ಅಂಥ ಹುಡುಗಿಯರ ನಡುವೆ ನಾವು ಕಳೆದು ಹೋಗಿದ್ದೇವೆ!
– ವಿನಾಯಕ ಕೊಡ್ಸರ
ಪೋರ್ನ್ ಬ್ಯಾನ್ ರಾಷ್ಟ್ರೀಯ ವಿಪತ್ತು ಎಂಬಂತೆ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಫೇಸ್ಬುಕ್, ವಾಟ್ಸಪ್‌ನಲ್ಲಿ ಒಂದಷ್ಟು ಜೋಕುಗಳು ಹರಿದಾಡುತ್ತಿವೆ. ಪರ-ವಿರೋಧದ ನಿಲುವುಗಳು ಇದ್ದೇ ಇದೆ! ನೀವು ಯಾವುದೇ ಸೆಕ್ಸ್ ವೀಡಿಯೋ ನೋಡಿದ್ರೂ, ಅದು ಸಹಜವಾಗಿದ್ದಲ್ಲ, ಸಂಪಾದನೆಗೊಂಡ ಆವೃತಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕ್ಯಾಮೆರ ಫ್ರೇಮ್‌ಗಳು, ಬದಲಾಗುವ ಸ್ಥಳಗಳು, ಮ್ಯೂಸಿಕ್‌ನಲ್ಲಿನ ವ್ಯತ್ಯಯಗಳು ಎಲ್ಲವೂ ಕೂಡ ಇದೊಂದು ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಂತೆ ಎಡಿಟೆಡ್ ಆವೃತಿ ಮತ್ತು ಪೂರ್ತಿ ಸ್ಕ್ರಿಪ್ಟೆಡ್ ಎಂಬುದನ್ನು ಸೂಚಿಸುತ್ತದೆ.
ಜಗತ್ತಿಗೆ ಚಲಿಸುವ ಚಿತ್ರಗಳ ಪರಿಕಲ್ಪನೆ ಬಂದಾಗಿನಿಂದ ಈ ಪೊರ್ನೊಗ್ರಫಿಯ ಇತಿಹಾಸ ಸಿಗುತ್ತೆ. ಅಂದ್ರೆ ೧೮೯೦ರ ದಶಕದಿಂದಲೆ ಈ ಉದ್ಯಮ ಆರಂಭವಾಗಿದ್ದು ಎಂಬ ಅನುಮಾನದಿಂದ ಗೂಗಲ್‌ನಲ್ಲಿ ಇಂಥ ಚಿತ್ರಗಳು ಎಲ್ಲಿ ತಯಾರಾಗುತ್ತವೆ, ಹೇಗೆ ತಯಾರಾಗುತ್ತವೆ, ಇವುಗಳ ಹಕ್ಕಿಕತ್ತು ಏನು ಎಂಬ ಕುರಿತು ಒಂದಷ್ಟು ದಿನದ ಹಿಂದೆ ಸುಮ್ಮನೆ ಜಾಲಾಡಿದ್ದೆ.
ಈ ಪೋರ್ನ್ ವೀಡಿಯೋ ಉತ್ಪಾದಕ ಪ್ರೊಡೆಕ್ಷನ್ ಹೌಸ್‌ಗಳು ಮುಖ್ಯವಾಗಿ ಬೇರು ಬಿಟ್ಟಿರುವುದು ಯೂರೋಪ್ ಮತ್ತು ಅಮೆರಿಕದಲ್ಲಿ. ಒಂದು ಅಂದಾಜಿನ ಪ್ರಕಾರ ೨೦೧೨ರವೇಳೆಗೆ ಈ ನೀಲಿಚಿತ್ರ ಜಗತ್ತಿನ ವಾರ್ಷಿಕ ಆದಾಯ ೧೫-೨೦ ಶತಕೋಟಿ ಡಾಲರ್. ಅಮೆರಿಕದ ೨ ಪ್ರಮುಖ ವೆಬ್‌ಸೈಟ್‌ಗಳು ವರ್ಷಕ್ಕೆ ಸುಮಾರು ೪ ಶತಕೋಟಿ ಡಾಲರ್‌ನಷ್ಟು ವಹಿವಾಟು ನಡೆಸುತ್ತಿವೆ. ಅಲ್ಲಿಗೆ ಇದೊಂದು ವ್ಯವಸ್ಥಿತ ಉದ್ಯಮ ಎಂಬುದನ್ನು ಖಾತ್ರಿಪಡಿಸಿಕೊಂಡು ಇಂಟರ್‌ನೆಟ್‌ನಲ್ಲಿ ಜಾಲಾಡುತ್ತ ಹೋದಾಗ ನನಗೆ ಇಂಗ್ಲಿಷ್‌ನ ೨ ಅತ್ಯದ್ಭುತ ಲೇಖನ ಸಿಕ್ಕಿತ್ತು.
ಮತ್ತಷ್ಟು ಓದು 
ರಿವೈಂಡ್ ಮಾಡಲಾಗದ ಫಿಲ್ಮಿನ ರೀಲು ಮುಗಿಯುವ ಮುನ್ನ
– ರೋಹಿತ್ ಚಕ್ರತೀರ್ಥ
ಈ ಮಾತನ್ನು ನಿನಗೆ ಹೇಳಬೇಕೋ ಬೇಡವೋ ಅನ್ನುವ ವಿಷಯದಲ್ಲಿ ನನಗೆ ಖಂಡಿತ ಗೊಂದಲವಿಲ್ಲ. ಆದರೆ, ಹೇಗೆ ಹೇಳಬೇಕು ಅನ್ನುವ ಸಂಗತಿ ಮಾತ್ರ ನನ್ನ ತಲೆತಿನ್ನುತ್ತಿದೆ. ಎಷ್ಟೋ ಸಲ, ನಮ್ಮ ಇಡೀ ಜೀವಮಾನವೇ ಇಂತಹ ಮೂಲಭೂತ ಪ್ರಶ್ನೆಗಳನ್ನು ಚಿಂತಿಸುತ್ತ ಕೂರುವುದರಲ್ಲೇ ಹೋಗಿಬಿಡುತ್ತದೆ. ಆಗೆಲ್ಲ, ಯೋಚನೆಯೇ ಮಾಡದೆ ಮುನ್ನುಗ್ಗಿ ಕೆಲಸ ಮುಗಿಸಿದವರೇ ಎಷ್ಟೋ ವಾಸಿ; ನಿಂತು ತಲೆ ತುರಿಸಿಕೊಳ್ಳೋ ಬದಲು ಕೆಲವು ಫರ್ಲಾಂಗಾದರೂ ನಡೆದರು ಅಂತ ಹೇಳಬಹುದು. ಹಾಗಾಗಿ, ನಾನು ನನ್ನ ವಿಷಯ ನಿರೂಪಣೆಯಲ್ಲಿ, ಹೇಳುವ ಕ್ರಮದಲ್ಲಿ, ಮುಚ್ಚುಮರೆಯಿಲ್ಲದ ನಿರ್ಭಿಡೆಯಲ್ಲಿ ಸ್ವಲ್ಪ ಹೆಚ್ಚೇ ಸ್ವಾತಂತ್ರ್ಯ ತೆಗೆದುಕೊಂಡೆ ಅನ್ನಿಸಿದರೆ, ಧಾರಾಳವಾಗಿ ಮಗನಾಗಿ ಕ್ಷಮಿಸಿಬಿಡು!
ಅಸಲಿಗೆ ಈ ವಿಷಯವನ್ನು ಶಾಲೆ-ಕಾಲೇಜಲ್ಲಿ ಹೇಳುವುದಿಲ್ಲ; ಪಠ್ಯಪುಸ್ತಕದಲ್ಲಿ ಬರೆಯುವುದಿಲ್ಲ; ಇದರ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆಗಳಾಗಲೀ ಅಂಕಗಳಾಗಲೀ ಇಲ್ಲ; ಪ್ರಾಕ್ಟಿಕಲ್ ತರಗತಿಯಲ್ಲಿ ಇದರ ಮೇಲೆ ವೈವಾ ಇಲ್ಲ. ಆದರೆ, ನಮ್ಮ ಹುಡುಗರ ಬಹುಪಾಲು ಸಮಯ, ದುಡ್ಡು, ಮನೋಲೋಕವನ್ನು ತಿನ್ನುವ ಸಂಗತಿ ಇದು. ಎಷ್ಟೋ ಜನ ಇದರ ಬೆನ್ನುಬಿದ್ದು, ಹಿಂದೆ ಬರಲಾಗದಷ್ಟು ದೂರ ನಡೆದುಬಿಟ್ಟಿದ್ದಾರೆ. ಕೆಲವರು ಇದರ ಹಿಡಿತದಿಂದ ತಪ್ಪಿಸಿಕೊಂಡು ಹೊರಬಂದರೂ ಅದು ಮಾಡಿದ ಗಾಯ, ಎಳೆದ ಗೀರು ಮಾಯದೆ ನೋವಿನಿಂದ ನರಳಿದ್ದಾರೆ. ಯಾರೂ ಈ ಬಗ್ಗೆ ಹೊರಗೆ ಸಾರ್ವಜನಿಕವಾಗಿ ಮಾತಾಡೋದಿಲ್ಲ. ಸಭ್ಯರ ಸಮ್ಮುಖದಲ್ಲಿ ಇದಕ್ಕೆ ಎಂಟ್ರಿ ಇಲ್ಲ. ಮುಚ್ಚಿದ ಕೋಣೆಗಳ ಹಿಂದೆ, ಅಡಗಿಸಿಟ್ಟ ಪುಸ್ತಕಗಳ ಹಾಳೆಗಳ ಮಧ್ಯೆ, “ಇಂಪಾರ್ಟೆಂಟ್ ಅಸೈನ್‍ಮೆಂಟ್ಸ್” ಎಂದಿರುವ ಲಾಕ್ ಮಾಡಿದ ಫೋಲ್ಡರ್‍ಗಳೊಳಗೆ ಇದು ತೆಪ್ಪಗೆ, ತಣ್ಣಗೆ ಕೂತಿದೆ. ಜಗತ್ತು ಇದನ್ನು ‘ಪೋರ್ನ್’ ಎನ್ನುತ್ತದೆ.
ಮತ್ತಷ್ಟು ಓದು 
ಕಂಡವರ ಮಕ್ಕಳನ್ನು ಕಾಡಿಗಟ್ಟುತ್ತಿರುವವರು ಯಾರು?
– ವಿಘ್ನೇಶ್, ಯಲ್ಲಾಪುರ
ಮೊನ್ನೆ ಮೊನ್ನೆ ನಡೆದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯನ್ನು ನೋಡಿ ಕೆಲವು ಪ್ರಗತಿಪರರು “ಯೋಧ”ರನ್ನು ಕುರಿತು,ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಾರೆ ಎಂದು ಬೊಬ್ಬೆ ಹಾಕುತಿದ್ದರು.ಇದು 24 – 11- 2008ರಂದು ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದ ಲೇಖನ.ಈ ಲೇಖನವನ್ನೊಮ್ಮೆ ಓದಿ.ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದವರು ಯಾರು ಎಂಬುದು ಅರ್ಥವಾಗಬಹುದು
ಅವಳು ಪಾರ್ವತಿ!
ಕೊಪ್ಪ ತಾಲೂಕಿನ ಸೂರ್ಯದೇವಸ್ಥಾನದ ಹುಡುಗಿ. ಕಾಲೇಜು ವಿದ್ಯಾಭ್ಯಾಸಕ್ಕೆಂದು ಹೋಗಿ ಸೇರಿದ್ದು ಶಿವಮೊಗ್ಗೆಯನ್ನು. ತನ್ನ ಕುಟುಂಬದಲ್ಲಿದ್ದ ಬಡತನ ಅವಳಲ್ಲಿ ಸಾಮಾಜಿಕ ಕಳಕಳಿಯನ್ನು ಹುಟ್ಟುಹಾಕಿತ್ತು; ಶಿವಮೊಗ್ಗದಲ್ಲಿದ್ದಷ್ಟು ವರ್ಷವೂ ಒಂದಲ್ಲ ಒಂದು ಸಾಮಾಜಿಕ ವಿಷಯದ ಕುರಿತು ಹೋರಾಟ ಮಾಡಲು ಪ್ರೇರೇಪಿಸಿತ್ತು. ಅದಕ್ಕಾಗಿ ವಿವಿಧ ಸಂಘಟನೆಗಳನ್ನು ಸೇರಿದಳು. ‘ಮಹಿಳಾ ಜಾಗೃತಿ’ಯ ಕಾರ್ಯಕರ್ತೆಯಾಗಿ ಹಗಲಿರುಳು ದುಡಿದಳು, ನಾಯಕಿಯಾಗಿ ಬೆಳೆದಳು. ಶಿವಮೊಗ್ಗದ ಕೆಲ ಉಪನ್ಯಾಸಕರು ದೂರದ ಆಂಧ್ರದಿಂದ ಗದ್ದರ್‍ನನ್ನು ಕರೆಸಿ ನಡೆಸಿದ ಸಭೆಗಳಲ್ಲಿ ನಡುರಾತ್ರಿಯವರೆಗೂ ಭಾಗವಹಿಸಿದಳು. ರೈತ ಹೋರಾಟದಿಂದ ಹಿಡಿದು ನದೀಮೂಲ ರಕ್ಷಣೆಯಂತಹ ವಿಷಯದವರೆಗೆ, ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆಯಿಂದ ಹಿಡಿದು ಕೊಳಚೆ ನಿವಾಸಿಗಳ ದನಿಯಾಗುವವರೆಗೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡಳು. ಹೀಗೆ ಅತ್ಯಂತ ಕ್ರಿಯಾಶೀಲಳಾಗಿದ್ದ ಹುಡುಗಿ, ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದಳು. ನಾಲ್ಕೈದು ವರ್ಷ ಪಾರ್ವತಿ ಎಲ್ಲಿದ್ದಾಳೆ ಎಂಬುದೇ ನಾಗರಿಕ ಸಮಾಜಕ್ಕೆ ತಿಳಿದಿರಲಿಲ್ಲ. ಸಮಾಜದ ಕುರಿತು ಅಪಾರ ಕಳಕಳಿಯನ್ನಿಟ್ಟುಕೊಂಡು ಹಗಲಿರುಳೂ ಸೈಕಲ್ ತುಳಿಯುತ್ತಿದ್ದ ಹುಡುಗಿ ಹೀಗೆ ಇದ್ದಕ್ಕಿದಂತೆ ಕಣ್ಮರೆಯಾಗಿದ್ದು ಏಕೆ? ಎಲ್ಲಿ ಹೋದಳು?
ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 2003ರ ನವೆಂಬರ್ 17ನೇ ತಾರೀಖು. ಕಾರ್ಕಳ ತಾಲೂಕಿನ ಈದು ಬಳಿಯ ಬೊಲ್ಲೊಟ್ಟುವಿನ ಮನೆಯೊಂದರಲ್ಲಿ ರಾತ್ರಿ ಸಿಡಿದ ಪೋಲೀಸರ ಗುಂಡಿನ ಬೆಳಕಲ್ಲಿ ಪಾರ್ವತಿ ಗೋಚರಿಸಿದಳು. ಹರೆಯದ ಕನಸುಗಳೆಲ್ಲ ಅರಳಿ,ಬದುಕಿನ ಗಾಂಭೀರ್ಯದತ್ತ ಹೊರಳಬೇಕಾದ ವಯಸ್ಸಿನಲ್ಲಿ ಪಾರ್ವತಿ ಹೆಣವಾಗಿ ಬಿದ್ದಿದ್ದಳು! ಅವಳ ಜೊತೆಗೇ ಮಸಣ ಸೇರಿದ ಹಾಜಿಮಾಳ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ! ಮತ್ತಷ್ಟು ಓದು 
ನಮ್ಮ ನಡುವೆ ಮೊಳಕೆಯೊಡೆಯುತ್ತಿರುವ ಸೆಕ್ಯುಲರ್ ಭಯೋತ್ಪಾದಕರು
– ರೋಹಿತ್ ಚಕ್ರತೀರ್ಥ
ಕನ್ನಡದ ಚಲನಚಿತ್ರ ನಿರ್ದೇಶಕರೊಬ್ಬರು ಉದುರಿಸಿದ ಅಣಿಮುತ್ತುಗಳು ಇವು: “ಭಗತ್‍ಸಿಂಗ್, ಆಜಾದ್ ಮುಂತಾದವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ವ್ಯವಸ್ಥೆ ತನಗಾಗದವರ ಕತ್ತಿಗೆ ನೇಣು ಬಿಗಿಯಲು ಸದಾ ಉತ್ಸುಕವಾಗಿರುತ್ತದೆ. ಒಂದೊಂದು ಕಾಲಕ್ಕೆ ಒಂದೊಂದು ಸರಿ ಅನ್ನಿಸುತ್ತದೆ. ಕಾನೂನು ಯಾವತ್ತೂ ಸಾಪೇಕ್ಷ. ಆಳುವವರ ಮರ್ಜಿಗೆ ತಕ್ಕಂತೆ ನ್ಯಾಯ, ಕಾನೂನು, ಶಿಕ್ಷೆಯ ರೂಪಗಳು ಬದಲಾಗಬಹುದು.” ಈ ನಿರ್ದೇಶಕರು ಇಷ್ಟೆಲ್ಲ ಸಂಶೋಧನೆ ಮಾಡಿದ್ದು ಯಾಕೆಂದರೆ, ಯಾಕೂಬ್ ಮೆಮೊನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಬೇಕು ಎಂದು ಸುಪ್ರೀಂ ಕೋರ್ಟು ತೀರ್ಪು ಕೊಟ್ಟಿದ್ದು ಇವರಿಗೆ ಹೃದಯಕ್ಕೆ ಗೀರು ಕೊರೆದಷ್ಟು ನೋವಾಗಿದೆಯಂತೆ. ಅವನನ್ನು ಗಲ್ಲಿಗೇರಿಸಬಾರದು, ಭರತಖಂಡದ ನೂರಿಪ್ಪತ್ತು ಕೋಟಿ ಜನಗಳ ಮಧ್ಯೆ ಅವನೊಬ್ಬ ನಮಗೆ ಭಾರವಾಗುತ್ತಾನೆಯೇ? ಅವನನ್ನು ನೆಮ್ಮದಿಯಿಂದ ಇರಗೊಡಬೇಕು – ಎನ್ನುವುದು ಈ ನಿರ್ದೇಶಕರು ಮತ್ತು ಅವರ ಜೊತೆಗಿರುವ ಹತ್ತಾರು ಬುದ್ಧಿಜೀವಿಗಳ ವಾದ ಮತ್ತು ಅಳಲು. ಅವರ ಮಾತನ್ನು ಮೇಲುಮೇಲಕ್ಕೇ ನೋಡಿ “ಆಹಾ ಎಷ್ಟು ಚೆಂದ ಹೇಳಿದ್ದಾರಲ್ಲವಾ? ಮಾನವೀಯತೆ ಅವರ ಪದಪದಗಳಲ್ಲೂ ಜಿನುಗುತ್ತಿದೆ. ಅಂತಃಕರಣದ ಪ್ರೀತಿ, ಆದರ ಅವರ ಹನಿಹನಿ ರಕ್ತದಲ್ಲೂ ತೊಟ್ಟಿಕ್ಕುತ್ತಿದೆ” ಎಂದು ಭಾವಪರವಶರಾಗಿ ಸೋತುಹೋಗುವವರೂ ನಮ್ಮಲ್ಲಿ ಬಹುಮಂದಿ ಇದ್ದಾರೆ. ಮಹನೀಯರ ಮಾತುಗಳನ್ನು ಸ್ವಲ್ಪ ನಿದ್ದೆಬಿಟ್ಟೆದ್ದು ವಸ್ತುನಿಷ್ಠವಾಗಿ ನೋಡೋಣ.
ಸಮಯ ’ಪ್ರಜ್ಞೆ’ ಎಲ್ಲೆ ಮೀರಿದರೆ ಸಮಾಜ ಸಿಡಿದೇಳಬೇಕಾಗುತ್ತೆ..!
– ಸಂಕೇತ್ ಹೆಗ್ಡೆ
ಮಾನವ ಸಮಾಜ ಕೆಲವು ವ್ಯಕ್ತಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ! ಯೆಸ್, ಅವರೂ ಇದೇ ಪ್ರದೇಶದಲ್ಲಿ ಹುಟ್ಟಿದವರು,ಇದೇ ಗಾಳಿ ಸೇರಿಸಿದವರು, ಇದೇ ಮಣ್ಣಿನಲ್ಲಿ ಬೆಳೆದ ಆಹಾರ ತಿಂದವರು, ನಾವು ಕುಡಿಯುವ H2Oವನ್ನೇ ಕುಡಿದವರು. ಆದರೆ ಅವರಲ್ಲೊಂದು ಅಪೂರ್ವ ‘Character’ ಮೂಡಿರುತ್ತೆ! ಕ್ಷಮಿಸಿ, ಅವರು ಬೆಳೆಸಿಕೊಂಡಿರುತ್ತಾರೆ. ಅದು ನಿಷ್ಕಳಂಕ ವ್ಯಕ್ತಿತ್ವ, ಕೈತೊಳೆದುಕೊಂಡು ಮುಟ್ಟಬೇಕು! ಅಂಥವರು ಜನರಿಗೆ ತೀರಾ ಆಪ್ಯಾಯಮಾನವಾಗಿರುತ್ತಾರೆ. ಅವರು ಜೀವನದಲ್ಲಿ ಯಾರೂ ಸಾಧಿಸದಿದ್ದದ್ದೊಂದನ್ನು ಸಾಧಿಸಿರಬಹುದು, ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರಬಹುದು, ಅಥವಾ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿರಬುಹುದು, ಕೊನೆಗೆ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿರಬಹುದು! It doesn’t matter, ಜನ ಅವರನ್ನು ಪ್ರೀತಿಸುವುದು ಖಂಡಿತ ಇವ್ಯಾವುದಕ್ಕೂ ಅಲ್ಲ! ಕೇವಲ ಅಂಥವರ ಹೃದಯ ಸಂಪನ್ನತೆಗೆ. ಕಲಾಂ ಸರ್ ಒಮ್ಮೆ ಬಾಯ್ಬಿಟ್ಟು ಹೇಳಿದ್ದರು ” I am not a handsome guy, but I can give my hand-to-some-one who needs help. Beauty is in heart, not in face” ಅಂತ. ಕಲಾಂ ದೇಶ ಬಾಂಧವರ ಕಣ್ಮಣಿಯಾಗಿದ್ದು ತಮ್ಮ ರೂಪದಿಂದಲ್ಲ, ನಡತೆಯಿಂದ. ಕಲಾಂ ತೀರಾ ಪುಟ್ಟ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದ ಎಷ್ಟು ಫೋಟೋಗಳು ಬೇಕು? ಕಂದಮ್ಮಗಳು ತಾತನನ್ನು ಹಾಗೆ ಅವರನ್ನು ಸುತ್ತುವರಿಯುತ್ತಿದ್ದವಲ್ಲ, ಅವುಗಳಿಗೆ ರಾಷ್ಟ್ರಪತಿ ಅಂದರೇನು, Rocket Engineer ಅಂದರೇನು ಅಂತ ಬಿಲ್ ಕುಲ್ ಗೊತ್ತಿರುವುದಿಲ್ಲ!
“ವಿಧ್ವಂಸಕತೆ”ಯೆಂಬುದು ಪ್ರಗತಿಪರರ ಹುಟ್ಟುಗುಣವೇ?
– ರಾಕೇಶ್ ಶೆಟ್ಟಿ
ಎಲ್ಲಾ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಪಡೆದಾಗ,ದಶಕಗಳಿಂದ ನಡೆಸಿಕೊಂಡು ಬರಲಾಗಿದ್ದ “ಮೋದಿ ವಿರೋಧಿ ಕ್ಯಾಂಪೇನ್”ನ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಬಿದ್ದಿತ್ತು.ಆದರೆ ಅತೃಪ್ತ ಆತ್ಮಗಳೇನು ಸುಮ್ಮನಿರುವ ಪೈಕಿಯೇ? ಅವುಗಳು ಶವಪೆಟ್ಟಿಗೆಯೊಳಗಿಂದಲೂ ಸದ್ದು ಮಾಡುತಿದ್ದವು.ಬಿಜೆಪಿಯ ವೋಟ್ ಶೇರ್ ಇರುವುದು ೩೧% ಮಾತ್ರ,ಇನ್ನು ೬೯% ಎಲ್ಲಿ ಅಂತ.ಪ್ರಗತಿಪರರ ಈ ಲೆಕ್ಕಾಚಾರವನ್ನು,ಕಷ್ಟಪಟ್ಟು ೩೫ ಅಂಕ ಪಡೆದು ಪಾಸ್ ಆದ ವಿದ್ಯಾರ್ಥಿಯೊಬ್ಬನ ಮುಂದೆ ನಿಂತು, “ನೋಡಪ್ಪಾ ನೀನು ತೆಗೆದಿರುವುದು ೩೫ ಮಾತ್ರ,ಇನ್ನು ೬೫ ತೆಗೆದಿಲ್ಲವಾದ್ದರಿಂದ ನೀನು ಪಾಸಾದರೂ,ಫೇಲ್ ಆದಂತೆ ಲೆಕ್ಕ” ಹೇಳಿದರೆ ಕೆನ್ನೆಯೂದುವುದು ಖಚಿತ.ಮೋದಿ ಸರ್ಕಾರದ ವಿರುದ್ಧ ಹೀಗೆ ಶುರುವಾದ ನರಳಾಟ ಮುಂದುವರೆಯುತ್ತಲೇ ಇದೆ.
Of course ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಧ್ವನಿಗಳಿಗೆ ಮನ್ನಣೇ ನೀಡಲೇಬೇಕು.ಕೇಂದ್ರ ಸರ್ಕಾರವನ್ನು ವಿರೋಧಿಸಲೇ ಬಾರದೂ ಅಂತಲೂ ಏನಿಲ್ಲ.ಟೀಕೆ-ಟಿಪ್ಪಣಿಗಳಿರಲೇಬೇಕು.ಆದರೆ ಅವು ಸಕಾರಾತ್ಮಕವಾಗಿದ್ದರೆ ಸಮಾಜದ ಆರೋಗ್ಯಕ್ಕೂ ಒಳ್ಳೆಯದು.ಆದರೆ ನಮ್ಮ ಪ್ರಗತಿಪರರು ತಮ್ಮ “ಪುರಾತನ ಪದ್ಧತಿ”ಯಾದ ನಕಾರಾತ್ಮಕ ಟೀಕಾ ಶೈಲಿಯನ್ನೇ ಮುಂದುವರೆಸಿದ್ದಾರೆ.ಪುರಾತನ ಪದ್ಧತಿ ಎನ್ನಲು ಕಾರಣವಿದೆ.
ಮದರಾಸಿನ ಭಾಷಣವೊಂದರಲ್ಲಿ ಸ್ವಾಮಿ ವಿವೇಕಾನಂದರು,ಅಂದಿನ ಕಾಲದ ಸಮಾಜ ಸುಧಾರಕರ ಕುರಿತು “ಅವರದು ಧ್ವಂಸ ಮಾರ್ಗ.ನನ್ನದು ನಿರ್ಮಾಣ ಮಾರ್ಗ“ ಎಂದಿದ್ದರು.
ಅನ್ನಭಾಗ್ಯ ಹಸಿದವರಿಗೋ,ರೈತರ ಅಧಃಪತನಕ್ಕೋ?
– ಡಾ. ಪ್ರವೀಣ ಟಿ. ಎಲ್, ಶಿವಮೊಗ್ಗ
ಅನ್ನಭಾಗ್ಯ ಯೋಜನೆಯ ಕುರಿತ ಚರ್ಚೆ ದಿನೇ ದಿನೇ ಕಾವು ಪಡೆಯುತ್ತಿರುವುದು ಸ್ಪಷ್ಟ. ಇಡೀ ಚರ್ಚೆಯಲ್ಲಿ ಅನ್ನಭಾಗ್ಯ ಯೋಜನೆಯನ್ನು ಟೀಕಿಸುವವರನ್ನು ಹಸಿದವರ ವಿರೋಧಿಗಳೆಂದೂ, ಬಿ.ಜೆ.ಪಿಯವರೆಂದೂ,ಮೇಲ್ವರ್ಗದ ಜಮೀನ್ದಾರೀ ಮನಸುಗಳೆಂದೂ, ಮಾನವೀಯತೆಯನ್ನು ಮರೆತವರೆಂದೂ ಬಿಂಬಿಸಿ, ವಿಮರ್ಶೆಗಳನ್ನು ಮೂಲೆಗುಂಪುಮಾಡಲಾಗುತ್ತಿದೆ. ಆದರೆ ಈ ಆರೋಪಗಳು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆಗೊಳಿಸಬಹುದೇ ವಿನಃ, ‘ಅನ್ನಭಾಗ್ಯ’ದ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ಹಸಿದವರಿಗೆ ‘ಅನ್ನ’ ನೀಡುವ ‘ಭಾಗ್ಯ’ ಎಂದು ಬಿಂಬಿಸುತ್ತಿರುವ ಈ ಯೋಜನೆಯು ನಿಜವಾಗಿಯೂ ಹಸಿದವರಿಗೆ, ದುರ್ಬಲರಿಗೆ ಅನ್ನನೀಡುವ ಕೆಲಸವಾಗಿದ್ದರೆ ಭಾರತದ ಯಾರೊಬ್ಬರೂ ವಿರೋಧಿಸುವ ಪ್ರಮೆಯವೇ ಎದುರಾಗುತ್ತಿರಲಿಲ್ಲ. ಏಕೆಂದರೆ, ಹಸಿದವರಿಗೆ, ದುರ್ಬಲರಿಗೆ ಭಿಕ್ಷೆನೀಡಿ ಸಾಕುವ ಸಂಪ್ರದಾಯ ತಲೆತಲಾಂತರಗಳಿಂದಲೂ ನಡೆದುಬಂದಿರುವುದು ನಮ್ಮ ಸಂಸ್ಕೃತಿಯ ವಿಶೇಷಗಳಲ್ಲೊಂದು. ಹಸಿದವರು, ದುರ್ಬಲರು ಮಾತ್ರವೇ ಈ ಯೋಜನೆಯ ಫಲಾನುಭವಿಗಳೇ? ಖಂಡಿತ ಇಲ್ಲ. ಬಿ.ಪಿ.ಎಲ್. ಕಾರ್ಡುದಾರರೆಲ್ಲರೂ ಈ ಯೋಜನೆಗೆ ಅರ್ಹರು. ಈ ಪಡಿತರ ಕಾರ್ಡು ಪಡೆಯುವುದು ‘ಆದಾಯ ಪ್ರಮಾಣ ಪತ್ರ’ ಪಡೆದಂತೆಯೇ. ಲಕ್ಷಾಂತರ ರೂಪಾಯಿ ಆದಾಯವಿದ್ದರೂ 11000/- ಅಥವಾ 15000/- ಎಂದೇ ನಮೂದಾಗುವುದು ಬಹಿರಂಗ ಸತ್ಯ. ಹೀಗಿರುವಾಗ, ನಿಜವಾದ ದುರ್ಬಲರನ್ನು, ಹಸಿದವರನ್ನು ಗುರುತಿಸದೆಯೇ ಈ ರೀತಿಯ ಬೃಹತ್ ಮೊತ್ತದ ಯೋಜನೆಗಳನ್ನು ರೂಪಿಸಿ, ಅನುಷ್ಟಾನಗೊಳಿಸುವುದು ಹಲವಾರು ದುಷ್ಪರಿಣಾಮಗಳಿಗೆ, ದುರುಪಯೋಗಕ್ಕೆ ಕಾರಣವಾಗುತ್ತದೆಯೇ ವಿನಃ ನಿಜವಾದ ಉದ್ದೇಶ ಈಡೇರಲಾರದು.
ಇದು ಬೌದ್ಧಿಕ ಕ್ಷತ್ರಿಯರ ಯುದ್ಧ
– ಚಕ್ರವರ್ತಿ ಸೂಲಿಬೆಲೆ
ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ.
ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕಾಲದೂಡುತ್ತಿರುವ ಭಾರತದ ಬುದ್ಧಿ ಜೀವಿಗಳ ಆರಾಧ್ಯವೆನಿಸಿದ್ದವರನ್ನೆಲ್ಲ ತನ್ನ ಬೌದ್ಧಿಕ ಗದಾಪ್ರಹಾರದಿಂದ ಝಾಡಿಸಿ ಕೊಡವಿ ಬಿಟ್ಟಿರುವ ಜಟ್ಟಿ ಆತ.
ಬಡವರಿರಬೇಕು, ಮಾತ್ರವಲ್ಲ, ಅವರು ಹೆಚ್ಚಬೇಕು!
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಮೊದಲು ಒಂದು ಸಂಗತಿಯನ್ನು ಸ್ಪಷ್ಟಮಾಡಿಕೊಳ್ಳಬೇಕು: ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿವೆಯೇ ವಿನಾ ಲಾಭ ಮಾಡುವುದಕ್ಕಲ್ಲ. ಆದರೆ ಸಮಾಜಕ್ಕೆ ಲಾಭವಾಗುವಂತೆ ಮಾಡುವುದು ಅವುಗಳ ಕರ್ತವ್ಯ. ಅಂಥ ಲಾಭ ದೀರ್ಘಕಾಲಿಕವಾಗುವಂತೆ ಅದು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ವರ್ಷ ಅಧಿಕಾರದಲ್ಲಿ ಇರುವ ಆಸೆಯಿಂದ ಚುನಾಯಿತ ಸರ್ಕಾರಗಳು ಜನರನ್ನು ಓಲೈಸುವ ಅಗ್ಗದ ಜನಪ್ರಿಯ ಯೋಜನೆಗಳನ್ನು ಕೈಗೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತವೆ. ಇಂಥ ಯೋಜನೆಗಳ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿರುವುದಿಲ್ಲ, ಆದರೆ ಅವುಗಳ ಜಾರಿ, ಅವು ಉಂಟುಮಾಡುವ ದೀರ್ಘಕಾಲಿಕ ಪರಿಣಾಮ ಮೊದಲಾದ ಸಂಗತಿಗಳು ಚಿಂತನಾರ್ಹ.
ಹಿಂದೆ ವಯಸ್ಕ ಶಿಕ್ಷಣ ಎಂಬ ಸಾಕ್ಷರ ಯೋಜನೆಯೊಂದಿತ್ತು. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಿದವು. ಈಗಾಗಲೇ ಮಧ್ಯವಯಸ್ಸು ದಾಟಿದ, ಆದರೆ ಸಾಕ್ಷರರಲ್ಲದ ಜನಸಂಖ್ಯೆಯನ್ನು ಗುರುತಿಸಿ, ಸರಾಸರಿ ಆಯುರ್ಮಾನವನ್ನು ಎಣಿಸಿ ಅದರಂತೆ ಯೋಜನೆ ರೂಪಿಸಲಾಯಿತು. ಹೊಸದಾಗಿ ಜನಿಸುವವರಿಗೆ ಕಡ್ಡಾಯ ಶಿಕ್ಷಣದ ಮೂಲಕ ಸಾಕ್ಷರರನ್ನಾಗಿಸುವ ಯೋಜನೆ ಇದ್ದುದರಿಂದ ಅನಕ್ಷರಸ್ಥರು ಹುಟ್ಟುವ ಸಾಧ್ಯತೆ ಇರಲಿಲ್ಲ ಹಾಗೂ ದೇಶದ ಜನರ ಸರಾಸರಿ ಆಯಸ್ಸು 56-60 ಇದ್ದುದರಿಂದ ಈ ಯೋಜನೆಗೆ ನಿಗದಿತ ಅವಧಿ ಹಾಕಿಕೊಳ್ಳಲಾಯಿತು. 10ನೇ ಯೋಜನೆ ಮುಕ್ತಾಯದ ವೇಳೆಗೆ ನಿಗದಿತ ಗುರಿ ತಲಪುವಂತೆ ಕಾಲಮಿತಿ ಹಾಕಿಕೊಂಡ ಈ ಯೋಜನೆ ಈಗ ತನ್ನ ಸ್ವರೂಪ ಬದಲಿಸಿಕೊಂಡು ಔಪಚಾರಿಕ ಶಿಕ್ಷಣ ದೊರಕದವರಿಗೆ ಕೌಶಲ್ಯ ಕಲಿಸತೊಡಗಿ, ಸಾಕ್ಷರರಿಗೆ ಸ್ವಾವಲಂಬನೆ ಮಾರ್ಗ ತೋರಿಸುತ್ತಿದೆ. ಇದು ನಿಜಕ್ಕೂ ಸ್ತುತ್ಯರ್ಹವಾದುದು. ಹೀಗೆ ಸದುದ್ದೇಶದ ಯೋಜನೆಯೊಂದು ಬೆಳವಣಿಗೆ ಕಾಣಬೇಕು; ಸಮಾಜವನ್ನು ಸ್ವಾಸ್ಥ್ಯದತ್ತ ಕೊಂಡೊಯ್ಯಬೇಕು. ಸರ್ಕಾರಗಳ ಬಹಳಷ್ಟು ಯೋಜನೆಗಳಲ್ಲಿ ಇಂಥ ಬೆಳವಣಿಗೆಯೇ ಇರುವುದಿಲ್ಲ.
ಮತ್ತಷ್ಟು ಓದು 
ಬಹುಶಃ ನನಗೇ ಈ ಶೋಷಣೆ,ಸಮಾನತೆ,ಸಹಪಂಕ್ತಿ ಇವೆಲ್ಲಾ ಅರ್ಥವಾಗೊಲ್ಲ
– ರಾಘವೇಂದ್ರ ಸುಬ್ರಹ್ಮಣ್ಯ,ಶೃಂಗೇರಿ
ಯಾಕಂದ್ರೆ ನಮ್ಮೂರಲ್ಲಿ ದೇವಸ್ಥಾನಕ್ಕೆ ಒಳಗೆ ಬಿಡೋದ್ರ ಬಗ್ಗೆ ಗಲಾಟೆಯೇ ಇಲ್ಲ. ಶೃಂಗೇರಿ ಅಂತಲ್ಲ, ಸುತ್ತ ಮುತ್ತಲಿನ ಯಾವೂರಿನಲ್ಲೂ ‘ಏಯ್ ಹೊರಗೆ ಹೋಗೋ, ದೇವಸ್ಥಾನದೊಳಗೆ ನೀನು ಬರೋ ಹಾಗಿಲ್ಲ’ ಅನ್ನಲ್ಲ. ಅಲ್ಲಿ ಜನರನ್ನ ಹೊರಗಿಡೋದು ಬಿಡಿ, ಉಲ್ಟಾ, ಕೆಲವಷ್ಟು ಕೆಲಸಗಳಿಗೆ ಕೆಲಜನರು ಬರದಿದ್ರೆ ಮುಖ್ಯ ಕೆಲಸಗಳೇ ನಡೀತಾ ಇರ್ಲಿಲ್ಲ. ಉದಾಹರಣೆಗೆ, ಭೋವಿ ಜನಾಂಗದ ಜನರು ಬಂದು ಪಲ್ಲಕ್ಕಿ ಹೊರ್ಲಿಲ್ಲ ಅಂದ್ರೆ, ಸಾರದಬಾಗಿಲಿನಿಂದ ಜನ ಬಂದು ದೀಪ, ದೀವಟಿಗೆ, ಚಾಮರ ಹಿಡೀಲಿಲ್ಲ ಅಂದ್ರೆ ನವರಾತ್ರಿಯ ಅಡ್ಡಪಲ್ಲಕ್ಕಿಯ ಉತ್ಸವವೇ ನಡಿತಾ ಇರ್ಲಿಲ್ಲ. ಅವತ್ತಿನ ಮಟ್ಟಿಗೆ ನಾನಂತೂ ಅದನ್ನ ಶೋಷಣೆ ಅಂತಾ ಅಂದ್ಕೊಳ್ಳಿಲ್ಲ. ಉಲ್ಟಾ ಅದು ನಮ್ಮ ಐಡೆಂಟಿಟಿಯಾಗಿತ್ತು. ಇವತ್ತಿನ ಹುಡುಗ್ರು ಏನಂದ್ಕೊಳ್ತಾರೋ ಗೊತ್ತಿಲ್ಲಪ್ಪ. ಶೃಂಗೇರಿಯಲ್ಲಂತೂ ಬುರ್ಖಾ ಹಾಕಿಕೊಂಡೇ ಕೆಲ ಹೆಣ್ಣುಮಕ್ಕಳು ದೇವಸ್ಥಾನದಲ್ಲಿರೋ ಮೀನುಗಳಿಗೆ ಮಂಡಕ್ಕಿ ತಿನ್ಸೋಕೆ ಬಂದಿರೋದನ್ನ ನೋಡಿದ್ದೇನೆ. ದೇವಸ್ಥಾನವೆಂದರೆ ನಾಲ್ಕು ಜನ ಸೇರೋ ಜಾಗ ಅಂದುಕೊಂಡು ಬೆಳೆದ ನನಗೆ ಶೋಷಣೆಯ ಆಂಗಲ್ಲೇ ಹೊಳೆಯಲಿಲ್ಲ. ಅದೂ ಅಲ್ದೆ ‘ತಿಂಗಳ ಆ ದಿನಗಳಲ್ಲಿ’ ದೇವಸ್ಥಾನದೊಳಗೆ ಹೋಗದ ನನ್ನ ಅತ್ತೆಯಂದಿರು, ಉತ್ಸವ ಮೂರ್ತಿ ಹೊರಗೆ ಬಂದಾಗ ಕೈಮುಗಿದು ‘ನೋಡು ನಾವು ಒಳಗೆ ಹೋಗದಿದ್ರೇನಂತೆ, ಶಾರದಮ್ಮನೇ ಹೊರಗೆ ಬಂದು ನಮಗೆ ದರ್ಶನ ಕೊಟ್ಲು’ ಅಂತಾ ಹೇಳಿದ್ದು ನನಗೆ ತಮಾಷೆ ಎನ್ನಿಸಲೇ ಇಲ್ಲ. ಅವೊಂತರಾ pradigm shift ಮಾಡುವಂತಾ ಮಾತುಗಳಾಗಿಬಿಟ್ಟವು. ಆದರೂ ಕೆಲವರು ‘ನಮ್ಮನ್ನು ದೇವಸ್ಥಾದೊಳಕ್ಕೆ ಬಿಡಲಿಲ್ಲ’ ಅಂತಾ ಹೋರಾಟ ಮಾಡುವಾಗ ನನಗೆ ಆಶ್ಚರ್ಯವಾಗುತ್ತೆ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.




