ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

19
ಮಾರ್ಚ್

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

-ಚಕ್ರವರ್ತಿ ಸೂಲಿಬೆಲೆ

Rama Sethuve1ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.

ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.

ಮತ್ತಷ್ಟು ಓದು »

18
ಮಾರ್ಚ್

ನರೇಂದ್ರ ಮೋದಿ v /s ರಾಹುಲ್ ಗಾಂಧಿ …ಅನುಭವಿ v /s ಅನನುಭವಿ

– ಅಜಿತ್ ಶೆಟ್ಟಿ,ಉಡುಪಿ

NaGa೨೦೧೪ ರ ಲೋಕಸಭೆ ಮಹಾಸಮರ ಇನ್ನೇನು ಬಂದೇ ಬಿಡುತ್ತೆ.ಎರಡು ಪ್ರಮುಖ ಒಕ್ಕೂಟಗಳಾದ ಎನ್.ಡಿ.ಎ ಹಾಗೂ ಯು.ಪಿ.ಎ ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಅಧಿಕೃತವಾಗಿ ಘೋಷಿಸದಿದ್ದರೂ, ತಮ್ಮ ಪ್ರಧಾನಿ ಅಭ್ಯರ್ಥಿಗೆ ಸಕಲ ವೇಷ-ಭೂಷಣ ತೊಡಿಸಿ ರಂಗಕ್ಕೆ ಇಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ. ನೆಹರು ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಚಿಂತನಾ ಶಿಬಿರ ದಲ್ಲಿ ಆ ವಂಶದ ಕುಡಿ , ನಲವತ್ತು ಮೀರಿದ ಯುವಕ ರಾಹುಲ್ ಗಾಂಧಿ ಯವರಿಗೆ ಪಕ್ಷದಲ್ಲಿ “ನಂಬರ್ ಟೂ” ಸ್ಥಾನ ಕೊಟ್ಟು ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ವೀರಪ್ಪ ಮೊಯಿಲಿ, ದಿಗ್ವಿಜಯ್ ಸಿಂಗ್ , ಜಿತೀನ್ ಪ್ರಸಾದ್ ರಂತವರು ರಾಹುಲ್ ಗುಣಗಾನದಲ್ಲೇ ತೊಡಗಿ ಬಹಿರಂಗವಾಗೇ ಅವರನ್ನು ಪ್ರಧಾನಿ ಅಭ್ಯರ್ಥಿಎಂದಿದ್ದಾರೆ.ಎನ್.ಡಿ.ಎಯ ಪ್ರಮುಖ ಪಕ್ಷ ಬಿಜೆಪಿ ಇತ್ತೀಚಿಗೆ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಗುಜರಾತ್ ನ ಮೂರುಬಾರಿಯ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಆದ್ಯತೆ ನೀಡಿದೆ . ಪಕ್ಷದಲ್ಲಿ ಏನೇ ಗೊಂದಲ ಇದ್ದರೂ, ಕಾರ್ಯಕಾರಿ  ಸಭೆಯಲ್ಲಿ ಮೋದಿಗೆ ಕೊಟ್ಟ ಪ್ರಾಮುಖ್ಯತೆ ಸೂಚ್ಯವಾಗಿ ಮೋದಿನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನುವಂತಿತ್ತು.ಹಾಗೇ ಪಕ್ಷದ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ರ ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡುತಿತ್ತು .

ಒಂದು ವೇಳೆ ಈವರಿರ್ವರು ಪ್ರಧಾನಿ ಅಭ್ಯರ್ಥಿಗಳಾದರೆ, ಮೋದಿ ಮುಂದೆ ರಾಹುಲ್ ಎನ್ನುವುದು ಅನುಭವಿ ಭೀಷ್ಮನ ಮುಂದೆ ಅನನುಭವಿ ಬಡಾಯಿ ಉತ್ತರ ಕುಮಾರನನ್ನು ತಂದು ನಿಲ್ಲಿಸಿದಂತೆ.ಇದು ನಿಸ್ಸಂಶಯವಾಗಿ ಅನುಭವಿ v /s ಅನನುಭವಿ ನಡುವಿನ ಸಮರ.ಹೌದು ಮೇಷ್ಟ್ರ ಮಗ ಮೇಷ್ಟ್ರು ಅಗಬಾರದು, ಡಾಕ್ಟರ್ ಮಗ ಡಾಕ್ಟರ್ ಆಗಬಾರದು ಅಂತೇನು ಇಲ್ಲಾ ಹಾಗೇ ತಲತಲಾಂತರದಿಂದ ರಾಜಕೀಯ ವಂಶದಿಂದ ಬಂದ ರಾಜಕಾರಣಿ ಮಗ ಪ್ರದಾನಿ ಆಗಬಾರದಂತೆನೂ ಇಲ್ಲ.ಆದರೆ, ಅವನು ತನ್ನ ಸ್ವಂತ ಅರ್ಹತೆಯಿಂದ ಆ ಪದವಿ ಪಡೆಯಬೇಕೇ ವಿನಹ , ತನ್ನ ತಂದೆ ಅನುಭವಿಸಿದ ಹುದ್ದೆ, ತಂದೆ ಹೆಸರು , ಕುಟುಂಬದ ಹೆಸರು ಇವನ ಅರ್ಹತೆ ಆಗಬಾರದು. ರಾಹುಲ್ ತನ್ನ ಕುಟುಂಬ ನಡೆಸಿದ ಅಧಿಕಾರ ನೋಡಿದ್ದಾನೆ ಹೊರತು ಅಧಿಕಾರ ನಡೆಸಿ ಗೊತ್ತಿಲ್ಲ . ರಾಹುಲ್ ಈ ತನಕ ಉಸ್ತುವಾರಿ ವಹಿಸಿಕೊಂಡ ಬಿಹಾರ್ , ಗುಜರಾತ್ , ತಮಿಳುನಾಡು , ಮತ್ತು ಆತನ ಸ್ವಕ್ಷೇತ್ರ ಅಮೇಥಿಯನ್ನು ಹೊಂದಿರುವ ಉತ್ತರ ಪ್ರದೇಶದ  ಚುನಾವಣೆ  ಎಲ್ಲಾ ಕಡೆ ಕಾಂಗ್ರೆಸ್ ಮಕಾಡೆ ಮಲಗಿತ್ತು.ಉತ್ತರ ಪ್ರದೇಶದ ಚುನಾವಣೆಯಂತು ರಾಹುಲ್ v /s ಅಕಿಲೇಶ್ ಅಂತಾನೇ ಬಿಂಬಿತ ವಾಗಿತ್ತು.ಅಲ್ಲೂ ಕಾಂಗ್ರೆಸ್ಗೆ ಸೋಲು.ರಾಹುಲ್ ನ ಸ್ವಕ್ಷೇತ್ರ ಅಮೇಥಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ತೀವ್ರ ಮುಖ ಭಂಗ ಅನುಭವಿಸಿತ್ತು.ಜನ ಸ್ಪಷ್ಟವಾಗಿ ರಾಹುಲ್ ರ ನಾಯಕತ್ವವನ್ನು ನಿರಾಕರಿಸಿದ್ದು ಎದ್ದು ಕಾಣುತ್ತಿತ್ತು.
ಮತ್ತಷ್ಟು ಓದು »

14
ಮಾರ್ಚ್

ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ

– ಸಂತೋಶ್ ತಮ್ಮಯ್ಯ

Pratap Simha's bookಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.

ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.

ಮತ್ತಷ್ಟು ಓದು »

8
ಮಾರ್ಚ್

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್

-ಡಾ. ಅಶೋಕ್ ಕೆ ಆರ್

Manik Sarkarಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.

“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ತ್ರಿಪುರದಲ್ಲಿ 1998ರಿಂದಲೂ ಮುಖ್ಯಮಂತ್ರಿಯಾಗಿರುವವರು ಮಾಣಿಕ್ ಸರ್ಕಾರ್! ಜನವರಿ 22 1949ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ವಿಧ್ಯಾರ್ಥಿ ದೆಸೆಯಲ್ಲಿದ್ದಾಗ ನಕ್ಸಲ್ ವಿಚಾರಧಾರೆಗಳಿಗೆ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷ ಸೇರಿದರು. ಎಸ್ ಎಫ್ ಐನ ಪ್ರತಿನಿಧಿಯಾಗಿ, ಎಸ್ ಎಫ್ ಐನ ರಾಜ್ಯ ಕಾರ್ಯದರ್ಶಿಯಾಗಿ, ಅದೇ ಎಸ್ ಎಫ್ ಐನ ಅಖಿಲ ಭಾರತ ಸಮಿತಿಗೆ ಉಪಾಧ್ಯಕ್ಷನಾಗಿ ತಮ್ಮ ಹೋರಾಟದ ಹಾದಿಯನ್ನು ಮುಂದುವರೆಸಿದ ಮಾಣಿಕ್ 1972ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಮಿಟಿಯ ಸದಸ್ಯನಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಾರ್ಯದರ್ಶಿಯಾಗುತ್ತಾರೆ. ಅದೇ ವರ್ಷ ಎಡರಂಗ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತದೆ. 1985ರಲ್ಲಿ ಮಾಣಿಕ್ ಸರ್ಕಾರ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯರಾಗುತ್ತಾರೆ.

ಮತ್ತಷ್ಟು ಓದು »

28
ಫೆಬ್ರ

ಅವರಿಗೆ ಸಾಚಾರ್ ವರದಿ: ನಮಗೇಕಿಲ್ಲ ಪಚೌರಿ ವರದಿ?

-ಸಂತೋಷ್ ತಮ್ಮಯ್ಯ

Rama Sethuveಭಾರತದಲ್ಲಿ ಹಿಂದುಗಳು ಎಂದರೆ ಎರಡನೇ ದರ್ಜೆಯ ಜನರು ಮತ್ತು ಹಿಂದುಗಳನ್ನು ಎಲ್ಲಿಡಬೇಕೋ ಅಲ್ಲೇ ಇಡಲಾಗುತ್ತಿದೆ ಎಂಬುದಕ್ಕೆ ರಾಮಸೇತು ಪ್ರಕರಣವೇ ಸಾಕ್ಷಿ. ಕೇಂದ್ರ ಸರಕಾರ ರಾಜೇಂದ್ರ ಪಚೌರಿ ವರದಿಯನ್ನು ತಿರಸ್ಕರಿಸುವುದರ ಮೂಲಕ ಅದನ್ನು ಸಾಭೀತುಪಡಿಸಿದೆ. ಸುಪ್ರಿಂಕೋರ್ಟಿಗೆ ತಾನು ಸೇತುಸಮುದ್ರಂ ಯೋಜನೆಯನ್ನು ಮಾಡಲು ಬಯಸಿರುವುದಾಗಿಯೂ, ಇಷ್ಟಿಷ್ಟು ಖರ್ಚುವೆಚ್ಚಗಳನ್ನು ಅದಕ್ಕಾಗಿ ಇಟ್ಟಿರುವುದಾಗಿಯೂ ಇದು ರಾಷ್ಟ್ರದ ಮಹತ್ತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಎಂಬುದರ ಬಗ್ಗೆ ಅಫಿಡವಿಟ್ ಅನ್ನು ಸಲ್ಲಿಸಿದೆ.
ಸಲ್ಲಿಸದೇ ಇನ್ನೇನು ತಾನೇ ಮಾಡಿಯಾರು? ರಾಮಸೇತು ಹಿಂದೂ ಭಾವನೆಗಳಿಗೆ ಸಂಬಂಧಪಟ್ಟ ಸಂಗತಿ, ರಾಮಸೇತು ರಾಮಾಯಣಕ್ಕೆ ಸಂಬಂಧಪಟ್ಟ ಸಂಗತಿ, ರಾಮಸೇತು ಹಿಂದೂ ತತ್ತ್ವಶಾಸ್ತ್ರ, ಅಧ್ಯಾತ್ಮದ ಪರಾಕಾಷ್ಠೆಗೆ ಸಂಬಂಧಪಟ್ಟ ಸಂಗತಿ, ರಾಮಸೇತು ವಿಶ್ವದ ಓರ್ವ ಮಹಾನ್ ಆದರ್ಶಪುರುಷನೊಬ್ಬನ , ಧರ್ಮಸಂಸ್ಥಾಪಕನೊಬ್ಬನಿಗೆ ಸಂಬಂಧಪಟ್ಟ ಸಂಗತಿ.  ಆ ಆದರ್ಶಪುರುಷ  ಹಿಂದೂ ದೇವರು ಎಂಬ ಉದಾಸೀನತನ ಸರಕಾರಕ್ಕೆ ಇರುವಾಗ ಈ ಸರಕಾರ ಅಫಿಡವಿಟ್ ಅನ್ನೂ ಸಲ್ಲಿಸುತ್ತದೆ ಮತ್ತು ಅಯೋಧ್ಯೆಯನ್ನೂ ತುಂಡುಮಾಡಿ ಹಂಚಿಬಿಡುತ್ತದೆ. ಅಂದು ಬಾಬರ್ ಮಾಡಿದಂತೆ ರಾಮಕುರುಹನ್ನೇ ಒಡೆಯುತ್ತದೆ. ಹಾಗಾಗಿ ರಾಜೇಂದ್ರ ಪಚೌರಿ ಎಂಬ ವಿಶ್ವವಿಖ್ಯಾತ ಪರಿಸರ ಶಾಸ್ತ್ರಜ್ನ, ಚಿಂತಕ ಹೇಳುವ ಮಾತನ್ನು ಸರಕಾರ ಕೇಳುವ ಸ್ಥತಿಯಲ್ಲಿರುವುದಿಲ್ಲ. ಅದನ್ನು ತಿರಸ್ಕರಿಸದೇ ಇರುವುದಿಲ್ಲ.
ಕೆಲವರ್ಷಗಳ ಹಿಂದೆ ರಾಜೇಂದ್ರ ಪಚೌರಿ ವರದಿ ಸರಕಾರದ ಸೇತುಸಮುದ್ರಂ  ಯೋಜನೆಯ ಅವೈಜ್ನಾನಿಕತೆ ಮತ್ತು ತಿಕ್ಕಲುತನಗಳನ್ನು ಎಳೆಎಳೆಯಾಗಿ ಬಿಡಿಸಿ ವರದಿಯನ್ನು ಸಿದ್ಧ ಮಾಡಿತ್ತು. ಭೂಗೋಳದ ದಕ್ಷಿಣದ ಸಮುದ್ರಗಳ ಜಲಚರಗಳ ತವರು ಮನೆ ಈ ಪ್ರದೇಶ ಎಂದು ಬಣ್ಣಿಸಿತ್ತು. ಈ ಪ್ರದೇಶದಲ್ಲಿ ನಡೆಯುವ ಯಾವುದೇ ಮಾನವ ಹಸ್ತಕ್ಷೇಪಗಳು ಈ ಜಲಚರಗಳ ಸಂತತಿಯನ್ನು ಕೊಲ್ಲುತ್ತದೆ ಎಂದು ಹೇಳಿತ್ತು. ಮತ್ತು ಭಾರತ ಮತ್ತು ಶ್ರೀಲಂಕಾ ನಡುವಿನ ಕಡಲ್ಗಾಲುವೆಗೆ  ಪರ್ಯಾಯ ಮಾರ್ಗವನ್ನು ಸೂಚಿಸಿತ್ತು. ಆದರೆ ಸರಕಾರ, ಯಾವ ರಾಜೇಂದ್ರ ಪಚೌರಿಯವರ ಮಾತಿಗಾಗಿ ವಿಶ್ವಸಂಸ್ಥೆ ಕಾಯುತ್ತದೆಯೋ, ಯಾವ ರಾಜೇಂದ್ರ ಪಚೌರಿಯವರ ಒಂದು ಸಲಹೆಗಾಗಿ ಯುನೆಸ್ಕೋ ಬೇಡಿಕೊಳ್ಳುತ್ತದೆಯೋ, ಯಾವ ರಾಜೇಂದ್ರ ಪಚೌರಿಯವರ ಡೇಟ್‌ಗಾಗಿ ವಿದೇಶದ ವಿಶ್ವವಿದ್ಯಾಲಯಗಳು ಕಾಯುತ್ತವೆಯೋ, ಯಾವ ನೊಬೆಲ್ ಪ್ರಶಸ್ತಿ ಸಮಿತಿ ಯಾವ ರಾಜೇಂದ್ರ ಪಚೌರಿಯವರನ್ನು ಆಹ್ವಾನಿಸುತ್ತದೆಯೋ ಅಂಥ ಪಚೌರಿಯವರನ್ನು, ಅವರ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ. ಕಾರಣ ರಾಮ ಹಿಂದು. ರಾಮಸೇತು ಹಿಂದೂ ಭಾವನೆ.ಅದು ದೇಶದಲ್ಲಿ ಅಂಥಾ ದೊಡ್ಡ ಸಂಗತಿಯೇನಲ್ಲ ಎಂಬ ತನ್ನ ಎಂದಿನ ಕಾಂಗ್ರೆಸ್ ನೀತಿ. ಹಾಗಾಗಿ ಕಾಂಗ್ರೆಸ್‌ಗೆ ಯಾವಾಗಲೂ ಮುಸಲ್ಮಾನರಿಗೆ ಹೆಚ್ಚು ತಿನ್ನಿಸಿ, ಅವರಿಗೆ ಹೆಚ್ಚು ಕುಡಿಸಿ, ಹೆಚ್ಚು ಸಂಬಳ ಕೊಡಿಸಿ, ಹೆಚ್ಚುಹೆಚ್ಚಾಗಿ ಮಿಲಿಟರಿಗೆ ಸೇರಿಸಿಕೊಳ್ಳಿ, ಮೇಷ್ಟ್ರನ್ನಾಗಿ ನೇಮಿಸಿಕೊಳ್ಳಿ,ಗುಮಾಸ್ತರನ್ನಾಗಿಸಿಕೊಳ್ಳಿ. ಅವರನ್ನು ಜತನದಿಂದ ನೋಡಿಕೊಂಡಿರಿ. ಪಾಪ ಅವರು ಬಡವರು ನೋಡಿ, ಮೀಸಲಾತಿ ಸಿಗದೇ ಇದ್ದರೆ ಅವರು ಸತ್ತೇಹೋದಾರು ಎಂದೆಲ್ಲಾ ಆಲಾಪಿಸುವ ರಾಜೇಂದ್ರ ಸಾಚಾರ್ ವರದಿ ಮಾತ್ರ ಇಷ್ಟವಾಗುತ್ತದೆ. ರಾಜೇಂದ್ರ ಪಚೌರಿ ವರದಿ ಮೂಲೆಗುಂಪಾಗುತ್ತದೆ.

ಮತ್ತಷ್ಟು ಓದು »

26
ಫೆಬ್ರ

ರಾಮಸೇತು: ಭಕ್ತಿ ಭಾವನೆಯ ಜೊತೆಗೆ ಜೀವನೋಪಾಯದ ಪ್ರಶ್ನೆಯೂ ಹೌದು

– ಅಜಿತ್ ಶೆಟ್ಟಿ,ಉಡುಪಿ

Raama Setuveರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥಗಳಾಗಿದ್ದು, ಈ ಎರಡೂ ಕೃತಿಗಳು ಇತಿಹಾಸದ ಕಥೆಗಳಾಗಿವೆ .ಅನಾದಿಕಾಲದಿಂದ ಮಹಾಪಂಡಿತರು, ತಿಳಿದವರು ಇವನ್ನು ಪಂಚಮವೇದವೆಂದು ಕೈ ಮುಗಿಯುತ್ತಾರೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನಜೀವನದಲ್ಲಿ ಮಿಳಿತವಾಗಿರುವ ಈ ಪವಿತ್ರ ಗ್ರಂಥಗಳ ಯಥಾರ್ಥವೇನು ಎಂದು ಕೇಳಿದರೆ ಏನೂಂತ ಹೇಳಬೇಕು? ಆರ್ಯ-ದ್ರಾವಿಡರು ವೈರಿಗಳೆಂದು ಕಥೆ ಕಲ್ಪಿಸಿ, ರಾಮ ಯಾವ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದನೆಂದು ಸರ್ಟಿಫಿಕೇಟ್ ಕೊಡಿ,ಸಾಕ್ಷಧಾರ ಕೊಡಿ ಎನ್ನುವ ಮೂರ್ಖ ಕರುಣಾನಿಧಿಯಂಥವರಿಗೆ ಏನೆಂದು ಉತ್ತರಿಸಬೇಕು ?

ಮೊದಲು ಹಿಂದೂ ರಾಷ್ಟ್ರ ಅಖಂಡ ಭಾರತದ ಮೇಲೆ ಮಹಮದೀಯರ ಆಕ್ರಮಣವಾಯಿತು . ನಂತರ ವ್ಯವಹಾರಕ್ಕೆ ಬಂದ ಕ್ರೈಸ್ತ ಯುರೋಪಿಯನ್ನರ ಆಕ್ರಮಣ . ಮಹಮದೀಯರು ಹೆದರಿಸಿ ಬೆದರಿಸಿ,ಕೊಲೆ ಸುಲಿಗೆ ಮಾಡುತ್ತ ನಮ್ಮ ಸಂಪತ್ತು ಲೂಟಿ ಹೊಡೆದರು.ಮೋಸದಿಂದ, ವಿಶ್ವಾಸಘಾತುಕ ಕೆಲಸದಿಂದ,ಕುಟಿಲ ತಂತ್ರದಿಂದ ಹಿಂದೂ ದೊರೆಗಳನ್ನು ಸೋಲಿಸಿ,ಪ್ರಜೆಗಳನ್ನು ಹೆದರಿಸಿ,ಒಪ್ಪದವರ ಕೊಲೆ ಮಾಡಿ ಅವರ ಮತ ಪ್ರಚಾರ ಮಾಡಿ ಮತಾಂತರಿಸಿದರು.ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್,ತುಘಲಕ್ ಅವರಿಂದ ಟಿಪ್ಪುವಿನವರೆಗೆ ಎಲ್ಲರೂ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣದ ಆಡಳಿತ ನಡೆಸಿದವರೇ. ಅದಕ್ಕೆ ಇರಬೇಕು ವಿಲ್ ದುರಂಟ್ STORY OF CIVILIZATION ಕೃತಿಯಲ್ಲಿ ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ವಿಶ್ವದ ಇತಿಹಾಸದ ಅತ್ಯಂತ ರಕ್ತಸಿಕ್ತ ಅದ್ಯಾಯವೆಂದಿದ್ದು.ಯುರೋಪಿಯನ್ನರು ಭಾರತೀಯರ ಶಕ್ತಿ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಎಂದು ಮನಗಂಡು ಹಿಂಸಾ ಮಾರ್ಗವನ್ನು ಬದಿಗಿಟ್ಟು, ಹಿಂದೂ ನಂಬಿಕೆ , ಅಚಾರ ವಿಚಾರ ದೇವರನ್ನು ಪ್ರಶ್ನಿಸುತ್ತಾ,ಲೇವಡಿ ಮಾಡುತ್ತ,ಹಣದ ಆಮಿಷವೊಡ್ಡಿ ಮಿಷನರಿಗಳ ಮೂಲಕ ಉಪಾಯದಿಂದ ಮತಾಂತರದ ಕ್ರೈಸ್ತಿಕರಣಕ್ಕೆ ಮುಂದಾದರು.ಹಿಂದೂ ಧರ್ಮ ಪ್ರಸಾರಕ್ಕೆ ಇಲ್ಲಿತನಕ ಎಲ್ಲಿಯೂ ಹಿಂದೂಗಳು ಯುದ್ದ ಮಾಡಿಲ್ಲ,ಇನ್ನೊಂದು ಧರ್ಮವನ್ನು ನಿಂದಿಸಿಲ್ಲ ತೀರ ವಿಪರೀತವಾಗುತ್ತಿದೆ,ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿದೆ ಎಂದೆನಿಸಿದಾಗ ಅದಕ್ಕೆ ಉತ್ತರಿಸಿದ್ದಾರೆ.

ಮತ್ತಷ್ಟು ಓದು »

14
ಫೆಬ್ರ

ವ್ಯಾಲೆಂಟೈನ್ಸ್ ಡೇ ಮತ್ತು ಅದರ ಒಳ ಸುಳಿಗಳು

ಮಹೇಶ್ ಪ್ರಸಾದ್ ನೀರ್ಕಜೆ

ವ್ಯಾಲೆಂಟೈನ್ಸ್ ಡೇಹೌದ್ರೀ, ನಾನು ಕನ್ನಡ ಪ್ರೇಮಿಯೇ. ಇಂಗ್ಲಿಷ್ ವ್ಯಾಮೋಹದಿಂದ ಶೀರ್ಷಿಕೆಯಲ್ಲಿ ‘ಪ್ರೇಮಿಗಳ ದಿನ’ ಅನ್ನದೇ ವ್ಯಾಲೆಂಟೈನ್ಸ್ ಡೇ ಅಂದಿದ್ದಲ್ಲ. ಪ್ರೇಮಿಗಳ ದಿನ ಅಂತ ಹೇಳದೇ ಇದ್ದಿದ್ದಕ್ಕೆ ಕಾರಣ ತುಂಬಾ ಇದೆ. ಯಾಕೆಂದರೆ ವ್ಯಾಲೆಂಟೈನ್ಸ್ ಡೇ ಎನ್ನುವುದರ ಅರ್ಥ ನಾವೆಲ್ಲರು ತಿಳಿದಿರುವಂತೆ ಪ್ರೇಮಿಗಳ ದಿನ ಅಲ್ಲ! ಅದು ಹೇಗೆ ಅಂತ ಹೇಳುವ ಮೊದಲು ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ವ್ಯಾಲ್ಲೆಂಟೈನ್ಸ್ ಡೇ ವಿರೋಧಿಸುವ ಬಲ ಪಂಥೀಯರಿಗೂ, ಅಥವಾ ಏನೇ ಇದ್ದರೂ ವ್ಯಾಲೆಂಟೈನ್ಸ್ ಡೇ ಎನ್ನುವುದನ್ನು ಮಾನವತೆಯ ಮಟ್ಟಕ್ಕೆ ಎತ್ತರಿಸಿ ಸಮರ್ಥಿಸುವ ಎಡ ಪಂಥೀಯರಿಗೂ (ಕೆಲ ಎಡಪಂಥೀಯರು ಕೂಡ ಬೇರೆ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ವಿರೋಧಿಸುತ್ತಾರೆ) ಈ ಬರಹ ಅಪಥ್ಯವಾಗಬಹುದು. ನನ್ನ ಪ್ರಯತ್ನವೇನಿದ್ದರೂ ಇವೆರಡನ್ನು ಬಿಟ್ಟು ಅವುಗಳಿಗಿಂತಲೂ ಮೇಲಿನ ಮಟ್ಟದಲ್ಲಿ ಮೂರನೇ ದೃಷ್ಟಿಕೋನವೊಂದನ್ನು ಅನ್ವೇಷಿಸುವುದು.

ಮೊದಲನೆಯದಾಗಿ ವ್ಯಾಲೆಂಟೈನ್ಸ್ ಡೇ ಮೂಲ ಕೆದಕಿದರೆ ನಮಗೆ ಇತಿಹಾಸದಲ್ಲಿ ಸಿಗುವುದು ಒಬ್ಬ ಪ್ರೇಮಿಯೋ ರಸಿಕನೋ ಅಥವಾ ಒಂದು ಪೌರಾಣಿಕ ಕಥೆಯ ಜನಪ್ರಿಯ ಪಾತ್ರವೋ ಅಲ್ಲ. ವ್ಯಾಲೆಂಟೈನ್ಸ್ ಎಂಬುದು ಮೂಲತಹ ಒಬ್ಬ ಸಂತನ ಹೆಸರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕ್ರಿಶ್ಚಿಯಾನಿಟಿ ಇನ್ನೂ ಪಸರಿಸುತ್ತಿದ್ದ ಕಾಲದಲ್ಲಿ ಪೆಗನರ (ಶಬ್ದಾರ್ಥ : ಅನಾಗರಿಕ) ಕೈಯಲ್ಲಿ ಸಾಯುತ್ತಿದ್ದ ಕ್ರೈಸ್ತ ಸಂತರನ್ನು ವ್ಯಾಲೆಂಟೈನ್ ಎಂದು ಕರೆಯಲಾಗುತ್ತಿತ್ತಂತೆ. ಮತ್ತಷ್ಟು ಓದು »

22
ಜನ

ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ

-ಗೋಪಾಲ ಕೃಷ್ಣ

vamshadalitaರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ.  ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ.  ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.

ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ಮತ್ತಷ್ಟು ಓದು »

19
ಜನ

ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?

– ರಾಕೇಶ್ ಶೆಟ್ಟಿ

CTಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?

ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ,  ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು  ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?

ಮತ್ತಷ್ಟು ಓದು »

30
ನವೆಂ

ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

– ಶ್ರೀವಿದ್ಯಾ,ಮೈಸೂರು

rajiv-dixitಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್

“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ.­ ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ಮತ್ತಷ್ಟು ಓದು »