ಹಿಂದೂ-ವಿರೋಧಿ ಮಾಧ್ಯಮ: ಸೃಷ್ಟಿ ಮತ್ತು ಸ್ಥಿತಿ
– ಪ್ರೇಮಶೇಖರ
ಪ್ರಕರಣ ೧: ಪ್ರಮುಖ ಕನ್ನಡ ದೈನಿಕವೊಂದರಲ್ಲಿ ಸೌದಿ ಅರೇಬಿಯಾದ ಬಗ್ಗೆ ಪರಿಚಯಾತ್ಮಕ ಲೇಖನವೊಂದು ಪ್ರಕಟವಾಗುತ್ತದೆ. ಅಚ್ಚರಿಯೆಂದರೆ ಮರುದಿನವೂ ಅದೇ ಲೇಖನ ಮತ್ತೆ ಕಾಣಿಸಿಕೊಳ್ಳುತ್ತದೆ! ಅದರ ಕೆಳಗೆ ಹೀಗೊಂದು ವಿವರಣೆ: “ನಿನ್ನೆಯ ದಿನ ಸೌದಿ ಅರೇಬಿಯಾವನ್ನು ಕುರಿತು ನೀಡಿದ ವಿವರಣೆಯಲ್ಲಿ ಮಹಮದ್ ಪೈಗಂಬರ್ ಮೆಕ್ಕಾದಿಂದ ಮದೀನಾಕ್ಕೆ ಕ್ರಿ.ಶ. ೬೨೨ರಲ್ಲಿ ಓಡಿಹೋದರು. ಅಂದಿನಿಂದ ಹಿಜ್ರಾ ಶಕೆ ಪ್ರಾರಂಭವಾಗುತ್ತದೆ ಎಂದು ಪ್ರಕಟವಾಗಿತ್ತು.ಇದರಿಂದ ಅನೇಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಪತ್ರಿಕೆ ಕ್ಷಮೆ ಯಾಚಿಸುತ್ತದೆ ಹಾಗೂ ಇಂದು ಅದೇ ಲೇಖನವನ್ನು ತಿದ್ದಿ ಪ್ರಕಟಿಸಲಾಗಿದೆ.” ಮರುಪ್ರಕಟವಾಗಿದ್ದ ಲೇಖನದಲ್ಲಿ ಪೈಗಂಬರರು ಮದೀನಾಗೆ ಓಡಿಹೋದ ಬಗೆಗಿನ ಒಂದು ಸಾಲು ಮಾಯವಾಗಿರುತ್ತದೆ.
ಪ್ರಕರಣ ೨: ಕೆಲದಿನಗಳ ನಂತರ ಅದೇ ಪತ್ರಿಕೆಯಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಲೇಖನವೊಂದು ಪ್ರಕಟವಾಗುತ್ತದೆ.ವಿವೇಕಾನಂದರ ದೈಹಿಕ ಸಮಸ್ಯೆಗಳು,ಬಲಹೀನತೆಗಳ ಬಗ್ಗೆ ಅದರಲ್ಲಿನ ವಿಷಯಗಳಾವುವೂ ಹೊಸದಾಗಿರುವುದಿಲ್ಲ. ಅವೆಲ್ಲವೂ ಕೊಲ್ಕತಾದ ರಾಮಕೃಷ್ಣ ಮಿಶನ್ ಮತ್ತು ಅಲ್ಮೋರಾದ ಅದ್ವೈತಾಶ್ರಮಗಳ ಪ್ರಕಟಣೆಗಳಲ್ಲೇ ಇವೆ.ಆದರೆ ಲೇಖನದ ಭಾಷೆ, ಕೆಲ ಪದಗಳು ಅಕ್ಷೇಪಾರ್ಹವಷ್ಟೇ ಅಲ್ಲ, ಪತ್ರಿಕೆಯ ಘನತೆಗೂ ಶೋಭೆ ತರುವಂತಿರುವುದಿಲ್ಲ.ಇದರಿಂದಾಗಿ ಹಲವರ ಭಾವನೆಗಳಿಗೆ ಧಕ್ಕೆಯಾಗುತ್ತದೆ.ಅದು ರಾಜ್ಯದ ವಿವಿಧೆಡೆ ಸಾರ್ವಜನಿಕವಾಗಿಯೂ ವ್ಯಕ್ತವಾಗುತ್ತದೆ.ಅದಕ್ಕೆ ಪತ್ರಿಕೆಯ ಪ್ರತಿಕ್ರಿಯೆ? ಒಂದಕ್ಷರದ ಕ್ಷಮಾಯಾಚನೆಯೂ ಇಲ್ಲ!
ಗಾಂಧಿ ಮತ್ತು ದೇವನೂರ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ಮೊನ್ನೆ ಗಾಂಧಿ ನೆನಪಾದರು. ನೆನಪಾದರು ಎನ್ನುವುದು ಅವರು ಮರೆತುಹೋಗಿರಬಹುದು ಎಂದೂ ಧ್ವನಿಸಬಹುದು. ನೆನಪು ಮತ್ತು ಮರೆತುಹೋಗುವಿಕೆ ಈ ಎರಡೂ ಸ್ಥಿತಿಗಳಲ್ಲಿ ಗಾಂಧಿ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುವರು. ಇದು ಗಾಂಧಿಯಂಥ ಗಾಂಧಿಯಿಂದ ಮಾತ್ರ ಸಾಧ್ಯವಾಗುವಂತಹದ್ದು. ಏಕೆಂದರೆ ಗಾಂಧಿ ಸೂಟು ಬೂಟು ಧರಿಸಿ, ಪಂಚೆ ಉಟ್ಟುಕೊಂಡು ಮತ್ತು ಲಂಗೋಟಿ ಸಿಕ್ಕಿಸಿಕೊಂಡು ಭಾರತೀಯ ಜೀವನಕ್ರಮದ ಎಲ್ಲ ವರ್ಗಗಳನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡವರು. ಒಬ್ಬನೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದು ಅದು ಗಾಂಧೀಜಿಯಂಥ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವ ಬಹುದೊಡ್ಡ ಸಾಮಾಜಿಕ ಪಲ್ಲಟ.
ಇನ್ನು ಗಾಂಧಿ ಏಕೆ ನೆನಪಾದರು ಎನ್ನುವ ವಿಷಯಕ್ಕೆ ಬರುತ್ತೇನೆ. ಆವತ್ತು ದಲಿತ ಸಂಘರ್ಷ ಸಮಿತಿಯವರ ಮೆರವಣಿಗೆ ರಸ್ತೆಯ ಮೇಲೆ ನಡೆದು ಹೋಗುತ್ತಿತ್ತು. ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ಜಯಘೋಷ ಅಲ್ಲಿ ಮೊಳಗುತ್ತಿತ್ತು. ಜೊತೆಗೆ ಬುದ್ಧ-ಬಸವ-ಅಂಬೇಡ್ಕರರ ಆಳೆತ್ತರದ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಈ ಮೂವರು ಮಾಡಿದ ಪ್ರಯತ್ನ ಮತ್ತು ಹೋರಾಟ ಅದು ಚರಿತ್ರೆಯ ಪುಟಗಳಲ್ಲಿ ಸದಾಕಾಲ ಅಳಿಸಲಾಗದ ಐತಿಹಾಸಿಕ ಪ್ರಯತ್ನವಾಗಿ ದಾಖಲಾಗಿ ಉಳಿದಿದೆ. ಆದರೆ ಆ ಸಂದರ್ಭ ಅಲ್ಲಿನ ಭಾವಚಿತ್ರಗಳಲ್ಲಿ ಮತ್ತು ಅವರು ಮೊಳಗಿಸುತ್ತಿದ್ದ ಜಯಘೋಷಗಳಲ್ಲಿ ಗಾಂಧಿ ಅನುಪಸ್ಥಿತಿ ನನಗೆ ಬಹುಮುಖ್ಯ ಕೊರತೆಯಾಗಿ ಕಾಣಿಸಿತು.
ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?
– ರಾಕೇಶ್ ಶೆಟ್ಟಿ
ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?
ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.
ರೈತರ ಆತ್ಮಹತ್ಯೆ, ಹೀಗೊಂದು ಚಿಂತನೆ
– ಭರತ್ ಎನ್ ಶಾಸ್ತ್ರಿ
ಆತ್ಮಹತ್ಯೆಗಳು ಘೋರನಿರ್ಧಾರಗಳು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಸಾವು ತರುವ ಶೂನ್ಯತೆ, ಮತ್ತು ಬಂಧುಮಿತ್ರರಿಗೆ ಅಥವಾ ಪ್ರೀತಿಪಾತ್ರರಿಗೆ ತರುವ ಯಾತನೆ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಆತ್ಮಹತ್ಯೆ ತರುವ ಸಂಕಟ ಮಾತ್ರ ಹಲವು ಆಯಾಮಗಳದ್ದು.
ಆದರೆ, ಭಾರತದಲ್ಲಿ ರೈತರ ಆತ್ಮಹತ್ಯೆಗಳು ವಿಚಿತ್ರಕಾರಣಗಳಿಂದ ಮಾಧ್ಯಮಗಳ ದೊಡ್ಡಗಂಟಲಿನಿಂದ ಜನರ ಗಮನ ಸೆಳೆಯುತ್ತವೆ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕಲು ನಡೆಸಿದ ವೈಜ್ಞಾನಿಕ ಮತ್ತು ಭಾವೋದ್ವೇಗರಹಿತ ಅಧ್ಯಯನಗಳು ಒಂದೋ ಅವಗಣಿಸಲ್ಪಟ್ಟಿವೆ, ಅಥವಾ ರಾಜಕೀಯ ಕಾರಣಗಳಿಂದ ಆಳುವವರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿವೆ.
ಹೆಚ್ಚುತ್ತಿರುವ ಜನಸಂಖ್ಯೆ, ದುಡಿಯುವ ಯುವಜನತೆಯ ಕೈಗೆ ಉದ್ಯೋಗಗಳ ಅಭಾವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಸಿಯುತ್ತಿರುವ ಮಹಾನಗರ/ ನಗರಗಳು ಇವೆಲ್ಲ ಸಮಸ್ಯೆಯ ಜತೆ ಸಕ್ಷಮವಲ್ಲದ ಕೃಷಿಕ್ಷೇತ್ರ ಕೂಡ ಭಾರತದ ಹಿಂದುಳಿಕೆಯ ಕಾರಣವಾಗಿದೆ.
ಆತ್ಮಹತ್ಯೆಗಳ ಬಗ್ಗೆ ಭಾರತದ ಒಟ್ಟೂ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಮೂರುದಶಕಗಳ ಹಿಂದೆ ಸುಮಾರು ೪೦,೦೦೦(ಒಂದು ವರ್ಷಕ್ಕೆ) ದಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆ ೨೦೦೯ ಕ್ಕೆ ೧೨೭,೧೫೧ ಕ್ಕೆ ಏರಿತು. ಅದೇ ೨೦೧೩ ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ೧,೩೪,೭೯೯! ಈ ಐದು ವರ್ಷಗಳಲ್ಲಿ ಕರ್ನಾಟಕದ ಕೊಡುಗೆ ಹತ್ತಿರ ಹತ್ತಿರ ೮.೪%. ಕರ್ನಾಟಕದಲ್ಲಿ ೨೦೦೯ ರ ವರ್ಷದಲ್ಲಿ ಸಂಭವಿಸಿದ ಆತ್ಮಹತ್ಯೆಗಳು ಸುಮಾರು ೧೦,೬೮೦. ಇದರಲ್ಲಿ ರೈತರ ಸಂಖ್ಯೆ ೩೩೭, ಎಂದರೆ ೩.೧೫%. ಇದರ ಅರ್ಥ ಪ್ರತಿ ೩೦ ಆತ್ಮಹತ್ಯೆಗಳಲ್ಲಿ ಒಬ್ಬ ರೈತನ ಜೀವನಷ್ಟವಾಗಿದೆ. ಇನ್ನುಳಿದವರ ವೃತ್ತಿ ಏನಿತ್ತು? ಸೋಜಿಗವೆಂದರೆ ರೈತರ ಆತ್ಮಹತ್ಯೆಯ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿ ಮಿಕ್ಕ ವೃತ್ತಿಯಲ್ಲಿರುವವರ ಬಗ್ಗೆ ಸಿಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಾಫ್ಟ್ ವೇರ್ ಉದ್ಯಮದಲ್ಲಿ ಮಿತಿಮೀರಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು ಎಂದು ನೀವು ಹುಡುಕಾಡಿದರೆ ಅಂಕಿ-ಅಂಶಗಳನ್ನು ಪಡೆಯಲು ಕಷ್ಟ ಪಡಬೇಕಾಗುತ್ತದೆ!
ಐಡಿಯಾಲಜಿ,ಚಿಂತನೆ ಮತ್ತು ಜೀವನದ ವಾಸ್ತವಗಳು
– ಮು.ಅ ಶ್ರೀರಂಗ,ಬೆಂಗಳೂರು
ಡಾ. ಕಿರಣ್ ಎಂ ಗಾಜನೂರು ಅವರು ೧೩-೪-೧೫ರ ಪ್ರಜಾವಾಣಿ ದಿನಪತ್ರಿಕೆಯ ‘ಸಂಗತ’ ಕಾಲಂನಲ್ಲಿ ‘ಮೋಡಿ’ಯಿಂದ ಬಿಡಿಸಿಕೊಳ್ಳಿ ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಲೇಖನಕ್ಕೆ ಇದೊಂದು ಪ್ರತಿಕ್ರಿಯಾತ್ಮಕ ಸಹಸ್ಪಂದನ.
‘ಶ್ರಮಸಹಿತ ಸರಳ ಬದುಕು, ಸುಂದರ ಬದುಕು’ ಎಂಬ ತತ್ವವನ್ನು ಸಾರುವ ಸಲುವಾಗಿ ರಂಗಕರ್ಮಿ ಪ್ರಸನ್ನ ಅವರು ಬದನವಾಳುವಿನಲ್ಲಿ ‘ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ’ ಆಯೋಜಿಸಿರುವ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲಿ ವರದಿಗಳು,ಲೇಖನಗಳು ಬಂದಿವೆ. ‘ಶ್ರಮಸಹಿತ ಸರಳ ಬದುಕು’ ಎಂಬ ಮೂರ್ನಾಲಕ್ಕು ಪದಗಳನ್ನು ವಿಶ್ಲೇಷಿಸಿದರೆ ನಮಗೆ ಸಿಗಬಹುದಾದ ಸಂಭಾವ್ಯ ಉತ್ತರಗಳು –
(೧) ಈಗ ಒಂದಿಲ್ಲೊಂದು ಕೆಲಸದ ಮೂಲಕ ತಮ್ಮ ಅನ್ನ ಸಂಪಾದಿಸಿಕೊಳ್ಳುತ್ತಿರುವ ಜನಗಳು ಶ್ರಮಪಡದೆ ಅದನ್ನು ಪಡೆಯುತ್ತಿದ್ದಾರೆ ಅಥವಾ
(೨) ಜನಗಳ ಕೈಯಲ್ಲಿ ಹೆಚ್ಚು ದೈಹಿಕ ಶ್ರಮದ ಅವಶ್ಯಕತೆ ಇಲ್ಲದ ಸಣ್ಣಪುಟ್ಟ ಕೆಲಸಮಾಡಿಸಿಕೊಂಡು ಅವರ ಸರಳ ಬದುಕಿಗೆ ಎಷ್ಟು ಬೇಕೋ ಅಷ್ಟು ಅನ್ನ ಕೊಟ್ಟು ಸಾಕುತ್ತಿರುವ ಧರ್ಮಾರ್ತರು ನಮ್ಮ ನಡುವೆ ಇದ್ದಾರೆ.
ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಮೇಲಿನ ಎರಡು ಉತ್ತರಗಳಲ್ಲಿರುವ ಹುಳುಕುಗಳು,ತಪ್ಪುಗಳು ಕಾಣುತ್ತವೆ.ಇಂದು ಒಬ್ಬ ಶ್ರೀಸಾಮಾನ್ಯ ಒಂದು ಹೊತ್ತಿಗೆ ಊಟ ಸಂಪಾದಿಸಿಕೊಳ್ಳಬೇಕಾದರೂ ಶ್ರಮ ಪಟ್ಟು ಕೆಲಸ ಮಾಡಲೇಬೇಕು. ಅದು ಅವರವರ ವಿದ್ಯೆ,ಕುಶಲತೆ,ಕೆಲಸದ ರೀತಿಗೆ ಸಂಬಂಧಪಟ್ಟಿರುತ್ತದೆ…ಕೆಲಸಮಾಡದೆ ಸಿಕ್ಕಷ್ಟು ತಿಂದು ತನ್ನ ಹೊಟ್ಟೆಹೊರೆದುಕೊಳ್ಳಬೇಕಾದರೆ ಎಲ್ಲರಂತೆ ಕೆಲಸ ಮಾಡೋಕ್ಕೆ ನಿನಗೇನು ಧಾಡಿಯೆಂದು ಬೈಸಿಕೊಂಡು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಬೇಕು.
‘ಸುಂದರ ಬದುಕು’ ಸಾಧ್ಯವಾಗುವುದು ಯಾವಾಗ? ನಮ್ಮ ಜೀವನ ನಿನ್ನೆಗಿಂತ ಇಂದು,ಇಂದಿಗಿಂತ ನಾಳೆ ಉತ್ತಮವಾಗಿದ್ದರೆ ಅದನ್ನು ಸುಂದರ ಅನ್ನಬಹುದು.ನಮ್ಮ ತಾತ ಎಲ್ಲಾ ಕಡೆಗೂ ನಡೆದುಕೊಂಡೇ ಹೋಗುತ್ತಿದ್ದ; ನಾನೂ ನಡೆದುಕೊಂಡೇ ಓಡಾಡುವ ಸ್ಥಿತಿಯಲ್ಲಿ ಜೀವನ ನಡೆಸುತ್ತೇನೆ ಎನ್ನುವುದು ಬದುಕು ಸುಂದರವಾಗುವ ಲಕ್ಷಣವೆ? ಕೆಲವೊಂದು ವಿಚಾರಗಳನ್ನು ನಾವು ನಮ್ಮ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸಾಧ್ಯತೆ-ಅಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗುತ್ತದೆ.ಇಲ್ಲವಾದರೆ ನಮ್ಮನ್ನು ನಾವೇ ಮಾನಸಿಕವಾಗಿ ವಂಚಿಸಿಕೊಳ್ಳುತ್ತಾ ಹೋಗುತ್ತೇವೆ. ಇದೇನು ದೊಡ್ಡ ತತ್ವಶಾಸ್ತ್ರೀಯ ಸಮಸ್ಯೆ ಅಲ್ಲ. ಚಿಕ್ಕ ಚಿಕ್ಕ ಸಂಗತಿಗಳನ್ನೇ ನೋಡೋಣ ಸಾಕು.
ಮತ್ತಷ್ಟು ಓದು 
ನೆಹರೂ ಎಂಬ ಸ್ವಾರ್ಥ ರಾಜಕಾರಣಿ ಮತ್ತು ನೇತಾಜಿ ಎಂಬ ಸ್ವಾತಂತ್ರ್ಯ ಸೇನಾನಿ
– ರಾಕೇಶ್ ಶೆಟ್ಟಿ
“ಸುಭಾಷ್ ಸೈನ್ಯವೇನಾದರೂ ಭಾರತಕ್ಕೆ ಬಂದರೆ ನಾನು ಕತ್ತಿ ಹಿಡಿದು ಹೋರಾಡುತ್ತೇನೆ”. ಹೀಗೆ ಹೇಳಿದ ಕಠಾರಿವೀರ ಯಾವುದೋ ಬ್ರಿಟಿಷನಲ್ಲ.ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಶ್ರೀಮಾನ್ ಚಾಚಾ ನೆಹರೂ.ಅಷ್ಟಕ್ಕೂ ನೆಹರೂವನ್ನು “ಗಾಂಧಿ ಪಕ್ಷದೊಳಗಿನ ಬ್ರಿಟಿಷ್” ಎಂದು ನಾನು ಕರೆಯುತ್ತಿಲ್ಲ.ಖುದ್ದು ನೆಹರೂ ಅವರ ಅಮೇರಿಕಾದ ಗೆಳೆಯನಾಗಿದ್ದ ಜಾನ್ ಕೆನೆತ್ ಗಾಲ್ಬ್ರೈತ್ ಬಳಿ “ಭಾರತವನ್ನು ಆಳುವ ಕಡೆಯ ಬ್ರಿಟಿಷ್ ನಾನೇ” ಎಂದು ಹೇಳಿಕೊಂಡಿದ್ದರು. (ಈ ಜಾನ್ ಎಂತ ಮಹಾನುಭಾವನೆಂದರೆ, ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದು ಪುಣ್ಯ ಎನ್ನುವಂತ ಮನಸ್ಥಿತಿಯವ)
ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಎನ್ನಲಿಕ್ಕೆ ಇನ್ನೊಂದು ಸತ್ಯವೂ ಈಗ ಬಹಿರಂಗವಾಗಿದೆ.ಭಾರತವು ಸ್ವತಂತ್ರವಾಗಿ, ಸುಮಾರು ೨೦ ವರ್ಷಗಳ ಕಾಲ ನೇತಾಜಿ ಕುಟುಂಬದ ಮೇಲೆ ಶ್ರೀಮಾನ್ ನೆಹರೂ ಅವರ ಘನ ಸರ್ಕಾರ “ಗೂಢಚಾರಿಕೆ”ಯನ್ನು ಮಾಡಿದೇ ಎಂಬುದೇ ಆ ಸತ್ಯ.ಅದೂ ಬ್ರಿಟಿಷರ MI15 ಎಂಬ ಗೂಢಚಾರ ಸಂಸ್ಥೆಯೊಂದಿಗೆ ಸೇರಿಕೊಂಡು! ಹೀಗಿರುವಾಗ ನೆಹರೂ ತನ್ನನ್ನು ತಾನು “I am the last Englishman to rule in India.” ಎಂದಿದ್ದು ಸರಿಯಾಗಿಯೇ ಇದೆ ಅಲ್ಲವೇ? ಅಷ್ಟಕ್ಕೂ ಬ್ರಿಟಿಷರಿಗೆ ನೇತಾಜಿಯವರ ಮೇಲೆ ಗೂಢಚಾರಿಕೆ ಮಾಡಲಿಕ್ಕೆ ಕಾರಣಗಳಿದ್ದವು.ಆದರೆ ನೆಹರೂ ಮಹಾಶಯರಿಗೇನಿತ್ತು ಅಂತ ಕಾರಣ? “ಅಭದ್ರತೆ” ಭಾವವೇ?ನೇತಾಜಿಯವರು ತೈಪೆಯ ವಿಮಾನಾಪಘಾತದಲ್ಲಿ ಮರಣಹೊಂದಿದರು ಎಂದು ಸೃಷ್ಟಿಸಲಾಗಿದ್ದ ಸುದ್ದಿಯನ್ನು ಇತರರಂತೆ ನೆಹರೂ ಸಹ ನಂಬಿರಲಿಲ್ಲ.ಒಂದು ವೇಳೆ ಸ್ವತಂತ್ರ ಭಾರತಕ್ಕೆ ನೇತಾಜಿ ಕಾಲಿಟ್ಟರೆ,ಗಾಂಧೀಜಿಯ ಮರಣದ ನಂತರ ಏಕಮೇವಾದ್ವೀತಿಯನಂತಿರುವ ತನ್ನ ಕುರ್ಚಿ ಉಳಿಯುವುದಿಲ್ಲವೆಂಬ ಘೋರ ಸತ್ಯ ತಿಳಿದಿದ್ದರಿಂದಲೇ? ನೆಹರೂವಿಗೆ,ನೇತಾಜಿಯವರ ಮೇಲೆ ಅಂತದ್ದೊಂದು ಅಭದ್ರತೆ,ಈರ್ಷ್ಯೆ ಇರಲಿಲ್ಲವೆಂದಾದರೇ, ಬ್ರಿಟನ್ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿಯವರಿಗೆ,ಸುಭಾಷ್ ರಷ್ಯಾದಲ್ಲಿ ಇರುವ ಬಗ್ಗೆ ಮತ್ತು ರಷ್ಯಾ ಮಿತ್ರಪಡೆಗಳಿಗೆ ನಂಬಿಕೆ ದ್ರೋಹ ಮಾಡಿದಂತೆ ಎಂಬಂತ ಸಾಲುಗಳಿರುವ ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸುಳ್ಳೇ? ಅದೆಲ್ಲಾ ಬಿಡಿ.ಸ್ವಾತಂತ್ರ್ಯ ಸಿಕ್ಕ ನಂತರ ಐ.ಎನ್.ಎ ಸೈನಿಕರನ್ನು ನೆಹರೂ ನಡೆಸಿಕೊಂಡ ರೀತಿ ನೋಡಿ.ಆ ಸೈನಿಕರಿಗೆ ಭಾರತೀಯ ಸೈನ್ಯದಲ್ಲಿ ಕಾಲಿಡಲು ಬಿಡಲಿಲ್ಲ.ಪಿಂಚಣಿಗಾಗಿ ಆ ಸೈನಿಕರು ೧೯೭೭ರವರೆಗೂ ಕಾಯಬೇಕಾಯಿತು! ಆಜಾದ್ ಹಿಂದ್ ಸೈನಿಕರು ಭಾರತೀಯ ಸೇನೆ ಸೇರಿಕೊಂಡ ಮೇಲೆ ನೇತಾಜಿ ಪ್ರತ್ಯಕ್ಷವಾದರೇ,ಸೈನ್ಯ ಅವರ ಪರ ನಿಂತೀತೂ ಎಂಬ ಭಯವಿತ್ತೇ? ನೆಹರೂ ಅವರ ಈ ನಡೆಗಳನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು?
ಭಾರತದ ಭವಿಷ್ಯ ಮತ್ತು ನಮ್ಮ ಪಾತ್ರ
– ಡಾ. ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ.ಚಕ್ರವರ್ತಿ ಸೂಲಿಬೆಲೆಯವರ ಭಾಷಣವನ್ನು ಆಯೋಜಿಸಲಾಗಿತ್ತು. ಇದು ಅವರ ಭಾಷಣವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾತ್ರ. ಒಂದು ಚಿಕ್ಕ ಗುಂಪಿಗೆ ಅವರು ನೀಡಿದ ಸ್ಪೂರ್ತಿದಾಯಕ ಮಾತುಗಳು ಉಳಿದವರಿಗೂ ದೊರಕಲಿ ಎಂಬುದು ಈ ಬರಹದ ಆಶಯವಾಗಿದೆ. ಭಾರತದ ಭವಿಷ್ಯದ ಸ್ವರೂಪವೇನು? ಹಾಗೂ ಅದರಲ್ಲಿ ಯುವಕರ ಪಾತ್ರವೇನು ಎಂಬ ಪ್ರಶ್ನೆಗಳು ಇಂದು ನಮ್ಮನ್ನು ಕಾಡಲು ಪ್ರಾರಂಭಿಸಿವೆ. ಇದಕ್ಕೆ ಉತ್ತರ ಹುಡುಕುವ ಮುನ್ನ ಭಾರತದ ಭೂತ ಮತ್ತು ವರ್ತಮಾನವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಇಂದು ಭಾರತವನ್ನು ನೋಡುವ ಸಾಮಾನ್ಯವಾದ ಒಂದು ಕ್ರಮವಿದೆ, ಅದೆಂದರೆ ಭಾರತ ಎಂಬುದು ಕೊಳಕಾದ ದೇಶ, ಹಿಂದುಳಿದ ಮತ್ತು ಮುಂದುವರೆಯುತ್ತಿರುವ ದೇಶ, ಆಧುನೀಕತೆಯ ಬೆನ್ನುಹತ್ತಿ ಇತ್ತೀಚೆಗಷ್ಟೆ ಕಣ್ಣು ಬಿಡುತ್ತಿರುವ ನಾಡು, ಭ್ರಷ್ಟಾಚಾರ, ದೌರ್ಜನ್ಯ ಇನ್ನೂ ಮುಂತಾದ ನಕಾರಾತ್ಮಕ ಅಂಶಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ಸದಾ ಭಾರತವನ್ನು ತೆಗಳುವ ವಿಧಾನವನ್ನು ರೂಢಿಸಿಕೊಂಡಿದ್ದೇವೆ. ಹೀಗೆ ತೆಗಳುವುದಕ್ಕೆ ಶತಮಾನಗಳಷ್ಟು ಹಳೆಯದಾದ ಇತಿಹಾಸವೂ ಇದೆ. ಭಾರತದ ಮೇಲೆ ಎರಡು ರೀತಿಯ ದಾಳಿಗಳು ವಿದೇಶಿಗರಿಂದ ನಡೆದಿವೆ. ಬ್ರಿಟೀಷರ ಆಕ್ರಮಣ ಪ್ರಾರಂಭವಾಗುವ ತನಕ ನಡೆದಿದ್ದೆಲ್ಲವೂ ದೈಹಿಕ ಆಕ್ರಮಣಗಳು, ಅಂದರೆ ಪ್ರದೇಶಗಳನ್ನು, ರಾಜರನ್ನು ಗೆಲ್ಲುವಂತಹ, ಸಂಪತ್ತನ್ನು ಲೂಟಿ ಮಾಡುವ ಚಟುವಟಿಕೆಗಳಲ್ಲಿ ಕೊನೆಯಾಗುತ್ತಿದ್ದವು. ಆದರೆ ಬ್ರಿಟೀಷರಿಂದ ಪ್ರಾರಂಭವಾದ ಭಾರತದ ಮೇಲಿನ ಆಕ್ರಮಣ ಅತ್ಯಂತ ದುರಂತಮಯವಾದುದ್ದಾಗಿದೆ.
ಪ್ರಸ್ಥಾನ: ಕಲ್ಕತ್ತಾದಿಂದ ಬರ್ಲಿನ್ನಿನ ವರೆಗೆ; ದಾಸ್ಯದಿಂದ ಮುಕ್ತಿಯವರೆಗೆ
– ಎಸ್.ಎನ್.ಭಾಸ್ಕರ್
ಕಲ್ಕತ್ತಾ ನಗರದ ಎಲ್ಗಿನ್ ರಸ್ತೆಯ ಮನೆಯೊಂದರಲ್ಲಿನ ಪ್ರತ್ಯೇಕ ಕೋಣೆ. ದಿನಾಂಕ ೧೬ ನೇ ಜನವರಿ, ಇಸವಿ ೧೯೪೧.
“ರಾಷ್ಟ್ರಂ ಧಾರಯತಾಂ ಧ್ರೃವಂ”
“ರಾಷ್ಟ್ರಂ ಅಶ್ವಮೇಧಃ”
ಇದು ಸಂಕಲ್ಪ. ಈ ಧೀರ ಸಂಕಲ್ಪ ಮನೆಮಾಡಿದ್ದ ಆ ವ್ಯಕ್ತಿ ಪದ್ಮಾಸನ ಹಾಕಿ ಕುಳಿತಿದ್ದಾರೆ. ಎಡಗೈನಲ್ಲಿ ಜಪಮಾಲೆ ಮನದಲ್ಲಿ ಪ್ರಣವಮಂತ್ರ. ಮುಚ್ಚಿದ ಕಣ್ಗಳ ಹಿಂದೆ ಅದೆಂತಹ ಉಜ್ವಲ ಭವಿತವ್ಯದ ನೋಟವಿತ್ತೋ..! ಅರಿಯಬಲ್ಲವರು ತಾನೇ ಯಾರಿದ್ದರು ?
ಮಂದಸ್ಮಿತ ಅಂತರ್ಮುಖಿಯಾದ ಮುಖಾರವಿಂದದ ನೆರಳಿನಲ್ಲಿ ಸ್ಪಷ್ಟ ನಿಲುವು ಅಪ್ರಯತ್ನಪೂರ್ವಕವಾಗಿ ನಳನಳಿಸುತಲಿತ್ತು. ಆಳವಾದ ಧ್ಯಾನ. ಜಪಮಾಲೆಯನ್ನು ಹಿಡಿದಿದ್ದ ಕೈ ಬೆರಳುಗಳನ್ನು ಹೊರತು ಪಡಿಸಿ ಇಡೀ ದೇಹ ನಿರ್ಲಿಪ್ತ. ಮನದಲ್ಲಿ ಜ್ವಾಲಾಮುಖಿಯೇ ಇದ್ದರೂ, ಹಿಮಾಲಯದ ಪರ್ವತದಂತೆ ಶಾಂತಸ್ಮಿತ. ಮುಂಜಾನೆಯ ಮೊಗ್ಗರಳುವಂತೆ ನಿಧಾನವಾಗಿ ಕಣ್ಣಗಳನ್ನು ತೆರೆಯುತ್ತಾರೆ. ಎದುರಿಗೆ ಗೋಡೆಯ ಮೇಲೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಅದರ ಎಡಗಡೆಗೆ ರಾಮಕೃಷ್ಣ ಪರಮಹಂಸರು, ಬಲಗಡೆಗೆ ಮಹರ್ಷಿ ಅರವಿಂದರು. ತನ್ನೆರಡೂ ಕೈಗಳನ್ನೂ ಕಟ್ಟಿ ನಸುನಗುತ್ತಾ ನಿಂತಿದ್ದ ವಿವೇಕಾನಂದರ ಭಾವಚಿತ್ರವನ್ನೇ ನೋಡುತ್ತಾ ನಿಶ್ಚಲರಾಗಿ ಕುಳಿತೇ ಇದ್ದರು. ಅದೆಂತಹ ದಿವ್ಯ ಚೈತನ್ಯ, ದೇದೀಪ್ಯಮಾನವಾದ ಪ್ರಾಂಜ್ವಲ ಕಣ್ಗಳಲ್ಲಿ ಹೊಳೆಯುತ್ತಿದ್ದ ಅಚಲ ವಿಶ್ವಾಸ. ನೋಡುತ್ತಿದ್ದರೇ ಆ ಕಣ್ಗಳೆಂಬ ಸಾಗರದಲ್ಲಿ ಮುಳುಗೇ ಹೋಗುತ್ತೇವೆ. ಸೂಜಿಗಲ್ಲಿಗೆ ಸೆಳೆಯಲ್ಪಡುವ ಕಬ್ಬಿಣದ ಚೂರುಗಳಂತೆ ಸೆಳೆದು ಬಂಧಿಯಾಗುತ್ತೇವೆ. ಎಂತಹ ಆಕರ್ಷಣೀಯ ವ್ಯಕ್ತಿತ್ವ…!! ಕಣ್ತುಂಬಿ ಬಂತು ಮೂಡಿದ ಹನಿಗಳು ಧಳ ಧಳನೇ ಇಳಿಯತೊಡಗಿದವು ನೋಟ ಮಾತ್ರ ನಿಶ್ಚಲ..ನಿರ್ಲಿಪ್ತ. ರೋಮ ರೋಮಗಳಲ್ಲೂ ವಿದ್ಯುತ್ ಸಂಚಾರ. ಅವರ ನಿರ್ಧಾರ ಸಂಪೂರ್ಣವಾಗಿತ್ತು. ರೂಪುರೇಷೆಗಳು ಸಿದ್ದವಾಗಿದ್ದವು. ಇಟ್ಟ ಹೆಜ್ಜೆ ಹಿಂತೆಗೆದ ನಿದರ್ಶನ ಜಾಯಮಾನದಲ್ಲೇ ಇಲ್ಲವಲ್ಲ. “ರಾಷ್ಟ್ರಂ ಧಾರಯತಾಂ ದ್ರೃವಂ: ರಾಷ್ಟ್ರಂ ಅಶ್ವಮೇಧಃ:”.
ರಾಷ್ಟ್ರದ ಹಿತ ದೃಷ್ಟಿಯಿಂದಾದರು ಈ ಭಯೋತ್ಪಾದನೆಯ ರಾಜಕೀಯಕ್ಕೆ ಅಂತ್ಯ ಹಾಡಬೇಕಲ್ಲವೇ?
– ಅನಿಲ ಚಳಗೇರಿ
ಡಿಸೆಂಬರ್ ೩೧ ರ ರಾತ್ರಿ ಶಂಕಿತ ಉಗ್ರರ ಹಡಗನ್ನು ನೌಕ ಪಡೆ ಪತ್ತೆ ಹಚ್ಚಿ ಅದನ್ನು ಹಿಂಬಾಲಿಸಿ ಹೋದಾಗ ಅದರಲ್ಲಿರುವವರು ಹಡಗನ್ನು ಸ್ಪೋಟಿಸಿದರು ಎನ್ನುವ ವಿಷಯ ತಿಳಿದೊಡನೆ ನಮ್ಮಲ್ಲಿ ಅನೇಕರಿಗೆ ನೌಕಾಪಡೆಗೆ ಒಂದು ಶಬ್ಭಾಶ್ ಹೇಳಬೇಕೆನ್ನಿಸಿರಬಹುದು, ಅದಾಗಲೇ ರಾಜಕೀಯ ಪಕ್ಷಗಳು ಇಂತಹ ಒಂದು ಹಡಗು ಇತ್ತಾ? ಅದರಲ್ಲಿ ನಿಜವಾಗಲು ಉಗ್ರರಿದ್ದರಾ ? ಅದು ಪಾಕಿಸ್ತಾನಕ್ಕೆ ಸೇರಿದ ಹಡಗಾಗಿತ್ತಾ ? ಹಾಗಿದ್ದರೆ ಅವುಗಳ ದಾಖಲೆ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿ, ನಮಗೆ ಇದರ ಮೇಲೆ ಶಂಕೆಯಿದೆಯೆಂದು ಪ್ರಶ್ನಿಸಲು ಪ್ರಾರಂಭಿಸಿದನ್ನು ನೋಡಿ ನೋಡಿ ನಮ್ಮಲ್ಲಿ ಅನೇಕರಿಗೆ ಬೇಜಾರಾಗಿರಬೇಕು. ಪ್ರತಿ ಬಾರಿ ಉಗ್ರಗಾಮಿಯೊಬ್ಬ ಸಿಕ್ಕಾಗ, ಬಾಂಬ್ ದಾಳಿಯಾದಾಗ ಅಥವಾ ಯಾವುದೇ ಉಗ್ರ ಚಟುವಟಿಕೆ ನಡೆದಾಗ, ತನಿಖೆಯ ಪ್ರಾರಂಭದಿಂದಲೇ ಒಂದಲ್ಲ ಒಂದು ರಾಜಕೀಯ ಪಕ್ಷಗಳು ಅಥವಾ ಬುದ್ಧಿ ಜೀವಿಗಳು ಈ ಶಕಿಂತ ಆರೋಪಿಗಳ ನಿಂತೇಬಿಡುತ್ತಾರೆ. ತನಿಖೆ ನಡೆಯುತ್ತಿರುವಾಗಲೇ ಕ್ಲೀನ್ ಚಿಟ್ ಕೊಡುವದು, ರಾಜಕೀಯ ಬಣ್ಣ ಕಟ್ಟಲು ಪ್ರಯತ್ನಿಸುವದು ಅಥವಾ ಇಂತಹ ಗಂಭೀರ ವಿಷಯದಲ್ಲಿ ಜಾತಿ ಅಥವಾ ಧರ್ಮದ ಮಾತುಗಳನ್ನು ಆಡುವದು ನೋಡುತ್ತಲೇ ಇರುತ್ತೇವೆ, ಕೆಲವಿರಿಗೆ ಇದು ಇದು ಓಲೈಕೆಯ ಒಂದು ಭಾಗವಾದರೆ ಇನ್ನು ಕೆಲವರಿಗೆ ಇದು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಒಂದು ಗಿಮಿಕ್. ಇಂತಹ ಹೇಳಿಕೆಗಳನ್ನು IC – 814 ಹೈ ಜಾಕ್ ನಿಂದ ಹಿಡಿದು ಅಫ್ಜಲ್ ಗುರು, ಬಾಟ್ಲ ಹೌಸ್ ಎನ್ಕೌಂಟರ್, ಇಶ್ರಾತ್ ಜಹಾ ಎನ್ಕೌಂಟರ್, ಹೈದರಾಬಾದ್ ಬ್ಲಾಸ್ಟ್, ಜರ್ಮನ್ ಬೇಕರಿ ಬ್ಲಾಸ್ಟ್ ಹಾಗು ಮುಂಬೈ ತಾಜ್ ಅಟ್ಯಾಕ್ ಆದಗಲು ಕೇಳುತ್ತಲೇ ಬಂದಿದ್ದೇವೆ. ಪ್ರತ್ಯೇಕತೆಯ ಹೆಸರಿನಲ್ಲಿ ಉಗ್ರವಾದ, ನಕ್ಸಲ್ ಹೆಸರಿನಲ್ಲಿ ಉಗ್ರವಾದ ಹಾಗು ಮಾವೋವಾದಿಗಳ ಉಗ್ರ ಚಟುವಟಿಕೆಯನ್ನು ವಹಿಸಿಕೊಂಡು ಮಾತನಾಡುವಂತಹ ಬುದ್ಧಿ ಜೀವಿಗಳು ಇಡೀ ದೇಶದಲ್ಲಿ ತುಂಬಿದ್ದಾರೆ. ಕೆಲವೊಮ್ಮ ರಾಜಕೀಯ ಪಕ್ಷಗಳ ಜೊತೆ, ಕೆಲವೊಮ್ಮೆ ಮಾಧ್ಯಮಗಳ ಜೊತೆ ಇನ್ನು ಕೆಲವೊಮ್ಮೆ ಮಾನವ ಹಕ್ಕು ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದಶಕಗಳ ಹಿಂದೆಯೇ ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಇಂಥಹ ಸಂಘಟನೆಗಳನ್ನು ಸಮರ್ಥಿಸಿಕೊಂಡ ಪಾಕಿಸ್ತಾನ, ಆಫ್ತಾನಿಸ್ತಾನ, ಇರಾಕ್ ಹಾಗು ಇಂತಹ ಅನೇಕ ರಾಷ್ಟ್ರಗಳು ತಾವೇ ಬೆಳಸಿದ ಈ ಉಗ್ರರಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಇಂದು ಕಷ್ಟಪಡುತ್ತಿರುವದನ್ನು ನಾವೆಲ್ಲ ನೋಡುತ್ತಿದ್ದೇವೆ.
ಮತ್ತಷ್ಟು ಓದು 
ಪುಸ್ತಕ ಪರಿಚಯ : ಶಿಲಾಕುಲ ವಲಸೆ
– ವಿದ್ಯಾ ಕುಲಕರ್ಣಿ
ಲೇಖಕರು :- ಕೆ. ಎನ್ ಗಣೇಶಯ್ಯ
ಸಾರಾಂಶ :- ಆರ್ಯರು ಪಶ್ಚಿಮದಿಂದ ಭಾರತಕ್ಕೆವಲಸಿಗರಾಗಿ ಬರಲಿಲ್ಲ.ಪಶ್ಚಿಮಕ್ಕೆ ವಲಸೆ ಹೋದರು.
ನಾನು ಕಾದಂಬರಿಗಳನ್ನು ಓದಲು ಅಥವಾ ಓದುವ ಹುಚ್ಚು ರೂಢಿಸಿಕೊಂಡಿದ್ದು ಶ್ರೀ ತರಾಸು ಅವರ ಸಿಡಿಲ ಮೊಗ್ಗು ಕಾದಂಬರಿಯಿಂದ ಅಂತ ಹೇಳಬಹುದು. ಆ ಕಾದಂಬರಿಯನ್ನು ನಮ್ಮಣ್ಣನ ತರಗತಿಗೆ ಪಠ್ಯ ಪುಸ್ತಕವಾಗಿ ಹಚ್ಚಿದ್ದರು. ಅವನು ನನಗೆ ಅದನ್ನು ಓದಲು ತಿಳಿಸಿದ್ದಲ್ಲದೇ ಅದರಲ್ಲಿನ ಕೆಲವಾರು ಅಂಶಗಳ ಕುರಿತು ಚರ್ಚಿಸಿ, ಅದನ್ನು ವಿವರಿಸಿ ಹೇಳಿದ್ದಲ್ಲದೇ ನಾನು ಸರಿಯಾಗಿ ತಿಳಿದಿರುವೆನೋ ಇಲ್ಲವೋ ಎಂದು ಪರೀಕ್ಷೆ ಸಹ ಮಾಡಿದ್ದ. ಹೀಗಾಗಿ ನಾನು ಸುಮಾರು 8 ನೇ ತರಗತಿಯಲ್ಲಿದ್ದಾಗಲೇ ಅದನ್ನು ಚನ್ನಾಗಿ ಓದಿ ಹಾಗೇನೇ ಓದುವ ಗೀಳು ಬೆಳೆಸಿಕೊಂಡಿದ್ದೆ. ಶ್ರೀಮತಿ ಗೀತಾ ನಾಗಭೂಷಣ ಅವರ ಕಥೆ ಹೂವ ತಂದವರು ಸಹ ನಮಗೆ ಪಠ್ಯಪುಸ್ತಕದಲ್ಲಿ ಪಾಠವಾಗಿತ್ತು. ಅದನ್ನು ನನ್ನಣ್ಣ ನನಗೆ ಚನ್ನಾಗಿ ವಿವರಿಸಿ ಓದಿಸಿ ಹೇಳಿದ್ದರಿಂದ ಓದುವ ಗೀಳನ್ನು ಬೆಳೆಸಿದ ಅವನಿಗೆ ನನ್ನ ಕೃತಜ್ಞತೆ ಮೊದಲು ಸಲ್ಲುತ್ತವೆ.
ನಂತರದ ದಿನಗಳಲ್ಲಿ ನಾನು ತ್ರಿವೇಣಿ , ಉಷಾ ನವರತ್ನರಾಂ , ರೇಖಾ ಕಾಖಂಡಕಿ ಎಚ್ . ಜಿ ರಾಧಾದೇವಿ. ಎಂ. ಕೆ ಇಂದಿರಾರ ಹಾಗೂ ಇನ್ನಿತರರ ಕಾದಂಬರಿಗಳನ್ನು ಹಾಗೆ ಕಾರಂತರ ಭೈರಪ್ಪರ ಕಾದಂಬರಿಗಳನ್ನು ಓದಿದೆ. ಆದರೆ ಈ ಎಲ್ಲಾ ಕಾದಂಬರಿಗಳಿಗಿಂತ ನನಗೆ ಅಚ್ಚು ಮೆಚ್ಚಾದದ್ದು ಶ್ರೀ ಎಂಡಮೂರಿ ಅವರ ಕಾದಂಬರಿಗಳು . ಅವುಗಳನ್ನು ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲೇ ಆಗುವದಿಲ್ಲ. ಅಷ್ಟೊಂದು ಥ್ರಿಲ್ಲಿಂಗ್ ಇರುತ್ತವೆ. ಇಷ್ಟೊಂದು ಸುಂದರವಾಗಿ ಪುಸ್ತಕ ಕೆಳಗಿಡಲೇ ಆಗದಂತೆ ಕಾದಂಬರಿ ಬರೆಯುವವರು ಕನ್ನಡದಲ್ಲಿ ಇಲ್ಲವಲ್ಲಾ ಎಂದು ನಾನು ಕೊರಗುತ್ತಿದ್ದೆ. ಆ ಕೊರಗನ್ನು ತುಂಬಿದವರೇ ಶ್ರೀ ಕೆ. ಎನ್ ಗಣೇಶಯ್ಯನವರು.
ಶ್ರೀ ಗಣೇಶಯ್ಯನವರ ಕಾದಂಬರಿಗಳು ಯಾಕೆ ಇಷ್ಟವಾಗುತ್ತವೆಂದರೆ ಒಂದನೆಯದು ಬರವಣಿಗೆಯಲ್ಲಿನ ಥ್ರಿಲ್ಲಿಂಗ್. ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ.ಇತಿಹಾಸ ಪುಸ್ತಕವನ್ನು ಓದುವದೆಂದರೆ ತುಂಬಾ ಬೇಜಾರು ಮಾಡಿಕೊಳ್ಳುವವರಿಗಾಗಿ ಸುಂದರ ಚೌಕಟ್ಟಿನಲ್ಲಿ ಕಥಾ ರೂಪದಲ್ಲಿ ಇತಿಹಾಸ ತಿಳಿಸುವದು ಗಣೇಶಯ್ಯ ಕಾದಂಬರಿಯ ಉದ್ದೇಶಗಳೆನ್ನಬಹುದು. ಕೇವಲ ರೋಚಕತೆಗಾಗಿ ಏನೋ ಒಂದನ್ನು ಹೇಳದೇ ಅವರು ಐತಿಹಾಸಿಕ ಸಾಕ್ಷಿ ಪುರಾವೆಗಳ ಸಮೇತ ತಿಳಿಸುತ್ತಾರೆ. ಅವುಗಳನ್ನು ಯಾರೂ ಪರೀಕ್ಷೆ ಮಾಡಬಹುದಾಗಿದೆ.






