾಭ? ಕನ್ನಡ ಭಾಷೆಗಲ್ಲವೆ? ಈಗ ನಮ್ಮ ಮಕ್ಕಳು ಹಿಂದಿ ನಾಡೋಕ್ತಿ , ಗಾದೆ, ಹಾಡುಗಳನ್ನು ಗುನುಗುತ್ತಾರೆ. ಕನ್ನಡದಲ್ಲಿಯೇ ಚಿತ್ರ ನೋಡಿದರೆ ಅವೆ ಹಾಡು ಗುನುಗುತ್ತಾರೆ ಭಾಷಾ ಬೆಳವಣಿಗೆಗೆ ಇದೂ ಒಂದು ಕಾಣಿಕೆಯಲ್ಲವೆ?? ದಯವಿಟ್ಟು ಸರ್ಕಾರ ನಮ್ಮಂಥವರನ್ನೂ ದೃಷ್ಟಿಯಲ್ಲೀ ಇಟ್ತುಕೊಂಡು ಕಾನೂನು ಮಾಡಿದರೆ ಒಳಿತು. ಇದರಲ್ಲಿ ಬಹುಜನರ ಹಿತವಡಗಿದೆ.