ವಿಷಯದ ವಿವರಗಳಿಗೆ ದಾಟಿರಿ

Posts from the ‘ಕರ್ನಾಟಕ,ಕನ್ನಡ’ Category

24
ಡಿಸೆ

ಬೆಂಗಳೂರು-ಮಂಗಳೂರು ಬಸ್ಸಲ್ಲಿ…!

ವೇಣುವಿನೋದ್, ಪತ್ರಕರ್ತರು, ಮಂಗಳೂರು

ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…

ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ. ಮತ್ತಷ್ಟು ಓದು »

23
ಡಿಸೆ

ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?

ವಸಂತ ಶೆಟ್ಟಿ, ಬೆಂಗಳೂರು

ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಮತ್ತಷ್ಟು ಓದು »

15
ಡಿಸೆ

ಕೋರೆ-ಷಡಕ್ಷರಿ-ಮಯ್ಯ ಶುರು ಮಾಡ್ತಾರಂತೆ ಸುವರ್ಣ ಕರ್ನಾಟಕ…ಹೌದಾ?

ಆತ್ರಾಡಿ ಸುರೇಶ ಹೆಗ್ಡೆ

ಹೌದು ಸುದ್ದಿಮನೆಯ ಸುತ್ತುಮುತ್ತಲಿಂದ, ಹೊಸ ಹೊಸ ಗಾಳಿ ಸುದ್ದಿಗಳು, ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳೊಂದಿಗೆ, ಯಾವುದೇ ಲಂಗು ಲಗಾಮಿಲ್ಲದೇ ತೇಲಿಬರುತ್ತಿವೆ.

ನಿನ್ನೆ ಸಂಜೆ ವಿಶೇಷವಾಗಿ ನನ್ನ ಕಿವಿಗಳಿಗೆ ಕೇಳಿಸಿದ ಪಿಸುಮಾತುಗಳ ಪ್ರಕಾರ, ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ನವದೆಹಲಿಯಿಂದ ಬೆಂಗಳೂರಿಗೆ, ಹೊಸ ಸುದ್ದಿಯೊಂದನ್ನು, ಹೊಸ ಯೋಜನೆಯೊಂದರ ರೂಪುರೇಷೆಯನ್ನು ಗುಟ್ಟಾಗಿ ಹಿಡಿದುಕೊಂಡು ಬಂದಿರುತ್ತಾರಂತೆ.

ವಿಜಯ ಸಂಕೇಶ್ವರರ “ಆನಂದ ಕರ್ನಾಟಕ”ದ ಯೋಜನೆಗಳು ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಉದ್ಯಮಿ ಹಾಗೂ ಸಂಸದ ಪ್ರಭಾಕರ ಕೋರೆಯವರು ಮೀನಿಗೆ ಗಾಳ ಬೀಸಿದ್ದಾರೆ ಎನ್ನುವ ಸುದ್ದಿ ಇದೆ.

ಅಣಿಮುತ್ತುಗಳನ್ನು ದಿನವೂ ಉಣಬಡಿಸುವ ಷಡಕ್ಷರಿಯವರು ಮತ್ತು ಹೊಸ ಹೊಸ ಅಡುಗೆಗಳನ್ನು ಉಣಬಡಿಸುವ ಮಯ್ಯರವರನ್ನು ಸೇರಿಸಿಕೊಂಡು, ಕೋರೆಯವರು ಸುಮಾರು ೬೦-೭೦ ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಭಟ್ಟರ ಮುಂದಿಟ್ಟಿದ್ದಾರಂತೆ. ಆ ಯೋಜನೆಯ ಪ್ರಕಾರ “ಸುವರ್ಣ ಕರ್ನಾಟಕ” ಅನ್ನುವ ಹೊಸ ದಿನಪತ್ರಿಕೆ ಈ ನಾಡಿನ ಪತ್ರಿಕಾ ರಂಗದಲ್ಲಿ ಸದ್ಯದಲ್ಲೇ ಸಂಚಲನ ಹೊರಡಿಸಲಿದೆಯಂತೆ. ಮತ್ತಷ್ಟು ಓದು »

14
ಡಿಸೆ

ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…

-ಶಂಶೀರ್, ಬುಡೋಳಿ

ಇವರೆಗೆ ನೀವು  ಜೆಡಿ‌ಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾ‌ಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ  ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ  ಮನೋಸ್ಥಿತಿಯೇ  ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ  ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ. ಮತ್ತಷ್ಟು ಓದು »

13
ಡಿಸೆ

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ರಾಕೇಶ್ ಶೆಟ್ಟಿ
 
ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು. ಮತ್ತಷ್ಟು ಓದು »

20
ನವೆಂ

ಕೋಮುವಾದವೂ ಮೂಲಭೂತವಾದವೂ

ಅಜಕ್ಕಳ ಗಿರೀಶ ಭಟ್

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಮತ್ತಷ್ಟು ಓದು »

15
ನವೆಂ

ಪೇಟೆ ಸಾಕು, ನಡೀರಿ ಹಳ್ಳಿಗೆ!

ಮಹೇಶಕುಮಾರ್ ನೀರ್ಕಜೆ
ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಮತ್ತಷ್ಟು ಓದು »