ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ
– ಪ್ರೇಮಶೇಖರ
ಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ! ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.
ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ. ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!
ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ
– ರಾಕೇಶ್ ಶೆಟ್ಟಿ
ದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.
ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಮತ್ತಷ್ಟು ಓದು 
ವಿಚಾರವ್ಯಾದಿ ಅಳಿದು ವಿಚಾರವಾದ ಬೆಳೆಯಲಿ
– ಅಮೃತ್ ಜೋಶಿ
ಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯ ದುರದುಷ್ಟಕರ ಪ್ರಕರಣ ಹಾಗೂ “ಭಗವಾನ ಉವಾಚ”ದಿಂದಾಗಿ ಇಡೀ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಚಾರವಾದ ಅಥವಾ ಪ್ರಗತಿಪರ ಚಿಂತನೆ- ಈ ಶಬ್ದಗಳ ಅರ್ಥ ಮತ್ತು ವ್ಯಾಪ್ತಿಯ ಬಗ್ಗೆ ಬಿಸಿಬಿಸಿಯಾದ ಮತ್ತೆ ಹಲವಡೆ ಹಸಿಹಸಿಯಾದ ಚರ್ಚೆ ನಡೆಯುತ್ತಿದೆ.
ಬಹಳಷ್ಟು ಚರ್ಚೆಗಳಲ್ಲಿ ಅಥವಾ ವಾದಗಳಲ್ಲಿ ಬೈಗಳ ಅಥವಾ ವಿತಂಡವಾದಗಳ ಮೂಲಕವೇ ತಮ್ಮ ಶ್ರೇಷ್ಟತೆಯನ್ನು ಸಾರಿ ಹೇಳಿಕೊಳ್ಳಬೇಕಾದ ಪರಿಸ್ಥಿತಿಯನ್ನು ನೋಡಿದರೆ ಅದು ಅವುಗಳ ಟೊಳ್ಳುತನವನ್ನು ಎತ್ತಿತೋರುತ್ತದೆ. ವಿಚಾರವಾದ ಅಥವಾ ಪ್ರಗತಿಪರ ಚಿಂತನೆ ತಮ್ಮಿಂದನೇ ಹುಟ್ಟಿಕೊಂಡಿದ್ದು, ಅದು ತಮ್ಮ ಸೈದಾಂತಿಕ ಗುತ್ತಿಗೆ ಎಂದೇ ಅನೇಕ ತಥಾಕಥಿತ ವಿಚಾರವಾದಿಗಳು ಭಾವಿಸಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನು ದಿಕ್ಕರಿಸಿ, ಅದರ ವಿರುದ್ಧ ಬಂಡಾಯ ಸಾರುವವನೇ ವಿಚಾರವಾದಿ. ಅವನೇ ಸಮಾಜ ಸುಧಾರಕ, ಅವನೇ ಪ್ರಗತಿಪರ ಚಿಂತಕ ಎಂದು ಈವರೆಗೆ ನಮ್ಮೆಲ್ಲರಿಗೆ ನಮ್ಮ ಶಿಕ್ಷಣ ಪದ್ಧತಿ ಹೇಳಿಕೊಟ್ಟಿರುವ ಗಿಳಿಪಾಠವಾಗಿದೆ.
ಹಾಗಾದರೆ ತನ್ನ ಮನೆ ಸ್ವಚ್ಛವಾಗಿಲ್ಲ ಎಂದು ಮನೆಯಿಂದ ಹೊರಗೆ ನಿಂತು ತನ್ನ ಮನೆಯ ವ್ಯವಸ್ಥೆಯ ಬಗ್ಗೆ ದೋಷಿಸುತ್ತ, ಅವಹೇಳನ ಮಾಡುತ್ತ ಕಾಲ ಕಳೆಯುವವನು ಶ್ರೇಷ್ಟನೋ ಅಥವಾ ಅದೇ ವ್ಯವಸ್ಥೆಯಲ್ಲಿದ್ದು ಆ ಮನೆಯ ಸ್ವಚ್ಛತೆಯ ಬಗ್ಗೆ ಸದಾ ಕಾರ್ಯಮಗ್ನರಾಗಿರುವ ಮನೆಯ ಸದಸ್ಯ ಶ್ರೇಷ್ಟನೋ? ಈ ಹಿನ್ನೆಲೆಯಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ, ಸಮಾಜ ಸುಧಾರಕರನ್ನು ಗುರುತಿಸುವುದೇ ನಿಜವಾದ ಮಾನದಂಡವಾಗಿದೆ.
ಬುದ್ಧಿಜೀವಿಗಳ ಪ್ರಶಸ್ತಿದಾಹ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎಂಬ ಪ್ರಹಸನ
– ವಿನಾಯಕ ಹಂಪಿಹೊಳಿ
ವಸಾಹತುಪೂರ್ವ ಭಾರತದಲ್ಲಿ ಕ್ರಿಯಾಜ್ಞಾನವೇ ತುಂಬಿಕೊಂಡಿದ್ದ ಕಾಲವದು. ಆಗ ಒಬ್ಬ ಜ್ಞಾನಿಗೆ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರದ ಪರಿಸ್ಥಿತಿ. ಕಾರಣ ಕ್ರಿಯಾಜ್ಞಾನಿಗೆ ಸರ್ಟಿಫಿಕೇಟ್ ಅಗತ್ಯತೆ ಬೀಳುವದಿಲ್ಲ. ಉದಾಹರಣೆಗೆ ಹಿಂದೆ ಒಬ್ಬಾನೊಬ್ಬ ಬಂದು ತಾನು ಸಾಕ್ಷಾತ್ ಜಕಣಾಚಾರಿಯಿಂದ ಶಿಲ್ಪಶಾಸ್ತ್ರ ಕಲಿತು ಬಂದಿದ್ದೇನೆ ಎಂದು ಹಳ್ಳಿಗರ ಮುಂದೆ ಹೇಳಿಕೊಂಡರೆ, ಜನರು ಅದಕ್ಕೆ ಸಾಕ್ಷಿಯಾಗಿ ಪ್ರಮಾಣಪತ್ರವನ್ನೇನೂ ಕೇಳುತ್ತಿರಲಿಲ್ಲ. ಬದಲಿಗೆ, ಬೇಲೂರಿನ ಸೂಕ್ಷ್ಮಕೆತ್ತನೆಯ ಮಾದರಿಯಲ್ಲಿಯೇ ಈತ ಒಂದು ಕಲ್ಲನ್ನು ಕೆತ್ತಿ ಕೊಟ್ಟರಾಯಿತು, ಜನರು ನಂಬುತ್ತಿದ್ದರು. ಕಾರಣ, ಕ್ರಿಯಾಜ್ಞಾನದಲ್ಲಿ ಏನು ಕಲಿತೆ, ಎಷ್ಟು ಕಲಿತೆ ಎಂಬುದಷ್ಟೇ ಮುಖ್ಯವಾಗುತ್ತದೆಯೇ ಹೊರತು ಯಾರಿಂದ ಕಲಿತೆ, ಎಲ್ಲಿ ಕಲಿತೆ, ಎಷ್ಟು ವರ್ಷ ಕಲಿತೆ, ಇವೆಲ್ಲ ಮುಖ್ಯವಾಗುವದಿಲ್ಲ. ಹೀಗಾಗಿ ಏಕಲವ್ಯನಂಥ ಸ್ವಂತ ಬಲದಿಂದ ಕಲಿತವರೂ ನಮಗೆ ಸಂಪ್ರದಾಯಗಳಲ್ಲಿ ಕಾಣ ಸಿಗುತ್ತಾರೆ.
ಹೀಗಾಗಿ ಹಿಂದಿನ ನಾಟಿ ವೈದ್ಯರಲ್ಲಿ, ಧನುರ್ವೇದಿ ಪಂಡಿತರಲ್ಲಿ ಯಾರೂ ಪ್ರಮಾಣಪತ್ರವನ್ನು ಅಪೇಕ್ಷಿಸುತ್ತಿರಲಿಲ್ಲ. ಬಂದ ರೋಗವು ವಾಸಿಯಾಗುವಂತೆ ಮಾಡುವದೊಂದೇ ಅವರ ವಿದ್ಯೆಯನ್ನು ದೃಢೀಕರಿಸುವ ವಿಷಯವಾಗಿತ್ತು. ಹೆಚ್ಚು ಹೆಚ್ಚು ಕುಶಲ ಜ್ಞಾನಿಗಳನ್ನು ಸೃಷ್ಟಿಸುವ ಗುರುಕುಲಗಳು ಹೆಚ್ಚು ಪ್ರಸಿದ್ಧವಾಗುತ್ತಿದ್ದವು. ವೇದಪಂಡಿತನಿಂದ ಹಿಡಿದು ಕುಂಬಾರ, ಕಮ್ಮಾರರ ತನಕ ಎಲ್ಲ ಕ್ರಿಯಾಜ್ಞಾನಿಗಳ ಜ್ಞಾನವನ್ನು ಅವರ ಕ್ರಿಯೆಗಳಿಂದಲೇ ಅಳೆಯಲಾಗುತ್ತಿತ್ತು. ಹೀಗಾಗಿ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರಲಿಲ್ಲ. ಏಕೆಂದರೆ ನಾನು ಇಂಥಿಂಥ ಜ್ಞಾನವನ್ನು ಪಡೆದುಕೊಂಡು ಬಂದಿದ್ದೇನೆ ಎಂದು ಒಬ್ಬ ಸುಳ್ಳು ಹೇಳಿದರೂ ಆ ಸುಳ್ಳನ್ನು ಬಹಳ ದಿನ ಮುಚ್ಚಿಟ್ಟುಕೊಳ್ಳಲು ಆಗುತ್ತಲೂ ಇರಲಿಲ್ಲ.
ಒಬ್ಬನಿಗೆ ತನ್ನ ಕ್ರಿಯಾಜ್ಞಾನದಲ್ಲಿನ ವಿಶೇಷತೆಯನ್ನು ಮನಗಂಡು ಆತನಿಗೆ ವಿಶೇಷ ಉಪಾಧಿಗಳಿಂದ ಬಿರುದುಗಳಿಂದ ಸನ್ಮಾನಿಸುವದೂ ಆಗಿನ ಸಂಪ್ರದಾಯವಾಗಿತ್ತು. ಕೆಲವೊಮ್ಮೆ ರಾಜರು ಇಂಥ ಬಿರುದುಗಳನ್ನು ನೀಡುತ್ತಿದ್ದರೆ, ಇನ್ನು ಕೆಲವೊಮ್ಮೆ ಜನರೇ ಆತನನ್ನು ವಿಶೇಷ ಬಿರುದಿನಿಂದ ಗುರುತಿಸುತ್ತಿದ್ದರು. ಆ ರೀತಿಯ ಬಿರುದುಗಳು ಅವರ ಕ್ರಿಯೆಯನ್ನು ಮೆಚ್ಚಲೆಂದೇ ಹುಟ್ಟಿಕೊಳ್ಳುತ್ತಿದ್ದವೇ ಹೊರತು, ಅಂಥದೊಂದು ಬಿರುದನ್ನು ಮೊದಲೇ ರೆಡಿ ಮಾಡಿಟ್ಟು ಇದಕ್ಕಾಗಿ ನೀವೆಲ್ಲ ಸ್ಪರ್ಧೆಯನ್ನು ಮಾಡಿ ಎಂಬ ಪರಿಪಾಠವಿರಲಿಲ್ಲ. ಶಸ್ತ್ರಾಭ್ಯಾಸದ ಅಥವಾ ಶಾಸ್ತ್ರಾಭ್ಯಾಸದ ಪಂದ್ಯಗಳನ್ನೇರ್ಪಡಿಸಿ ಗೆದ್ದವರಿಗೆ ಬಹುಮಾನಗಳನ್ನು ನೀಡುವ ಪದ್ಧತಿ ಇದ್ದರೂ, ಹಾಗೆ ಗೆದ್ದವರು ಬಂಗಾರವನ್ನೋ, ರಾಜಕುಮಾರಿಯರನ್ನೋ ಗಳಿಸಿಕೊಳ್ಳುತ್ತಿದ್ದರೇ ಹೊರತು ಅದಕ್ಕಿಂತ ವಿಶೇಷವಾದ ಬಿರುದು ಅಥವಾ ಉಪಾಧಿಗಳೇನೂ ಲಭಿಸುತ್ತಿರಲಿಲ್ಲ. ಆದರೆ ಒಂದಾನೊಂದು ಉಪಾಧಿಯನ್ನು ಬಿರುದನ್ನು ಒಬ್ಬ ಗಳಿಸಬೇಕಾದರೆ ಆತನ ಕ್ರಿಯಾಜ್ಞಾನವು ಜನರ ಮನಮುಟ್ಟುವ ಕೆಲಸ ಮಾಡಿರಲೇಬೇಕಾಗುತ್ತಿತ್ತು.
ಎತ್ತಿನ ಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!
– ಪ್ರಸಾದ್ ಕುಮಾರ್,ಮಾರ್ನಬೈಲ್
ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ. ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ,ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ ಮಾತ್ರ ಅನಾವಶ್ಯಕ ಪೌರುಷದ ಪ್ರದರ್ಶನ ನೀಡುತ್ತಿದೆ! ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕಳಸಾ ಬಂಡೂರಿ ಯೋಜನೆಯೇನಾದರೂ ಜಾರಿಯಾದರೆ ಅದರಿಂದ ರಾಜ್ಯಕ್ಕೆ ಲಾಭವಲ್ಲದೆ ಯಾವ ವಿಧದ ನಷ್ಟವೂ ಇಲ್ಲ. ಆದರೆ ಅದೇ ಎತ್ತಿನ ಹೊಳೆ ಯೋಜನೆಯೇನಾದರು ಕಾರ್ಯರೂಪಕ್ಕೆ ಬಂತು ಎಂದಾದರೆ ಅದರಿಂದ ರಾಜ್ಯವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಅಧಿಕ! ಕರಾವಳಿಗರ ಭಾವನೆಗಳಿಗೆ ಬೆಲೆ ನೀಡದೆ ಅತ್ತ ಬಯಲು ಸೀಮೆಗೂ ಸರಿಯಾಗಿ ನೀರು ದೊರೆಯದೆ ಎಲ್ಲಾ ರೀತಿಯಲ್ಲೂ ವಂಚನೆಗೈದಂತಾಗಲಿದೆ ಇಲ್ಲಿ! ಮೇಲಾಗಿ ಇದು ಸುಪ್ತವಾಗಿರುವ ಕರಾವಳಿಗರ ಪ್ರತ್ಯೇಕತೆಯ ಕೂಗಿಗೂ ಭವಿಷ್ಯದಲ್ಲಿ ಒಂದಷ್ಟು ಪುಷ್ಠಿ ನೀಡುವ ಸಾಧ್ಯತೆಯೂ ಇದೆ! ಮೇಲಾಗಿ ಇಲ್ಲಿ ಸಿಗುವ ನೀರಿನ ಬಗ್ಗೆಯೇ ದೊಡ್ಡ ಮಟ್ಟದ ಸಂಶಯವಿರುವುದರಿಂದ ಪೂರ್ಣ ಯೋಜನೆಯೇ ಅಂತಿಮವಾಗಿ ವಿಫಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ!
ಹಾಗಿದ್ದರೂ ಯಾಕಿಷ್ಟು ಆತುರ!?
ಮತ್ತಷ್ಟು ಓದು 
ಅಕಾಡೆಮಿ “ಗೌರವ” ಮೂರಾಬಟ್ಟೆ
– ರೋಹಿತ್ ಚಕ್ರತೀರ್ಥ
ಮೊನ್ನೆ ಸೆಪ್ಟೆಂಬರ್ 19ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆ.ಎಸ್.ಭಗವಾನ್ ಸೇರಿದಂತೆ ಒಟ್ಟು ಐವರಿಗೆ ಗೌರವ ಪ್ರಶಸ್ತಿ ಕೊಟ್ಟಿತು. ಜೊತೆಗೆ ಇನ್ನೂ ಹಲವು ಸಾಹಿತಿಗಳಿಗೆ ಅವರ ಪುಸ್ತಕಗಳನ್ನು ಆಯ್ದು ಪ್ರಶಸ್ತಿ ಕೊಟ್ಟಿತು.
ಈ ಆಯ್ಕೆ ನಾಡಿನಾದ್ಯಂತ ಹಲವು ಜನರ ಹುಬ್ಬೇರುವಂತೆ ಮಾಡಿತು. ಸಿದ್ದರಾಮಯ್ಯ ಆಡಳಿತದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಿನಕ್ಕೊಂದರಂತೆ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವುದಕ್ಕಾಗಿಯೇ ತಾನು ಬದುಕಿದ್ದೇನೆ ಎನ್ನುವುದನ್ನು ಮತ್ತೆಮತ್ತೆ ಹೇಳುತ್ತಿರುವ ಭಗವಾನ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ ಅವರನ್ನು ವಿರೋಧಿಸುವವರು ಮಾತ್ರವಲ್ಲ ಬೆಂಬಲಿಗರ ಮನಸ್ಸಲ್ಲೂ ಒಂದು ಕ್ಷಣ ಹಾದುಹೋದದ್ದು ಸುಳ್ಳಲ್ಲ. ಭಗವಾನ್ ಮತ್ತು ಅವರ ಎಲ್ಲ ಅಪದ್ಧಗಳನ್ನೂ ಬೆಂಬಲಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸುತ್ತಿರುವ ಶಿಷ್ಯರು ಕೂಡ ಈಗ “ಅವರ ಕಿರುಚಾಟಗಳನ್ನು ಪರಿಗಣ ಸಬಾರದು. ಕೇವಲ ಕೃತಿಗಳನ್ನಷ್ಟೇ ಎದುರಿಟ್ಟುಕೊಂಡು ಪ್ರಶಸ್ತಿ ಕೊಡಬೇಕು” ಎಂಬ ರಾಗ ಹಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಸಾಹಿತ್ಯ ಅಕಾಡೆಮಿಯ ಏಕಪಕ್ಷೀಯ ತೀರ್ಮಾನದ ವಿರುದ್ಧ ಜನಮತ ರೂಪಿಸುವ ಕೆಲಸ ಕೈಗೆತ್ತಿಕೊಂಡೆವು. ಈ ಒಟ್ಟು ಹೋರಾಟದ ಒಂದು ಸ್ಥೂಲಸ್ವರೂಪವನ್ನು ಕನ್ನಡಿಗರು ಅರಿಯಬೇಕು ಎಂಬ ಕಾರಣಕ್ಕೆ ಈ ಲೇಖನ ಬರೆಯುತ್ತಿದ್ದೇನೆ.
ನಮ್ಮ ಹೋರಾಟದ ರೂಪುರೇಷೆಗಳು:
ನಮ್ಮದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿರ್ಧಾರದ ವಿರುದ್ಧದ ಹೋರಾಟ. ಅಕಾಡೆಮಿ ಪ್ರಕಟಿಸಿರುವ ಪಟ್ಟಿಯು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದನ್ನು ಸಿದ್ಧಪಡಿಸುವಾಗ ಯಾರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಪಟ್ಟಿಯಲ್ಲಿ ನಕ್ಸಲ್ ಚಳವಳಿಗೆ ಬೆಂಬಲ ಕೊಟ್ಟವರು, ನೇರವಾಗಿ ನಕ್ಸಲ್ ಹೋರಾಟಗಳಲ್ಲಿ ಭಾಗಿಯಾಗಿದ್ದವರು, ಎಡಪಂಥೀಯ ಚಿಂತನೆ ಇರುವವರು, ಸರಕಾರದ ವಿವಿಧ ಸವಲತ್ತುಗಳನ್ನು ಈಗಾಗಲೇ ಅನುಭವಿಸಿರುವವರು ಮತ್ತು ಸರಕಾರಕ್ಕೆ ಸದಾ ಸರ್ವದಾ ಬೆಂಬಲ ಸೂಚಿಸುತ್ತ ಜನರ ದಾರಿ ತಪ್ಪಿಸುತ್ತಿರುವವರು ಪ್ರಮುಖವಾಗಿ ತುಂಬಿಕೊಂಡಿದ್ದಾರೆ. ಕೆಲವರಂತೂ ಏನು ಬರೆದಿದ್ದಾರೆ, ಎಂಥಾ ಸಾಹಿತ್ಯ ಕೊಟ್ಟಿದ್ದಾರೆ, ಅವರು ಬರೆದಿದ್ದನ್ನು ಓದಲು ಸಾಧ್ಯವೇ ಎನ್ನುವುದನ್ನೂ ಅಕಾಡೆಮಿ ಗಣನೆಗೆ ತೆಗೆದುಕೊಂಡಿಲ್ಲ. ಸರಕಾರದ ಹಿಂಬಾಗಿಲಿನಲ್ಲಿ ಸದಾ ಓಡಾಡಿಕೊಂಡಿರುವ ಹಲವುಹತ್ತು “ಗಣ್ಯ”ರಿಗೆ ಈ ಬಾರಿಯ ಪ್ರಶಸ್ತಿಗಳನ್ನು ಪ್ರಸಾದ ಎಂಬಂತೆ ಹಂಚಲಾಗಿದೆ. ಇದು ಮೇಲ್ನೋಟಕ್ಕೇ ಸಿದ್ಧವಾಗುವ ಸಂಗತಿ. ಹಾಗಾಗಿ, ಈ ಸಲದ ಪ್ರಶಸ್ತಿಪಟ್ಟಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸಾಹಿತ್ಯ ಅಕಾಡೆಮಿ ತನ್ನ ಗೌರವವನ್ನೇ ಮಣ್ಣುಗೂಡಿಸಿಕೊಂಡಿದೆ ಎಂದರೆ ತಪ್ಪಲ್ಲ. ಅಕಾಡೆಮಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಸಾಹಿತಿಗಳನ್ನು ಆರಿಸಿದೆ? ಆಯ್ಕೆ ಸಮಿತಿಯನ್ನು ಆರಿಸಿದವರು ಯಾರು? ಈ ಆಯ್ಕೆ ಸಮಿತಿಯನ್ನು ಆರಿಸಲಿಕ್ಕೆ ಏನು ಮಾನದಂಡಗಳನ್ನು ಇಟ್ಟುಕೊಂಡಿದ್ದರು? ನಕ್ಸಲ್ ಚಳವಳಿ, ಸಾಮಾಜಿಕ ಅಶಾಂತಿ ಉಂಟುಮಾಡುವುದು, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು – ಇವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿ ಕೊಟ್ಟರೆ, ಮುಂದೆ ಇದೇ ದಾರಿ ಹಿಡಿದು ಪ್ರಶಸ್ತಿಗಾಗಿ ಹಂಬಲಿಸುವವರ ಸಂಖ್ಯೆ ಬೆಳೆಯುವುದಿಲ್ಲವೆ? ಸಾಹಿತ್ಯ ಅಕಾಡೆಮಿ ಯಾವ ಪರಂಪರೆಗೆ ನಾಂದಿ ಹಾಡುತ್ತಿದೆ? – ಇವು ನಮ್ಮ ಪ್ರಶ್ನೆಗಳು. ಇವನ್ನೇ ಮುಂದಿಟ್ಟುಕೊಂಡು ನಾವು ಪೆಟಿಶನ್ (ಸಹಿಸಂಗ್ರಹ ಅಭಿಯಾನ) ಪ್ರಾರಂಭಿಸಿದೆವು.
ಸಹಿ ಸಂಗ್ರಹ ಅಭಿಯಾನ:
ಚೇಂಜ್.ಆರ್ಗ್ ಎಂಬ ವೆಬ್‍ಸೈಟ್ ಮೂಲಕ ನಾವು “ಸಾಹಿತ್ಯ ಅಕಾಡೆಮಿ ತನ್ನ ಪಟ್ಟಿಯನ್ನು ಪರಿಷ್ಕರಿಸಬೇಕು” ಎಂಬ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆವು. ಅದು ಪ್ರಾರಂಭವಾಗಿ 24 ತಾಸುಗಳು ಕಳೆಯುವುದರೊಳಗೇ ಸುಮಾರು ಐದು ಸಾವಿರ ಜನ ಬೆಂಬಲ ಸೂಚಿಸಿ ಸಹಿ ಮಾಡಿದರು. ಹೀಗೆ ಸಹಿ ಮಾಡಿರುವ ಪ್ರತಿಯೊಬ್ಬರ ಹೆಸರಲ್ಲೂ ಒಂದೊಂದು ಪತ್ರ ಕರ್ನಾ
ಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕರ್ನಾಟಕ ರಾಜ್ಯಪಾಲರಿಗೆ ಹೋಗುತ್ತಿದೆ. ಸೆಪ್ಟೆಂಬರ್ 22ರ ಮುಂಜಾನೆ, ಈ ಅಭಿಯಾನ ಸುಮಾರು 8000 ಸಹಿಗಳನ್ನು ಸಂಗ್ರಹಿಸಿದೆ. ಅಂದರೆ ಇಷ್ಟೂ ಜನರ ಪತ್ರಗಳು ಈ ಮೇಲೆ ಹೇಳಿದ ಮೂರು ಜನಕ್ಕೆ ತಲುಪಿವೆ. ಆದರೆ, ನಮ್ಮ ಅಭಿಯಾನವನ್ನು ಲೇವಡಿ ಮಾಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು “ಇದು ಪೂರ್ಣಯೋಚನೆ ಮಾಡದ, ಅರೆಬೆಂದ ಮನಸ್ಥಿತಿಯ ಯುವಕರ ಪ್ರಲಾಪ” ಎಂದಿದ್ದಾರೆ. ಮುಂದುವರೆದು “ಭಗವಾನರಿಗೆ ಪ್ರಶಸ್ತಿ ಕೊಟ್ಟಿರುವುದನ್ನು ಸಹಿಸದ ಕೆಲವರು ಇದ
ಕ್ಕೆ ರಾಜಕೀಯ ಬಣ್ಣ ಲೇಪಿಸುತ್ತಿದ್ದಾರೆ” ಎಂದೂ ಗಂಭೀರವಾದ ಆರೋಪ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯಿಂದ ನಾವು ಇಂಥ ಕೀಳುಮಟ್ಟದ ಭಾಷಾಪ್ರಯೋಗವನ್ನೂ ನಿಂದನೆಯನ್ನೂ ನಿರೀಕ್ಷಿಸಿರಲಿಲ್ಲ. ಆದರೆ, ಅವರ ಬಗ್ಗೆ ನಾವು ಯಾವ ಬಗೆಯ ಪ್ರತಿನಿಂದನೆಯನ್ನೂ ಮಾಡುವವರಲ್ಲ. ಮನುಷ್ಯರು ತಮ್ಮ ಸಂಸ್ಕøತಿಗೆ ತಕ್ಕಂತೆ ತಮ್ಮ ನಾಲಗೆಯನ್ನು ಬಳಸುವುದು ಸ್ವಾಭಾವಿಕ. ಎರಡೇ ದಿನಗಳಲ್ಲಿ ಸಹಿಸಂಗ್ರಹ ಅಭಿಯಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದೆ. ರಾಷ್ಟ್ರೀಯ ವೃತ್ತಪತ್ರಿಕೆಗಳು ಈ ಅಭಿಯಾನದ ಬಗ್ಗೆ ಸ್ವಯಂಪ್ರೇರಿತರಾಗಿ ಸುದ್ದಿ ಪಡೆದು ಪ್ರಕಟಿಸಲಾರಂಭಿಸಿವೆ. ದೆಹಲಿಯಲ್ಲಿರುವ ಕನ್ನಡಿಗರು ತಮ್ಮ ವಾಟ್ಸಾಪ್ ಗ್ರೂಪ್‍ಗಳಲ್ಲಿ ಅಭಿಯಾನದ ಲಿಂಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೂರದ ಅಮೆರಿಕದಲ್ಲಿರುವ ಕನ್ನಡಿಗರು ಇದನ್ನೊಂದು ಸ್ವಂತ ಜವಾಬ್ದಾರಿ ಎಂಬಂತೆ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ತಾವು ಸಹಿ ಮಾಡುವುದಲ್ಲದೆ ತಮ್ಮ ಎಲ್ಲ ಗೆಳೆಯರಿಗೂ ಮಾಹಿತಿ ನೀಡಿ ಅವರನ್ನೂ ಸಹಿ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸರಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದ ಮೇಲೂ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರಾ? ಹಾಗಾದರೆ ಜನಾಭಿಪ್ರಾಯಕ್ಕೆ ಏನು ಬೆಲೆ? ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಪ್ರಶ್ನೆಗಳನ್ನು ಕೇಳಿದರೂ ಅವಾವುದಕ್ಕೂ ಉತ್ತರಿಸದೆ ತನ್ನ ಮೂಗಿನ ನೇರಕ್ಕೆ ನಡೆದರೆ ಸಾಹಿತ್ಯ ಅಕಾಡೆಮಿ ತನ್ನ ವಿಶ್ವಾಸಾರ್ಹತೆಯನ್ನು ನೆಲಕ್ಕೆ ಕೊಡವಿದ ಹಾಗೆ ಅಲ್ಲವೆ? ಪ್ರಜಾಪ್ರಭುತ್ವ ಎನ್ನುವುದಕ್ಕೆ ಅರ್ಥ ಏನು? ಇದು ನಮ್ಮ ಪ್ರಶ್ನೆ. ಸಹಿ ಸಂಗ್ರಹ ಅಭಿಯಾನದಲ್ಲಿ ಇನ್ನಷ್ಟು ಮತ್ತಷ್ಟು ಸಾವಿರಗಳು ಜಮೆಯಾಗುತ್ತಾ ಹೋದಂತೆಲ್ಲ ನಮ್ಮ ಪ್ರಶ್ನೆಗಳಿಗೂ ಹೆಚ್ಚುಹೆಚ್ಚಿನ ಬಲ ಬರುತ್ತಾ ಹೋಗುತ್ತದೆ.
ಇದು ಪ್ರಾರಂಭ:
ಕೆಲವರು ನಾವೇಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೇವೆ ಎನ್ನುವುದರ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ! “ಅಯ್ಯೋ ಬಿಡಿ ಸಾರ್, ನೀವು ಸುದ್ದಿ ಮಾಡದೇ ಹೋಗಿದ್ದರೆ ಈ ಪ್ರಶಸ್ತಿಪಟ್ಟಿ ಬಂದುಹೋದದ್ದೂ ನಮಗೆ ತಿಳಿಯುತ್ತಿರಲಿಲ್ಲ. ನೀವ್ಯಾಕೆ ಇದರ ಬಗ್ಗೆ ಚಿಂತೆ ಮಾಡುತ್ತೀರಿ. ಯಾರೋ ಒಂದಷ್ಟು ಜನ ಪಡೆಯುತ್ತಾರೆ, ಜನ ಮರೆಯುತ್ತಾರೆ. ಬಿಟ್ಟುಬಿಡಿ” ಎಂದು ಕೆಲವರು ಸಲಹೆ ಕೊಟ್ಟರು. ಆದಾಗ್ಯೂ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಲು ಯೋಚಿಸಿದ್ದೇವೆ. ಯಾಕೆಂದರೆ, ಈ ಪ್ರಶಸ್ತಿ, ಪದವಿ ಇತ್ಯಾದಿಗಳೆಲ್ಲವೂ ಒಂದು ದೊಡ್ಡ ಆಟದ ಸಣ್ಣಸಣ್ಣ ಭಾಗಗಳಷ್ಟೆ.
ಗಮನಿಸಿ:
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕ ಸರಕಾರ ಆರಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೇರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೈಕೆಳಗೆ ಬರುವ ಸಂಸ್ಥೆ. ಅಂದರೆ, ಇಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ನಮ್ಮ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೆ ನಿಮಗೆ, ಅಕಾಡೆಮಿ ವ್ಯವಹಾರದಲ್ಲಿ ಸರಕಾರ ಹೇಗೆ ಮೂಗು ತೂರಿಸಿರಬಹುದು ಎಂಬ ಅಂದಾಜು ಸಿಕ್ಕಿರಬಹುದು. ತಾನು ಅಧಿಕಾರದಲ್ಲಿರುವಾಗ ತನ್ನ ಹಿಂಬಾಲಕರಿಗೆ, ಹೊಗಳುಭಟರಿಗೆ ಪ್ರಶಸ್ತಿ-ಪುರಸ್ಕಾರ ಕೊಟ್ಟು ಸಂಪ್ರೀತಗೊಳಿಸಬೇಕೆನ್ನುವುದು ಈ ಸರಕಾರದ ಧೋರಣೆ. ಸಾಹಿತ್ಯ ಅಕಾಡೆಮಿಯನ್ನು ಅದಕ್ಕಾಗಿ ವೇದಿಕೆಯಾಗಿ ಬಳಸಿಕೊಳ್ಳುವ; ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಸಾಹಿತಿಗಳಿಗೆ ಅಕಾಡೆಮಿ ಪ್ರಶಸ್ತಿಗಳನ್ನು ಕೃತಜ್ಞತಾರೂಪದಲ್ಲಿ ಹಂಚುವ ಕೆಲಸವನ್ನು ಈ ಸರಕಾರ ಮಾಡುವುದು ನಿಚ್ಚಳ. ಭಗವಾನ್ ಮತ್ತಿತರಿಗೆ ಪ್ರಶಸ್ತಿ ಸಿಕ್ಕಿರುವುದು ಈ ಆಧಾರದ ಮೇಲೆ ಎನ್ನುವುದೇ ಬಹುಜನರ ಊಹೆ.
ಕಳೆದ ಎರಡು-ಮೂರು ವರ್ಷಗಳಿಂದಲೂ ಭಗವಾನ್ ನೀಡಿರುವ ಹೇಳಿಕೆಗಳೆಲ್ಲವೂ ರಾಮಾಯಣ, ಭಗವದ್ಗೀತೆ, ಮಹಾಭಾರತ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಪಟ್ಟವು. ಒಂದು ಎಲೆಕ್ಟ್ರಾನಿಕ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದರೂ ಈ ವ್ಯಕ್ತಿ “ರಾಮಾಯಣ ಸುಳ್ಳು, ರಾಮನಿಗೆ ಅಪ್ಪ ಇಲ್ಲ, ಆತ ಹೆಂಗಸರೊಂದಿಗೆ ಮದ್ಯ ಸೇವಿಸುತ್ತಿದ್ದ, ಮಹಾಭಾರತ ವ್ಯಭಿಚಾರದ ಕೃತಿ, ಕೃಷ್ಣ ನಮ್ಮನ್ನು ಯುದ್ಧಕ್ಕೆ ಪ್ರೇರೇಪಿಸುತ್ತಾನೆ” ಇತ್ಯಾದಿ ವಿಷಯಗಳನ್ನೇ ಹೇಳುತ್ತಾರೆಂದು ಜನ ಊಹಿಸುವ ಮಟ್ಟಿಗೆ ಅವರು ಸಮಾಜದಲ್ಲಿ ಕುಖ್ಯಾತರಾಗಿದ್ದಾರೆ. ಅಂದರೆ, ಯಾವುದೋ ಒಂದು ನಿರ್ಧಿಷ್ಟ ಪಂಗಡ ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬಹುಸಂಖ್ಯಾತರ ಭಾವನೆಗಳ ಜೊತೆ ಆಟವಾಡುವುದನ್ನು ಉದ್ಯೋಗ ಮಾಡಿಕೊಂಡಿದೆ ಎಂದು ಹೇಳಬೇಕಾಗಿದೆ. ಪ್ರೊ. ನಾರಾಯಣಾಚಾರ್ಯರು ಬರೆದ “ವಾಲ್ಮೀಕಿ ಯಾರು?” ಪುಸ್ತಕವನ್ನು ನಿಷೇಧಿಸಬೇಕೇ ಬೇಡವೇ ಎಂದು ನಿರ್ಧರಿಸುವ ಸಮಿತಿಯಲ್ಲೂ ವಾಲ್ಮೀಕಿ ರಾಮಾಯಣ ಓದದ, ಸಂಸ್ಕøತ ಗೊತ್ತಿಲ್ಲದ ಮತ್ತು ರಾಮಾಯಣದ ಬಗ್ಗೆ ನಿತ್ಯನಿರಂತರ ದ್ವೇಷ ಕಾರುತ್ತಿರುವ ಭಗವಾನ್ ಸ್ಥಾನ ಪಡೆದಿದ್ದಾರೆ ಎಂದರೆ ನಮ್ಮ ಸರಕಾರ ಒಬ್ಬ ವಿಕೃತ ಚಿಂತನೆಯ ವ್ಯಕ್ತಿಯನ್ನು ಯಾವ ಪರಿಯಲ್ಲಿ ಬೆಂಬಲಿಸುತ್ತಿದೆ, ಜನಸಾಮಾನ್ಯರು ಗಮನಿಸಬಹುದು.
ಸರಕಾರದ ಜೊತೆ ಸೇರಿಕೊಂಡಿರುವ ಕೆಲವು ದುಷ್ಟಶಕ್ತಿಗಳು ಮಾಧ್ಯಮರಂಗವನ್ನು ತಮ್ಮ ಆಡುಂಬೊಲವಾಗಿ ಬಳಸಿಕೊಳ್ಳುತ್ತಿವೆ. ಜನ ಪೋಲೀಸ್ ಶಕ್ತಿಗೆ ಹೆದರುತ್ತಾರೆ ಎಂದು ನಂಬಿರುವ ಸರಕಾರ ಎಂದು ತನ್ನ ಮಾತಿನಲ್ಲಿ ಶಕ್ತಿ ಇಲ್ಲವೆಂದು ಮನವರಿಕೆ ಮಾಡಿಕೊಳ್ಳುತ್ತದೋ ಅಂದಿನಿಂದ ಪೋಲೀಸ್ ಭಾಷೆಯಲ್ಲಿ ಮಾತಾಡತೊಡಗುತ್ತದೆ. ಸಾರ್ವಜನಿಕ ವೇದಿಕೆಯಲ್ಲಿ ಅಸಹ್ಯ ಹುಟ್ಟಿಸುವ ಶಬ್ದಗಳನ್ನು ಬಳಸಿದ್ದ ಸರಕಾರದ ಒಬ್ಬ ಮುಖ್ಯ ಅಧಿಕಾರಿ, ನಿಲುಮೆ ಫೇಸ್‍ಬುಕ್ ಪೇಜಿನಲ್ಲಿ ನಡೆದ ಚರ್ಚೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಜನರ ಮೇಲೆ ಕೇಸ್ ಹಾಕಿ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಬಗ್ಗುಬಡಿಯಲು ನೋಡಿದ್ದು ಇನ್ನೂ ಹಸಿರಾಗಿದೆ. ಈಗಲೂ ಅಷ್ಟೆ, ಭಗವಾನ್ ಆಯ್ಕೆಯನ್ನು ಪ್ರಶ್ನಿಸಿ ಸಾತ್ವಿಕ ಹೋರಾಟ ಮಾಡುತ್ತಿರುವವರ ಧೈರ್ಯ ಕುಂದಿಸಲು ಇವರು ಪತ್ರಿಕೆಗಳನ್ನು ಬಳಸಿಕೊಳ್ಳತೊಡಗಿದ್ದಾರೆ. ಇಲ್ಲಿ ಸರಕಾರವನ್ನು ಪ್ರಶ್ನಿಸಿದವನು ಖಳನಾಗುತ್ತಾನೆ; ದುಷ್ಕರ್ಮಿಯಾಗುತ್ತಾನೆ! ಭಗವಾನ್ ಮೇಲೆ ಕೇಸು ದಾಖಲಾದ ಮೇಲೆ, ಸರಕಾರ ಅವರಿಗೆ ಗನ್‍ಮ್ಯಾನ್ ಸೌಲಭ್ಯ ಒದಗಿಸುತ್ತದೆ! ಭಗವಾನ್, ಕರ್ನಾಟಕದಿಂದ ಪಾರಾಗಿ ಕೇರಳ ರಾಜ್ಯಕ್ಕೆ ಹೋಗಲು ಸರಕಾರವೇ ಮುಂದೆ ನಿಂತು ಸಹಕರಿಸುತ್ತದೆ. ಇದು ಇಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕಿಂತ ಜಂಗಲ್ ರಾಜ್ ಎಷ್ಟೋ ಪರವಾಯಿಲ್ಲ ಎನ್ನಬಹುದು!
ಬಹುಶಃ ನಮ್ಮ ರಾಜ್ಯ ಸರಕಾರಕ್ಕೆ ಕೋಮುಸೌಹಾರ್ದ ಬೇಕಾಗಿಲ್ಲ. ರಾಜ್ಯದಲ್ಲಿ ಹೇಗಾದರೂ ಮಾಡಿ ಒಂದು ಕೋಮುಗಲಭೆ ಎಬ್ಬಿಸಬೇಕು ಮತ್ತು ಅದಕ್ಕೆ ಹಿಂದೂಗಳನ್ನೂ ಬಿಜೆಪಿಯನ್ನೂ ಕೇಂದ್ರ ಸರಕಾರವನ್ನೂ ಗುರಿಯಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರ ಭಾವಿಸಿದಂತಿದೆ. ಜಾತಿದ್ವೇಷ, ಧರ್ಮದ್ವೇಷದ ಹೇಳಿಕೆಗಳನ್ನು ನಿರಂತರ ಹೇಳುವ ಭಗವಾನ್‍ರಿಗೆ ಸರಕಾರವೇ ಮುಂದೆ ನಿಂತು ಪೋಲೀಸ್ ರಕ್ಷಣೆ ಒದಗಿಸುತ್ತಿದೆ. ಭಗವಾನ್ ಮೇಲೆ ದಾಖಲಾಗಿರುವ ಹಲವು ಪೋಲೀಸ್ ಕೇಸುಗಳನ್ನು ತಣ್ಣಗಾಗಿಸಲಾಗಿದೆ. ಇದು ಸರ್ವಾಧಿಕಾರವಲ್ಲದೆ ಬೇರೇನೂ ಅಲ್ಲ. ಕಲ್ಬುರ್ಗಿ ಕೊಲೆ ನಡೆದಾಗ ಒಬ್ಬ ತರುಣ ಟ್ವೀಟ್ಟರ್‍ನಲ್ಲಿ 140 ಅಕ್ಷರ ಬರೆದುಕೊಂಡ ಎಂಬ ವಿಷಯಕ್ಕೇ ಅವನನ್ನು ಬಂಧಿಸಿ ಪೋಲೀಸ್ ಟ್ರೀಟ್‍ಮೆಂಟ್ ಕೊಡುವ ಸರಕಾರ, ವರ್ಷಗಳಿಂದ ನೂರಾರು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟರೂ ಭಗವಾನ್ ಯಾವುದೇ ವಿಚಾರಣೆಗೆ ಗುರಿಯಾಗದಂತೆ ನೋಡಿಕೊಳ್ಳುತ್ತಿದೆ. ಇದು ಕುಂಭಕರ್ಣನನ್ನು ಸಾಕಿದ ರಾವಣರಾಜ್ಯದ ಕತೆಗಿಂತ ಬೇರೆಯಾಗಿದೆಯೇ? ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ಸಮಾನತೆಗಳ ಬಗ್ಗೆ ಭಾಷಣ ಬಿಗಿಯುವ ಸರಕಾರದ ನಾಯಕರು ಭಗವಾನ್‍ಗೆ ನೀಡಿರುವ ಸವಲತ್ತುಗಳ ಬಗ್ಗೆ ಯಾವ ಸ್ಪಷ್ಟೀಕರಣ ಕೊಡುತ್ತಾರೆ?
ಸರಕಾರೀ ಕಚೇರಿಗಳು, ಇಲಾಖೆಗಳು, ಶಿಕ್ಷಣಸಂಸ್ಥೆ, ನಿಗಮ, ಪ್ರಾಧಿಕಾರ ಮತ್ತು ಮಾಧ್ಯಮ ರಂಗಗಳಲ್ಲಿ ಹಿಂದೂ ಭಾವನೆಗಳನ್ನು ತುಳಿಯುವ ಮನಸ್ಥಿತಿ ಇರುವ ವ್ಯಕ್ತಿಗಳನ್ನೇ ಚಾಣಾಕ್ಷತನದಿಂದ ತುಂಬಿಸುತ್ತಿರುವ ಸರಕಾರ, ತನ್ನನ್ನು ಹೊಗಳುವ, ಬೆಂಬಲಿಸುವ, ಬಹುಪರಾಕ್ ಎನ್ನುವವರ ಬಳಗವನ್ನು ಬೆಳೆಸುತ್ತಿದೆ. ಇದು ಏಕಚಕ್ರಾಧಿಪತ್ಯದ ಲಕ್ಷಣ. ಸರಕಾರೀ ಕಚೇರಿಗಳೂ ಇಲಾಖೆಗಳೂ ಸದ್ಯಕ್ಕೆ ಬುದ್ಧಿಜೀವಿಗಳ ಒಡ್ಡೋಲಗಗಳಾಗಿವೆ. ಇವರು ಮಾಡುತ್ತಿರುವ ರಾಜಕೀಯವಂತೂ ಅತ್ಯಂತ ಹೊಲಸು. ಸ್ವಜಾತಿಗೇ ಮೊದಲ ಮಣೆ. ದಲಿತ, ಅಹಿಂದ ಇತ್ಯಾದಿ ಪದಗಳನ್ನು ಉದುರಿಸಿದರೆ ಸಾಕು ಮಾನ-ಸನ್ಮಾನ. ತಾನು ಪ್ರಗತಿಪರ, ತಳಸ್ಪರ್ಶಿ ಹೋರಾಟಗಾರ ಎಂದು ಬಿಂಬಿಸಿಕೊಂಡರೆ ಸಾಕು, ಅವರಿಗೆ ಹಾರತುರಾಯಿ. ಕನ್ನಡಪ್ರಭದಂಥ ಪತ್ರಿಕೆಯಲ್ಲಿ ಬಲಪಂಥೀಯ ಚಿಂತನೆಗಳಿಗೂ ಜಾಗ ಕೊಡುತ್ತಿದ್ದ ವಿಶ್ವೇಶ್ವರ ಭಟ್ಟರಂಥ ಸಂಪಾದಕರು ಅನಿವಾರ್ಯವಾಗಿ ಕೆಲಸ ಬಿಡಬೇಕಾದಾಗ ಕರ್ನಾಟಕದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು “ಈಗ ಕನ್ನಡಪ್ರಭ ಓದುವಂತಾಗಿದೆ” ಎಂದು ನಿಟ್ಟುಸಿರುಬಿಡುತ್ತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಂದರೆ, ಇವರಿಗೆ ತಮ್ಮದಲ್ಲದ ಯಾವುದೇ ವಿಚಾರಧಾರೆಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ.ಇಂಥ ಒಂದು ಸರ್ವಾಧಿಕಾರಿ ಸರಕಾರದ ವಿವಿಧ ಯೋಜನೆಗಳಲ್ಲಿ ಇಂಥ ಅಕಾಡೆಮಿ ಪ್ರಶಸ್ತಿಗಳೂ ಬರುತ್ತವೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ, ನಾವು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಪಟ್ಟಿಯನ್ನು ಹೇಗೆ ವಿರೋಧಿಸುತ್ತೇವೋ ಹಾಗೆಯೇ ಅದಕ್ಕೆ ಬೆಂಗಾವಲಾಗಿ ನಿಂತಿರುವ ಸರಕಾರದ ಡಿಕ್ಟೇಟರ್‍ಶಿಪ್ ಅನ್ನೂ ವಿರೋಧಿಸುತ್ತೇವೆ. ನಮ್ಮ ಹೋರಾಟ ಯಾವುದೇ ಒಂದು ವ್ಯಕ್ತಿಗೆ ಸೀಮಿತವಾದದ್ದಲ್ಲ.
ಹೋರಾಟ ಯಾರಿಂದ?
ನಾವು ಹುಟ್ಟುಹಾಕಿರುವ ಹೋರಾಟ ಸಂಪೂರ್ಣವಾಗಿ ಜನಪರ. ಜನರಿಂದಲೇ ಹುಟ್ಟಿರುವ ಆಂದೋಲನ ಇದು. ನಾವು ಯಾರನ್ನೂ ಈ ಆಂದೋಲನದಲ್ಲಿ ಕೈಜೋಡಿಸಲು ಬಲವಂತಪಡಿಸಿಲ್ಲ. ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಜೊತೆ ಕೈ ಜೋಡಿಸಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ಪತ್ರಿಕೆಗಳು, ಟಿವಿ ಚಾನೆಲ್‍ಗಳು ಇದು ತಮ್ಮ ಜವಾಬ್ದಾರಿಯೂ ಹೌದು ಎಂದು ಅರಿತು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟರೆ ಅದನ್ನು ಸ್ವಾಗತಿಸುತ್ತೇವೆ. ಆದರೆ, ಇದರಲ್ಲಿ ಪಾಲ್ಗೊಂಡಿರುವ ಯಾರಿಗೂ ರಾಜಕೀಯ ಹಿತಾಸಕ್ತಿಗಳು ಇಲ್ಲ. ಪ್ರಗತಿಪರರು, ಬುದ್ಧಿಜೀವಿಗಳು ಸಂಶಯಪಡುವಂತೆ ಹಿಡನ್ ಅಜೆಂಡಗಳು ಇಲ್ಲ. ಸಾಹಿತ್ಯ ಅಕಾಡೆಮಿ ಅಪಾತ್ರರಿಗೆ ಪ್ರಶಸ್ತಿಗಳನ್ನು ದಾನ ಮಾಡಿದೆ; ಅದನ್ನು ತಡೆಹಿಡಿಯಬೇಕು ಮತ್ತು ಇಡೀ ಪಟ್ಟಿಯನ್ನು ಪರಿಷ್ಕರಿಸಬೇಕು – ಇದಷ್ಟೇ ನಮ್ಮ ಬೇಡಿಕೆ.ಅತ್ಯಂತ ಧನಾತ್ಮಕ ತಿರುವು ಏನೆಂದರೆ, ಕನ್ನಡದ ಪ್ರಸಿದ್ಧ ಲೇಖಕರೂ ಗಣ್ಯವ್ಯಕ್ತಿಗಳೂ ಇದೀಗ ತಮ್ಮ ಮೌನ ಮುರಿದು “ನೀವು ಮಾಡುತ್ತಿರುವ ಹೋರಾಟ ಸರಿದಾರಿಯಲ್ಲಿ ನಡೆಯುತ್ತಿದೆ” ಎಂಬ ಪ್ರೋತ್ಸಾಹದ ಮಾತುಗಳನ್ನು ಆಡತೊಡಗಿದ್ದಾರೆ. ಅದು ನಮಗೂ ಉತ್ಸಾಹ, ಪ್ರೇರಣೆ ಕೊಟ್ಟಿದೆ. ಹೋರಾಟದ ದಾರಿಯಲ್ಲಿ ಇಂತಹ ತಣ ್ಣೀರ ಚಿಲುಮೆಗಳಿರುವುದು ಚೇತೋಹಾರಿ.
ಮುಂದೇನು?
ನಾವು ನಮ್ಮ ಹೋರಾಟವನ್ನು ತಾತ್ವಿಕ ಅಂತ್ಯ ಕಾಣುವವರೆಗೂ ನಿಲ್ಲಿಸುವುದಿಲ್ಲ. ಭಗವಾನ್ ಮತ್ತು ಉಳಿದ ಅಪಾತ್ರರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಹೋದ ಸರಕಾರದ ಶಿಶುವಾಗಿರುವ ಸಾಹಿತ್ಯ ಅಕಾಡೆಮಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವುದೇ ಇಲ್ಲವೆಂದು ಪಟ್ಟು ಹಿಡಿದರೆ ಅದನ್ನು ರಾಜ್ಯಪಾಲರು ಮತ್ತು ಕೇಂದ್ರದ ಗಮನಕ್ಕೂ ತರುವುದು ನಮ್ಮ ಮುಂದಿನ ಹೆಜ್ಜೆ. ಏನೇ ಇರಲಿ, ಸರ್ವಾಧಿಕಾರವನ್ನು ಅಂತ್ಯಗೊಳಿಸಬೇಕು; ಈ ಸರಕಾರಕ್ಕೆ ತಾನು ಜನರಿಂದ ಆಯ್ಕೆಗೊಂಡು ಹೋಗಿರುವ ಸಂಸ್ಥೆ ಎನ್ನುವುದರ ನೆನಪು ಮಾಡಿಸಬೇಕು. ಅದಾಗುವವರೆಗೆ ವಿರಮಿಸೆವು.
ಚಿತ್ರ ಸೌಜನ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಜಾಲತಾಣ ಹಾಗೂ ಮುಕ್ತ ಅಂತರ್ಜಾಲ
ಗೋಮಾಂಸ ನಿಷೇಧ : ಜೈನರನ್ನು ಅಲ್ಪಸಂಖ್ಯಾತರು ಎಂದು ಒಪ್ಪಿಕೊಳ್ಳಲಾಗುತ್ತಿಲ್ಲವೇ..?
– ಪ್ರವೀಣ ಕೊಂಬೆಮನೆ
ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯವೇ.! ಆದ್ರೆ ಸ್ನೇಹಿತರೇ.. ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಜೈನರ ಎದುರು ರಸ್ತೆಯಲ್ಲಿ ಚಿಕನ್ ಸುಟ್ಟು ಪ್ರತಿಭಟನೆ ನಡೆಸುವ ಮೂಲಕ ಅತಿರೇಕದ ವರ್ತನೆ ತೋರಿಸಿದೆ. ಮಹಾರಾಷ್ಟ್ರದಲ್ಲಿ ಜೈನರು ಸಭೆ ಸೇರಿದ ಪ್ರದೇಶದ ತೀರಾ ಹತ್ತಿರದಲ್ಲಿಯೇ ಆ ಸಮುದಾಯದ ಎದುರಿಗೇ ಮಾಂಸ ಸುಡುವ ಮೂಲಕ ನವ ನಿರ್ಮಾಣ ಸೇನೆ ಅತೀ ಧೂರ್ತತನ ಪ್ರದರ್ಶಿಸಿದೆ. ಆದರೆ ಜೈನರು ಇದನ್ನೆಲ್ಲಾ ಕಡೆಗಣಿಸಿ ಮೌನವಾಗಿ ಅಲ್ಲಿಂದ ಹೊರ ನಡೆದಿದ್ದಾರೆ.
ಸಾವಿರಾರು ವರ್ಷಗಳಿಂದ ಜೈನ ಸಮುದಾಯದಲ್ಲಿ ಆಚರಣೆಯಲ್ಲಿ ಬಂದ ಸಲ್ಲೇಖನಾ ವ್ರತವನ್ನು ಈ ಹಿಂದೆ ಆತ್ಮಹತ್ಯೆ ಎನ್ನುವ ಮೂಲಕ ಜೈನರ ಆಚರಣೆಗಳಿಗೆ ತೊಂದರೆ ನೀಡಲಾಯಿತು. ಈಗ ಜೈನರು ಮಾಂಸಾಹಾರಿಗಳಲ್ಲ, ಗೋ ಮಾಂಸ ಭಕ್ಷಣೆಗೆ ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ಅವರ ಎದುರು ಮಾಂಸಗಳನ್ನಿಟ್ಟು ಸುಡುವುದು, ಸಾರ್ವಜನಿಕವಾಗಿ ಮಾಂಸ ಮಾರಾಟ ಮಾಡುವುದು ಮಾಡಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಭಾರತದ ನ್ಯಾಯಾಲಯವೂ ಸೇರಿದಂತೆ ವಿವಿಧ ರೀತಿಯಲ್ಲಿ ಜೈನರ ಧಾರ್ಮಿಕ ಹಕ್ಕುಗಳನ್ನು ತುಳಿಯಲಾಗುತ್ತಿದೆಯೇ..? ಎನ್ನುವ ಅನುಮಾನಕ್ಕೆ ಕಾರಣವಾಗಿದೆ.
ಕನ್ನಡಿಯಲ್ಲಿ ಮುಖನೋಡಿಕೊಳ್ಳಿ ಬುದ್ಧಿಜೀವಿಗಳೇ
– ರಾಕೇಶ್ ಶೆಟ್ಟಿ
ಕಳೆದ ಭಾನುವಾರ ಕಲ್ಬುರ್ಗಿಯವರ ಹತ್ಯೆಯ ಸುದ್ದಿ ತಿಳಿದಾಗ ಆಘಾತವಾಯಿತು.ಹತ್ಯೆ ಯಾವ ಕಾರಣಕ್ಕಾಗಿದೆಯೋ ಅದು ತನಿಖೆಯಿಂದ ಹೊರಬರಲಿದೆ.ಆದಷ್ಟು ಬೇಗ ತನಿಖೆಯಾಗಿ ಸತ್ಯಹೊರಬಂದು ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು.ಕಲ್ಬುರ್ಗಿಯವರ ಐಡಿಯಾಲಜಿಗಳೇನೇ ಇದ್ದಿರಬಹುದು,ಆದರೆ ಅವರು ಈ ನಾಡಿನ ಸಂಶೋಧನಾ ಕ್ಷೇತ್ರದ ಪ್ರಮುಖ ವಿದ್ವಾಂಸರಲ್ಲೊಬ್ಬರಾಗಿದ್ದವರು.ಅವರ ಕೊಲೆ ಸಹಜವಾಗಿಯೇ ನಾಡಿನ ವೈಚಾರಿಕ ವಲಯದ ಆಕ್ರೋಶಕ್ಕೆ ಕಾರಣವಾಯಿತು.ಕ್ರೋಧ-ಆಕ್ರೋಶಕ್ಕೊಳಗಾದ ಮನಸ್ಸಿನಿಂದ ಒಳಿತಿಗಿಂತ ಹಾನಿಯೇ ಹೆಚ್ಚು ಎಂಬ ಮಾತಿನಂತೆ,ಈ ಘಟನೆಯ ಸುತ್ತ ದೊಡ್ಡವರು ಎನಿಸಿಕೊಂಡವರ ವರ್ತಿಸಿದ ರೀತಿಯೇ ಉದಾಹರಣೆ.ಸೂತಕದ ಮನೆಯಲ್ಲಿ ಸಂಭ್ರಮಿಸುವುದು ಎಷ್ಟು ವಿಕೃತವೋ,ಅದೇ ರೀತಿ ಸೂತಕದ ಮನೆಯಲ್ಲಿ ಸಂಯಮ ಕಳೆದುಕೊಳ್ಳುವುದು ಹಾಗೂ ರಾಜಕೀಯ ಮಾಡುವುದೂ ಸಹ!
ಮಾಧ್ಯಮಗಳಲ್ಲಿ ಹತ್ಯೆಯ ಸುದ್ದಿ ಹೊರಬರುತಿದ್ದಂತೆ ನಾಡಿನ ಕೆಲವು ಬುದ್ಧಿಜೀವಿಗಳು,ಇದೊಂದು ವೈಚಾರಿಕ ಕಾರಣಕ್ಕೇ ಆದ ಹತ್ಯೆ ಎಂಬಂತೆ ತೀರ್ಪುಕೊಡಲಾರಂಭಿಸಿದರು.ಬುದ್ಧಿಜೀವಿ,ಪ್ರಗತಿಪರರ ಗುಂಪಿನ ಈ ನಡೆ ಅವರ ಜೊತೆಯೇ ಗುರುತಿಸಿಕೊಳ್ಳುವ ಕೆಲವರಿಗೆ ಯಾವ ರೀತಿ ರೇಜಿಗೆ ಹುಟ್ಟಿಸಿತು ಎಂಬುದಕ್ಕೆ,ಪ್ರಜಾವಾಣಿಯಲ್ಲಿ ನಟರಾಜ್ ಹುಳಿಯಾರ್ ಅವರು ಬರೆದ ಲೇಖನವೇ ಸಾಕ್ಷಿ. ಲೇಖನದಲ್ಲಿ ದಾಖಲಿಸಿರುವಂತೆ, “ಇಂತ ಸಮಯದಲ್ಲಿ ನಾವು ಸ್ಟ್ರಾಟರ್ಜಿ ಮಾಡ್ಬೇಕ್ರಿ” ಎಂದು ಒಬ್ಬರು ಹೇಳಿದರು ಅಂದರೇ ಕರ್ನಾಟಕದ ಬುದ್ಧಿಜೀವಿ ವಲಯ ಬಂದು ನಿಂತಿರುವುದೆಲ್ಲಿ? ಇದನ್ನು ಸಾವಿನ ಮನೆಯ ರಾಜಕಾರಣ ಮಾಡುವ ಇವರನ್ನು ರಾಜಕಾರಣಿಗಳು ಎನ್ನೋಣವೆಂದರೆ, ನಮ್ಮ ರಾಜ್ಯದಲ್ಲಿ ಬಹಳಷ್ಟು ಸಹೃದಯಿ ರಾಜಕಾರಣಿಗಳಿದ್ದಾರೆ ಮತ್ತು ಖುದ್ದು ಈ ಕೇಸಿನಲ್ಲಿ ಅವರೇ ಎಲ್ಲೂ ರಾಜಕೀಯ ಮಾಡಿಲ್ಲ.ಆದರೆ ನಮ್ಮ ಬುದ್ದಿಜೀವಿ ವಲಯ ಮಾತ್ರ ರಾಜ್ಯದಲ್ಲಿ “ವೈಚಾರಿಕ ಅಸಹನೆ” ಹೆಪ್ಪುಗಟ್ಟಿದೆ ಎಂದು ಕೂಗಿಕೊಳ್ಳುತ್ತಿದೆ.
ಮತ್ತಷ್ಟು ಓದು 
ಮಹದಾಯಿ : ಜನರ ದಾರಿ ತಪ್ಪಿಸುವುದು ಕಾಂಗ್ರೆಸ್‌ಗೆ ಶೋಭೆಯೇ?
– ವೃಷಾಂಕ್ ಭಟ್,ದೆಹಲಿ
ಕಳಸಾ-ಬಂಡೂರ ಕಾಲುವೆಗೆ ಮಹದಾಯಿ ನೀರು ಹರಿಸಲು ಪ್ರಧಾನಿಯೊಬ್ಬರೇ ಶಕ್ತರು ಎಂಬ ರಾಜಕೀಯ ಸುಳ್ಳನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ತಿಳಿದೋ ತಿಳಿಯದೆಯೋ ಮಾಧ್ಯಮಗಳು ಕೂಡ ಹೆಚ್ಚು ಕಡಿಮೆ ಇದೇ ಸುಳ್ಳನ್ನು ಪ್ರಸಾರ ಮಾಡುತ್ತಿದೆ. ಮಹದಾಯಿ ಸಮಸ್ಯೆ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಕಾಂಗ್ರೆಸ್ ಪಾಲಿಗಿದು ರಾಜಕೀಯ ಅವಕಾಶ. ಮಹದಾಯಿ ಸಮಸ್ಯೆ ಜೀವಂತವಾಗಿದ್ದಷ್ಟು ದಿನವೂ ರಾಜ್ಯದ ಜನರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುತ್ತದೆ ಎಂಬುವುದು ಸಿದ್ಧರಾಮಯ್ಯ ಮತ್ತವರ ಹೈಕಮಾಂಡ್‌ಗೆ ತಿಳಿಯದ ವಿಷಯವಲ್ಲ. ಹಾಗಾಗಿ ಮಹದಾಯಿ ಸಮಸ್ಯೆ ಬಹೆಗರಿಯುವುದು ರಾಜ್ಯ ಸರ್ಕಾರಕ್ಕೇ ಬೇಕಿಲ್ಲ. ಸಮಸ್ಯೆ ಬಗೆಹರಿಸಲು ನಿಜಕ್ಕೂ ಸಾಧ್ಯವಿದೆಯೆಂದಾದರೆ ಅದು ಕಾಂಗ್ರೆಸ್‌ಗೆ ಮಾತ್ರ. ಮಹದಾಯಿ ಪ್ರಕರಣ ಸಂಬಂಧ ನ್ಯಾಯಾಧಿಕರಣ ರಚನೆಯಾದ ಬಗೆ ಮತ್ತು ಅದರಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆ ಎಂಬುದನ್ನು ನೋಡೋಣ.
1) ಜುಲೈ 2002 : ಅಂತಾರಾಜ್ಯ ನದಿ ನೀರು ವ್ಯಾಜ್ಯ-1956 ಅಡಿಯಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಗೋವಾ ಸರ್ಕಾರ ಕೇಂದ್ರಕ್ಕೆ ಮನವಿ ನೀಡಿತ್ತು. ಆದರೆ ಕೇಂದ್ರವು ಆ ಕೂಡಲೇ ನ್ಯಾಯಾಧಿಕರಣ ರಚಿಸಲಿಲ್ಲ.ಆಗಿದ್ದದ್ದು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ.
2) ಏ.4-2006: ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸುತ್ತಾರೆ. ಆದರೆ ಅಂದು ಗೋವಾ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ರಾಣೆ ನ್ಯಾಯಾಧಿಕರಣ ರಚನೆಯಾಗಲೇ ಬೇಕು ಎಂದು ಹಠ ಹಿಡಿಯುತ್ತಾರೆ. ಆ ಮೂಲಕ ಮಾತು ಕತೆಯ ಉದ್ದೇಶ ವಿಫಲ.
ಮತ್ತಷ್ಟು ಓದು 
ಒಂದು ಸಾವಿನ ಸುತ್ತ ಬುದ್ಧಿಜೀವಿಗಳ ಭೂತಕುಣಿತ
– ರೋಹಿತ್ ಚಕ್ರತೀರ್ಥ
ಕಲ್ಬುರ್ಗಿಯವರ ಸಾವು ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಯಾರೋ ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಮನೆವರೆಗೆ ಬಂದು ತಾವು ನಿಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕಲ್ಬುರ್ಗಿ ಎದುರು ಬಂದು ನಿಂತು ಅವರ ಹಣೆಯ ಸಹಸ್ರಾರಕ್ಕೆ ಗುರಿಯಿಟ್ಟು ಗುಂಡು ಹೊಡೆದು ಪರಾರಿಯಾದರು. ಕ್ಷಣಮಾತ್ರದಲ್ಲಿ ಕಲ್ಬುರ್ಗಿ ನೆಲಕ್ಕುರುಳಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸುದ್ದಿ ಭಾನುವಾರದ ಮುಂಜಾನೆ ಹತ್ತೂವರೆ ಹೊತ್ತಿಗೆಲ್ಲ ರಾಜ್ಯಾದ್ಯಂತ ಸಂಚಲನ ಹುಟ್ಟಿಸಿತು. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದ್ದಾರೆ ಎನ್ನುವುದರ ಕುರಿತು ಯಾರಿಗೂ, ಪೋಲೀಸರಿಗೂ ಮಾಹಿತಿ ಇರಲಿಲ್ಲ. ಆದರೆ, ಕೊಲೆ ನಡೆದು ಅರ್ಧತಾಸಿನಲ್ಲೇ ಈ ಕೊಲೆಯನ್ನು ಪೂರ್ವದಲ್ಲೇ ನಿಯೋಜಿಸಿದ್ದವರಂತೆ ಹತ್ತುಹಲವು ಸಾಹಿತಿಗಳು, ಪಂಡಿತರು ಮಾಧ್ಯಮಗಳಲ್ಲಿ ಕಾಣಿಸಿಕೊಂಡು “ಇದಕ್ಕೆ ಸಂಘಪರಿವಾರವೇ ಕಾರಣ. ಕಲ್ಬುರ್ಗಿಯವರ ವಿಚಾರವನ್ನು ಸಹಿಸಿಕೊಳ್ಳಲಾಗದೆ ಶೂಟ್ ಮಾಡಿ ಉಸಿರು ನಿಲ್ಲಿಸಿದ್ದಾರೆ” ಎಂದು ಹೇಳತೊಡಗಿದರು. ಬರಗೂರು ರಾಮಚಂದ್ರಪ್ಪ ಟಿವಿ ಜೊತೆಗೆ ಮಾತಾಡುತ್ತ ಎಷ್ಟೊಂದು ಕರಾರುವಾಕ್ಕಾಗಿ ಈ ಕೊಲೆಯ ವಿವರಗಳನ್ನು ಕೊಟ್ಟರೆಂದರೆ ಅವರೇ ಸಂಘಿಗಳ ಜೊತೆ ಕೂತು ಈ ಕೊಲೆಯನ್ನು ರೂಪಿಸಿದ್ದರೋ ಎಂಬ ಅನುಮಾನ ನೋಡುಗನಿಗೆ ಬರಬೇಕು, ಹಾಗಿತ್ತು! ಅತ್ತ ದೊಡ್ಡ ಬುದ್ಧಿಜೀವಿಗಳು ಟಿವಿ ಮಾಧ್ಯಮದಲ್ಲಿ ತಮ್ಮ ಚಿಂತನೆ ಹರಿಯಬಿಡುತ್ತಿದ್ದರೆ ಇತ್ತ ಮರಿ ಬುದ್ಧಿಜೀವಿಗಳು ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮಾಧ್ಯಮಗಳಲ್ಲಿ ಸಂಘಪರಿವಾರ ಮತ್ತು ಕೋಮುವಾದಿಗಳನ್ನು ಹೀಯಾಳಿಸತೊಡಗಿದರು. ಕೆಲವರು ಕಲ್ಬುರ್ಗಿಯನ್ನು ಕೊಂದವನು ಆಧುನಿಕ ಗೋಡ್ಸೆ ಎಂದರು. ಸಂಜೆಯ ಹೊತ್ತಿಗೆ ಮತ್ತೆ ಟೌನ್‍ಹಾಲಿನೆದರು ಸೇರಿದ್ದ ಪ್ರಗತಿಪರ ಮತ್ತು ತಳಸ್ಪರ್ಶಿ ಚಿಂತಕರಿಗೆ ಯಾರು ಕೊಲೆಗಾರ ಎನ್ನುವುದು ರುಪಾಯಿಗೆ ಹದಿನಾರಾಣೆ ಸ್ಪಷ್ಟವಾಗಿತ್ತು!





