ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

22
ಫೆಬ್ರ

ಭಾರತದ ಎಡಪಂಥೀಯರು ದೇಶವಿರೋಧದತ್ತೇಕೆ ಸಾಗುತ್ತಾರೆ?

– ವಿನಾಯಕ್ ಹಂಪಿಹೊಳಿ

ಕಮ್ಯುನಿಸ್ಟ್ಭಾರತದಲ್ಲಿ ಇಂದು ಎಡಪಂಥವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಪಡೆದರೂ, ಶಿಕ್ಷಣ ಕ್ಷೇತ್ರದ ಎಲ್ಲ ಆಯಕಟ್ಟಿನ ಜಾಗಗಳನ್ನು ಆವರಿಸಿದರೂ, ಸೋಶಿಯಲ್ ಮೀಡಿಯಾ ಹೊರತುಪಡಿಸಿ ಬಹುತೇಕ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಎಡಪಂಥೀಯ ಚಿಂತನೆಯನ್ನೇ ಪ್ರಸಾರ ಮಾಡಿದ್ದರೂ, ಸರ್ಕಾರೀ ಪ್ರಶಸ್ತಿಗಳಲ್ಲಿ ಬಹುತೇಕ ಪಾಲನ್ನು ಎಡಪಂಥೀಯರಿಗೆ ಮೀಸಲಿಟ್ಟಿದ್ದರೂ, ಹಲವಾರು ಜನಪರ ಸರ್ಕಾರೀ ಯೋಜನೆಗಳು ಎಡಪಂಥೀಯ ಚಿಂತನೆಯನ್ನೇ ಅವಲಂಬಿಸಿಕೊಂಡಿದ್ದರೂ ಅದೇಕೋ ಬಹುತೇಕ ಭಾರತೀಯರು ಮಾತ್ರ ಎಡಪಂಥವನ್ನು ಒಪ್ಪಿಕೊಂಡೇ ಇಲ್ಲ.

ಎಡಪಂಥ ಶಬ್ದವು ಫ್ರೆಂಚ್ ಕ್ರಾಂತಿಯ ಅವಧಿಯಲ್ಲಿ ಹುಟ್ಟಿರುವ ಶಬ್ದವಾದರೂ ಕಾಲಕ್ರಮದಲ್ಲಿ, ಸೋಶಿಯಾಲಿಸಂ, ಕಮ್ಯುನಿಸಂ ಮುಂತಾದ ಕಲ್ಪನೆಗಳನ್ನು ಒಳಗೊಳ್ಳುತ್ತ ಹೋಯಿತು. ಸಮಾಜದಿಂದ ಹೆಚ್ಚು ಪ್ರಯೋಜನ ಪಡೆಯಲಾಗದವರ ಕುರಿತು ವಿಶೇಷ ಕಾಳಜಿಯನ್ನು ತೋರಿಸುವದು ಎಡಪಂಥದ ತತ್ತ್ವ. ಬಹುಸಂಖ್ಯಾತ ರಿಲಿಜನ್ನಿನವರಿಂದ ತುಳಿತಕ್ಕೊಳಗಾಗುವ ಅಲ್ಪಸಂಖ್ಯಾತ ರಿಲಿಜನ್ನಿನ ಜನರ ಕುರಿತು ಕಾಳಜಿ ತೋರಿಸುತ್ತದೆ. ಶ್ರೀಮಂತರಿಂದ ಅನ್ಯಾಯಕ್ಕೊಳಗಾದ ಬಡವರ ಪರವಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಎಂಬ ಆದರ್ಶ ಸ್ಥಾಪಿಸುವದೇ ಇದರ ಉದ್ದೇಶ.

ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಪ್ರತಿಯೊಂದನ್ನೂ ಎಡಪಂಥವು ವಿರೋಧಿಸುತ್ತದೆ. ಬಹುಸಂಖ್ಯಾತರಿರುವ ರಿಲಿಜನ್ನಿನ ಜನರಿಂದ ಅಲ್ಪಸಂಖ್ಯಾತರ ರಿಲಿಜನ್ನಿನ ಜನರಿಗೆ ಸಾಮಾಜಿಕ ಅನ್ಯಾಯಗಳಾಗುವದರಿಂದ ರಿಲಿಜನ್ನುಗಳನ್ನು ವಿರೋಧಿಸುತ್ತದೆ. ಖಾಸಗೀ ಉದ್ಯಮಗಳಿಂದಾಗಿ ಆರ್ಥಿಕ ಸಂಪತ್ತುಗಳು ಉದ್ದಿಮೆದಾದರಲ್ಲಿಯೇ ಕ್ರೋಢೀಕರಣಗೊಳ್ಳುವದರಿಂದ ಖಾಸಗೀಕರಣವನ್ನು ವಿರೋಧಿಸುತ್ತದೆ. ರೈತರು ಬೆಳೆಯುವ ಬೆಳೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಜಮೀನುದಾರರನ್ನು ವಿರೋಧಿಸುತ್ತದೆ.

ಮತ್ತಷ್ಟು ಓದು »

17
ಫೆಬ್ರ

ಏಕರೂಪ ನಾಗರಿಕ ಸಂಹಿತೆ – ಸುಪ್ರೀಂ ಕೋರ್ಟ್ V/S ಜಮಾತೆ ವಿಚಾರಧಾರೆ

– ಅನಿರುದ್ಧ ವಸಿಷ್ಟ,ಭದ್ರಾವತಿ

ಅರಾಜಕತೆ ತಂದೊಡ್ಡದಿರಲಿ ಧರ್ಮಾಧಾರಿತ ಕಾನೂನು

Uniform Civil Codeಪ್ರಜಾಪ್ರಭುತ್ವ ದೇಶದಲ್ಲಿರುವ ಭಾರತೀಯರಿಗೆ ದೇಶದ ಸಂವಿಧಾನವೇ ಮೇಲ್ಪಂಕ್ತಿಯಾಗಿದ್ದು, ಸಂವಿಧಾನವೇ ಅಂತಿಮವಾದುದು. ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್‌ಗಳು ಆಯಾ ಧರ್ಮದ ಅನುಯಾಯಿಗಳ ವೈಯಕ್ತಿಕವಾಗಿರಬೇಕು.ಆದರೆ,ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಸಂವಿಧಾನ ವಿರುದ್ಧ ನಡೆಯಲು ಪ್ರೇರಣೆಯಾಗುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ದುರಂತವೇ ಹೌದು.೩೦೦ ವರ್ಷಗಳ ಕಾಲ ಬ್ರಿಟೀಷರಿಂದ ಆಳಿಸಿಕೊಂಡ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರೂ, ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯನ್ನೆ ಇಂದಿಗೂ ಹೊಂದಿದೆ ಎಂದರೆ ತಪ್ಪಲ್ಲ. ಇದು ಕೇವಲ ಆಳುವ ಪಕ್ಷಗಳ ಮನಸ್ಥಿತಿ ಮಾತ್ರವಲ್ಲ, ದೇಶದ ಪ್ರತಿ ಧರ್ಮ ಹಾಗೂ ಜಾತಿಗಳಲ್ಲಿ ಇದು ಹಾಸು ಹೊಕ್ಕಾಗಿದೆ.

೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರೂಪಿಸಲಾದ ಸಂವಿಧಾನ ಮಹೋನ್ನತ ಆಶಯಗಳನ್ನು ಹೊಂದಿದೆ.ಸಂವಿಧಾನವೇ ಭಾರತೀಯರಿಗೆ ಒಂದು ರೀತಿಯಲ್ಲಿ ಸವೋತ್ತಮ ಎಂದರೂ ತಪ್ಪಲ್ಲ. ಆದರೆ, ಸಂವಿಧಾನ ಆಶಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾವುದೇ ಸರ್ಕಾರ ಅಥವಾ ಧರ್ಮಗಳು ನಡೆದುಕೊಂಡಾಗ ಅದನ್ನು ನ್ಯಾಯಾಂಗದಲ್ಲಿ ಪ್ರಶ್ನೆ ಮಾಡುವ ಅಧಿಕಾರವನ್ನು ಇದೇ ಸಂವಿಧಾನ ಕಲ್ಪಿಸಿದೆ. ಆದರೆ, ಯಾವುದೇ ಒಂದು ಒಳ ವ್ಯವಸ್ಥೆ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸುತ್ತದೆ ಎಂದರೆ ಹೇಗೆ?

ಮತ್ತಷ್ಟು ಓದು »

16
ಫೆಬ್ರ

ಜೆಎನ್‍ಯು : ಯೂನಿವರ್ಸಿಟಿಯ ಹೆಸರಲ್ಲೇ ದೋಷ ಇರಬಹುದೆ?!

– ರೋಹಿತ್ ಚಕ್ರತೀರ್ಥ

ಜೆಎನ್‍ಯುನೇರಾನೇರವಾಗಿ ವಿಷಯಕ್ಕೆ ಬರೋಣ. ಜವಹರ್‍ಲಾಲ್ ನೆಹರೂ ಹೆಸರಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮೊನ್ನೆ ಫೆಬ್ರವರಿ 9ನೇ ತಾರೀಖು ಡಿಎಸ್‍ಯು (ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್) ಎಂಬ ಸಂಘಟನೆಯ ವಿದ್ಯಾರ್ಥಿಗಳು ಎರಡು ವರ್ಷದ ಹಿಂದೆ ನೇಣುಗಂಬವೇರಿದ್ದ ಒಬ್ಬ ಭಯೋತ್ಪಾದಕನ “ಪುಣ್ಯತಿಥಿ”ಯನ್ನು ಆಚರಿಸಲು ನಿರ್ಧರಿಸಿದ್ದರು. ಕಾರ್ಯಕ್ರಮಕ್ಕೆ ಅವರು ಕೊಟ್ಟಿದ್ದ ಹೆಸರು “ಅಫ್ಜಲ್ ಗುರು ಮತ್ತು ಮಖ್‍ಬೂಲ್ ಭಟ್‍ರ ನ್ಯಾಯಾಂಗ ಹತ್ಯೆಯ ನೆನಪಿನಲ್ಲಿ” ನಡೆಸುವ ಕಾರ್ಯಕ್ರಮ ಎಂದು. ಈ ಡಿಎಸ್‍ಯು ಒಂದು ಮಾವೋವಾದಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ. ದೇಶದೊಳಗಿನ ಮಾವೋವಾದಿ ನಕ್ಸಲರಿಗೆ ಗುಟ್ಟಿನಿಂದಲ್ಲ, ಓಪನ್ ಆಗಿ ಬೆಂಬಲ ಸೂಚಿಸುವ ಸಂಘಟನೆ ಇದು! ಆದರೆ, ಎಲ್ಲಿಯವರೆಗೆ ಈ ಸಂಘಟನೆಯ ವಿದ್ಯಾರ್ಥಿಗಳು ತಾವಾಗಿ ಬಂದೂಕು ಹಿಡಿದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ತಿರುಗಾಡುವುದಿಲ್ಲವೋ ಅಲ್ಲಿಯವರೆಗೂ ಅವರನ್ನು ಸಹಿಸಿಕೊಳ್ಳಬಹುದು ಎಂಬುದು ವಿವಿಯ ಉದಾರ ಧೋರಣೆ. ಫೆಬ್ರವರಿ 9ರಂದು ಆಯೋಜನೆಯಾಗಿದ್ದ ಕಾರ್ಯಕ್ರಮದ ಬಗ್ಗೆ ಕಣ್ಮುಚ್ಚಿ ಕುಳಿತಿದ್ದ (ಅಸಲಿಗೆ ಮಾಹಿತಿಯೇ ಇರದಿದ್ದ) ವಿವಿಯ ಆಡಳಿತ ಮಂಡಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒಂದು ಪತ್ರ ಬರೆದು “ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಸಾರವಾಗಿ ಶಿಕ್ಷೆಗೊಳಪಟ್ಟ ಒಬ್ಬ ಉಗ್ರನ ಹೆಸರಲ್ಲಿ ಅವನ ಪುಣ್ಯತಿಥಿಯನ್ನು ಕ್ಯಾಂಪಸ್ ಒಳಗೆ ಆಚರಿಸುವುದು ಸರಿಯೇ? ಇದು ನ್ಯಾಯಾಂಗ ನಿಂದನೆ ಮಾತ್ರವಲ್ಲ; ದೇಶದ ಸಮಗ್ರತೆಯನ್ನೇ ಪ್ರಶ್ನಿಸುವ ಕೆಲಸ. ಇಂಥ ಅನರ್ಥಗಳು ನಡೆಯದಂತೆ ವಿವಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಕೇಳಿಕೊಂಡಿತು. ಬಹುಶಃ ಆಗ ವಿವಿಗೂ ಈ ಸಂಗತಿ ಮುಂದೆ ಹೇಗೆಲ್ಲ ಕವಲೊಡೆಯಬಹುದು, ಎಷ್ಟು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂಬ ಅಂದಾಜು ಸಿಕ್ಕಿರಬೇಕು. ಕೂಡಲೇ ಅದು ಡಿಎಸ್‍ಯು ಸಂಘಟನೆಯ ಮುಖಂಡರನ್ನು ಕರೆದು, ಇಂಥಾದ್ದನ್ನೆಲ್ಲ ಇಲ್ಲಿ ಇಟ್ಟುಕೊಳ್ಳಬೇಡಿ; ಕ್ಯಾಂಪಸ್ ಹೊರಗೆ ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಸ್ಪಷ್ಟ ಸೂಚನೆ ಕೊಟ್ಟಿತು.

ಮತ್ತಷ್ಟು ಓದು »

6
ಫೆಬ್ರ

ಇವರದ್ದು ಅಭಿವೃದ್ಧಿ! ಅವರದ್ದು ವ್ಯಾಪಾರ!?

ರಾಜ್ಯದಲ್ಲಿ ೯೬೩೨ ಕಿಮೀ ರಾಷ್ಟ್ರೀಯ ಹೆದ್ದಾರಿಯಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದರೆ, ಕೇಂದ್ರದಿಂದ ೧ ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿಕೊಡಲು ಸಿದ್ಧರಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದ ಕಾಂಗ್ರೆಸ್ಸಿಗರೇ, ಕೇಂದ್ರ ಈ ತೀರ್ಮಾನಕ್ಕೆ ಈಗೇನು ಹೇಳುತ್ತೀರಿ? ಕೇಂದ್ರದಲ್ಲಿ ನಿಮ್ಮ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವಿದ್ದ ವೇಳೆ ಇಂತಹ ವಿಶಾಲ ಮನಸ್ಥಿತಿಯನ್ನು ಪ್ರದರ್ಶಿಸಿದ್ದಿರೇ? ನಾಚಿಕೆಯಾಗಬೇಕು ನಿಮ್ಮ ಮನಸ್ಥಿತಿಗೆ.

– ಎಸ್.ಆರ್ ಅನಿರುದ್ಧ ವಸಿಷ್ಠ,ಭದ್ರಾವತಿ

ಇನ್ವೆಸ್ಟ್ ಕರ್ನಾಟಕಬನ್ನಿ, ಕರ್ನಾಟಕದಲ್ಲಿ ಬಂಡವಾಳ ಹೂಡಿ: ರಾಜ್ಯದ ಪರವಾಗಿ ಉದ್ಯಮಿಗಳ ಕರೆ…
ಎಷ್ಟಾದರೂ ಭೂಮಿ ಕೊಡಲು ಸಿದ್ಧರಿದ್ದೇವೆ: ಸಿದ್ಧರಾಮಯ್ಯ…
ಇದು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ಇನ್ವಸ್ಟ್ ಕರ್ನಾಟಕ ಸಮಾವೇಶದ ಪ್ರಮುಖ ನುಡಿಮುತ್ತುಗಳು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ಇದರಲ್ಲಿ ಪಾಲ್ಗೊಂಡ ಗಣ್ಯೋದ್ಯಮಿಗಳು ರಾಜ್ಯದ ಹಲವೆಡೆ ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಮೊದಲ ದಿನವೇ ಈ ಕುರಿತ ೯೫ ಸಾವಿರ ಕೋಟಿ ಹೂಡಿಕೆಯ ೧೦೦ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ದೇಶದ ಉದ್ಯಮ ಕ್ಷೇತ್ರದಲ್ಲಿ ದಿಗ್ಗಜರು ನಿನ್ನೆಯ ವೇದಿಕೆಯಲ್ಲಿ ಉಪಸ್ಥಿತರಿದ್ದು, ಇವರಿಗೆಲ್ಲಾ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಂಪು ಹಾಸು ಹಾಕಿ ಬರಮಾಡಿಕೊಂಡಿದೆ. ಈ ಮೂಲಕ ಸಮಾಜವಾದ ಹಾಗೂ ಬಡವರ ಪರ ಮಾತನಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬಂಡವಾಳಶಾಹಿಗಳಿಗೆ ಮಣೆ ಹಾಕಿದೆ!!

ಹೌದು, ತಮ್ಮದು ಬಡವರ ಪರ ಸರ್ಕಾರ, ಅಹಿಂದ ಪರವಾಗಿಯೇ ನಮ್ಮ ಯೋಜನೆಗಳು, ದೀನ ದ..ರ ಅಭಿವೃದ್ಧಿಯೇ ನಮ್ಮ ಗುರಿ. ಆದರೆ, ಬಿಜೆಪಿ ಹಾಗೂ ನರೇಂದ್ರ ಮೋದಿ ಕಾರ್ಪೊರೇಟ್ ಸಂಸ್ಕೃತಿಯವರು. ಮೋದಿ ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ. ದೇಶದ ಬಡ ರೈತನಿಂದ ಹಿಡಿದು, ಜನ ಸಾಮಾನ್ಯರ ಹಿತವನ್ನು ಕಡೆಗಣಿಸಿರುವ ಮೋದಿ, ಉದ್ಯಮಿಗಳಿಗೆ ಹಾಗೂ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ದೇಶವನ್ನು ಮಾರಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿಯಿಂದ ಮೊದಲ್ಗೊಂಡು, ಕಾಂಗ್ರೆಸ್‌ನ ಕೆಲ ಹಂತದ ಕಾರ್ಯಕರ್ತನವರೆಗೂ ಹೀಗಳೆದಿದ್ದರು. ಮತ್ತಷ್ಟು ಓದು »

4
ಫೆಬ್ರ

ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು!

– ಸಂಕೇತ್ ಡಿ ಹೆಗಡೆ

ರೋಹಿತ್ ವೆಮುಲಾಆವತ್ತು ಗೆಲೆಲಿಯೋ ಹೇಳಿದ್ದಿಷ್ಟೆ… “ನೀವು ಅಂದುಂಕೊಂಡಂಗೆ ಭೂಮಿ ಚಪ್ಪಟೆ ಇಲ್ರಪಾ.. ಅದು ಗೋಳಾಕಾರವಾಗಿದೆ” ಅಂತ. ಅವತ್ತಿನ ಕ್ಯಾಥೋಲಿಕ್ ಚರ್ಚ್ ಕೆಂಡಾಮಂಡಲವಾಯಿತು. ಏನು ಹೇಳಿದ್ದೇಯೊ ಆ ನಿನ್ನ ಥಿಯರಿಯನ್ನ ಮುಚ್ಚಿಕೊಂಡು ವಾಪಸ್ ತಗಂಬಿಡು ಅಂದಿತು. ಹಿಂದೊಬ್ಬ ಹೀಗೆಯೇ ಹೇಳಿ ಕೊನೆಗೆ ಹೆದರಿಸಿಕೊಂಡು ಸುಮ್ಮನಾಗಿದ್ದ. ಆದರೆ ಗೆಲೆಲಿಯೋ ಸುಮ್ಮನಿರುವ ಜಾಯಮಾನದವನಲ್ಲ. ತನ್ನದೇ ಸರಿ ಅಂದ. ತಾನು ಸಾಕ್ಷ್ಯ ಒದಗಿಸಬಲ್ಲೆ ಅಂದ. “ಈವಯ್ಯ ವಸಿ ಜಾಸ್ತಿ ಹಾರಾಡ್ತಿದಾನೆ” ಅಂತ ಆತನನ್ನು ಗೃಹಬಂಧನದಲ್ಲಿರಿಸಿದರು. ಶಿಕ್ಷೆ ಕೊಟ್ಟರು. ಆದರೆ ಕೊನೆಗೇನಾಯಿತು ಹೇಳಿ, ಸತ್ಯ ಸತ್ತುಹೋಯಿತಾ? ಒಂದಿಷ್ಟು ಅಜ್ಞಾನಿಗಳ ಗುಂಪು ಸುಳ್ಳನ್ನು ನಂಬಿ, ಇತರರನ್ನೂ ನಂಬಿಸಹೊರಟರು ಅಂತ ಭೂಮಿಯೇನಾದರೂ ಪುಸಕ್ಕಂತ ಚಪ್ಪಟೆಯಾಗಿಬಿಟ್ಟಿತಾ? ಇಲ್ಲ. ವಿಷಯಕ್ಕೆ ಬರುವ ಮುನ್ನ ತಮ್ಮನ್ನು ತಾವು ಎಡ ಅಥವಾ ಬಲಪಂಥದವರು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರಿಗೆ ಈ ಘಟನೆಯನ್ನ ಮತ್ತೊಮ್ಮೆ ಓದಲು ರೆಕಮೆಂಡ್ ಮಾಡುತ್ತೇನೆ. ಅಂದಹಾಗೆ ನೀವು ನಿಮ್ಮ ಪೂರ್ವಗ್ರಹಗಳನ್ನ ಈ ದೇಶದ, ದೇಶದ ಜನರ ಮೇಲೆ ಹೇರಹೊರಟರೆ, ಅದರಲ್ಲಿ ನಿಮಗೆ ಯಶಸ್ಸು ಅಂತ ಸಿಕ್ಕರೆ, ಅದು ತಾತ್ಕಾಲಿಕ ಅಷ್ಟೆ. ಸತ್ಯವೇನು ಅಂತ ದೇಶವಾಸಿಗಳಿಗೆ ಒಂದಲ್ಲ ಒಂದು ದಿನ ಗೊತ್ತಾಗೇ ತೀರುತ್ತೆ!

ಭಾರತದ ಬಗ್ಗೆಯೊಂದು ಓಬಿರಾಯನ ಕಾಲದ ಪೂರ್ವಗ್ರಹವಿದೆ. “ಭಾರತದಲ್ಲಿ ದಲಿತರನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳಲಾಗತ್ತೆ. ಸಮಾಜದ ಸ್ತರಸ್ತರದಲ್ಲೂ ತಾರತಮ್ಯದ ಕಬಂಧಬಾಹುಗಳು ಕಾಣಸಿಗುತ್ತವೆ” ಅಂತ! ನಾನು ಒಪ್ಪಿಕೊಂಡು ಬಿಡುತ್ತೇನೆ. ಭಾರತದಲ್ಲಿ ತಾರತಮ್ಯ ಇತ್ತು. ಯಾಕೆ, ಅಸ್ಪೃಶ್ಯತೆ ಎಂಬ ನಾಚಿಗೇಡಿನ ಆಚರಣೆಯೂ ಇತ್ತು. ಯೆಸ್, ಮೇಲ್ವರ್ಗದವರು ಕೆಳವರ್ಗದವರನ್ನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದ, ಅವರನ್ನು ಹಿಂಸಿಸುತ್ತಿದ್ದ ಕಾಲವೊಂದು ಇತ್ತು. ಒಬ್ಬ ಮೇಲ್ವರ್ಗದಲ್ಲಿ ಜನಿಸಿದ ಹುಡುಗನಾಗಿ ಇವತ್ತು ನಾನು ಆ ಕಾಲದಲ್ಲಿ ನಡೆದುಹೋದ ಆ ಕೊಳಕು ಆಚರಣೆಗಳ ಓದಿ ನಾಚಿಕೆಯಿಂದ ತಲೆತಗ್ಗಿಸುತ್ತೇನೆ! ಇವತ್ತಿಗೂ ತಾರತಮ್ಯ ಸಂಪೂರ್ಣವಾಗಿ ತೊಲಗಿಲ್ಲ ಬಿಡಿ. ನಗರ ಭಾರತದಲ್ಲಿ ತೊಲಗಿದೆ. ಮುಂದುವರಿದ ಗ್ರಾಮೀಣ ಭಾರತದಲ್ಲೂ ಬಹುತೇಕ ಸತ್ತಿದೆ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಇನ್ನೂ ಜೀವಂತವಿದೆ. ಆದರೆ ಈ ಪ್ರಗತಿಪರರು ಅನಿಸಿಕೊಂಡಿರುವವರು ಇವತ್ತು ಬೀದಿಬೀದಿಯಲ್ಲಿ ಬೊಂಬ್ಡಾ ಬಜಾಯಿಸುತ್ತಿರುವಂತೆ ಕತ್ತು ಹಿಸುಕುವ ತಾರತಮ್ಯವೇನು ಸಮಾಜದ ಮುಖ್ಯವಾಹಿನಿಯಲ್ಲಿ ಇಲ್ಲ. ಇವತ್ತು ದಲಿತರಿಗೆ ಪ್ರತಿಯೊಂದರಲ್ಲೂ ಸಾಕುಬೇಕಷ್ಟು ಮೀಸಲಾತಿ ಒದಗಿಸಿ, ಅವರು ಸಮಾಜದಲ್ಲಿ ಎಲ್ಲಾ ಸ್ಥಾನಗಳಲ್ಲೂ ಮಿಂಚುವಂತೆ ಈ ಸಮಾಜ ನೋಡಿಕೊಂಡಿದೆ.  ಇವತ್ತೇನು ನಡೆಯುತ್ತಿದೆ ಅಂತ ನಾವು ಓದಿ ತಿಳಿಯಬೇಕಿಲ್ಲ. ಕಣ್ಣಿದ್ದವರಿಗೆಲ್ಲ ಕಾಣಿಸುತ್ತೆ. ಇದೇ ‘ಜಾತ್ಯತೀತ’ ರಾಷ್ಟ್ರದಲ್ಲಿ ಚಿಕ್ಕವನಿದ್ದಾಗಿನಿಂದ ಇಲ್ಲಿಯವರೆಗೂ ನನ್ನ ಜಾತಿಯ ಕಾರಣಕ್ಕಾಗಿ ಅರ್ಹತೆಯಿದ್ದರೂ ಅನೇಕ scholarshipಗಳಿಂದ ವಂಚಿತನಾದವನು ನಾನು.ಆತ ಅನುಕೂಲಸ್ಥ ಕುಟುಂಬದವನೇ ಆದರೂ, ಓದುವ ಸಕಲ ಸುವರ್ಣಾವಕಾಶಗಳಿದ್ದರೂ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನನಗಿಂತ ಬಹಳ ಕೆಟ್ಟ rank ತೆಗೆದವ ನನ್ನದೇ ಕಾಲೇಜಿನಲ್ಲಿ ಓದುವುದನ್ನು ಕಂಡೂ ಕಾಣದಂತೆ ಸುಮ್ಮನಿರುವವ ನಾನು. ನನ್ನಷ್ಟೇ ಅಂಕಗಳನ್ನು ಪಡೆದರೂ, ನನ್ನ ಕಾಲೇಜಿನ ಹತ್ತುಪಟ್ಟು ಒಳ್ಳೆಯ ಸ್ಥಾನವಿರುವ ಕಾಲೇಜಿನಲ್ಲಿ, ನಾನು ಕೊಡುವ ಅರ್ಧ ಫೀಯನ್ನೂ ಕೊಡದೆ ಓದುವವರ ಕಂಡು ಆದ ಬೇಸರವ ಹೊಟ್ಟೆಯಲ್ಲಿ ನುಂಗಿಕೊಂಡು ಓದುತ್ತಿರುವವನು ನಾನು. ನನ್ನ ಜಾತಿಯ ಕಾರಣಕ್ಕಾಗಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತವಾದ ಕುಟುಂಬಕ್ಕೆ ಸೇರಿದವನು ನಾನು. So, for your kind information ಭಾರತದಲ್ಲಿ ದಲಿತರ ಮೇಲೆ ಮಾತ್ರ “ಅಮಾನವೀಯ” “ಸೋ”ಸಣೆಯಾಗುತ್ತಿದೆ ಅಂತ ನನ್ನ ಮುಂದೆ ಪುಂಗಿ ಓದುವ ಅವಶ್ಯಕತೆ ಇಲ್ಲ.
ಮತ್ತಷ್ಟು ಓದು »

21
ಜನ

ರೋಹಿತ್‌ ಬದುಕು ಮತ್ತು ಸಾವಿನ ಸುತ್ತ ರಾಜಕೀಯ

– ಇಂಚರ

ರೋಹಿತ್ ವೆಮುಲಾರೋಹಿತ್ ವೆಮುಲಾ – ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ….. ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಮತ್ತಷ್ಟು ಓದು »

7
ಜನ

ಅಶ್ವತ್ಥಾಮನಿಗೆ ಬ್ರಹಾಸ್ತ್ರ ಒಲಿದಂತೆ – ಪ್ಲುಟೋನಿಯಂ ಬೆಂಕಿಗೆ ಜಲಜನಕದ ತುಪ್ಪ

– ವಿನಾಯಕ್ ಹಂಪಿಹೊಳಿ

ಉತ್ತರ ಕೊರಿಯಾ1ಸ್ಪೆಷಲ್ ರಿಲೇಟಿವಿಟಿ ಸಿದ್ಧಾಂತವನ್ನು ಐನ್ಸ್ಟೈನ್ ಮುಂದಿಟ್ಟಾಗ ಅದರದ್ದೊಂದು ಇಕ್ವೇಷನ್ನು E= mc2 ತುಂಬಾ ಸಂಚಲನ ಉಂಟು ಮಾಡಿತ್ತು. ಏಕೆಂದರೆ ಅದು ದ್ರವ್ಯರಾಶಿ ಮತ್ತು ಶಕ್ತಿಗಳನ್ನು ಸಮೀಕರಣಗೊಳಿಸಿತ್ತು. ಆದರೂ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಕ್ಕಿರಲಿಲ್ಲ. ಅದು ಸಿಕ್ಕಿದ್ದು ಯುರೇನಿಯಂ ಎಂಬ ಭಾರದ ಪರಮಾಣುವಿಗೆ ನ್ಯೂಟ್ರಾನೊಂದು ಬಡಿದಾಗ ಬೀಜವಿದಳನ ನಡೆದು ಬೇರಿಯಂ ಮತ್ತ್ರು ಕ್ರಿಪ್ಟಾನ್ ಪರಮಾಣುಗಳು ರಚನೆಯಾದಾಗ. ಆ ಬೀಜವಿದಳನದಲ್ಲಿ ಕೊಂಚ ಪ್ರಮಾಣದ ದ್ರವ್ಯರಾಶಿ ಕಾಣೆಯಾಗಿತ್ತು ಮತ್ತು ಊಹಿಸಲಿಕ್ಕೇ ಆಗದಷ್ಟು ಪ್ರಮಾಣದ ಶಕ್ತಿಯು ಬಿಡುಗಡೆಯಾಗಿತ್ತು. ತನ್ಮೂಲಕ ಬಹುಚರ್ಚಿತ ಈ ಸಮೀಕರಣವು ಸರಿಯೆಂದು ಸಾರಿತ್ತು.

ಪಾರಮಾಣ್ವಿಕ ಕ್ರಿಯೆಗಳು(ನ್ಯೂಕ್ಲಿಯರ್ ರಿಯಾಕ್ಷನ್ಸ್) ಎಂಬುದು ಪ್ರಕೃತಿಗೇನೂ ಹೊಸತಲ್ಲ ಬಿಡಿ. ನಮಗೆ ಹಗಲೆಲ್ಲ ಸಿಗುವ ಸೂರ್ಯನ ಬೆಳಕು ಇದೇ ಕ್ರಿಯೆಗಳ ಶಕ್ತಿಯೇ. ಆದರೆ ಸೂರ್ಯನಲ್ಲಿ ಯುರೇನಿಯಂ ವಿದಳನವಾಗುವದಿಲ್ಲ. ಬದಲಿಗೆ ಅಲ್ಲಿ ಎರಡು ಜಲಜನಕಗಳ ಸಂಯೋಜನೆಗೊಂಡು ಹೀಲಿಯಂ ಆಗುವದು. ಈ ಪ್ರಕ್ರಿಯೆ ನಮ್ಮ ವಿಜ್ಞಾನಿಗಳಿಗೆ ತೀವ್ರ ಕುತೂಹಲ ಕೆರಳಿಸಿತ್ತು. ಏಕೆಂದರೆ ಭೂಮಿಯಲ್ಲಿ ಯುರೇನಿಯಂ ಪ್ರಮಾಣ ಕಡಿಮೆ. ಆದರೆ ಜಲಜನಕ ಹಾಗಲ್ಲ ನೋಡಿ. ೭೦% ನೀರಿನಿಂದಲೇ ತುಂಬಿರುವ ಭೂಮಿಗೆ ಜಲಜನಕಕ್ಕೆ ಕೊರತೆಯೇ? ಅಲ್ಲದೇ ೧ ಗ್ರಾಂ ಯುರೇನಿಯಂನಿಂದ ಸಿಗುವ ವಿದಳನ ಶಕ್ತಿಗಿಂತ ೧ ಗ್ರಾಂ ಜಲಜನಕದಿಂದ ಸಿಗುವ ಸಂಯುಗ್ಮಶಕ್ತಿ ನೂರಾರು ಪಟ್ಟು ಜಾಸ್ತಿ ಬೇರೆ.

ಮತ್ತಷ್ಟು ಓದು »

5
ಜನ

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ

ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ

– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ 

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.

ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್‍ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.

ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಮತ್ತಷ್ಟು ಓದು »

3
ಜನ

ಹಣದ ಹೊಳೆ ನಿಲ್ಲಿಸಿ, ಮೇಲ್ಮನೆ ಮಾನ ಉಳಿಸಿ

– ಎಸ್‌. ಸುರೇಶ್‌ ಕುಮಾರ್‌, ಮಾಜಿ ಸಚಿವರು,ಹಿರಿಯ ಬಿಜೆಪಿ ನಾಯಕ

ಎಸ್‌. ಸುರೇಶ್‌ ಕುಮಾರ್‌ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ 25 ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಮುಗಿದು ಫ‌ಲಿತಾಂಶಗಳೂ ಪ್ರಕಟವಾಗಿವೆ. ಈಗೇನಿದ್ದರೂ ಆಯಾ ಪಕ್ಷ ಎಷ್ಟು ಸ್ಥಾನಗಳನ್ನು ಗೆದ್ದಿದೆ? ಸೋತಿರುವ ಕ್ಷೇತ್ರಗಳಲ್ಲಿ ಕಾರಣಗಳೇನು? ಎಂಬುದರ ಲೆಕ್ಕಾಚಾರ ನಡೆಯುವ ಸಮಯ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ನನ್ನದೊಂದು ಈ ಮನವಿ ಪತ್ರ.

ಕೆಲವು ವರ್ಷಗಳ ಹಿಂದೆ ನನ್ನ ಮೊಬೈಲ್‌ಗೆ ಒಂದು ವಿಚಿತ್ರವಾದ, ಆದರೆ ಅರ್ಥಗರ್ಭಿತ ಸಂದೇಶ ಬಂದಿತ್ತು. ‘ಸ್ನೇಹಿತರೇ. ನಾನು ಮಹಾತ್ಮಾ ಗಾಂಧೀಜಿಯವರ ಫೋಟೋಗಳನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಈ ಸಂಗ್ರಹ ಕಾರ್ಯದಲ್ಲಿ ನೀವು ಸಹಕರಿಸಿ. ನಿಮ್ಮ ಕೊಡುಗೆಯನ್ನು ನೀಡಿ. ಆದರೆ ಒಂದು ಷರತ್ತು. ನನಗೆ ಸಂಗ್ರಹವಾಗಬೇಕಿರುವ ಮಹಾತ್ಮಾ ಗಾಂಧೀಜಿ ಪೋಟೋಗಳು ಒಂದು ಸಾವಿರ ರೂಪಾಯಿ ನೋಟುಗಳ ಮೇಲೆ ಇರಬೇಕು.’ ಇದು ಆಘಾತಕಾರಿ ಎನಿಸಿದರೂ ಇಂದಿನ ಅತ್ಯಂತ ಕಟು ಸತ್ಯವನ್ನು ಬಿಂಬಿಸುತ್ತದೆ.

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಬಲ ವಹಿಸುವ ಪಾತ್ರ ಎಲ್ಲರಿಗೂ ತಿಳಿದಿದೆ. ಟಿ. ಎನ್‌.ಶೇಷನ್‌ ಅವರು ಭಾರತದ ಮುಖ್ಯ ಚುನಾವಣಾಧಿಕಾರಿ ಆಗಿದ್ದಾಗ ಈ ಕುರಿತು ಕೈಗೊಂಡ ಕೆಲವು ಕಠಿನ ಕ್ರಮಗಳು ಚುನಾವಣಾ ಸುಧಾರಣೆಯ ಪಥದಲ್ಲಿ ಮಹತ್ವ ಪಡೆದುಕೊಂಡಿದ್ದವು. ಆದರೆ, ದಿನೇ ದಿನೇ ಚುನಾವಣೆಗಳಲ್ಲಿ ಹಣದ ಪಾತ್ರ ಹೆಚ್ಚಾಗುತ್ತಿದೆ ಎಂಬುದು ಎಲ್ಲರ ಅನುಭವ. ನಗರ ಪಾಲಿಕೆ ಚುನಾವಣೆಗಳಲ್ಲಿಯೂ ಹಲವಾರು ಕೋಟಿ ರೂ. ಖರ್ಚು ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೊಮ್ಮೆ ಮಹಾತ್ಮ ಗಾಂಧೀಜಿ, ಅಬ್ದುಲ್‌ ಕಲಾಂ ಅಥವಾ ಅಣ್ಣಾ ಹಜಾರೆಯಂಥವರು ನಿಲ್ಲಲು ಬಯಸಿದರೆ ಅವರ ಬಳಿ ಹಣವಿಲ್ಲವೆಂಬ ಅಂಶವೇ ದೊಡ್ಡ ತೊಡಕೆಂದು ಇಂದಿನ ರಾಜಕಾರಣದಲ್ಲಿ ಆಗಾಗ ಕೇಳಿ ಬರುವ ಮಾತು.

ಮತ್ತಷ್ಟು ಓದು »

29
ಡಿಸೆ

ಬಂಗುಡೆ ಫ್ರೈ ಮತ್ತು ಭಗವದ್ಗೀತೆ

– ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವವರ್ಷಕ್ಕೋ ಎರಡು ವರ್ಷಕ್ಕೋ ಒಂದು – ಎರಡಲ್ಲ, ಒಂದೇ – ಸಿನೆಮಾ ಕೊಡುತ್ತಿದ್ದ ಹಿಂದಿಯ ರಾಜ್‍ಕುಮಾರ್ ಮೇಲೆ, ನನ್ನ ತಂದೆಗೆ ಕುತೂಹಲ, ಪ್ರೀತಿ, ಹುಚ್ಚು ಅಭಿಮಾನ ಇದ್ದವು. ಹಾಗೆಯೇ, ಬಹುಕಾಲ ಮೌನವಾಗಿದ್ದು ವರ್ಷಕ್ಕೆ ಒಂದೆರಡು ಮಾತು, ಒಂದೆರಡು ಹಾಳೆ ಸಾಹಿತ್ಯ ಬರೆಯುವವರ ಬಗ್ಗೆ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಇಂಥವರು ಕಾವಿ ತೊಟ್ಟರೆ, ಮಾತಾಡದೆ ಕೂತರೂ ಜಗತ್ಪ್ರಸಿದ್ಧರಾಗುತ್ತಾರೆ! ಇಂತಹ ಮಿತಾಕ್ಷರಿಗಳ ಪಂಥಕ್ಕೆ ಸೇರಿದ ಕನ್ನಡದ ಸಾಹಿತಿ ದೇವನೂರ ಮಹಾದೇವ, ವರ್ಷಕ್ಕೆ ಒಂದು ಭಾಷಣ ಮಾಡಿದರೆ, ಅದರ ಹಿಂದೆ ಹಲವು ದಿನಗಳ ಚಿಂತನೆ ಇರುತ್ತದೆ; ಇರಬೇಕು ಎಂದು ನಾವೆಲ್ಲ ಬಯಸುತ್ತೇವೆ. ಹಾಗೆಯೇ, ಅವರ ಐನೂರು ಪದಗಳೊಂದು ಲೇಖನ ಪ್ರಕಟವಾದರೂ, ಅದರಲ್ಲೇನೋ ಗಹನವಾದ ಸೂತ್ರರೂಪೀ ಸಂಗತಿಗಳು ಅಡಕವಾಗಿರಬಹುದು ಎಂಬ ಪೂರ್ವಗ್ರಹದಿಂದ ಎರಡೆರಡು ಬಾರಿ ಓದಿನೋಡುವ ಸಾಹಿತ್ಯಪ್ರೇಮಿಗಳಿದ್ದಾರೆ. ಹಾಗಾಗಿ ದಿನಕ್ಕೆ ಸಾವಿರ ಪದಗಳನ್ನು ಕುಟ್ಟುವ ನನ್ನಂಥ ಕೈಬಡುಕರಿಗಿಂತ ದೇವನೂರರ ಮೇಲೆ ಹುಟ್ಟುವ ನಿರೀಕ್ಷೆ ದೊಡ್ಡದು. ಅದನ್ನು ನಿಜ ಮಾಡುವ ಆನೆಯಂಥ ಹೊಣೆಗಾರಿಕೆಯೂ ಅವರ ಹೆಗಲ ಮೇಲೆ ಕೂತಿರುತ್ತದೆ.

ಈ ವರ್ಷ, ನಿಯಮ ತಪ್ಪಿ, ದೇವನೂರ ಎರಡು ಸಲ ಮಾತಾಡಿದರು. ಒಮ್ಮೆ, ಪ್ರಶಸ್ತಿ ಯಾಕೆ ವಾಪಸು ಮಾಡುತ್ತಿದ್ದೇನೆ ಎಂದು ಹೇಳಲು ಪತ್ರ ಬರೆಯುವುದರ ಮೂಲಕ. ಇನ್ನೊಮ್ಮೆ, ಮಂಗಳೂರಲ್ಲಿ ನಡೆದ – ಸಾಹಿತ್ಯವೊಂದು ಬಿಟ್ಟು ಮಿಕ್ಕೆಲ್ಲ ಅಪಸವ್ಯಗಳೂ ಇದ್ದ – ಒಂದು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡುವ ಮೂಲಕ. ಪ್ರಶಸ್ತಿ ವಾಪಸು ಪ್ರಹಸನದ ನಿಜಬಣ್ಣ ಲೋಕಕ್ಕೇ ಗೊತ್ತಾಗಿರುವುದರಿಂದ, ಆ ಸಂದರ್ಭದ ಮಾತುಗಳನ್ನು ಮತ್ತೆ ಕೆದಕುವುದು ಬೇಡ. ನಕಲು ಸಮ್ಮೇಳನದಲ್ಲಿ ಅವರು ಏನು ಹೇಳಿದರು ಎನ್ನುವುದನ್ನು ಮಾತ್ರ ಈ ಲೇಖನದ ಸೀಮಿತ ಚೌಕಟ್ಟಿಗೆ ಎತ್ತಿಕೊಂಡಿದ್ದೇನೆ.

**
ಇತ್ತೀಚೆಗೆ ರಾಮಾಯಣ, ಮಹಾಭಾರತಗಳ ಕಡೆ ನಮ್ಮ ಸಮಕಾಲೀನ ಲೇಖಕರು ಮತ್ತೆಮತ್ತೆ ಹೊರಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚರ್ಚೆಯ ವಿಷಯವಾಗಿರುವುದರಿಂದ ದೇವನೂರ ಕೂಡ ಆ ಎರಡು ಗ್ರಂಥಗಳನ್ನು ಎತ್ತಿಕೊಂಡಿದ್ದಾರೆ. ಮಿದುಳಿಲ್ಲದ ಧ್ವನಿವರ್ಧಕದಂತೆ ತನ್ನನ್ನು ಬಿಂಬಿಸಿಕೊಂಡು ಪ್ರಚಾರ ಪಡೆದ ಭಗವಾನ್‍ಗಿಂತ ಭಿನ್ನ ಧಾಟಿಯಲ್ಲಿ ಮಾತಾಡಿದ್ದರಿಂದ ದೇವನೂರರ ಮಾತುಗಳು – ಒಪ್ಪುವ ಒಪ್ಪದಿರುವ ಪ್ರಶ್ನೆಗಿಂತ, ಕನಿಷ್ಠ ವಿಶ್ಲೇಷಣೆಗೊಳಪಡಿಸಲು ಅರ್ಹವಾಗಿವೆ. ದೇವನೂರ ಬಹುಶಃ ಮೂರು ಪೂರ್ವಗ್ರಹಗಳಿಂದ ತನ್ನ ಮಾತು-ಚಿಂತನೆಗಳನ್ನು ಶುರುಮಾಡುತ್ತಾರೆ ಎಂದು ಕಾಣುತ್ತದೆ. ಒಂದು – ಭಾರತದಲ್ಲಿ ಇಂದಿಗೂ ದೇವಸ್ಥಾನಗಳಿಗೆ ಪ್ರವೇಶ ಪಡೆಯುವುದೇ ದಲಿತರ ದೊಡ್ಡ ಸವಾಲಾಗಿದೆ. ಎರಡು – ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಹಲವು ಭಾಗಗಳು ಸರಿಯಿಲ್ಲ, ಮತ್ತು ಈ ಗ್ರಂಥಗಳೇ ಇಂದಿಗೂ ನಮ್ಮನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಆಳುತ್ತಿವೆ. ಮೂರು – ಜಾತಿ ವರ್ಗ ಕಳೆದು ಎಲ್ಲವೂ ಸಮಾನವಾದರೆ ದೇಶದಲ್ಲಿ ಸರ್ವೋದಯವಾಗುತ್ತದೆ. ನಾನು ನನ್ನ ಸುತ್ತಲಿನ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನಷ್ಟೆ ಹಿನ್ನೆಲೆಯಾಗಿಟ್ಟುಕೊಂಡು ದೇವನೂರರ ಮಾತುಗಳ ವಿಶ್ಲೇಷಣೆ ನಡೆಸುವುದು ಸಾಧ್ಯ. ಹಾಗಾಗಿ ಮುಂದಿನ ಎಲ್ಲ ಮಾತುಗಳನ್ನು ಓದುಗರು ತಂತಮ್ಮ ಜಗತ್ತಿನ ಹಿನ್ನೆಲೆಯಲ್ಲಿಟ್ಟು ತಾಳೆ ನೋಡುವುದಕ್ಕೆ ಸ್ವತಂತ್ರರು.
ಮತ್ತಷ್ಟು ಓದು »