ಅವತ್ತು ಎದೆ ನೋವೂ ಬಂದಿರಲಿಲ್ಲ, ಶರಣರೂ ಬರಲಿಲ್ಲ..!
-ಕಾಲಂ ೯
ನೂರು ವರ್ಷ ದಾಟಿದ ಸಿದ್ಧಗಂಗಾ ಸ್ವಾಮೀಜಿ ಜೈಲು-ಆಸ್ಪತ್ರೆ ಹುಡುಕಿಕೊಂಡು ಯಡಿಯೂರಪ್ಪನವರನ್ನು ನೋಡಲು ಹೋಗಿದ್ದಾರಲ್ಲ? ಏನಿದರ ಹಿಂದಿನ ಹಕೀಕತ್ತು? ಧರ್ಮಾಚರಣೆಗೂ ಪುರುಸೊತ್ತು ಇಲ್ಲದಷ್ಟು ಸಾಮ್ರಾಜ್ಯ ಕಟ್ಟಿಕೊಂಡು ಸ್ವಾಮೀಜಿಯೊ ಅಥವಾ JSS ಕಂಪೆನಿಯ CEO ನೋ ಎಂಬಂತಿರುವ ಜಗದ್ಗುರುಗಳು ಧಾವಿಸಿ ಬಂದರಲ್ಲ? ಅಂತಹದೇನು ಆಗಿತ್ತಲ್ಲಿ? ರಂಭಾಪುರಿಗಳು ಸೇರಿದಂತೆ ಅನೇಕ ಸಣ್ಣ-ಪುಟ್ಟ ವೀರಶೈವ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ಸಂತೈಸಲು ಸಾಲುಗಟ್ಟಿದ್ದು ಮಾಧ್ಯಮಕ್ಕೆ ಆಶ್ಚರ್ಯವೆನಿಸಿರಲಿಲ್ಲ. ಆದರೆ ಈ ಹಿರಿತಲೆಗಳು ಹಾಗೇ ದೌಡಾಯಿಸಿದ್ದರ ಹಿಂದೇನು ನಡೆದಿದೆ? ಇದು ಮಾಧ್ಯಮದ ಒಳಗೂ-ಹೊರಗೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಮವಾರದ ತಮ್ಮ ಅಂಕಣದಲ್ಲಿ ಅಮೀನ್‌ಮಟ್ಟು ತುಂಬಾ ಆಪ್ತವಾಗಿಯೇ ಯಡಿಯೂರಪ್ಪನವರ ಪ್ಲಸ್ಸು-ಮೈನಸ್ಸುಗಳನ್ನು ಹೊರಹಾಕಿದ್ದನ್ನು ಓದಿದ ಅನೇಕರು ’ಈ ಮಠಾಧಿಪತಿಗಳನ್ನೇಕೆ ಬಿಟ್ಟಿರಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಸರ್ವ ವೀರಶೈವ ಮಠಗಳಿಗೂ ಒಬ್ಬನೇ ಆಡಳಿತಾಧಿಕಾರಿ ಎಂಬಂತಿರುವ ಸಚಿವ ಸೋಮಣ್ಣ ಬೆನ್ನುಹತ್ತಿ ಇವರನ್ನೆಲ್ಲ ಹೊರಡಿಸಿಕೊಂಡು ಬರುತ್ತಿದ್ದಾರೆಯೇ? ಸರ್ಕಾರದಿಂದ ದೇಣಿಗೆಯಾಗಿ ಪಡೆದ ೩-೫ ಕೋಟ ರೂಗಳ ಹಂಗು ಹಿಂಗೆಲ್ಲ ಮಾಡುವಂತೆ ಮಾಡಿತೆ?
ಒಟ್ಟು ರಾಜ್ಯದ ನಾಯಕತ್ವದ ಎಲ್ಲ ಲಕ್ಷಣಗಳು ಕರಗಿ ಶುದ್ಧ ವೀರಶೈವ ಮುಖಂಡನಂತೆ ಗೋಚರಿಸುತ್ತಿರುವ ಯಡಿಯೂರಪ್ಪನವರ ಜೈಲು-ಆಸ್ಪತ್ರೆಗಳ ಹರಾಕಿರಿ ನಗೆಪಾಟಲಾಗಿ ಹೋಗಿರುವಾಗ ಈ ’ಗೌರವಾನ್ವಿತ’ರೇಕೆ ಹರಸಲು ಹೊರಟರು?
ಭೂಮಿ, ಸೈಟು, ಹಣಕಾಸಿನ ವ್ಯವಹಾರದಲ್ಲಿ ಸಿಕ್ಕಿಬಿದ್ದು ಬೇಲು ಸಿಗದೆ ಜೈಲು ಪಾಲಾಗಿರುವ ರಾಜಕಾರಣಿಯನ್ನು ನೋಡಲು ಹೋಗುವುದು, ಸಾಂತ್ವನ ಹೇಳುವುದು ಯಾವ ಸೀಮೆಯ ಧರ್ಮ?, ನೈತಿಕತೆ? ಗಂಡನ ತಪ್ಪಿಗೆ ೭ ವರ್ಷ ಪರಪ್ಪನ ಅಗ್ರಹಾರದಲ್ಲಿ ಕೊಳೆಯಬೇಕಾಗಿ ಬಂದ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯನ್ನು ನೋಡಲು ಬಾರದ ಈ ಶರಣರು ಯಡಿಯೂರಪ್ಪನವರಲ್ಲಿ ಯಾವ ಸತ್ಯಸಂಧತೆಯನ್ನು ಕಂಡುಕೊಂಡಿದ್ದಾರೆ? ಇದೇ ಯಡಿಯೂರಪ್ಪ ತುರ್ತು ಪರಿಸ್ಥಿತಿಯಲ್ಲಿ, ರೈತ ಹೋರಾಟದಲ್ಲಿ, ಕಾಶ್ಮೀರ, ಅಯೋಧ್ಯೆ ಯಾತ್ರೆಯಲ್ಲಿ, ದತ್ತಪೀಠಕ್ಕಾಗಿ, ಈದ್ಗಾ ಮೈದಾನದ ಹೋರಾಟದಲ್ಲಿ ಜೈಲು ಸೇರಿದಾಗ ಅವರಿಗೆ ’ಎದೆನೋವು ಬರಲಿಲ್ಲ’ ಎನ್ನುವುದು ಎಷ್ಟು ಸತ್ಯವೋ ಆಗ ಈ ಶರಣರು ಜೈಲಿಗೆ ನೋಡಲು ಬರಲಿಲ್ಲ ಎಂಬುದೂ ಅಷ್ಟೇ ಸತ್ಯ!
ಧರ್ಮದಂಡ ಅಧಿಕಾರಶಾಹಿಯನ್ನು ನಿಯಂತ್ರಿಸುತ್ತದೆ ಎಂದಲ್ಲ ಹೇಳಲಾಗುತ್ತಿತ್ತು. ಆದರೆ ಈಗಿನ ದುರವಸ್ಥೆ ನೋಡಿದರೆ ಪೀಠಗಳು ಭ್ರಷ್ಟ ರಾಜಕಾರಣಿಗಳೆದರು ಮಂಡಿಯೂರಿ ಕುಳಿತಿವೆ.
ರಾಮಕೃಷ್ಣ ಹೆಗಡೆ ಕಾಲದಲ್ಲಿ ಆಸೆಗೆ ಬಿದ್ದು ಸಾಹಿತಿಗಳು, ಕಲಾವಿದರು ಭ್ರಷ್ಟರಾದರು. ಯಡಿಯೂರಪ್ಪನವರ ಕಾಲದಲ್ಲಿ ಧಾರ್ಮಿಕ ನಾಯಕರು, ಅದರಲ್ಲೂ ವೀರಶೈವ ಧಾರ್ಮಿಕ ನೇತಾರರು ನೈತಿಕವಾಗಿ ಸೋತು ಕಿಮ್ಮತ್ತು ಕಳೆದುಕೊಳ್ಳುತ್ತಿದ್ದಾರೆ.
ತೀರಾ ಸಿದ್ಧಗಂಗಾ ಶ್ರೀಗಳಂತಹವರು ಹೀಗೆ ಎಡವಟ್ಟು ಮಾಡಿಕೊಂಡರೆ ಕಟಕಟೆಗೆ ಎಳೆದು ತರೋದು ಹೇಗಪ್ಪ ಎಂಬುದು ಮಾಧ್ಯಮದೆದುರಿನ ಚಿಂತೆಯಾಗಿದೆ.
*********





ಮಾನ್ಯರೆ,
ನೀವು ವಿದ್ಯುನ್ಮಾನ ಅಂಚೆಯನ್ನು ಮಿಂಚೆ ಎಂದು ಕರೆದಿರುವುದು ಅರ್ಥವಾಗುವುದಿಲ್ಲ. ಆಧುನಿಕ ಕನ್ನಡದಲ್ಲಿ ಮಿಂಚು ಎಂದರೆ ವಿದ್ಯುತ್ ಎಂಬ ಬಳಕೆ ಇಲ್ಲ. ಇಂದು ಮಿಂಚು ಎನ್ನುವುದರ ಅರ್ಥ ಮಳೆ ಗುಡುಗು ಜೊತೆ ಇರುವ ಮಿಂಚು ಮಾತ್ರ.
ಎಲೆಕ್ಟ್ರಾನಿಕ್ ಮೇಲ್ ನ ಅರ್ಥವನ್ನು ವಿವರಿಸುವ ವಿದ್ಯುನ್ಮಾನ ಅಂಚೆ, ಸಂಕ್ಷಿಪ್ತವಾಗಿ ವಿ ಅಂಚೆ ಎನ್ನಲೂಬಹುದು. ಅದನ್ನು
ವಿಂಚೆ ಎಂದು ಹೇಳಿದರೂ ಸರಿಯಾಗುವುದಿಲ್ಲ. ಅರ್ಥವಾಗುವುದು ಮುಖ್ಯ. ದಯವಿಟ್ಟು ಯೋಚಿಸಿ.
ಪ್ರೀತಿಯಿಂದ
ಪಂಡಿತಾರಾಧ್ಯ
ರೋಗಿಯೊಬ್ಬನ ನೋಡಲು ಹೋದರೆ ತಪ್ಪಿಲ್ಲ
ಆದರೆ ಬ್ರಷ್ಟಾಚಾರಿ ಎಂಬ ಹಣೆ ಪಟ್ಟಿ ಹೊತ್ತ ರೋಗಿನ ನೋಡಲು ಹೋದ ಮಾನ್ಯ ಮಠಾಧೀಶರು ಹೀಗೆ ಮುಂದುವರಿದರೆ ತಮಗೆ ಇರುವ ಅಲ್ಪ ಗೌರವವನ್ನು ಕಳೆದುಕೊಳ್ಳುವ ಸಂಶಯವಿಲ್ಲ.
(ಈಗಿನ ಯುವ ಜನತೆ ಅದಾಗಲೇ ಮಠ ಮಾನ್ಯಗಳ ಕಡೆ ಮುಖ ಮಾಡುವದನ್ನು ಕಡಿಮೆ ಮಾಡಿದ್ದಾರೆ)