
ಯೋಗರಾಜ ಭಟ್ಟರೆ ನಿಮ್ಮಗೊಂದು ಬಹಿರಂಗ ಪತ್ರ……..‘ಪರಮಾತ್ಮ’ ಚಿತ್ರದ ಬಗ್ಗೆ ನನ್ನ ಅನೇಕ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರತಿಯೊಬ್ಬರು ಹೇಳುತ್ತಿದ್ದ ಮಾತು ‘ ಚಿತ್ರ, ನಿರೀಕ್ಷೆಯನ್ನು ಹುಸಿಯಾಗಿಸಿದೆ’ ಇದು ನನ್ನ ಅಭಿಪ್ರಾಯ ಕೂಡ. ಸಿನಿಮಾ ತೆರೆಕಂಡ 12 ದಿನಗಳ ಬಳಿಕ ಈ ಪತ್ರ ಬರೆಯಲು ನನ್ನೊಳಗಿನ ಒತ್ತಡವೇ ಕಾರಣ. ಮಣಿ, ಮುಂಗಾರು ಮಳೆ ಮತ್ತು ಪಂಚರಂಗಿ ಯಿಂದ ಸಹಜವಾಗಿಯೆ ನಿಮ್ಮ ಚಿತ್ರಗಳೆಂದರೆ ನಮಗೆ ಹೆಚ್ಚು ನಿರೀಕ್ಷೆ-ಕುತೂಹಲ. ಪ್ರತಿಭಾನ್ವಿತ ನಟ ಪುನೀತ್ ಅವರು ನಟಿಸುವ ಚಿತ್ರವನ್ನು ನೀವು ನಿರ್ದೇಶಿಸುತ್ತೀರಿ ಎನ್ನುವುದು ಇವೆಲ್ಲವನ್ನೂ ಹೆಚ್ಚು ಮಾಡಿತ್ತು. ಬಹು ಕಲಾತ್ಮಕವಾಗಬಹುದಾಗಿದ್ದ ಚಿತ್ರವೊಂದು ನಿರೀಕ್ಷೆಯ ಮಟ್ಟ ಮುಟ್ಟದಿರಲು ನೀವೇ ಸಂಪೂರ್ಣ ಕಾರಣಕರ್ತರು. ಇದು ಹೇಗೆ….ಎನ್ನುತ್ತೀರಾ….ಮುಂದೆ ಓದಿ…ಭಟ್ಟರೆ…
ರೂಪಕ-ಪ್ರತಿಮೆಗಳನ್ನು ದುಡಿಸಿಕೊಳ್ಳಲು ನೀವು ಸಾಕಷ್ಟು ಪ್ರಯತ್ನಪಟ್ಟಿದ್ದೀರಿ ಎನ್ನುವುದು ಚಿತ್ರದುದ್ದಕ್ಕೂ ಕಾಣುತ್ತದೆ. ಇದರ ಮೊದಲ ನಿದರ್ಶನ. ನಾಯಕ ಪರಮಾತ್ಮ ಹಿಮಾಲಯ ಪರ್ವತವನ್ನೇರುವುದು. ಈ ಮೂಲಕ ಆತ ಹಿಮಾಲಯದೆತ್ತರದ ವ್ಯಕ್ತಿತ್ವವುಳ್ಳವನು ಎಂದು ಹೇಳಿದಿರಿ. ಕುಂಗ್ ಪು ಸಮರ ಕಲೆಯೂ ಹೌದು ಮತ್ತು ದೇಹ ಮನಸಿನ ನಡುವೆ ಅದ್ಬುತ ಹೊಂದಾಣಿಕೆ ಏರ್ಪಡಿಸುವ; ತನ್ಮೂಲಕ ಏಕಾಗ್ರತೆ ನೀಡುವ ಕಲೆಯೂ ಹೌದು. ಇದರಲ್ಲಿ ಪರಿಣಿತಿ ಪಡೆದ ಕಥಾನಾಯಕ ಈ ಎಲ್ಲವನ್ನು ಸಿದ್ದಿಸಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ತಿಳಿಸಿದಿರಿ. ಇವೆಲ್ಲದರ ಜೊತೆಗೆ ಆತ ಮಾರುಕಟ್ಟೆ ಪರಿಣಿತ ಎನ್ನುವುದನ್ನು ಹೇಳಿದಿರಿ. ಇಷ್ಟೆಲ್ಲ ಹೇಳಿದ ನೀವು ಆತ ಎಂ.ಎಸ್ ಸ್ಸಿಯಲ್ಲಿ ಆರು ವರ್ಷ ಢುಂಕಿ ಹೊಡೆದಿದ್ದು ಯಾಕೆ ಎನ್ನುವುದನ್ನು ಅರ್ಥ ಮಾಡಿಸುವುದಿಲ್ಲ. ಈ ಸಂದರ್ಭದ ಹಾಡು ಕೂಡ ಈ ನಿಟ್ಟಿನಲ್ಲಿ ವಿಫಲವಾಗಿದೆ. ದುಶ್ಚಟಗಳಿಲ್ಲದ, ಸಂಪೂರ್ಣ ಸಂಯಮದಿಂದ ವರ್ತಿಸುವ, ಯಾರನ್ನೂ ಕಿಚಾಯಿಸಿ-ಗೋಳು ಹುಯ್ದುಕೊಳ್ಳದ ನಾಯಕ ಏಕಾಗಿ ಸತತ ಫೇಲಾಗುತ್ತಾನೆ ಎಂದು ಬಿಂಬಿಸಲು ನೀವು ವಿಫಲರಾದಿರಿ. ಪರೀಕ್ಷೆಯಲ್ಲಿ ಫೇಲಾಗುವುದಕ್ಕೂ ಜೀವನದಲ್ಲಿ ಯಶಸ್ವಿಯಾಗುವುದಕ್ಕೂ ಸಂಬಂಧವಿಲ್ಲ ಎಂದು ಹೇಳಲು ನೀವು ಪ್ರಯತ್ನಿಸಿದ್ದೀರಿ ನಿಜ. ಆದರೆ ‘ಪರಮಾತ್ಮ’ನ ವಿಷಯದಲ್ಲಿ ಈ ಎಣಿಕೆ ಹೊಂದಾಣಿಕೆಯಾಗುವುದಿಲ್ಲ.
ಪರಮಾತ್ಮನಿಗಾಗಿ ಜೀವ ಕೊಡಲು ಸಿದ್ದವಿರುವಷ್ಟು ಪ್ರೀತಿಸುತ್ತಾಳೆ ಎಂದು ನೀವು ತೋರಿಸಿದ ಸುಂದರಿ ಸಾನ್ವಿ ಅಲಿಯಾಸ್ ಪಸೀನಾ ಸಿನಿಮಾ ಥಿಯೇಟರ್ ನಲ್ಲಿ ನಾಯಕನನ್ನು ಎಬ್ಬಿಸಿ ಹೊರ ಕರೆದುಕೊಂಡು ಹೋಗಲಿಲ್ಲವೇಕೆ….ಬಾಂಬ್ ಎಂದರೆ ದಿಗಿಲಾಗುವ ಮಟ್ಟಿಗಿನ ಕೂಗಾಟ-ಕಿರುಚಾಟ ಇರುತ್ತದೆ. ಇಷ್ಟಾದರೂ ಪರಮಾತ್ಮನಿಗಾಗಲಿ-ನಾಯಕಿ ದೀಪಾ (ಪಾತ್ರದ ಹೆಸರು ಕೂಡ ಇದೆ)ಳಿಗಾಗಲಿ ಎಚ್ಚರವಾಗುವುದಿಲ್ಲವೇಕೆ….ಕುಂಗ್ ಪು ಕಲೆ ಕಲಿತ…ಹೊರಗಿನ ಬಹು ಸೂಕ್ಷ್ಮ ಕದಲಿಕೆಗೂ ಥಟ್ಟನೆ ಎಚ್ಚರಗೊಳ್ಳಬೇಕಾದ ಪಟು ಅಷ್ಟು ಗದ್ದಲವಾದರೂ ಎಚ್ಚರವಾಗುವುದಿಲ್ಲವೇಕೆ…ಇಂಥ ಸನ್ನಿವೇಶದಲ್ಲಿಯೆ ಸಿನಿಮಾ ಮಂದಿರದಲ್ಲಿ ನಾಯಕ-ನಾಯಕಿಯನ್ನು ಭೇಟಿ ಮಾಡಿಸುವ ಅನಿರ್ವಾಯತೆಗೆ ಸಿಲುಕಿದಿರೇಕೋ ಅರ್ಥವಾಗಲಿಲ್ಲ.
ಯಾವುದೇ ಒಂದು ಕಟ್ಟಡದಲ್ಲಿ ಬಾಂಬ್ ಇಟ್ಟ ಸುದ್ದಿ ತಿಳಿದರೆ ಪೋಲಿಸರು ಫರ್ಲಾಂಗುಗಟ್ಟಲೆ ದೂರದಲ್ಲಿ ಜನರನ್ನು ನಿಲ್ಲಿಸುತ್ತಾರೆ. ಆದರೆ ಸಿನಿಮಾ ಮಂದಿರ ಆವರಣದಲ್ಲಿಯೆ ಮಾಧ್ಯಮದವರು ಮತ್ತು ಜನ ಜಂಗುಳಿಯನ್ನು ನಿಲ್ಲಿಸಿದ ನೀವು ಕಾಮನ್ ಸೆನ್ಸ್ ಕೂಡ ತೋರಿಸದೇ ಹೋಗಿದ್ದು ತುಂಬ ಅಸಹಜವಾಗಿ ಕಾಣುತ್ತದೆ. ಅಪತ್ಕಾಲದ ಸಂದರ್ಭದಲ್ಲಿ ಒಂದು ಹುಡುಗ ಮತ್ತು ಹುಡುಗಿಯೊಬ್ಬಳ ಪ್ರಾಣ ರಕ್ಷಿಸಲು ಹೊತ್ತುಕೊಂಡು ಹೊರಗೆ ಬಂದಾಕ್ಷಣ ಅವರಿಬ್ಬರಿಗೂ ಪ್ರೇಮಿಗಳ ಪಟ್ಟ ಕಟ್ಟುವಂಥ ಟಿವಿ ಮಾಧ್ಯಮಗಳನ್ನು ತೋರಿಸುವ ಮೂಲಕ ವಾಹಿನಿಗಳನ್ನು ಲೇವಡಿ ಮಾಡಿದ್ದೀರಿ. ಯಾವುದೇ ಪೂರಕ ಸನ್ನಿವೇಶ-ಹೇಳಿಕೆ ಇಲ್ಲದೇ ಇಂಥ ಅತುರದ ನಿರ್ಧಾರಕ್ಕೆ ಯಾವುದೇ ಟಿವಿ ವಾಹಿನಿ ಬರುವುದಿಲ್ಲವೆಂಬ ಪ್ರಾಥಮಿಕ ಅಂಶವೂ ನಿಮಗೆ ತಿಳಿಯದೇ ಹೋಗಿದ್ದು ಆಶ್ಚರ್ಯಕರ.
ದೀಪಾಳಲ್ಲಿ ಪರಮಾತ್ಮ ಅನುರಕ್ತನಾಗುವುದು ಕೂಡ ಸಹಜವಾಗಿ ಮೂಡಿ ಬಂದಿಲ್ಲ. ದೀಪಾ ಎಲ್ಲಿ ಹೋಗುತ್ತಾಳೆ ಎಂದು ತಿಳಿದು ಹಿಂಬಾಲಿಸಿದ ಪರಮಾತ್ಮ ಆಕೆ ತನ್ನ ಕಾರಿನಲ್ಲಿ ಕುಳಿತಾಗ ಇದಕ್ಕಿದಂತೆ ಚುಂಬಿಸುವುದು ಕೂಡ ಕೃತಕ ಎನಿಸುತ್ತದೆ. ಇಂಥ ಸನ್ನಿವೇಶ ಅವರಿಬ್ಬರೂ ತೆಪ್ಪದಲ್ಲಿ ಕುಳಿತಾಗಲೂ ಬರುತ್ತದೆ. ಇದನ್ನೆಲ್ಲ ನೋಡಿದಾಗ ನೀವು ತಮಿಳು ಚಿತ್ರ ‘ವಿನೈತ್ತಾಂಡಿ ವರುವಾಯ’ ಸಿನಿಮಾದಿಂದ ತುಂಬ ಪ್ರೇರಿತರಾಗಿದ್ದೀರಿ ಎನ್ನುವುದು ತಂತಾನೆ ತಿಳಿಯುತ್ತದೆ. ಆದರೆ ಅಲ್ಲಿಯ ಭಾವ ತೀವ್ರತೆ ಮತ್ತು ಪ್ರೇಮದ ಉತ್ಕಟ ಕ್ಷಣಗಳನ್ನು ನೀವು ಕಟ್ಟಿಕೊಡಲು ವಿಫಲರಾಗಿದ್ದೀರಿ. ಪರಸ್ಪರ ಪ್ರೀತಿಸಿದ ಮೇಲೂ ಪರಮಾತ್ಮನನ್ನು ನಿರಾಕರಿಸುವುದು ನೋಡಿದಾಗ ಆ ತಮಿಳು ಸಿನಿಮಾ ನಿಮ್ಮ ಮೇಲೆ ಮಾಡಿರುವ ಪ್ರಬಲ ಪ್ರಭಾವ ಅರಿವಾಗುತ್ತದೆ. ಆದರೆ ಅಲ್ಲಿಯ ಮಾಧುರ್ಯವನ್ನು ನೀವು ಮೂಡಿಸಿಲ್ಲ. ದೀಪಾ ಕಾರಣವಿಲ್ಲದೇ ನಗುವುದು, ಪರಮಾತ್ಮ ಆಕೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಗುರಿ ಮುಟ್ಟಲು ಓಡುವಾಗ ಆಕೆ ಆತನ ಬೆನ್ನು ಕಚ್ಚುವುದೆಲ್ಲ ತುಂಬ ಕೃತಕ ಎನ್ನಿಸುತ್ತದೆ. ದೀಪಾಳ ನಗು ಹಾಸ್ಯಸ್ಪದ ಎನಿಸುತ್ತದೆ.
ಜಾತಿ-ಮತ-ಪಂಥದ ಅರಿವಿಲ್ಲದೇ-ಆ ಕುರಿತು ಕಿಂಚಿತ್ತೂ ಮಾತನಾಡದೇ ಪರಮಾತ್ಮ ದೀಪಾಳನ್ನು ಪ್ರೀತಿಸಿರುತ್ತಾನೆ. ಆದರೆ ನೀವು ದೀಪಾಳ ಅಪ್ಪಯ್ಯನಿಂದ ಈತ (ಪರಮಾತ್ಮ)ನದು ದಿವಿನಾದ ಜಾತಕ ಎಂದು ಹೇಳುವ ಮುಖಾಂತರ ಪರಮಾತ್ಮನ ಪವಿತ್ರ ಆತ್ಮಕ್ಕೆ ಅಪಚಾರ ಮಾಡಿದಿರಿ ಎನಿಸುತ್ತದೆ. ದೀಪಾಳನ್ನಷ್ಟೆ ಪ್ರೀತಿಸಿದ ಮತ್ತೊಂದು ಹುಡುಗಿಯನ್ನು ಕನಸಿನಲ್ಲಿಯೂ ಬಯಸದ ವ್ಯಕ್ತಿತ್ವದ ಪರಮಾತ್ಮನಿಂದ ‘ಇನ್ನೊಬ್ಬಳ ಪೋನ್ ನಂಬರ್ ಇಟ್ಕೊಂಡಿರಿ’ ಎಂದು ಹಾಡು ಹೇಳಿಸುವ ಮೂಲಕ ನೀವೇ ರೂಪಿಸಿದ ಪಾತ್ರಕ್ಕೆ ನೀವೇ ಅಪಚಾರ ಮಾಡುವುದು ಸರಿಯೆ ಭಟ್ಟರೆ..? ನಿರಾಕರಿಸಿದ ದೀಪಾ ಮತ್ತೆ ಬಂದು ಪರಮಾತ್ಮನನ್ನು ಮದುವೆಯಾಗುವುದಾಗಲಿ ನಂತರ ಮಗುವಾದ ನಂತರ ಸಾವನ್ನಪ್ಪುವ ದೃಶ್ಯಗಳು ವೀಕ್ಷಕರನ್ನು ಬಲವಾಗಿ ತಟ್ಟಬೇಕಿತ್ತು. ಆದರೆ ಅಂಥ ಭಾವುಕತೆ ತಂತಾನೆ ಮೂಡುವಂತೆ ಮಾಡಲು ನೀವು ವಿಫಲರಾಗಿದ್ದೀರಿ.
‘ಪರಮಾತ್ಮ’ ಚಿತ್ರ ಖಂಡಿತ ಕಳಪೆಯಲ್ಲ. ಅತ್ಯುತ್ತಮ ಚಿತ್ರವನ್ನು ಕಟ್ಟಿಕೊಡಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೀರಿ. ಇದು ತಿಳಿಯುತ್ತದೆ. ಚಿತ್ರದುದ್ದಕ್ಕೂ ನೀವು ಮೂಡಿಸಿರುವ ರೂಪಕಗಳು ಶಕ್ತಿಯುತವಾಗಿವೆ…ಪರಮಾತ್ಮ ಹಿಮಾಲಯವೇರುವುದು ಆತನ ಔನ್ನತ್ಯ ತೋರಿದರೆ…ತೆರೆದ ಬಿಳಿ ಕಾರನ್ನು ಆತ ಬಳಸುವಂತೆ ಮಾಡಿರುವುದು ಕೂಡ ಸೊಗಸಾಗಿದೆ. ಇದು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗಿ…ಅದು ಕಾಮನಬಿಲ್ಲಾಗಿ ಮೂಡುವ ಬಗೆಯನ್ನು ತೋರಿಸುತ್ತದೆ. ಜನಪದ ಕಥೆಗಳಲ್ಲಿ ರಾಜಕುಮಾರ ಬಿಳಿ ಕುದುರೆಯನ್ನೇರಿ ರಾಜಕುಮಾರಿ ಅರಸಲು ಹೊರಟಂತೆ ಕಾಣುತ್ತದೆ. ಜನಪದ ಕಥೆಯೊಂದನ್ನು ಆಧುನಿಕ ರೂಪದಲ್ಲಿ ಕಟ್ಟಿಕೊಡಲು ಯತ್ನಿಸಿರುವ ನಿಮ್ಮ ಪ್ರಯತ್ನ ಶ್ಲಾಘನೀಯ.
ಅತಿ ಹಳೆಯ ವಾಸ್ತುಶಿಲ್ಪ ಹೊಂದಿದ ಮನೆಗಳ ಪರಿಕರಗಳನ್ನು ಅಣ್ಣಯ್ಯ ಮಾರುವುದು ಕೂಡ ಸಾಂಕೇತಿಕವಾಗಿದೆ. ಹಳೆಯ ಮೌಲ್ಯಗಳಿಗೆ ಬೆಲೆ ಕೊಡುವವರೆ ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ. ಆದರೆ ಇಂಥ ಮೌಲ್ಯಗಳ ಪ್ರತಿನಿಧಿಯಾದ ಅಪ್ಪಯ್ಯನ ಪಾತ್ರವನ್ನು ನೀವು ಗಟ್ಟಿಯಾಗಿ ಕಟ್ಟಿಕೊಟ್ಟಿಲ್ಲ. ಇಂಥ ಸಂಪ್ರದಾಯಿಕ ಮೌಲ್ಯಗಳ ಸಂಕೇತವಾದ ಕಂಭಗಳನ್ನು ಪರಮಾತ್ಮ ಖರೀದಿಸಿ ಮೌಲ್ಯದ ಮಹಲು ಕಟ್ಟುವುದು ಮತ್ತು ಅದು ಆತನ ಜೀವನದಲ್ಲಿ ದೀಪಾಳ ಮರು ಪ್ರವೇಶದ ನಂತರ ಪೂರ್ಣವಾಗುವುದು ನಿಮ್ಮ ಸೃಜನಾತ್ಮಕತೆ ತೋರುತ್ತದೆ. ಕ್ಲಾಸಿಕ್ ಕಲಾಕೃತಿಯಾಗಬಹುದಾಗಿದ್ದ ಚಿತ್ರ ಕೃತಿಯನ್ನು ನೀವು ಸಮರ್ಥವಾಗಿ ಬಳಸಿಕೊಂಡಿಲ್ಲವೆಂಬುದೇ ಸಂತಾಪದ ಸಂಗತಿ.
ಚಿತ್ರದ ಕೊನೆಯಲ್ಲಿ ಸಾನ್ವಿ ಅಲಿಯಾಸ್ ಪಸೀನಾ ಬಿಳಿ ಕಾರನ್ನೇರಿ ಹೋಗುವುದು ಈ ಕಾರು ಚಲಿಸುತ್ತಿದ್ದಂತೆ ನೀರಿನ ಚಿಲುಮೆ ಸಕ್ರಿಯವಾಗುವುದು ಅದ್ಬುತ ಪ್ರತಿಮೆ….ಮತ್ತೊಂದು ಆಸೆಗಳೆಂಬ ಕಾಮನಬಿಲ್ಲು ಈತನಿಂದ ದೂರವಾದರೂ ಮಗುವಿನ ಮೂಲಕ ಬದುಕಿನಲ್ಲಿ ಆತ ಚೈತನ್ಯದ ಚಿಲುಮೆಯನ್ನು ಕಾಣುತ್ತಾನೆ ಎಂದು ನೀವು ಹೇಳಿರುವುದು ತುಂಬ ಅರ್ಥವತ್ತಾಗಿದೆ. ಇಂಥ ಶಕ್ತಿಯುತ ರೂಪಕಗಳು ಚಿತ್ರದುದ್ದಕ್ಕೂ ಇವೆ. ಆದರೆ ಒಟ್ಟಂದವಾಗಿ ಮೂಡಿಸಲು ನೀವು ಏಕಾಗಿ ಸೋತಿರೋ…ಅರ್ಥವಾಗುತ್ತಿಲ್ಲ….ನೀವೇ ಹೇಳಿಸಿದಂತೆ ‘ಗೊಂದಲದಲ್ಲಿಯೆ ಸುಖವಿದೆ’ ಎಂಬ ಮಾತನ್ನು ನಿಮಗೆ ಅನ್ವಯಿಸಿಕೊಂಡಿರೋ ಏನೋ…..
ಚಿತ್ರ ಮುಗಿದ ನಂತರವೂ ಕಾಡುವ ಪಾತ್ರಗಳೆಂದರೆ ಪರಮಾತ್ಮ ಮತ್ತು ಪಸೀನಾ..ಇದು ಆ ಪಾತ್ರಗಳ ಶಕ್ತಿಯನ್ನು ತೋರಿಸುತ್ತದೆ….ಈ ಪಾತ್ರಗಳ ಮನೋಭಾವವನ್ನು ಪುನೀತ್ ಮತ್ತು ಐಂದ್ರಿತಾ ರೈ ತಮ್ಮೊಳಗೆ ಆವಾಹಿಸಿಕೊಂಡು ಅಭಿನಯಿಸಿದ್ದಾರೆ. ಭಟ್ಟರೆ ಒಂದು ಮಾತು ಹೇಳುತ್ತೇನೆ. ನೀವಿದನ್ನು ಮನವಿ ಎಂದಾದರೂ ಪರಿಗಣಿಸಿ..ಅಥವಾ ಸಲಹೆ ಎಂದಾದರೂ ತೆಗೆದುಕೊಳ್ಳಿ ‘ಚಿತ್ರದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಈಗಲೇ ಮಾಡಿ. ಆದರೆ ಬದಲಾವಣೆಗೊಂಡ ಚಿತ್ರವನ್ನು ಇನ್ನು ಐದು ಅಥವಾ ಹತ್ತು ವರ್ಷದ ನಂತರ ಮರು ಲೋಕಾರ್ಪಣೆ ಮಾಡಿ…ಅದು ಅತ್ಯದ್ಬುತ ಯಶಸ್ಸು ಕಾಣುತ್ತದೆ ಎಂದು ನನ್ನ ನಂಬಿಕೆ…ಚಿತ್ರವನ್ನು ಗಟ್ಟಿಗೊಳಿಸಲು ನಿಮ್ಮೊಂದಿಗೆ ಸೇರಿ ಪ್ರಯತ್ನಿಸಿರುವ ಕಾಯ್ಕಿಣಿ, ಹರಿಕೃಷ್ಣ..ಪಾತಾಜೆ ಅವರಿಗೆಲ್ಲ ನನ್ನ ನಮಸ್ಕಾರ ತಿಳಿಸಿ…….
ಹೋಟಲ್ ರುಚಿ ನೋಡಿ ಅದೇ ರುಚಿ ಮನೆಯಲ್ಲೂ ಬೇಕು ಅನ್ನುವ ಹಾಗಿದೆ ನಿಮ್ಮ ಮಾತು, ಎಲ್ಲ ಬಾಷೆಯ ಚಿತ್ರಗಳನ್ನು ನೋಡಿ ಜೊತೆಗೆ ನಮ್ಮ ಕನ್ನಡ ಚಿತ್ರ ನೋಡಿದರೆ ಅದು ಹಾಗೆ ಆಗುವುದು ಖ೦ಡಿತ ಎಲ್ಲೋ ಒ೦ದು ಕಡೆ ಸನ್ನಿವೇಶಗಳು ಒ೦ದೆ ತರಹ ಇರುವುದು ಸಹಜ ಯಾಕೆ೦ದರೆ ಇದು ಸ್ವಾಭವಿಕ. ನೀವು ಹೇಳಿರುವುದು ನೋಡಿದರೆ ಚಿತ್ರ ನಿರ್ದೇಶನ ಭಟ್ರರ ಬದಲು ನೀವು ಮಾಡಬೇಕಿತ್ತು ಅನ್ನಿಸುತ್ತಾ ಇದೆ, ಅಣ್ಣಾವ್ರೆ ಹೇಳಿಲ್ಲವೆ ನೂರುಕ್ಕೆ ನೂರು ಯಾರಿ೦ದಲು ಸಾದ್ಯ್ವವಿಲ್ಲ ಅ೦ತ, ಚಿತ್ರವನ್ನು ಒ೦ದು ಮನರ೦ಜನೆಯಾಗಿ ನೋಡಿದರೆ ಅದು ಚೆನ್ನಾಗೆ ಇದೆ
ಯಾಕೆ೦ದರೆ ನನಗ೦ತು ನಿಮ್ಮ ಹಾಗೆ ಚಿತ್ರವನ್ನು ಅತ್ಯ೦ತ ಆಳದಿ೦ದ ನೋಡಲು ಸಾದ್ಯವಿಲ್ಲ.
ಕುಮಾರ ರೈತರೇ…
ಸಿನಿಮಾ, ಕೇವಲ (‘ಕೇವಲ’ ಎಂಬ ಸೀಮಿತಾರ್ಥಕ್ಕೆ ಸಿಕ್ಕಿಕೊಳ್ಳಬೇಡಿ!) ಸಿನಿಮಾ ಮಾತ್ರ… ಪ್ರಶ್ನೆಗಳ ಯಾದಿಯನ್ನು ಚಿತ್ರ ಮಂದಿರಕ್ಕೆ ಕೊಂಡೊಯ್ದರೆ ನಿಮಗೆ ಉತ್ತರ ದಕ್ಕಬಹುದು. ಆದರೆ ಸಿನಿಮಾ ಸಿಗದು… ಹುಳುಕುಗಳಿದ್ದೂ ಅದು ಹಾಗೆ ತೋರದೇ, ಪರವಶಗೊಳಿಸುವ ಯಾವುದೇ ಚಿತ್ರ ನಮ್ಮೆದೆಯಲ್ಲಿ ಗೆದ್ದಂತೆಯೇ (ನಿಜವಾಗಿ ಚಿತ್ರ ಗೆಲ್ಲುತ್ತದೋ ಬಿಡುತ್ತದೋ, ಸ್ವಂತ ನೆಲೆಯಲ್ಲಿ ಅದು ಮುಖ್ಯವಲ್ಲವೆನಿಸುತ್ತದೆ) ಎಂಬುದು ನನ್ನ ಭಾವ. ಇಷ್ಟಕ್ಕೂ ಪ್ರಶ್ನೆಗಳಿರದೇ ಯಾವುದೂ ಪೂರಯಿಸುವುದಿಲ್ಲ. ಆದರೆ ಆ ಪ್ರಶ್ನೆಗಳು ನಮಗೆ ಹಲವು ಉತ್ತರಗಳೆಡೆಗೆ ದಾರಿ ತೋರಿದರಾಯಿತು. ಹಾಗಾದರೆ ಯಾವ ಸನ್ನಿವೇಶ ಅಥವಾ ಸಿನಿಮಾಗಳಿಗೂ ನಾಟಕೀಯತೆ ಪ್ರಾಪ್ತವಾಗದೇ ಅವು ತಟ್ಟನೆ ಕೊನೆಯಾಗುವ ಕವಿತೆಗಳಂತೆ ಅಥವಾ ಭಟ್ಟರ ಸಿನಿಮಾಗಳಂತೆ ಮುದ ಕೊಡುತ್ತವೆ. ಅಲ್ಲವೇ..?
– ಮೀನಾ
ಘನವಾದ ವಿಮರ್ಷೆ.
ಸಾಂಕೆತಿಕವಾಗಿ ಭಟ್ಟರು ಇಷ್ಟೆಲ್ಲಾ ಹೇಳಿದ್ದಾರೆ ಎಂದಾದರೆ ಅವರಿಗೊಂದು ಭೇಷ್.
ಇಷ್ಟು ಗಮನವಿಟ್ಟು ಚಿತ್ರ ನೋಡಿರೋ ನಿಮಗೂ ಭೇಷ್.
ನಾನೂ ಒಂದು ಪುಟ್ಟ ಹಾಗು ತಿಳಿ ವಿಮರ್ಷೆ ಬರೆದಿದ್ದೀನಿ. ಒಮ್ಮೆ ಓದಿ ಹೇಳಿ.
ಅಭಿ
ಪಂಚರಂಗಿ ಚಿತ್ರದಲ್ಲಿ ಮೂಡಿ ಬಂದ “ಗಳು” ಎಂಬ ಡೈಲಾಗ್ ಗಳನ್ನೂ ಸಿನಿಮಾ ಮಂದಿರದಲ್ಲಿ ಕೇಳಿ ,
ಮತ್ತು ನೋಡಿ, ನಮಗೆ ಇನ್ನು ೧೦ ರಿಂದ ೧೫ ವರ್ಷದ ತನಕ ಭಟ್ಟರ ಚಿತ್ರ ನೋಡಬಾರದು ಅಂಥ ನಾನು ನಮ್ಮ ಸ್ನೇಹಿತರೆಲ್ಲರೂ ತೀರ್ಮಾನ ಮಾಡಿಕೊಂಡೆವು.
ಸೊ, ನಮ್ಮ ತೀರ್ಮಾನ ಒಳ್ಳೇದು ಒದೆ , ಪರಮಾತ್ಮ ನೋಡದೆ ಒಳ್ಳೆ ಕೆಲಸ ಮಾಡಿದೆ ಅಂಥ ಅನಿಸುತ್ತಾ ಇದೆ .
ನಮಗೇನು oscar ಲೆವೆಲ್ ಗೆ ಸಿನೆಮ ಬೇಕಿಲ್ಲ ಮಾರಾಯರೇ, ಸಾಮಾನ್ಯ ಜನರಿಗೆ ಅರ್ಥ ಆಗುವ, ಸಾಕಷ್ಟು ಸಹಜತೆಗೆ ಹತ್ತಿರ ಇರುವ ಚಿತ್ರಗಳು ಬೇಕು .
ಹೋಗಲಿ ಒಂದು ಸಂದೇಹ ಪರಿಹರಿಸಿ… ಸಿನಿಮಾದಲ್ಲಿ ನಾಯಕಿ ದೀಪ ಯಾಕೆ ಸಾಯುತ್ತಾಳೆ….. ಚೆನ್ನಾಗಿದ್ದವಳು ಇದ್ದಕ್ಕಿದ್ದ ಹಾಗೆ ಸಾಯಲು ಕಾರಣವೇನು….?
chithra dabba thara ide…..
ಗೆಳೆಯರೆ ಇದು ಪರಮಾತ್ಮ ಚಿತ್ರದ ಮೂರನೆ ಲೇಖನ, ಬೇರೆ ಯಾವ ಚಿತ್ರದ ಬಗ್ಗೆ ಇಷ್ತೊ೦ದು ವಾದ ವಿವಾದ ನೋಡಿದ್ದಿರಾ? ಕಾರಣ ಇದರಲ್ಲೆ ಗೊತ್ತಾಗುತ್ತೆ ಭಟ್ರು ಪುನ್ಹ ಗೆದಿದ್ದಾರೆ ಅ೦ತ, ಆ ಹಾಡುಗಳ ನಿರೂಪಣೆ ನೋಡಲು ಇನ್ನೊಮ್ಮೆ ಹೊಗ್ತಾ ಇದ್ದೀನಿ ಅದು ಭಟ್ರು ಅಥವಾ ಪುನೀತ್ ಗಾಗಿ ಅಲ್ಲ ಅದು ನನಗಾಗಿ
Like
nijakku manassige thumba hatthiravaaguva chitra….. hats off to Mr.Bhat………… film ishta aagodu kevala parishuddha hrudayadavarige maatra…. nimge ishta aagilla andre nim heart pure illa antha 🙂 🙂