ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

5
ಸೆಪ್ಟೆಂ

ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)

-ಡಾ| ಜ್ಞಾನದೇವ್ ಮೊಳಕಾಲ್ಮುರು

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. “‘ ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ.” ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.

ಮತ್ತಷ್ಟು ಓದು »

3
ಸೆಪ್ಟೆಂ

ಕಾನೂನಿನಂಗಳ ೮ : ಕಿರುಕುಳ, ಹಿಂಸೆ, ದೌರ್ಜನ್ಯ, ಅತ್ಯಾಚಾರ!

 ಉಷಾ ಐನಕೈ  ಶಿರಸಿ

ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನಾಗಿ ನಡೆಯುತ್ತಿರುವುದು ಕಣ್ಣಿಗೆ ಕಾಣುವ ವಾಸ್ತವ, ಮಹಿಳೆಯರು ಸಬಲರಾಗಿದ್ದಾರೆ. ಸ್ವಾಭಿಮಾನಿಗಳಾಗಿದ್ದಾರೆ. ಆರ್ಥಿಕ ಹಾಗೂ ವೈಚಾರಿಕ ಸ್ವಾತಂತ್ರ್ಯವನ್ನು ಹೊಂದುತ್ತಿದ್ದಾರೆ. ಹೀಗಿದ್ದರೂ ಕಾನೂನು ಹಲವು ದೃಷ್ಟಿಯಲ್ಲಿ ಮಹಿಳೆಯರನ್ನು ಅಬಲೆಯರೆಂದೇ ಪರಿಗಣಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಮಹಿಳೆಯರ ಪ್ರಾಕೃತಿಕ ಲಕ್ಷಣ. ಮಹಿಳೆಯ ದೈಹಿಕ ರಚನೆ ಹಾಗೂ ಮಾನಸಿಕ ಸ್ಥರಗಳು ಪುರುಷರಿಗಿಂತ ಭಿನ್ನವಾಗೇ ಇವೆ. ಆದ್ದರಿಂದ ಕುಟುಂಬದಲ್ಲಿರಲಿ,  ಸಮಾಜದಲ್ಲಿರಲಿ ಅಥವಾ ಅವಳು ಕೆಲಸ ಮಾಡುವ ಕಾರ್ಯಕ್ಷೇತ್ರಗಳಲ್ಲಿರಲಿ ಪ್ರತಿಯೊಂದು ರಂಗದಲ್ಲೂ ಮಹಿಳೆಗೆ ಪುರುಷರಿಗಿಂತ ಬೇರೆಯದೇ ರೀತಿಯ ರಕ್ಷಣೆಯ ಅಗತ್ಯವಿದೆ. ಇವನ್ನೆಲ್ಲ ಮನಗಂಡು ಮಹಿಳೆಯರಿ ಗಾಗಿಯೇ  ಒಂದಿಷ್ಟು ಕಾನೂನುಗಳು ಅಸ್ತಿತ್ವಕ್ಕೆ ಬಂದಿವೆ.

 ಮಹಿಳಾ ದೌರ್ಜನ್ಯ

ಮಹಿಳಾ ದೌರ್ಜನ್ಯ ಎಂದರೆ ಮಹಿಳೆಯರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡೂ ರೀತಿಯಿಂದ ವಿನಾಕಾರಣ ಒತ್ತಡ ಹೇರುವುದು. ಹಾಗಾದರೆ ಈ ದೌರ್ಜನ್ಯಗಳ ಸಮರ್ಥನೆಗೆ ಮಾನ ದಂಡಗಳಾವವು? ದೈಹಿಕ ದೌರ್ಜನ್ಯಕ್ಕೆ ಕುರುಹುಗಳು ಸಿಗಬಹುದು. ಮಾನಸಿಕ ದೌರ್ಜನ್ಯಕ್ಕೆ ಸಾಕ್ಷಿ ಎಲ್ಲಿ? ಹಾಗಾಗಿ ಬಹುತೇಕ ಸಂದರ್ಭಗಳಲ್ಲಿ ಮಾನಸಿಕ ದೌರ್ಜನ್ಯಗಳಿಗೆ ಸಾಕ್ಷಾಧಾರಗಳಿಲ್ಲದೇ ಕೇವಲ ಆರೋಪ ಪ್ರತ್ಯಾರೋಪಗಳ ಹಂತದಲ್ಲೇ ನಿಂತುಬಿಡುತ್ತದೆ. ಮಹಿಳೆಯ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಹಿಂಸೆ, ಕೌಟುಂಬಿಕ ಹಿಂಸೆಗಳನ್ನೆಲ್ಲ ಕಾನೂನಿನ ಪರಿಭಾಷೆಯಲ್ಲಿ ‘ದೌರ್ಜನ್ಯ’ ಎಂದು ಪರಿಗಣಿಸಲಾಗುತ್ತದೆ. ಮೇಲಿನ ಎಲ್ಲವನ್ನೂ ಕಾನೂನು ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ.

ಮತ್ತಷ್ಟು ಓದು »

27
ಆಗಸ್ಟ್

ಕಾನೂನಿನಂಗಳ ೭ : ಗಂಡ-ಹೆಂಡತಿ ಉತ್ತರ ದಕ್ಷಿಣ- ವಿಚ್ಛೇದನ

-ಉಷಾ ಐನಕೈ  ಶಿರಸಿ

ವಿವಾಹ  ಒಂದು ಪವಿತ್ರ ಧಾರ್ಮಿಕ ಸಂಸ್ಕಾರ. ಇದರ ಹಿಂದೆ ಮದುವೆಯಾದ ಗಂಡು -ಹೆಣ್ಣಿಗೆ ಅವರದೇ ಆದ ಸಾಮಾಜಿಕ ಹಾಗೂ ಭಾವನಾತ್ಮಕ ಬದ್ಧತೆ ಇರುತ್ತದೆ. ಕಷ್ಟವಿರಲಿ, ಸುಖವಿರಲಿ ಗಂಡ-ಹೆಂಡತಿ ಸಮನಾಗಿ ಹಂಚಿ ಕೊಂಡು ಸಹಬಾಳ್ವೆ ನಡೆಸಬೇಕೆಂಬುದೇ ವಿವಾಹ ಬಂಧನದ ಹಿಂದಿರುವ ತತ್ವ. ಅದಕ್ಕಾಗೇ ಪತ್ನಿಗೆ ‘ಅರ್ಧಾಂಗಿ’ ಎಂದು ಕರೆದಿರುವುದು. ಆದರೆ ಆಧುನಿಕ ಯುಗದಲ್ಲಿ ಇದು ಸಾಧ್ಯವೇ? ಬದಲಾದ ಕಾಲ, ಆಧುನಿಕ ಶಿಕ್ಷಣ, ವೈಚಾರಿಕ ಸ್ವಾತಂತ್ರ್ಯ, ಸಮಾನತೆಯ ಹೋರಾಟ ಮುಂತಾದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಉಳಿದುಕೊಳ್ಳಲು ಸಾಧ್ಯವೇ? ಆಧುನಿಕ ಸಂಪರ್ಕ, ವೈವಿಧ್ಯಮಯ ಮಾಧ್ಯಮಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಹಂಬಲಗಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ, ಸಹನೆ, ಸಹಬಾಳ್ವೆ ಸ್ವಾಭಾವಿಕವಾಗೇ ಶಿಥಿಲವಾಗತೊಡಗಿವೆ. ವೈಯಕ್ತಿಕ ಪ್ರತಿಷ್ಠೆ ದಿನದಿಂದ ದಿನಕ್ಕೆ ಗಂಡು-ಹೆಣ್ಣು ಇಬ್ಬರಲ್ಲೂ ಹೆಚ್ಚಾಗತೊಡಗಿವೆ. ಗಂಡ-ಹೆಂಡತಿಯ ನಡುವೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಕಲಹ, ಅಂತರವೇ ಇಲ್ಲದಿದ್ದರೂ ಕಲಹ. ಹೀಗೆ ಹಲವಾರು ಕಾರಣಗಳಿಂದ ವಿವಾಹ ವಿಚ್ಛೇದನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ದಾಂಪತ್ಯದ ನಡುವೆ ವಿರಸ ಹಿಂದೆಯೂ ಇತ್ತು. ಆದರೆ ಆಗ ನ್ಯಾಯಾಲಯದ ಮೆಟ್ಟಿ ಲೇರುವ ಅವಕಾಶ ಮತ್ತು ಧೈರ್ಯ ಎರಡೂ ಇಲ್ಲವಾಗಿತ್ತು. ಅದರಲ್ಲೂ ಹೆಣ್ಣು ದನಿ ಇಲ್ಲದೇ ಸಹಿಸಿಕೊಂಡೇ ಬಾಳಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೂ ಕಾನೂನಿಗೆ ಮೊರೆಹೋಗುವುದು ಸ್ವಾಭಾವಿಕವಾಗಿದೆ. ಮಹಿಳಾ ಶೋಷಣೆಯನ್ನು ತಪ್ಪಿಸುವ ಸಲುವಾಗಿ ಹುಟ್ಟಿ ಕೊಂಡ ಕಾನೂನುಗಳು ಇದಕ್ಕೆ ಅವಕಾಶ ಮಾಡಿ ಕೊಡುತ್ತಿವೆ.

ಮತ್ತಷ್ಟು ಓದು »

23
ಆಗಸ್ಟ್

ನನ್ನ ಪ್ರೀತಿಯ ಸ್ಯಾಮ್ ಅಲೆ… ಅವಳು ಬೀಸಿದಳು ಬಲೆ…

-ಸುಗುಣ ಮಹೇಶ್

ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!
ಹೂ ನಾವುಗಳು ವಿದ್ಯಾವಂತರು, ಬುದ್ಧಿವಂತರೇ ಹಿಂಗೆ ಮಾಡಿದ್ರೆ ಹೇಗೆ… ಆದಷ್ಟು ಸರ್ಕಾರಿ ವಾಹನಗಳನ್ನ ಉಪಯೋಗಿಸಿಕೊಂಡು ಓಡಾಡಬೇಕು… ಜನ ಎಲ್ಲರೂ ಕಾರ್, ಬೈಕ್ ಅಂತಲೇ ಓಡಾಡ್ತಾ ಇದ್ದು, ಸ್ವಲ್ಪನು ಮಯ್ಯಿ ನೋಯಿಸೋಕ್ಕೆ ಇಷ್ಟಪಡದೇ ಹೋದ್ರೇ ಹೆಂಗೆ.. ಹೀಗ್ ಮಾಡೇ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹೋಗಿರೋದು… ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗಿರೋದು.
ಅಕ್ಕನ ಮಾತಿಗೆ ಬಾರಿ ಗಾಂಧಿವಾದದ ಮಾತು ಆಡಿ ಮಧ್ಯಾಹ್ನ ಮೆಜೆಸ್ಟಿಕ್ ಬಸ್ ಹತ್ತಿದ್ದೆ… ಅದು ಆಗಲೆ ೨ಗಂಟೆ ಊಟ ಬೇರೆ ಬಿಸಿಬಿಸಿ ತಿಂದಿದ್ದೇ… ಮೆಜೆಸ್ಟಿಕ್ ಬೇಡ ಯಲಹಂಕಗೇ ಸೀದ ಹೋಗುವ ಬಸ್ಗೆ ಹೋಗಿ ಅಲ್ಲಿಂದ ದೇವನಹಳ್ಳಿಗೆ ಹೋಗು ಅಂತ ಅಂದ್ರು ಮನೆನಲ್ಲಿ… ಮಗ ಮೆಜೆಸ್ಟಿಕ್ ನೋಡಿಲ್ಲ ಅವನಿಗೂ ತೋರಿಸಿದ ಹಾಗೆ ಆಗುತ್ತೆ ಎಂದು ಒಣಜಂಭವೋ, ಪ್ರತಿಷ್ಠೆಯೋ ಮಾಡಿ ಬಸ್ ಹತ್ತಿದೆ. ಮೆಜೆಸ್ಟಿಕ್ ಗೆ ೨೪೪ಸಿ ಬಸ್ ಹತ್ತಿ ಇಳಿಯುವ ಮುನ್ನ ತಾಮುಂದು ನಾಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಮೈಮೇಲೆ ಬಿದ್ದು ಇಳಿದಿದ್ದಾಯ್ತು…
21
ಆಗಸ್ಟ್

ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?

-ಚಕ್ರವರ್ತಿ ಸೂಲಿಬೆಲೆ

”ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್‌ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್‌ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು”

ವಾಸು ದೇಶ್‌ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ ಕಥೆಯಂತಾಗಿ ಮುಗಿದುಹೋಗುತ್ತಿತ್ತು. ಹಾಗಾಗಲಿಲ್ಲ. ಊರಿನ ಕೆಲಸ ವಾಸುವನ್ನು ಬಿಡಲಿಲ್ಲ. ಬೆಂಗಳೂರು ಎಲ್ಲರನ್ನು ಕಾಡಿದಂತೆ ಮೋಹವಾಗಿ ಕಾಡಲಿಲ್ಲ.

ಉತ್ತರ ಕರ್ನಾಟಕಕ್ಕೆ ನೆರೆ ಹಾವಳಿ ಅಪ್ಪಳಿಸಿದಾಗ ಇನ್ಫೋಸಿಸ್ ಗುಲ್ಬರ್ಗಾದ ನೆರೆ ಪೀಡಿತ ಪ್ರದೇಶಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಮನೆ ಕಟ್ಟಿಕೊಡುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಮುಂದೆ ಬಂತು. ಸ್ಥಳೀಯವಾಗಿ ಸಾಥ್ ಕೊಡಲು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಂತಹ ಪ್ರಾಮಾಣಿಕ ಸಂಸ್ಥೆಯೇನೋ ಸಿಕ್ಕಿತು. ಆದರೆ ಈ ಕೆಲಸವನ್ನು ತನ್ನದೆಂದುಕೊಂಡು ಸಮರ್ಥವಾಗಿ ಮಾಡುವವರು ಯಾರಾದರೊಬ್ಬರು ಬೇಕಲ್ಲ? ಆಗ ಇನ್ಫೋಸಿಸ್‌ಗೆ ಕಂಡ ಬೆರಗುಗಣ್ಣಿನ ಇಂಜಿನಿಯರ್ ವಾಸು ದೇಶ್‌ಪಾಂಡೆ. ಅಮೆರಿಕಾದಲ್ಲೆಲ್ಲ ಇದ್ದು ಬಂದ ಹುಡುಗ; ಮತ್ತೆ ಮರಳಿ ಹೊರಡಲು ಸಜ್ಜಾಗಿದ್ದ. ಆದರೆ ಈಗ ಹೊಸತೊಂದು ಆಸಕ್ತಿಕರ ಯೋಜನೆ ಕೈಬೀಸಿ ಕರೆಯಿತು. ಹುಟ್ಟೂರಿನ, ಜಿಲ್ಲೆಯ, ಕೊನೆಗೆ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ತನ್ನ ಭಾಗದ ಸೇವೆ ಮಾಡುವ ಅವಕಾಶ ಬಯಸಿಬಂದಾಗ ಆಗುವುದಿಲ್ಲ ಎನ್ನುವುದು ಹೇಗೆ?

ಮತ್ತಷ್ಟು ಓದು »

15
ಆಗಸ್ಟ್

ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?

– ಸಂತೋಶ್ ತಮ್ಮಯ್ಯ

ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.

ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ.

ಮತ್ತಷ್ಟು ಓದು »

15
ಆಗಸ್ಟ್

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು…?

– ಅಶ್ವಿನ್ ಅಮೀನ್

ಆಗಸ್ಟ್ 14,ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು ‘ಅಖಂಡ ಭಾರತ ಸಂಕಲ್ಪ ದಿನ’ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ… ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ… ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.
ಮತ್ತಷ್ಟು ಓದು »

14
ಆಗಸ್ಟ್

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ…

-ಅಶೋಕ್ ಕೆ ಆರ್

ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಟೀಂ ವರ್ಕಿನ ತಂಡವೇ ಸರಿಯಿರಲಿಲ್ಲ! –

ರಿಲೇ ಓಟದಲ್ಲಿ ಓಡುವ ನಾಲ್ವರ ಪಾತ್ರವೂ ಹಿರಿದು. ಒಬ್ಬನ ಓಟ ಕೊಂಚ ನಿಧಾನವಿರಬಹುದು, ಮತ್ತೊಬ್ಬ ಉಳಿದೆಲ್ಲರಿಗಿಂತ ವೇಗಿಯಿರಬಹುದು; ಕೊನೆಗೆ ಎಲ್ಲರೂ ಓಡಿದರೆ ಮಾತ್ರ ತಂಡ ಗೆಲುವು ಸಾಧಿಸಲು ಸಾಧ್ಯ. ಈ ಮೂಲಭೂತ ಅಂಶವೇ ಅಣ್ಣಾ ಹಜಾರೆ ಆರಂಭಿಸಿದ ಚಳುವಳಿಯಲ್ಲಿ ಇಲ್ಲವಾಗಿತ್ತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲಾ, ಕಿರಣ್ ಬೇಡಿಯವರ ಉದ್ದೇಶ ಸರಿಯಾಗಿತ್ತೇನೋ ಆದರೆ ನಡೆದ ಹಾದಿಯಲ್ಲಿ ಜೊತೆ ಮಾಡಿಕೊಂಡ ತಂಡ? ಎಡವಿ ಬಿದ್ದವರನ್ನು ಮೇಲೆತ್ತುವ ಗೋಜಿಗೆ ಹೋಗದೆ ನಗುತ್ತಾ ಮುಂದೆ ಸಾಗುವವರ ತಂಡ ಕಟ್ಟಿಕೊಂಡು ಚಳುವಳಿಯನ್ನು ಬೆಳೆಸಿ ಗೆಲ್ಲಲಾದೀತೇ? ಮೇಧಾವಿಗಳೆನ್ನಿಸಿಕೊಂಡವರು, ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಜನರೇ ಇದ್ದ ಅಣ್ಣಾ ತಂಡದಲ್ಲಿ ಭ್ರಷ್ಟಾಚಾರವನ್ನು ಅರ್ಥೈಸುವ ದೃಷ್ಟಿಕೋನವೇ ಸರಿಯಿರಲಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರವರ್ಗವಷ್ಟೇ ಭ್ರಷ್ಟರ ಕೂಟ ಎಂಬ ತೀರ್ಮಾನಕ್ಕೆ ಬಂದ ಚಳುವಳಿಯಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಸಾಮಾನ್ಯ ಜನರೂ ಭ್ರಷ್ಟಾಚಾರದ ಬಹುಮುಖ್ಯ ಭಾಗ. ಅವರು ಬದಲಾಗದೆ – ಅವರನ್ನು ಬದಲಿಸಲಾಗದೆ – ಚಳುವಳಿ ಗೆಲ್ಲಲಾಗದು ಎಂದಿವರಿಗೆ ತಿಳಿಯಲಿಲ್ಲ.

ಮತ್ತಷ್ಟು ಓದು »

13
ಆಗಸ್ಟ್

ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?

– ರಾಕೇಶ್ ಶೆಟ್ಟಿ

ಮಂಗಳೂರು ಹೋಂ-ಸ್ಟೇ ಮೇಲೆ ದಾಳಿ ಮಾಡಿದವರನ್ನು ‘ಆಧುನಿಕ ದುಶ್ಯಾಸನರು’ ಅಂದಾಗ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೈ ಮುಟ್ಟುವುದು,ಹೊಡೆಯುವುದು ಇಂತ ವಿಕೃತಿ ಮಾಡುವವರನ್ನು ದುಶ್ಯಾಸನರೆಂದರೆ ತಪ್ಪಿಲ್ಲ ಅನ್ನಿಸುತ್ತದೆ ಅನ್ನಿಸಲೇಬೇಕು.ಆದರೆ “ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?”.ಹಾಗಂತ ದೃತರಾಷ್ಟ್ರ,ದುರ್ಯೋಧನರ ನೆಪವೊಡ್ಡಿ ದುಶ್ಯಾಸನರ ನಡವಳಿಕೆಯನ್ನು ಬೆಂಬಲಿಸಬೇಕಿಲ್ಲ,ಬೆಂಬಲಿಸುವುದು ಆರೋಗ್ಯವಂತ ಸಮಾಜದ ಲಕ್ಷಣವೂ ಅಲ್ಲ. ಅಂದು ಮಹಾಭಾರತದ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಂತೆ ಅಪ್ಪಣೆ ಕೊಟ್ಟಿದ್ದು ದುರ್ಯೋಧನ ಮತ್ತು ಅದನ್ನ ಕೇಳಿಯೂ ತೆಪ್ಪಗೆ ಕೂತಿದ್ದು ಅಪ್ಪ ಅನ್ನಿಸಿಕೊಂಡ ಧೃತರಾಷ್ಟ್ರ ಅಲ್ಲವೇ? ಆಗಲೂ ಈಗಿನಂತೆ ಎಲ್ಲ ಗೊತ್ತಿದ್ದೂ ನಮ್ಮ ಸೆಕ್ಯುಲರ್ಗಳಂತೆ ಕಂಡು ಕಾಣದಂತಿದ್ದವರು ಉಳಿದೆಲ್ಲರು.ಒಬ್ಬ ಶ್ರೀ ಕೃಷ್ಣನನ್ನು ಬಿಟ್ಟು..! ಇಂದಿನ ಭಾರತದಲ್ಲಿ ದುಶ್ಯಾಸನರನ್ನೇನೋ ಮಾಧ್ಯಮಗಳು ತೋರಿಸಿವೆ.ಆದರೆ ಧೃತರಾಷ್ಟ್ರ,ದುರ್ಯೋಧನರೆಲ್ಲಿ? ದುಶ್ಯಾಸನ ಅನ್ನುವವನ ಹೆಸರು ಈ ಪರಿ (ಕು)ಖ್ಯಾತಿ ಪಡೆಯಲು ಕಾರಣ  ವಸ್ತ್ರಾಪಹರಣ ಮಾಡಲು ಹೇಳಿದ ಅವನಣ್ಣ ದುರ್ಯೋಧನನಲ್ಲವೇ? ದುರ್ಯೋಧನ,ದುಶ್ಯಾಸನರಿಗೆ ಮೌನ ಸಮ್ಮತಿ ಕೊಟ್ಟ ದ್ರುತರಾಷ್ಟ್ರನು ಸೇರಿ ಇಡಿ ಕುರು ಸಭೆಯಲ್ಲವೇ? ಹಾಗಿದ್ದರೆ ಕರಾವಳಿಯ ಮಹಾಭಾರತದಲ್ಲಿ ದುಶ್ಯಾಸನರ ಸೃಷ್ಟಿಗೆ ಕಾರಣವಾದ ದುರ್ಯೋಧನ ಯಾರು?

ಮತ್ತಷ್ಟು ಓದು »

10
ಆಗಸ್ಟ್

ರಾಮಲೀಲಾ ಮೈದಾನದಿಂದ, ನೇರವಾಗಿ….

-ಚಕ್ರವರ್ತಿ ಸೂಲಿಬೆಲೆ

ನಾನೀಗ ರಾಮಲೀಲಾ ಮೈದಾನದಲ್ಲಿದ್ದೇನೆ. ೭ನೇ ತಾರೀಖಿನಿಂದಲೇ ಆಂದೋಲನಕ್ಕಾಗಿ ಜನಸಾಗರ ಹರಿದುಬರತೊಡಗಿತ್ತು. ಇಂದು ಇಲ್ಲಿ ಸೇರಿರುವ ಸಂಖ್ಯೆ ನಿರೀಕ್ಷೆಗೂ ಮೀರಿದ್ದು. ರಾಮದೇವ ಬಾಬಾ ನೇತೃತ್ವದ ಈ ಆಂದೋಲನದ ಕುರಿತಂತೆ ಕೆಲವು ಒಳನೋಟಗಳು ಇಲ್ಲಿವೆ…

ಎಲ್ಲರ ಚಿತ್ತ ರಾಮಲೀಲಾ ಮೈದಾನದತ್ತ! ಹಾಗಂತ ನೋಡಿದರೆ ಅನ್ನಿಸುತ್ತಿದೆ. ಒಂಭತ್ತನೆ ತಾರೀಖಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅದಾಗಲೇ ಜನಸಾಗರ ಬಂದು ಸೇರುತ್ತಿದೆ. ಏಳನೆ ತಾರೀಖಿನ ವೇಳೆಗಾಗಲೇ ಐದಾರು ಸಾವಿರ ಕಾರ್ಯಕರ್ತರು ವೇದಿಕೆಯ ಹಿಂದೆ ಮುಂದೆ ಗಿಜಿಗುಡುತ್ತ ನಿಂತಿದ್ದರು. ತಯಾರಿಗಳು ಬಿರುಸಾಗಿ ನಡೆದಿದ್ದವು. ಕಾರ್ಯಕರ್ತರ ಹೆಸರು ನೋಂದಾಯಿಸುವುದರಿಂದ ಹಿಡಿದು ವೇದಿಕೆಯ ರಕ್ಷಣೆಯವರೆಗೆ ಕೆಲಸಗಳನ್ನು ಹಂಚಲಾಗುತ್ತಿತ್ತು. ಅಚ್ಚರಿಯೆಂದರೆ ಪ್ರತಿ ವಿಭಾಗಕ್ಕೂ ನೂರು- ನೂರೈವತ್ತು ಜನರ ತಂಡ. ಒಟ್ಟಾರೆ ಲೆಕ್ಕ ಹಾಕಿದರೆ, ಅಣ್ಣಾ ತಂಡದ ಹೋರಾಟಕ್ಕೆ ಅದೆಷ್ಟು ಜನ ಬಂದಿದ್ದರೋ ಅಷ್ಟು ಕಾರ್ಯಕರ್ತರು ಪೂರ್ವ ತಯಾರಿಗೆಂದೇ ಇಲ್ಲಿಗೆ ಬಂದಿದ್ದಾರೆ. ಬಾಬಾ ರಾಮದೇವ್‌ಜೀ ಇದನ್ನೊಂದು ಐತಿಹಾಸಿಕ ನಿರ್ಣಾಯಕ ಹೋರಾಟ ಎಂದಿದ್ದು ತಪ್ಪಲ್ಲವೇನೋ ಎಂದು ಇಲ್ಲಿನ ಜನರನ್ನು ನೋಡಿದಾಗ ಭಾಸವಾಗಿಬಿಡುತ್ತದೆ.

ಯಾವುದೇ ಹೋರಾಟ ಒಂದು ದಿನ ಅಥವಾ ಕೆಲವು ವಾರಗಳದ್ದಲ್ಲ. ಅದೊಂದು ಸುದೀರ್ಘ ಯಾತ್ರೆ. ಅದರಲ್ಲೂ ಈ ಬಗೆಯ ಕಾದಾಟಗಳಂತೂ ದಶಕಗಳಷ್ಟು ಆಳದ ಬೇರುಗಳನ್ನು ಇಳಿ ಬಿಟ್ಟುಕೊಳ್ಳಲಿಲ್ಲವೆಂದರೆ ಫಲ ನೀಡುವುದು ಕಷ್ಟ. ಸಾಮರ್ಥ್ಯ ನರ ನಾಡಿಗಳಲ್ಲಿ ಬೆರೆತುಕೊಂಡು ಹರಿಯಲಿಲ್ಲವೆಂದರೆ, ಹೋರಾಟ ದೀರ್ಘ ಕಾಲದವರೆಗೆ ಮುಂದುವರೆಯುವುದೂ ಅಷ್ಟೇ ಕಷ್ಟ. ಅದಕ್ಕೇ ಗಾಂಧೀಜಿ ವಿಶೇಷ ಅನ್ನಿಸೋದು. ಹತ್ತಿಪ್ಪತ್ತು ವರ್ಷಗಳ ಕಾಲ ಜನರ ನಾಡಿ ಹಿಡಿಹಿಡಿದು ಅಧ್ಯಯನ ಮಾಡಿ ವಿಶ್ವಾಸ ಬಲಿತಾಗ ಹೋರಾಟಕ್ಕಿಳಿಯುತ್ತಿದ್ದವರು ಅವರು. ಹಾಗೆ ಹೋರಾಟಕ್ಕಿಳಿವಾಗ ಅತ್ಯಂತ ಸಹಜ ಹಾಗೂ ಜನರಿಗೆ ಹತ್ತಿರವಾದ ವಿಚಾರಗಳನ್ನಿಟ್ಟುಕೊಂಡೇ ಕದನ ಭೂಮಿಗೆ ಬರುತ್ತಿದ್ದರು. ಹೋರಾಟ ಕಾವು ಪಡಕೊಳ್ಳುತ್ತಿತ್ತು. ಉಪ್ಪಿನ ಸತ್ಯಾಗ್ರಹ ಅಂಥದ್ದೇ ಹೋರಾಟ ತಾನೆ? ಸ್ವತಃ ಗಾಂಧೀಜಿಯ ಕಮ್ಯಾಂಡರ್ ಇನ್ ಚೀಫ್ ಪಟೇಲರು ಲೇವಡಿ ಮಾಡಿದ್ದ ಹೋರಾಟ ಅದು. ಆದರೆ ಜನರು ತೆರಿಗೆಯ ವಿರುದ್ಧ ತಿರುಗಿಬಿದ್ದರು. ಕ್ರಮೇಣ ದೊಡ್ಡ ಆಂದೋಲನವೆ ಶುರುವಾಯ್ತು. ದೇಶ ಗೆಲುವಿನತ್ತ ಹೊರಳಿತು.
ಮತ್ತಷ್ಟು ಓದು »