ಭಾರತದ ಆಹಾರ ಕ್ಷೇತ್ರದಲ್ಲಿ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಕೈವಾಡ
– ಮಯೂರಲಕ್ಷ್ಮಿ,ಮೈಸೂರು
ಭಾರತಕ್ಕೆ ವಿಷವುಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶಕ್ಕೆ ನೀಡುತ್ತಿರುವುದಾದರೂ ಏನನ್ನು? ಶಕ್ತಿಶಾಲಿ ರಾಷ್ಟ್ರವೆನಿಸಿ ವಿಶ್ವದ ನಾಯಕತ್ವ ಹೊಂದುವ ಸಾಮರ್ಥ್ಯವಿರುವ ಭಾರತೀಯರನ್ನು ಅತಿ ಸುಲಭವಾಗಿ ಕೇವಲ ‘ಗ್ರಾಹಕ’ರನ್ನಾಗಿಸಿ ಕೋಟಿಗಟ್ಟಲೆ ಲಾಭ ಪಡೆದು ತಮ್ಮ ದೇಶವನ್ನು ಸುಭಿಕ್ಷಗೊಳಿಸುವುದು ಮತ್ತು ಬಡರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ವ್ಯಾಪಾರ ನಡೆಸಿ ಮೋಸಗೊಳಿಸಿವುದು!
ಸ್ವತಂತ್ರ ಪೂರ್ವದ ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ, ಆದರೆ ವಿದೇಶೀ ಸಾಲವಿರಲಿಲ್ಲ, ಭಾರತದಲ್ಲಿ ಸ್ವದೇಶೀ ವಸ್ತುಗಳ ಬಳಕೆ, ಸಾವಯವ ಕೃಷಿ ಮತ್ತು ಉತ್ತಮ ಆಹಾರ ಹಾಗೂ ಮೌಲ್ಯಗಳಿಂದ ಕೂಡಿದ ಜೀವನಶೈಲಿ ನಮ್ಮದಾಗಿತ್ತು. ಆದರೆ ಕೇವಲ ವ್ಯಾಪಾರೀ ಮನೋಭಾವದಿಂದ ಕೂಡಿದ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ತನ್ನದಾಗಿಸಿಕೊಂಡ ಭಾರತಕ್ಕೆ ಲಗ್ಗೆಯಿಟ್ಟ ವಿದೇಶೀ ಕಂಪನಿಗಳು ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಮ್ಮ ಕರಾಳ ಹಸ್ತಗಳನ್ನು ಚಾಚಿದವು. ಕೊಳ್ಳುಬಾಕ ಸಂಸ್ಕೃತಿಯನ್ನು ಹೇರುತ್ತಾ ಗ್ರಾಹಕರನ್ನು ಕೇವಲ ತಮ್ಮ ವಸ್ತುಗಳನ್ನೇ ಕೊಳ್ಳುವ ಸ್ಥಿತಿಗೆ ತಲುಪಿಸಿದವು.ಭಾರತದ ಆಹಾರ ಉದ್ಯಮದಲ್ಲಿ ತನ್ನ ಅಲ್ಪ ಬಂಡವಾಳವನ್ನು ಹೂಡಿ ವಹಿವಾಟು ನಡೆಸಿ ಲಾಭ ಪಡೆದುಕೊಳ್ಳುತ್ತಿರುವ ಎಲ್ಲಾ ವಿದೇಶೀ ಕಂಪನಿಗಳಿಂದಾಗುತ್ತಿರುವ ಪರಿಣಾಮಗಳು ಊಹಿಸಲಸಾಧ್ಯ! ಇಂದು ಹಿರಿಯರೆನಿಸಿರುವ ಅಂದಿನ ಮಕ್ಕಳಾಗಿದ್ದ, ಯುವಕರಾಗಿದ್ದ ನಮ್ಮ ದೇಶದ ಸಾಮಾನ್ಯ ನಾಗರೀಕರ ಬದುಕು ಸರಳ-ಸಜ್ಜನಿಕೆಯಿಂದ ಕೂಡಿತ್ತು…ಅರಿವೇ ಗುರು ನುಡಿ ಎನ್ನುವುದ ನಂಬಿತ್ತು.. ಎಲ್ಲಕ್ಕಿಂತಾ ಹೆಚ್ಚಾಗಿ ಆಯ್ಕೆಗಳು ಅತಿ ಕಡಿಮೆಯಿದ್ದವು.ಆರೋಗ್ಯಕರ ಆಹಾರವಲ್ಲದೇ ಯಾವುದೇ ‘ಫಾಸ್ಟ್ ಫುಡ್‍ಗಳು’ ನಿತ್ಯಜೀವನದ ಭಾಗವಾಗಿರಲಿಲ್ಲಾ! ಕ್ರಮೇಣ ಎಲ್ಲವೂ ಬದಲಾಗತೊಡಗಿದವು..
ಮತ್ತಷ್ಟು ಓದು 
ನಿರ್ಮಾನುಷ ಪಟ್ಟಣದ ನೆಲದ ತು೦ಬೆಲ್ಲ ಮನುಷ್ಯನ ನೆತ್ತರೇ ಹರಡಿತ್ತು… !!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
‘ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ ತಮ್ಮ ವಾಹನಗಳನ್ನು ಸಹ ಅಲ್ಲಿಯೇ ಮರೆತು ಗುಳೆ ಎದ್ದಿದ್ದರು.ಇಡಿ ಪಟ್ಟಣದಲ್ಲೊ೦ದು ಸ್ಮಶಾನ ಮೌನ.ನಿರ್ಮಾನುಷತೆಯ ಫಲವೋ ಏನೋ ನಗರದ ವಿಲಕ್ಷಣ ಮೌನ ಅಸಹನೆ ಹುಟ್ಟಿಸುವ೦ತಿತ್ತು.ಮನುಷ್ಯರು ಬಿಡಿ,ಕೊನೆಗೊ೦ದು ಪ್ರಾಣಿಯೂ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ.ಊರಿನ ಬೀದಿಗಳಲ್ಲಿ ನಮಗೆ ಕಾಣಿಸುತಿದ್ದದ್ದು ಅದೊ೦ದೇ.ಕೆ೦ಪು ನೆತ್ತರು! ಮನುಷ್ಯನ ತಾಜಾ ರಕ್ತ..!! ಅದೊ೦ದು ಭೀಭತ್ಸಪೂರ್ಣ ಅನುಭವ.ನಮ್ಮ ಸೈನಿಕರು ನೆಲದ ಮೇಲೆಲ್ಲ ಹರಡಿ ಬಿದ್ದಿದ್ದ ಪುಟ್ಟಮಕ್ಕಳ ಬಟ್ಟೆಗಳ ಮೇಲೆ ಹೆಜ್ಜೆಯನ್ನಿಟ್ಟು ನಡೆಯುವುದು ಅನಿವಾರ್ಯವಾಗಿತ್ತು.ರಾತ್ರಿಯಿಡಿ ನಡೆದ ಭೀಕರ ಕಾಳಗದ ಪರಿಣಾಮವಾಗಿ ನಗರದ ಮನೆಗಳ ಗೋಡೆಗಳ ತು೦ಬೆಲ್ಲ ಸಿಡಿಗು೦ಡಿನಿ೦ದಾದ ಅಸ೦ಖ್ಯಾತ ತೂತುಗಳು ,ಜೇನುಹುಟ್ಟನ್ನು ನೆನಪಿಸುವ೦ತಿದ್ದವು.ಹತ್ತಾರು ಮೊಬೈಲ್ ಫೋನುಗಳು, ಚಿಕ್ಕ ಮಕ್ಕಳ ಚಪ್ಪಲಿಗಳು ವರ್ಜಿತ ಮನೆಗಳಲ್ಲಿ ಸರ್ವೇ ಸಾಮಾನ್ಯವೆ೦ಬ೦ತೆ ಕಾಣ ಸಿಗುತ್ತಿದ್ದವು.ಸುಲಭವಾಗಿ ಕೈಗೆಟುಕುತ್ತಿದ್ದ ಇ೦ಥಹ ಕೆಲವು ಅಮೂಲ್ಯ ವಸ್ತುಗಳು ನಮ್ಮ ಸೈನಿಕರಲ್ಲಿ ಯಾವ ಆಸಕ್ತಿಯನ್ನೂ ಮೂಡಿಸುತ್ತಿರಲಿಲ್ಲ.ಕನಿಷ್ಟಪಕ್ಷ ಅವುಗಳನ್ನು ನಮ್ಮ ಯೋಧರು ಮುಟ್ಟುತ್ತಲೂ ಇರಲಿಲ್ಲ.ನಮ್ಮ ಸೈನಿಕರು ಹುಡುಕುತ್ತಿದ್ದ ವಸ್ತುಗಳೇ ಬೇರೆ.ಅವರು ವಿಶೇಷವಾಗಿ ಹುಡುಕುತಿದ್ದದ್ದು ಡಿವಿಡಿಗಳಿಗಾಗಿ..!! ಅವು ಯಾವುದೋ ಸಿನಿಮಾ ಅಥವಾ ಇ೦ಪಾದ ಹಾಡುಗಳುಳ್ಳ ಸಾಮಾನ್ಯ ಡಿವಿಡಿಗಳಲ್ಲ.ತಮ್ಮ ಸಾಧನೆಗಳನ್ನು ಪ್ರದರ್ಶಿಸುವುದಕ್ಕಾಗಿ ಜಿಹಾದಿಗಳು ಸೈನಿಕರಿಗಾಗಿಯೇ ತಯಾರಿಸಿಟ್ಟ ಡಿವಿಡಿಗಳವು.
ಎಲ್ಲ ರೋಗಗಳನ್ನು ಗುಣಪಡಿಸುವ ಯೋಗಕ್ಕೆ ಧರ್ಮಾ೦ಧತೆಯ ರೋಗವನ್ನು ಗುಣಪಡಿಸುವ ಶಕ್ತಿಯಿದೆಯೇ?
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಇಸ್ಲಾ೦ ತತ್ವಗಳ ಕುರಿತಾದ ನನ್ನ ಗ್ರಹಿಕೆ ಅತ್ಯ೦ತ ನಿಖರ ಮತ್ತು ಸ್ಪಷ್ಟ.ಯೋಗವೆನ್ನುವುದು ಮುಸ್ಲಿಮರಿಗೆ ನಿಷೇಧವೆ೦ದು ಖುರಾನಿನ ಯಾವುದೇ ಅಧ್ಯಾಯದಲ್ಲಿಯೂ ಹೇಳಿಲ್ಲವೆನ್ನುವುದನ್ನು ನಾನು ವಿಶ್ವಾಸದಿ೦ದ ನುಡಿಯಬಲ್ಲೆ.ಬದಲಿಗೆ ಯೋಗದಿ೦ದ ಅಲ್ಲಾಹನನ್ನು ಇನ್ನಷ್ಟು ಭಾವುಕವಾಗಿ ಪೂಜಿಸಬಹುದು ಎನ್ನುವುದು ನನ್ನ ನ೦ಬಿಕೆ. ತನ್ನ ದೈನ೦ದಿನ ಜೀವನದಲ್ಲಿ ಯೋಗಾಭ್ಯಾಸದ ಅಳವಡಿಕೆಯಿ೦ದ ಮುಸಲ್ಮಾನನೊಬ್ಬ ಇನ್ನಷ್ಟು ದೇವರಿಗೆ ಪ್ರಿಯನಾಗಬಲ್ಲ ಎನ್ನುವುದನ್ನು ನಾನು ಅನುಮೋದಿಸುತ್ತೇನೆ.ಬಾಲ್ಯದಿ೦ದಲೂ ಯೋಗವನ್ನು ಅಭ್ಯಸಿಸುತ್ತ ಬ೦ದವನು ನಾನು.ಹಾಗಾಗಿ ಇಸ್ಲಾ೦ ಮತ್ತು ಯೋಗದ ನಡುವಣ ಪಾರಮಾರ್ಥಿಕ ಸ೦ಬ೦ಧವನ್ನು ನಾನು ಅನುಭವದಿ೦ದ ಬಲ್ಲೆ.ಅನೇಕ ಮುಸ್ಲಿ೦ ಧರ್ಮಗುರುಗಳು ಯೋಗಾಭ್ಯಾಸ ನಡೆಸುವ ಮುಸಲ್ಮಾನರ ವಿರುದ್ಧ ಫತ್ವಾಗಳನ್ನು ಹೊರಡಿಸಿದ್ದಾರೆ೦ಬುದನ್ನು ನಾನು ಕೇಳಿದ್ದೇನೆ.ಖುರಾನ್ ಶ್ಲೋಕಗಳ ಅವರ ತಪ್ಪುಗ್ರಹಿಕೆಯೆ ಇ೦ಥಹ ಪ್ರಮಾದಕ್ಕೆ ಕಾರಣ.ಸರಿಯಾಗಿ ಪರಾಮರ್ಶಿಸಿದರೆ ಯೋಗವೆನ್ನುವುದು ಇಸ್ಲಾಮಿನ ಒ೦ದು ಭಾಗವೇ ಆಗಿರುವುದು ತಿಳಿಯುತ್ತದೆ.ಯೋಗ ಮತ್ತು ಇಸ್ಲಾ೦ಗಳ ನಡುವಣ ಸ೦ಬ೦ಧವೆನ್ನುವುದು ಪರಸ್ಪರಾವಲ೦ಬಿ ಪಾರಮಾರ್ಥಿಕ ಒಡಬ೦ಡಿಕೆಯ೦ಥದ್ದು.ಯೋಗ ಮತ್ತು ಇಸ್ಲಾಮ್ ತತ್ವಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ.ದೇಹವೆನ್ನುವುದು ಮೋಕ್ಷ ಸಾಧನೆ ಮತ್ತು ಧಾರ್ಮಿಕ ಅನುಭಾವಗಳ ಗ್ರಹಿಕೆಗೆ ಬಹುಮುಖ್ಯ ಅ೦ಗವೆನ್ನುವುದನ್ನು ಯೋಗದ೦ತೆ,ಇಸ್ಲಾ೦ ಸಹ ಒಪ್ಪಿಕೊಳ್ಳುತ್ತದೆ.ಮೋಕ್ಷ ಸಾಧನೆ ಅಥವಾ ಬ್ರಹ್ಮತ್ವವೇ ಯೋಗಸಾಧನೆಯ ಮುಖ್ಯ ಉದ್ದೇಶವಾಗಿದ್ದರೆ, ಸೂಫಿ ಜೀವನಶೈಲಿಯಾಗಿರುವ ’ತಾರೀಕ್-ಎ-ನಕ್ಷಬ೦ದಿ’ಯ ಮೂಲೋದ್ದೇಶ ಅಲ್ಲಾಹನಲ್ಲಿ ಮುಸಲ್ಮಾನನ ವಿಲೀನಿಕರಣ. ಸೂಫಿ ಪ೦ಥದ ಕೆಲವು ಆಚರಣೆಗಳು ಅಕ್ಷರಶ; ಯೋಗದ ಅನುಕರಣೆಯೆನ್ನುವುದರಲ್ಲಿ ಎರಡು ಮಾತಿಲ್ಲ.ಖ್ಯಾತ ಮುಸ್ಲಿ೦ ಲೇಖಕ ಅಶ್ರಫ್ ನಿಝಾಮಿ ತಮ್ಮ ’ನಮಾಝ್’ ಎನ್ನುವ ಕೃತಿಯಲ್ಲಿ ಯೋಗವೆನ್ನುವುದು ಇಸ್ಲಾಮಿನ ಅವಿಭಾಜ್ಯ ಅ೦ಗವೆ೦ದು ಸ್ಪಷ್ಟವಾಗಿ ದಾಖಲಿಸಿದ್ದಾರೆ.ಈಜಿಪ್ಟಿನ ಅಬ್ದುಲ್ ಬಾಸಿತ್ ಯಾರಿಗೆ ತಾನೇ ಗೊತ್ತಿಲ್ಲ? ಜಗತ್ತಿನ ಶ್ರೇಷ್ಠ ಖುರಾನ್ ವಾಚಕನೆ೦ದು ಪರಿಗಣಿಸಲ್ಪಡುವ ಬಾಸಿತ್,ಹತ್ತಾರು ನಿಮಿಷಗಳ ಕಾಲ ಉಸಿರು ಬಿಗಿಹಿಡಿದು ಖುರಾನಿನ ಅಧ್ಯಾಯಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕ೦ಡು ಅನೇಕ ವಿಜ್ನಾನಿಗಳೇ ಬೆರಗಾಗುತ್ತಾರೆ.ವಿಚಿತ್ರವೆ೦ದರೆ ಉಸಿರಿನ ಮೇಲೆ ಇ೦ಥದ್ದೊ೦ದು ಪಾರಮ್ಯವನ್ನು ಸಾಧಿಸಲು ಅಬ್ದುಲ್ ಬಾಸಿತ್,ಪ್ರಾಣಾಯಾಮದ ಅಭ್ಯಾಸ ನಡೆಸುತ್ತಾರೆನ್ನುವುದು ಅನೇಕರಿಗೆ ತಿಳಿದಿಲ್ಲ.ಹಾಗಾಗಿ ಇಸ್ಲಾಮಿನಲ್ಲಿ ಯೋಗಾಭ್ಯಾಸವೆನ್ನುವುದು ಅನೈತಿಕವೆನ್ನುವುದು ಅರ್ಥಹೀನ ವಾದ.”
ಮತ್ತಷ್ಟು ಓದು 
ಯೋಗದಿನಕ್ಕಾಗಿ ಮೋದಿ ಸರಕಾರದ ವಿಶೇಷ ಶವಾಸನ
– ರೋಹಿತ್ ಚಕ್ರತೀರ್ಥ
ನಮ್ಮ ದೇಶ ಜಾತ್ಯತೀತ ದೇಶ. ಆದರೆ ಹೆಜ್ಜೆಹೆಜ್ಜೆಗೂ ನಿಮಗಿಲ್ಲಿ ನಿಮ್ಮ ಜಾತಿಯ ನೆನಪು ಅಳಿಯದಂತೆ ನೋಡಿಕೊಳ್ಳಲಾಗುತ್ತದೆ. ಶಾಲೆಗೆ ಸೇರುವ ಮೊದಲ ದಿನ ಅಡ್ಮಿಷನ್ ಮಾಡಿಕೊಳ್ಳುವ ಮುಖ್ಯೋಪಾಧ್ಯಾಯರು ಹೆಸರು, ಅಪ್ಪನ ಹೆಸರು, ಜಾತಿ ಎಂದು ಬರೆದ ಅಪ್ಲಿಕೇಶನ್ನನ್ನು ಕಣ್ಣಮುಂದೆ ಹಿಡಿಯುತ್ತಾರೆ. ಪರೀಕ್ಷೆ ಬರೆಯಲು ಅರ್ಜಿ ತುಂಬುವಾಗ ಯಾವ ಜಾತಿ ಎಂದು ಕೆದಕಿ ವಿಚಾರಿಸಿಕೊಂಡು ನೀವು ಕಟ್ಟಬೇಕಾದ ಫೀಸು ನಿರ್ಧರಿಸುತ್ತಾರೆ. ಕೆಲಸಕ್ಕೆ ಹೋಗುವಾಗ ನಿಮ್ಮ ಪದವಿ ಸರ್ಟಿಫಿಕೇಟು ಯಾರಿಗೆ ಬೇಕು ಸ್ವಾಮಿ! ನಾಯಿಯೂ ಮೂಸುವುದಿಲ್ಲ ಅದನ್ನು! ನೀವು ಯಾವ ಜಾತಿ ಹೇಳಿ, ಅದರ ಆಧಾರದ ಮೇಲೆ ನಿಮಗೆ ಕೆಲಸ ಸಿಗುತ್ತದೋ ಇಲ್ಲವೋ ಎನ್ನುವುದು ನಿರ್ಧಾರಿತವಾಗುತ್ತದೆ. ಈ ದೇಶದಲ್ಲಿ ಶಿಕ್ಷಣ, ಉದ್ಯೋಗ, ಮದುವೆ, ಮುಂಜಿ, ಸಾವು, ತಿಥಿಗಳೆಲ್ಲ ನಿರ್ಧಾರವಾಗುವುದು ನಿಮ್ಮ ಜಾತಿಯ ಮೇಲೆ. ಯಾಕೆಂದರೆ ನಾವು ಬದುಕುತ್ತಿರುವುದು ಜಾತ್ಯತೀತ ದೇಶದಲ್ಲಿ ನೋಡಿ!
ಜೂನ್ 21ರಂದು ವಿಶ್ವ ಯೋಗದಿನ ಆಚರಿಸಬೇಕು ಎಂದು ನಮ್ಮ ದೇಶದ ಪ್ರಧಾನಿ ಕರೆಕೊಟ್ಟರು. ಅವರು ಅಲ್ಲಿ ಅದನ್ನು ಹೇಳಿ ಮುಗಿಸಿದ್ದರೋ ಇಲ್ಲವೋ ಇತ್ತ ಜಾತ್ಯತೀತ ಕೋಮುಸೌಹಾರ್ದ ಬಳಗದ ಬುಜೀಗಳಿಗೆ ಕಡಿತ ಶುರುವಾಯಿತು. ಈ ಮೋದಿ ಮಹಾ ಜಾತೀವಾದಿ. ಹಿಂದೂಗಳ ಯೋಗವನ್ನು ಸನಾತನಿಗಳಂತೆಯೇ ಜಾತಿಧರ್ಮಗಳಿಗೆ ಅತೀತರಾದ ಪ್ರಗತಿಪರ ಅಲ್ಪಸಂಖ್ಯಾಕ ಪಂಗಡಗಳಿಗೂ ವಿಸ್ತರಿಸುವ ಯೋಜನೆ ಹಾಕಿದ್ದಾರೆ ಎಂದು ಅವರಿಗೆ ಗುಮಾನಿ ಬಂತು. ಅಷ್ಟಲ್ಲದೆ ಜೂನ್ ಇಪ್ಪತ್ತೊಂದು – ಮುಸ್ಲಿಮರ ಹಬ್ಬ ಬೇರೆ. ಹೋಗಿಹೋಗಿ ಆ ದಿನ ಯೋಗ ಮಾಡುವುದೇ? ಸಾಧ್ಯವೇ ಇಲ್ಲ ಎಂದು ಈ ಅಲ್ಪಸಂಖ್ಯಾತ ಮತದ ನಾಯಕ ಓವೈಸಿ ಕೂಗಿದ. ಅವನ ಹಿಂದೆ ಅವನ ಇಡೀ ಗಾಂಪರ ಗುಂಪೇ ಎದ್ದುನಿಲ್ಲುವ ಸೂಚನೆ ಸಿಕ್ಕಿತು. ಕೇಂದ್ರ ಸರಕಾರ ಈಗ ನಿಜವಾಗಿಯೂ ಇಲ್ಲದ ಇಕ್ಕಳದಲ್ಲಿ ತಲೆ ಸಿಕ್ಕಿಸಿಕೊಂಡಿದ್ದೇನೆಂದು ಸುಳ್ಳೇ ಭಾವಿಸಿ ನಡುಗಿತು. ಯೋಗದಿನ ಮಾಡೋಣ, ಆದರೆ ಸೂರ್ಯನಮಸ್ಕಾರ ಕೈಬಿಡೋಣ ಎಂದು ಠರಾವು ಮಂಡಿಸಿತು. ಮೋದಿ ಹೇಳಿಕೊಟ್ಟಂತೆ ಅವರ ಸರಕಾರದ ಎಲ್ಲ ಮಂತ್ರಿಗಳೂ “ಸೂರ್ಯನಮಸ್ಕಾರ ಕಠಿಣ ಆಸನ. ಹಾಗಾಗಿ, ಅದನ್ನು ಬಿಟ್ಟು ಮಿಕ್ಕಿದ್ದನ್ನು ಮಾಡಲು ಚಿಂತನೆ ನಡೆಸಿದ್ದೇವೆ” ಎಂದು ತಿಪ್ಪೆ ಸಾರಿಸಿದರು.
ಮತ್ತಷ್ಟು ಓದು 
ಗಾಂಧಿ ಮತ್ತು ದೇವನೂರ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ಮೊನ್ನೆ ಗಾಂಧಿ ನೆನಪಾದರು. ನೆನಪಾದರು ಎನ್ನುವುದು ಅವರು ಮರೆತುಹೋಗಿರಬಹುದು ಎಂದೂ ಧ್ವನಿಸಬಹುದು. ನೆನಪು ಮತ್ತು ಮರೆತುಹೋಗುವಿಕೆ ಈ ಎರಡೂ ಸ್ಥಿತಿಗಳಲ್ಲಿ ಗಾಂಧಿ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುವರು. ಇದು ಗಾಂಧಿಯಂಥ ಗಾಂಧಿಯಿಂದ ಮಾತ್ರ ಸಾಧ್ಯವಾಗುವಂತಹದ್ದು. ಏಕೆಂದರೆ ಗಾಂಧಿ ಸೂಟು ಬೂಟು ಧರಿಸಿ, ಪಂಚೆ ಉಟ್ಟುಕೊಂಡು ಮತ್ತು ಲಂಗೋಟಿ ಸಿಕ್ಕಿಸಿಕೊಂಡು ಭಾರತೀಯ ಜೀವನಕ್ರಮದ ಎಲ್ಲ ವರ್ಗಗಳನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡವರು. ಒಬ್ಬನೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದು ಅದು ಗಾಂಧೀಜಿಯಂಥ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವ ಬಹುದೊಡ್ಡ ಸಾಮಾಜಿಕ ಪಲ್ಲಟ.
ಇನ್ನು ಗಾಂಧಿ ಏಕೆ ನೆನಪಾದರು ಎನ್ನುವ ವಿಷಯಕ್ಕೆ ಬರುತ್ತೇನೆ. ಆವತ್ತು ದಲಿತ ಸಂಘರ್ಷ ಸಮಿತಿಯವರ ಮೆರವಣಿಗೆ ರಸ್ತೆಯ ಮೇಲೆ ನಡೆದು ಹೋಗುತ್ತಿತ್ತು. ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ಜಯಘೋಷ ಅಲ್ಲಿ ಮೊಳಗುತ್ತಿತ್ತು. ಜೊತೆಗೆ ಬುದ್ಧ-ಬಸವ-ಅಂಬೇಡ್ಕರರ ಆಳೆತ್ತರದ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಈ ಮೂವರು ಮಾಡಿದ ಪ್ರಯತ್ನ ಮತ್ತು ಹೋರಾಟ ಅದು ಚರಿತ್ರೆಯ ಪುಟಗಳಲ್ಲಿ ಸದಾಕಾಲ ಅಳಿಸಲಾಗದ ಐತಿಹಾಸಿಕ ಪ್ರಯತ್ನವಾಗಿ ದಾಖಲಾಗಿ ಉಳಿದಿದೆ. ಆದರೆ ಆ ಸಂದರ್ಭ ಅಲ್ಲಿನ ಭಾವಚಿತ್ರಗಳಲ್ಲಿ ಮತ್ತು ಅವರು ಮೊಳಗಿಸುತ್ತಿದ್ದ ಜಯಘೋಷಗಳಲ್ಲಿ ಗಾಂಧಿ ಅನುಪಸ್ಥಿತಿ ನನಗೆ ಬಹುಮುಖ್ಯ ಕೊರತೆಯಾಗಿ ಕಾಣಿಸಿತು.
ಮಾನ ಕಳೆದುಕೊಂಡ ಸನ್ಮಾನಗಳು
– ರೋಹಿತ್ ಚಕ್ರತೀರ್ಥ
ನಾನು ಮಾಡಿದ ಕೆಲಸ ಸರಿಯಿದೆ ಎಂದು ಒಪ್ಪಿದರೆ ಸಾಕು. ಅದೇ ನನಗೆ ಬಹುದೊಡ್ಡ ಪ್ರಶಸ್ತಿ. ಬೇರೆ ಬಹುಮಾನ ಏಕೆ? – ಎಂದ ಗ್ರೆಗೊರಿ ಪೆರೆಲ್ಮನ್. ಅವನ ಕೆಲಸದ ಔನ್ನತ್ಯವನ್ನು ಮೆಚ್ಚಿ ಒಂದು ಮಿಲಿಯ ಡಾಲರ್‍ಗಳನ್ನು (ಅಂದರೆ, ಆರು ಕೋಟಿ ರುಪಾಯಿ!) ಹಿಡಿದು ನಿಂತಿದ್ದವರಿಗೆ ಬಾಗಿಲು ಕೂಡ ತೆರೆಯಲಿಲ್ಲ ಆ ಮಹರಾಯ! ನಿಮ್ಮನ್ನು ಒಳಬಿಟ್ಟೆನೆಂದರೆ, ಹಿಂದೆಯೇ ಪತ್ರಕರ್ತರು ತೂರಿಕೊಂಡು ಒಳಸೇರುತ್ತಾರೆ. ನೂರೆಂಟು ಪ್ರಶ್ನೆ ಕೇಳಿ ತಲೆ ತಿನ್ನುತ್ತಾರೆ. ಇನ್ನು ಪತ್ರಿಕೆಗಳಲ್ಲಿ, ಟಿವಿಯಲ್ಲಿ ನನ್ನ ಮುಖ ಕಂಡರೆ ಸಾಕು, ಬೀದಿಯಲ್ಲಿ ಆರಾಮಾಗಿ ನಡೆದುಹೋಗಲಿಕ್ಕೂ ತೊಂದರೆ. ಪ್ರಶಸ್ತಿ ಬಂತು ಅಂತ ಕೈಗೊಂದು-ಕಾಲಿಗೊಂದು ಗೆಳೆಯರು, ನೆಂಟರು ಹುಟ್ಟಿಕೊಳ್ಳುತ್ತಾರೆ. ಇದೆಲ್ಲ ಬೇಕಾ? ಪ್ರಶಸ್ತಿಯೂ ಬೇಡ, ಅದು ತರುವ ನೂರೆಂಟು ತಾಪತ್ರಯಗಳೂ ಬೇಡ ಎಂದು ಎಲ್ಲರನ್ನೂ ಗೇಟ್‍ಪಾಸ್ ಮಾಡಿದ್ದ ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬನಾದ ಪೆರೆಲ್ಮನ್.
“ದುಡ್ಡೇ ಎಲ್ಲ ತೊಂದರೆಗಳಿಗೆ ಬೇರು” ಎಂದು ಸ್ವಾಮೀಜಿಗಳು ಹೇಳಿದಾಗ ಭಕ್ತರೆಲ್ಲ ಒಂದೇ ಧ್ವನಿಯಲ್ಲಿ “ನಮಗೆ ಆ ಬೇರು ಬೇಕು!” ಎಂದು ಕೂಗಿದ್ದರಂತೆ. ಬಹುಶಃ ಈಗ, “ಪ್ರಶಸ್ತಿಯೇ ಎಲ್ಲ ತಾಪತ್ರಯಗಳಿಗೂ ಮೂಲ” ಎಂದು ಹೇಳಿದರೆ, ಸರಕಾರ ಕೊಟ್ಟ ಗೆಡ್ಡೆಗೆಣಸುಗಳಲ್ಲೇ ಉಸಿರು ಹಿಡಿದುಕೊಂಡಿರುವ ಬುದ್ಧಿಜೀವಿಗಳು ನಮಗೂ ಆ ಕಂದಮೂಲ ಬೇಕು ಎಂದು ಪಟ್ಟುಹಿಡಿದಾರು. ಅರ್ಹರನ್ನು ಅನ್ಯರು ಗುರುತಿಸಿ ಪ್ರಶಸ್ತಿಯ ಕಿರೀಟ ತೊಡಿಸಿ ಶಾಲುಹೊದಿಸಿ ಒಂದಷ್ಟು ದುಡ್ಡೋ ಸ್ಮರಣಿಕೆಯೋ ಕೈಯಲ್ಲಿಟ್ಟು ಕೃತಾರ್ಥರಾಗುವ ಕಾಲ ಒಂದಿತ್ತು. ಆದರೆ, ಈಗ ಪ್ರಶಸ್ತಿಗಳನ್ನು ಕೂಡ ಬಿಕರಿಗಿಡಲಾಗಿದೆ. ರಾಜ್ಯ ಅಥವಾ ಕೇಂದ್ರದಲ್ಲಿ ಸರಕಾರ ಬದಲಾದ ಕೂಡಲೇ, ಆಯಾಯಾ ಪಕ್ಷಗಳನ್ನು ಬೆಂಬಲಿಸುವ ಪ್ರತಿಭಾವಂತರು ಚುರುಕಾಗುತ್ತಾರೆ. ಇಷ್ಟು ವರ್ಷ ಆಗದೇ ನೆನೆಗುದಿಗೆ ಬಿದ್ದ ಕೆಲಸವನ್ನು ಈಗ ಹೇಗಾದರೂ ಮಾಡಿಸಿಕೊಳ್ಳಬೇಕು ಎಂದು ಸರಕಾರವೆಂಬ ವೃಂದಾವನಕ್ಕೆ ಸುತ್ತುಬರುತ್ತಾರೆ. ಕಾಯಿ ಒಡೆಯುತ್ತಾರೆ. ಹಣ್ಣು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ಅಷ್ಟಶತೋತ್ತರ ನಾಮಾವಳಿಯೂ ನಡೆಯುತ್ತದೆ. ಇಷ್ಟೆಲ್ಲ ಪಾಡುಪಟ್ಟ ಭಕ್ತನನ್ನು ಸಂಪ್ರೀತಗೊಳಿಸಲು ಸರಕಾರ ಅವನಲ್ಲಿ ಯಾವ ಪ್ರಶಸ್ತಿ ಬೇಕು ವತ್ಸಾ ಎಂದು ಕೇಳಲೇಬೇಕಾದ ಪರಿಸ್ಥಿತಿ ಬರುತ್ತದೆ. ಪೂಸಿ ಹೊಡೆದು ಗಾಳಿ ಖಾಲಿಯಾದವರು ಯಾವುದಾದರೂ ನಡೆದೀತು ಎಂಬ ಹಂತಕ್ಕೆ ಬಂದಿರುತ್ತಾರೆ. ಆದರೆ, ಕೆಲವು ಜಗಜಟ್ಟಿಗಳು ಇಂಥದ್ದೇ ಬೇಕು, ಅದು ಕೊಡೋದಿಲ್ಲವಾದರೆ ಯಾವುದೂ ಬೇಡ ಎಂದು ರಚ್ಚೆ ಹಿಡಿಯುತ್ತಾರೆ. ಇಂತಹ ಕಂದಮ್ಮಗಳನ್ನು ರಮಿಸಿ ಮುದ್ದಿಸಿ ಹಾಲುಕೊಟ್ಟು ತಣ್ಣಗಾಗಿಸುವ ಹೊತ್ತಿಗೆ ಕೆಲವು ಸಲ ಸರಕಾರಕ್ಕೆ ಹೆಣ ಬಿತ್ತೆನ್ನಿಸುವಷ್ಟು ಸುಸ್ತು ಹೊಡೆಯುವುದೂ ಉಂಟು. ಆದರೇನು ಮಾಡೋಣ? ಸರಕಾರಕ್ಕೆ ತನ್ನ ಪರಾಕುಪಂಪು ಒತ್ತಿಸಿಕೊಳ್ಳಲು ಈ ವಂಧಿಮಾಗಧರ ಗಡಣ ಬೇಕು. ಮತ್ತು ಈ ಗಡಣಕ್ಕೆ ತನ್ನಗಂಟಲನ್ನು ಸದಾ ತೇವವಾಗಿಟ್ಟುಕೊಳ್ಳಲು ನೆರವು ನೀಡುವ ರಾಜಾಶ್ರಯ ಬೇಕು. ಇದು ಸಾರ್ವಜನಿಕ ತೆರಿಗೆ ದುಡ್ಡಿನ ಕೃಪಾಪೋಷಿತ ಪರಸ್ಪರ ಸಹಕಾರ ಸಂಘ.
ರೈತರ ಆತ್ಮಹತ್ಯೆ, ಹೀಗೊಂದು ಚಿಂತನೆ
– ಭರತ್ ಎನ್ ಶಾಸ್ತ್ರಿ
ಆತ್ಮಹತ್ಯೆಗಳು ಘೋರನಿರ್ಧಾರಗಳು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಸಾವು ತರುವ ಶೂನ್ಯತೆ, ಮತ್ತು ಬಂಧುಮಿತ್ರರಿಗೆ ಅಥವಾ ಪ್ರೀತಿಪಾತ್ರರಿಗೆ ತರುವ ಯಾತನೆ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಆತ್ಮಹತ್ಯೆ ತರುವ ಸಂಕಟ ಮಾತ್ರ ಹಲವು ಆಯಾಮಗಳದ್ದು.
ಆದರೆ, ಭಾರತದಲ್ಲಿ ರೈತರ ಆತ್ಮಹತ್ಯೆಗಳು ವಿಚಿತ್ರಕಾರಣಗಳಿಂದ ಮಾಧ್ಯಮಗಳ ದೊಡ್ಡಗಂಟಲಿನಿಂದ ಜನರ ಗಮನ ಸೆಳೆಯುತ್ತವೆ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕಲು ನಡೆಸಿದ ವೈಜ್ಞಾನಿಕ ಮತ್ತು ಭಾವೋದ್ವೇಗರಹಿತ ಅಧ್ಯಯನಗಳು ಒಂದೋ ಅವಗಣಿಸಲ್ಪಟ್ಟಿವೆ, ಅಥವಾ ರಾಜಕೀಯ ಕಾರಣಗಳಿಂದ ಆಳುವವರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿವೆ.
ಹೆಚ್ಚುತ್ತಿರುವ ಜನಸಂಖ್ಯೆ, ದುಡಿಯುವ ಯುವಜನತೆಯ ಕೈಗೆ ಉದ್ಯೋಗಗಳ ಅಭಾವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಸಿಯುತ್ತಿರುವ ಮಹಾನಗರ/ ನಗರಗಳು ಇವೆಲ್ಲ ಸಮಸ್ಯೆಯ ಜತೆ ಸಕ್ಷಮವಲ್ಲದ ಕೃಷಿಕ್ಷೇತ್ರ ಕೂಡ ಭಾರತದ ಹಿಂದುಳಿಕೆಯ ಕಾರಣವಾಗಿದೆ.
ಆತ್ಮಹತ್ಯೆಗಳ ಬಗ್ಗೆ ಭಾರತದ ಒಟ್ಟೂ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಮೂರುದಶಕಗಳ ಹಿಂದೆ ಸುಮಾರು ೪೦,೦೦೦(ಒಂದು ವರ್ಷಕ್ಕೆ) ದಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆ ೨೦೦೯ ಕ್ಕೆ ೧೨೭,೧೫೧ ಕ್ಕೆ ಏರಿತು. ಅದೇ ೨೦೧೩ ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ೧,೩೪,೭೯೯! ಈ ಐದು ವರ್ಷಗಳಲ್ಲಿ ಕರ್ನಾಟಕದ ಕೊಡುಗೆ ಹತ್ತಿರ ಹತ್ತಿರ ೮.೪%. ಕರ್ನಾಟಕದಲ್ಲಿ ೨೦೦೯ ರ ವರ್ಷದಲ್ಲಿ ಸಂಭವಿಸಿದ ಆತ್ಮಹತ್ಯೆಗಳು ಸುಮಾರು ೧೦,೬೮೦. ಇದರಲ್ಲಿ ರೈತರ ಸಂಖ್ಯೆ ೩೩೭, ಎಂದರೆ ೩.೧೫%. ಇದರ ಅರ್ಥ ಪ್ರತಿ ೩೦ ಆತ್ಮಹತ್ಯೆಗಳಲ್ಲಿ ಒಬ್ಬ ರೈತನ ಜೀವನಷ್ಟವಾಗಿದೆ. ಇನ್ನುಳಿದವರ ವೃತ್ತಿ ಏನಿತ್ತು? ಸೋಜಿಗವೆಂದರೆ ರೈತರ ಆತ್ಮಹತ್ಯೆಯ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿ ಮಿಕ್ಕ ವೃತ್ತಿಯಲ್ಲಿರುವವರ ಬಗ್ಗೆ ಸಿಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಾಫ್ಟ್ ವೇರ್ ಉದ್ಯಮದಲ್ಲಿ ಮಿತಿಮೀರಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು ಎಂದು ನೀವು ಹುಡುಕಾಡಿದರೆ ಅಂಕಿ-ಅಂಶಗಳನ್ನು ಪಡೆಯಲು ಕಷ್ಟ ಪಡಬೇಕಾಗುತ್ತದೆ!
ಐಡಿಯಾಲಜಿ,ಚಿಂತನೆ ಮತ್ತು ಜೀವನದ ವಾಸ್ತವಗಳು
– ಮು.ಅ ಶ್ರೀರಂಗ,ಬೆಂಗಳೂರು
ಡಾ. ಕಿರಣ್ ಎಂ ಗಾಜನೂರು ಅವರು ೧೩-೪-೧೫ರ ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಕಾಲಂನಲ್ಲಿ ‘ಮೋಡಿ’ಯಿಂದ ಬಿಡಿಸಿಕೊಳ್ಳಿ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನಕ್ಕೆ ಇದೊಂದು ಪ್ರತಿಕ್ರಿಯಾತ್ಮಕ ಸಹಸ್ಪಂದನ.
‘ಶ್ರಮಸಹಿತ ಸರಳ ಬದುಕು, ಸುಂದರ ಬದುಕು’ ಎಂಬ ತತ್ವವನ್ನು ಸಾರುವ ಸಲುವಾಗಿ ರಂಗಕರ್ಮಿ ಪ್ರಸನ್ನ ಅವರು ಬದನವಾಳುವಿನಲ್ಲಿ ‘ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ’ ಆಯೋಜಿಸಿರುವ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು,ಲೇಖನಗಳು ಬಂದಿವೆ. ‘ಶ್ರಮಸಹಿತ ಸರಳ ಬದುಕು’ ಎಂಬ ಮೂರ್ನಾಲಕ್ಕು ಪದಗಳನ್ನು ವಿಶ್ಲೇಷಿಸಿದರೆ ನಮಗೆ ಸಿಗಬಹುದಾದ ಸಂಭಾವ್ಯ ಉತ್ತರಗಳು –
(೧) ಈಗ ಒಂದಿಲ್ಲೊಂದು ಕೆಲಸದ ಮೂಲಕ ತಮ್ಮ ಅನ್ನ ಸಂಪಾದಿಸಿಕೊಳ್ಳುತ್ತಿರುವ ಜನಗಳು ಶ್ರಮಪಡದೆ ಅದನ್ನು ಪಡೆಯುತ್ತಿದ್ದಾರೆ ಅಥವಾ
(೨) ಜನಗಳ ಕೈಯಲ್ಲಿ ಹೆಚ್ಚು ದೈಹಿಕ ಶ್ರಮದ ಅವಶ್ಯಕತೆ ಇಲ್ಲದ ಸಣ್ಣಪುಟ್ಟ ಕೆಲಸಮಾಡಿಸಿಕೊಂಡು ಅವರ ಸರಳ ಬದುಕಿಗೆ ಎಷ್ಟು ಬೇಕೋ ಅಷ್ಟು ಅನ್ನ ಕೊಟ್ಟು ಸಾಕುತ್ತಿರುವ ಧರ್ಮಾರ್ತರು ನಮ್ಮ ನಡುವೆ ಇದ್ದಾರೆ.
ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಮೇಲಿನ ಎರಡು ಉತ್ತರಗಳಲ್ಲಿರುವ ಹುಳುಕುಗಳು,ತಪ್ಪುಗಳು ಕಾಣುತ್ತವೆ.ಇಂದು ಒಬ್ಬ ಶ್ರೀಸಾಮಾನ್ಯ ಒಂದು ಹೊತ್ತಿಗೆ ಊಟ ಸಂಪಾದಿಸಿಕೊಳ್ಳಬೇಕಾದರೂ ಶ್ರಮ ಪಟ್ಟು ಕೆಲಸ ಮಾಡಲೇಬೇಕು. ಅದು ಅವರವರ ವಿದ್ಯೆ,ಕುಶಲತೆ,ಕೆಲಸದ ರೀತಿಗೆ ಸಂಬಂಧಪಟ್ಟಿರುತ್ತದೆ…ಕೆಲಸಮಾಡದೆ ಸಿಕ್ಕಷ್ಟು ತಿಂದು ತನ್ನ ಹೊಟ್ಟೆಹೊರೆದುಕೊಳ್ಳಬೇಕಾದರೆ ಎಲ್ಲರಂತೆ ಕೆಲಸ ಮಾಡೋಕ್ಕೆ ನಿನಗೇನು ಧಾಡಿಯೆಂದು ಬೈಸಿಕೊಂಡು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಬೇಕು.
‘ಸುಂದರ ಬದುಕು’ ಸಾಧ್ಯವಾಗುವುದು ಯಾವಾಗ? ನಮ್ಮ ಜೀವನ ನಿನ್ನೆಗಿಂತ ಇಂದು,ಇಂದಿಗಿಂತ ನಾಳೆ ಉತ್ತಮವಾಗಿದ್ದರೆ ಅದನ್ನು ಸುಂದರ ಅನ್ನಬಹುದು.ನಮ್ಮ ತಾತ ಎಲ್ಲಾ ಕಡೆಗೂ ನಡೆದುಕೊಂಡೇ ಹೋಗುತ್ತಿದ್ದ; ನಾನೂ ನಡೆದುಕೊಂಡೇ ಓಡಾಡುವ ಸ್ಥಿತಿಯಲ್ಲಿ ಜೀವನ ನಡೆಸುತ್ತೇನೆ ಎನ್ನುವುದು ಬದುಕು ಸುಂದರವಾಗುವ ಲಕ್ಷಣವೆ? ಕೆಲವೊಂದು ವಿಚಾರಗಳನ್ನು ನಾವು ನಮ್ಮ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸಾಧ್ಯತೆ-ಅಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗುತ್ತದೆ.ಇಲ್ಲವಾದರೆ ನಮ್ಮನ್ನು ನಾವೇ ಮಾನಸಿಕವಾಗಿ ವಂಚಿಸಿಕೊಳ್ಳುತ್ತಾ ಹೋಗುತ್ತೇವೆ. ಇದೇನು ದೊಡ್ಡ ತತ್ವಶಾಸ್ತ್ರೀಯ ಸಮಸ್ಯೆ ಅಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನೇ ನೋಡೋಣ ಸಾಕು.
ಮತ್ತಷ್ಟು ಓದು 
ಭಾರತದ ಭವಿಷ್ಯ ಮತ್ತು ನಮ್ಮ ಪಾತ್ರ
– ಡಾ. ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ.ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಆಯೋಜಿಸಲಾಗಿತ್ತು. ಇದು ಅವರ ಭಾಷಣವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾತ್ರ. ಒಂದು ಚಿಕ್ಕ ಗುಂಪಿಗೆ ಅವರು ನೀಡಿದ ಸ್ಪೂರ್ತಿದಾಯಕ ಮಾತುಗಳು ಉಳಿದವರಿಗೂ ದೊರಕಲಿ ಎಂಬುದು ಈ ಬರಹದ ಆಶಯವಾಗಿದೆ. ಭಾರತದ ಭವಿಷ್ಯದ ಸ್ವರೂಪವೇನು? ಹಾಗೂ ಅದರಲ್ಲಿ ಯುವಕರ ಪಾತ್ರವೇನು ಎಂಬ ಪ್ರಶ್ನೆಗಳು ಇಂದು ನಮ್ಮನ್ನು ಕಾಡಲು ಪ್ರಾರಂಭಿಸಿವೆ. ಇದಕ್ಕೆ ಉತ್ತರ ಹುಡುಕುವ ಮುನ್ನ ಭಾರತದ ಭೂತ ಮತ್ತು ವರ್ತಮಾನವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಇಂದು ಭಾರತವನ್ನು ನೋಡುವ ಸಾಮಾನ್ಯವಾದ ಒಂದು ಕ್ರಮವಿದೆ, ಅದೆಂದರೆ ಭಾರತ ಎಂಬುದು ಕೊಳಕಾದ ದೇಶ, ಹಿಂದುಳಿದ ಮತ್ತು ಮುಂದುವರೆಯುತ್ತಿರುವ ದೇಶ, ಆಧುನೀಕತೆಯ ಬೆನ್ನುಹತ್ತಿ ಇತ್ತೀಚೆಗಷ್ಟೆ ಕಣ್ಣು ಬಿಡುತ್ತಿರುವ ನಾಡು, ಭ್ರಷ್ಟಾಚಾರ, ದೌರ್ಜನ್ಯ ಇನ್ನೂ ಮುಂತಾದ ನಕಾರಾತ್ಮಕ ಅಂಶಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ಸದಾ ಭಾರತವನ್ನು ತೆಗಳುವ ವಿಧಾನವನ್ನು ರೂಢಿಸಿಕೊಂಡಿದ್ದೇವೆ. ಹೀಗೆ ತೆಗಳುವುದಕ್ಕೆ ಶತಮಾನಗಳಷ್ಟು ಹಳೆಯದಾದ ಇತಿಹಾಸವೂ ಇದೆ. ಭಾರತದ ಮೇಲೆ ಎರಡು ರೀತಿಯ ದಾಳಿಗಳು ವಿದೇಶಿಗರಿಂದ ನಡೆದಿವೆ. ಬ್ರಿಟೀಷರ ಆಕ್ರಮಣ ಪ್ರಾರಂಭವಾಗುವ ತನಕ ನಡೆದಿದ್ದೆಲ್ಲವೂ ದೈಹಿಕ ಆಕ್ರಮಣಗಳು, ಅಂದರೆ ಪ್ರದೇಶಗಳನ್ನು, ರಾಜರನ್ನು ಗೆಲ್ಲುವಂತಹ, ಸಂಪತ್ತನ್ನು ಲೂಟಿ ಮಾಡುವ ಚಟುವಟಿಕೆಗಳಲ್ಲಿ ಕೊನೆಯಾಗುತ್ತಿದ್ದವು. ಆದರೆ ಬ್ರಿಟೀಷರಿಂದ ಪ್ರಾರಂಭವಾದ ಭಾರತದ ಮೇಲಿನ ಆಕ್ರಮಣ ಅತ್ಯಂತ ದುರಂತಮಯವಾದುದ್ದಾಗಿದೆ.
ದಹಿಸಬೇಕಾಗಿರುವುದು ಧರ್ಮಗ್ರಂಥವನ್ನಲ್ಲ ಸಂಕುಚಿತ ಮನಸ್ಸಿನ ತ್ಯಾಜ್ಯವನ್ನು!
– ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ,ಕುಂದಾಪುರ
ಯಾವ ದೇಶ ತನ್ನ ಸಂಸ್ಕೃತಿ,ಸಂಸ್ಕಾರ, ಆಚಾರ, ವಿಚಾರಗಳಂತಹ ಮೇರು ಮೌಲ್ಯಗಳ ಮೂಲಕ ಜಗತ್ತಿನ ಜನಮಾನಸದಲ್ಲಿ ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಗೆ ಭಾಜನವಾಗಿದೆಯೋ ಅದೇ ದೇಶದಲ್ಲಿನ ಬಹುಪಾಲು ನಾಗರೀಕರ ಮನಸ್ಸಿನಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಹಾಗೂ ಆಹ್ಲಾದತೆಗಳನ್ನು ಪಸರಿಸುವ ಧರ್ಮ, ಧಾರ್ಮಿಕತೆಯ ಅಂಶಗಳೆಂದರೆ ಕೆಲವು ವಿಚಾರವಾಧಿಗಳು ಹಾಗೂ ಪ್ರಗತಿಪರರಿಗೆ ಅದೇಕೋ ಕಡು ದ್ವೇಷ. ದೇವರು, ಆರಾಧನೆ, ಪೂಜೆ, ಪುನಸ್ಕಾರ, ಧರ್ಮಗ್ರಂಥಗಳೆಂಬ ಶಬ್ಧಗಳು ಅಂತಹವರ ಕಿವಿಗೆ ಬೀಳುತ್ತಲೇ ಕಾದ ಕಬ್ಬಿಣವನ್ನು ಕಿವಿಗೆ ಸುರಿದಂತೆ ವರ್ತಿಸಲಾರಂಭಿಸುತ್ತಾರೆ. ತಮ್ಮ ವೈಚಾರಿಕ ಹೊಳಹುಗಳಷ್ಟೇ ಸಾರ್ವಕಾಲಿಕವೆಂಬ ತಪ್ಪುಗ್ರಹಿಕೆಯನ್ನೇ ಸದಾ ಸಮಾಜದ ಮೇಲೆ ಹೇರುವ ಹಾಗೂ ಇನ್ನುಳಿದವೆಲ್ಲವೂ ದೋಷಪೂರಿತ, ಅಪಾಯಕಾರಿಯೆಂಬಂತೆ ಬಿಂಬಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿರುವವರು ಕಟ್ಟುವುದಕ್ಕಿಂತಲೂ ಕೆಡವುದು, ಒಡೆಯುವುದು ಹಾಗೂ ಬೀದಿಗೆ ಬೀಳಿಸಿ ವಿಕೃತ ಖುಷಿ ಪಡುವುದರಲ್ಲೇ ತಮ್ಮ ಉದ್ಧೇಶ ಈಡೇರಿಸಿಕೊಳ್ಳಬಲ್ಲೆವೆಂಬ ಅನಾರೋಗ್ಯಕರ ಮನಸ್ಥಿತಿಯೊಂದನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅದನ್ನು ಒತ್ತಾಯಪೂರ್ವಕವಾಗಿ ಸಮಾಜದ ಮೇಲೆ ಹೇರುವ ವಿಫಲ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಒಂದು ಭಾಗವೇ ‘ಭಗವದ್ಗೀತೆ’ಗೆ ಬೆಂಕಿ ಇಡಲು ಮುಂದಾಗಿರುವ ಆಕ್ರಮಣಕಾರಿ ಮನೋಪ್ರವೃತ್ತಿಯ ದುರಹಂಕಾರಿ ವರ್ತನೆ.
ಸಿಕ್ಕ ವೇದಿಕೆಯ ಘನತೆ ಗಾಂಭೀರ್ಯತೆಗೆ ನ್ಯಾಯ ಒದಗಿಸದೆ ತಮ್ಮ ವೈಯಕ್ತಿಕ ಅಸ್ತಿತ್ವ ಹಾಗೂ ವೈಚಾರಿಕ ಧೋರಣೆಯ ಚಲಾವಣೆಯನ್ನು ಕಾಯ್ದುಕೊಳ್ಳಲೋಸುಗ ಸಮಾಜೋದ್ಧಾರದ ಸೋಗು ತೊಟ್ಟು ಸದಾ ಅನ್ಯರ ಭಾವನೆಗಳನ್ನು ಅಪಮಾನಿಸುತ್ತಾ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವವರ ವರ್ತನೆಯಲ್ಲಿ ಢಾಳಾಗಿ ಗೋಚರಿಸುವುದು ವಿವೇಕ ಹಾಗೂ ವಿವೇಚನೆಗಳ ಕೊರತೆ. ಈ ಅಪಭ್ರಂಶ ವರ್ತನೆಯನ್ನು ಅನುಮೋದಿಸುವ, ಬೆಂಬಲಿಸುವ ಸಣ್ಣ ಹಿಂಬಾಲಕರ ಗುಂಪು ವೇದಿಕೆ ಮುಂದಿದ್ದರಂತೂ ಮುಗಿದೇ ಹೋಯಿತು. ಅವರ ಮಾತು, ಕೃತಿಗಳ ಮೇಲಿನ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಡಗಿರುವ ಅಸಹಿಷ್ಣುತೆ, ಸಂಕುಚಿತತೆಗಳನ್ನು ಮತ್ತೆ ಮತ್ತೆ ಜಾಹೀರುಗೊಳಿಸುತ್ತಾರೆ.
ಮತ್ತಷ್ಟು ಓದು 




