ವಿಷಯದ ವಿವರಗಳಿಗೆ ದಾಟಿರಿ

Archive for

23
ಜೂನ್

ಶಿಕ್ಷಣ ತಜ್ಞ ಶ್ಯಾಮಪ್ರಸಾದ್ ಮುಖರ್ಜಿ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರು ಹತ್ಯೆಯಾದ ದಿನ. 1953ರ ಈ ದಿನ, ನೆಹರೂ ಸರಕಾರದ ಆದೇಶದ ಮೇರೆಗೆ ಕಾಶ್ಮೀರ ರಾಜ್ಯ ಸರಕಾರ ಅವರನ್ನು ಒಂದು ಅಜ್ಞಾತ ಪ್ರದೇಶದಲ್ಲಿ  ಗೃಹ ಬಂಧನದಲ್ಲಿ ಇಟ್ಟಿತ್ತು. ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ರ ವಿರುದ್ಧ ಪ್ರತಿಭಟಿಸಲು ಹೋದಾಗ ನೆಹರೂ ಸರಕಾರ ಇವರ ಬಂಧನಕ್ಕೆ ಆದೇಶ ಹೊರಡಿಸಿತ್ತು. 40 ದಿನಗಳ ಗೃಹ ಬಂಧನದ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗುತ್ತದೆ. ಅವರಿಗೆ ಔಷಧೋಪಚಾರವನ್ನು ಸರಕಾರ ಒದಗಿಸಿತ್ತಾದರೂ ಅವರು ಮರಣ ಹೊಂದುತ್ತಾರೆ.

ಅವರ ಸಾವಿನ ನಂತರ ಅವರ ತಾಯಿ ಜೋಗಮಾಯಾ ದೇವಿಯವರು ತನ್ನ ಮಗನ ಸಾವಿನ ಬಗ್ಗೆ ತಮಗೆ ಅನೇಕ ಅನುಮಾನಗಳಿವೆ, ಅವನ ಬಂಧನದಲ್ಲಿದ್ದಾಗ ಅವನಿಗೆ ಚಿಕಿತ್ಸೆ ಕೊಟ್ಟವರು ಯಾರು? ಯಾವ ರೀತಿಯ ಚಿಕಿತ್ಸೆ ಕೊಡಲಾಯಿತು? ಯಾವ ಕಾಯಿಲೆಗೆ ಕೊಡಲಾಯಿತು? ಇದು ಸಹಜ ಸಾವೋ? ಅಥವಾ ನನ್ನ ಮಗನ ರಾಜಕೀಯ ಚಳುವಳಿಯ ಕಾರಣಕ್ಕೆ  ಸರಕಾರೀ ಪ್ರಾಯೋಜಕತ್ವದಲ್ಲಿ ನಡೆಸಿದ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು   ಪ್ರಧಾನಿ ನೆಹರುವಿಗೆ ಪತ್ರ ಬರೆಯುತ್ತಾರೆ. ಆದರೆ ಅದು ನೆಹರೂ ಕಛೇರಿಯ ಕಸದ ಬುಟ್ಟಿ ಸೇರುತ್ತದೆ.

ಶ್ಯಾಮಪ್ರಸಾದ್ ಮುಖರ್ಜಿಯವರು ಯಾವುದನ್ನು ವಿರೋಧಿಸಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದರೋ, ಅದನ್ನ ಮೋದಿ ಸರಕಾರ 2 ವರ್ಷದ ಹಿಂದೆ ತೆಗೆದುಹಾಕಿತು. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಯಿತು.
ಬಹುತೇಕ ಮಂದಿಗೆ ಶ್ಯಾಮಾ ಪ್ರಸಾದ್ ಮುಖರ್ಜಿಯವರ 30 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮೂರು ವರ್ಷಗಳ ಪರಿಚಯ ಮಾತ್ರ ಇರುವುದು. 1950ರಲ್ಲಿ ಅವರು ನೆಹರೂ  ಸರಕಾರಕ್ಕೆ ರಾಜಿನಾಮೆ ಕೊಡುತ್ತಾರೆ, 1951ರಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೆ, ‘ಜನಸಂಘ’ದ ಸ್ಥಾಪನೆ ಮಾಡುತ್ತಾರೆ. 1952 ರ ಚುನಾವಣೆಯಲ್ಲಿ ಜನಸಂಘ 3 ಸ್ಥಾನವನ್ನು ಗೆಲ್ಲುತ್ತದೆ. 1953ರಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಹೋರಾಡಿ ನಿಗೂಢವಾಗಿ ಸಾವನ್ನು ಕಾಣುತ್ತಾರೆ ಎನ್ನುವುದಷ್ಟೆ ತಿಳಿದಿರುವ ವಿಚಾರ.

ಶ್ಯಾಮಪ್ರಸಾದ ಮುಖರ್ಜಿ 1934 ರಿಂದ 1938ರ ತನಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಾರೆ. 1933ರಲ್ಲಿ ಉಪಕುಲಪತಿಯಾಗಿ ನೇಮಕವಾದಾಗ ಅವರ ವಯಸ್ಸು ಇನ್ನೂ 33. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವವಿದ್ಯಾನಿಲಯದ ಉಪಕುಲಪತಿಯಾದವರು. ಆ ವಯಸ್ಸಿಗಾಗಲೇ ಅವರು ಇಂಗ್ಲೀಷಿನಲ್ಲಿ ಬಿ ಎ, ಬಂಗಾಳಿ ಭಾಷೆಯಲ್ಲಿ ಎಂ ಎ, ಕಾನೂನು ಶಿಕ್ಷಣದಲ್ಲಿ  ಬ್ಯಾಚುಲರ್ ಪದವಿ ಹಾಗು ಇಂಗ್ಲೆಂಡ್ ಗೆ ತೆರಳಿ  ಭ್ಯಾರಿಷ್ಟರ್ ಪದವಿಯನ್ನೂ ಪಡೆದಿದ್ದರು. ಇವರ ತಂದೆ ಆಶುತೋಷ್ ಮುಖರ್ಜಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮೊದಲ ಭಾರತೀಯ  ಉಪಕುಲಪತಿಗಳಾಗಿದ್ದವರು. ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ವಿಶ್ವವಿದ್ಯಾನಿಲಯದ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿದ ಅನುಭವವನ್ನು ಹೊಂದಿದ್ದರು.
 
ಶ್ಯಾಮ ಪ್ರಸಾದ್ ಮುಖರ್ಜಿಯವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದಾಗ, ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಡೆಯದ ಹಲವು ಪ್ರಥಮಗಳಿಗೆ ಮುನ್ನುಡಿಯನ್ನು ಬರೆಯುತ್ತಾರೆ. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಮೂಲದ ಶಿಕ್ಷಣ ಪದ್ಧತಿಯ ನಲುಗಿ ಹೋಗಿತ್ತು. ಅದರ ಜೊತೆಗೆ ಬ್ರಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಹುಟ್ಟು ಹಾಕಿದ ಆಧುನಿಕ ಶಿಕ್ಷಣ ವ್ಯವಸ್ಥೆ, ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿತ್ತು. ಅಲ್ಲಿ ಭಾರತೀಯ ಭಾಷೆಗಳಿಗೆ ಯಾವುದೇ ಪ್ರಾಧಾನ್ಯತೆ ಇರಲಿಲ್ಲ. ಬಂಗಾಳದಲ್ಲಿ  ಬಂಗಾಳದ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಅತ್ಯಂತ ಪ್ರಯಾಸದ ವಿಷಯವಾಗಿತ್ತು ಹಾಗಾಗಿ ತಮ್ಮ ಕಾಲದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಂಗಾಳದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳಿಯ ಭಾಷೆಗಳಿಗೆ ಪ್ರಾತಿನಿದ್ಯತೆ ಕೊಡಿಸುವ ತೀರ್ಮಾನ ಮಾಡುತ್ತಾರೆ ಹಾಗು ಬಂಗಾಳಿ ಭಾಷೆಯಲ್ಲೇ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನು ಬಂಗಾಳಿ ವಿಧ್ಯಾರ್ಥಿಗಳಿಗೆ ಮಾಡಿಸಿಕೊಡುತ್ತಾರೆ. ಇದಕ್ಕೆ 1935ರ ‘ಯೂನಿವರ್ಸಿಟಿ ಕಾಯಿದೆ’ಯಲ್ಲಿ ಮಾನ್ಯತೆಯನ್ನೂ ಕೊಡಿಸುತ್ತಾರೆ. 

ವಿವಿಯಲ್ಲಿ ಬ್ರಿಟಿಷರ ಲಾಂಛನ
ಮುಖರ್ಜಿಯವರು ಬದಲಾಯಿಸಿದ ಲಾಂಛನ

ವಿಶ್ವವಿದ್ಯಾನಿಲಯ ಪ್ರಾರಂಭವಾದಾಗಿನಿಂದ ಅಲ್ಲಿಯ ತನಕ  ಬ್ರಿಟೀಷರ ದಾಸ್ಯದ ಚಿಹ್ನೆಯಾಗಿದ್ದ ‘ವಿಶ್ವವಿದ್ಯಾನಿಲಯದ ಚಿಹ್ನೆ’ಯನ್ನು ಬದಲಾಯಿಸಿ ಅದಕ್ಕೆ ಸಂಪೂರ್ಣವಾಗಿ ಭಾರತದ ಆದ್ಯಾತ್ಮ ಸ್ವರೂಪವನ್ನು ಕೊಡುತ್ತಾರೆ.  ಕುದುರೆ ಮತ್ತು ಇಂಗ್ಲೆಂಡಿನ ರಾಜ ಪ್ರಭುತ್ವದ ಸೂಚಕದ ಚಿಹ್ನೆಯನ್ನು ತೆಗೆದು ‘ಕಮಲದ ಹೂವುಗಳ ದಳ ಇರುವ ವ್ರತ್ತಾಕಾರದ ಚಿಹ್ನೆ’ಯನ್ನು ನೀಡುತ್ತಾರೆ. ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಗುರುದೇವ ರಬೀಂದ್ರನಾಥ ಠಾಗೋರ್ ಅವರನ್ನು ಕರೆಯಿಸಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲಬಾರಿಗೆ ಘಟಿಕೋತ್ಸವದ ಭಾಷಣ ಬಂಗಾಳಿ ಭಾಷೆಯಲ್ಲಿ ಮಾಡಿಸುತ್ತಾರೆ. ಇದು ಬ್ರಿಟಿಷರನ್ನ ಇನ್ನೂ ಕೆರಳಿಸುತ್ತದೆ. ರಬೀಂದ್ರನಾಥ ಠಾಗೋರರನ್ನು ವಿಶ್ವವಿದ್ಯಾನಿಲಯದಲ್ಲಿ  ಬಂಗಾಳಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೂಡ ನೇಮಿಸುತ್ತಾರೆ. ಬಂಗಾಳಿ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಸಿಗಲಿ ಎನ್ನುವ ಕಾರಣಕ್ಕೆ ವಿಶ್ವವಿದ್ಯಾನಿಲಯದಿಂದಲೇ ಅನೇಕ ಬಂಗಾಳಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಿ ಪ್ರಕಟಿಸುತ್ತಾರೆ,  ಇವರ ಕಾಲದಲ್ಲೇ, ಅಂದರೆ 1937 ರಲ್ಲಿ ಮೊದಲ ಬಾರಿಗೆ ಬಂಗಾಳಿ ಭಾಷೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಒಂದಕ್ಕೆ ಡಾಕ್ಟರೇಟ್ ಗೌರವ ಸಿಗುತ್ತದೆ.
 
ಶ್ಯಾಮ ಪ್ರಸಾದ್  ಮುಖರ್ಜಿಯವರು ವಿಶ್ವವಿದ್ಯಾನಿಲಯದಲ್ಲಿ, ಇತರ ಅನೇಕ ಆಧುನಿಕ ಮತ್ತು ಹೊಸತಲೆಮಾರಿಗೆ ಆವಶ್ಯಕವಾಗಿ ಬೇಕಾಗಿದ್ದ ವಿಷಯಗಳ ತರಗತಿಯನ್ನೂ ಪ್ರಾರಂಭಿಸುತ್ತಾರೆ. ಬಂಗಾಳಿ ಭಾಷೆಯ ಜೊತೆಗೆ ಉರ್ದು, ಹಿಂದಿ, ಅಸ್ಸಾಮಿ ಮುಂತಾದ ಸ್ಥಳೀಯ ಭಾರತೀಯ ಭಾಷೆಗಳಿಗೂ ಅವಕಾಶ ಕೊಡಿಸುತ್ತಾರೆ.  ಔದ್ಯೋಗಿಕ ಜಗತ್ತಿಗೆ ಅಗತ್ಯವಿದ್ದ  ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಾರೆ.  ಇವರು ‘ಅಪ್ಲೈಡ್ ಫಿಸಿಕ್ಸ್’ ವಿಭಾಗವನ್ನು ಆರಂಭಿಸಿ, ಅಲ್ಲಿ ಇವತ್ತಿನ  ಮಾಹಿತಿ ತಂತ್ರಜ್ನಾನದ ಇಂಜಿನೀಯರಿಂಗ್ ಗೆ ಸಮನಾಗಿದ್ದ  ‘ಕಮ್ಯುನಿಕೇಶನ್ ಇಂಜಿನೀಯರಿಂಗ್’ ಪ್ರಾರಂಭಿಸುತ್ತಾರೆ. 1934 ರಲ್ಲಿ ಡಿಸಿಎಸ್ ಪದವಿಯನ್ನು ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರಾರಂಭಿಸುತ್ತಾರೆ. ಸೈನ್ಯಕ್ಕೆ ಸೇರಬಯಸುವ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಾರೆ. ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆಯೊಂದಿಗೆ ಸೇರಿ  3 ತಿಂಗಳ ಇಂಟರ್ನಶಿಪ್  ಕೋರ್ಸ್‍ಗಳನ್ನು ಪ್ರಾರಂಭಿಸುತ್ತಾರೆ.  ಪ್ರಾಚ್ಯವಸ್ತು ಶಾಸ್ತ್ರ,ಆರೋನಾಟಿಕ್ಸ್ ವಿಭಾಗದಲ್ಲಿ ಬಿಎ, ಖಗೋಳ ಶಾಸ್ತ್ರದಲ್ಲಿ ಪದವಿ, ಗಣಿತದಲ್ಲಿ ಹಾನರರಿ ಕೋರ್ಸ್‍ಗಳನ್ನೂ ಪ್ರಾರಂಭಿಸುತ್ತಾರೆ. ವಿಧ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ತರೆಬೇತಿ ಕೊಡಿಸುವ ಕಲಿಕಾ ವ್ಯವಸ್ಥೆಯನ್ನೂ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುತ್ತಾರೆ. ಇವರ ಕಾರ್ಯಕಾಲದಲ್ಲಿ ಬಂಗಾಳದಲ್ಲಿ 2 ಪ್ರಮುಖ ಶಿಕ್ಷಕರ ತರಬೇತಿ ಕಾಲೇಜ್ ಗಳನ್ನು ಆರಂಭಿಸುತ್ತಾರೆ. ಮಹಿಳೆಯದ ಶಿಕ್ಷಣಕ್ಕೆ ಒತ್ತುಕೊಡಲು,  ಬಿಹಾರಿಲಾಲ್ ಮಿತ್ರರವರು  ಮಹಿಳೆಯರಿಗಾಗಿ ಹೊಮ್ ಸಯನ್ಸ್ ತರಗತಿಗಳನ್ನು ಪ್ರಾರಂಭಿಸಲು ನಿಶ್ಚಯಿಸಿದಾಗ ಅವರಿಗೆ ಆ ಕಾಲದಲ್ಲೇ 6500 ರೂಪಾಯಿಗಳ ದೇಣಿಗೆ ನೀಡುತ್ತಾರೆ.  ಮುಂದೆ ಅದೇ ಸಂಸ್ಥೆ ಬೆಳೆದು ‘ಬಿಹಾರಿಲಾಲ್ ಕಾಲೇಜ್’ಆಗುತ್ತದೆ. ಶ್ಯಾಮಾಪ್ರಸಾದ ಮುಖರ್ಜಿ ವಿಶ್ವವಿದ್ಯಾನಿಲಯದಲ್ಲಿ  ಏಷಿಯಾದ ಸಂಸ್ಕ್ರತಿಯನ್ನು ಕಲಿಕಾ ವಿಷಯವನ್ನಾಗಿಸುವ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಾರೆ.  ಅವರು  ಚೀನಾ ಮತ್ತು ಟಿಬೇಟಿನ ಭಾಷಾ ಅಧ್ಯಯನ ಕೇಂದ್ರವನ್ನ ಸ್ಥಾಪಿಸುತ್ತಾರೆ. 
 
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ, ಅವರ ಇತರ ಶಿಕ್ಷಣೇತರ ಹಿತಗಳನ್ನು ಕಾಪಾಡಲು ಅವರು ವಿಶ್ವವಿದ್ಯಾನಿಲಯದಲ್ಲಿ ಒಂದು ಸ್ಟೂಡೆಂಟ್ ವೆಲ್‍ಫೇರ್ ಅಸೋಸಿಯೇಶನ್ ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಭೋಧನೇತರ ಸಿಬ್ಬಂಧಿಗಳ ಒಳಿತಿಗಾಗಿ ಸುಮಾರು 30ಕ್ಕೂ ಹೆಚ್ಚು  ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ. ‘ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳ ಸಂಘಟನೆ’ಯ ಅಧ್ಯಕ್ಷರೂ ಆಗುತ್ತಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೆ ಮೊದಲ ಬಾರಿಗೆ  ಸಿಬ್ಬಂಧಿಗಳಿಗೆ ‘ಪ್ರಾವಿಡೆಂಟ್ ಫಂಡ್’ ಕೊಡಿಸುವ ಬಗ್ಗೆ ಸಿಂಡಿಕೇಟ್ ಬಳಿ ಪ್ರಸ್ಥಾಪವನ್ನು ಇಡುತ್ತಾರೆ.
 
ಶಿಕ್ಷಣ ಕ್ಷೇತ್ರದಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಅತ್ಯಂತ ಮಹತ್ವದ ಕೊಡುಗೆ ಅಂದರೆ, ಅವರು ಜಾರಿಗೆ ತಂದ ‘ಪಂಚ ಶೀಲ  ನೀತಿ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವ ವರ್ಗದ ಶಿಕ್ಷಣ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ, ದೇಶದ ಭವಿಷ್ಯವೂ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎನ್ನುವ  ವಿಷಯವನ್ನು ಪ್ರತಿಪಾದಿಸಿತ್ತಾ ಶ್ಯಾಮಪ್ರಸಾದ ಮುಖರ್ಜಿಯವರು ತನ್ನ 2ನೇ ಘಟಿಕೋತ್ಸವದ ಭಾಷಣದಲ್ಲಿ 5 ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.


1.           ಸಮಾಜದಲ್ಲಿ  ಯುವಕರ ಸರ್ವಾಂಗೀಣ ಅಭಿವೃದ್ದಿಗೆ  ಸಹಾಯವಾಗಲು, ಶಿಕ್ಷಣ ಸಮಾಜದ ಎಲ್ಲಾ ವರ್ಗಗಳಲ್ಲೂ ಸಿಗಬೇಕು.
2.           ಸಂಸ್ಕೃತಿ ಮತ್ತು ವಿಜ್ಞಾನದ  ಸರಿಯಾದ ಸಮನ್ವಯ ಶಿಕ್ಷಣ ವ್ಯವಸ್ಥೆಯೊಳಗಿರಬೇಕು.
3.           ದೇಶದ ಆಯಾಯ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಕರು ಶಿಕ್ಷಣವನ್ನು ಕೊಡಬೇಕು.
4.           ಶಿಕ್ಷಣ ವ್ಯವಸ್ಥೆ ಸಮಾಜದೊಳಗೆ ಸ್ವಸ್ಥ, ಸುಂದರ ಮತ್ತು ಭಯ ಮುಕ್ತ ವಾತಾವರಣದ ನಿರ್ಮಾಣಕ್ಕೆ ಪೂರಕವಾಗಿರಬೇಕು.
5.           ಶಿಕ್ಷಣ ಹೆಚ್ಚು ಹೆಚ್ಚು ಸರಕಾರಿ ಪ್ರಾಯೋಜಕತ್ವದಲ್ಲೇ ದೊರಕಬೇಕು.


ಶ್ಯಾಮಾ ಪ್ರಸಾದ್ ಮುಖರ್ಜಿಯರ ಈ ನೀತಿಯನ್ನು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವವರು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಿದರು. ಅವರು ವಿಶ್ವವಿಧ್ಯಾನಿಲಯದಲ್ಲಿ  ಪ್ರಾರಂಭಿಸದ ಅನೇಕ ವಿಷಯಗಳು ಮುಂದಿನ ದಿನಗಳಲ್ಲಿ ಪ್ರತ್ಯೇಕ ಶಿಕ್ಷಣ ಪ್ರಭೇದಗಳಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋದಿಸಲ್ಪಡುತ್ತದೆ.  ವರ್ತಮಾನದ ಕೇಂದ್ರ ಸರ್ಕಾರ ರೂಪಿಸಿರುವ ‘ಹೊಸ ಶಿಕ್ಷಣ ನೀತಿ’ಯು ಕೂಡ ಶ್ಯಾಮಾ ಪ್ರಸಾದ ಮುಖರ್ಜಿವರ ಶಿಕ್ಷಣ ನೀತಿಯಂದ ಪ್ರೇರಣೆ ಪಡೆದಿದೆ.
 
ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅವರ ಅನುಭವ, ಅವರು ಮುಂದೆ ದೇಶದ ಕೈಗಾರಿಕೆ ಮತ್ತು ಸರಬರಾಜು ಮಂತ್ರಿಗಳಾಗಿ ಕಾರ್ಯನಿರ್ವಹಿಸುವಾಗ ಸಹಾಯಕ್ಕೆ ಬರುತ್ತದೆ. ಅವರು ತಮ್ಮ ಕಾರ್ಯಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದ ಅನೇಕ ವೃತ್ತಿಪರ ಶಿಕ್ಷಣ ಮಾದರಿಯಲ್ಲಿ ಕಲಿತವರೇ ದೇಶದ ಪ್ರಖ್ಯಾತ ಉದ್ದಿಮೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ಕಾರಣಕ್ಕೆ ಅವರಿಗೆ ಕೈಗಾರಿಕೆ ಮತ್ತು ಅವುಗಳ ಸವಾಲುಗಳನ್ನು ಆಧರಿಸಿ ಉದ್ದಿಮೆ ಮತ್ತು ಕಾರ್ಮಿಕರಿಬ್ಬರ ಹಿತವನ್ನೂ ಕಾಯುವ, ಅವರ ನಡುವೆ ಸಂಭವಿಸುತ್ತಿದ್ದ ಸಂಘರ್ಷಗಳನ್ನ ತಡೆದು, ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಅವುಗಳ ಮೂಲವನ್ನು ಅರಿತು ಪರಹಾರ ಕಂಡುಕೊಳ್ಳುವುದು ಸುಲಭವಾಯಿತು. ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಮತ್ತು ಕೈಗಾರಿಕೆ ಬೇಕಿರುವ ವೃತ್ತಿ ಕೌಶಲ್ಯ ಹೊಂದಿರುವ, ನುರಿತ ತರಬೇತಿ ಪಡೆದಿರುವ ಕಾರ್ಮಿಕ ವರ್ಗದ ಪೂರೈಕೆಗೆ ಅಗತ್ಯವಿರುವ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಶ್ಯಾಮಾ ಪ್ರಸಾದ್
ಮುಖರ್ಜಿಯವರು ರಾಜಕಾರಣದ ಕಾರಣಕ್ಕೆ ಈ ದೇಶಕ್ಕೆ ಎಷ್ಟು ಪ್ರಸ್ತುತವೋ,  ಅವರು ಒಬ್ಬ ಶಿಕ್ಷಣ ತಜ್ಞನಾಗಿ, ಒಬ್ಬ ನುರಿತ ಆಡಳಿತಗಾರನಾಗಿ, ಒಬ್ಬ ಒಳ್ಳೆಯ ಸಮಾಜ ಚಿಂತಕನಾಗಿ, ಕೂಡ ನಮಗೆ ಇಂದಿಗೂ ಅಷ್ಟೇ ಪ್ರಸ್ತುತ.

1
ಜೂನ್

ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ

– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.

ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.

ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.

ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?

ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .

ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.

ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.

ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?

ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.

ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.

ಚಿತ್ರಕೃಪೆ : Business Today