ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

22
ಜನ

ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ

-ಗೋಪಾಲ ಕೃಷ್ಣ

vamshadalitaರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ.  ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ.  ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.

ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ಮತ್ತಷ್ಟು ಓದು »

2
ಜನ

ನಾವು ಈಗ ಯಾಕೆ ಹೀಗಾಗಿರುವೆವು?

-ರೂಪಲಕ್ಷ್ಮಿ

ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ) ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ, ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ! ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ. ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು. ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ, ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು. ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ.

ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು. ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ. ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!

ಮತ್ತಷ್ಟು ಓದು »

30
ನವೆಂ

ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

– ಶ್ರೀವಿದ್ಯಾ,ಮೈಸೂರು

rajiv-dixitಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್

“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ.­ ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ಮತ್ತಷ್ಟು ಓದು »

25
ನವೆಂ

ಪ್ರಶಾಂತ ಹಿಮಾಲಯದ ಅಶಾಂತ ಗಡಿ….

-ಪ್ರೇಮ ಶೇಖರ್

(ಶನಿವಾರ, ಡಿಸೆಂಬರ್ ೧, ೨೦೧೨ರಂದು ಭಾರತ – ಚೀನಾ ಗಡಿಸಮಸ್ಯೆಯ ಬಗೆಗಿನ ನನ್ನ “ಪ್ರಶಾಂತ ಹಿಮಾಲಯದ ಅಶಾಂತ ಗಡಿ” ಕೃತಿ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆ ಪುಸ್ತಕದ ಮೊದಲ  ಅಧಯಾಯ ಇಲ್ಲಿದೆ )

ಮೂವತ್ತೆರಡು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ನೆಲದೊಂದಿಗೆ ವಿಶ್ವದಲ್ಲಿ ಭೌಗೋಳಿಕವಾಗಿ ಏಳನೆಯ ದೊಡ್ಡ ದೇಶವಾದ ಭಾರತ ಸುಮಾರು ಹದಿನಾಲ್ಕು ಸಾವಿರ ಕಿಲೋಮೀಟರ್ ಉದ್ದದ ನೆಲಗಡಿಯನ್ನೂ, ಐದುಸಾವಿರದ ಐನೂರು ಕಿಲೋಮೀಟರ್ ಉದ್ದದ ಜಲಗಡಿಯನ್ನೂ ಹೊಂದಿದೆ. ಬಹುತೇಕ ಈ ಎಲ್ಲಾ ನೆಲಗಡಿಗಳು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ ಭಾರತಕ್ಕೆ ಬಂದ ಬಳುವಳಿಗಳಾಗಿವೆ.

ನೇಪಾಲ ಜತೆಗಿನ ೧,೬೯೦ ಕಿಲೋಮೀಟರ್ ಗಡಿಯನ್ನು ಬ್ರಿಟಿಷರು ರೂಪಿಸಿದ್ದಂತೇ ಸ್ವತಂತ್ರ ಭಾರತ ಉಳಿಸಿಕೊಂಡರೆ ಭೂತಾನದ ಜತೆಗಿನ ೬೦೫ ಕಿಲೋಮೀಟರ್ ಗಡಿಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯನ್ನು ಮಾಡಲಾಯಿತು. ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಬ್ರಿಟಿಷರು ಆಕ್ರಮಿಸಿಕೊಂಡಿದ್ದ ದಕ್ಷಿಣ ಭೂತಾನದ ಕೆಲವು ಪ್ರದೇಶಗಳನ್ನು ಆ ದೇಶಕ್ಕೆ ಮರಳಿಸುವ ನಿರ್ಧಾರವನ್ನು ಸ್ವತಂತ್ರ ಭಾರತ ಮಾಡಿದ್ದು ಆ ಬದಲಾವಣೆಗೆ ಕಾರಣ. ಮಿಯಾನ್ಮಾರ್(ಹಿಂದಿನ ಬರ್ಮಾ) ಜತೆಗಿನ ಗಡಿಯ ಬಗ್ಗೆ ಹೇಳುವುದಾದರೆ ೧೯೩೭ರಲ್ಲಿ ಬ್ರಿಟಿಷರು ಆ ದೇಶವನ್ನು ಭಾರತದಿಂದ ಬೇರ್ಪಡಿಸಿದಾಗ ರೂಪಿಸಿದ ಗಡಿಯಲ್ಲಿದ್ದ ಕೆಲವು ಗೊಂದಲಗಳನ್ನು, ಮುಖ್ಯವಾಗಿ ಅರುಣಾಚಲ ಪ್ರದೇಶ ಮತ್ತು ಉತ್ತರ ಬರ್ಮಾದ ನಡುವಿನ ತಿರಾಪ್ ಕಣಿವೆ ಮತ್ತು ಮಣಿಪುರದ ಗಡಿಯ ಬಗ್ಗೆ ಇದ್ದ ಅಸಮರ್ಪಕತೆಗಳನ್ನು ಸ್ವಾತಂತ್ರಾನಂತರ ದ್ವಿಪಕ್ಷೀಯ ಮಾತುಕತೆಗಳು ಮತ್ತು ಒಪ್ಪಂದದ ಮೂಲಕ ಸ್ನೇಹಯುತವಾಗಿ ಸರಿಪಡಿಸಿಕೊಳ್ಳಲಾಯಿತು. ಬಾಂಗ್ಲಾದೇಶದ ಜತೆಗಿನ ೪,೦೫೩ ಕಿಲೋಮೀಟರ್ ಉದ್ದದ ಗಡಿ ನಲವತ್ತೇಳರಲ್ಲಿ ಸರ್ ಸಿರಿಲ್ ರ‍್ಯಾಡ್‌ಕ್ಲಿಫ್ ನೇತೃತ್ವದ “ಗಡಿ ಸಮಿತಿ” (Boundary Commission) ಭಾರತ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಎಳೆದ ಗಡಿಯಾಗಿದೆ. ಈ ಗಡಿಯ ಐತಿಹಾಸಿಕ ಹಿನ್ನೆಲೆಯನ್ನು ಅನ್ವೇಷಿಸಿದರೆ ಇದು ೧೯೦೫ರಲ್ಲಿ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸಿದಾಗ ಎಳೆದ ರೇಖೆ ಮತ್ತು ೧೯೪೩ರಲ್ಲಿ ವೈಸ್‌ರಾಯ್ ಲಾರ್ಡ್ ವೇವಲ್ ದೇಶವಿಭಜನೆಗಾಗಿ ಸೂಚಿಸಿದ ರೇಖೆಗಳ ಆಧಾರದ ಮೇಲೆ ರಚಿತವಾದದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಈ ಧೀರ್ಘ ಗಡಿ ಬಹುತೇಕ ವಿವಾದಾತೀತವಾಗಿದ್ದರೂ ಅದರ ಕೆಲವು ಪುಟ್ಟ ತುಣುಕುಗಳು ಢಾಕಾದಲ್ಲಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಮರ್ಜಿಗನುಗುಣವಾಗಿ ಆಗಾಗ ಸುದ್ಧಿಯಾಗುತ್ತದೆ. ಮತ್ತಷ್ಟು ಓದು »

23
ನವೆಂ

ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ?

-ವಸಂತ್  ಶೆಟ್ಟಿ
ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣಲ್ಲ ಅಂತೆಲ್ಲ ಅಲ್ಲಲ್ಲಿ ದನಿ ಎಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಅದು ತಾರಕಕ್ಕೆರಲಿದೆ. ಈ ಪಕ್ಷಗಳ ಭವಿಷ್ಯ ಜನತಾ ನ್ಯಾಯಲಯದಲ್ಲಿ ನಿರ್ಧಾರವಾಗುತ್ತೆ ಮತ್ತು ಆ ತೀರ್ಪೇ ಅಂತಿಮ ಅನ್ನುತ್ತಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಯಾಕೆ ಹೆಚ್ಚಿದೆ ಅನ್ನುವುದರ ಬಗ್ಗೆ ನನ್ನ ಅನಿಸಿಕೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಈ ಬರಹ.

ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ “ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು” ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು.

ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು.  ಮತ್ತಷ್ಟು ಓದು »

22
ನವೆಂ

ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ “ಸರ್ಕಾರ್ “

-ಅಜಿತ್ ಎಸ್ ಶೆಟ್ಟಿ

ಕೇಸರಿ ಅಂಗಿ, ಕೇಸರಿ ಶಾಲು, ಕೇಸರಿ ಟೋಪಿ , ಕೇಸರಿ ಶೂಗಳು , ಕೇಸರಿ ಬಣ್ಣದ ಸೈಕಲ್ , ಅದಕ್ಕೆ ಕೇಸರಿ ಬಣ್ಣದ ಚಕ್ರಗಳು ,ಕೇಸರಿ ಪೆನ್ ಯಿಂದ ಹಿಡಿದು ಕೇಸರಿ ಬಣ್ಣದ ಮೊಬೈಲ್ ತನಕ ಎಲ್ಲವೂ ಕೆಸರಿನೇ.  ಹಿಂದುತ್ವವಾದಿ ಯಾದರೂ  ಮನೆಯಲ್ಲಿ ಯಾವದೇ ದೇವರ ಫೋಟೋ ಇಲ್ಲ.  ಇರುವದು ಎರಡೇ ಎರಡು ಫೋಟೋಗಳು ಅವರುಗಳೇ ಇವನ ಪಾಲಿಗೆ ದೇವರು. ಆ ಫೋಟೋ ಗಳು ಬೇರೆ ಯಾರದ್ದು ಅಲ್ಲಾ ಮರಾಠ ಸೇನಾಧಿಪತಿ , ಹಿಂದೂ ಹೃದಯ ಸಾಮ್ರಾಟ್ , ಹುಲಿ, ಬಾಳಾ ಸಾಹೇಬ್  ಠಾಕ್ರೆ ಮತ್ತು ಅವರ ಪತ್ನಿ ಮೀನಾ ಅವರದ್ದು . ಅವರನ್ನು ಅರಾಧಿಸುತಿರುವವರು 52 ರ ಹರೆಯದ ಪೂನಾ ಜಿಲ್ಲೆಯ  ನಂಗೋನ್ ಎಂಬಲ್ಲಿನ ಮಹಾದೇವ್ ಯಾದವ್. ನಾವು ಇಂಥ ಸಾವಿರಾರು   ಠಾಕ್ರೆ ಅಭಿಮಾನಿಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು . 

ಇಂದು ಬಾಳಾ ಸಾಹೇಬ್ ಯನ್ನು “ತಮಿಳು ವಿರೋಧಿ” “ಕನ್ನಡಿಗರ ಪಾಲಿನ ಶತ್ರು ” ಉತ್ತರ ಭಾರತೀಯರು ಮತ್ತು ಗುಜರಾತಿಗಳ ಪಾಲಿಗೆ ಕಂಟಕರಾಗಿದ್ದವರೆಂದು ಬೆರಳೆಣಿಕೆ ಎಷ್ಟು ಇರುವ ಅವರ ವಿರೋಧಿಗಳು ಕರೆಯಬಹುದು . ಆದರೆ ಅದು ಬಾಳಾ ಸಾಹೇಬ್  ಠಾಕ್ರೆ ಯವರ   ವ್ಯಕ್ತಿತ್ವದ ಮುಂದೆ ಗೌಣವಾಗುತದೆ . ಠಾಕ್ರೆ ವ್ಯಕ್ತಿತ್ವ ಅಂತಹುದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತಿದ್ದ . ಎಲ್ಲಿಯೂ ಎಡಬಿಡಂಗಿ ತರ ವರ್ತಿಸುತಿರಲಿಲ್ಲ.  ಉದಾಹರಣೆ ಸಮೇತ ಸಮರ್ಥಿಸಿಕೊಳ್ಳುತಿದ್ದರು. ಅದು ಇಂದಿರೆ ಹೇರಿದ ತುರ್ತು ಪರಿಸ್ಥಿತಿಯಿಂದ ಹಿಡಿದು ಹಿಟ್ಲರ್ ಬಗೆಗಿನ ಠಾಕ್ರೆ  ಅಭಿಮಾನದವರೆಗೆ. ದೇಶಕ್ಕೆ ಕಳಂಕದಂತಿದ್ದ , ಗುಲಾಮತೆಯ ಪ್ರತೀಕದಂತೆ ಭಾಸವಾಗುತಿದ್ದ ಬಾಬ್ರಿ ಮಸೀದಿ ದ್ವಂಸದಿಂದ, ಭಾರತ-ಪಾಕ್ ಕ್ರಿಕೆಟ್ ಪಂದ್ಯದ ತನಕ. ಎಲ್ಲಿಯೂ ರಾಜಿ ಇರಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಒಬ್ಬ ಭಾಷಾಪ್ರೇಮಿಯಾಗಿದ್ದರು ಅಪ್ರತಿಮ ದೇಶಭಕ್ತ, ಒಬ್ಬ ಹುಟ್ಟು ಹೋರಾಟಗಾರ, ಅಂಜದೇ ಅಳುಕದೇ ಯಾರಿಗೂ ತಲೆಬಾಗದೆ ತಾನು ನಂಬಿಕೊಂಡು ಬಂದಿರುವ ತತ್ವ ಸಿದ್ದಾಂತವನ್ನು  ಪ್ರತಿಪಾದಿಸುವವ. ತಮ್ಮವರ ಹಕ್ಕಿಗಾಗಿ ಹೋರಾಡಿದ ಧೀಮಂತ ನಾಯಕ. ತನ್ನ ಶಕ್ತಿಯ ಮೇಲೆ, ತನ್ನ ಜನರ ನಂಬಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅದ್ಬುತ ಮಾತುಗಾರ. ತನ್ನ ನಂಬಿರುವ ತನ್ನ ಜನರ ಭರವಸೆ ಎಂದು ಹುಸಿಗೊಳಿಸದ, ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಸಿಕೊಟ್ಟ “ಸರ್ಕಾರ್” . ಉಳಿದವರಿಗೆ ಸ್ಪೂರ್ತಿಯ ಚಿಲುಮೆ . ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ  ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು.
ಮತ್ತಷ್ಟು ಓದು »

19
ನವೆಂ

ಡಾ ಅಂಬೇಡ್ಕರ್, ಸಾಮರಸ್ಯ ಮತ್ತು ಆರೆಸ್ಸೆಸ್

-ರಾಜೇಶ್  ಪದ್ಮಾರ

ಮಲೆನಾಡಿನ ಪೂರ್ಣಚಂದ್ರ ತೇಜಸ್ವಿ ಇರಲಿ ಕರಾವಳಿಯ  ಪ್ರೊ|| ಅಮೃತ ಸೋಮೇಶ್ವರ ಇರಲಿ ಅಥವಾ ಕೋಲಾರದ ಗುಡಿಬಂಡೆಯ ಡಾ|| ಎಂ.ಟಿ.ಕಾಂಬೈ ಇರಲಿ ‘ಸಾಮರಸ್ಯ’ ನನಗದು ಅತ್ಯಂತ ಪ್ರಿಯವಾದ ಶಬ್ದ ಎನ್ನುವುದುಂಟು. ಅದು ಮನೆಯಲಿರಲಿ, ವ್ಯಾಪಾರವಿರಲಿ ಕೊನೆಗೆ ರಾಜಕಾರಣವೇ ಇರಲಿ ಸಾಮರಸ್ಯಬೇಕು.

ಈ ಸಾಮರಸ್ಯ ಮನುಷ್ಯನಲ್ಲೇ ಇದೆ. ಕಾಲಿರಲಿ, ಕೈಯಿರಲಿ, ತಲೆಯಿರಲಿ ಒಂದಕ್ಕೊಂದು ಪೂರಕವೇ. ಕಾಲಿಗೆ ಮುಳ್ಳು ಚುಚ್ಚಿದಾಗ ಕೈ ‘ತನಗೇನೂ ಆಗಿಲ್ವಲ್ಲ’ ಎಂದು ಸುಮ್ಮನಿರುವುದಿಲ್ಲ. ಹೀಗೆ ಒಂದಕ್ಕೊಂದು, ಒಬ್ಬರಿಗೊಬ್ಬರು ಪೂರಕವಾಗಿ ಯೋಚಿಸುವುದು, ನೆರವಿಗೆ ಮುಂದಾಗುವುದೇ ಸಾಮರಸ್ಯ. ಶರೀರದಲ್ಲಿರುವ ಈ ಸಮರಸತೆ, ಸಮಾಜದಲ್ಲೂ ಬರಬೇಕಷ್ಟೆ.

ಹಾಗೇ ಸಮಾಜ ಸಾಮರಸ್ಯದಿಂದಿರಲು ತೊಡಕುಗಳೂ ಇವೆ. ವಿದ್ಯೆ, ಆಸ್ತಿ, ಅಂತಸ್ತು, ಜಾತಿ, ಭಾಷೆ ತೊಡಕು ತಂದುಹಾಕುತ್ತೇವೆ. ವಿದ್ಯೆ, ಸಿರಿವಂತಿಕೆ ಇದೆಯಲ್ಲ ಅದು ಅವರವರು ಗಳಿಸಿದ್ದು, ಆದರೆ ಜಾತಿ- ಅದು ಗಳಿಸಿದ್ದಲ್ಲ. ಅದು ಹುಟ್ಟಿದಾಗ ಅಂಟಿಕೊಂಡಿದ್ದು.

‘ಮಂಡಲ್ ವರದಿ’ ಖ್ಯಾತಿಯ ಆ ಬಿಂದೇಶ್ವರ ಪ್ರಸಾದ್ ಮಂಡಲ್ ಪ್ರಕಾರ ಭಾರತದಲ್ಲಿ 5600 ಜಾತಿಗಳು. ಜಾತಿ ಇರೋದೆ ತಪ್ಪಾ? ಹಾಗೆ ಹೇಳೋರು ಇದಾರೆ. ಅವರೊಂದಿಗೆ ಹೊಸ ಜಾತಿನೇ ಆಗಿದ್ದಾರೆ. ಯಾವುದರಲ್ಲಿ ಜಾತಿ ಇಲ್ಲ? ಭತ್ತದಲ್ಲಿ ಅದೆಷ್ಟು ನಮೂನೆ? ಮಾವಿನಹಣ್ಣಿನಲ್ಲಿ ಅದೆಷ್ಟು ಥರಾ? ಬದನೆಕಾಯಿಯಲ್ಲೂ ಅದೆಷ್ಟು ರೀತಿ? ಹೋಗಲಿ ನಮ್ಮ ದೇಶದ ಮಣ್ಣಿದೆಯಲ್ಲ ಅದೆಷ್ಟು ಬಗೆ? ಈ ನಮೂನೆ, ಥರ, ಬಗೆ, ರೀತಿಗಳೇ ಜಾತಿಗಳಾಗೋದು. ಬಣ್ಣವೋ, ರುಚಿಯೋ, ಗುಣ ಸ್ವಭಾವವೋ  ಜಾತಿ ಆಗಿಬಿಡುತ್ತದೆ ಸರಿ. ಆದರೆ ‘ನಾನೇ ಮೇಲು’ ಎಂಬ ಈ ‘ಶ್ರೇಷ್ಠತೆಯ ವ್ಯಸನ’ ಇದೆಯಲ್ಲ ಇದು; ವಿವೇಕ’ ಇರೋ ಮನುಷ್ಯ ಸಂಕುಲದಲ್ಲಿ ಮಾತ್ರ. ಅದು ಯಾವುದೇ, ಯಾರದೇ ಭಾಷಣವಿರಲಿ ಸಾಮಾನ್ಯವಾಗಿ ಶುರುವಾಗುವುದು ‘ಅಣ್ಣತಮ್ಮಂದಿರೇ’ ಎಂದಲ್ಲವೇ? ಆಸ್ತಿ ಹಂಚಿಕೊಳ್ಳುವುದು ಬೇಡ ಸ್ವಾಮಿ, ಒಟ್ಟಿಗೆ ಕೂತು ಒಂದೇ ಸಾಲಿನಲ್ಲಿ ಊಟ ಮಾಡಲೇನು ಅಡ್ಡಿ? ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡಿಸಲೇನು ಸಂಕಟ? ನಮ್ಮೂರ ದೇವಸ್ಥಾನಕ್ಕೆ ಇದೇ ಅಣ್ಣತಮ್ಮಂದಿರೆಲ್ಲ ಬಂದರೇಕೆ ಕಿರಿಕಿರಿ?

ಸಮಸ್ಯೆ ಇರುವುದೇ ಈ ನಡೆನುಡಿಯ ನಡುವಿನ ಅಂತರದಲ್ಲಿ. ಅಸಲಿಗೆ ನಮ್ಮ ವೇದಗಳು, ಉಪನಿಷತ್ತುಗಳು ಜಗತ್ತಿನ ಹಿತವನ್ನೇ ಮಾತನಾಡುತ್ತವೆ. ಆದರೆ ವೇದದ ವಕ್ತಾರಿಕೆ ಹಿಡಿದೋರು ಜಗತ್ತಿನಲ್ಲಿ ಪಕ್ಕದ ಕೇರಿಯವನನ್ನೂ ಹತ್ತಿರ ಸೇರಿಸುವುದಿಲ್ಲ, ಶರಣರನ್ನು, ವಚನಕಾರರನ್ನು ಕಂಠಪಾಠ ಮಾಡಿರೋರು ಇದಾರೆ, ಅರ್ಥ ತಿಳಿದು ಆಚರಿಸುವವರನ್ನು ಹುಡುಕಬೇಕಷ್ಟೆ. ಕೋಲಾರ ಜಿಲ್ಲೆಯಲ್ಲಿ ಬಸ್ಸಿನಲ್ಲೊಮ್ಮೆ ಪ್ರಯಾಣಸಾಗಿತ್ತು. ಹಳ್ಳಿಯೊಂದರಲ್ಲಿ ಬಸ್ಸು ನಿಂತಾಗ ಕೆಲವು ಕಾಲೇಜು ಹುಡುಗರು ಹತ್ತಿದರು. ಹಾಗೆ ಬಂದು ಪಕ್ಕದಲ್ಲಿ ಕೂತವನ ಹತ್ತಿರ ಮಾತಿಗಿಳಿದಿದ್ದೆ. ಹೆಸರು, ಊರು, ಕಾಲೇಜು, ಕೋರ್ಸು, ಕಾಂಬಿನೇಶನ್ ಕೇಳುತ್ತಲೇ ‘ನಿಮ್ಮ ಊರಲ್ಲೊಂದು ಚರ್ಚ್ ಆಗಿದೆಯಂತಲ್ಲ, ಹೌದಾ?’ ಎಂದೆ. ಮತ್ತಷ್ಟು ಓದು »

15
ನವೆಂ

ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ

-ರಾಕೇಶ್ ಏನ್  ಎಸ್

ಸೋಲು… ಸೋಲು… ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.

ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.

ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.

೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್‌ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ. ಮತ್ತಷ್ಟು ಓದು »

25
ಆಕ್ಟೋ

ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ

-ರಾಕೇಶ್ ಎನ್ ಎಸ್ 

ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಈ ಹಿಂದೆ ಕಾವೇರಿ ವಿವಾದ ೨೦೦೨-೦೩ರಲ್ಲಿ ಉಚ್ಚ್ರಾಯ ಹಂತದಲ್ಲಿದ್ದಾಗ ದೆಹಲಿಯ ಪ್ರಗತಿ ಮೈದಾನದಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನದಿ ಬಗ್ಗೆ ಒಂದು ಪ್ರದರ್ಶನ ಕಾರ್ಯಕ್ರಮ ಇಟ್ಟುಕೊಂಡಿತ್ತಂತೆ. ಅದರಲ್ಲಿ ಕಾವೇರಿ ನದಿ ತಮಿಳುನಾಡಿನ ಸಂಸ್ಕೃತಿ, ಪರಂಪರೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ, ತಮಿಳು ಜೀವನದಲ್ಲಿ ಕಾವೇರಿಯ ಪಾತ್ರದ ಬಗ್ಗೆ, ತಮಿಳಿನ ಕಾವ್ಯ, ಕೃತಿಗಳಲ್ಲಿ ಕಾವೇರಿಯ ಬಣ್ಣನೆ ಸೇರಿದಂತೆ, ಕಾವೇರಿ ಸೀಮೆಯ ಕೃಷಿ ಚಟುವಟಿಕೆಗಳ ಬಗ್ಗೆ ಛಾಯಾಚಿತ್ರ ಸಹಿತ ವಿವರಣೆಗಳಿದ್ದವು. ಕಾವೇರಿ ನದಿ ಪೂಂಪ್‌ಹಾರ್‌ನಲ್ಲಿ ಬಂಗಾಳ ಕೊಲ್ಲಿಯಲ್ಲಿ ಲೀನವಾಗುವ ಮೊದಲು ಅದು ಹೇಗೆ ಅಲ್ಲಿನ ಜನಜೀವನದ ಮೇಲೆ ಪರಿಣಾಮ ಉಂಟು ಮಾಡಿದೆ ಎಂಬುದನ್ನು ದೇಶದ ಜನರಿಗೆ ತಿಳಿಯಪಡಿಸಲು ಅಲ್ಲಿನ ಸರ್ಕಾರ ಕೈಗೊಂಡ ಕ್ರಮವಾದು.ಆದರೆ ನಾವು ಕಾವೇರಿ ನಮ್ಮ ತಾಯಿ ಎಂದು ಭಾವನಾತ್ಮಕವಾಗಿ ಬೊಬ್ಬಿರಿಯುತ್ತೇವೆ, ಆ ತಾಯಿಯನ್ನು ಬಳಸಿಕೊಂಡು ಅದೇಷ್ಟು ರಾಜಕೀಯ ಲಾಭ ಪಡೆಯಬಹುದೋ ಅಷ್ಟನ್ನೂ ಬಾಚಿಕೊಳ್ಳಲು ಬಯಸುತ್ತೇವೆ. ಕಾವೇರಿ ಹೆಸರಲ್ಲಿ ಅದೇಷ್ಟು ಸಾಧ್ಯವೋ ಅಷ್ಟು ಸಂಘಟನೆಗಳನ್ನು ಕಟ್ಟಿ ದೊಣ್ಣೆ ನಾಯಕರಾಗಲು ಹೊರಡುತ್ತೇವೆ. ಆದರೆ ಕಾವೇರಿ ನಮ್ಮ ರಾಜ್ಯಕ್ಕೆ ನೀಡಿದ ಸಾಂಸ್ಕೃತಿಕ, ಸಾಹಿತ್ಯಿಕ, ಚಾರಿತ್ರಿಕ, ಆರ್ಥಿಕ ಕೊಡುಗೆಗಳನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡುವುದೇ ಇಲ್ಲ. ಅದ್ದರಿಂದ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಸಿಗಬೇಕಾದ ನೈತಿಕ ಬೆಂಬಲ ಸಿಗದೇ ಅದು ತಮಿಳುನಾಡಿನ ಪಾಲಾಗುತ್ತಿದೆ. ಮತ್ತಷ್ಟು ಓದು »
10
ಆಕ್ಟೋ

ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?

-ಎ ಕೆ ಕುಕ್ಕಿಲ

1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,

          ಮತ್ತಷ್ಟು ಓದು »