ಮೂಢನಂಬಿಕೆಗಳು ಅಂಧಾನುಕರಣೆಯೇ ?
-ರಾವ್ ಎವಿಜಿ
ಮೂಢನಂಬಿಕೆ ಎಂದರೇನು? ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಲು ಕಾರಣವಾದದ್ದು ಹಾಲಿ ಅಸ್ತಿತ್ವದಲ್ಲಿ ಇರುವ ಕೆಲವು ಮತೀಯ ಆಚರಣೆಗಳ ಪರ-ವಿರೋಧ ವಾದಗಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನ ಸೆಳೆದ ಪತ್ರಿಕೆಗಳಲ್ಲಿ ವರದಿ ಆದ ಮತೀಯ ಆಚರಣೆಗಳು ಇವು:
(೧) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಲು ಹಿಂದಿನಿಂದ ಆಚರಣೆಯಲ್ಲಿ ಇರುವ ‘ಬ್ರಾಹ್ಮಣರು ಉಂಡೆದ್ದ ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ ಪದ್ಧತಿ’
(೨) ಗುಲ್ಬರ್ಗ ಜಿಲ್ಲೆಯಲ್ಲಿ ಆಚರಣೆಯಲ್ಲಿ ಇರುವ ‘ಸೂರ್ಯಗ್ರಹಣ ಕಾಲದಲ್ಲಿ ಸುಮಾರು ೬ ತಾಸು ಕಾಲ ಮಕ್ಕಳನ್ನು ಆಂಗವೈಕಲ್ಯದ ನಿವಾರಣೆಗಾಗಿ ಕುತ್ತಿಗೆಯ ತನಕ ಭೂಮಿಯಲ್ಲಿ ಹುಗಿದಿರಇಸುವ ಪದ್ಧತಿ’
(೩) ಮಹಾರಾಷ್ಟ್ರದ ಶೋಲಾಪುರದಲ್ಲಿ ಆಚರಣೆಯಲ್ಲಿ ಇರುವ ‘ಸುಮಾರು ೫೦ ಅಡಿ ಎತ್ತರದಿಂದ ಹಸುಗೂಸುಗಳನ್ನು ಕೆಳಗೆ ಬಿಗಯಾಗಿ ಎಳದು ಹಿಡಿದುಕೊಂಡಿರುವ ಬೆಡ್ ಶೀಟಿಗೆ ಎತ್ತಿ ಹಾಕುವ ಪದ್ಧತಿ’
(೪) ತಮಿಳುನಾಡಿನಲ್ಲಿ ಆಚರಣೆಯಲ್ಲಿ ಇರುವ ‘ಗಲ್ಲದ ಮೂಲಕ ಚೂಪಾದ ದಬ್ಬಳದಂಥ ಸಾಧನಗಳನ್ನು, ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಆವೇಶದಿಂದ ಕುಣಿಯುವ ಕಾವಡಿ ಆಟಮ್ ಪದ್ಧತಿ’
(೫) ಭಾರತದ ಗಡಿಗೆ ತಾಗಿಕೊಂಡಿರುವ ನೇಪಾಳದ ಹಳ್ಳಿಯೊಂದರಲ್ಲಿ ೫ ವರ್ಷಕ್ಕೊಮ್ಮೆ ಜರಗುವ ಹಿಂದೂ ಹಬ್ಬದಲ್ಲಿ ಸುಮಾರು ೨೫೦೦೦೦ ಕ್ಕೂ ಅಧಿಕ ಪ್ರಾಣಿಗಳನ್ನು (ವಿಶೇಷತಃ ಎಮ್ಮೆಗಳನ್ನು) ಬಲಿ ಕೊಡುವ ಪದ್ಧತಿ
(೬) ಒರಿಸ್ಸಾದ ಕೆಲವೆಡೆ ಆಚರಣೆಯಲ್ಲಿ ಇರುವ ‘ಪುಟ್ಟ ಬಾಲಕರನ್ನು ನಾಯಿಯೊಂದಿಗೆ ಮದುವೆ ಮಾಡುವ ಪದ್ಧತಿ’
(೭) ಚಾಮರಾಜನಗರ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಷಷ್ಠಿಯಂದು ಆಚರಿಸುವ ‘ಹುತ್ತಕ್ಕೆ ಪೂಜೆ ಸಲ್ಲಿಸಿ ಅದರ ಮೇಲೆ ಒಂದು ಕೋಳಿಮೊಟ್ಟೆ ಇಟ್ಟು (ಸಾಮಾನ್ಯವಾಗಿ ಹೆಂಗಸರು) ಕೋಳಿಯ ಕತ್ತು ಕೊಯ್ದು ಬಿಸಿರಕ್ತ ಸುರಿಯುವ ಪದ್ಧತಿ’
ಇಲ್ಲಿ ನಮೂದಿಸಿರುವ ಪ್ರತೀ ಆಚರಣೆಯನ್ನು ಸಮರ್ಥಿಸಿಕೊಳ್ಳಲು ‘ಅನಾದಿಕಾಲದಿಂದಲೂ ಆಚರಣೆಯಲ್ಲಿದೆ’, ‘ಆಚರಣೆಯಿಂದ ಅನೇಕರಿಗೆ ಒಳ್ಳೆಯದಾಗಿದೆ’, ‘ಅನೇಕರಿಗೆ ರೋಗ ವಾಸಿ ಆಗಿದೆ’ ‘ನಮಗೆ ಮನಶ್ಶಾಂತಿ ದೊರೆತಿದೆ’, ‘ಇತರರಿಗೆ ತೊಂದರೆ ಕೊಡುವುದಿಲ್ಲ’ ಮುಂತಾದ ವಾದಗಳನ್ನು ಮುಂದಿಡುತ್ತಾರೆ. ಇವುಗಳನ್ನು ‘ಆಧ್ಯಾತ್ಮಿಕ ಪ್ರತೀಕಗಳಾಗಿ’ ಏಕೆ ಪರಿಗಣಿಸ ಬೇಕು ಅನ್ನುವುದನ್ನು ವಿವರಿಸುವುದೂ ಉಂಟು. ಇವು ‘ಅಮಾನವೀಯ’, ‘ಅನಾಗರೀಕ’. ‘ವೈದಿಕ ಸಂಪ್ರದಾಯವಾದಿಗಳು ಅರ್ಥಾತ್ ಬ್ರಾಹ್ಮಣ ವರ್ಗದವರು ಹಿಂದುಳಿದವರನ್ನೂ ದಲಿತರನ್ನೂ ಶೋಷಿಸಲೋಸುಗವೇ ಹುಟ್ಟುಹಾಕಿ ಪೋಷಿಸಿಕೊಂಡು ಬಂದಿರುವ ಮೂಢನಂಬಿಕೆಗಳು’ ಎಂದೆಲ್ಲ ವಿರೋಧಿಸುವವರೂ ಇದ್ದಾರೆ. ಇರುವ ಅಸಂಖ್ಯ ಸ್ವಘೋಷಿತ ಮತ್ತು ಪರಂಪರಾಗತ ಮಠಾಧಿಪತಿಗಳ ಪೈಕಿ ಬಹುತೇಕರು ಈ ಕುರಿತು ‘ದಿವ್ಯಮೌನ’ ತಳೆದಿದ್ದಾರೆ, ಕೆಲವರು ‘ಇವೆಲ್ಲ ನಂಬಿಕೆಯ ಪ್ರಶ್ನೆಗಳು, ಬಲು ಹಿಂದಿನಿಂದ ಪರಂಪರಾಗತ ನಂಬಿಕೆಯನ್ನು ಪ್ರಶ್ನಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ’, ಆತ್ಮಸಂತೋಷಕ್ಕಾಗಿ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಸರಿಯೇ?’ ಅನ್ನುವುದರ ಮೂಲಕ ಈ ಆಚರಣೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ. ಮತ್ತಷ್ಟು ಓದು 
ದೇವರು, ಧರ್ಮ ಮತ್ತು ಮತ
– ಗೋವಿಂದ ರಾವ್ ವಿ ಅಡಮನೆ
ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.
ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ
– ರಾಕೇಶ್ ಶೆಟ್ಟಿ
ಇದನ್ನ ಈ ದೇಶದ ಕರ್ಮ ಅಂತಲೇ ಅನ್ನಬೇಕೇನೋ, ಅಂದುಕೊಂಡಂತೆ ‘ಮಡೆ ಸ್ನಾನ’ದ ‘ಮಡೆ'(ಮಡೆ=ಎಂಜಲು) ಉರುಳದವರ ಮೇಲೆಯೂ ಬೀಳುತ್ತಿದೆ.ಇಷ್ಟು ದಿನ ಉರುಳಾಡಿದ್ದು ಮನುಷ್ಯರಾದರೆ ಈಗ ಸಮಸ್ತ ಜಾತಿಗಳು ಬಿದ್ದು ಉರುಳಾಡುತ್ತಿವೆ.ಮಡೆ ಸ್ನಾನವನ್ನು ವಿರೋಧಿಸಿ ನಾನು ಈ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ‘ಅದು ಬ್ರಾಹ್ಮಣರ ಎಂಜಲೆಲೆ’ ಅನ್ನುವ ಕಾರಣಕ್ಕೆ ವಿರೋಧಿಸುತಿದ್ದಿರ ಅನ್ನುವಂತಹ ಪ್ರತಿಕ್ರಿಯೆಗಳು ಬ್ಲಾಗಿನಲ್ಲಿ/ಮಿಂಚೆಗಳ ಮೂಲಕ ಬಂದಿವೆ. ನನ್ನ ಲೇಖನದಲ್ಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದೆ, ಅದ್ಯಾವ ಜಾತಿಯವರು ತಿಂದು ಮತ್ತಿನ್ಯಾವಾ ಜಾತಿಯವ ಅದರ ಮೇಲೆ ಉರುಳಾಡುವುದು ಅಷ್ಟೇ ಅಸಹ್ಯಕರ’ ಅಂತ.
ಅಂದರೆ,ಅದು ಕುಕ್ಕೆಯ ಮಡೆ ಸ್ನಾನವಿರಲಿ ಅಥವಾ ತುರುವೇಕೆರೆಯ ಮಡೆಸ್ನಾನವಿರಲಿ ಎರಡೂ ಅಸಹ್ಯಕರವೇ, ಎರಡೂ ಖಂಡನೀಯವೇ.ಮಡೆ ಸ್ನಾನದ ಪರ-ವಿರೋಧ ಮಾತನಾಡುವವರು ನೆನಪಿಡಬೇಕಾದದ್ದು ‘ಈ ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ ಹೊರತು ಜಾತಿಗಾಗಿಯಲ್ಲ’ ಅನ್ನುವುದು.
ಈ ದೌರ್ಜನ್ಯಗಳಿಗೆ ಕೊನೆ ಎಂದು?
-ವಿಜಯೇಂದ್ರ
ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.
೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.
ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು 
ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ
-ಪ್ರವೀಣ್. ಟಿ. ಎಲ್
ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.
ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೧೩ ಬಾಲಗಂಗಾಧರರ ಸೂಕ್ಷ್ಮದರ್ಶಕದಲ್ಲಿ ಕೋಲಾರದ ಘಟನೆ
– ರಮಾನಂದ ಐನಕೈ
ಇತ್ತೀಚೆಗೆ ಕೋಲಾರದ ಭಗವದ್ಗೀತಾ ಅಭಿಯಾನದ ಸಂದರ್ಭದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿಯವರಿಗೆ ಹಾಗೂ ಭಗವದ್ಗೀತೆಗೆ ಅವಮಾನ ಮಾಡಿದ ಘಟನೆಯ ಹಿಂದೆ ಅನೇಕ ತಪ್ಪು ತಿಳುವಳಿಕೆಗಳು ಕೆಲಸ ಮಾಡಿವೆ. ಮೇಲ್ನೋಟಕ್ಕೆ ನೋಡಿದರೆ ಇದೊಂದು ರಾಜಕೀಯ ಚದುರಂಗದಾಟ ಎಂಬುದು ಸ್ಪಷ್ಟ. ಹಿಂದೆ ಇದೇ ಭಗವದ್ಗೀತಾ ಅಭಿಯಾನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಲ್ಲೆಲ್ಲೂ ನಡೆಯದ ಭಯಂಕರ ವಿರೋಧ ಕೋಲಾರದಲ್ಲೇ ಏಕೆ ನಡೆಯಿತು? ಅದನ್ನು ಅರಿತುಕೊಳ್ಳುವ ಅಗತ್ಯ ಇದೆ.
ಕೋಲಾರದಲ್ಲಿ ಕಾರ್ಮಿಕ ವರ್ಗ ಪ್ರಬಲವಾಗಿದೆ. ಹಾಗಾಗಿ ಇಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಪ್ರಾಬಲ್ಯ ಇದೆ. ಜೊತೆಗೆ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೃಷ್ಣಪ್ಪ ಇದೇ ಜಿಲ್ಲೆಯವರು. ದಲಿತ ಹೋರಾಟವೂ ಈ ಜಿಲ್ಲೆಯಲ್ಲಿ ಹೆಚ್ಚು ಜೀವಂತವಾಗಿದೆ. ಈ ಕಾರಣಕ್ಕಾಗಿ ಅವರು ಭಗವದ್ಗೀತಾ ಅಭಿಯಾನವನ್ನು ಭಾರತೀಯ ಜನತಾ ಪಾರ್ಟಿಯ ಪ್ರೊಪಗಾಂಡಾ ಎಂಬಂತೆ ಗ್ರಹಿಸಿರುವ ಸಾಧ್ಯತೆ ಇದೆ. ಇಂದು ಭಾರತೀಯ ಸಮಾಜಶಾಸ್ತ್ರವನ್ನು ನಿರ್ಣಯಿಸುತ್ತಿರುವುದು ಇಂಥ ತಪ್ಪು ತಿಳುವಳಿಕೆಗಳೆ. ಭಗವದ್ಗೀತೆ ಅಂದರೆ ಬ್ರಾಹ್ಮಣರದ್ದು, ಮೇಲ್ವರ್ಗದ್ದು ಎಂಬ ನಂಬಿಕೆ ಇದೆ. ಇತ್ತೀಚೆಗೆ ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷರ ಸಂದರ್ಶನದಲ್ಲೂ ಇದು ಸ್ಪಷ್ಟವಾಗಿದೆ. ಭಾಜಪಾ ಮೇಲ್ವರ್ಗದವರ ಪಕ್ಷ. ಹಾಗಾಗಿ ಭಗವದ್ಗೀತೆಯ ಪ್ರಚಾರದ ಮೂಲಕ ಪಕ್ಷ ಬಲಪಡಿಸುತ್ತಿದ್ದಾರೆಂಬ ತಿಳುವಳಿಕೆಯೂ ಇರಬಹುದು.
ಪುನರ್ಜನ್ಮ – ಒಂದು ವಿವೇಚನೆ
– ಗೋವಿಂದ ರಾವ್ ವಿ ಅಡಮನೆ
ಪುನರ್ಜನ್ಮ – ತಥ್ಯವೇ, ಮಿಥ್ಯಾಕಲ್ಪನೆಯೇ? ‘ಅತಿ ಸೂಕ್ಷ್ಮವಾದ ನಯವಾದ ಸದಾ ಚಲಿಸುತ್ತಿರುವ ಕಣಗಳಿಂದ ನಿರ್ಮಿತವಾದ ಆತ್ಮವು ವ್ಯಕ್ತಿ ಸತ್ತಾಗ ಚೆದರಿ ಹೋಗುತ್ತವೆ’, ‘ಪ್ರಾಣ ಿರುವಾಗ ಮಾನವ ಸಂತೋಷವಾಗಿ ಬದುಕಲಿ, ಸಾಲ ಮಾಡಿ ಆದರೂ ತುಪ್ಪ ತಿನ್ನಲಿ, ದೇಹ ಬೂದಿ ಆದ ನಂತರ ಅದು ಹಿಂತಿರುಗುವುದೆಂತು?’ ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಅಲ್ಲಗಳೆಯುವ ಭೋಗಪ್ರಿಯ ವಾದಗಳನ್ನು ನಂಬೋಣವೇ? ಅಥವ ‘ಒಬ್ಬ ವ್ಯಕ್ತಿ ಜೀರ್ಣವಾದ ವಸ್ತ್ರವನ್ನು ತೊರೆದು ಹೊಸ ವಸ್ತ್ರ ಧರಿಸುವಂತೆ ಆತ್ಮವು ಜೀರ್ಣವಾದ ಶರೀರವನ್ನು ತೊರೆದು ಹೊಸ ಶರೀರವನ್ನು ಧರಿಸುತ್ತದೆ’, ‘ಶರೀರ ರಥ, ಆತ್ಮ ರಥಿ. ರಥ ಮುರಿದಾಗ ರಥಿ ಹೊಸದೊಂದು ರಥವೇರಿ ಪಯಣ ಮುಂದುವರಿಸುತ್ತಾನೆ’ ಎಂದೆಲ್ಲ ಆತ್ಮದ ಶಾಶ್ವತತೆಯನ್ನು ಸಾರುವ ಆಧ್ಯಾತ್ಮಪ್ರಿಯ ವಾದಗಳನ್ನು ನಂಬೋಣವೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುವುದೇ ಮೂರ್ಖತನವಾದೀತೇ? ಕೆಲವು ಸಂಶಯವಾದಿಗಳು ವಾದಿಸುತ್ತಿರುವಂತೆ ‘ಪುನರ್ಜನ್ಮದ ಪರಿಕಲ್ಪನೆ ನಿಜವಾಗಿರಲು ಸಾಧ್ಯವಿಲ್ಲ, ಆದ್ದರಿಂದ ಅದು ನಿಜವಲ್ಲ’ ಎಂದು ನಾವೂ ಹೇಳೋಣವೇ?
ಅನಾದಿ ಕಾಲದಿಂದಲೂ ನಡೆಯುತ್ತಿರುವ ಈ ಚರ್ಚೆಯ ಕುರಿತು ಆಧುನಿಕ ವಿಜ್ಞಾನಿಗಳ, ವಿಚಾರವಾದಿಗಳ ನಿಲುವೇನು? ಸಮ್ಮೋಹಿತ ನಿವರ್ತನ ತಂತ್ರದಿಂದ ಪುನರ್ಜನ್ಮ ಸ್ಮರಣೆ ಯ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಅಧಿಮನಃಶಾಸ್ತ್ರಜ್ಞರು (ಪ್ಯಾರಸೈಕಾಲಜಿಸ್ಟ್ಸ್) ಪುನರ್ಜನ್ಮ ಒಂದು ತಥ್ಯ ಎಂದು ಸಮರ್ಥಿಸಲು ನೀಡುವ ಇತರ ಸಾಕ್ಞ್ಯಾಧಾರಗಳನ್ನೂ ಅವನ್ನು ಅಲ್ಲಗಳೆಯುವ ವಾದಗಳನ್ನೂ ಅವಲೋಕಿಸಿದರೆ ನೀವು ನಿಮ್ಮದೇ ಆದ ತೀರ್ಮಾನ ಕೈಗೊಳ್ಳಲು ಸಾಧ್ಯವಾದೀತು. ಎಂದೇ ಅವುಗಳ ಪಕ್ಷಿನೋಟವನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ.
ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…!
– ರಾಕೇಶ್ ಶೆಟ್ಟಿ
“ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳು ಸೇವೆ ಮಾಡುವುದನ್ನು ನಿಷೇಧಿಸುವುದರಿಂದ ಯಾವ ರೀತಿ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತೇನೆ” ಹೀಗಂತ ಹೇಳಿರೋದು ಪೇಜಾವರಶ್ರೀಗಳು…!
ಒಂದು ಕಡೆ ದಲಿತ ಕಾಲೋನಿಗಳಲ್ಲಿ ಓಡಾಡಿ ಹಿಂದೂ ಧರ್ಮವನ್ನು ಉದ್ಧರಿಸುವ ಮತ್ತು ಮತಾಂತರವನ್ನ ವಿರೋಧಿಸುವ ಮಾತನಾಡುವ ಶ್ರೀಗಳಿಗೆ ಮಡೆಸ್ನಾನದಿಂದ ಯಾವ ಧರ್ಮಕ್ಕೆ,ಹೇಗೆ ನಷ್ಟವಾಗಬಹುದು ಮತ್ತು ಹಿಂದೂ ಅನ್ನುವ ಧರ್ಮದ ಬಗ್ಗೆ ಮಾಧ್ಯಮಗಳ ಮೂಲಕ ಜಗತ್ತಿಗೆ ಯಾವ ಸಂದೇಶ ತಲುಪಬಹುದು ಅನ್ನುವುದರ ಅರಿವಿರಲಿಕ್ಕಿಲ್ಲವಾ? ಇದ್ದರೆ ಈ ರೀತಿ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಹೇಳಿಕೆ ನೀಡುತಿದ್ದರಾ?
’ಮಡೆ ಸ್ನಾನ’ ಅನ್ನುವ So Called ಧಾರ್ಮಿಕ ನಂಬಿಕೆ(!?) ನಡೆದುಕೊಂಡು ಬಂದ ಹಾದಿಗೆ ೪೦೦ ವರ್ಷಗಳ ಇತಿಹಾಸವಿದೆ.ಆದರೆ ತೀರಾ ಇದು ಮಾಧ್ಯಮಗಳಲ್ಲಿ ದೊಡ್ದ ಮಟ್ಟದ ಸುದ್ದಿ ಮಾಡಲಿಕ್ಕಾರಂಭಿಸಿದ್ದು ಬಹುಷಃ ಕಳೆದ ವರ್ಷದಿಂದಲೇ…! ಸದ್ಯ.ಈಗಲಾದರೂ ನಮ್ಮ ದನಿ ಕೇಳಿಬರುತ್ತಿದೆ ಅನ್ನುವ ಸಂತೋಷದ ಜೊತೆ ಜೊತೆಗೆ ಇಂತ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಬೇಕಾದ ಸರ್ಕಾರ ಮತ್ತು ಸರ್ಕಾರದ ಸಚಿವರೇ ’ನೋ ಕಮೆಂಟ್ಸ್’ ಅನ್ನುವುದು ನೋಡಿ ಬೇಸರವೂ ಆಗುತ್ತದೆ.
ಸಂಸ್ಕೃತಿ ಸಂಕಥನ – ೧೨- ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ
– ರಮಾನಂದ ಐನಕೈ
ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ
ಕೆಲವು ವೈದ್ಯರಿರುತ್ತಾರೆ. ಔಷಧಿ ಕೊಟ್ಟಾಕ್ಷಣ ರೋಗ ವಾಸಿಯಾಗುತ್ತದೆ. ನಾವಂದುಕೊಳ್ಳುತ್ತೇವೆ ‘ಅವರು ತುಂಬಾ ಚೆನ್ನಾಗಿ ಔಷಧಿ ಕೊಡುತ್ತಾರೆ’ ಎಂದು. ಹಾಗಾದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ವೈವಿಧ್ಯಮಯವಾದ ಔಷಧಿಗಳು ಸಿಗುತ್ತವೆ. ಎಲ್ಲ ವೈದ್ಯರು ಕೊಡಬಹುದಲ್ಲ? ಇಲ್ಲೇ ಇದೆ ಸೂಕ್ಷ್ಮ. ವೈದ್ಯರ ಯಶಸ್ಸು ಇರುವುದು ಔಷಧಿ ಕೊಡುವುದರಲ್ಲೊಂದೇ ಅಲ್ಲ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯಲ್ಲಿರುವ ರೋಗ ಪತ್ತೆಮಾಡುವುದರಲ್ಲಿರುತ್ತದೆ. ಒಮ್ಮೆ ರೋಗ ಗೊತ್ತಾದರೆ ಅದಕ್ಕೆ ಔಷಧ ಯಾವುದೆಂಬುದು ವೈದ್ಯಕೀಯ ಸಾಮಾನ್ಯಜ್ಞಾನ.
ಸದ್ಯದ ಸಮಾಜವಿಜ್ಞಾನ ಪ್ರಕಾರ ಭಾರತೀಯ ಸಮಾಜದ ಪರಿಸ್ಥಿತಿಯೂ ಇದೇ ಆಗಿದೆ. ಭಾರತೀಯ ಸಮಾಜ ವ್ಯವಸ್ಥೆ ಸರಿಯಾಗಿಲ್ಲ. ಮೌಢ್ಯ ಮತ್ತು ಅಸಮಾನತೆಯಿಂದ ಕೊಳೆಯುತ್ತ ರೋಗಗ್ರಸ್ತವಾಗಿವೆ ಎಂಬುದು ಚಿಂತಕರ ಅಭಿಮತ. ಜಾತಿವ್ಯವಸ್ಥೆ ಭಾರತೀಯಸಮಾಜಕ್ಕೆ ಅಂಟಿಕೊಂಡ ದೊಡ್ಡ ರೋಗ. ಹಾಗಾಗಿ ಈ ರೋಗ ಹೋಗಬೇಕಾದರೆ ಜಾತಿವ್ಯವಸ್ಥೆಯನ್ನು ಆಮೂಲಾಗ್ರವಾಗಿ ನಾಶಮಾಡಬೇಕು ಎಂಬ ಮಾತು ದಿನನಿತ್ಯ ಕೇಳಿಬರುತ್ತವೆ. ಭಾರತೀಯ ಸಮಾಜಕ್ಕೆ ಈ ರೀತಿಯ ರೋಗವಿದೆಯೆಂಬ ತಿಳುವಳಿಕೆ ಎಲ್ಲಿಂದ ಬಂತು? ಇದು ನಿಜವಾಗಿಯೂ ರೋಗ ಹೌದೋ ಎಂಬುದರ ಬಗ್ಗೆ ನಾವು ಚಿಂತಿಸಿಲ್ಲ. ನೂರಾರು ವರ್ಷಗಳಿಂದ ಹಲವಾರು ರೀತಿಯ ಔಷಧ ಮಾಡುತ್ತಲೇ ಬಂದಿದ್ದೇವೆ. ರೋಗ ಗುಣಾಗುವುದರ ಬದಲು ಉಲ್ಭಣಿಸುತ್ತ ಬಂದಿದೆ. ಅಂದರೆ ನಾವು ರೋಗವನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ ನಾವು ನೀಡುವ ಔಷಧಿಗಳು ವ್ಯರ್ಥವಾಗುತ್ತಿವೆ. ರೋಗ ಇಲ್ಲದೆಯೇ ಔಷಧ ಕೊಡುವುದು ಅಥವಾ ಸರಿಯಾದ ರೋಗಕ್ಕೆ ಸರಿಯಾದ ಔಷಧ ಕೊಡದೇ ಇರುವುದು ಯಾವತ್ತೂ ಅಪಾಯ. ಅದು ದೊಡ್ಡ ರೋಗಕ್ಕೆ ನಾಂದಿಯಾಗುತ್ತದೆ.
‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ
– ಗೋವಿಂದ ರಾವ್ ವಿ ಅಡಮನೆ
‘ಮಾಡಿದ್ದುಣ್ಣೋ ಮಹಾರಾಯ’, ‘ಬಿತ್ತಿದಂತೆ ಬೆಳೆ’ ಈ ಜಾಣ್ನುಡಿಗಳು ಪುನರ್ಜನ್ಮದ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದ ಕರ್ಮಸಿದ್ಧಾಂತದ ತಿರುಳನ್ನು ಬಿಂಬಿಸುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಈ ಉಕ್ತಿಗಳನ್ನು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಅರ್ಥೈಸಿ ಮೂಢನಂಬಿಕೆಗಳನ್ನೂ ಕರುಡು ಸಂಪ್ರದಾಯಗಳನ್ನೂ ಹುಟ್ಟುಹಾಕಲು ಬಳಸಿಕೊಂಡಿವೆ, ಯಶಸ್ವಿಯೂ ಆಗಿವೆ.
ಪುನರ್ಜನ್ಮಪರ ವಾದಿಗಳು ಒದಗಿಸಿರುವ ಉದಾಹರಣೆಗಳನ್ನು ಆಧರಿಸಿ ಈ ಉಕ್ತಿಗಳ ಇಂಗಿತಾರ್ಥವನ್ನು ನಾನು ವಿವರಿಸುವ ಪರಿ ಇಂತಿದೆ: ಭೌತಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಲು ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇರುವಂತೆಯೇ ಮಾನವನ ಜೀವನವನ್ನು ನಿಯಂತ್ರಿಸಲೂ ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇವೆ. ಈ ನಿಯಮಗಳನ್ನೇ ನಾವು ನೈತಿಕ ನಿಯಮಗಳು ಎಂದು ಉಲ್ಲೇಖಿಸುತ್ತೇವೆ. ಇವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವತ್ರಿಕ. ಭೌತಪ್ರಪಂಚದ ನೈಸರ್ಗಿಕ ನಿಯಮಗಳು ಹೇಗೆ ಅನುಲ್ಲಂಘನೀಯವೋ ಅಂತೆಯೇ ಇವೂ ಕೂಡ. ಎಲ್ಲ ನೈಸರ್ಗಿಕ ನಿಯಮಗಳೂ ಅನಾದಿ ಹಾಗೂ ಅನಂತ್ಯ, ಯಾರೋ ಮಾಡಿದ ನಿಯಮಗಳು ಇವಲ್ಲವಾದ್ದರಿಂದ. ಭೌತಪ್ರಪಂಚದಲ್ಲಿ ಲಾಗೂ ಆಗುವ ನಿಯಮಗಳೇ ಆಧುನಿಕ ವಿಜ್ಞಾನಗಳ ಅಧ್ಯಯನ ವಸ್ತು. ನೈಸರ್ಗಿಕ ನೈತಿಕ ನಿಯಮಗಳನ್ನು ಅಧ್ಯಯಿಸಲು ಆಧುನಿಕ ವಿಜ್ಞಾನಗಳಿಗೆ ಸಾಧ್ಯವಾಗಿಲ್ಲ. ವಿವಿಧ ಮತಗಳ ಆಧಾರ ಗ್ರಂಥಗಳಲ್ಲಿ ಈ ನೈತಿಕ ನಿಯಮಗಳನ್ನು ಪಟ್ಟಿ ಮಾಡುವ ಪ್ರಯತ್ನಗಳು ಆಗಿವೆಯಾದರೂ ಸರ್ವಮಾನ್ಯವಾದ ಪಟ್ಟಿಮಾಡಲು ಸಾಧ್ಯವಾಗಿಲ್ಲದಿರುವುದು, ಪಟ್ಟಿ ಮಾಡಿರುವ ನಿಯಮಗಳ ಅನುಸರಣೆ ಅಥವ ಉಲ್ಲಂಘನೆಯ ಪರಿಣಾಮಗಳ ಕುರಿತಾಗಿ ಇರುವ ಭಿನ್ನಾಭಿಪ್ರಾಯಗಳು ಅನೇಕ ಹಿಂಸಾಕೃತ್ಯಗಳ ಹುಟ್ಟಿಗೆ ಕಾರಣವಾಯಿತು. ಭೌತನಿಯಮಗಳಂತೆಯೇ ಇವೂ ಅನುಲ್ಲಂಘನೀಯವಾದವುಗಳು ಆಗಿದ್ದರೂ ನಿಯಮೋಲ್ಲಂಘನೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಸಾರಿದ ‘ಪುರೋಹಿತ ವರ್ಗ’ (ಇವರು ಬೇರೆ ಬೇರೆ ಹೆಸರುಗಳಲ್ಲಿ ಎಲ್ಲ ಮತಗಳಲ್ಲಿಯೂ ಇದ್ದಾರೆ) ಅದಕ್ಕಾಗಿ ಅನೇಕ ಕಂದಾಚಾರಗಳನ್ನೂ ಮೂಢನಂಬಿಕೆಗಳನ್ನೂ ಹುಟ್ಟುಹಾಕಿತು, ಬೆಳೆಯಿಸಿತು, ಪೋಷಿಸಿತು. ಮುಖಸ್ತುತಿಗೆ ಮರುಳಾಗಿ ಅಥವ ಮಾಡಿದ ಅನೈತಿಕ ಕೃತ್ಯಕ್ಕೆ ಅನುಗುಣವಾಗಿ ಸಂಕೀರ್ಣತೆ ಮತ್ತು ವೆಚ್ಚ ಹೆಚ್ಚುವ ‘ಪೂಜೆ, ಹೋಮ, ಹರಕೆ, ನೈವೇದ್ಯ, ದಾನ’ ಇವೇ ಮೊದಲಾದ ‘ಪ್ರಾಯಶ್ಚಿತ್ತ’ಗಳನ್ನು ಮಾಡಿದರೆ ಎಲ್ಲ ರೀತಿಯ ಅನೈತಿಕತೆಯನ್ನು ಮನ್ನಿಸುವ ‘ದೇವರ’ ಪರಿಕಲ್ಪನೆಯನ್ನು ಸ್ವಲಾಭಕ್ಕಾಗಿ ಸೃಷ್ಟಿಸಿ ಪೋಷಿಸಿದ್ದೂ ಇದೇ ವರ್ಗ. ಪುನರ್ಜನ್ಮ ಇರುವುದೇ ನಿಜವಾದರೆ, ಇಂಥ ‘ದೇವರ’ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದಕ್ಕೆ ಬದಲಾಗಿ ಕರ್ಮಸಿದ್ಧಾಂತ ಸೂಚಿಸುವ ನೈಸರ್ಗಿಕ ನೈತಿಕ ನಿಯಮಾನುಸಾರ ಬಾಳ್ವೆ ನಡೆಸುವುದು ಉತ್ತಮ.
ಪುನರ್ಜನ್ಮಪರ ವಾದಿಗಳ ಒದಗಿಸುವ ಸಾಕ್ಷ್ಯಾಧಾರ ಎಂದು ನೀಡುತ್ತಿರುವ ಉದಾಹರಣೆಗಳನ್ನು ಕರ್ಮಸಿದ್ಧಾಂತದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರೆ ಮತಾತೀತವೂ ಕುಲಾತೀತವೂ ಲಿಂಗಾತೀತವೂ ಆದ ಕೆಲವು ನಿಯಮಗಳನ್ನು ಅನುಮಾನಿಸಬಹುದು (ಇನ್ ಫರ್). ಈ ರೀತಿ ಅನುಮಾನಿಸಿದ ಪ್ರಧಾನ ನಿಯಮಗಳು ಇಂತಿವೆ:




