ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ
-ಗೋಪಾಲ ಕೃಷ್ಣ
ರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ. ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ. ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.
ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ಮತ್ತಷ್ಟು ಓದು 
ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?
– ರಾಕೇಶ್ ಶೆಟ್ಟಿ
ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?
ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ, ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?
ಎರಡು ಹೇಳಿಕೆಗಳು ಮತ್ತು ಇಬ್ಬಗೆ ನೀತಿಗಳು
– ರಾಕೇಶ್ ಶೆಟ್ಟಿ
* ಹೇ ಹಿಂದುಸ್ಥಾನ್,ನೀವು 100 ಕೋಟಿ ಜನಗಳು ಇದ್ದೀರಿ ಅಲ್ವಾ? ನಾವು 25 ಕೋಟಿ ಇದ್ದೀವಿ ಅಲ್ವಾ? ಹದಿನೈದು ನಿಮಿಷಗಳ ಕಾಲ ಪೋಲಿಸರನ್ನು ಪಕ್ಕಕ್ಕೆ ಕೂರಿಸಿ ನಮ್ಮ ತಾಕತ್ತು ತೋರಿಸುತ್ತೇವೆ.
* ಅರೆ,ಯಾವ ಮೋದಿ?ಎಲ್ಲಿಯ ಮೋದಿ? ಅವನಿಗೆ ಧೈರ್ಯವಿದ್ದರೆ ಹೈದರಾಬಾದ್ ಗೆ ಒಂದು ಬಾರಿ ಬಂದು ಹೋಗಲು ಹೇಳಿ.
* ನಾವು ಇಲ್ಲಿಂದ ಹೋಗುವುದಾದರೆ ತಾಜ್ ಮಹಲ್,ಚಾರ್ಮಿನಾರ್ ಎಲ್ಲವನ್ನೂ ಜೊತೆಗೆ ಕೊಂಡೊಯ್ಯುತ್ತೇವೆ,ಕಡೆಗೆ ಉಳಿಯುವುದು ಮುರುಕಲು ರಾಮ ಮಂದಿರವೊಂದೆ.
ಹೇಗಿದೆ ಮೇಲಿನ ವಾಕ್ಯಗಳು? ಓದಿದರೆ ಮೈ ಉರಿಯುವಂತೆ ಇದೆಯಲ್ಲವೇ? ಇದೆಲ್ಲ ವಾರದ ಹಿಂದೆ ಹೈದರಾಬಾದ್ ನಲ್ಲಿ MIM ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಮಾಡಿದ ಕೋಮು ದ್ವೇಷದ ಕಿಡಿ ಹಚ್ಚುವ ಭಾಷಣದ ಕೆಲವೇ ಕೆಲವು ವಾಕ್ಯಗಳಷ್ಟೇ. ಸುಮಾರು 45 ನಿಮಿಷಗಳಷ್ಟಿರುವ ಆ ಇಡಿ ಭಾಷಣದ ತುಂಬಾ ಇರುವುದು ದ್ವೇಷ ಹುಟ್ಟಿಸುವ,ಬೆಂಕಿ ಹಚ್ಚುವಂತ ಇಂತ ಮಾತುಗಳೇ.ಈ ಮೇಲಿನ ವಾಕ್ಯಗಳಲ್ಲಿ ನಿಮಗೆ ಬೆಂಕಿ ಹಚ್ಚುವಂತದ್ದು ಏನು ಕಾಣದಿದ್ದರೆ,ಬಹುಷಃ ಒವೈಸಿಯ ಉರ್ದು ಮಿಶ್ರಿತ ಹಿಂದಿ ಭಾಷಣವನ್ನು ಅನುವಾದ ಮಾಡುವಲ್ಲಿ ನಾನು ಸೋತಿದ್ದೇನೆ ಅಷ್ಟೇ ಹೊರತು ಅವನ ಭಾಷಣ ತಂಪಾಗಿರಲಿಲ್ಲ.ಒವೈಸಿಯ ಭಾಷಣವನ್ನು ಕೇಳಿ ಉನ್ಮತ್ತರಾದವರು ಏನೆಲ್ಲಾ ಮಾಡಬಹುದು ಅನ್ನುವ ಸ್ಯಾಂಪಲ್ ಬೇಕು ಅನ್ನಿಸಿದರೆ 2012ರ ಆಗಸ್ಟ್ ತಿಂಗಳಲ್ಲಿ ,ಮುಂಬೈನ ಆಜಾದ್ ಮೈದಾನದಲ್ಲಿ ಏನಾಗಿತ್ತು ಅನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ.ಅಂದ ಹಾಗೆ ಈ ಅಕ್ಬರ್ ಒವೈಸಿ ಯಾರು ಗೊತ್ತಾ,ಈ ದೇಶದ ಸಂಸತ್ತಿನಲ್ಲಿ ನಿಂತು “ಕೇಂದ್ರ ಸರ್ಕಾರಕ್ಕೆ,ಇಲ್ಲಿರುವ ಸಂಸದರಿಗೆ ನಾನು ಎಚ್ಚರಿಕೆ ಕೊಡುತಿದ್ದೇನೆ,ಒಂದು ವೇಳೆ ಅಸ್ಸಾಂ ಗಲಭೆಯ ಮುಸ್ಲಿಂ ನಿರಾಶ್ರಿತರಿಗೆ ಸರಿಯಾದ ಪರಿಹಾರ ಸಿಗಲಿಲ್ಲವಾದರೆ, ಮುಸ್ಲಿಂ ಯುವಕರು ಮುಲಭೂತವಾದಿಗಳಾಗುವುದನ್ನು ನೋಡಬೇಕಾಗುತ್ತದೆ’ ಅಂತ ಬೆದರಿಕೆ ಹಾಕುವಂತ ಭಾಷಣ ಮಾಡಿದ್ದ ಅಸಾದುದ್ದೀನ್ ಒವೈಸಿಯ ತಮ್ಮ.
ನಾವು ಈಗ ಯಾಕೆ ಹೀಗಾಗಿರುವೆವು?
-ರೂಪಲಕ್ಷ್ಮಿ
ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ) ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ, ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ! ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ. ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು. ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ, ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು. ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ.
ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು. ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ. ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!
ಅಪರಾಧ ಮತ್ತು ಸ್ಥಳದ ಮಹಿಮೆ.
ಡಾ ಅಶೋಕ್ ಕೆ ಆರ್
ಆ ದೌರ್ಭಾಗ್ಯೆಯ
ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು! ಕಾಲಿಗೆ ತಗುಲಿದ ಗುಂಡು ಶಾಶ್ವತ ಅಂಗವಿಕಲತೆಯನ್ನುಂಟುಮಾಡಿದೆ. ಇಷ್ಟೇ ಆಗಿದ್ದರೆ ನಕ್ಸಲರ ಹತ್ತಿಕ್ಕುವನೆಪದಲ್ಲಿ ನಡೆದ ಮತ್ತೊಂದು ಬಂಧನ ಎಂದು ‘ಮೌನ’ವಹಿಸಬಹುದಿತ್ತೇನೋ? ಆಕೆಗೆ ಪೋಲೀಸ್ ಬಂಧನದಲ್ಲಿ ನೀಡಿದ ಹಿಂಸೆ ‘ನಾಗರೀಕ’ ಸಮಾಜದ ನಿಲುಕಿಗೆ ದಕ್ಕದ್ದು. ಬೆತ್ತಲುಗೊಳಿಸಿ ಅತ್ಯಾಚಾರವೆಸಗಿ, ಅದೂ ಸಾಲದೆಂಬಂತೆ ಜನನಾಂಗ, ಗುದದ್ವಾರದಲ್ಲಿ ಕಲ್ಲು ತೂರಿದ್ದರು ದುರುಳ ಪೋಲೀಸರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಡಪಟ್ಟಿತ್ತು. ಸೋನಿ ಸೋರಿ ನೀಡಿರುವ ಹೇಳಿಕೆಯಂತೆ ಆ ಹಿಂಸಾಚಾರ ನಡೆದ ಸಮಯದಲ್ಲಿ ಅಲ್ಲಿನ ಎಸ್ ಪಿ ಅಂಕಿತ್ ಗರ್ಗ್ ಕೂಡ ಹಾಜರಿದ್ದ. ನಂತರದಲ್ಲಿ ಅಂಕಿತ್ ಗರ್ಗನಿಗೆ ರಾಷ್ಟ್ರಪತಿ ಗೌರವವೂ ದೊರೆತಿದೆ! ಈ ಘಟನೆಯಾಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿಲ್ಲ? ಜನಮಾನಸದ ಮನವನ್ನು ಕಲಕಿ ಪ್ರತಿಭಟನೆಗೆ ಇಳಿಯುವಂತೆ ಪ್ರೇರೇಪಿಸಲಿಲ್ಲ? ಮತ್ತಷ್ಟು ಓದು 
ಕೌರವರ ನಾಶಕ್ಕೆ ಶ್ರೀಕಾರ ಹಾಕಿದ್ದು ದ್ರೌಪದಿಯೇ ತಾನೇ?
– ರಾಕೇಶ್ ಶೆಟ್ಟಿ
ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರು ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…
ಕಳೆದ ಶನಿವಾರದ ಬೆಳಗ್ಗಿನಿಂದ ಇಂಡಿಯಾ ಗೇಟ್,ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗ ನಡೆಯುತ್ತಿದ್ದರೂ.ಪ್ರಧಾನಿ ಮೌನ ಮೋಹನ್ ಸಿಂಗ್ ತಮ್ಮ ಮೌನ ಮುರಿದಿದ್ದು ಸೋಮವಾರ ಬೆಳಿಗ್ಗೆ.ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ!,ಅದೂ ಸಹ ತಮ್ಮ ಭಾಷಣದ ಕೊನೆಯಲ್ಲಿ “ಟೀಕ್ ಹೈ” ಅಂದರಂತೆ! ಕ್ಯಾಮೆರಾ ಹಿಂದೆ ನಿಂತಿದ್ದ ನಿರ್ದೇಶಕ(ಕಿ) ಯಾರಿದ್ದಿರಬಹುದು? So Called ಯುವನಾಯಕ ರಾಹುಲ್ ಗಾಂಧಿಗೂ ಯುವಕ-ಯುವತಿಯರ ಮೇಲೆ ಪೋಲಿಸ್ ದೌರ್ಜನ್ಯ ಕಾಣಿಸಿಲ್ಲ.ರಷ್ಯಾದಿಂದ ಪುಟಿನ್ ಬರುತಿದ್ದಾರೆ ಅವರೆದುರು ನೀವು ಗಲಾಟೆ ಮಾಡಿದರೆ ಭಾರತದ ಬಗ್ಗೆ ಅವರೇನು ತಿಳಿದುಕೊಂಡಾರು ಅಂತ ಬುದ್ದಿ ಹೇಳುವ ಗೃಹ ಮಂತ್ರಿ ಶಿಂಧೆಗೇ,ವೃದ್ಧರು ,ಮಹಿಳೆಯರು,ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಪೋಲಿಸರನ್ನು ಮನೆಗೆ ಕಳಿಸಲಾಗದಿದ್ದ ಮೇಲೆ ತಾನು ಕುಳಿತಿರುವ ಕುರ್ಚಿಯಿಂದ ಎದ್ದೋಗಬೇಕು ಅನ್ನುವ ನೈತಿಕತೆ ಕೂಡ ಉಳಿದಿಲ್ಲವೇ? ಎದ್ದೋಗುವುದನ್ನು ಪಕ್ಕಕ್ಕಿಡಿ,ತನ್ನ ಪೋಲಿಸ್ ಪಡೆ ಮಾಡಿದ ಘನಂದಾರಿ ಕೆಲಸಕ್ಕಾಗಿ ದೇಶದ ಜನರ ಕ್ಷಮೆ ಕೇಳಲು ಸಹ ಆತ ಸಿದ್ಧನಿಲ್ಲ. ಹಾಳು ಬಿದ್ದು ಹೋಗಲಿ ಕ್ಷಮೆಯೂ ಬೇಡ.ನ್ಯಾಯ ಕೇಳಲು ನಿಂತ ವಿದ್ಯಾರ್ಥಿಗಳನ್ನು ಭೇಟಿಯಾಗುವ ಕುರಿತು ಪ್ರಶ್ನೆ ಕೇಳಿದರೆ, “ಇವತ್ತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ.ನಾಳೆ ಮಾವೋವಾದಿಗಳು ಪ್ರತಿಭಟಿಸುತ್ತಾರೆ.ಹಾಗಂತ ಮಾವೋವಾದಿಗಳು ಭೇಟಿಯಾಗಲು ಸಾಧ್ಯವೇ?” ಅನ್ನುತ್ತಾನಲ್ಲ ಇದೆಂತ ಉಡಾಫೆ ತನದ ಮಾತು? ಎಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ?
‘ಈಗ ಮದುವೆ ಆಗಿದೆ, ಆದರೆ ಕೆಲವು ಗಂಡಸರಿಗೆ ತಾಳಿಯೂ ಕಾಣೋದಿಲ್ಲ
-ರೂಪಾರಾವ್
ಒಂದು ಹುಡುಗಿ ಹೆಣ್ಣಾಗುವ ಘಳಿಗೆ ಅತಿ ಸಂಭ್ರಮದ ಘಳಿಗೆ. ಆದರೆ ಅ ಘಳಿಗೆ ಸುಮಾರು ಎಲ್ಲಾರ ಅಮ್ಮಂದಿರು ಅಳುತ್ತಾರೆ. ಮಗಳು ಹೆಣ್ಣಾದಳಲ್ಲ ಎಂಬ ಕಾರಣಕ್ಕಲ್ಲ. ತಾನು ಅನುಭವಿಸಿದ ನೋವು ನರಕಗಳನ್ನು ಮಗಳೂ ಅನುಭವಿಸಬೇಕಾಗುತ್ತಲ್ಲ ಎಂದು.
ಅಂತಹ ಘಳಿಗೆ ಬರುವುದಕ್ಕೂ ಮುಂಚೆಯೇ ಆ ಭಯ ನನಗೆ ಕಾಡಿತ್ತು. ಆಗಿನ್ನೂ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದೆ. ಯಾವುದೋ ಅಂಗಡಿಗೆ ಹೋಗುವ ಕಾರಣಕ್ಕಾಗಿ ಹೋದಾಗ , ಯಾವುದೋ ಗಂಡಸು ಏನೇನೋ ಅಸಭ್ಯವಾಗಿ ಹೇಳುತ್ತಾ ನನ್ನ ಹಿಂದೆಯೇ ಬರತೊಡಗಿದ.ಎಂಥ ವಿಷಮ ಘಳಿಗೆ ಎಂದರೆ ಅವನ್ಯಾಕೆ ಹಾಗೆಲ್ಲಾ ಹೇಳ್ತಿದಾನೆ ಅಂತಲೂ ನನಗೆ ಅರ್ಥ ಆಗಿರಲಿಲ್ಲ. ಮನೆಗೆ ಬಂದು ಯಾರಿಗೂ ಹೇಳದೆ ಅತ್ತಿದ್ದೆ.
ಅಲ್ಲಿಂದ ಮುಂದೆ ನಾನು ಹೇಗಿರಬೇಕೆಂಬ ಪಾಠ ಅಮ್ಮನಿಂದ ಬಂತು. ಆಗ ಹೆಣ್ಣಾಗಿದ್ದೆ…. ಒಳ್ಳೆಯ ಸ್ಪರ್ಷ ಕೆಟ್ಟ ಸ್ಪರ್ಷ ನೋಟಗಳ ವ್ಯತ್ಯಾಸ ತಿಳಿಯುತ್ತಿತ್ತು. ಆದರೂ ಬಸ್ ನಲ್ಲಿ ಸ್ಕೂಲಿಗೆ ಹೋಗುವಾಗ ಬೇಕಾಗಿಯೇ ಕೈ ಹಾಕಿ ನೂಕುವ ಕಂಡಕ್ಟರ್, ನನ್ನ ಹಿಂದೆ ಬಂದು ನಿಲ್ಲು ಎನ್ನುತ್ತಿದ್ದ ಡ್ರೈವರ್ ಇವರುಗಳನ್ನು ಎದುರಿಸಲಾಗಿರಲಿಲ್ಲ. ಸುಮ್ಮನೆ ಇವರುಗಳ ಸ್ಪರ್ಷ ತೀಟೆಗೆ ಮೂಕ ಪಶುಗಳಾಗುತ್ತಿದ್ದೆವು(ಅಕಸ್ಮಾತ್ ತಿರುಗಿಸಿ ಕೇಳಿದರೆ ಆ ಬಸ್ ನಮ್ಮ ಸ್ಟಾಪಿನಲ್ಲಿ ನಿಲ್ಲುತ್ತಿರಲಿಲ್ಲ. ನಿಂತರೂ ಒಂದಷ್ಟು ದೂರ ನಿಲ್ಲುತ್ತಿದ್ದೆವೆ. ನಾವುಗಳು ಓಡಿ ಹೋಗಿ ಹತ್ತಬೇಕಿತ್ತು.)
ಪ್ರತ್ಯೇಕ ಪಂಕ್ತಿ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು
– ರಾಕೇಶ್ ಶೆಟ್ಟಿ
ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…! ಅಂತ ವರ್ಷದ ಹಿಂದೆ ಮಡೆಸ್ನಾನ ಅನ್ನುವ ವಿಕೃತಿಯನ್ನು ವಿರೋಧಿಸಿ ಬರೆದಿದ್ದು ನಿಜವಾಗಿದೆ.ನಿನ್ನೆ ಮತ್ತೆ ಕುಕ್ಕೆಯಲ್ಲಿ ಮಡೆಸ್ನಾನ ಸಾಂಗೋಪಾಂಗವಾಗಿ ನೆರವೇರಿದೆ.ತಾವು ತಿಂದು ಬಿಡುವ ಎಂಜಲ ಮೇಲೆ ಮನುಷ್ಯರು ಹೊರಳಾಡುತ್ತಾರೆ ಅಂತ ಗೊತ್ತಿದ್ದು ಉಣ್ಣುವ ರೋಗಗ್ರಸ್ತ ಅಹಂ ಮನಸ್ಸುಗಳು ಮತ್ತು ಇನ್ನೊಬ್ಬರ ಎಂಜಲೆಲೆಯೇ ಪರಮ ಪವಿತ್ರ ಅನ್ನುವ ಮೂಢರು ಎಂಜಲೆಲೆಯ ಸ್ನಾನದಲ್ಲಿ ಮಿಂದು ಪುನೀತರಾಗಿದ್ದಾರೆ.
ಇನ್ನೊಂದೆಡೆ “ನಾವೆಲ್ಲ ಹಿಂದೂ,ನಾವೆಲ್ಲ ಒಂದು” ಅನ್ನುವವರೆಲ್ಲ ಸದ್ದಿಲ್ಲದೆ ಹಿಂದೆಯೇ ನಿಂತು ಎಂಜಲೆಲೆಯ ಮೇಲೆ ದೇವರ ಹೆಸರಿನ ನಂಬಿಕೆ(ಹೆದರಿಕೆ?)ಯಲ್ಲಿ ಜಾಗೃತರಲ್ಲದವರನ್ನು ಉರುಳಾಡಿಸಿ ಕೃತಾರ್ತರಾಗಿದ್ದಾರೆ.ಅಲ್ಲಿಗೆ “ನಾವೆಲ್ಲ ಹಿಂದೂ – ನಾವಿನ್ನೂ ಹಿಂದು” ಎನ್ನಲಡ್ಡಿಯಿಲ್ಲ ಅಲ್ಲವೇ?
ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್
– ಶ್ರೀವಿದ್ಯಾ,ಮೈಸೂರು
ಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್
“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ಮತ್ತಷ್ಟು ಓದು 
ಓ ಗಂಡಸರೇ…ನೀವೆಷ್ಟು ಒಳ್ಳೆಯವರು!
-ರಶ್ಮಿ ಕಾಸರಗೋಡು
ನೀನು ಹುಡುಗ ನಮ್ಮ ಜತೆ ಬರಬಾರದು… ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು “ಒಂದಕ್ಕೆ” ಹೋಗುವಾಗ ಆತ “ನಾನೂ ಬರ್ತೇನೆ”ಎಂದು ರಾಗ ಎಳೆದಿದ್ದ…ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು…ಎಂದು ಒಕ್ಕೊರಲಿನಿಂದ ಹೇಳಿದ್ದೆವು.
ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು ‘ಹುಡುಗರು’..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್…ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ ‘ನೀನು ಹುಡುಗಿ’ ‘ಅವನು ಹುಡುಗ’ ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು.




