ವಿಷಯದ ವಿವರಗಳಿಗೆ ದಾಟಿರಿ

Posts from the ‘ಧರ್ಮ’ Category

29
ಮಾರ್ಚ್

ಭಾರತ-ಪಾಕ್ ಮಧ್ಯೆ ನಡೆಯುವುದು ಕೇವಲ ಪಂದ್ಯವಲ್ಲ!

– ರಾಕೇಶ್ ಶೆಟ್ಟಿ

ಅದನ್ನ ಕೇವಲ ಕ್ರಿಕೆಟ್ ಪಂದ್ಯ ಅಂತ ಹೇಳಲು ಸಾಧ್ಯವಾ? ನಾಳೆ ಬುಧವಾರ ಮಧ್ಯಾನ್ಹ ೨.೩೦ರ ನಂತರ ಬಹುತೇಕ ರಸ್ತೆಗಳು ಬಿಕೋ ಎನ್ನಲು ಶುರುವಾಗುತ್ತವೆ! ಎಂ.ಎನ್.ಸಿಗಳು ಸಹ ಉದ್ಯೊಗಿಗಳಿಗೆ ನಾಳೆ ವಿನಾಯಿತಿ ಕೊಡಲಿವೆ.(ಕೊಡದಿದ್ರೆ ಮಾಡೋ ಕೆಲ್ಸದಲ್ಲಿ ಯಡವಟ್ಟು ಮಾಡಿಬಿಡ್ತಾರೇನೋ ಅನ್ನೋ ಭಯಕ್ಕಾಗಿ 😉 ).ಜನ ಟೀವಿ ಮುಂದೆ ಕೂತ್ರೆ ಮುಗಿತು ಭಾರತ-ಪಾಕ್ ಕ್ರಿಕೆಟ್ ಸಮರದ ಫ಼ಲಿತಾಂಶ ಬರುವವರೆಗೂ ಅಲ್ಲಾಡಲಿಕ್ಕಿಲ್ಲ.

ಭಾರತ-ಪಾಕ್ ನಡುವೆ ನಡೆಯುವ ವಿಶ್ವಕಪ್ ಪಂದ್ಯ ಅಂದರೆ ಅದು ಸಮರವೇ ಸರಿ! ವಿಶ್ವಕಪ್ನಲ್ಲಿ ಭಾರತ-ಪಾಕ್ ಇದುವರೆಗು ೯೨,೯೬,೯೯ ಮತ್ತು ೨೦೦೩ ರಲ್ಲಿ ೪ ಬಾರಿ ಮುಖಾಮುಖಿಯಾಗಿವೆ.ಮತ್ತು ೪ ಬಾರಿಯು ಭಾರತ ಪಾಕಿಗಳಿಗೆ ಬಡಿದಿದೆ.ಅದರಲ್ಲೂ ವಿಶೇಷವಾಗಿ ಸಚಿನ್ನದ್ದು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರ್ಭಟ ತುಸು ಹೆಚ್ಚು! ಅದರಲ್ಲೂ ೨೦೦೩ರಲ್ಲಿ ಸೌತ್ ಆಫ಼್ರೀಕಾದ ಲ್ಲಿ ನಡೆದ ಪಂದ್ಯದಲ್ಲಂತೂ, ’ಸಚಿನ್ನನ್ನ ಮೊದಲನೆ ಚೆಂಡಿನಲ್ಲೆ ಔಟ್ ಮಾಡಿ ಕಳಿಸುತ್ತೇನೆ’ ಅಂತ ಪಂದ್ಯದ ಮೊದಲೆ ಕಿರುಚಿದ್ದ ಶೋಯೆಬ್ ಅಖ್ತರ್ನನ್ನ ಅಟ್ಟಾಡಿಸಿ ಬಡಿದಿದ್ದ! ಬಹುಷಃ ಆ ಅನುಭವದಿಂದಾಗಿಯೋ ಏನೋ,ಈ ಭಾರಿ ಅಖ್ತರ್ ಬಾಯಿ ಬಿಟ್ಟಿಲ್ಲ. ಆದರೆ ಅಫ಼್ರಿದಿ ಮಾತ್ರ ಸಚಿನ್ ನೂರನೇ ಶತಕ ಬಾರಿಸಲು ಇನ್ನಷ್ಟು ಸಮಯ ಕಾಯಬೇಕು ಅಂದಿದ್ದಾನೆ.ಯಥಾ ಪ್ರಕಾರ ಬ್ಯಾಟಿನಲ್ಲೆ ಉತ್ತರ ಕೊಡೊ ಅಭ್ಯಾಸವಿರೋ ನಮ್ಮ ಲಿಟಲ್ ಮಾಸ್ಟರ್ ಪ್ರತಿಕ್ರಿಯಿಸಿಲ್ಲ!

ಮತ್ತಷ್ಟು ಓದು »

15
ಮಾರ್ಚ್

ದೇವರಿಗೇ ಹಿಪ್ನಾಟಿಸಂ…!

– ಪ್ರಸನ್ನ, ಬೆಂಗಳೂರು

ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ

ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.

ಒಂದು ಬೆಳಿಗ್ಗೆ ನಮ್ಮ ಗುಂಪಿನ ಹುಡುಗರಾದ (ಇದ್ದದ್ದೇ ೩ ಮತ್ತೊಂದು ಜನ ಅದರಲ್ಲಿ ಗುಂಪೇನು ಇರಲಿಲ್ಲ ಆದರೂ ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಗುಂಪುಗಳಿದ್ದದ್ದು ನಿಜ) ಮುರಳಿ,ಮಂಜು, ಸಂಜೀವ್ ಬದಾಮಿ, ಎಲ್ಲರೂ ನಿನ್ನೆ ನಡೆದ ಹಿಪ್ನಾಟಿಸಂ ಬಗ್ಗೆ ಮಾತನಾಡುತ್ತಿದ್ದರು. ಪಕ್ಕದೂರಿನ ಬಸ್ಸಿಳಿದು ಅವರ ಜೊತೆ ಸೇರಿದ ನನಗೆ ಇದು ಹೆಚ್ಚು ಕುತೂಹಲ ಮೂಡಿಸಿತು. ನಮ್ಮ ಪ್ರಾಧ್ಯಾಪಕರ ಸಂಬಂಧಿ ಮತ್ತು ಸ್ನೇಹಿತರಾದ ವೈದ್ಯರೊಬ್ಬರು ( ಇವರ ಮನೆಯಲ್ಲಿದ್ದ ಸುಂದರ ಹುಡುಗಿಯಿಂದ ಇವರು ನಮಗೆಲ್ಲ ಚಿರಪರಿತರು) ನಡೆಸಿದ ಅಥವ ಪ್ರಯೋಗಿಸಿದ ಹಿಪ್ನಾಟಿಸಂಗೆ ಒಳಗಾದ ಮುರಳಿ ತನ್ನ ಅನುಭವವನ್ನು ಬಿಡಿ ಬಿಡಿಯಾಗಿ ಅರುಹಿದ. ನನಗಂತೂ ಕುತೂಹಲ ನೂರ್ಮಡಿಸಿತು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ’ಅಘೋರಿಗಳ ನಡುವೆ’ ಕಾದಂಬರಿಯನ್ನು ಪ್ರತಿವಾರ ಕಾಯುತ್ತ ಓದಿದ್ದು ನೆನಪಿನಲ್ಲಿತ್ತು ಮತು ಅದೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಲೈಬ್ರರಿಯಿಂದ ತಂದು ೨-೩ ಬಾರಿ ಓದಿದ್ದೆ. ಅಘೋರಿಗಳು ಗಳಿಸಿರುವ ಅಗಾಧ ಮಾನಸಿಕ ಶಕ್ತಿ ಮತ್ತು ಅವರಿಗಿರುವ ಏಕಾಗ್ರತೆಯನ್ನು ಮತ್ತು ಇಡೀ ಕಾದಂಬರಿಯ ಹೂರಣವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟ ಆ ಪುಸ್ತಕ ನನಗೆ ಅತ್ಯಂತ ಪ್ರಿಯವಾಗಿತ್ತು.

ಮುರಳಿಯ ಕೈಯನ್ನು ಕಭ್ಭಿಣದಂತೆ ಗಟ್ಟಿಯೆಂದು ಆದೇಶವಿತ್ತು. ನಂತರ ಸೂಜಿಯಿಂದ ಆಳಕ್ಕೆ ಚುಚ್ಚಿದ್ದರೂ ಆತನಿಗೆ ನೋವಾಗದಿದ್ದದ್ದು ನನಗೆ ಕುತೂಹಲದ ವಿಷಯ ಆದರೆ ಇದನ್ನೆಲ್ಲಾ ಹೇಳುವಾಗ ಅದರ ನೋವನ್ನುಣ್ಣುತ್ತಿದ್ದ. ಹಿಪ್ನಾಟಿಸಂ ಮುಖಾಂತರ ಕೆಲವು ಮಾನಸಿಕ ಜನ್ಯ ಖಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯ ಬಗ್ಗೆ ಆಗತಾನೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗೇರುವ ಪ್ರಯತ್ನದಲ್ಲಿದ್ದ ಆ ವೈದ್ಯರ ಮಾತುಗಳು ನನ್ನನ್ನು ಆ ಕಡೆಗೆ ಬಲವಾಗಿ ಸೆಳೆಯಿತು. ಅಂತೂ ಒಂದು ಶನಿವಾರ ಮತ್ತೊಮ್ಮೆ ಪ್ರಯೋಗ ಮಾಡಿ ತೋರಿಸಲು ಆ ವೈದ್ಯರನ್ನು ಒಪ್ಪಿಸಿ ನಾವೆಲ್ಲ ಆ ಶನಿವಾರಕ್ಕಾಗಿ ಕಾಯುತ್ತಾ ಕುಳಿತೆವು.

ಮತ್ತಷ್ಟು ಓದು »

7
ಮಾರ್ಚ್

ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?

– ನಿಲುಮೆ 
 

Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
 
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು  ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು  ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
3
ಮಾರ್ಚ್

ಬದುಕ ‘ಜಾತ್ರೆ’ ಯಲ್ಲಿ ಸಾಹಿತ್ಯದ ಪಾತ್ರ!

ಅರೆಹೊಳೆ ಸದಾಶಿವ ರಾವ್

ಒಂದು ರೀತಿಯ ನವೀಕರಣಗೊಂಡ ಮೂಡ್‌ನೊಂದಿಗೆ ಬರೆಯಕುಳಿತರೆ, ಅದೇಕೋ ‘ಜಾತ್ರೆ’ಬಹಳವಾಗಿ ಕಾಡುತ್ತಿದೆ. ಇದು ಎಲ್ಲೆಡೆಯಲ್ಲಿಯೂ ಜಾತ್ರೆನಡೆಯುವ ಸಂದರ್ಭ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಒಂದು ರೀತಿಯ ದೇವ-ದೈವದ ಕೇಂದ್ರವಾಗಿರುವ ಕಾರಣ, ಇದು ಒಂದು ರೀತಿಯ ಜಾತ್ರೆಯ ಸೀಸನ್. ಅದು ಕೋಲ, ಮಾರಿ, ನೇಮ, ರಥೋತ್ಸವ, ಗೆಂಡ ಸೇವೆ,…..ಇತ್ಯಾದಿ ಹೆಸರಿನಿಂದ  ನಡೆಯುವ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳಾದರೆ,  ಅಷ್ಟಬಂಧ, ಬ್ರಹ್ಮಕಲಶೋತ್ಸವ, ಪುನ:ಪ್ರತಿಷ್ಠೆ, ನಾಗಮಂಡಲ…..ಇತ್ಯಾದಿಗಳಿಂದ ಕರೆಯಿಸಿಕೊಳ್ಳುವ ವಿಶೇಷ ಉತ್ಸವಗಳು. ಈಗ ನೀವು ಒಮ್ಮೆ ರಸ್ತೆ ಬದಿ ಹಾದಿರಿ ಎಂದಾದರೆ, ಇಂತಹ ಬ್ಯಾನರ್‌ಗಳು, ಕಟೌಟ್‌ಗಳು, ತೋರಣಗಳು ಎಲ್ಲೆಂದರಲ್ಲಿ ಕಾಣಸಿಕ್ಕಿದರೆ, ಎಲ್ಲಾ ಧಾರ್ಮಿಕ ಕೇಂದ್ರಗಳು ಹೊಸ ಬಣ್ಣ ಬಳಿದುಕೊಂಡು ಸಿಂಗಾರಗೊಂಡು ನಿಂತಿರುತ್ತವೆ. ಇಂತಹ ಉತ್ಸವಗಳು ಇಡಿಯ ಊರಿಗೆ ಊರೇ ಸಂಭ್ರಮಿಸಲು ಕಾರಣವಾಗುತ್ತವೆ. ಈ ಮೂಲಕ ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ, ಊರಿನ ಸಂಭ್ರಮಕ್ಕೆ ಮೆರುಗು ನೀಡಿದರೆ, ಒಂದು ರೀತಿಯ ಜಡ ಹಿಡಿದ ಮನಸ್ಸುಗಳಿಗೆ ನವೀಕರಣವಾಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.

ಇತ್ತೀಚೆಗೆ ನನ್ನೂರಿನ ಜಾತ್ರೆಯಲ್ಲಿ ಎರಡು ದಿನ ಕಳೆದು ಬಂದಾಗ ನನಗನಿಸಿದ್ದು, ಇದೂ ಜೀವನದ ಒಂದು ಅವಿಭಾಜ್ಯ ಅಂಗವೇ ಅಲ್ಲವೇ ಎಂಬುದು. ಅಲ್ಲಿ ಏನುಂಟು ಏನಿಲ್ಲ ಹೇಳಿ? ಬಾಲ್ಯದ ಗೆಳೆಯರ ಪುನರ್ಮಿಲನ, ಕುಡಿಮೀಸೆಯ ದಿನಗಳ ಕನಸಿನ ಮರು ನೆನಪು, ಚಾಪೆ ಹಿಡಿದೇ ಆಟಕ್ಕೆಂದು ಹೋಗಿ ೫ರೂಪಾಯಿಯ ಟಿಕೆಟ್ ಪಡೆದು ಗದ್ದೆಯಲ್ಲಿ ಮಲಗಿ ಬೆಳಗ್ಗೆದ್ದು ಮನೆಗೆ ಮರಳಿದ ದಿನದ ಮೆಲುಕು, ಆಟಿಕೆಯ ಅಂಗಡಿಯ ಮುಂದೆ ನಿಂತು ಇದು ಬೇಕೇ ಬೇಕೆಂದು ರೊಚ್ಚೆ ಹಿಡಿದು ಸಿಗದಾಗ ಮನೆಗೆ ಬಂದು ಅಳುಮೋರೆ ಹಾಕಿ ಹಬ್ಬ ಬಹಿಷ್ಕಾರ ಮಾಡಿದ ದಿನಗಳ ಗಮ್ಮತ್ತು……ಒಂದೇ ಎರಡೇ!. ಇದೆಲ್ಲಾ ಬಾಲ್ಯದ ದಿನಗಳು ಮರಳಿ ಬರಬೇಕೆಂದರೆ ಮತ್ತು ಬದುಕಿನ ಇಂದಿನ ಜಂಜಡಗಳಿಗೆ ತುಸು ನೆಮ್ಮದಿ ಸಿಗಬೇಕೆಂದಿದ್ದರೆ, ವರ್ಷಕ್ಕೊಮ್ಮೆ ನಡೆಯುವ ಹಬ್ಬಕ್ಕೆ ಹೋಗಿಯೇ ಸವಿಯಬೇಕು ಎಂಬುದನ್ನು ಈ ಸಲ ನನ್ನೂರ ಹಬ್ಬ ನನಗೆ ಖಚಿತವಾಗಿಸಿತು.
ಮತ್ತಷ್ಟು ಓದು »

21
ಫೆಬ್ರ

ಕಾಂಗ್ರೆಸ್ ಸಂಸದ ಭಾರತಕ್ಕೆ ಸೇರಿದವನಲ್ಲವೇ?

ಮಹೇಶ ಪ್ರಸಾದ ನೀರ್ಕಜೆ

ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಬಾಬಾ ರಾಮ್ ದೇವ್ ಸಮಾವೇಶಕ್ಕೆ ಬಂದಿದ್ದ ಅಲ್ಲಿನ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಬಾಬಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬುದು ಇತ್ತೀಚಿನ ಸುದ್ದಿ. “ಯು ಬ್ಲಡಿ ಇಂಡಿಯನ್”, “ಸಾಲೆ ಕುತ್ತೇ, ಮೈಕ್ ತೋಡ್ ದೂಂಗಾ, ಸ್ಟೇಜ್ ಫೋಡ್ ದೂಂಗಾ, ಯೋಗಾ ಕರ್ನೇ ಆಯೀ ಹೇ, ಯೋಗಾ‌ ಕರ್. ಕರಪ್ಷನ್ ಕೆ ಬಾರೇ ಮೇ ಬೋಲೇಗಾ ತೋ ಮಾರ್ ಡಾಲೂಗಾ!” ಇತ್ಯಾದಿ. ಈ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತಿವೆ ಅಂತರ್ಜಾಲದಲ್ಲಿ. ನಮ್ಮ ಟಿವಿ ಮಾಧ್ಯಮಗಳು ಭಾರತ ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದಲ್ಲಿ ಹೇಗೆ ಭಾರತ ಬಾಂಗ್ಲಾದೇಶದ ಮೇಲೆ ಸೇಡು ತೀರಿಸಿಕೊಂಡಿತು ಎಂದು ವಿಮರ್ಷಿಸುವುದರಲ್ಲಿ ಬ್ಯುಸಿಯಾಗಿದ್ದವು. ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ. ಇರಲಿ. ಈಗ ಪ್ರಶ್ನೆಯೇನೆಂದರೆ ಕಾಂಗ್ರೆಸ್ ಸಂಸದ ಬಾಬಾರನ್ನು “ಯೂ ಬ್ಲಡಿ ಇಂಡಿಯನ್”ಅನ್ನಬೇಕಿದ್ದರೆ ಆತ ಇಂಡಿಯನ್ ಅಲ್ಲವೇ? ಎಲ್ಲಿಯವನು ಆತ? ಚೈನಾದವನೇ? ಅಥವಾ ಬೋಡೋ ದೇಶದವನೇ? ಅಥವಾ ಬೇರೆ ಪಾಶ್ಚಿಮಾತ್ಯ ದೇಶದವನೇ?
ಮತ್ತಷ್ಟು ಓದು »

19
ಫೆಬ್ರ

ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ?

– ಸುಪ್ರೀತ್.ಕೆ.ಎಸ್

ಈ ಲೇಖನದ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ pg12_3 ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ. ಮತ್ತಷ್ಟು ಓದು »

18
ಫೆಬ್ರ

ದುರಂತ ನಾಯಕ

ರೂಪಾ

ಸ್ಮಶಾನಕ್ಕೆ ಕಾಲಿಟ್ಟಂತಹ ಅನುಭವ.ಒಬ್ಬಂಟಿಯಾಗಿ ನಡೆಯುತ್ತಿದ್ದೆ.

ಎಲ್ಲಿ ನೋಡಿದರೂ ಮುರಿದ ರಥಗಳು, ರಕ್ತದ ಮಡುವು, ಕರುಳು ಆಚೆ ಕಿತ್ತು ಬಂದಿರುವ ಸೈನಿಕರು. ನಿಟ್ಟುಸಿರು ತಂತಾನೆ ಹೊರಹೊಮ್ಮಿತು .

ದೀರ್ಘವಾಗಿ ಉಸಿರೆಳೆದೆ. ನನ್ನ ಸ್ವಾರ್ಥಕ್ಕೆ, ಹಣದಾಹಕ್ಕೆ, ಭೂಮಿಯಾಸೆಗೆ, ಅಭಿಮಾನಕ್ಕೆ ಬಲಿಯಾದ ಮುಗ್ಧರು. ತಾವು ಏತಕ್ಕಾಗಿ ಯಾರಿಗಾಗಿ ಯುದ್ದ್ದ ಮಾಡುತ್ತಿದ್ದೆವೆಂಬ ಅರಿವೂ ಇಲ್ಲದವರು.

 

ಅದೂ ನನ್ನದೇ ಅಪ್ಪಣೆಯಾಗಿತ್ತಲ್ಲವೇ. ಪ್ರತಿಯೊಂದು ಗಂಡಸೂ ಯುದ್ದರಂಗದಲ್ಲಿ ಹೋರಾಡಬೇಕೆಂಬ ನಿಯಮ ತಂದು ಮನೆ ಮನೆಗೆ ನುಗ್ಗಿ ೧೪ ರಿಂದ ೭೦ ರವರೆಗಿನ ಪುರುಷರನ್ನು ಎಳೆತಂದು ಯುದ್ದ ತರಬೇತಿ ಕೊಟ್ಟು……….

ಆಗ ತಾನೆ ಮದುವೆಯಾಗಿತ್ತಲ್ಲವೇ ಲಕ್ಷ್ಮಣನಿಗೆ. ಹಾ ಕಂದ ಲಕ್ಷ್ಮಣನನ್ನು ನೆನೆದು ಕರುಳು ಹರಿದಂತಾಯಿತು. ತನ್ನ ಮುಂದೆಯೇ ಕೊಂದನಲ್ಲಾ ಆ ಎನ್ನ ಅರಿ ಅರ್ಜುನನ ಮಗ ಅಭಿಮನ್ಯು. ತಾನೇನೂ ಮಾಡಲಾಗಲಿಲ್ಲವಲ್ಲಾ . ಇಲ್ಲ ಇಲ್ಲ ಅವನನ್ನೂಕೊಂದು ಬಿಟ್ಟೆವಲ್ಲ್ಲಾ ಅವನೂ ಹೊಸದಾಗಿ ಮದುವೆಯಾದವನೇ ತಾನೆ. ದ್ವೇಷಕ್ಕೆ ದ್ವೇಷ . ಸೇಡಿಗೆ ಸೇಡು . ಅವನನ್ನು ಕೊಂದ ತಪ್ಪಿಗೆ ಸೈಂಧವನ ಬಲಿ. ಪ್ರೀತಿಯ ಸಹೋದರಿ ವಿಧವೆಯಾದಳು. ಮತ್ತಷ್ಟು ಓದು »

10
ಫೆಬ್ರ

ನಾಸ್ತಿಕನಾಗೋದು ಅಂದ್ರೆ….

ಸಾತ್ವಿಕ್ ಎನ್ ವಿ 

ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
ನಮ್ಮ ‘ಅವಸ್ಥೆಯ’ ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ.    ಮತ್ತಷ್ಟು ಓದು »

9
ಫೆಬ್ರ

ಮದರ್ ತೆರೇಸಾ ಸೋಗುಗಾತಿ ಎಂದವನು ಓಶೋ!!!

ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ಮತ್ತಷ್ಟು ಓದು »

4
ಫೆಬ್ರ

ಇದು ಕನ್ನಡಕ್ಕಾದ ಅವಮಾನವಲ್ಲವೇ?

ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ  ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್  ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!

ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?

ಯಾವುದೇ ರಾಜಕೀಯ ಪಕ್ಷ,ಸಂಘಟನೆ, ಪಂಥಕ್ಕೆ ಸೇರದ ಒಬ್ಬ ಸಾಮನ್ಯ ಕನ್ನಡಿಗನ ಕಣ್ಣಿಗೆ ಚಿಮೂ ಅವರು,ಕನ್ನಡದ ಪ್ರಖ್ಯಾತ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕರಾಗಿ ಮಾತ್ರ ಕಾಣಬಲ್ಲರು.

ಇಂತ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವುದು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಪ್ರಾಚೀನ ಕರ್ನಾಟಕದ ಬಗ್ಗೆ ಅವರ ಒಲವನ್ನ,ನಿಷ್ಠೆಯನ್ನ,ತುಡಿತವನ್ನ ಮತ್ತು ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸವನ್ನ ಕಡೆಗಣಿಸಿದಂತೆ ಅವಮಾನಿಸಿದಂತಲ್ಲವೇ? ಕನ್ನಡಕ್ಕಾಗಿ ಕೆಲಸ ಮಾಡಿದವರನ್ನ ಕಡೆಗಣಿಸುವುದು ಕನ್ನಡಿಗರನ್ನ,ಕರ್ನಾಟಕವನ್ನ ಕಡೆಗಣಿಸಿದಂತೆ-ಅವಮಾನಿಸಿದಂತೆಯೇ ಸರಿ. ಮತ್ತಷ್ಟು ಓದು »