ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು
ಶ್ರೀಪಾದ್ ಭಟ್
ಈಗ ಲೇಖಕರಾದ, ಬ್ಲಾಗರ್ ಆದ ಮಿತ್ರ ರಾಕೇಶ ಶೆಟ್ಟರು ಹೊಸ ಓದನ್ನು ಕೊಟ್ಟಿದ್ದಾರೆ. ಕೃತಿಯ ಹೆಸರು’ ಮುಚ್ಚಿಟ್ಟ ಕರ್ನಾಟಕದ ಚರಿತ್ರೆ’. ಯಾಕೆ ಇದು ಹೊಸ ಓದು ಅಂದರೆ – ಇದು ಇತಿಹಾಸದ ಹೊಸ ಓದು. ಇದುವರೆಗೆ ಶಾಲೆ ಕಲಿತ ನಾವು ಯಾರೂ ಕೇಳಿರದ ಇತಿಹಾಸದ ಸಂಗತಿಗಳು ಇರುವುದರಿಂದ.
ನಮ್ಮಲ್ಲಿನ ಅಂದರೆ ನಮ್ಮ ದೇಶದ ಸಮಸ್ಯೆ ಇರುವುದೇ ಇಲ್ಲಿ- ಇತಿಹಾಸದಲ್ಲಿ. ನಮ್ಮ ದೇಶಕ್ಕೆ ಆಧುನಿಕ ಇತಿಹಾಸ ಅಥವಾ ಚರಿತ್ರೆ ಕೊಟ್ಟವರು ಬ್ರಿಟಿಷರು. ಅದನ್ನು ಹೇಗೆ ನೋಡಬೇಕು, ಯಾವುದು ಇತಿಹಾಸ ಅನಿಸಿಕೊಳ್ಳುತ್ತದೆ. ಅದಕ್ಕೆ ಆಧಾರಗಳು ಯಾವುವು ಎಂಬುದನ್ನೂ ತಿಳಿಸಿದವರೂ ಅವರೇ. ಅದನ್ನೇ ನಾವು ಉರು ಹೊಡೆದು ಮುಂದುವರೆಸಿಕೊಂಡು ಶಿರಸಾವಹಿಸಿ ಪಾಲಿಸಿಕೊಂಡುಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾದ ಅಥವಾ ಪ್ರತಿಯಾದ ಸಾಲುಗಳನ್ನು ನಾವು ಒಪ್ಪಲು ತಯಾರಿಲ್ಲ ಎಂಬಂತೆ ನಮ್ಮನ್ನು ನಮ್ಮ ಶಾಲಾ ವ್ಯವಸ್ಥೆ ಅಣಿಗೊಳಿಸಿ ಕೃತಾರ್ಥವಾಗಿದೆ.ಆದರೆ ಈಚೆಗೆ ಈ ದೃಷ್ಟಿಕೋನ ಬದಲಾಗುತ್ತಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಕಾರಣದಿಂದ ಸಾಮಾಜಿಕ ಜಾಲ ತಾಣಗಳ ಪ್ರಾಚುರ್ಯದಿಂದ ಜನರ ವಿವಿಧ ಬಗೆಯ ಅಭಿಪ್ರಾಯಗಳಿಗೆ ವೇದಿಕೆಗಳು ಸಾರ್ವಜನಿಕವಾಗಿ ದೊರೆಯುತ್ತಿದೆ. ಈ ಮೊದಲು ಪರಿಸ್ಥಿತಿ ಹೀಗೆ ಇರಲಿಲ್ಲ. ಸಾರ್ವಜನಿಕ ವೇದಿಕೆಯ ಜೊತೆಗೆ ಅಲ್ಲಿ ಹೇಳಬೇಕಾದ ವಿಷಯಗಳಿಗೂ ನಿರ್ದಿಷ್ಟ ದಿಕ್ಕು ದೆಸೆ, ನಿಯಂತ್ರಣ ಇರುತ್ತಿತ್ತು. ಈ ನಿಯಂತ್ರಣವನ್ನು ಕೂಡ ಯಾರು ಹೇಗೆ ಎಂಬುದೂ ನಿರ್ಧಾರವಾಗಿರುತ್ತಿತ್ತು. ಅಭಿಪ್ರಾಯ ಸ್ವಾತಂತ್ರ್ಯ ಮುಕ್ತತೆಗಳು ಮಾತಲ್ಲಿ ಮಾತ್ರ ಇತ್ತು ಅಂದರೂ ತಪ್ಪಿಲ್ಲ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಿಯಂತ್ರಿತ ಮಾಧ್ಯಮಗಳು ಮೂಲೆ ಸೇರಿವೆ. ಸಾಮಾಜಿಕ ಮಾಧ್ಯಮ ಮುಕ್ತತೆ ಕೊಟ್ಟಿದೆ. ಹೀಗಾಗಿ ಜನರ ಅಭಿಪ್ರಾಯಕ್ಕೆ ಒಂದಲ್ಲ ಒಂದು ವೇದಿಕೆ ಸಾರ್ವಜನಿಕವಾಗಿ ಲಭಿಸಿ ಮುಕ್ತ ಚರ್ಚೆ ಆಗುತ್ತದೆ. ಲೆಕ್ಕವಿಲ್ಲದಷ್ಟು ಜನ ತಮ್ಮ ಮಾತನ್ನು ಹೇಳಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿಂದೆ ಹತ್ತಿಕ್ಕಿದ್ದ ಮಾತು, ವಿಷಯಗಳೆಲ್ಲ ಎಲ್ಲ ಕ್ಷೇತ್ರಗಳಿಂದಲೂ ಹೊರಬರುತ್ತಿವೆ. ನಮ್ಮೆಲ್ಲರನ್ನೂ ಬೇಗ ಪ್ರಭಾವಿಸುವ ಹಾಗೂ ಕಾಡುವ ಇತಿಹಾಸ ಇಂಥ ವಿಷಯಗಳಲ್ಲಿ ಒಂದು. ಬೇರೆ ಬೇರೆ ಈ ಮೊದಲು ಚರಿತ್ರೆ ಅಥವಾ ಇತಿಹಾಸದ ಬಗ್ಗೆ ಅದರ ಪಂಡಿತರು ಅನಿಸಿಕೊಂಡವರು ಅದರಲ್ಲೂ ಎಲ್ಲವನ್ನೂ ತಮ್ಮ ನಿಲುವು, ಸಿದ್ಧಾಂತಗಳ ಮೂಲಕ ಪ್ರತಿಪಾದಿಸುತ್ತಿದ್ದ ರೋಮಿಲಾಥಾಪರ್ ಅವರಂಥವರು ಮಾತ್ರ ಮಾತನಾಡಬಹುದಿತ್ತು. ಆದರೆ ಇಂದು ಇತಿಹಾಸದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಯಾರು ಬೇಕಾದರೂ ಮಾತನಾಡಬಹುದು. ಏಕೆಂದರೆ ಇಂದು ಯಾರು ಮಾತನಾಡುತ್ತಾರೆಂಬುದಕ್ಕಿಂತಲೂ ಏನು ಮಾತನಾಡುತ್ತಿದ್ದಾರೆಂಬುದು ಮುಖ್ಯವಾಗುತ್ತದೆ. ಆದ್ದರಿಂದಲೇ ಇತಿಹಾಸದಂಥ ವಿಷಯದ ಬಗ್ಗೆ ಇಂದು ಹೊಸ ತಲೆಮಾರಿನ ವಿಕ್ರಂ ಸಂಪತ್, ಅಭಿಜಿತ್ ಚಾವ್ಡಾರಂಥ ಹೊಸ ಯುವ ವಿದ್ವಾಂಸರು ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ನಮ್ಮ ಯಾವುದೇ ವಿಷಯದ ಬಗ್ಗೆ ಹತ್ತಾರು ಮೂಲಗಳಿಂದ ವಿಷಯ ಹೊರತೆಗೆದು ಚರ್ಚಿಸಬಹುದಾಗಿದೆ. ಇಲ್ಲಿ ರಾಕೇಶ್ ಶೆಟ್ಟರು ಕೂಡ ಇಂಥ ಯತ್ನವನ್ನು ಮಾಡಿದ್ದಾರೆ. ಅವರ ವೃತ್ತಿ ತಂತ್ರಜ್ಞಾನ, ಆಸಕ್ತಿ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಇತ್ಯಾದಿ. ತಮ್ಮ ಆಸಕ್ತಿಯನ್ನು ಈ ಕೃತಿಯಲ್ಲಿ ಸಾಧಿಸಿಕೊಳ್ಳಲು ಏನೆಲ್ಲ ಶ್ರಮಪಡಬೇಕಾಯಿತು ಎಂಬುದನ್ನು ಲೇಖಕರು ಇದರಲ್ಲಿ ದಾಖಲಿಸಿದ್ದಾರೆ. ತಾವು ಯಾವ ಕಾರಣಕ್ಕೆ ಈ ಕೆಲಸಕ್ಕೆ ಕೈ ಹಾಕಬೇಕಾಯಿತು ಎಂಬುದನ್ನೂ ಹೇಳಿದ್ದಾರೆ. ಅಷ್ಟೇ ನಮ್ರವಾಗಿ ಇದು ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯೇ ವಿನಾ ಇದೇ ಸಂಪೂರ್ಣ ಸತ್ಯ ಎಂದಲ್ಲವೆಂದು ಹೇಳಿದ್ದಾರೆ.
ಹೌದು. ನಿಸರ್ಗದಲ್ಲಿ ಎಲ್ಲವೂ ಬದಲಾಗುವಂತೆ ನಮ್ಮ ದೃಷ್ಟಿಯೂ ಬದಲಾಗುತ್ತದೆ. ಇತಿಹಾಸದ ಬಗ್ಗೆ ಇಂದು ಆಗಿರುವುದೂ ಅದೇ.ನಮಗೆ ಪಾಶ್ಚಾತ್ಯರು ಹೇಳಿಕೊಟ್ಟ ಇತಿಹಾಸ ಕಾಲಿಟ್ಟ ಕಡೆಯಲ್ಲೆಲ್ಲ ಘರ್ಷಣೆ ಆಗುತ್ತದೆ, ಶಾಂತಿ ನೆಲೆಸುವುದು ಕಷ್ಟವಾಗುತ್ತದೆ. ದಾಖಲೆಗಳು ದೊರೆತಂತೆ ಇತಿಹಾಸ ಮಾತಾಡುತ್ತಲೇ ಹೋಗುತ್ತದೆ. ಅಲ್ಲಿ ಮೌನ ಇರುವುದಿಲ್ಲ. ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಬ್ರಿಟಿಷ್ ಪೂರ್ವದಲ್ಲಿ ನಮ್ಮ ಸಮಾಜದಲ್ಲಿ ಗತ ಇತ್ತು. ಅದು ಕಾಲಾತೀತವಾಗಿದ್ದು ಅದನ್ನು ನಾವು ಜೀವಿಸುತ್ತಿದ್ದೆವು. ಅದರಲ್ಲಿ ನಂಬಿಕೆ ಮತ್ತು ಶ್ರದ್ಧೆಗಳಿದ್ದವು, ಆಚರಣೆ, ಸಂಪ್ರದಾಯಗಳನ್ನು ಅದು ಬೆಳೆಸಿತ್ತು. ಆದರೆ ಪಾಶ್ಚಾತ್ಯ ಹಿಸ್ಟರಿಯ ಚಿಂತನೆ ಹಾಗೂ ದೃಷ್ಟಿಕೋನ ಬಂದಮೇಲೆ ಎಲ್ಲವನ್ನೂ ಪ್ರಶ್ನಿಸುವ, ಶ್ರದ್ಧೆಯನ್ನು ಅಲುಗಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತೊಡಗಿತು. ಇದರಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳು ಇಲ್ಲವಾದವು. ಪಾಶದಚಾತ್ಯ ಹಿಸ್ಟರಿಯ ದೃಷ್ಟಿ ನಮ್ಮಲ್ಲಿ ನುಸುಳುವವರೆಗೂ ರಾಮಾಯಣ ಮತ್ತು ಮಹಾಭಾರತಗಳಂಥ ಗ್ರಂಥಗಳ ಯಾವ ವಿವರಗೂ ವಿವಾದಕ್ಕೆ ಆಸ್ಪದ ಮಾಡಿರಲಿಲ್ಲ. ಆದರೆ ಇಂದು ಅವುಗಳ ಸಣ್ಣಪುಟ್ಟ ವಿಚಾರಗಳೂ ಗದ್ದಲಕ್ಕೆ ಕಾರಣವಾಗುತ್ತಿವೆ. ಅದು ರಾಮಸೇತು, ಮಹಾಭಾರತ ಯುದ್ಧ ನಡೆದಿದ್ದು ನಿಜವಾ ಇತ್ಯಾದಿ ಆಗಿರಬೇಕಿಲ್ಲ. ಗಾಂಧಾರ, ಥುರಾ ಇವೆಲ್ಲ ಇಂದು ಎಲ್ಲಿವೆ ಕುರುಕ್ಷೇತ್ರ ಯುದ್ಧದಲ್ಲಿ ಅಷ್ಟುಜನ ಹೊಡೆದಾಡುವಷ್ಟು ಜಾಗ ಎಲ್ಲಿತ್ತು ಇತ್ಯಾದಿ ಏನು ಬೇಕಾದರೂ ಆಗಬಹುದು. ಪಾಶ್ಚಾತ್ಯ ಹಿಸ್ಟರಿ ದೃಷ್ಟಿ ನಮ್ಮ ಶ್ರದ್ಧೆ ಮತ್ತು ನಂಬಿಕೆಗಳನ್ನು ಮತ್ತೆ ಮತ್ತೆ ಘಾಸಿಗೊಳಿಸುತ್ತಿದೆ.ಅದು ಅಯೋಧ್ಯೆ ಆಗಲಿ, ಆಗ್ರಾ ಆಗಲಿ, ಯಾವುದೇ ಜಾಗವಾಗಲಿ, ವ್ಯಕ್ತಿ ಆಗಲಿ ಇವೆಲ್ಲಕ್ಕೂ ಹಿಸ್ಟರಿಯಲ್ಲಿ ಎರಡೂ ಕಡೆ ಮಾತನಾಡಬಹುದಾದ ದಾಖಲೆಗಳು ದೊರೆಯುತ್ತವೆ.

ನಮ್ಮ ರಾಜ್ಯದಲ್ಲಿ ಈಚೆಗೆ ಇಂಥ ದೃಷ್ಟಿಯಿಂದ ಹೆಚ್ಚು ಚರ್ಚೆಗೆ ಒಳಗಾದ ವ್ಯಕ್ತಿ ಅಂದರೆ ಅದು ಟಿಪ್ಪು ಸುಲ್ತಾನ. ಒಂದಿಷ್ಟು ಜನ ಆ ಕಡೆ ನಿಂತರೆ ಮತ್ತಷ್ಟು ಜನ ಈ ಕಡೆ ನಿಂತು ಹೊಡೆದಾಡುತ್ತರೆ, ಇಬ್ಬರ ಬಳಿ ಇರುವ ಅಸ್ತ್ರ ಒಂದೇ. ಅದು ಹಿಸ್ಟರಿ ಕೇಳುವ ದಾಖಲೆ. ಸಾಲದ್ದಕ್ಕೆ ಆಧುನಿಕ ಹಿಸ್ಟರಿ ಒಂದು ನಿರ್ದಿಷ್ಟ ವಾದಕ್ಕೆ ಬದ್ಧವಾಗಿ ಹಿಸ್ಟರಿ ಅಂದರೆ ಇಷ್ಟೇ ಹೇಳಬೇಕು ಎಂಬುದನ್ನೂ ಕಲಿಸಿ ತಾನು ಪ್ರತಿಪಾದಿಸುವ ದಾಖಲೆ ಆಧಾರಿತ ಸತ್ಯದ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ರಾಕೇಶ್ ಶೆಟ್ಟರು ಈ ಕೃತಿಯಲ್ಲಿ ಆಧುನಿಕ ಹಿಸ್ಟರಿಯ ದೃಷ್ಟಿಯನ್ನೇ ಬಳಸಿಕೊಂಡು ಇದುವರೆಗೆ ಅದು ಏನೆಲ್ಲವನ್ನು ಹೇಳಿದೆ, ಅದರ ದೃಷ್ಟಿಯಲ್ಲಿ ಎಲ್ಲೆಲ್ಲಿ ಏನು ಇರಬೇಕಿತ್ತು ಎಂದು ಸಾಧಾರ ತೋರಿಸಿದ್ದಾರೆ. ನಿಜ. ಆಧುನಿಕ ಹಿಸ್ಟರಿ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕ ಪಕ್ಕಕ್ಕೆ ಸರಿಸುತ್ತದೆ. ಮೈಸೂರು ಅರಸು ಮನೆತನ ಹಾಗೂ ಟಿಪ್ಪೂ ಕುರಿತ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಂತೆ ರಾಕೇಶ್ ಶೆಟ್ಟರು ಅದೇ ಹಿಸ್ಟರಿಯ ಆಯುಧಗಳನ್ನು ಬಳಸಿ ಪ್ರತಿ ದಾಖಲೆ ಕೊಡುತ್ತಾರೆ, ಚರ್ಚೆ ಅಥವಾ ವಿವಾದವನ್ನು ಜೀವಂತ ಇಡುತ್ತಾರೆ. ಅಲ್ಲಿಗೆ ಆಧುನಿಕ ಹಿಸ್ಟರಿಯ ಒಂದು ದೃಷ್ಟಿ ಸಾಧಿತವಾಯಿತು.
ಆಧುನಿಕ ಶಾಲೆ ಅಥವಾ ಉನ್ನತ ಶಿಕ್ಷಣ ಪಡೆದ ನಮಗೆ ಯಾರಿಗೂ ಮೈಸೂರು ರಾಜಮನೆತನ ಹಾಗೂ ಟಿಪ್ಪು ಕುರಿತು ಮಾತನಾಡುವಾಗ ಅಥವಾ ಓದುವಾಗ ಸೀತಾದಂಡು ಎಂಬ ಹೆಸರು ಕೇಳಿದ ಅಥವಾ ಓದಿದ ನೆನಪೇ ಇರುವುದಿಲ್ಲ. ಹೌದು, ಟಿಪ್ಪು ಬಗ್ಗೆ ನಮ್ಮ ನಡುವೆ ಪ್ರತಿವರ್ಷ ಸಾಕಷ್ಟು ಚರ್ಚೆ ಆಗುತ್ತದೆ. ಆದರೆ ಇಲ್ಲಿ ಇದೇ ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸೀತಾದಂಡಿನ ಪ್ರಸ್ತಾಪ ಬರುತ್ತದೆ. ಟಿಪ್ಪು ಕುರಿತು ಜನಪದರಲ್ಲಿ ಸಾಕಷ್ಟು ಸಂಗತಿಗಳು ಇವೆಯಾದರೂ ಆಧುನಿಕ ಹಿಸ್ಟರಿ ಅವನ್ನೆಲ್ಲ ಮಾನ್ಯ ಮಾಡುವುದಿಲ್ಲ. ನಮ್ಮ ಮೌಖಿಕ ಪರಂಪರೆಯಲ್ಲಿ ಅದಕ್ಕೆ ಸಾಕಷ್ಟು ಬೆಲೆ ಇದೆ. ಏಕೆಂದರೆ ಅದು ನಮ್ಮ ಗತ. ಬ್ರಿಟಿಷ್ ಪೂರ್ವದ ನಮ್ಮ ಚರಿತ್ರೆ. ಇದನ್ನು ಆಧಾರವಾಗಿಟ್ಟುಕೊಂಡು ಜನಪದ ತಜ್ಞ ಹನೂರು ಕೃಷ್ಣ ಮೂರ್ತಿಯವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ. ಅದು ಆಧುನಿಕ ಹಿಸ್ಟರಿ ಆಧರಿಸಿದ್ದಲ್ಲ. ಮೌಖಿಕ ಪರಂಪರೆ ಆಧರಿಸಿದ್ದು. ಜನಸಾಮಾನ್ಯರಿಗೆ ಇದು ಹಿಡಿಸುತ್ತದೆ, ಆಪ್ತವಾಗುತ್ತದೆ, ಹಿಸ್ಟರಿಗೆ ಅಲ್ಲ. ಈ ಕೃತಿಯಲ್ಲಿ ರಾಕೇಶರು ದಾಖಲಿಸುವ ಬಹುತೇಕ ಸಂಗತಿಗಳು ಹಾಗೂ ತಿರುಮಲರಾವ್ ಮತ್ತು ನಾರಾಯಣರಾವ್, ಉರಿಗೌಡ, ಹುಲಿಗೌಡರಂಥ ಹೆಸರುಗಳು ನಮಗೆ ತೀರಾ ಅಪರಿಚಿತವಾದವು. ಇದುವರೆಗೆ ಒಂದೇ ಒಂದು ರಸ್ತೆಗೂ ಅವರ ಹೆಸರು ಇಡದಂತೆ ಆಧುನಿಕ ಹಿಸ್ಟರಿ ನೋಡಿಕೊಂಡಿದೆ.
ಪ್ರಾಥಮಿಕ ಶಾಲಾ ಪಠ್ಯದಿಂದ ಹಿಡಿದು ಉನ್ನತ ಶಿಕ್ಷಣ ಪಠ್ಯದವರೆಗೆ ಯಾರದು ಯಾವುದನ್ನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸುವ ಶಕ್ತಿಗಳು ಲಾಬಿಗಳು ಪಾಶ್ಚಾತ್ಯ ಚಿಂತನೆಯ ಪ್ರಭಾವದಲ್ಲಿ ಮುಳುಗಿಹೋಗಿವೆ. ಯಾವುದೇ ವಿಷಯದ ಪಠ್ಯ ಸಿದ್ಧಾಂತ ಬೋಧೊಸುತ್ತದೆಯೇ ವಿನಾ ಸಾಹಿತ್ಯ ಪಠ್ಯ ಸಾಹಿತ್ಯವನ್ನಾಗಲಿ, ಇತಿಹಾಸದ ಪಠ್ಯ ಚರಿತ್ರೆಯನ್ನಾಗಲೀ ಮಕ್ಕಳಿಗೆ ಕಲಿಸುವ ಬದಲು ಒಂದು ನಿರ್ದಿಷ್ಟ ಚಿಂತನೆಗೆ ಸದಸ್ಯರನ್ನು ಸೃಷ್ಟಿಸಿಕೊಡುತ್ತದೆ. ಭಾಷೆಯ ಪಠ್ಯ ಭಾಷೆಯನ್ನು ಎಲ್ಲಿಂದ ಹೇಗೆ ಕಲಿಯಬೇಕು ಅನ್ನುವುದಕ್ಕಿಂತಲೂ ಭಾಷಿಕ ರಾಜಕಾರಣ ಹಾಗೂ ಅನ್ಯ ಭಾಷೆಗಳ ವಿರುದ್ಧ ಎತ್ತಿಕಟ್ಟುತ್ತದೆ. ಹಾಗಾಗಿ ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಏನನ್ನು ಕಲಿಸಬೇಕಿತ್ತೋ ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಲು ಕಲಿಸುತ್ತದೆ. ಹೊರತಾಗಿ ಯಾವುದಾದರೂ ವಿಷಯದ ಜ್ಞಾನ ಬೇಕು ಅನಿಸಿದರೆ ಸ್ವಂತ ಪರಿಶ್ರಮ ಅಗತ್ಯವಾಗುತ್ತದೆ. ಅಂಥ ಅಗತ್ಯವನ್ನು ಈ ಕೃತಿ ಪೂರೈಸಲು ಶ್ರಮಿಸುತ್ತದೆ.
ಹಾಗೆ ನೋಡಿದರೆ, ಮೈಸೂರನ್ನು ನೆಪವಾಗಿಟ್ಟುಕೊಂಡು ರಾಕೇಶರು ಮಾಡಿದ ಇತಿಹಾಸದ ಈ ಕೆಲಸ ನಮ್ಮ ದೇಶದ ಹಳ್ಳಿಯ ಇತಿಹಾಸದ ವಿಷಯದಲ್ಲೂ ನಡೆದು ಹೊಸದಾಗಿ ಗ್ರಾಮ ಚರಿತ್ರೆಗಳನ್ನು ರೂಪಿಸುವ ದಂಡು ಸಿದ್ಧವಾಗಬೇಕಿದೆ. ಆಗ ಮಾತ್ರ ಪಾಶ್ಚಾತ್ಯ ರೂಪಿತ ಇತಿಹಾಸದ ಬದಲಾಗಿ ನಮಗೆ ನಮ್ಮ ಗತದ ಚಿತ್ರಣ ಲಭಿಸಲು ಸಾಧ್ಯ. ಇಂಥ ಕೆಲಸ ಎಲ್ಲ ಕಡೆ ಶುರುವಾಗಲಿ.
ಇದು ನೇರ ಮಾರಾಟದಲ್ಲಿ ಮಾತ್ರವಲ್ಲದೇ ಆನ್ ಲೈನ್ ನಲ್ಲೂ ಲಭ್ಯ ಅನ್ನುವುದು ಖುಷಿಯ ಸಂಗತಿ. ಬಹುತೇಕ ಪುಸ್ತಕಗಳಂತೆ ಇದನ್ನು ಸಾಧ್ಯವಾದಷ್ಟು ಶಕ್ತಿ ಬಳಸಿ ಆದಷ್ಟು ದೂರ ಎಸೆಯುವಂಥದ್ದಲ್ಲ, ಎತ್ತಿಟ್ಟುಕೊಂಡು ಮತ್ತೆ ಮತ್ತೆ ಗಮನಿಸಬೇಕಾದ್ದು. ಇದರಿಂದ ನಮ್ಮ ಸಾಂಪ್ರದಾಯಿಕ ಜ್ಞಾನಭಂಡಾರಕ್ಕೆ ಮಾನ್ಯತೆ ದೊರೆಯುತ್ತದೆ.
ಕೃತಿ ವಿವರ: ಮುಚ್ಚಿಟ್ಟ ಕರ್ನಾಟಕ ಚರಿತ್ರೆ,
ಲೇ: ರಾಕೇಶ್ ಶೆಟ್ಟಿ,
ಪ್ರಕಾಶಕರು – ನಿಲುಮೆ ಪ್ರಕಾಶನ, ಬೆಂಗಳೂರು,
ಬೆಲೆ – ರೂ 350.
ಪುಟಗಳು-372
#ಮುಚ್ಚಿಟ್ಟಕರ್ನಾಟಕಚರಿತ್ರೆ #ರಾಕೇಶ್ ಶೆಟ್ಟಿ
– ಪುಸ್ತಕ, ಈ ಅಂಗಡಿಗಳಲ್ಲಿ ಲಭ್ಯವಿದೆ. (ದೂರದ ಊರಿನವರು ಪೋಸ್ಟ್ ಮೂಲಕ ತರಿಸಬಹುದು. ವಿವರ ಕೆಳಗಿನ ಚಿತ್ರದಲ್ಲಿದೆ)
ಬೆಂಗಳೂರು :
ರಾಷ್ಟ್ರೋತ್ಥಾನ
ನವಕರ್ನಾಟಕ
ಅಯೋಧ್ಯಾ
ದಾವಣಗೆರೆ :
ಜ್ಞಾನ ವಿಕಾಸ ಸಾಹಿತ್ಯ

ಬಿಚ್ಚಿಟ್ಟ ದಲಿತ ಚರಿತ್ರೆ
– ಶಿವರಾಮ್ ಕಾನ್ಸೇನ್
ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪುಲೆ ಮುಂತಾದವರ ಸಾಲಿನಲ್ಲಿ ಸದಾ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ಸುಧಾರಣಾವಾದಿಯ ಹೆಸರು “ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್”. ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತ್ಯಂತರದಲ್ಲಿ ಮಹಾನ್ ವ್ಯಕ್ತಿಗಳ ಹೆಸರುಗಳು ಅನುಕೂಲಸಿಂಧು ಅನುಯಾಯಿ-ಅಭಿಮಾನಿಗಳಿಂದಾಗಿ ಹಾಗೂ ಮತರಾಜಕಾರಣದಿಂದಾಗಿ ಸದ್ಬಳಕೆಯಾದ್ದಕ್ಕಿಂತಲೂ ದುರ್ಬಳಕೆಯಾದದ್ದೇ ಹೆಚ್ಚು.!
ಬಹುಶಃ ಜೋಗೇಂದ್ರನಾಥ್ ಮಂಡಲ್ ಹೆಸರನ್ನು ಉಲ್ಲೇಖಿಸಿದರೆ ಅಥವಾ ಸ್ಮರಿಸಿದರೆ ಯಾವುದೇ ಸವಲತ್ತು-ಪದವಿ-ಪುರಸ್ಕಾರ-ಪ್ರಶಸ್ತಿಯೂ ಸಿಗದೆಂಬ ಖಾತರಿಯಿಂದಾಗಿ ಇವರನ್ನು ಇತಿಹಾಸಕಾರರು ಮರೆಮಾಚಿರಬಹುದು ! ಯಾರು ಮರೆತರೇನು? ನಿಲುಮೆಯ ರಾಕೇಶ್ ಶೆಟ್ಟಿಯವರು ಇತಿಹಾಸದ ಗರ್ಭದಿಂದ ಜೋಗೇಂದ್ರನಾಥ್ ಎಂಬ ಮಹಾಶಕ್ತಿಮಂಡಲವನ್ನು ಹೊರತೆಗೆದು ಪ್ರಾಣ ತುಂಬಿದ್ದಾರೆ. “ಮುಚ್ಚಿಟ್ಟ ದಲಿತ ಚರಿತ್ರೆಯನ್ನು ಬಿಚ್ಚಿಟ್ಟ” ಗೆಳೆಯ ರಾಕೇಶ್ ಶೆಟ್ಟಿಯವರಿಗೆ ಹಾಗೂ ನಿಲುಮೆ ಬಳಗಕ್ಕೆ ಅಭಿನಂದನೆಗಳು. ಮತ್ತಷ್ಟು ಓದು 
ಓ ‘ಸಂಬಂಧ’ಗಳೇ ನೀವ್ಯಾಕೆ ಇಷ್ಟು ‘ಬಿಜಿ’!
– ಸುವರ್ಣ ಹೀರೆಮಠ
ಆ ಕಾಲವೇ ಹಾಗಿತ್ತು. ಮುಖಾಮುಖಿ ಮಾತು, ಸಂಬಂಧಗಳಿಗೆ ಬೆಲೆ ಇತ್ತು. ಜತೆಯಾಗಿ ಊಟ, ಆಟ, ಪಾಠ ನಮ್ಮದಾಗುತ್ತಿತ್ತು. ಆದರೆ ಈಗ ಕಾಲ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಸಾಧನೆ, ಕೆಲಸದ ಒತ್ತಡ ಎಲ್ಲವನ್ನು ನುಂಗುತ್ತಿದೆ. ಸಂಬಂಧವೆಂಬುದು ದೂರದ ಬೆಟ್ಟವಾಗುತ್ತಿದೆ. ಹತ್ತಿರ ಹೋಗಿ ನೋಡಿದಾಗ, ಅದು ಕೈಗೆ ಸಿಗದ ವಸ್ತು ಎಂಬುದು ತಿಳಿಯುತ್ತದೆ. ನಾವೆಲ್ಲ ಯಾಕೆ ಹೀಗೆ ಆಗುತ್ತಿದ್ದೇವೆ ? ದೊಡ್ಡ ಗ್ರಾತ್ರದ ಕಟ್ಟಡ ಕಟ್ಟಬೇಕು. ರೋಬೊ ಕಂಡುಹಿಡಿಯಬೇಕು ನಿಜ. ಆದರೆ ನಾವೇ ರೋಬೊ ಆಗಬಾರದು. ನಿಂತ ಕಟ್ಟಡವೂ ಆಗಬಾರದು. ಮತ್ತಷ್ಟು ಓದು 
ನಮ್ಮೂರ ಹಬ್ಬ : ನಮ್ಮೂರ ಜಾತ್ರೆ
– ಆದರ್ಶ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲೇಖನ
ಜಾತ್ರೆಯೆಂದರೆ ಸಾಕು.. ಥಟ್ಟನೆ ಮನಸ್ಸು ಬಾಲ್ಯಕ್ಕೋಡುತ್ತದೆ!
ಅಪ್ಪನ ಬೆನ್ನುಹತ್ತಿ ಹೆಗಲ ಮೇಲೆ ಕೂತು ಪುಟ್ಟ ಕಣ್ಣುಗಳನ್ನ ಇಷ್ಟಗಲ ಅರಳಿಸಿ ನೋಡಿದ್ದ ಇಡೀ ಜಾತ್ರೆಯ ಪನೋರಮಿಕ್ ನೋಟ ಮತ್ತೆ ಅಷ್ಟೇ ರಂಗು ರಂಗಾಗಿ ತೆರೆದುಕೊಳ್ಳುತ್ತದೆ..
ಶಿವಮೊಗ್ಗದಿಂದ ಸಾಗರ, ಹೊಸನಗರ, ಶಿಕಾರಿಪುರಗಳಿಗೆ ಹೋಗುವ ಮಾರ್ಗದಲ್ಲಿ ಮಲೆನಾಡಿನ ಪ್ರವೇಶ ದ್ವಾರದಂತಿರುವ ನಮ್ಮೂರು “ಆನಂದಪುರ”ದ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆಯೆಂದರೆ ನಮ್ಮ ಮಟ್ಟಿಗೆ ಅದು ಬಹುದೊಡ್ಡ ಹಬ್ಬ! ಶಿರಸಿ ಮಾರಿಕಾಂಬಾ, ಸಾಗರದ ಮಾರಿಕಾಂಬಾ, ಆನಂದಪುರದ ಕಡ್ಲೆಹಕ್ಲು ಮಾರಿಕಾಂಬಾ ಈ ಮೂವರೂ ಅಕ್ಕ ತಂಗಿಯರೆಂಬ ಪ್ರತೀತಿಯಿದೆ. ಹಾಗಾಗಿ 3 ವರ್ಷಕ್ಕೊಮ್ಮೆ ಮೊದಲಿಗೆ ಶಿರಸಿಯ ಹಿರಿಯಕ್ಕನ ಜಾತ್ರೆ, ನಂತರ ಸಾಗರದ ಜಾತ್ರೆ, ಕೊನೆಯಲ್ಲಿ ನಮ್ಮೂರ ಜಾತ್ರೆ ನಡೆಯುತ್ತದೆ. ನಮ್ಮ ಸಂಸ್ಕೃತಿಯಲ್ಲಿ ದೈವವನ್ನೂ ಮರ್ತ್ಯ ಸಂಬಂಧಗಳಲ್ಲಿ(ಅಕ್ಕ-ತಂಗಿ) ಬೆಸೆದು ವಾತ್ಸಲ್ಯದಿಂದ ಕಾಣುವುದು ಸೋಜಿಗವಲ್ಲದೇ ಮತ್ತೇನು?! ಮತ್ತಷ್ಟು ಓದು 
ಹಿಂದೂ ಮುಸ್ಲಿಂ ಸಮ್ಮಿಲನಕ್ಕೆ ಸೆಕ್ಯಲರಿಸಮ್ಮೇ ಬೇಕೆ? ಅಲಾದಿ ಹಬ್ಬ ಸಾಕೆ?
-ವೀಣಾ. ಈ
(ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.)
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದ ಲೇಖನ..
ಪ್ರಸ್ತುತ ಐಡಿಯಾಲಜಿಗಳ ಯುಗದಲ್ಲಿ ಹಿಂದೂ ಮುಸಲ್ಮಾನ ಎನ್ನುವುದು ಎರಡು ವೈರಿ ಗುಂಪುಗಳೆಂದು ಪರಿಗಣಿಸಲ್ಪಡುತ್ತಿವೆ. ಕೆಲವು ಚಿಂತಕರು ಮತ್ತು ಹಾಗೆನ್ನಿಸಿಕೊಳ್ಳಲು ಹಾತೊರೆಯುವವರು ಎಲ್ಲಾ ಘಟನೆಗಳಲ್ಲೂ ಈ ವೈರತ್ವವನ್ನೇ ಕಾಣುತ್ತಿರುತ್ತಾರೆ. ಹೀಗಿರುವಾಗ ಹಬ್ಬಗಳು, ಆಚರಣೆಗಳು ಅವರಿಗೆ ಒದಗಿದ ಸದಾವಕಾಶಗಳಂತೆ ಭಾವಿಸುತ್ತಾರೆ. ಗಣೇಶ ಹಬ್ಬ ಎಂದರೆ ಗಣೇಶನ ಆಗಮನದಿಂದ ವಿಸರ್ಜನೆಯವರೆಗೆ ಆರಕ್ಷಕರ ಕಾವಲಿನೊಂದಿಗೇ ನಡೆಯುವ ಸ್ಥಿತಿ ಬಂದೊದಗಿದೆ. ಉದ್ದೇಶಪೂರ್ವಕವಾಗಿಯೇ ಮುಸ್ಲಿಂ ಕೇರಿಗಳಲ್ಲಿ ಗಣೇಶನ ಮೆರವಣಿಗೆ ಮಾಡುವುದು, ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು ಮಾಡಿದರೆ, ಮುಸ್ಲೀಮರು ಇದಕ್ಕೆ ಹೊರತಾಗಿಲ್ಲದಂತೆ ಇದ್‍ಮೀಲಾದ್‍ನಂತಹ ಹಬ್ಬದ ಮೆರವಣಿಗೆಯಲ್ಲಿ ಇವೇ ಪ್ರವೃತ್ತಿಗಳು ಪುನಾರವರ್ತನೆಯಾಗುತ್ತವೆ. ಇದರಿಂದ ಹಬ್ಬಗಳೆಂದರೆ ಭಯದ ವಾತಾವರಣ ಸೃಷ್ಟಿಯಾಗುವ ಕಾಲ ಅಲ್ಲಲ್ಲಿ ಕಂಡುಬರುತ್ತಿದೆ. ಇದು ಹೀಗೆ ಮುಂದುವರೆದರೆ ಹಬ್ಬಗಳೆಂದರೆ ಗಲಾಟೆಯುಂಟು ಮಾಡುವ ಸಂಗತಿಗಳೆಂದು ಕಾನೂನು ಮೂಲಕವೇ ಅವುಗಳನ್ನು ನಿಷೇಧ ಮಾಡುವ ಸಂದರ್ಭ ಬಂದರೂ ಬರಬಹುದು. ಆದರೆ ಹಬ್ಬಗಳು ಈ ಕೆಲಸವನ್ನು ಮಾಡುತ್ತವೆಯೇ? ಅವುಗಳ ಸ್ವರೂಪವೇನು? ಮತ್ತಷ್ಟು ಓದು 
ನಮ್ಮೂರ ಹಬ್ಬ : ಶ್ರೀ ಸಿದ್ದಿ ವಿನಾಯಕನ ಜಾತ್ರೆ
– ಮನುಶ್ರೀ ಕೆ.ಎಸ್
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಲೇಖನ
‘ಊರು’ ಅಂದರೆ ನಮಗೆಲ್ಲರಿಗೂ ಮನೆಯ ನಂತರ ಮನಸಿಗೆ ಹತ್ತಿರವಾಗುವ ಮತ್ತೊಂದು ಅಚ್ಚು ಮೆಚ್ಚಿನ ಜಾಗ. ಇಲ್ಲಿಯೂ ಕೂಡ ನಮ್ಮ ಮನೆಯ ಹಾಗೆಯೇ ಒಂದು ದೊಡ್ಡ ಸಂಸಾರವಿದೆ. ಅದರಲ್ಲಿ ಸುಖ ದುಃಖಗಳ ಕಥೆಯಿದೆ, ನೆಮ್ಮದಿಯ ಆಚರಣೆಯಿದೆ, ನಂಬುವ ಸಂಪ್ರದಾಯವಿದೆ, ದುಡಿಯುವ ಕಸುಬಿದೆ, ಕಣ್ಣೀರಿಡಿಸುವ ಪ್ರೀತಿಯಿದೆ, ಕಂಡರಾಗದ ದ್ವೇಷವಿದೆ, ದೆವ್ವದ ಭಯವಿದೆ, ದೈವದ ಭಕ್ತಿಯಿದೆ ಎಲ್ಲಾ ಕೂಡಿ ಕೊಂಡಿರುವ ಒಂದು ಹಳೇ ಆಲದ ಮರದ ಹಾಗೆ. ಮತ್ತಷ್ಟು ಓದು 
ನಮ್ಮೂರ ಹಬ್ಬ : ತಿಂಗಳು ಮಾಮನ ಹಬ್ಬ
– ಶಾಂತಮ್ಮ ಕೋಡಯ್ಯ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಲೇಖನ
ಪೀಠಿಕೆ: ಹಬ್ಬಗಳು ಗ್ರಾಮದ ಅವಿಭಾಜ್ಯ ಅಂಗಗಳು ಹಳ್ಳಿಗರಿಗೆ ಹಬ್ಬಗಳೇ ಜೀವಾಳ. ಹಬ್ಬಗಳೇ ಮಾದ್ಯಮಗಳು, ಮನೋರಂಜನೆಗಳು.. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ನಮ್ಮ ಜೀವನದಲ್ಲಿ ಸುಂದರ ಅನುಭವಗಳು ಮತ್ತು ಬಾಲ್ಯ, ಯೌವನ, ಮುಪ್ಪು, ಪ್ರೇಮ ಮುಂತಾದವುಗಳ ಸಂಗಮ. ಹಬ್ಬಗಳು ಹಳ್ಳಿಗರ ಪ್ರತಿಷ್ಠೆ ಕೂಡ ಹೌದು. ಎಲ್ಲ ಜಾತಿಯವರು ಬೆರೆತು, ಭೇದ ಮರೆತು ಒಂದಾಗುವ ಪರಿ ಅದ್ಭುತ. ನಮ್ಮ ಹಿರಿಯರ ಹಾಡು, ಹಸೆ, ಬೈಗುಳ, ಬೆಡಗು, ಬಿನ್ನಾಣ, ಕಾರ್ಯ ವೈಖರಿ ಎಲ್ಲ ಸಂಸ್ಕೃತಿಯನ್ನ ಹೊಂದಿ ಬೆಳೆಯಲು ಸಹಾಕಾರಿ ಈ ತಿಂಗಳಮಾಮನ ಹಬ್ಬ. ಮತ್ತಷ್ಟು ಓದು 
ನಮ್ಮೂರ ಹಬ್ಬ : ಚೌತ
– ಸುಜೀತ್ ಕುಮಾರ್
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದ ಲೇಖನ
ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ರೆನೊಲ್ಡ್ಸ್ ಹಾಗು ‘ಟಿಕ್- ಟಿಕ್’ ಪೆನ್ನುಗಳೊಟ್ಟಿಗೆ ಗಾಜಿನ ದೇಹದಂತಹ ಪ್ಲಾಸ್ಟಿಕ್ನ ಪೆನ್ನುಗಳೂ ಮಕ್ಕಳ ಕೈಸೇರತೊಡಗಿದ್ದವು. ಟಿ.ವಿ.ಎಸ್ ಹಾಗು ಬಜಾಜ್ ಬೈಕುಗಳೊಟ್ಟಿಗೆ ಓತಿಕ್ಯಾತದ ಮುಖಕ್ಕೆ ಹೋಲುವ ಹೆಡ್ಲೈಟ್ ನ ನವ ಮಾದರಿಯ ಬೈಕುಗಳು ರಸ್ತೆಯ ಮೇಲೆ ಕಾಣತೊಡಗಿದ್ದವು, ಫೋನೆಂದರೆ ರಸ್ತೆ ಬದಿಯ ಬೋರವೆಲ್ ನ ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆಳೆದು ನಿಲ್ಲಿಸಿರಿವ ಕಂಬಗಳು ಹಾಗು ಅವುಗಳ ಬುಡದಲ್ಲಿ ಶಾವಿಗೆ ಪಾಯಸದ ಶಾವಿಗೆಗಳಂತೆ ನುಲಿದುಕೊಂಡಿರುವ ರಾಶಿ ರಾಶಿ ವೈರುಗಳು ಎಂದರಿತ್ತದ್ದ ಎಷ್ಟೋ ಜನರಿಗೆ ಇವುಗಳ್ಯಾವುದರ ಕಿರಿ- ಕಿರಿ ಇಲ್ಲದೆ ಜೇಬಿನ ಒಳಗೆ ಎಲ್ಲೆಂದರಲ್ಲಿಗೆ ಕೊಡೊಯ್ಯಬಲ್ಲ ಫೋನುಗಳು ಬರುತ್ತಿದೆ ಎಂದು ಕೇಳಿ ಆಶ್ಚರ್ಯ ಚಕಿತವಾಗುತ್ತಿದ್ದ ಕಾಲವದು.. ಅಲ್ಲದೆ ಪ್ರಪಂಚದ ಯಾವುದೇ ಸಮಸ್ಯೆಗಳಿಗೂ ಒಂದಿಲ್ಲೊಂದು ಉತ್ತರವನ್ನು ಕೊಡಬಲ್ಲ ‘ಗೂಗಲ್’ ಎಂಬೊಂದು ಯಂತ್ರವಿದೆ ಎಂದರೆ ಕೇಳಿದವರು ಗಹಗಹನೇ ನಕ್ಕಿ ಸುಮ್ಮನಾಗಿಬಿಡುತ್ತಿದ್ದರು. ಒಟ್ಟಿನಲ್ಲಿ ಕಾಲ ವಸಂತವನ್ನು ಕಳೆದು ಉರಿ ಬೇಸಿಗೆಗೆ ಒಗ್ಗತೊಡಗಿತ್ತು. ಮತ್ತಷ್ಟು ಓದು 
ನಮ್ಮೂರ ಹಬ್ಬ : ಪರಿಸರಸ್ನೇಹಿ ದೊಡ್ಡಹಬ್ಬ
– ಮಾಲತಿ ಹೆಗಡೆ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದ ಲೇಖನ
ಬಾಲ್ಯದಲ್ಲಿ ಕಂಡ ಮಲೆನಾಡಿನ ಪರಿಸರದ ಸ್ನೇಹಿಯಾದ ದೀಪಾವಳಿ ಮನದಲ್ಲಿ ನಂದಾದೀಪದಂತೆ ಬೆಳಗುತ್ತಲೇ ಇರುತ್ತದೆ. ಅಲ್ಲಿ ದೀಪಾವಳಿಗೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ಹಬ್ಬದ ತಯಾರಿ ಶುರುವಾಗುತ್ತಿತ್ತು. ಹಬ್ಬಕ್ಕೆ ವಾರದ ಮೊದಲು ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದೆವು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳು. ಮತ್ತಷ್ಟು ಓದು 
ನಮ್ಮೂರ ಹಬ್ಬ : ಮುಗಬಾಳ ಕರಗ ಸಂಪ್ರದಾಯ
– ಸುರೇಶ್ ಮುಗಬಾಳ್
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದ ಲೇಖನ ..
ಕರದಲ್ಲಿ ಮುಟ್ಟದೆ, ರುಂಡದಲ್ಲಿ ಧರಿಸಿ ಚಲಿಸುವುದೇ “ಕರಗ”, ಸ್ತ್ರೀ ವೇಷಧಾರಿ ಪುರುಷ (ಕರಗ ಪೂಜಾರಿ) ತನ್ನ ತಲೆಯ ಮೇಲೆ ಕರಗವನ್ನು ಹೊತ್ತು ಕುಣಿಯುವುದನ್ನು ಕಣ್ತುಂಬಿಕೊಳ್ಳುವುದೇ ಸೊಗಸು, ಮೂರು ಕಳಶಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಕಳಶಗಳನ್ನು ಸುಗಂಧ ಬೀರುವ ಮಲ್ಲಿಗೆ ಹೂಗಳಿಂದ ಸಿಂಗರಿಸಿ, ಅಲಂಕೃತಗೊಂಡ ಕರಗವನ್ನು ತಲೆಯಮೇಲೆ ಹೊರುವ ಕರಗ ಪೂಜಾರಿಯು, ಎಲ್ಲೂ ಸಮತೋಲನವನ್ನು ತಪ್ಪದೆ, ಬಲಗೈನಲ್ಲಿ ಕತ್ತಿ (ಬಾಕು), ಎಡಗೈನಲ್ಲಿ ಮಂತ್ರದಂಡವನ್ನು ಹಿಡಿದು, ಘಂಟೆ ಪೂಜಾರಿಯ ಘಂಟೆ ಸದ್ದಿಗೆ, ವೀರಕುಮಾರರ “ಗೋವಿಂದ-ಗೋವಿಂದ” ಕೂಗಿಗೆ ತಾಳಬದ್ಧವಾಗಿ ಕುಣಿಯುವ ಆಚರಣೆ ಕರಗ ಶಕ್ತ್ಯೋತ್ಸವ ಎನಿಸಿಕೊಂಡಿದೆ, ಕರಗ ಪೂಜಾರಿಯು ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುವಾಗ ಎಂತಹ ನಾಸ್ತಿಕನ ಎದೆಯಲ್ಲೂ ಆಸ್ತಿಕತೆಯ ಪ್ರಜ್ಞೆಯನ್ನು ಬಡಿದೆಬ್ಬಿಸಿಬಿಡುತ್ತದೆ. “ಕರಗ” ಎಂದೊಡನೆ ಬೆಂಗಳೂರು ಕರಗ ನೆನಪಾಗುವುದು ಸಾಮಾನ್ಯ.. ಮೈಸೂರಿನ ದಸರ ಬಿಟ್ಟರೆ ಸಾಂಸ್ಕೃತಿಕ ಐತಿಹ್ಯವನ್ನು ಹೊಂದಿದ ಮತ್ತೊಂದು ಆಚರಣೆಯೇ ಬೆಂಗಳೂರಿನ ದ್ರೌಪತಾಂಭ ದೇವಿ ಕರಗ. ಬೆಂಗಳೂರು ಕರಗವನ್ನು ಸುಮಾರು 800 ವರುಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂಬ ಮಾಹಿತಿ ಧರ್ಮರಾಯಸ್ವಾಮಿ ದೇವಸ್ಥಾನದ ಮೂಲ ದಾಖಲೆಗಳಲ್ಲಿ ಉಲ್ಲೇಖಿತವಾಗಿದೆ. ಬೆಂಗಳೂರು ಕರಗದ ರೀತಿಯಲ್ಲೇ ಬೆಂಗಳೂರು ನಗರದ ಸುತ್ತ-ಮುತ್ತ ಕರಗವನ್ನು ಆಚರಿಸಿಕೊಂಡು ಬರುವ ಪದ್ಧತಿಯಿದೆ. ಮುಖ್ಯವಾಗಿ ಹೊಸಕೋಟೆ, ಮಾಲೂರು, ವರ್ತೂರು, ಕೆಂಗೇರಿ ಹಾಗೂ ಆನೇಕಲ್ ಭಾಗಗಳಲ್ಲಿ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗಿದೆ. ಈ ಎಲ್ಲಾ ಕರಗ ಆಚರಣೆಗಳು ಭೌಗೋಳಿಕವಾಗಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುವುದರಿಂದ ಹೆಚ್ಚು ಪ್ರಸಿದ್ಧಿ ಪಡೆದಿವೆ. ಮತ್ತಷ್ಟು ಓದು 









