ವಿಷಯದ ವಿವರಗಳಿಗೆ ದಾಟಿರಿ

Posts from the ‘ಇತಿಹಾಸ’ Category

11
ಜನ

ನಿಜ಼ಾಮ ಗ್ರೇಟ್ ಸೆಕ್ಯುಲರ್ ಆಗಿದ್ದರೆ, ಆಪರೇಷನ್ ಪೋಲೊ ನಡೆದದ್ದು ಸುಳ್ಳೇ?

– ಪ್ರವೀಣ್ ಪಟವರ್ಧನ್

Nizam and Sardarಕೆಲ ದಿನಗಳ ಹಿಂದಷ್ಟೇ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಿಜ಼ಾಮನನ್ನು ಕೊಂಡಾಡಿದ್ದಾರೆ. ನಿಜ಼ಾಮ ಒಂದೊಳ್ಳೆಯ ರಾಜ್ಯಭಾರ ಮಾಡಿದವನೆಂದೂ, ಅವನಿಂದ ಹಲವಾರು ಕಲ್ಯಾಣಕರ ಕಾರ್ಯಗಳು ನಡೆದಿವೆ ಎಂದೂ, ಜೊತೆಗೆ ಆತ ದೇಶಭಕ್ತ, ಜಾತ್ಯಾತೀತ ರಾಜನಾಗಿದ್ದನೆಂದೂ ಕೆಸಿಆರ್ ನಿಜ಼ಾಮನನ್ನು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ನಡೆದು ಇದುವರೆಗಿನ ಆಂಧ್ರ ಸರಕಾರಗಳು ನಿಜ಼ಾಮನನ್ನು ತುಚ್ಛವಾಗಿ ಕಂಡಿದ್ದವು, ಆ ಅಕ್ಷಮ್ಯ ಅಪರಾಧವನ್ನು ಇವರ ಸರ್ಕಾರ ಖಂಡಿಸುತ್ತದೆ ಹಾಗೂ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ ಎಂದೂ ಕೆಸಿಆರ್ ತಿಳಿಸಿದ್ದಾರೆ. ನಿಜ಼ಾಮನ ಆಳ್ವಿಕೆಯಲ್ಲಿ ಕೆಲ ತಪ್ಪುಗಳು ಗತಿಸಿರಬಹುದು. ಆದರೆ ತಪ್ಪುಗಳು ಎಲ್ಲಾ ರಾಜರುಗಳ ರಾಜ್ಯಭಾರದಲ್ಲೂ ನಡೆದಿವೆಯೆಂದು ಸಮಝಾಯಿಷಿಯೂ ನೀಡುತ್ತಾರೆ. ಈ ಘಟನೆ ನಡೆಯುವ ಕೆಲ ವಾರಗಳ ಹಿಂದೆ ನಮ್ಮ ದೇಶದ ಮಾಧ್ಯಮಗಳಲ್ಲಿ ಗಾಂಧಿಜೀಯ ಹತ್ಯೆಗೈದ ಗೋಡ್ಸೆ ಒಬ್ಬ ದೇಶಭಕ್ತ ಎಂದು ಆಡಿದ ಮಾತನ್ನು ಆಧರಿಸಿಯೇ ಚರ್ಚೆಗಳು ಮುಗಿಲು ಮುಟ್ಟಿದ್ದ ಪರಿಯ ಕಂಡು ನಿಜ಼ಾಮನ ಬಗ್ಗೆಯೂ ಡಿಬೇಟ್ ಸರಣಿಗಳು ನಡೆಯುತ್ತವೆ ಎಂದು ಕಾದದ್ದೇ ಬಂತು. ಆದರೆ  ಕೆಸಿಆರ್ ರ ಹೇಳಿಕೆ, ವಿಷಯ, ವರದಿ ಅಥವಾ ಆ ಬಗೆಗಿನ ಜಿಜ್ಞಾಸೆ, ಮುಖ್ಯ ವಾಹಿನಿಯ ಚರ್ಚೆಗೆ ಒಳಪಟ್ಟಿದ್ದನ್ನು ಕಂಡಿರಾ? ಊಹೂಂ. ಅರ್ನಬ್ ಗೋಸ್ವಾಮಿ, ರಾಜದೀಪ ಸರದೇಸಾಯಿ, ಕರಣ್ ಥಾಪರ್, ಬರ್ಖಾ ದತ್ತ ಇತ್ಯಾದಿಯಾಗಿ ಯಾರೂ ಏಕೆ ಚರ್ಚೆಗೆ ಈ ವಿಷಯ ತೆಗೆದುಕೊಳ್ಳಲಿಲ್ಲ? ಅದೇನು ಟಿ.ಆರ್.ಪಿ ಸಂಬಂಧಿತ ನಿರಾಕರಣೆಯೋ ಅಥವಾ ಒಂದು ಕೋಮಿನ ಸುತ್ತದ ಕಥೆಯನ್ನು ಕೆದಕುವ ರಗಳೆ ಏಕೆಂದು ಸುಮ್ಮನಾದರೋ ಗೊತ್ತಿಲ್ಲ. ಟಿವಿ ಮಾಧ್ಯಮದಲ್ಲಿನ ವಾರ್ತೆಗಳಲ್ಲಿ ಕೆಸಿಆರ್ ವಿರುದ್ಧದ ಹೇಳಿಕೆಗಳು ಪ್ರತಿಪಕ್ಷದಿಂದ ಬಂದರೂ ನಿಜ಼ಾಮನ ಕುರಿತಾಗಿ ಮಾತನಾಡಿದ್ದು ಕಾಣಲಿಲ್ಲ ಅಥವಾ ತೋರಿಸಲಿಲ್ಲ. ಸಾಮಾನ್ಯವಾಗಿ ಟ್ವಿಟರ್ ನಲ್ಲಿಯಾದರೂ ನಡೆಯುವ ಚರ್ಚೆ ಈ ಬಾರಿ ನಡೆಯಲಿಲ್ಲ. ತತ್ಸಂಬಂಧದ ೫೦ ಟ್ವೀಟ್ ಗಳಲ್ಲಿ, ಶೇಖಡ ೯೫ ರಷ್ಟು ಕೆಸಿಆರ್ ನ ಮಾತನ್ನು ಒಪ್ಪಿರದಿದ್ದರೂ ವಿಷಯ “Trending” ಆಗಲೇ ಇಲ್ಲ. ಹಾಗಾದರೆ ನಿಜವಾಗಿಯೂ ನಿಜ಼ಾಮನು ಆ ಮಟ್ಟದ ದೇಶಭಕ್ತನೇ, ಜಾತ್ಯಾತೀತ ರಾಜನೇ; ಒಮ್ಮೆ ಬೂಧಿ ಮುಚ್ಚಿದ ಕೆಂಡವನ್ನು ಕೆದಕೋಣ.

ಮತ್ತಷ್ಟು ಓದು »

5
ಜನ

ಪುಸ್ತಕ ಪರಿಚಯ : ಶಿಲಾಕುಲ ವಲಸೆ

– ವಿದ್ಯಾ ಕುಲಕರ್ಣಿ

ಶಿಲಾಕುಲ ವಲಸೆಕಾದಂಬರಿ : – ಶಿಲಾಕುಲ ವಲಸೆ

ಲೇಖಕರು :- ಕೆ. ಎನ್ ಗಣೇಶಯ್ಯ

ಸಾರಾಂಶ :- ಆರ್ಯರು ಪಶ್ಚಿಮದಿಂದ ಭಾರತಕ್ಕೆವಲಸಿಗರಾಗಿ ಬರಲಿಲ್ಲ.ಪಶ್ಚಿಮಕ್ಕೆ ವಲಸೆ ಹೋದರು.

ನಾನು ಕಾದಂಬರಿಗಳನ್ನು ಓದಲು ಅಥವಾ ಓದುವ ಹುಚ್ಚು ರೂಢಿಸಿಕೊಂಡಿದ್ದು ಶ್ರೀ ತರಾಸು ಅವರ ಸಿಡಿಲ ಮೊಗ್ಗು ಕಾದಂಬರಿಯಿಂದ ಅಂತ ಹೇಳಬಹುದು.  ಆ ಕಾದಂಬರಿಯನ್ನು ನಮ್ಮಣ್ಣನ ತರಗತಿಗೆ ಪಠ್ಯ ಪುಸ್ತಕವಾಗಿ ಹಚ್ಚಿದ್ದರು. ಅವನು ನನಗೆ ಅದನ್ನು ಓದಲು ತಿಳಿಸಿದ್ದಲ್ಲದೇ ಅದರಲ್ಲಿನ ಕೆಲವಾರು ಅಂಶಗಳ ಕುರಿತು ಚರ್ಚಿಸಿ, ಅದನ್ನು ವಿವರಿಸಿ ಹೇಳಿದ್ದಲ್ಲದೇ ನಾನು ಸರಿಯಾಗಿ ತಿಳಿದಿರುವೆನೋ ಇಲ್ಲವೋ ಎಂದು ಪರೀಕ್ಷೆ ಸಹ ಮಾಡಿದ್ದ. ಹೀಗಾಗಿ ನಾನು ಸುಮಾರು 8 ನೇ ತರಗತಿಯಲ್ಲಿದ್ದಾಗಲೇ ಅದನ್ನು ಚನ್ನಾಗಿ ಓದಿ ಹಾಗೇನೇ ಓದುವ ಗೀಳು ಬೆಳೆಸಿಕೊಂಡಿದ್ದೆ. ಶ್ರೀಮತಿ ಗೀತಾ ನಾಗಭೂಷಣ ಅವರ ಕಥೆ ಹೂವ ತಂದವರು ಸಹ ನಮಗೆ ಪಠ್ಯಪುಸ್ತಕದಲ್ಲಿ ಪಾಠವಾಗಿತ್ತು. ಅದನ್ನು ನನ್ನಣ್ಣ ನನಗೆ ಚನ್ನಾಗಿ ವಿವರಿಸಿ ಓದಿಸಿ ಹೇಳಿದ್ದರಿಂದ ಓದುವ ಗೀಳನ್ನು ಬೆಳೆಸಿದ ಅವನಿಗೆ ನನ್ನ ಕೃತಜ್ಞತೆ ಮೊದಲು ಸಲ್ಲುತ್ತವೆ.

ನಂತರದ ದಿನಗಳಲ್ಲಿ ನಾನು ತ್ರಿವೇಣಿ , ಉಷಾ ನವರತ್ನರಾಂ , ರೇಖಾ ಕಾಖಂಡಕಿ ಎಚ್ . ಜಿ ರಾಧಾದೇವಿ. ಎಂ. ಕೆ ಇಂದಿರಾರ ಹಾಗೂ ಇನ್ನಿತರರ ಕಾದಂಬರಿಗಳನ್ನು ಹಾಗೆ ಕಾರಂತರ ಭೈರಪ್ಪರ ಕಾದಂಬರಿಗಳನ್ನು ಓದಿದೆ. ಆದರೆ ಈ ಎಲ್ಲಾ ಕಾದಂಬರಿಗಳಿಗಿಂತ ನನಗೆ ಅಚ್ಚು ಮೆಚ್ಚಾದದ್ದು ಶ್ರೀ ಎಂಡಮೂರಿ ಅವರ ಕಾದಂಬರಿಗಳು . ಅವುಗಳನ್ನು ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲೇ ಆಗುವದಿಲ್ಲ. ಅಷ್ಟೊಂದು ಥ್ರಿಲ್ಲಿಂಗ್ ಇರುತ್ತವೆ. ಇಷ್ಟೊಂದು ಸುಂದರವಾಗಿ ಪುಸ್ತಕ ಕೆಳಗಿಡಲೇ ಆಗದಂತೆ ಕಾದಂಬರಿ ಬರೆಯುವವರು ಕನ್ನಡದಲ್ಲಿ ಇಲ್ಲವಲ್ಲಾ ಎಂದು ನಾನು ಕೊರಗುತ್ತಿದ್ದೆ. ಆ ಕೊರಗನ್ನು ತುಂಬಿದವರೇ ಶ್ರೀ ಕೆ. ಎನ್ ಗಣೇಶಯ್ಯನವರು.

ಶ್ರೀ ಗಣೇಶಯ್ಯನವರ ಕಾದಂಬರಿಗಳು ಯಾಕೆ ಇಷ್ಟವಾಗುತ್ತವೆಂದರೆ ಒಂದನೆಯದು ಬರವಣಿಗೆಯಲ್ಲಿನ ಥ್ರಿಲ್ಲಿಂಗ್. ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ.ಇತಿಹಾಸ ಪುಸ್ತಕವನ್ನು ಓದುವದೆಂದರೆ ತುಂಬಾ ಬೇಜಾರು ಮಾಡಿಕೊಳ್ಳುವವರಿಗಾಗಿ ಸುಂದರ ಚೌಕಟ್ಟಿನಲ್ಲಿ ಕಥಾ ರೂಪದಲ್ಲಿ ಇತಿಹಾಸ ತಿಳಿಸುವದು ಗಣೇಶಯ್ಯ ಕಾದಂಬರಿಯ ಉದ್ದೇಶಗಳೆನ್ನಬಹುದು. ಕೇವಲ ರೋಚಕತೆಗಾಗಿ ಏನೋ ಒಂದನ್ನು ಹೇಳದೇ ಅವರು ಐತಿಹಾಸಿಕ ಸಾಕ್ಷಿ ಪುರಾವೆಗಳ ಸಮೇತ ತಿಳಿಸುತ್ತಾರೆ. ಅವುಗಳನ್ನು ಯಾರೂ ಪರೀಕ್ಷೆ ಮಾಡಬಹುದಾಗಿದೆ.

ಮತ್ತಷ್ಟು ಓದು »

6
ಡಿಸೆ

ರಾಮ ಜನ್ಮಭೂಮಿ/ಬಾಬರಿ ವಿವಾದ : ಭೂತಕಾಲದ ತಪ್ಪುಗಳು ಭವಿಷ್ಯಕ್ಕೆ ಭಾರವಾಗಬಾರದು

– ರಾಕೇಶ್ ಶೆಟ್ಟಿ

Ayodhya Issue and Unityಮುಂಬೈನಿಂದ ನಾನು ಬೆಂಗಳೂರಿಗೆ ಹೊರಟಿದ್ದ ಸೆಪ್ಟಂಬರ್ ೩೦,೨೦೧೦ರ ಗುರುವಾರದ ಆ ದಿನ ಉಳಿದ ದಿನಗಳಂತೆ ಇರಲಿಲ್ಲ.ಒಂದು ಬಗೆಯ ಕುತೂಹಲ,ಕಾತರ,ಆತಂಕಗಳು ಭಾರತದ ಬಹುತೇಕರಲ್ಲಿ ಮನೆ ಮಾಡಿದ್ದ ದಿನವದು.ಅಲಹಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆಯ “ರಾಮ ಜನ್ಮ ಭೂಮಿ/ಬಾಬರಿ ಮಸೀದಿ” ವಿವಾದದ ಕುರಿತು ತೀರ್ಪು ನೀಡುವ ದಿನವಾಗಿತ್ತದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದವು,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಕಣ್ಗಾವಲಿತ್ತು.ಜನರ ಜೊತೆಗೆ ವಿಶೇಷವಾಗಿ ಟಿ.ಆರ್.ಪಿ ಮಾಧ್ಯಮಗಳು ಕೂಡ ಸಂಯಮದಿಂದ ವರ್ತಿಸಬೇಕು ಎನ್ನುವ ಮನವಿಗಳು ಸರ್ಕಾರದಿಂದಲೇ ಬರುತಿತ್ತು.ಮಧ್ಯಾಹ್ನ ೩.೩೦ರ ಸುಮಾರಿಗೆ ತೀರ್ಪು ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡುತಿದ್ದವು.ನನ್ನ ವಿಮಾನವಿದ್ದಿದ್ದು ಸಂಜೆಯ ವೇಳೆಗೆ.ಆದರೆ,ಬಾಬರಿ ಮಸೀದಿ ಧರಾಶಾಹಿಯಾದ ಮೇಲೆ ಭೀಕರ ದಂಗೆಗೆ ಸಾಕ್ಷಿಯಾಗಿದ್ದ ಮುಂಬೈನಲ್ಲಿ ತೀರ್ಪು ಹೊರಬಂದ ಮೇಲೆ ಏನಾದರೂ ಆಗಬಾರದ್ದು ಶುರುವಾದರೇ,ಅದಕ್ಕೂ ಮುಖ್ಯವಾಗಿ ನಾನು ಹೋಗಬೇಕಾದ ದಾರಿಯಲ್ಲೇ “ಅತಿ ಸೂಕ್ಷ್ಮ ಪ್ರದೇಶ”ಗಳು ಇದ್ದವಾದ್ದರಿಂದ,ಸೇಫರ್ ಸೈಡ್ ಎಂಬಂತೆ ತುಸು ಬೇಗವೇ ನಾನು ಮತ್ತು ನನ್ನ ಸಹುದ್ಯೋಗಿ ಕ್ಯಾಬ್ ಹತ್ತಿಕೊಂಡೆವು.

ಕ್ಯಾಬ್ ಹೊರಟಂತೇ,ಡ್ರೈವರ್ ಅನ್ನು ಮಾತಿಗೆಳೆದೆ.”ಇವತ್ತು ತೀರ್ಪು ಬರಲಿಕ್ಕಿದೆಯಲ್ಲ.ನಿಮಗೇನನ್ನಿಸುತ್ತದೆ,ಆ ಜಾಗ ಯಾರಿಗೆ ಸೇರಿಬೇಕು ನಿಮ್ಮ ಪ್ರಕಾರ?”.ಅವರು ನನ್ನತ್ತ ತಿರುಗಿ “ತಪ್ಪು ತಿಳಿಯಬೇಡಿ ಸರ್.ನಿಮ್ಮ ಪ್ರಶ್ನೆಯೇ ಸರಿಯಿಲ್ಲ.ಜಾಗ ಯಾರಿಗೆ ಸೇರಬೇಕು ಎನ್ನುವುದು ‘ಅಹಂ’ನ ಪ್ರಶ್ನೆಯಾಗುತ್ತದೆ.ಆ ಅಹಂ ಮುಂದೇ ಪ್ರತಿಷ್ಟೆ, ದ್ವೇಷವನ್ನಷ್ಟೇ ಹೊರಡಿಸುತ್ತದೆ.ಅಸಲಿಗೆ ಇದು “ನಂಬಿಕೆ”ಯ ಪ್ರಶ್ನೆ.ಈ ಸಮಸ್ಯೆಯ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ,ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ.ಆ ಜಾಗ ರಾಮ ಜನ್ಮಭೂಮಿಯೆಂಬುದು ಹಿಂದೂಗಳ ನಂಬಿಕೆಯಾಗಿದೆ.ಮೊಘಲ ಬಾಬರ್ ಆದೇಶಂತೆ ಅಲ್ಲಿದ್ದ ಮಂದಿರವೊಂದನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿರುವ ವಾದವಿದೆಯಲ್ಲ ಸರ್ ಅದು ನಿಜವೇ ಆದರೆ,ಅಲ್ಲಿ ಮಂದಿರವೇ ನಿರ್ಮಾಣವಾಗಬೇಕು.ಯಾಕೆಂದರೆ ರಾಮ,ರಾಮಾಯಣ,ಕೃಷ್ಣ,ಮಹಾಭಾರತವೆಲ್ಲ ಈ ದೇಶದ ಜನರಿಗೆ ಕೇವಲ ಪುರಾಣಗಳಲ್ಲ.ಅವು ಜನರ ಜೀವನದ ಭಾಗಗಳು.ಹೀಗಿರುವಾಗ ಅಲ್ಲಿನ ಜನರ ನಂಬಿಕೆಗಳಿಗೆ ಬೆಲೆ ಕೊಟ್ಟು ಬಾಬರಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದ.

ಮತ್ತಷ್ಟು ಓದು »

27
ನವೆಂ

ಒಂದಿಡಿ ಜನಾಂಗಕ್ಕೆ ಕಂಟಕವಾದವರನ್ನು ವೈಭವೀಕರಿಸುವುದೇಕೆ?

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

Frncis Xvierನ.16 ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ‘ಫ್ರಾನ್ಸಿಸ್ ಕ್ಸೇವಿಯರ್ ಪಾರ್ಥಿವ ಶರೀರ ಪ್ರದರ್ಶನಕ್ಕೆ ಅಪಸ್ವರ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಂತನೆಂದು ಹೇಳಲಾಗುವ ಪ್ರಾನ್ಸಿಸ್ ಕ್ಸೇವಿಯರ್‍ರ ಬಗ್ಗೆ ವರದಿಯಾಗಿತ್ತು. ಆತನ ಪಾರ್ಥಿವ ಶರೀರ ನ.22 ರಿಂದ ಜ.4 ರ ವರೆಗೆ ಸಾರ್ವಜನಿಕ ದರ್ಶನಕ್ಕಿಡಲಾಗುತ್ತಿದೆ.

ಈ ನಡುವೆ ಈ ವಿವಾದಿತ ಸಂತನ ವಿಚಾರದಲ್ಲಿ ಆತನು ನಡೆಸಿದ ಮತಾಂತರದ ಕ್ರೌರ್ಯ ಹಾಗೂ ಮಾರಣಹೋಮ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದೂ ಈತ ಒಬ್ಬ ಮಹಾನ್ ಸಂತ ಎಂದು ಆತನನ್ನು ವೈಭವೀಕರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತದ ಸಂತ ಪರಂಪರೆಗೂ ಪಾಶ್ಚತ್ಯ ಸಂತ ಪರಂಪರೆಗೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ಆತ ಯಾವುದೇ ಜಾತಿಗೆ ಸೇರಿರಲಿ ಆತ ಮಾಡಿದ ಮಾನವತೆಯ ಸೇವೆಯನ್ನು ಅತ್ಯಂತ ಕೃತಜ್ಞತೆಯನ್ನು ಸ್ಮರಿಸಿ, ಆತನಿಗೆ ಸಂತ ಪದವಿ ನೀಡುವುದು ಈ ನೆಲದ ಪರಂಪರೆ. ಆದರೆ ಪಾಶ್ಚತ್ಯ ಜಗತ್ತಿನ ಸಂತ ಪದವಿಯನ್ನೇರಲು ಇಂಥಹ ಮಾನದಂಡವೇನಿಲ್ಲ ಎನಿಸುತ್ತದೆ!  ಒಬ್ಬ ವ್ಯಕ್ತಿ ತನ್ನ ಮತದ ಹಿತಕ್ಕೆ ಪೂರಕವಾಗಿ ನಡೆದು, ಇತರ ಮತಗಳ ಅವಹೇಳನ ಗೈದು ಇತರ ಮತೀಯರ ಮೇಲೆ ಮರಣ ಮೃದಂಗ ಬಾರಿಸಿದರೆ ಆತ ಶ್ರೇಷ್ಠನೆಂದು ಪರಿಗಣಿತವಾಗುತ್ತದೆ ಎನ್ನುವುದಕ್ಕೆ ಕ್ಸೇವಿಯರ್ ಸಂತ ಪದವಿ ಅಲಂಕರಿಸಿದ್ದೇ ಸಾಕ್ಷಿ ಎನ್ನಬೇಕಾಗುತ್ತದೆ. ಇನ್ನೊಂದು ಮತದ ನಂಬಿಕೆಗಳ ವಿರುದ್ಧ ನಡೆದುಕೊಂಡಾಗಲೂ ಅವನನ್ನು ಆರಾಧಿಸುವ ಮನಸ್ಥಿತಿ ಏರ್ಪಟ್ಟರೆ ಅತನನ್ನು ಯಾವ ಅರ್ಥದಲ್ಲಿ ಸಂತ ಎನ್ನ ಬಹುದು ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಈ ಹಿನ್ನೆಲೆಯಲ್ಲಿ ಕ್ಸೇವಿಯರ್ ಒಬ್ಬ ಸಂತನೆಂದು ಕ್ರೈಸ್ತ ಸಮಾಜ ಒಪ್ಪಿಕೊಂಡರೂ ಮಾನವತೆಯ ನೆಲೆಗಟ್ಟಿನಲ್ಲಿ ಯೋಚಿಸುವ ಯಾವುದೇ ಜನಾಂಗ ಇದನ್ನು ಒಪ್ಪಲು ಸಾಧ್ಯವಾಗುವುದಿಲ್ಲ.
ಮತ್ತಷ್ಟು ಓದು »

19
ಆಕ್ಟೋ

ಇತಿಹಾಸದಿಂದ ಏನನ್ನೂ ಕಲಿಯಲು ಸಿದ್ಧರಾಗಿದ್ದಲ್ಲಿ,ಮರುಕಳಿಸುವ ಇತಿಹಾಸವನ್ನೇ ನೋಡಬೇಕಾಗುತ್ತದೆ

 – ಮಯೂರಲಕ್ಷ್ಮಿ

ಇತಿಹಾಸಜಾರ್ಜ ಸಂತಾಯನ ಎನ್ನುವ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ಇತಿಹಾಸವನ್ನು ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾನೆ.

ಒಂದು ದೇಶದ ಸಂಸ್ಕೃತಿಯ ದ್ಯೋತಕ ಅದರ ಪರಂಪರೆ ಧ್ಯೇಯ ನಿಷ್ಠೆ ಮತ್ತು ಅದರ ಇತಿಹಾಸವನ್ನೂ ಅವಲಂಬಿಸಿದೆ.

ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶಗಳು ಸುಭಿಕ್ಷವಾಗುವುದು ತನ್ನಲ್ಲಿ ಅಂತರ್ಗತವಾಗಿರುವ ಐತಿಹಾಸಿಕ ಮೌಲ್ಯಗಳ ಜಾಗೃತಿಯಿಂದ ಮಾತ್ರ.

ತಮ್ಮ ಅಸಾಧಾರಣ ಇಚ್ಛಾಶಕ್ತಿಯಿಂದ ಅಪರಿಮಿತ ಸಂಕಲ್ಪಶಕ್ತಿಯಿಂದ ಇತಿಹಾಸವನ್ನೇ ನಿರ್ಮಿಸಿದವರ ಸಂಖ್ಯೆ ಅತ್ಯಾಧಿಕ. ಇಂತಹ ಇತಿಹಾಸದ ಅರಿವು ಶಿಕ್ಷಣದಿಂದ ಮಾತ್ರ ಸಾಧ್ಯವೇ? ಹಾಗಿದ್ದಲ್ಲಿ ಇತಿಹಾಸವನ್ನು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಇತಿಹಾಸ ಇರಬೇಕೋ ಅಥವಾ ಐಚ್ಛಿಕವಾಗಿ ಕಲಿಯಬೇಕೋ ಎನ್ನುವ ಪ್ರಶ್ನೆ ಮೂಡುವುದು.

ಒಂದು ವ್ಯವಸ್ಥೆಯಲ್ಲಿ ಸಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಇತಿಮಿತಿಗಳನ್ನರಿತು ಅವಲೋಕಿಸಿದಾಗ ನಮ್ಮ ಮುಂದಿನ ದೇಶದ ರೂವಾರಿಗಳಾದ ಇಂದಿನ ಯುವಶಕ್ತಿಗೆ ಇತಿಹಾಸವನ್ನೂ ಇತಿಹಾಸದಿಂದ ನಾವು ಕಲಿತಿರುವ ಮತ್ತು ಕಲಿಯಬೇಕಾಗಿರುವುದನ್ನೂ ಅರಿಯಬೇಕಾದ ಇತಿಹಾಸ ಪ್ರಜ್ಞೆ ಇದೆಯೇ? ಅಥವಾ ಜಾಗೃತವಾಗಿಲ್ಲವೇ? ನಮ್ಮ ತರುಣ ಪೀಳಿಗೆಯನ್ನು ಗತವೈಭವ ಎನ್ನುವ ನಮ್ಮ ಇತಿಹಾಸದತ್ತ ಸಂಪರ್ಕಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ಮತ್ತಷ್ಟು ಓದು »

28
ಜುಲೈ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1

ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.

ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು. ಮತ್ತಷ್ಟು ಓದು »

18
ಜುಲೈ

ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ:

– ರಾಘವೇಂದ್ರ ಸುಬ್ರಹ್ಮಣ್ಯ

Ek Bharath Shresht Bharathಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.

ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.

ಮತ್ತಷ್ಟು ಓದು »

17
ಜುಲೈ

ಶಾ ಬಾನು,ಫೆಮಿನಿಸಂ,ಸೆಕ್ಯುಲರಿಸಂ ಮತ್ತು ಸಮಾನ ನಾಗರೀಕ ಸಂಹಿತೆ

– ರಾಕೇಶ್ ಶೆಟ್ಟಿ

Uniform Civil Codeದೇಶದಲ್ಲಿರುವ ಷರಿಯತ್ ಕೋರ್ಟುಗಳಿಗೆ ಕಾನೂನು ಮಾನ್ಯತೆಯಿಲ್ಲ.ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿದ ತೀರ್ಪು ಮತ್ತೊಮ್ಮೆ “ಸಮಾನ ನಾಗರೀಕ ಸಂಹಿತೆ”ಯ ಜಾರಿಯ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ. ಸಮಾನ ನಾಗರೀಕ ಸಂಹಿತೆಯ ಜೊತೆ ಜೊತೆಗೆ ಈ ತೀರ್ಪಿನ ಜೊತೆಗೆ ನೆನಪಾಗುವುದು ೮೦ರ ದಶಕದ ’ಶಾ ಬಾನು ಪ್ರಕರಣ’

ಏನಿದು ಶಾ ಬಾನು ಪ್ರಕರಣ : ಇಂದೋರಿನ ವಕೀಲ ಮೊಹಮ್ಮದ್ ಅಹ್ಮದ್ ಖಾನ್ ನ ಪತ್ನಿ ಶಾ ಬಾನು.ಮದುವೆಯಾಗಿ ೧೪ ವರ್ಷಗಳ ನಂತರ ಎರಡನೇ ಮದುವೆಯಾದ ಅಹ್ಮದ್ ಖಾನ್.ಇಬ್ಬರು ಹೆಂಡಿರ ಜೊತೆ ಸಂಸಾರ ನಡೆಸಿ ಕಡೆಗೆ ಕೆಲ ವರ್ಷಗಳ ನಂತರ ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನುವನ್ನು ಆಕೆಯ ೬೨ನೇ ವಯಸ್ಸಿನಲ್ಲಿ ಆಕೆಯ ಐದು ಮಕ್ಕಳ ಜೊತೆಗೆ ಹೊರಹಾಕಿದ.ಒಪ್ಪಂದದಂತೆ ಮಾಸಿಕ ೨೦೦ ರೂ ಜೀವನಾಂಶವನ್ನು ಆಕೆಗೆ ನೀಡದಿದ್ದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಏಪ್ರಿಲ್ ೧೯೭೮ರಲ್ಲಿ ದಾವೆ ಹೂಡುತ್ತಾರೆ ಶಾ ಬಾನು.ಮಾಸಿಕ ೫೦೦ರೂ ಜೀವನಾಂಶ ಬೇಕೆಂದು ಕೇಳಿಕೊಳ್ಳುತ್ತಾರೆ.

ನವೆಂಬರ್ ೧೯೭೮ರಲ್ಲಿ ಖಾನ್ ಶಾ ಬಾನು ಅವರಿಗೆ ತಲಾಖ್ ನೀಡಿ,ಈಗ ಆಕೆ ನನ್ನ ಪತ್ನಿಯಲ್ಲ ಮತ್ತು ಆಕೆಗೆ ಇಸ್ಲಾಮಿಕ್ ಲಾ ಮೂಲಕ ಕೊಡಬೇಕಾದ ೫,೪೦೦ ರೂ ಬಿಟ್ಟರೆ ನಾನು ಇನ್ನಾವುದೇ ಹಣವನ್ನು ಕೊಡಬೇಕಾಗಿಲ್ಲ ಎಂದು ವಾದಿಸುತ್ತಾನೆ ಖಾನ್.ಆಗಸ್ಟ್ ೧೯೭೯ರಲ್ಲಿ ಸ್ಥಳೀಯ ನ್ಯಾಯಾಲಯ ಮಾಸಿಕ ೨೫ರೂ ನೀಡುವಂತೆ ತೀರ್ಪು ಕೊಟ್ಟಿತ್ತು.ಶಾ ಬಾನು ಕೇಸನ್ನು ಹೈಕೋರ್ಟಿಗೆ ಕೊಂಡೊಯ್ದರು.ಅಲ್ಲಿ ಶಾ ಬಾನು ಪರವಾಗಿ ೧೯೮೦ರ ಜುಲೈನಲ್ಲಿ ಬಂದ ತೀರ್ಪು ಮಾಸಿಕ ೧೭೯ ರೂ ನೀಡುವಂತೆ ತೀರ್ಪು ನೀಡುತ್ತದೆ.ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಖಾನ್ ಹೋಗುತ್ತಾನೆ.ಶಾ ಬಾನು ಈಗ ನನ್ನ ಪತ್ನಿಯಲ್ಲ ಇಸ್ಲಾಮಿಕ್ ಕಾನೂನಿಂತೆ ಆಕೆಗೆ ನಾನು ತಲಾಖ್ ನೀಡಿ ಎರಡನೇ ಮದುವೆಯಾಗಿದ್ದೇನೆ ಎನ್ನುತ್ತಾನೆ.

ಮತ್ತಷ್ಟು ಓದು »

25
ಜೂನ್

ಇತಿಹಾಸ ಮರು ಕಲಿಸಬೇಕೇ?

-ಅ.ಸು.ರವೀಂದ್ರ,ಶಿವಮೊಗ್ಗ

Eminent HistoriansHistory Repeats. ಇತಿಹಾಸ ಮರುಕಳಿಸುತ್ತಿದೆ. ಯಾವುದೇ ಮಹತ್ತರ ಘಟನೆ ಪುನರಾವರ್ತನೆಗೊಂಡಾಗ ಮಾಧ್ಯಮಗಳಲ್ಲಿ ಕೇಳಿ ಬರುವ ಪದಗಳಿವು. ಆದರೆ ಈಗಿನ ಚರ್ಚೆಯ ವಿಷಯ ಇತಿಹಾಸವನ್ನು ಮರು `ಕಲಿಸುವ` ಬಗ್ಗೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಭಾ.ಜ.ಪ. ಸರ್ಕಾರ ಅಧಿಕಾರಕ್ಕೆ ಬರುತ್ತಲೆ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯ ಪ್ರಕಾರ ಇತಿಹಾಸದ ಪಾಠಗಳನ್ನು ತಿದ್ದಬಹುದೆಂಬ ಹುಯಿಲು ಎಡಪಂಥೀಯ ಹಾಗೂ ಮೆಕಾಲೆ ಗೋತ್ರಜರಿಂದ ಆರಂಭವಾಗಿದೆ. ಎನ್.ಡಿ.ಎ. ಸರ್ಕಾರದ ಅಧಿಕಾರದ ಸಂದರ್ಭದಲ್ಲಿಯೇ ಆಗಿನ ಸಚಿವ ಶ್ರೀ ಮುರಳಿ ಮನೋಹರ ಜೋಷಿಯವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರಾದರೂ ಹೆಚ್ಚಿನ ಯಶ ಕಂಡಿರಲಿಲ್ಲ. ಆಗ ಹುಸಿ ಜಾತ್ಯಾತೀತ ವಾದದ ಭ್ರಮೆ ನಮ್ಮ ರಾಜಕೀಯ ಕ್ಷೇತ್ರವನ್ನು ಆವರಿಸಿದ್ದ ಕಾಲ. ಮೈತ್ರಿಕೂಟದ ಮಿತ್ರ ಪಕ್ಷಗಳೂ ಈ ವಿಚಾರದಲ್ಲಿ ಭಾ.ಜ.ಪ.ವನ್ನು ಬೆಂಬಲಿಸಲು ತಯಾರಿರಲಿಲ್ಲ. ಬೌದ್ಧಿಕ ಕ್ಷೇತ್ರದಲ್ಲಿ ದಶಮಾನಗಳಿಂದ ಪ್ರತಿಷ್ಠಾಪಿಸಿದ್ದ ವರ್ಗಕ್ಕೆ ಇತಿಹಾಸ, ಪರಂಪರೆ, ಸ್ವಾಭಿಮಾನಿ ರಾಷ್ಟ್ರ ಭಕ್ತಿಯಂತಹ ವಿಷಯಗಳು ಹೇಗೂ ವರ್ಜ್ಯವಾಗಿದ್ದವು. ಇವರ ತಾಳಕ್ಕೆ ಕುಣಿಯುವ ಮಾಧ್ಯಮಗಳು ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಈ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲು ಅವಕಾಶವನ್ನೇ ಕೊಡಲಿಲ್ಲ. ಸ್ವಯಂ ಬಹುಮತವಿಲ್ಲದ ಪಕ್ಷ ದಿಟ್ಟ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಗಂಗೆ ಯಮುನೆಯರಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಾಪಿತ ಎಲ್ಲಾ ಸೈದ್ಧಾಂತಿಕ ಮಿಥ್ಯೆಗಳನ್ನು ನಿವಾಳಿಸಿ ಮತದಾರ ತೀರ್ಪು ನೀಡಿದ್ದಾನೆ, ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಹೊಸ ಶಕೆಯನ್ನು ಆರಂಭಿಸುವ ಆಡಳಿತ ಪಕ್ಷದ ಭರವಸೆಗಳನ್ನು ನಂಬಿ ಆದೇಶ ನೀಡಿದ್ದಾನೆ.

ಈಗ ಪ್ರಶ್ನೆ ಎದ್ದಿರುವುದು ನಮಗೆ ಇಂತಹ ಇತಿಹಾಸದ ಪಾಠಗಳ ಪುನರ್ವಿಮರ್ಶೆ ಅಗತ್ಯವಿದೆಯೋ ಇಲ್ಲವೋ ಎಂಬುದು. ಇದೆ ಎಂದಾದಲ್ಲಿ ಹಿಂದಿನ ವ್ಯವಸ್ಥೆಯ ಲೋಪವನ್ನು ಒಫ್ಫಿಕೊಂಡು ಸರಿಪಡಿಸಿಕೊಳ್ಳಬೇಕು. ಇಲ್ಲವೆಂದಾದಲ್ಲಿ ಈವರೆಗೆ ಅನುಸರಿಸಿದ ಕ್ರಮಗಳಿಂದ ನಾವು ಸಾಧಿಸಿರುವುದಾದರೂ ಏನು ಎಂಬುದರ ಮೌಲ್ಯಮಾಪನ ಆಗಬೇಕು. ೧೯೪೭ ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದಾಗಲೇ ಇಂತಹ ಕ್ರಮದ ಅಗತ್ಯ ಇತ್ತು. ಆಗ ನಮಗೆ ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿತ್ತು. ಆದರೆ ಎರಡು ಶತಮಾನಗಳ ಅವರ ಆಡಳಿತದ ಪ್ರಭಾವದಿಂದಾಗಿ ನಮ್ಮ ವೈಚಾರಿಕ, ಸಾಂಸ್ಕೃತಿಕ ವಿಚಾರಗಳ ದಾಸ್ಯದ ಮನಸ್ಥಿತಿ ಬದಲಾಗಲೇ ಇಲ್ಲ. ಪಂಡಿತ್ ನೆಹರೂರವರು ಮನಸ್ಸು ಮಾಡಿದಲ್ಲಿ ಒಂದು ಸ್ವತಂತ್ರ ಸ್ವಾಭಿಮಾನಿ ರಾಷ್ಟ್ರಕ್ಕೆ ಅಗತ್ಯವಾಗಿದ್ದ, ತನ್ನ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನವುಳ್ಳ, ಅಂತಹ ಧೀಃಶಕ್ತಿಯನ್ನು ಪ್ರೇರೇಪಿಸಬಲ್ಲ ನವಪೀಳಿಗೆಯನ್ನು ಬೆಳೆಸಬಹುದಿತ್ತು. ಸ್ವಾತಂತ್ರ್ಯ ಪಡೆದ ಘಳಿಗೆಯಲ್ಲಿನ ಜನಮಾನಸದ ಹುಮ್ಮಸ್ಸು, ಮನಸ್ಥಿತಿ, ಅಂತಹ ಕ್ರಮಗಳಿಗೆ ಪೂರಕವಾಗಿ ಸ್ಪಂದಿಸುವುದರಲ್ಲಿ ಅನುಮಾನವಿರಲಿಲ್ಲ. ಅವರ ಅಂದಿನ ಆಡಳಿತಾತ್ಮಕ ಕ್ರಮಗಳು ಪ್ರಜಾ ಸಂಕುಲಕ್ಕೆ ಹೊಟ್ಟೆ ಬಟ್ತೆ ನೀಡುವ ಮಟ್ಟಿಗೆ ಸೀಮಿತವಾಗಿದ್ದವು ಅನ್ನಿಸುತ್ತವೆ. ದೇಶವೊಂದರ ಚುಕ್ಕಾಣಿ ಹಿಡಿದ ನಾಯಕತ್ವಕ್ಕೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಆದ್ಯತೆಗಳೂ ಇರುತ್ತವೆ ಎಂಬುದನ್ನು ಅಂದಿನ ಸರ್ಕಾರ ಮರೆತಿದ್ದೇ ನಾವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವಿಸುತ್ತಿರುವ ಅನಾಥ ಪ್ರಜ್ಞೆಗೆ ಕಾರಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಮತ್ತಷ್ಟು ಓದು »

19
ಜೂನ್

ಕಲ್ಬುರ್ಗಿ,ಕಲ್ಲು ಮತ್ತು Colonial Consciousness

– ರಾಕೇಶ್ ಶೆಟ್ಟಿ

consciousnessಬೆಂಗಳೂರಿನ ವಿಜ್ಞಾನ ಭವನದಲ್ಲಿ ಜೂನ್ ೯ರ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ವಯಸ್ಸಿನಲ್ಲಿ ಹಿರಿಯರಾದ (ಕೇವಲ ವಯಸ್ಸಿನಲ್ಲಷ್ಟೇ) ಪ್ರೊ.ಎಂ.ಎಂ. ಕಲ್ಬುರ್ಗಿಯವರು, ” ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು. ಅವುಗಳಿಗೆ ಕಾಯುವ ಶಕ್ತಿಯೂ ಇಲ್ಲ, ಕಾಡುವ ಶಕ್ತಿಯೂ ಇಲ್ಲ. ದೇವತೆ, ದೇವಾಲಯಗಳ ವಿರುದ್ಧ ಚಳವಳಿ ನಡೆಯಬೇಕು.” ಅಂತೆಲ್ಲ ಬಡಬಡಿಸಿ ಎಲ್ಲರಿಂದ ತಪರಾಕಿ ಹಾಕಿಸಿಕೊಂಡ ಮೇಲೆ “ನಾ ಹಂಗೇ ಹೇಳೇ ಇಲ್ಲಾರೀ, ನಾನು ಹಿಂದೂ ಇದ್ದೀನಿ, ನಾನ್ಯಾಕೇ ಮೂತ್ರ ಮಾಡಿ ಅಂತ ಹೇಳ್ತೀರ್ರೀ… ಅನಂತಮೂರ್ತಿ ಹಿಂಗ್ ಬರ್ದಾರಾ ಅಂತ ನಾನ್ ಸಭಿಯೋಳಗ ಹೇಳಿನ್ರೀ… ತಪ್ಪ್ ತಿಳಿ ಬ್ಯಾಡರ್ರೀ…” ಅಂತೆಲ್ಲ ಸೃಷ್ಟೀಕರಣ ಕೊಟ್ಟರು.

ನಿಜವಾಗಿ ಕಲ್ಬುರ್ಗಿಯವರ ಮನಸ್ಸಿನಲ್ಲಿದ್ದಿದ್ದು “ಮೂರ್ತಿ”ಗಳ ಮೇಲೆ ಮೂತ್ರ ಮಾಡಿದ ಹೊರೆ ಹೊರಿಸಿ ಅದರ ಜೊತೆಗೆ ಮೂರ್ತಿ ಪೂಜೆ ಮಾಡುವ ಜನರ “ಮೌಢ್ಯ” (ಅವರ ಮಂದ ಬುದ್ದಿಯ ಪ್ರಕಾರ) ನಿವಾರಿಸುವುದಾಗಿತ್ತು ಅನ್ನಿಸುತ್ತದೆ.ಕಲ್ಬುರ್ಗಿಯವರು ಹೀಗೆ ಹೇಳಿಕೆ ಕೊಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ (“ಮೂರ್ತಿ” ಮತ್ತು “ಮೌಢ್ಯ”) ಹೊಡೆಯುವ ಆಲೋಚನೆಯಲ್ಲಿದ್ದರೇನೋ.ಪಾಪ!

“ಮೂರ್ತಿ”ಗಳ ಮೇಲೆ ಕಲ್ಬುರ್ಗಿಯವರಿಗೆ ಈ ವಿಶೇಷ ಮಮತೆ ಯಾಕೆ? ಪ್ರಜಾವಾಣಿಯಲ್ಲಿ “ಮೂರ್ತಿ”ಗಳಿಗೆ ೧೦ ಲಕ್ಷ ಸರ್ಕಾರಿ ಕಾಣಿಕೆ ಕೊಟ್ಟದ್ದನ್ನು ವಿರೋಧಿಸಿ ಸೋತುಹೋಗಿದ್ದ ಕಲ್ಬುರ್ಗಿಗಳು,”ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ” ಅನ್ನುವ ಮೂಲಕ ಸೇಡು ತೀರಿಸಿಕೊಂಡರು, ಅನ್ನುವಲ್ಲಿಗೆ ಅವರ ಹೇಳಿಕೆಯ ಮೊದಲನೇ “ಹಕ್ಕಿ” ಯಾವುದೆಂದು ಹೊಳೆಯುತ್ತದೆ.

ಅಸಲಿಗೆ ತಪ್ಪೆಲ್ಲ ಆಯ್ಕೆ ಸಮಿತಿಯದ್ದು!
“ಪರಾವಲಂಬಿ ಜೀವಿ”ಗಳ ನಡುವೆ “ಪ್ರಶಸ್ತಿ/ಹಣ”ವನ್ನು ಸಮನಾಗಿ ಹಂಚಿದ್ದರೆ ಮೂತ್ರ,ಮೂರ್ತಿ ಇತ್ಯಾದಿ ವಿವಾದಗಳೇ ಆಗ್ತಿರ್ಲಿಲ್ಲ ಮಾರ್ರೆ. ಎಲ್ಲವನ್ನೂ ಒಬ್ಬರಿಗೆ ಕೊಟ್ಟರೆ.ಇನ್ನೊಬ್ಬರಿಗೆ (ತಮಗಾದ) ಅನ್ಯಾಯವನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ(!) ಇದ್ದೇ ಇರುತ್ತದಪ್ಪ… (ಸೂ : “ಪರಾವಲಂಬಿ ಜೀವಿ”ಗಳನ್ನು ಕೆಲವರು “ಬುದ್ಧಿಜೀವಿ”ಗಳು ಅನ್ನುತ್ತಾರೆ.ನಾನು ಇನ್ಮುಂದೆ ಪ್ರೀತಿಯಿಂದ “ಪರಾವಲಂಬಿ ಜೀವಿ” ಎನ್ನುತ್ತೇನೆ)

ಮತ್ತಷ್ಟು ಓದು »