ವಿಷಯದ ವಿವರಗಳಿಗೆ ದಾಟಿರಿ

Posts from the ‘ಧರ್ಮ’ Category

8
ಜುಲೈ

ಸಂಸ್ಕೃತಿ ಸಂಕಥನ – ೧

– ರಮಾನಂದ ಐನಕೈ

ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಇಂದಿಗೂ ಕೂಡಾ ಗೊಂದಲವಿದೆ. ನಮ್ಮ ಆಚರಣೆಗಳು ಅರ್ಥವಿಲ್ಲದ್ದು. ಮೌಢ್ಯದಿಂದ ಕೂಡಿದ್ದು…. ಇತ್ಯಾದಿ. ನಮ್ಮ ಸುಶೀಕ್ಷಿತ ಜನರೂ ಕೂಡ ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಆದರೆ ಇದು ನಿಜ ಅಲ್ಲ. ಇವು ಕೇವಲ ಪಾಶ್ಚಾತ್ಯರಿಗೆ ನಮ್ಮ ಸಂಸ್ಕೃತಿಯ ಕುರಿತಾದ ಅನುಭವಗಳು. ಅವರ ಅನುಭವಗಳೇ ನಮಗೆ ಆದರ್ಶವಾಗಿದೆ.ಬೆಲ್ಜಿಯಂನ ಗೆರಿಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಾಲಗಂಗಾಧರ ಅವರು ಈ ಕುರಿತು ದೀರ್ಘ ಸಂಶೋಧನೆ ಮಾಡಿದ್ದಾರೆ. ಇವರ ಸಂಶೋಧನೆ ಭಾರತೀಯ ಸಂಸ್ಕೃತಿಯ ಮೇಲೆ ಹೊಸ ಬೆಳಕು ಚೆಲ್ಲಲಿದೆ.

ಭಾರತೀಯ ಸಂಸ್ಕೃತಿಯ ಕುರಿತಾದ ನಮ್ಮ ತಪ್ಪು ತಿಳುವಳಿಕೆ ಹೇಗೆ ಜೀವನದ ಬೇರೆ ಬೇರೆ ರಂಗದ ಮೇಲೆ ಅಡ್ಡ ಪರಿಣಾಮ ಮಾಡಿದೆ ಎಂಬ ಬಾಲಗಂಗಾಧರರ ವಾದವನ್ನು ಸರಳವಾಗಿ ಅನುಭವಕ್ಕೆ ದಕ್ಕುವಂತೆ ನಿರೂಪಿಸಲಿದ್ದಾರೆ ರಮಾನಂದ ಐನಕೈ. ಹೊಸ ಅಂಕಣ ‘ಸಂಸ್ಕೃತಿ ಸಂಕಥನ’ ಆರಂಭವಾಗಲಿದೆ.

ಇದು ಹೇಳುವಷ್ಟು ಸುಲಭವಲ್ಲ. ಆದರೂ ಒಂದು ಕ್ಷಣ ವರ್ತಮಾನದ ನಮ್ಮ ಸಿದ್ಧ ನಂಬಿಕೆಗಳನ್ನು ಪೂರ್ವಾಗ್ರಹಗಳನ್ನು ಬದಿಗಿಟ್ಟು ಮುಂದುವರಿಯೋಣ.

ಕಳೆದ ೬೦ ವರ್ಷಗಳ ನಮ್ಮ ಸ್ವತಂತ್ರ ಭಾರತದಲ್ಲಿ ನೂರಾರು ರೀತಿಯ ಮನಸ್ಸುಗಳು ಬೆಳೆಯುತ್ತ ಬಂದಿವೆ. ಪ್ರತಿಯೊಂದು ಮನಸ್ಸೂ ತನ್ನದೇ ರೀತಿಯ ವೈಚಾರಿಕ ಹಾಗೂ ಮಾನಸಿಕ ಸಾಮ್ರಾಜ್ಯವನ್ನು ಕಟ್ಟಿಕೊಂಡಿದೆ ಹಾಗೂ ಅದೇ ಅಂತಿಮ ಸತ್ಯ ಎಂದು ಪ್ರತಿಪಾದಿಸುತ್ತಲಿದೆ.ಈ ಕಾರಣಕ್ಕಾಗೇ ದೇಶದಲ್ಲಿ ಅಸಂಖ್ಯಾತ ವೈವಿಧ್ಯಮಯ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇವುಗಳನ್ನೆಲ್ಲ ಸೇರಿಸಿ ನಾವು ಮುಖ್ಯವಾಗಿ ಎರಡು ರೀತಿಯ ಮನಸ್ಸುಗಳನ್ನು ಗುರುತಿಸೋಣ.

ಮತ್ತಷ್ಟು ಓದು »

27
ಜೂನ್

ಪ್ರಜಾಪ್ರಭುತ್ವ ಭಾರತದಲ್ಲಿ ಗಾಂಧಿತ್ವದ ಮೌಲ್ಯಗಳು

– ಅರಹೊಳೆ ಸದಾಶಿವರಾಯರು

ಪ್ರತೀ ವರ್ಷವೂ ನಾವು ಗಣರಾಜ್ಯದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಹಾಗೂ ಗಾಂಧೀಜಿ ಪುಣ್ಯತಿಥಿಗಳನ್ನು ಆಚರಿಸುತ್ತೇವೆ-ಒಂದು ರೀತಿಯ ಅನಿವಾರ್ಯತೆಯಿಂದ ಆಚರಿಸಿದಂತೆ. ಈ ಸಂದರ್ಭಗಳಲ್ಲಿ ಮಾತ್ರ ನಮಗೆ, ಗಾಂಧೀಜಿಯವರ ತತ್ವ-ಚಿಂತನೆಗಳು ಪ್ರವಾಹೋಪಾದಿಯಲ್ಲಿ ನೆನಪಾಗುತ್ತವೆ ಮತ್ತು ಆ ಕ್ಷಣದಲ್ಲಿಯೇ ಅವುಗಳು ಮರೆತೂ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಚಿಂತನೆಗೊಡ್ಡಿಕೊಂಡಾಗ, ಒಂದು ರೀತಿಯ ಖೇದಾಶ್ಚರ್ಯಗಳು ಹುಟ್ಟುತ್ತವೆ.

ಪರಿಮಿತಿಯರಿತಾಶೆ, ಪರವಶತೆಯಳಿದ ಸುಖ

ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ

ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ

ವರಗಳೀ ನಾಲ್ಕೆ ವರ-ಮಂಕುತಿಮ್ಮ

ಪರಿಮಿತವಾದ ಆಸೆ ಇರಬೇಕು, ವ್ಯಾಮೋಹ ತೊರೆದ ಸುಖವಿರಬೇಕು, ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ, ಸತ್ಯವನ್ನು ಪ್ರೀತಿಸುವ ಬುದ್ದಿ ಇರಬೇಕು.ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಇದರ ಉದ್ಧರಣೆಯೊಂದಿಗೆ ನಾನು ಇಂದು ಪ್ರಸ್ತುತ ಪಡಿಸಲಿರುವ ವಿಚಾರಧಾರೆಗೆ ಮೊದಲಂಕಿತ ಇಡುತ್ತಿದ್ದೇನೆ. ಮತ್ತಷ್ಟು ಓದು »

27
ಜೂನ್

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ  ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು,  ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು. ಮತ್ತಷ್ಟು ಓದು »

27
ಜೂನ್

ಹೆಸರಲ್ಲಿ ಏನಿದೆ?!

– ಹೇಮಾ ಪವಾರ್, ಬೆಂಗಳೂರು

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು  ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು.

ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು.

ಮತ್ತಷ್ಟು ಓದು »

23
ಜೂನ್

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ಸಂತೋಷ್ ಕುಮಾರ್ ಪಿ.ಕೆ

ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ. ಮತ್ತಷ್ಟು ಓದು »

22
ಜೂನ್

ಮಂಜುನಾಥನ ದಯೆ ಇರಲಿ!!!

 ಅರೆಹೊಳೆ ಸದಾಶಿವ ರಾವ್

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ,

ನಿನಗೊಂದು  ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದೀತು ಎಂದು ನಾವು ಅಂದುಕೊಂಡಿರಲಿಲ್ಲ. ಒಂದು ನಂಬುಗೆ ಇದೆ. ಅದೆಂದರೆ, ನಿನ್ನ ಬಳಿ  ಯಾವುದೇ ಭಕ್ತ ಬಂದು, ತನ್ಮಯತೆಂದ ಏನಾದರೂ ಕೇಳಿಕೊಂಡರೆ, ಕಷ್ಟ ಪರಿಹಾರವಾಗಿ, ಕೋರಿಕೆ ನೆರವೇರುತ್ತದೆ ಎಂದು. ಆದರೆ ತಪ್ಪು ಮಾಡಿದವರನ್ನು ನೀನೇ ನೋಡಿಕೊಳ್ಳುತ್ತಿ ಎಂದು ಒಮ್ಮೆ ಬಾಮಾತಿನಲ್ಲಿ ಹೇಳಿದರೂ, ಮತ್ತೆ ಅದನ್ನು ಹಿಂಪಡೆಯಲು ನಿನ್ನ ಬಳಿಯೇ ಬರಬೇಕಾಗುತ್ತದೆ. ವಿಷಯವನ್ನು ನಿನ್ನ ಮಡಿಲಿಗೆ ಹಾಕಿ ಬಿಟ್ಟರೆ, ಫಲಾಫಲ ನಿನ್ನ ಇಚ್ಛೆಯಂತೆ ನಡೆಯುತ್ತದೆ ಮತ್ತು ಇದು ಇಡೀ ಕುಟುಂಬಕ್ಕೇ ಅನ್ವುಸುತ್ತದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ. ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ.

ಗೌಡರ ವಂಶ ಇರಬಹುದು, ಯಡ್ಯೂರಪ್ಪನವರ ವಂಶವಿರಬಹುದು, ಎಲ್ಲರ ಮೇಲೂ ನಾವು ವಿಶ್ವಾಸ ಇಟ್ಟು, ದೇಶದ ಪರಮಾಧಿಕಾರಗಳ ವಿವಿಧ ಹಂತಗಳನ್ನು ನೀಡಿದವರು. ಆದರೆ ಅವರೆಲ್ಲಾ ಅಧಿಕಾರ ಸಿಕ್ಕ ನಂತರ, ಈ ಎಲ್ಲದೂ ತಮಗೆ ಕಟ್ಟಿಟ್ಟದ್ದು ಎಂಬಂತೆ ವರ್ತಿಸಿದ್ದು ಮಾತ್ರ ನಿಜ. ಎಲ್ಲರೂ ಅವರವರ ಮಟ್ಟಿಗೆ ರಾಜ್ಯದ ಬೊಕ್ಕಸದಿಂದ ಸಾಧ್ಯವಾದಷ್ಟೂ ಎತ್ತಿದವರೇ ಎಂದು ಇಬ್ಬರೂ ಆರೋಪಿಸಿಕೊಳ್ಳುತ್ತಿದ್ದಾರೆ. ಸತ್ಯ ಏನು ಎನ್ನುವುದು ರಾಜ್ಯದ ಎಲ್ಲರಿಗೂ ಗೊತ್ತಿದೆ. ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿ-ಇಬ್ಬರೂ ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಮೆಂದವರೇ ಎಂಬುದೇ ಈ ಸತ್ಯ!(ನಿನಗೆ ಗೊತ್ತಿಲ್ಲದ್ದೇನಲ್ಲ ಬಿಡು) ಮತ್ತಷ್ಟು ಓದು »

21
ಜೂನ್

ಜಾತಿ ಎಂಬ ಜಾಡ ಹಿಡಿದು…

– ವಸಂತ್ ಕೋಡಿಹಳ್ಳೀ ಲಕ್ಕೂರು

ಮನುಷ್ಯ ಹುಟ್ಟುತ್ತಾ ಹುಟ್ಟುತ್ತಾ ಸ್ವಾತಂತ್ರ ಜೀವಿ!, ಅವನು ಬೆಳೆದಂತೆಲ್ಲ ಸಮಾಜದ ಕಟ್ಟುಪಾಡುಗಳು ಅವನ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಶ್ರೇಷ್ಟ ಕವಿ ಕುಂವೆಂಪುರವರು ತನ್ನ ವಿಶ್ವಮಾನವ ಸಂದೇಶದಲ್ಲಿ ಹೀಗೆ ಹೇಳುತ್ತಾರೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಎಂದರೆ ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ. ಬೆಳೆದಂತೆ ನಾವು ಅವರನ್ನು ಜಾತಿ, ಧರ್ಮ, ಬಾಷೆ, ದೇಶ, ಜನಾಂಗ ಎಂಬಲ್ಲ ಕಟ್ಟು ಪಾಡುಗಳಿಂದ ಬಂಧಿಸುತ್ತೇವೆ. ಬಹುಶಃ ಅವನು ಹುಟ್ಟಿದ ಸಮಜ ಅವನನ್ನು ಅಲ್ಪನನ್ನಾಗಿಸುತ್ತದೆ. ಇಲ್ಲಿ ‘ಸಮಾಜ’ವೆಂಬುದು ಮನುಷ್ಯ ಕಳಂಕವಲ್ಲವೇ

ಸರಿ ನಾನು ಕವಲುದಾರಿಗಳಲ್ಲಿ ಸಾಗಿ ಮನುಷ್ಯನ ನಿಗೂಢ ಜಾಡು ಹಿಡಿದು. ಅವನ ಕೆಲವು ಪದರುಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಕುವೆಂಪುರವರು ಒಂದು ಜನಾಂಗ ಮತ್ತೊಂದು ಜನಾಂಗವನ್ನು ಮೆಟ್ಟಿ ತುಳಿಯುವುದು ವಿರಾಟ್ ಶಕ್ತಿ, ವಿರೋಧಿ ಕೃತ್ಯ, ಹೇಡಿತನ ಎಂದು ಬಣ್ಣಿಸುತ್ತಾರೆ. ಸಮಾಜದ ನೆರಳಿನಲ್ಲಿ ನಮ್ಮ ಬೆಳವಣಿಗೆಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಸರಿದೂಗಿಸುವ ನೆಪದಲ್ಲಿ “ಜಾತಿ, ಬಾಷೆ, ಸಂಸ್ಕೃತಿಗಳ ಮೊರೆ ಹೋಗುವುದಂತೂ ಸರಿ ?. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಂತೆ ವಿಂಗಡಿಸಿ ಉನ್ನತವಾದ ಸ್ತಾನಗಳನ್ನು ಮೇಲಿನ ಮೂರೂ ವರ್ಗದವರು ಪಡೆದುಕೊಂಡು ಶೂದ್ರರನ್ನು ಇಂದಿಗೂ ತುಳಿಯುತ್ತಾ ಶೋಷಣೆ ಗೈಯುವುದು ಯಾವ ನ್ಯಾಯ ? ಮತ್ತಷ್ಟು ಓದು »

20
ಜೂನ್

ಇದರ ಕತೆ ಇಷ್ಟೇ ಕಣಪ್ಪೋ….

ಉಮೇಶ್ ದೇಸಾಯಿ

ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು..

 ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ  ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಹಾಲಿ ನಮ್ಮ ಸಿಎಮ್ಮು ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ. ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ. ಮತ್ತಷ್ಟು ಓದು »
20
ಜೂನ್

ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!

– ಕೆ.ಎಸ್ ರಾಘವೇಂದ್ರ ನಾವಡ

ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ  ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.

ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ  ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ  ಹೆಸರಿಸಿರುವ  ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.

ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮತ್ತಷ್ಟು ಓದು »

14
ಜೂನ್

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!

– ರವಿ ಮುರ್ನಾಡು

ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.

ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.

ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಮತ್ತಷ್ಟು ಓದು »