ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 30, 2011

’ಗೌಡಾನಂದ’ದ ಕಾರಣಗಳು ಮತ್ತು………

‍ನಿಲುಮೆ ಮೂಲಕ

-ಅರೆಹೊಳೆ ಸದಾಶಿವರಾವ್

ಗಗನಕ್ಕೇರಿದ ಬೆಲೆ, ರಾಜಕಾರಣಿಗಳ ಜೈಲು ಯಾತ್ರೆ, ಕರೆಂಟಿಲ್ಲದೆ ಕತ್ತಲಾಗಿರುವ ಮನೆ, ಅಕಾಲದಲ್ಲಿ ಉಪದ್ರವಕಾರಿಯಾಗಿರುವ ಮಳೆ……..ಈ ಎಲ್ಲದರ ನಡುವೆ ಮತ್ತೆ ಬಂದಿರುವುದು ಹಬ್ಬಗಳ ಸಾಲು ಸಾಲು. ದಸರೆಯನ್ನು ಉಸಿರು ಬಿಗಿ ಹಿಡಿದು ಮಾಡಿಯಾಯ್ತು, ದೀಪಾವಳಿಯನ್ನು ಈ ಸಂದಿಗ್ಧದಲ್ಲಿಯೇ ಆಚರಿಸಿಕೊಳ್ಳುತ್ತಿದ್ದೇವೆ. ಇನ್ನೇನು ನಮ್ಮ ನಾಡಿನ ಮಟ್ಟಿಗೆ ಹೆಮ್ಮೆಯ ಕನ್ನಡ ರಾಜ್ಯೋತ್ಸವವೂ ಇದೆ. ಈ ಎಲ್ಲದರ ನಡುವೆ ನಮ್ಮ ಪರಿಸ್ಥಿತಿ ಏನಾಗಿದೆಯೋ ನೋಡಿ.
ಬಂದಿದೆ ಹಬ್ಬಗಳ ಸಾಲು ಸಾಲು
ಜೈಲಿಗೆ ಹೊರಟಿದೆ ನಮ್ಮ ನಾಯಕರ ಸಾಲುಹೀಗೆಂದು ಇಂದಿನ ನಮ್ಮ ರಾಜ್ಯದ ರಾಜಕಾರಣವನ್ನು ವಿವರಿಸಬಹುದೇನೋ. ಬಹುಶ: ಇಂದಿನ ಪರಿಸ್ಥಿತಿ ನೋಡಿದರೆ, ಅತೀ ಶೀಘ್ರದಲ್ಲಿಯೇ ನಮ್ಮ ರಾಜ್ಯ ಸರಕಾರದ ಆಡಳಿತ ಪರಪ್ಪನ ಅಗ್ರಹಾರ ಜೈಲಿನಿಂದಲೇ ಆದರೂ ಆಶ್ಚರ್ಯವಿಲ್ಲ. ಆರೋಪಿ ಎಂದು ಹೆಸರು ಕೇಳಿದಾಕ್ಷಣ ಎಲ್ಲರೂ ಅಪರಾಧಿಗಳೇ ಅಲ್ಲವಾದರೂ, ಈ ಪರಿ ಆರೋಪಿಗಳಾಗುತ್ತಿರುವುದು ನಮ್ಮ ಮಟ್ಟಿಗೆ ಆಶ್ಚರ್ಯ ಮತ್ತು ಅನಪೇಕ್ಷಿತ ಎಂಬುದು ಸುಳ್ಳಲ್ಲ.ಈ ದೀಪಾವಳಿಯನ್ನು ಹಿಂಬಾಲಿಸಿ ಕರ್ನಾಟಕ ರಾಜ್ಯೋತ್ಸವವೂ ಬರುತ್ತಿದೆ. ಕನ್ನಡಿಗರ ಪಾಲಿಗೆ ಇದು ಮತ್ತೊಂದು ದೀಪಾವಳಿ ಆಗುತ್ತಿದ್ದ ದಿನಗಳಿಂದ ಈಗದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಿಕರಿಗೆ ಸೀಮಿತವಾಗಿದೆ. ಈ ಸಲ ಕೇವಲ ಐವತ್ತು ಜನರಿಗೆ ಮಾತ್ರ ಪ್ರಶಸ್ತಿ ಕೊಡುವ ತೀರ್ಮಾನ ತನ್ನದು ಎಂದು ಮಾನ್ಯ ಮುಖ್ಯ ಮಂತ್ರಿಗಳು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ಕಳೆದು ಹೋಗಿರುವ ಪ್ರಶಸ್ತಿಯ ಬೆಲೆ ಹೆಚ್ಚಿಸಿದೆ. ಕಳೆದ ವರ್ಷ ಈ ಪ್ರಶಸ್ತಿಗೂ ವಿಪರೀತ ’ಬೆಲೆ’ ಹೆಚ್ಚದ್ದು, ಅದಕ್ಕಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದು ಎಲ್ಲವೂ ಸುದ್ದಿಯಾಗಿತ್ತು. ಪ್ರಶಸ್ತಿಯ ಹಣದಲ್ಲಿ ದಲ್ಲಾಳಿಗೆ ಪಾಲು ಹೋಗಿ, ಪ್ರಶಸ್ತಿ ವಿಜೇತರಿಗೆ ಚಿನ್ನದ ನಾಣ್ಯವೇ ಗಟ್ಟಿಯಾಗುತ್ತಿತ್ತು ಎಂಬುದು ಈಗ ಹಳೆ ಸುದ್ದಿ. ಈಗಿನ ಸುದ್ದಿ ಎಂದರೆ, ಈ ಸಲದ ಐವತ್ತು ಪ್ರಶಸ್ತಿಗೆ ಬಂದಿರುವ ಒಟ್ಟೂ ಅರ್ಜಿಗಳು ನಾಲ್ಕು ಸಾವಿರಕ್ಕೂ ಹೆಚ್ಚು!!. ಓಹ್ ಕನ್ನಡಿಗ..! ನೀನೆಷ್ಟು ಪುಣ್ಯವಂತ ಅನಿಸದಿರದೆ?

ಕೋಟಿ ಕೋಟಿ ಕನ್ನಡಿಗರಲ್ಲಿ ಪ್ರಶಸ್ತಿಗೆ ನಾಲ್ಕು ಸಾವಿರ
ಅದರಲ್ಲಿ ನಮ್ಮ ಮುಖ್ಯಮಂತ್ರಿಗಳ ಲೆಕ್ಕಕ್ಕೆ ಕೇವಲ ಐವತ್ತು!
ಹೀಗಾದರೆ ಹೇಗೆ ಸ್ವಾಮಿ ಲೆಕ್ಕಾಚಾರದ ಕರಾಮತ್ತು??
ದಲ್ಲಾಳಿಗಳಿಗೆಲ್ಲಾ ಕರೆಂಟಿಲ್ಲದ ರಾತ್ರಿಯಲ್ಲಿ ಅದೇ, ನಿದ್ದೆಗೆ ಕುತ್ತು!!ಇದು ರಾಜ್ಯೋತ್ಸವ ಪ್ರಶಸ್ತಿಯ ಕಥೆಯಾದರೆ ಸರಕಾರಕ್ಕೆ ಮತ್ತೊಂದು ತಲೆ ನೋವು. ಅದೆಂದರೆ ಏರುತ್ತಿರುವ ಚಿನ್ನದ ಬೆಲೆ. ರಾಜ್ಯೋತ್ಸವದ ಪ್ರಶಸ್ತಿ-ಫಲಕ-ಹಣದ ಜೊತೆಗೆ ಚಿನ್ನದ ನಾಣ್ಯವನ್ನೂ ಕೊಡುವ ಪರಿಪಾಠವನ್ನು ಹಿಂದಿನ ನಾಯಕರು ಮಾಡಿದ್ದು, ಈ ದುಬಾರಿ ಚಿನ್ನದ ಬೆಲೆಯಲ್ಲಿ ಅದೀಗ ಸರಕಾರಕ್ಕೆ ಹೊರೆಯಾಗಿ ತಲೆ ತಿನ್ನುತ್ತಿದೆಯಂತೆ. ಸದಾ ಆನಂದವಾಗಿರುತ್ತಿದ್ದ ಗೌಡರಿಗೆ ಇದು ಅನಿರೀಕ್ಷಿತ ಆಘಾತ. ಅದೂ ಪ್ರಶಸ್ತಿಯ  ’ಸಂಖ್ಯೆ’ಗಳನ್ನು ನಿಯಂತ್ರಿಸಲು ಕಾರಣವಿದ್ದಿರಬಹುದೇನೋ.ಇಷ್ಟೆಲ್ಲಾ ಆಗುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಅಧಿಕಾರದ ವಿಚಾರದಲ್ಲಿ ನಿರಾಳವಾಗಿದ್ದಾರೆ ಎಂಬುದೂ ಕೇಳಿ ಬರುತ್ತಿದೆ. ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದೇ ಭಾವಿಸಲಾಗಿದ್ದ ಮಾನ್ಯ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನವರು ಕಂಬಿಗಳ ಹಿಂದೆ ಸೇರಿಕೊಂಡ ಪರಿಣಾಮವಾಗಿ ಸದಾನಂದರಿಗೆ ಯಾವುದೇ ಕಾಣದ ಕೈಗಳ ಕೈವಾಡ ಇಲ್ಲವೆನ್ನಲಾಗುತ್ತಿದೆ. ಅದಕ್ಕೆ ಸರಿಯಾಗಿ ಒಂದು ಹಂತದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಅಶೋಕರಿಗೂ ಇದೀಗೆ ಶೋಕ ಭರಿತ ದೀಪಾವಳಿ. ಅವರೂ ಈ ’ಡಿನೋಟಿಫಿಕೇಶನ್’ ಭೂತದಲ್ಲಿ ಸೇರಿಕೊಂಡು ಬಿಟ್ಟಿದ್ದಾರೆ. ಅದರಿಂದ ಹೊರ ಬರುವಷ್ಟು ಅವರಿಗೀಗ ಸದಾನಂದ ಗೌಡರ ರಾಜ್ಯಭಾರಕ್ಕೆ ತಲೆ ಹಾಕುವುದು ಜರೂರಲ್ಲ. ಈ ಹಿನ್ನೆಲೆಯಲ್ಲಿ,

ಸದಾನಂದ ಗೌಡರು ಈಗ ಸದಾ-ಆನಂದರು,
ಸಂಪುಟವೇ ಮಾಡುತ್ತಿದೆ ಈಗ ಜೈಲ್ ವಾಕ್!
ಸದಾನಂದರ ಮಾತೇ ಈಗ ಕರಾರುವಾಕ್!
ಹಾಗಾಗಿಯೇ ಗೌಡರೀಗ ಸದಾನಂದರು!!

ಇದು ಒಂದು ರೀತಿಯಲ್ಲಿ ಸದಾನಂದ ಗೌಡರ ಕಥೆಯಾದರೆ, ನಮ್ಮ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಬರದ್ದೇ ಮತ್ತೊಂದು ಕಥೆ. ಅದೆಲ್ಲೋ ಯಾರಿಗೋ ಜ್ವರ ಬಂದರೆ ನಮಗೆ ಬರೆ ಎಂಬ ಪರಿಸ್ಥಿತಿ ನಮ್ಮದು. ತೆಲಂಗಾಣದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟದ ಪರಿಣಾಮವಾಗಿ ನಮ್ಮ ರಾಜ್ಯಕ್ಕೆ ಸಿಗಬೇಕಾಗಿದ್ದ ವಿದ್ಯತ್‌ಗೆ ಕತ್ತರಿ. ಹಾಗಾಗಿ ಮೊದಲೇ ಬೆಲೆ ಏರಿಕೆಯ  ಕತ್ತರಿಯಿಂದ ಕಿಸೆ ತೂತು ಮಾಡಿಕೊಂಡಿದ್ದ ರಾಜ್ಯದ ಜನತೆಗೆ ಮತ್ತೊಂದು ವಿದ್ಯುತ್ ಶಾಕ್.! ದೀಪಾವಳಿಗೆ ಸರಿಯಾಗಿ ಮನೆ ಮನೆಗೂ ಮೋಂಬತ್ತಿ ಹಚ್ಚಲು ಧಾರಾಳ ಅವಕಾಶ. ಎಲ್ಲಲ್ಲು ಕತ್ತಲೋ ಕತ್ತಲು…..ಕರೆಂಟಿಲ್ಲ! ಪರಿಣಾಮವಾಗಿ ಅಂಗಡಿಗಳಲ್ಲಿ ಮೋಂಬತ್ತಿಗಳ ವ್ಯಾಪಾರವೋ ವ್ಯಾಪಾರ!. ಮನೆ ಮನೆಯಲ್ಲೂ ಊಟಕಿಲ್ಲದಿದ್ದರೂ ಈ ಸಲ ದೀಪಗಳ ಹಾವಳಿ-ದೀಪಾವಳಿಗೇನೂ ಕೊರತೆಯೇ ಇರಲಿಲ್ಲ.

ನಿನ್ನೆ ರಾತ್ರಿಯಂತೂ ನಮ್ಮ ಮಂಗಳೂರಿನಲ್ಲಿ ರಾತ್ರಿ ಹನ್ನೆರಡು ಘಂಟೆಯವರೆಗೂ ಕರೆಂಟಿರಲಿಲ್ಲ. ಎಲ್ಲಿ ನೋಡಿದರೂ ಪಟಾಕಿ, ಸುಡುಮದ್ದುಗಳ ಬೆಳಕೇ ಬೆಳಕು. ಪಟಾಕಿ-ಸುಡುಮದ್ದುಗಳು ಎಂದಾಗಲೇ ನೆನಪಾಗಿದ್ದು. ಇವುಗಳಿಂದ ಆಗುವ ಶಬ್ದ ಮಾಲಿನ್ಯದಲ್ಲಿ ಕಳೆದ ವರ್ಷ ಬಳ್ಳಾರಿ ೧೦೩ ಡೆಸಿಬಲ್ ಶಬ್ದದಿಂದ ಶಬ್ದಮಾಲಿನ್ಯದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಗಳಿಸಿತ್ತಂತೆ. ಪ್ರತೀ ವರ್ಷ ದೀಪಾವಳಿಯೊಂದರಿಂದಲೇ ನಮ್ಮ ಪರಿಸರ ಮತ್ತು ವಾತಾವರಣ ಅತೀ ಹೆಚ್ಚು ಕುಲುಷಿತವಾಗುತ್ತದೆಯಂತೆ. ಹಾಗಿದ್ದರೆ ಪರಿಸರದೊಂದಿಗೆ ಅದೆಷ್ಟೋ ಜೀವಗಳು ಅಂತ್ಯ ಕಾಣುತ್ತವೆ. ಅದೆಷ್ಟೋ ಜನ ಅಂಗವಿಕಲರಾಗುತ್ತಾರೆ……ಹೌದು…ಇಷ್ಟೆಲ್ಲಾ ಇದ್ದೂ ಈ ದೀಪಾವಳಿಯ ವೇಳೆಗೆ ಪಟಾಕಿಗಳ ಅಬ್ಬರ ಬೇಕಾ ಅನಿಸುತ್ತದೆ. ಈ ಪಾನ್, ಗುಟ್ಕಾ, ಪ್ಲಾಸ್ಟಿಕ್‌ಗಳನ್ನು ನಿಷೇಧಿಸಿದಂತೆ ಪಟಾಕಿಗಳನ್ನು ಅಥವಾ ಅತೀ ಹೆಚ್ಚು ಶಬ್ದ ಸೂಸುವ ಸುಡುಮದ್ದುಗಳನ್ನು ಯಾಕೆ ನಿಷೇಧಿಸಬಾರದು ಅನಿಸುತ್ತದೆ….. ಇಂತಾದ್ದೊಂದು ಚಿಂತನೆಗೆ ಇದು ಸಕಾಲವೂ ಅನಿಸುತ್ತದೆ.

ಪ್ಲಾಸ್ಟಿಕ್, ಗುಟ್ಕಾ ಎಲ್ಲಾ ಈಗ ಗೊಟಕ್,
ಆದಂತೆ ಆಗಬಾರದೆ ಈ ಪಟಾಕಿಯೂ ಠುಸುಕ್!!
ಇದರಿಂದ ಉಳಿದೀತು ಅದೆಷ್ಟೋ ಜೀವದ ಝಲಕ್,
ನಮ್ಮ ಸರಕಾರಗಳು ಒಮ್ಮೆ ಹೊರಳಿಸಬೇಡವೇ ಇತ್ತ ಲುಕ್..!!

ಈ ಸಲದ ದೀಪಾವಳಿಯ ವೇಳೆ ಈ ಗ೦ಭೀರ ಬರಹಗಳ ಬದಲಿಗೆ  ಇದೇನು ಚುಟುಕುಗಳ ಸಂತೆ ಮತ್ತು ಲೇಖನದಲ್ಲೆಲ್ಲಾ ಅಂತೆ ಕಂತೆಗಳು ಅಂದುಕೊಳ್ಳಬೇಡಿ. ರಾಜಕೀಯದ ಗಂಭೀರ ವಿಷಯಗಳಿಗೆ ಭಿನ್ನವಾಗಿ ಬೇರೆಡೆಯೂ ಬರಹದ ಹರಹನ್ನು ವಿಸ್ತರಿಸುವ ಪುಟ್ಟ ಪ್ರಯತ್ನವಿದು. ನನ್ನ ಲೇಖನದಲ್ಲಿ ಮಾಮೂಲಾಗಿದ್ದ  ರಾಜಕಾರಣದ ಏಕತಾನತೆಯಿಂದ ಹೊರಬರುವ ಯತ್ನ ಯಾಕಿರಬಾರದು ಅನಿಸಿತು. ಸಾಹಿತ್ಯಿಕವಾಗಿಯೂ ಅದೆಷ್ಟೋ ವಿಷಯಗಳನ್ನು ’ಪ್ರದಕ್ಷಿಣೆ’ ಹಾಕುವ ಅಕಾಶ ಇರುವ ಹಿನ್ನೆಲೆಯಲ್ಲಿಲೇಖನದಲ್ಲಿ ಒಂದು ಬದಲಾವಣೆ ತರುವ   ಪ್ರಯತ್ನವಿದು. ನಿಮಗಿಷ್ಟವಾದೀತೆಂದು ಭಾವಿಸಿದ್ದೇನೆ.

ಪ್ರತೀ ಸಲವೂ ಅದೇ ರಾಜಕಾರಣದ ’ಪ್ರದಕ್ಷಿಣೆ’
ಆದರೂ ಸಿಕ್ಕಲಿಲ್ಲ ಒಂದು ಪೈಸೆಯೂ ’ದಕ್ಷಿಣೆ’!!
ಇನ್ನಾದರೂ ಮಾಡೋಣ ಬೇರೆಯೇ ’ವೀಕ್ಷಣೆ’
ಆದೀತು ನಿಮಗಾದರೂ ಅಷ್ಟಿಷ್ಟು ’ಬದಲಾವಣೆ’!!ಹಾಗೆಂದು ಕೊಂಡೇ ಈ ಸಲದ ಎಲ್ಲಾ ಘಟನೆಗಳನ್ನು ಒಂದಿಷ್ಟು ಚುಚ್ಚು-ಬಿಚ್ಚು-ಚಚ್ಚು ನುಡಿಗಳೊಂದಿಗೆ ನೋಡಿದ್ದು. ನಮ್ಮ ನಡುವೆ ಮುಂದಿರುವ ಕನ್ನಡ ರಾಜ್ಯೋತ್ಸವವನ್ನು ನಾವೆಲ್ಲರೂ ಕೇವಲ ’ಕನ್ನಡ’ ನೋಟದಿಂದ ಆಚರಿಸಿದರೆ ಹೇಗೆ. ಪ್ರತೀ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಕ್ಕೆ ಹುಟ್ಟು ಕೊಡುವ ಬದಲಾಗಿ, ಪ್ರತೀ ದಿನವನ್ನೂ ಕನ್ನಡದ ಹುಟ್ಟು ಹಬ್ಬ ಎಂದು ಆಚರಿಸಿದರೆ ಹೇಗೆ…? ಇಂತಹ ಚಿಂತನೆಗಳು ಮಾಮೂಲಿನಂತೆ ಪ್ರತೀ ವರ್ಷ ಹುಟ್ಟಿಕೊಳ್ಳುತ್ತವೆ ಮತ್ತು ಅಷ್ಟೇ ಬೇಗ ಸಾಯುತ್ತವೆ ಸಹಾ. ಈ ಸಲ ಇದಕ್ಕೊಂದು ಹೊಡ ಸೇರ್ಪಡೆ ಎಂದರೆ, ನಮ್ಮ ಘನ ಸರಕಾರ ರಾಜ್ಯಾದ್ಯಂತ ಸುಮಾರು ೨೦೯೫ ಸರಕಾರಿ ಶಾಲೆಗಳನ್ನು, ಮುಖ್ಯವಾಗಿ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾಡಿದೆ.  ರಾಜ್ಯದ ಜನರ ನಗರ ಪ್ರದೇಶ ವಲಸೆ, ಇಂಗ್ಲೀಷ್ ಶಾಲಾ ವ್ಯಾಮೋಹ, ಸರಕಾರಿ ಶಾಲೆಗಳತ್ತಲಿನ ನಿರ್ಲಕ್ಷ್ಯದಿಂದ ಶಾಲೆಗಳನ್ನು ಮುಚ್ಚಲೇ ಬೇಕಾದ ಅನಿವಾರ್ಯತೆ. ನಾವಿದನ್ನೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಇದು ರಾಜ್ಯ ಸರಕಾರ, ನಮ್ಮ ಪಾಲಿಗೆ ರಾಜ್ಯೋತ್ಸವಕ್ಕೆ ತಂದುಕೊಟ್ಟ ಬಳುವಳಿ…..ಅಲ್ಲಲ್ಲ…..ನಾವೇ ತಂದುಕೊಂಡ ಅನಿವಾರ್ಯ ಕರ್ಮ.ಈ ಸಲದ ರಾಜ್ಯೋತ್ಸವದ ವೇಳೆಗೆ ಸರಕಾರದ್ದು
ಎರಡೇ ಎರಡು ಠರಾವು!. ಮೊದಲನೆಯದು
ಈ ಸಲದ ಪ್ರಶಸ್ತಿ ಕೇವಲ ಐವತ್ತು, ಎರಡನೆಯದು
ಈ ಸಲ ೨೦೯೫ ಶಾಲೆಗಳಿಗೆ ಬೀಗ ಬಿತ್ತು!!ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅದೆಷ್ಟೋ ಘಟನೆಗಳು, ತೀರ್ಮಾನಗಳು ಇಂದು ಅಷ್ಟು ಪ್ರಾಮುಖ್ಯತೆ ಪಡೆಯದೇ, ಮುಂದೊಂದು ದಿನ ಅದರ ಬೆಲೆ ನಮಗೆ ಗೊತ್ತಾಗುತ್ತದೆ. ಕನ್ನಡ ಸಾಯುತ್ತಿದೆ ಎಂಬದು ಒಂದು ಕೂಗಾದರೆ, ಅದೆಂದೂ ಸಾಯದ  ದೇವಭಾಷೆ ಎಂಬ ಆಶಾವಾದ ಇನ್ನೊಂದೆಡೆ. ಏನಾಗುತ್ತದೋ ಗೊತ್ತಿಲ್ಲ. ರಾಜ್ಯೋತ್ಸವದ ವೇಳೆ ನಾನು ಕನ್ನಡವನ್ನು ಒಪ್ಪಿಕೊಳ್ಳುತ್ತೇನೆ, ಅಪ್ಪಿಕೊಳ್ಳುತ್ತೇನೆ ಮತ್ತು ಗೌರವಿಸುತ್ತೇನೆ ಎಂಬುದನ್ನು ತೀರ್ಮಾನಿಸಿದರೆ ಅದೇ ಬದಲಾವಣೆಯ ಮೊಳಕೆಯಾದೀತು. ಹಾಗಾಗಲಿ ಎಂಬ ಹಾರೈಕೆಯೊಡನೆ ತಮಗೆಲ್ಲರಿಗೂ ಈಗ ಆಚರಿಸಲ್ಪಡುತ್ತಿರುವ ದೀಪಾವಳಿಯ ಹಾಗೂ ಮುಂದಿರುವ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು.
* * * * * * *
ಚಿತ್ರಕೃಪೆ : ಅಂತರ್ಜಾಲ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments