ಆಧುನಿಕ ವಿಕ್ರಮಾದಿತ್ಯ, ಬೇತಾಳನೂ ಮತ್ತು ಕುರುನಾಡ ಉಳಿಸಿ ವೇದಿಕೆಯ ವ್ಯಥೆಯೂ…
-ಸಾತ್ವಿಕ್ ಎನ್ ವಿ
ಎಂದಿನಂತೆ ಬೇತಾಳವು ಲೇಡಿಸ್ ಹಾಸ್ಟೆಲ್ ಎದುರಿಗಿನ ಹುಣಸೆ ಮರದ ತನ್ನ ಕೊಂಬೆಯ ಮೇಲೆ ನೇತಾಡುತ್ತಿತ್ತು. ರಸ್ತೆ ಅಗಲೀಕರಣವಾಗುವಾಗ ತನ್ನ ಮರಕ್ಕೂ ಎಲ್ಲಿ ಕೊಡಲಿ ಬೀಳುತ್ತದೋ ಎಂಬ ಭಯ ಇದ್ದುದರಿಂದ ತರಗತಿಯಲ್ಲಿರುವ ಸಭ್ಯ ವಿದ್ಯಾರ್ಥಿಯಂತೆ ಒಂದೇ ಕಣ್ಣಿನಲ್ಲಿ ನಿದ್ದೆ ಮಾಡುತ್ತಿತ್ತು. ಇಂಥ ಸ್ಥಿತಿಯಲ್ಲಿ ವೋಟರ್ ಐಡಿಯಲ್ಲಿರುವ ಫೋಟೋದಂತೆ ಮುಖ ಮಾಡಿಕೊಂಡು ವಿಕ್ರಮರಾಜನು ಬೇತಾಳವನ್ನು ಸೆಳೆದುಕೊಂಡು ಹೋಗಲು ಧಾವಿಸಿದನು. ಆಗ ಬೇತಾಳವು ‘ನಿನಗಂತೂ ಕೆಲಸವಿಲ್ಲ. ಪದೇಪದೇ ಬಂದು ನನ್ನನ್ನು ಹೊತ್ತುಕೊಂಡು ಹೋಗುತ್ತಿಯಾ. ಆದರೆ ಒಮ್ಮೆಯೂ ನೀನು ನಿನ್ನ ಕೆಲಸದಲ್ಲಿ ಉತ್ತೀರ್ಣನಾಗಿಲ್ಲ. ಇದೆಲ್ಲ ನೋಡಿದರೆ ಮುಂದಿನ ಜನ್ಮದಲ್ಲಿ ನೀನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಎಲ್ಲ ಅರ್ಹತೆಗಳಿವೆ’ ಎಂದಿತು.
ಇದೆಲ್ಲವನ್ನೂ ತಲೆಗೆ ತೆಗೆದುಕೊಳ್ಳದ ವಿಕ್ರಮನು, ಮುಂದೆ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲದಿದ್ದರೂ ಮಕ್ಕಳಿಗೆ ಒಳಿತನ್ನೇ ಬಯಸುವ ಪಾಪದ ತಂದೆತಾಯಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕಾರ್ಯದಲ್ಲಿ ನಿರತನಾದನು. ಇವನ ಹಸುತನವನ್ನು ಗಮನಿಸಿದ ಬೇತಾಳದ ಮನಸ್ಸು ಕರಗಿ ವಿಕ್ರಮನೇ, ನಿನ್ನ ಕಾರ್ಯಶ್ರದ್ಧೆಯನ್ನು ಮೆಚ್ಚಿದ್ದೇನೆ. ಪದೇ ಪದೇ ವಿಫಲನಾದರೂ ಸ್ವಮೇಕ್ ಚಿತ್ರವನ್ನೇ ಮಾಡುವ ಕನ್ನಡ ನಿರ್ದೇಶಕನಂಥ ನಿನ್ನ ಅಚಲ ನಿರ್ಧಾರವನ್ನು ಗೌರವಿಸುತ್ತೇನೆ. ದಾರಿ ಸವೆಯಲಿ ಎಂದು ಕಥೆಯೊಂದನ್ನು ಹೇಳುತ್ತೇನೆ ಎಂದು ಹೇಳಿ ವಿಕ್ರಮನ ಅನುಮತಿಯನ್ನೂ ಕಾಯದೇ ಕಥೆಯೊಂದನ್ನು ಹೇಳಲು ಪ್ರಾರಂಭಿಸಿತು. ಮತ್ತಷ್ಟು ಓದು 
ರಾಮುಲು ಗೆಲುವು ಬಿಜೆಪಿಗೆ ದಿಗಿಲು
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (ಈ ಹಿಂದೆ ಕುರಗೋಡು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಹೆಚ್ಚಾಗಿ ಲಿಂಗಾಯತರೇ ಗೆದ್ದು ಬರುತ್ತಿದ್ದರು. ರಾಮುಲು ಈ ಪರಂಪರೆಯನ್ನು ಮುರಿದಿದ್ದಾರೆ (ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ). ಆದರೆ ಈ ಮುರಿಯುವ ಪ್ರಕ್ರಿಯೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಅನಭಿಷಿಕ್ತ ನಾಯಕ ತಾನೇ ಎಂದು ಸ್ವಯಂಘೋಷಿಸಿಕೊಂಡಿರುವ ಅಥವಾ ಆ ರೀತಿ ತನ್ನ ಭಟ್ಟಂಗಿಗಳಿಂದ ಘೋಷಿಸಲ್ಪಟ್ಟಿರುವ ಯಡಿಯೂರಪ್ಪರಿಗೆ ಒಂದು ರೀತಿಯಲ್ಲಿ ಹೊಡೆತ ಮತ್ತು ಮತ್ತೊಂದು ರೀತಿಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ಮತ್ತಷ್ಟು ಓದು 
ಅಗತ್ಯವಿರುವವರಿಗೆ ವಿಮೆ ಕವಚ ಇಲ್ವಾ ?
ಸೂಚನೆ ಕೊಟ್ಟುದಲ್ಲದೆ ಒಬ್ಬ ವಿಮಾ ಅಧಿಕಾರಿಯ ಸಂಪರ್ಕವನ್ನೂ ಶ್ರಿಪಡ್ರೆಯವರೇ ಕಲ್ಪಿಸಿಕೊಟ್ಟರು. ಹಾಗೆ ತಯಾರಿಯ ಗಡಿಬಿಡಿಯಲ್ಲಿಯೇ ಹಲವು ಬಾರಿ ಪುತ್ತೂರಿನ ವಿಮಾ ಕಛೇರಿಗೆ ಓಡಿದೆ. ಇದಕ್ಕೆ ಚಾಸಿ ನಂಬರ್ ಉಂಟಾ, ಆರ್ ಟಿ ಒ ಪರವಾನಿಗೆ ಉಂಟಾ ಇತ್ಯಾದಿ ಪ್ರಶ್ನೆಗಳ ಸರಮಾಲೆ ಮೇಲಿನವರು ರವಾನಿಸಿದರು. ಇಂತಹ ಗಾಡಿಗೆ ಹಿಂದೆ ಯಾವುದೇ ಬಾರತೀಯ ಕಂಪೇನಿ ವೀಮೆ ಕೊಟ್ಟಿರುವ ಸಾದ್ಯತೆ ಇಲ್ಲ. ಹಾಗಾಗಿ ನೀವೆ ಮೊದಲಿಗರಾಗಿರುತ್ತೀರಿ ಎಂದೂ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರ ನೈಜ ಬೆಲೆ, ಖಚಿತ ಗುರುತು ಮೇಲಿನವರಿಗೆ ಸ್ಪಷ್ಟ ಪಡಿಸಲು ತಿಂಗಳುಗಳೇ ಬೇಕು ಅನಿಸಿತು. ಹಾಗಾಗಿ ಪ್ರವಾಸದ ಅವದಿಗೆ ವೀಮಾ ಕವಚದ ಆಸೆ ಬಿಟ್ಟೆ.
ನನ್ನ ಪ್ರವಾಸದುದ್ದಕ್ಕೂ ಯಾರಲ್ಲೂ ನನ್ನ ತ್ರಿಚಕ್ರದ ನೈಜ ಬೆಲೆ ಹೇಳುತ್ತಿರಲಿಲ್ಲ. ಹತ್ತು ಸಾವಿರವೋ ಅಂದಾಗ ಹೂಂ ಅನ್ನುತ್ತಿದ್ದೆ. ಹದಿನೈದೋ ಅಂದಾಗ ಹೌದು ಅನ್ನುತ್ತಿದ್ದೆ. ಅಂತೂ ಏನೂ ತೊಂದರೆಯಾಗದೆ ಸುಮಾರು ಒಂದೂವರೆ ವರ್ಷಗಳಿಂದ ಸುದಾರಿಸುತ್ತಿದ್ದೇನೆ. ನಮ್ಮೂರಲ್ಲಿ ಇಂತಹ ಬೇರೆ ತ್ರಿಚಕ್ರ ಇಲ್ಲದಿರುವದರಿಂದ ಕಳವು ಸಾದ್ಯತೆ ಕಡಿಮೆ. ಕದ್ದರೂ ಉಪಯೋಗಿಸುವುದು ಕಷ್ಟ. ಆಯಾ ಊರಲ್ಲಿ ನೆಲೆ ಇಲ್ಲದ ಪ್ರವಾಸಿಗಳು ಯಾವಾಗಲೂ ಪುಡಿಕಳ್ಳರ ಬಲಿಪಶು.
* * * * * * * * *
ಚಿತ್ರಕೃಪೆ: 1.bp.blogspot.com
ಸಂಸ್ಕೃತಿ ಸಂಕಥನ -14 -ಏನಿದು ಸೆಕ್ಯುಲರಿಸಂ
ರಮಾನಂದ ಐನಕೈ
ರಿಲಿಜನ್ ಅನ್ನುವುದು ಮನುಷ್ಯ ಚಿಂತನೆಯಿಂದ ಹುಟ್ಟಿದ್ದಲ್ಲ. ಅದು ಗಾಡ್ನ ಕೊಡುಗೆ. ಹಾಗಾಗಿ ರಿಲಿಜನ್ನಿನ ನಂಬಿಕೆ ಹಾಗೂ ಆಚರಣೆ ಎಂಬುದು ಮನುಷ್ಯನಿಗೆ ಗಾಡ್ ಹಾಕಿಕೊಟ್ಟ ಪಾಠ. ರಿಲಿಜನ್ ಅನುಭವಿಸುವುದು ಪ್ರತಿಯೊಬ್ಬ ಕ್ರಿಶ್ಚಿಯನ್ನನ ಹಕ್ಕು. ರಿಲಿಜನ್ ಅನ್ನುವುದು ಮನುಷ್ಯ ನಿರ್ಮಿತ ಪ್ರಭುತ್ವವನ್ನೂ ಮೀರಿದ ಒಂದು ದೈವಿವ್ಯವಸ್ಥೆ ಎಂಬ ಗಾಢವಾದ ನಂಬಿಕೆಯಿದ್ದ ಸಂದರ್ಭದಲ್ಲಿ ಕೆಥೋಲಿಕ್ ಹಾಗೂ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ ಪಂಥ ರಿಲಿಜನ್ನಿನ ನಂಬಿಕೆಯ ಕುರಿತು ಒಳಜಗಳವನ್ನು ಪಂಚಾಯತಿಗೆ ತಂದಾಗ ಪ್ರಭುತ್ವ ಏನು ಮಾಡಬೇಕು? ಯಾರಿಗೆ ನ್ಯಾಯ ಕೊಟ್ಟರೂ ರಿಲಿಜನ್ನಿಗೆ ಅನ್ಯಾಯವಾಗುತ್ತದೆ. ಇದು ಪ್ರಭುತ್ವದ ಸಂದಿಗ್ಧ ಅಲ್ಲೇ ಹುಟ್ಟಿತು ಈ ಸೆಕ್ಯುಲರಿಸಂ ಎಂಬ ಹೊಸ ವಾಸ್ತವ……………
ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕಾಗಿ ನಾವು ‘ಸೆಕ್ಯುಲರಿಸಂ’ ಅನ್ನುವ ಪದವನ್ನು ಉಪ ಯೋಗಿಸುತ್ತೇವೆ. ಸೆಕ್ಯುಲರಿಸಂ ಆಧುನಿಕ ಚಿಂತನೆಯ ಪ್ರಮುಖ ಅಂಗವೇ ಆಗಿದೆ. ಹಾಗಾ ದರೆ ಸೆಕ್ಯುಲರಿಸಂ ಅನ್ನುವುದರ ಅರ್ಥ ಏನು? ನಮ್ಮ ಪರಿಸ್ಥಿತಿ ಏನಾಗಿದೆ ಎಂದರೆ ಸೆಕ್ಯುಲರಿಸಂ ಅಂದರೆ ಮನಸ್ಸಿನಲ್ಲಿ ಅರ್ಥವಾದಂತಾಗುತ್ತದೆ. ಆದರೆ ಅದನ್ನು ಬಾಯಲ್ಲಿ ಹೇಳಲಿಕ್ಕೆ ಬರುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿ ಸೆಕ್ಯುಲರಿಸಂನ ಅನುಷ್ಠಾನ ಅಷ್ಟು ಗೋಜಲಾಗಿದೆ. ಹೀಗೆ ಹೇಳಲಿಕ್ಕೆ ಬಾರದ ಸೆಕ್ಯುಲರಿಸಮ್ಮೆ ದೇಶದ ಅನೇಕ ತೊಂದರೆಗಳಿಗೆ ಕಾರಣವಾಗಿದೆಯೋ ಎಂಬುದನ್ನು ಅರಿತುಕೊಳ್ಳ ಬೇಕಾಗಿದೆ. ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾಧರರು ಕರ್ನಾಟಕದ ತುಂಬ ಸಂಚರಿ ಸುತ್ತ ಹೀಗೆ ಹೇಳಲುಬಾರದ ಅನೇಕಾನೇಕ ಸಂಗತಿಗಳನ್ನು ಸುಸಂಬದ್ಧವಾಗಿ ಹೇಳುವ ತಿಳುವಳಿಕೆ ನೀಡುತ್ತಿದ್ದಾರೆ.
ಏನ್ ಇವಾಗ? ನಾವ್ ಇರೋದೇ ಹೀಗೆ…
-ಸಾತ್ವಿಕ್ ಎನ್ ವಿ
ಒಮ್ಮೊಮ್ಮೆ ಇಂಥ ಪ್ರಸಂಗಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುವುದಿಲ್ಲ. ನಿನ್ನೆ ನಮ್ಮ ಮೇಡಂ ಒಬ್ಬರು ಕಾಲ್ ಮಾಡಿ ’ಸಾತ್ವಿಕ್ ನಿಮ್ಮ ಕಡೆ ಯಾರಾದ್ರೂ ಹುಡುಗಿಯಿದ್ದರೆ ಹೇಳೋ ಅಂದ್ರು’. ಅದಕ್ಕೆ ತಮಾಷೆಯಿಂದ ’ನಾನು ಒಂದು ವಧುವರರ ಕೇಂದ್ರ ತೆಗೆದ್ರೆ ಒಳ್ಳೆ ಕಲೆಕ್ಷನ್ ಆಗಬಹುದು ಅಲ್ವಾ ಮೇಡಂ’ ಅಂದೆ. ಅವರು ತಮ್ಮ ಮಾತಿನಲ್ಲಿ ಗಂಭೀರತೆಯನ್ನು ಬಿಟ್ಟು ಕೊಡದೇ ’ಹಾಗಲ್ಲ, ನಿನಗೆ ಗೊತ್ತಲ್ಲ. ನಮ್ಮಲ್ಲಿ ಅಬಕ ಜಾತಿಯ ವಧುಗಳು ಸಿಗೋದು ಬಹಳ ಕಷ್ಟ ಆಗಿದೆ. ಹಾಗಾಗಿ ಅನಿವಾರ್ಯವಾಗಿ ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಅಂದ್ರು. ನನ್ನ ವಯಸ್ಸಿನ ಯೋಚನೆಗೆ ನಿಲುಕದ ವಿಷಯವಾದ ಕಾರಣ ’ಆಯ್ತು ಮೇಡಂ ಪ್ರಯತ್ನಿಸುತ್ತೇನೆ’ ಅಂತ ಹೇಳಿ ಮಾತನ್ನು ಮುಗಿಸಲು ನೋಡಿದೆ.
ಕುತೂಹಲಕ್ಕೆ ’ವರನ ಮನೆಯ ಕಡೆಯಿಂದ ಏನೇನು ನಿರೀಕ್ಷೆಗಳಿರುತ್ತವೆ’ ಅಂತ ಕೇಳಿದೆ. ’ಅಂಥ ವಿಶೇಷಗಳೇನು ಇಲ್ಲ. ಹುಡುಗಿ ತಕ್ಕ ಮಟ್ಟಿಗೆ ಓದಿದ್ದರೆ ಸಾಕು. ಆದರೆ ಆಕೆ ಹುಟ್ಟಿನಿಂದ ಸಸ್ಯಾಹಾರಿ ಕುಟುಂಬದ ಹುಡುಗಿ ಆಗಿರಬೇಕು. ಮದುವೆಯ ನಂತರ ತನ್ನ ತವರಿನ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಅಕೆಯ ಮನೆಯವರು ವರನ ಮನೆಗೆ ಬರುವುದಾಗಲಿ ಅಥವಾ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಮಾಡಬಾರದು. ಇವು ಸದ್ಯ ವರನ ಮನೆಯವರು ನಿರೀಕ್ಷಿಸುತ್ತಿರುವ ಅಗತ್ಯಗಳು’ ಎಂದರು. ಎರಡನೆಯ ಸಂಗತಿಯನ್ನು ಕೇಳಿ ನನಗೆ ಸಖೇದಾಶ್ಚರ್ಯವಾಯಿತು.
ಹೆಣ್ಣು ಮಕ್ಕಳ ಕೊರತೆಯಿರುವ ಬೇರೊಂದು ಜಾತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಬೇಕಾದ ಪರಿಸ್ಥಿತಿಯಿರುವ ಜನರಿಗೂ ಇಷ್ಟೊಂದು ಕರಾರು ಮತ್ತು ಆಯ್ಕೆಗಳಿರುತ್ತವೆಯೇ? ಕೊಡುವವರಿಗೆ ಆಯ್ಕೆಗಳಿರುತ್ತವೆ. ಆದರೆ ಕೇಳುವವರಿಗೆ? ಮತ್ತಷ್ಟು ಓದು 
ದೇವರು, ಧರ್ಮ ಮತ್ತು ಮತ
– ಗೋವಿಂದ ರಾವ್ ವಿ ಅಡಮನೆ
ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.
ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ
– ರಾಕೇಶ್ ಶೆಟ್ಟಿ
ಇದನ್ನ ಈ ದೇಶದ ಕರ್ಮ ಅಂತಲೇ ಅನ್ನಬೇಕೇನೋ, ಅಂದುಕೊಂಡಂತೆ ‘ಮಡೆ ಸ್ನಾನ’ದ ‘ಮಡೆ'(ಮಡೆ=ಎಂಜಲು) ಉರುಳದವರ ಮೇಲೆಯೂ ಬೀಳುತ್ತಿದೆ.ಇಷ್ಟು ದಿನ ಉರುಳಾಡಿದ್ದು ಮನುಷ್ಯರಾದರೆ ಈಗ ಸಮಸ್ತ ಜಾತಿಗಳು ಬಿದ್ದು ಉರುಳಾಡುತ್ತಿವೆ.ಮಡೆ ಸ್ನಾನವನ್ನು ವಿರೋಧಿಸಿ ನಾನು ಈ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ‘ಅದು ಬ್ರಾಹ್ಮಣರ ಎಂಜಲೆಲೆ’ ಅನ್ನುವ ಕಾರಣಕ್ಕೆ ವಿರೋಧಿಸುತಿದ್ದಿರ ಅನ್ನುವಂತಹ ಪ್ರತಿಕ್ರಿಯೆಗಳು ಬ್ಲಾಗಿನಲ್ಲಿ/ಮಿಂಚೆಗಳ ಮೂಲಕ ಬಂದಿವೆ. ನನ್ನ ಲೇಖನದಲ್ಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದೆ, ಅದ್ಯಾವ ಜಾತಿಯವರು ತಿಂದು ಮತ್ತಿನ್ಯಾವಾ ಜಾತಿಯವ ಅದರ ಮೇಲೆ ಉರುಳಾಡುವುದು ಅಷ್ಟೇ ಅಸಹ್ಯಕರ’ ಅಂತ.
ಅಂದರೆ,ಅದು ಕುಕ್ಕೆಯ ಮಡೆ ಸ್ನಾನವಿರಲಿ ಅಥವಾ ತುರುವೇಕೆರೆಯ ಮಡೆಸ್ನಾನವಿರಲಿ ಎರಡೂ ಅಸಹ್ಯಕರವೇ, ಎರಡೂ ಖಂಡನೀಯವೇ.ಮಡೆ ಸ್ನಾನದ ಪರ-ವಿರೋಧ ಮಾತನಾಡುವವರು ನೆನಪಿಡಬೇಕಾದದ್ದು ‘ಈ ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ ಹೊರತು ಜಾತಿಗಾಗಿಯಲ್ಲ’ ಅನ್ನುವುದು.
ನಾವು ನಿಜಕ್ಕೂ ತಾಂತ್ರಿಕತೆಯನ್ನು ಬಳಸ್ತಾ ಇದೇವ?

ಈ ದೌರ್ಜನ್ಯಗಳಿಗೆ ಕೊನೆ ಎಂದು?
-ವಿಜಯೇಂದ್ರ
ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.
೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.
ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು 
ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ
-ಪ್ರವೀಣ್. ಟಿ. ಎಲ್
ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.
ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ. ಮತ್ತಷ್ಟು ಓದು 








