ಜನಮಾನಸದ “ಚಾಚಾ ಚೌಧರಿ” – ಪ್ರಾಣ್ ಕುಮಾರ್ ಶರ್ಮಾ
–ರಾಘವೇಂದ್ರ ಅಡಿಗ ಎಚ್ಚೆನ್.
(ಖ್ಯಾತ ವ್ಯಂಗ್ಯಚಿತ್ರಕಾರ, ‘ಚಾಚಾ ಚೌಧರಿ’, ‘ರಾಮನ್’, ‘ಶ್ರೀಮತಿ’, ‘ಪಿಂಕಿ’ ಇವೇ ಮೊದಲಾದ ಸದಾ ಕಾಲ ನೆನಪಿನಲ್ಲಿ ಉಳಿಯುವಂತಹಾ ಪಾತ್ರಗಳ ಸೃಷ್ಟಿಕರ್ತರಾಗಿದ್ದ ಪ್ರಾಣ್ ಕುಮಾರ್ ಶರ್ಮ ಇದೇ ಆಗಸ್ಟ್ ೦6 ರಂದು ದೆಹಲಿಯ ಗುರ್ಗಾಂವ್ ನಲ್ಲಿ ನಿಧನರಾಗಿದ್ದಾರೆ. ಈ ಸಮಯದಲ್ಲಿ ಪ್ರಾಣ್ ಎಂಬ ವ್ಯಂಗ್ಯಚಿತ್ರಕಾರನ ಬದುಕಿನ ಚಿತ್ರಣವನ್ನೊಮ್ಮೆ ಅವಲೋಕಿಸೋಣ……)
ಬಾಲ್ಯ – ವೃತ್ತಿ ಬದುಕು
ಇಂದಿನ ಪಾಕಿಸ್ತಾನದಲ್ಲಿನ ಲಾಹೋರ್ ಬಳಿಯ ಕಸೂರ್ ಎಂಬ ಚಿಕ್ಕ ಗ್ರಾಮದಲ್ಲಿ 1938, ಆಗಸ್ಟ್ 15 ರಂದು ಪ್ರಾಣ್ ಕುಮಾರ್ ಶರ್ಮಾರವರ ಜನನವಾಯಿತು. 1947 ರ ಬಳಿಕ ಪ್ರಾಣ್ ರವರ ಕುಟುಂಬ ಗ್ವಾಲಿಯರ್ ನಗರಕ್ಕೆ ತನ್ನ ವಾಸವನ್ನು ಬದಲಾಯಿಸಿತು.ಪ್ರಾಣ್ ರವರು ಗ್ವಾಲಿಯರ್ ನ ಇವ್ನಿಂಗ್ ಕ್ಯಾಂಪ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಬಳಿಕ ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಾಲ್ಕು ವರ್ಷಗಳ ಫೈನ್ ಆರ್ಟ್ಸ್(ಚಿತ್ರಕಲಾ ತರಬೇತಿ) ಪದವಿ ಶಿಕ್ಷಣವನ್ನುಪಡೆದುಕೊಂಡರು.
ತಮ್ಮ ವೃತ್ತಿ ಬದುಕಿನ ಪ್ರಾರಂಭದಲ್ಲಿ ಕೆಲಕಾಲ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದ ಪ್ರಾಣ್ 1960 ರಲ್ಲಿ ದೆಹಲಿ ಮೂಲದ ‘ಮಿಲಾಪ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅಲ್ಲಿ ವರು ‘ಬಾಬು’ ಎನ್ನುವ ಪಾತ್ರವನ್ನು ಸೃಷ್ಟಿಸಿವ್ಯಂಗ್ಯಚಿತ್ರಗಳನ್ನು ರಚಿಸಿದ್ದರು. 1969 ರಲ್ಲಿ ಹಿಂದಿ ನಿಯತಕಾಲಿಕೆ ‘ಲಾಟ್ ಪಾಟ್’ ಗಾಗಿ ಅವರು ರಚಿಸಿದ ‘ಚಾಚಾ ಚೌಧರಿ’ ವ್ಯಂಗ್ಯಚಿತ್ರ ಪಾತ್ರವು ಅವರಿಗೆ ದೇಶ ವಿದೇಶಗಳಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಪ್ರಾಣ್ ಚಾಚಾ ಚೌಧರಿಯ ಪಾತ್ರವನ್ನು ಸೃಷ್ಟಿಸಿದವೇಳೆಯಲ್ಲಿ ದೇಶಾದ್ಯಂತ ಜನರು ಸೂಪರ್ ಮ್ಯಾನ್, ಪ್ಯಾಂಟಮ್ ನಂತಹಾ ವ್ಯಂಗ್ಯಚಿತ್ರ ಸರಣಿಯನ್ನು ಮೆಚ್ಚಿಕೊಂಡಿದ್ದರು. ಅವೆಲ್ಲವೂ ವಿದೇಶೀ ಮೂಲದ ವ್ಯಂಗ್ಯಚಿತ್ರಗಳಾಗಿದ್ದವು. ಆದರೆ ಪ್ರಾಣ್ ರವರ ‘ಚಾಚಾ ಚೌಧರಿ’ಪ್ರಾರಂಭವಾದ ಅತ್ಯಂತ ಶೀಘ್ರದಲ್ಲಿ ದೇಸವಿದೇಶಗಳ ಜನರು ಮೆಚ್ಚುವಂತಾಯಿತು. ಪ್ರಾಣ್ ರವರೇ ತಮ್ಮ ಒಂದು ಸಂದರ್ಶನದಲ್ಲಿ ಚಾಚಾ ಚೌಧರಿ ಪಾತ್ರದ ಕುರಿತು ಈ ರೀತಿಯಾಗಿ ಅಭಿಪ್ರಾಯ ಪಟ್ಟಿದ್ದಾರೆ – “Each family has its own wise old man. He solved his problems with common sense, but with a touch of humor. Humor is the basis of my cartoon.” ‘ರಾಮನ್’, ‘ಪಿಂಕಿ’, ‘ಬಿಲ್ಲೂ’, ‘ಶ್ರೀಮತಿ’ ಇವೇ ಮೊದಲಾದವು ಪ್ರಾಣ್ ಕುಮಾರ್ ಶರ್ಮಾರವರ ಇತರೆ ವ್ಯಂಗ್ಯಚಿತ್ರ ಪಾತ್ರಗಳಾಗಿದ್ದವು. ಮತ್ತಷ್ಟು ಓದು 
ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪ್ಯಾಲೆಸ್ತೈನಿಗಳ ಮೇಲಲ್ಲ
– ಅಶ್ವಿನ್ ಅಮಿನ್
“Save Gaza… Save Palestine”
“ಗಾಜಾ ಉಳಿಸಿ, ಇಸ್ರೇಲ್ ಅಳಿಸಿ”
“Israel will Fail.. Palestine will raise..”
ಭಾರತದಲ್ಲಿ ಕೆಲ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ.
ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.
ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !
ಅಷ್ಟಕ್ಕೂ ಈ “Save Gaza.. Save Palestine” ಅನ್ನುವ ಕೂಗು ಯಾಕೆ ಬೇಕು..?
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?
ಖಂಡಿತ ಅಲ್ಲ..
ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು 1948 ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು.
ಕೊಳವೆಬಾವಿ ಅವಾಂತರ-ಕೊನೆ ಹೇಗೆ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.
ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.
ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.
ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್‍ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!
ಅತ್ಯಾಚಾರ: ಹುಯಿಲೆಬ್ಬಿಸುವುದೇಕೆ?
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಕಳೆದ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. 2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?
ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.
ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ….ಸಿದ್ರಾಮಣ್ಣ….!!
– ರಾಘವೇಂದ್ರ ನಾವಡ
ಇತ್ತೀಚಿನ ಸಿದ್ರಾಮಣ್ಣನವರನ್ನು ನೋಡುತ್ತಿದ್ದರೆ, ನನಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿದ್ರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ ಕೈಕೊಟ್ಟು ಗಡದ್ದಾಗಿ ನಿದ್ರೆ ಹೊಡಿತಾ ಕೂತು ಬಿಟ್ಟರೆ ಮುಗೀತು.. ಊರ ಗೌಡ ಏಕೆ.. ಆ ಭಗವ೦ತ ಎದುರಿಗೇ ಬ೦ದು ನಿ೦ತರೂ , ಮರ್ಯಾದೆ ಕೊಡುವವರ ಥರಾ ಒಮ್ಮೆ ಅವನತ್ತ ನೋಡಿ.. ಮತ್ತೆ ಕಣ್ಮುಚ್ಚಿ ಬಿಡ್ತಾರೆ! ಮೊನ್ನೆ ಅಧಿವೇಶನದಲ್ಲಿ ನಮ್ಮ ಮಾಜಿ ಮುಖ್ಯಮ೦ತ್ರಿ.. ದೊಡ್ಡಗೌಡರ ಪ್ರೀತಿಯ ಮಗ ಕುಮಾರಣ್ಣ ಅಪ್ಪ೦ದೇ ಶೈಲಿಯಲ್ಲಿ ಗದ್ದಕ್ಕೆ ಕೈಕೊಟ್ಟು ಅಲ್ಲಿಯೇ….. ದೊಡ್ಡಗೌಡರ ದೊಡ್ಡ ಮಗನವರೂ ಹಾಗೆಯೇ… ಹೀಗೆ ಮೊದಲಿನಿ೦ದಲೂ ಇದೇ ಗರಡಿಯಲ್ಲಿಯೇ ಅಣ್ಣತಮ್ಮ೦ದಿರ ಅಕ್ಕಪಕ್ಕವೇ ಬೆಳೆದು, ದೊಡ್ಡಗೌಡರ ಮಾನಸ ಪುತ್ರನೇ ಆಗಿ ಹೋಗಿದ್ದ ಸಿದ್ರಾಮಣ್ಣ, ಗೌಡ್ರ ಗರಡಿಯಿ೦ದ ಹೊರಗೆ ಬ೦ದ ಮೇಲೆ ಆ ದುಷ್ಟಬುಧ್ಧಿಯನ್ನು ಬಿಟ್ಟರೇನೋ ಎ೦ದು ಅ೦ದಾಜಿತ್ತು!
ಹೂ೦ ಹೂ೦.. ಎಲ್ಲಿ೦ದ ಬಿಡೋದು.. ಮುಖ್ಯಮ೦ತ್ರಿ ಆಗೋತನಕ ಬಿಟ್ಟಿದ್ರೇನೋ! ಒಮ್ಮೆ ಪಟ್ಟದ ಮೇಲೆ ಕುಳಿತರು ನೋಡಿ.. ಅಲ್ಲಿ೦ದ ಕು೦ಭಕರ್ಣನ ಅಪರಾವತಾರವೇ ಆಗಿಹೋಗಿದ್ದಾರೆ!!
ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!
– ರಾಘವೇಂದ್ರ ಅಡಿಗ ಎಚ್ಚೆನ್.
ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.
ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ ಗಾಯಗಳಾಗಿದ್ದವು. ಆ ತಾಯಿಗೆ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಯಿತು. ಮಗುವನ್ನು ಕೇಳಿದಳು.. “ಕಂದಾ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?”
ಮಗು ಮುಗ್ದತೆಯ ದನಿಯಲ್ಲಿ ಹೇಳಿತು, “ಅಮ್ಮಾ… ಅಣ್ಣ ಅಬ್ಬು ಮಾಡಿದ!”
ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹಾ ಘಟನೆಗಳು ಇಂದು ದಿನನಿತ್ಯವೂ ನಮ್ಮ ರಾಜ್ಯದಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಸುಸಂಸ್ಕೃತಿಗೆ ಹೆಸರಾದ ಕನ್ನಡಿಗರಿಗೆ ಶೋಭಿಸುವ ವಿಚಾರವಲ್ಲ.
ಇಷ್ಟಕ್ಕೂ ನಮ್ಮ ಯುವಜನತೆಯಲ್ಲಿ ಇಂತಹಾ ಕ್ರೌರ್ಯವು ಮೂಡುವಂತಾಗಲು ಮೂಲ ಪ್ರೇರಣೆ ಏನು? ಇಂದಿನ ಕುಟುಂಬದಲ್ಲಿಯೂ, ಮಾದ್ಯಮದಲ್ಲಿಯೂ, ಶಾಲಾ ಪರಿಸರದಲ್ಲಿಯೂ ಗಂಡಸಿಗೆ ಯಾವ ಬಗೆಯ ನೈತಿಕತೆಯ ಸಂದೇಶ ರವಾನಿಸಲಾಗುತ್ತಿದೆ? ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಮೊದಲಿಗೆ ಎಲ್ಲರ ದೃಷ್ಟಿ ಬೀಳುವುದೂ ಸಹ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ. ಅದಾಕ್ಷಣದಲ್ಲಿ ಅವಳ ಮೇಲೆ ಅನುಕಂಪ, ಕರುಣೆಗಳು ತಾನಾಗಿ ಉಕ್ಕಿ ಹರಿಯುತ್ತದೆ. ಅದೇನೋ ಸರಿಯಾದುದೆ, ಆದರೆ ಇದರ ಫಲಿತವು ಮಾತ್ರ ಶೂನ್ಯ. ಕಾರಣವೇನೆಂದರೆ ಜನರು ಅದಾವುದನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ! ಜನರ ಮನಸ್ಸು ಹೃದಯ ಅಷ್ಟೊಂದು ಕಠಿಣವಾಗಿದೆ, ಅಥವಾ ಅವರಿಗೆ ಅದರ ಬಗೆಗೆ ಚಿಂತಿಸಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಷ್ಟು ಸಮಯವಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸಮೂಹ ಮಾದ್ಯಮಗಳು ಅವರನ್ನು ಆ ಮನಸ್ಥಿತಿಗೆ ತಂದು ನಿಲ್ಲಿಸಿವೆ!
ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ?
– ರಾಘವೇಂದ್ರ ಸುಬ್ರಹ್ಮಣ್ಯ
(*) ಲೈಂಗಿಕ ಶಿಕ್ಷಣ ಕೊಟ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನ ನಾನೊಪ್ಪಲ್ಲ.
(*) ಹುಡುಗೀರು ಗಿಡ್ಡವಾದ, ಬಿಗಿಯಾದ ಉಡುಪು ತೊಡೋದನ್ನ ನಿಲ್ಲಿಸಿದ್ರೆ, ಮೊಬೈಲ್ ಉಪಯೋಗ ಕಡಿಮೆ ಮಾಡಿದ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನೂ ನಾನೊಪ್ಪಲ್ಲ.
(*) ಯಾವನೋ ಎರೆಕ್ಷನ್ ತಡೆಯಲಾಗದವ ಮಾತ್ರ ರೇಪ್ ಮಾಡ್ತಾನೆ ಅನ್ನೋದನ್ನೂ ನಾನೊಪ್ಪಲ್ಲ.
ಹೆಣ್ಣು ಬೈಕ್ ಓಡಿಸಿದ್ರೂ ಮರುಳಾಗ್ತಾಳೆ, ಡಿಯೋ ಹಾಕಿದ್ರೂ ಆಕರ್ಷಿತಳಾಗ್ತಾಳೆ, ಹೇರ್ ಜೆಲ್ ಹಾಕಿಯೂ ಹುಡುಗಿಯರನ್ನ ಪಟಾಯಿಸಬಹುದು ಅನ್ನೋ ಮೂರನೇ ದರ್ಜೆಯ ಜಾಹೀರಾತಿನ ಬಗ್ಗೆ ಕಮಕ್-ಕಿಮಕ್ ಎನ್ನದ ನಮ್ಮ ಮಹಿಳಾವಾದಿಗಳು ಹಾಗೂ ಬುದ್ಧಿಜೀವಿಗಳು, ಅತ್ಯಾಚಾರ ನಡೆದಾಗ ಮಾತ್ರ ಬೊಬ್ಬಿರಿಯುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ನಮ್ಮ ಸಮಾಜ ಉದ್ಧಾರವಾಗುವುದರೆಡೆಗೆ ಮೊದಲ ಹೆಜ್ಜೆ ಇಡಬಹುದೇನೋ. ಇನ್ನು ನಮ್ಮ ಸಿನಿಮಾಗಳೋ, ಅದರ ಸೂಪರ್ ಸ್ಟಾರ್ ಕಪೂರ್, ಖಾನ್ ಮಹಾಶಯರ ಕಥೆಯಂತೂ ಕೇಳುವುದೇ ಬೇಡ. ಸಿನಿಮಾಗಳಲ್ಲಿ ತಮ್ಮ ಮಕ್ಕಳ ವಯಸ್ಸಿನ ಹೆಂಗೆಳೆಯರನ್ನು ಚೀಪ್-ಟ್ರಿಕ್ ಉಪಯೋಗಿಸಿ ಬಲೆಗೆ ಬೀಳಿಸುವುದಲ್ಲದೇ, ಚಡ್ಡಿ-ಬನಿಯಾನ್ ಜಾಹಿರಾತಿನಲ್ಲೂ ಹೆಣ್ಣುಗಳು ತಮ್ಮನ್ನು ಮುತ್ತುವುದರಂತಹ ಸಂದೇಶವನ್ನು ಜನರಿಗೆ ಕೊಡುತ್ತಾರೆ. ಇಂತಹ ಟೀವಿ ಜಾಹೀರಾತುಗಳು, ದ್ವಂದ್ವಾರ್ಥ ಸಂಭಾಷಣೆಯ ಚಿತ್ರಗಳನ್ನು ನೋಡಿ ಬೆಳೆದ ಮಕ್ಕಳು ಇನ್ನೆಂತಹ ಪಾಠ ಕಲಿಯಲು ಸಾಧ್ಯ!? ಸಧ್ಯಕ್ಕೆ ಲೈಂಗಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಿರುವುದು, ನಮ್ಮ ಕುಲಗೆಟ್ಟ ಟಿವಿ ಸಿನಿಮಾ ಮಾಧ್ಯಮದ ಮೇಲಿನ ಹಿಡಿತ ಹಾಗೂ ಸ್ವಲ್ಪ ನೈತಿಕತೆಯ ಪಾಠಗಳು.
ಇನ್ನೊಂದು ಮಾತು ತಿಳಿಯೋಣ. ಅತ್ಯಾಚಾರಿಯ ಮನಸ್ಸು ವಿಕೃತಿಯಿಂದ ತುಂಬಿರುವಂತದ್ದು. ಅದೊಂದು ಮಾನಸಿಕ ರೋಗಗಳ ಗೂಡು. ವಿಕ್ಷಿಪ್ತ ವಾಂಛೆಗಳ ಕೂಪ. ಆ ವ್ಯಕ್ತಿಗೆ ‘ಆ ಸಮಯಕ್ಕೆ’ ಏನೋ ಒಂದು ಸಿಕ್ಕಿದರಾಯ್ತು. ಮಗುವೋ, ಹೆಂಗಸೋ, ವೃದ್ಧೆಯೋ ಯಾವುದಾದರೂ ಸರಿ. ಅದು ಸಿಗಲಿಲ್ಲವೆಂದಾದಲ್ಲಿ ಗಂಡಸರ ಮೇಲೂ, ಪ್ರಾಣಿಗಳ ಮೇಲೂ ಏರಿದವರ ಬಗ್ಗೆ ನಾವು ಕೇಳಿದ್ದೇವೆ. ನಿಜವಾದ ಗಂಡಸು ಹೆಣ್ಣಿನ ಮೈಮೇಲೆ ಏರುವುದಿಲ್ಲ. ಮೃಗದಂತೆ ಬಳಸಿ ಬಿಸಾಡುವುದಿಲ್ಲ. ಆದ್ದರಿಂದ ನನ್ನ ಪ್ರೀತಿಯ ಮಹಿಳಾವಾದಿಗಳೇ….ಯಾವನೋ ಒಬ್ಬ ಝಿಪ್ ನಿಲ್ಲದವ ಪ್ಯಾಂಟ್ ಬಿಚ್ಚಿದ್ದಕ್ಕೆ ಇಡೀ ಗಂಡುಕುಲದ ಮೇಲೆ ಹರಿಹಾಯ್ದು, ಮನುಸ್ಮೃತಿಯನ್ನು ಚರ್ಚೆಗೆ ಎಳೆದು ನಿಲ್ಲಿಸುವ ಅಗತ್ಯವಿಲ್ಲ. ಯಾವುದೋ ಒಂದು ಹೆಣ್ಣು ರಾತ್ರಿ ಹನ್ನೆರಡಕ್ಕೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ನಿಂತದ್ದಕ್ಕೆ ‘ರಾತ್ರಿ ಹನ್ನೆರಡಕ್ಕೆ ಗಂಡಸಿನೊಡನೆ ಮನೆಯ ಹೊರಗೆ ಇವಳಿಗೇನು ಕೆಲಸ!?’ ಎಂದು ಅನುಮಾನಿಸುವ ಅಗತ್ಯವೂ ಇಲ್ಲ. ಅತ್ಯಾಚಾರಕ್ಕೆ ಹೆಣ್ಣಿನ ಸ್ವಾತಂತ್ರ್ಯಹರಣ ಉತ್ತರವಲ್ಲ. ಹಾಗಂತ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಮಧ್ಯದ ಅಂತರವನ್ನೂ fairer sex ಅರ್ಥೈಸಿಕೊಳ್ಳಬೇಕು.
ಶಾ ಬಾನು,ಫೆಮಿನಿಸಂ,ಸೆಕ್ಯುಲರಿಸಂ ಮತ್ತು ಸಮಾನ ನಾಗರೀಕ ಸಂಹಿತೆ
– ರಾಕೇಶ್ ಶೆಟ್ಟಿ
ದೇಶದಲ್ಲಿರುವ ಷರಿಯತ್ ಕೋರ್ಟುಗಳಿಗೆ ಕಾನೂನು ಮಾನ್ಯತೆಯಿಲ್ಲ.ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿದ ತೀರ್ಪು ಮತ್ತೊಮ್ಮೆ “ಸಮಾನ ನಾಗರೀಕ ಸಂಹಿತೆ”ಯ ಜಾರಿಯ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ. ಸಮಾನ ನಾಗರೀಕ ಸಂಹಿತೆಯ ಜೊತೆ ಜೊತೆಗೆ ಈ ತೀರ್ಪಿನ ಜೊತೆಗೆ ನೆನಪಾಗುವುದು ೮೦ರ ದಶಕದ ’ಶಾ ಬಾನು ಪ್ರಕರಣ’
ಏನಿದು ಶಾ ಬಾನು ಪ್ರಕರಣ : ಇಂದೋರಿನ ವಕೀಲ ಮೊಹಮ್ಮದ್ ಅಹ್ಮದ್ ಖಾನ್ ನ ಪತ್ನಿ ಶಾ ಬಾನು.ಮದುವೆಯಾಗಿ ೧೪ ವರ್ಷಗಳ ನಂತರ ಎರಡನೇ ಮದುವೆಯಾದ ಅಹ್ಮದ್ ಖಾನ್.ಇಬ್ಬರು ಹೆಂಡಿರ ಜೊತೆ ಸಂಸಾರ ನಡೆಸಿ ಕಡೆಗೆ ಕೆಲ ವರ್ಷಗಳ ನಂತರ ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನುವನ್ನು ಆಕೆಯ ೬೨ನೇ ವಯಸ್ಸಿನಲ್ಲಿ ಆಕೆಯ ಐದು ಮಕ್ಕಳ ಜೊತೆಗೆ ಹೊರಹಾಕಿದ.ಒಪ್ಪಂದದಂತೆ ಮಾಸಿಕ ೨೦೦ ರೂ ಜೀವನಾಂಶವನ್ನು ಆಕೆಗೆ ನೀಡದಿದ್ದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಏಪ್ರಿಲ್ ೧೯೭೮ರಲ್ಲಿ ದಾವೆ ಹೂಡುತ್ತಾರೆ ಶಾ ಬಾನು.ಮಾಸಿಕ ೫೦೦ರೂ ಜೀವನಾಂಶ ಬೇಕೆಂದು ಕೇಳಿಕೊಳ್ಳುತ್ತಾರೆ.
ನವೆಂಬರ್ ೧೯೭೮ರಲ್ಲಿ ಖಾನ್ ಶಾ ಬಾನು ಅವರಿಗೆ ತಲಾಖ್ ನೀಡಿ,ಈಗ ಆಕೆ ನನ್ನ ಪತ್ನಿಯಲ್ಲ ಮತ್ತು ಆಕೆಗೆ ಇಸ್ಲಾಮಿಕ್ ಲಾ ಮೂಲಕ ಕೊಡಬೇಕಾದ ೫,೪೦೦ ರೂ ಬಿಟ್ಟರೆ ನಾನು ಇನ್ನಾವುದೇ ಹಣವನ್ನು ಕೊಡಬೇಕಾಗಿಲ್ಲ ಎಂದು ವಾದಿಸುತ್ತಾನೆ ಖಾನ್.ಆಗಸ್ಟ್ ೧೯೭೯ರಲ್ಲಿ ಸ್ಥಳೀಯ ನ್ಯಾಯಾಲಯ ಮಾಸಿಕ ೨೫ರೂ ನೀಡುವಂತೆ ತೀರ್ಪು ಕೊಟ್ಟಿತ್ತು.ಶಾ ಬಾನು ಕೇಸನ್ನು ಹೈಕೋರ್ಟಿಗೆ ಕೊಂಡೊಯ್ದರು.ಅಲ್ಲಿ ಶಾ ಬಾನು ಪರವಾಗಿ ೧೯೮೦ರ ಜುಲೈನಲ್ಲಿ ಬಂದ ತೀರ್ಪು ಮಾಸಿಕ ೧೭೯ ರೂ ನೀಡುವಂತೆ ತೀರ್ಪು ನೀಡುತ್ತದೆ.ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಖಾನ್ ಹೋಗುತ್ತಾನೆ.ಶಾ ಬಾನು ಈಗ ನನ್ನ ಪತ್ನಿಯಲ್ಲ ಇಸ್ಲಾಮಿಕ್ ಕಾನೂನಿಂತೆ ಆಕೆಗೆ ನಾನು ತಲಾಖ್ ನೀಡಿ ಎರಡನೇ ಮದುವೆಯಾಗಿದ್ದೇನೆ ಎನ್ನುತ್ತಾನೆ.
ಸೂಪರ್ ನ್ಯೂಮರರಿ ಕೋಟಾ: ಪ್ರಾಮಾಣಿಕತೆಗೆ ಟಾಟಾ?
– ತುರುವೇಕೆರೆ ಪ್ರಸಾದ್
ಎಐಸಿಟಿಯು 2011-12ನೇ ಸಾಲಿನಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರೂ.2.5ಲಕ್ಷ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳಿಗೆ ಪ್ರತಿ ಕೋರ್ಸ್‍ಗಳ ಒಟ್ಟು ಪ್ರವೇಶಾತಿಯ ಮೇಲೆ ಶೇ.5ರಷ್ಟು ಸಂಖ್ಯಾಧಿಕ ಸೀಟುಗಳನ್ನು ಬೋಧನಶುಲ್ಕ ವಿನಾಯಿತಿ ಯೋಜನೆಯಡಿ(ಸೂಪರ್ ನ್ಯೂಮರರಿ ಕೋಟಾ) ಹಂಚಿಕೆ ಮಾಡುವ ಯೋಜನೆಯನ್ನು ಜಾರಿಗೆ ತಂದಿತ್ತು. 2013-14ನೇ ಸಾಲಿಗೆ ಈ ಯೋಜನೆಯಡಿ ಆದಾಯ ಮಿತಿಯನ್ನು ರೂ.4.5ಲಕ್ಷಕ್ಕೆ ಏರಿಸಲಾಗಿತ್ತು. ಸದರಿ ವಾರ್ಷಿಕ ಆದಾಯವನ್ನು ಎಐಸಿಟಿಯು ರೂ.6 ಲಕ್ಷಕ್ಕ ಏರಿಸಿದ್ದು ರೂ.6 ಲಕ್ಷ ಆದಾಯದಡಿ ಹೆಚ್ಚಿನ ವಿದ್ಯಾರ್ಥಿಗಳು ಇರುವುದರಿಂದ ವಾರ್ಷಿಕ ಆದಾಯ ರೂ.2.5 ಲಕ್ಷ ಆದಾಯ ಮಿತಿಯೊಳಗಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೀಟು ಸಿಗುವ ಸಂಭವ ಕಡಿಮೆ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ 2014-15ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಫೆ.26ರಂದು ನಡೆದ ಪರೀಕ್ಷಾ ಪ್ರಾಧಿಕಾರದ ಆಢಳಿತ ಮಂಡಳಿಯ ಸಭೆಯಲ್ಲಿ ಬೋಧನಾ ಶುಲ್ಕದ ವಿನಾಯಿತಿ ನೀಡಲು ಕೇಂದ್ರ ಸರ್ಕಾರದ ಸೂಪರ್ ನ್ಯೂಮರರಿ ಕೋಟಾ ಅಡಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪೋಷಕರ ಆದಾಯ ಮಿತಿಯನ್ನು ಪರಿಷ್ಕರಿಸಿ 5 ವರ್ಗಗಳಾಗಿ (ರೂ.1-2ಲಕ್ಷ, 2-3 ಲಕ್ಷ, 3-4 ಲಕ್ಷ, 4-5 ಲಕ್ಷ, 5-6ಲಕ್ಷ) ವಿಂಗಡಿಸಲಾಗಿದೆ. ಒಟ್ಟಾರೆ ಲಭ್ಯವಿರುವ ತಾಂತ್ರಿಕ ಕಾಲೇಜು ಸೀಟುಗಳ ಶೇ.5ರಷ್ಟು ಸೀಟುಗಳಲ್ಲಿ ಈ ಯೋಜನೆಯಡಿ ಮೊದಲು 1-2 ಲಕ್ಷ ಆದಾಯ ಮಿತಿ ಇರುವ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಸೀಟು ಹಂಚಿಕೆ ಮಾಡಿ ಉಳಿದ ಸೀಟುಗಳನ್ನು ಹಂಚಲು ಇದೇ ಕ್ರಮವನ್ನು ಇತರೆ 4 ವರ್ಗಗಳಿಗೆ ಅನುಸರಿಸಲಾಗುತ್ತದೆ. ಇದು ಎಲ್ಲಾ ಸರ್ಕಾರಿ, ವಿಶ್ವವಿದ್ಯಾಲಯ, ಅನುದಾನಿತ, ಖಾಸಗಿ ಅನುದಾನರಹಿತ( ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತವಲ್ಲದ)ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 90 ಸಾವಿರ ಎಂಜಿನಿಯರಿಂಗ್ ಸೀಟುಗಳಲ್ಲಿ ಪ್ರತಿ ಕೋರ್ಸ್‍ನ ಶೇ.5 ಅಂದರೆ ಸುಮಾರು 4500 ಸೀಟುಗಳು ಸೂಪರ್ ನ್ಯೂಮರರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಆದಾಯವನ್ನು ಪ್ರಮಾಣೀಕರಿಸುವ ಸಂಬಂಧಿಸಿದ ಪ್ರಾಧಿಕಾರ ( ತಹಸೀಲ್ದಾರ್, ನಗರಪಾಲಿಗೆ ಅಧಿಕಾರಿ) ನೀಡಿದ ಅಧಿಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಒಳ್ಳೆಯ ದಿನಗಳು ಉಚಿತವಾಗಿ ಬರುವುದಿಲ್ಲ!
– ಅನಿಲ್ ಚಳಗೇರಿ
2014ರ ಚುನಾವಣೆಯಲ್ಲಿ ಬಿಜೆಪಿಯ ಪಂಚ್ ಲೈನ್ ಎನ್ನಬಹುದಾದ “ಅಚ್ಛೆ ದಿನ್ ಅನೆ ವಾಲೆ ಹೈ’ (ಒಳ್ಳೆಯ ದಿನಗಳು ಬರಲಿವೆ) ಸುತ್ತಮುತ್ತಲೂ ಕಳೆದ ಒಂದು ತಿಂಗಳಿಂದ ವಿವಾದವೊಂದು ಸೃಷ್ಟಿಯಾಗಿದೆ. ಮೋದಿಯವರು ಆಡಳಿತ ರೀತಿಯನ್ನು ಬಿಗಿಗೊಳಿಸಿ ಇಡೀ ದೇಶದ ಪರಿಸ್ಥಿತಿಯನ್ನು ಹತೋಟಿಯಲ್ಲಿ ತರಬೇಕಾದಾರೆ ಕೆಲವು ಗಟ್ಟಿ ನಿರ್ಧಾರ(ಸದ್ಯಕ್ಕೆ ನಮಗೆ ಇಷ್ಟವಾಗದಿರುವ) ತೆಗೆದುಕೊಳ್ಳಲೇಬೇಕು. ಕಳೆದ ಒಂದು ದಶಕದಲ್ಲಿ ಯುಪಿಎ ಸರ್ಕಾರ ಮಾಡಿದ ಆವಾಂತರಗಳನ್ನು ಮೊದಲು ಸರಿಪಡಿಸಿ ಆಮೇಲೆ ಅಭಿವೃದ್ಧಿಯ ಕಡೆಗೆ ಹೋಗುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ಅಷ್ಟಕ್ಕೂ ಈ ಅಭಿವೃದ್ಧಿಯ ಹಾದಿ ಮೊದಲ ದಿನದಿಂದಲೇ ಪ್ರಾರಂಭವಾಗಿದೆ. ಇದನ್ನು ಅಚ್ಛೆ ದಿನ್ ಅಂದರೂ ತಪ್ಪಾಗದು. ಅಷ್ಟಕ್ಕೂ ಮೋದಿಯವರು ಉಚಿತ ದಿನ್ ಎಂದು ಹೇಳಿಲ್ಲ!
ದೆಹಲಿಯಲ್ಲಿನ ವಿದ್ಯುತ್ ಅಭಾವದಿಂದ ಹಿಡಿದು ರೈಲ್ವೆ ದರ ಏರಿಕೆಯವರೆಗಿನ ವಿಷಯವನ್ನು ಹಿಡಿದುಕೊಂಡು ಅಚ್ಛೇ ದಿನ್ ಅಂದರೆ ಇದೇನಾ ಅನ್ನುವಷ್ಟು ಕನ್‌ಫ್ಯೂಷನ್ ಹುಟ್ಟಿಬಿಟ್ಟಿದೆ. “ಒಮ್ಮಿಂದೊಮ್ಮೇಲೆ ಮಧ್ಯಮ ವರ್ಗದ ವಿರೋಧಿಯಾದರೆ ನರೇಂದ್ರ ಮೋದಿ?” ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಯುಪಿಎ ನೀತಿಯಂತೆ ರಾಜಕೀಯ ಹಿತಾಸಕ್ತಿಗೆ ಸರ್ಕಾರದ ಬೊಕ್ಕಸವನ್ನು ಬರಿದಾಗಿಸುವುದು ಸರಿಯೇ? ಎಂದು ನಮ್ಮನ್ನು ನಾವು ಒಮ್ಮೆ ಕೇಳಿಕೊಂಡರೆ ಬಹುಶಃ ನಿಮಿಷಾರ್ಧದಲ್ಲೇ ನಮಗೆ ಉತ್ತರ ಸಿಕ್ಕು ಬಿಡಬಹುದು.
ನಮ್ಮ ಸರ್ಕಾರಗಳಿಗೆ ರೈಲ್ವೆ ಸ್ಟೇಷನ್ ಸ್ವಚ್ಛವಿಡಲು ಏನು ಸಮಸ್ಯೆ? ಸರಿಯಾದ ಸಮಯಕ್ಕೆ ತತ್ಕಾಲ್ ಟಿಕೆಟ್ ಬುಕ್ ಆಗುವದಿಲ್ಲ, ರೈಲ್ವೆ ಪ್ಲಾಟ್ ಫಾರಂ ಸ್ವಚ್ಛವಿರುವುದಿಲ್ಲವೆಂದು ದೂರುತ್ತಾ ಬೇರೆ ದೇಶದ ರೈಲ್ವೆ ವ್ಯವಸ್ಥೆಯನ್ನು ಹೊಗಳುತ್ತೇವೆ. ರೈಲ್ವೆ ಇಲಾಖೆ 26 ಸಾವಿರ ಕೋಟಿಗಳ ನಷ್ಟ ಅನುಭವಿಸುತ್ತಿದೆ, ಪ್ರತಿ ದಿನ 30 ಕೋಟಿಯಷ್ಟು ನಷ್ಟ ಭರಿಸಬೇಕಾಗುತ್ತಿದೆ, ಅದರಲ್ಲೂ ಸರಕು ಸಾಗಣಿಕೆಯಲ್ಲಿ ಸ್ವಲ್ಪ ಲಾಭ ಮಾಡುವದನ್ನು ಬಿಟ್ಟರೆ, ಪ್ರಯಾಣಿಕರ ರೈಲುಗಳಿಂದಲೇ ಅಧಿಕ ನಷ್ಟ ಎದುರಾಗುತ್ತಿದೆ ಎನ್ನುತ್ತದೆ ರೈಲ್ವೆ ಇಲಾಖೆಯ ಅಂಕಿ ಅಂಶಗಳು. ಇಷ್ಟೆಲ್ಲಾ ನಷ್ಟಗಳ ಮಧ್ಯೆ ಸರ್ಕಾರ ಒಳ್ಳೆಯ ರೈಲ್ವೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವದಾದರು ಹೇಗೆ? ಅದಕ್ಕಾಗಿಯೇ ಈ ರೈಲ್ವೆ ದರ ಏರಿಕೆ. ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆ ತನ್ನ ನಷ್ಟಗಳನ್ನೆಲ್ಲ ಸಂಪೂರ್ಣವಾಗಿ ಕಡಿಮೆ ಮಾಡಿ ಆಮೇಲೆ ನವೀಕರಣದ ಬಗ್ಗೆ ವಿಚಾರ ಮಾಡಬೇಕು, ಫ್ರೀ ಬೀ(ಉಚಿತ ಕೊಡುಗೆಗಳನ್ನು) ಸರ್ಕಾರಗಳು ಕೊಡಬಾರದೆನ್ನುವ ನಾವು ದಿನಕ್ಕೆ 30 ಕೋಟಿ ನಷ್ಟವಾದರೂ ಪರವಾಗಿಲ್ಲ, ನಮ್ಮ ಜೇಬಿಗೆ ಮಾತ್ರ ಕತ್ತರಿ ಬೀಳಬಾರದು ಎನ್ನುತ್ತಿದ್ದೇವೆ! ಅಷ್ಟಕ್ಕೂ, ಒಂದು ಉತ್ತಮ ರೈಲ್ ವ್ಯವಸ್ಥೆಯಿಂದ ಅತೀ ಹೆಚ್ಚು ಲಾಭ ಪಡೆಯುವವರು ಯಾರು? ನಾವೇ ಅಲ್ಲವೇ? ಇಲ್ಲವೆಂದರೆ, ರೈಲ್ವೆ ಇಲಾಖೆಯು ಮುಂದೊಂದು ದಿನ ಏರ್ ಇಂಡಿಯಾ ಥರ ದೊಡ್ಡ ನಷ್ಟಕ್ಕೆ ಒಳಗಾಗಬಹುದು. ಲಾಭಗಳಿಸುವ ರೈಲ್ವೆ ಇಲಾಖೆಯಿಂದ ಮಾತ್ರ ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಂಥ ರೈಲ್ವೆ ಸಂಪರ್ಕ ಒದಗಿಸಲು ಸಾಧ್ಯ.





