ಏಕೆ ಹೀಗೆ ನಮ್ಮ ನಡುವೆ ಹಮ್ಮು ಬೆಳೆದಿದೆ ?
ಸ್ವಲ್ಪ ಯೋಚಿಸಬೇಕಾಸದ ಸಾಮಾನ್ಯ ಹಾಗೂ ಉತ್ತಮ ಪ್ರಶ್ನೆ! ನಾವು ಬಡಮರ್ಜಿಯಲ್ಲಿದ್ದಾಗ, ನಮ್ಮ ಕುದುರೆ ಸೋತಾಗ, ನಾವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಾಗ, ನಾವು ಚುನಾವಣೆಗಳಲ್ಲಿ ಸೋತಾಗ, ನಮಗೆ ಉದ್ಯೋಗ ಸಿಗದಾಗ, ಸಿಕ್ಕ ಉದ್ಯೋಗ ಕಳೆದುಕೊಂಡಾಗ, ಯಾವುದೋ ರೀತಿಯಲ್ಲಿ ಶಾರೀರಿಕ ಅಸೌಖ್ಯವುಂಟಾದಾಗ, ಅಸಹಾಯ ಸ್ಥಿತಿ ಬಂದೊದಗಿದಾಗ, ಹೊರಲಾರದ ಸಂಸಾರದ ಭಾರ ಜಾಸ್ತಿಯಾದಾಗ, ಶಾರೀರಿಕ/ಮಾನಸಿಕ ವಿಕಲ ಮಕ್ಕಳು ಅಕಸ್ಮಾತ್ ಜನಿಸಿಬಿಟ್ಟಾಗ….ಹೀಗೇ ಹಲವಾರು ಸಮಯಗಳಲ್ಲಿ ನಾವು ಎಲ್ಲರೊಳಗೊಂದು ಎಂಬ ರೀತಿ ಇದ್ದುಬಿಡುತ್ತೇವೆ.
ನಾನು ನೋಡುತ್ತಲೇ ಬಂದಿದ್ದೇನೆ. ಊರಲ್ಲಿ ಕನ್ನಡ ಶಾಲೆಯ ಒಬ್ಬ ಬಡ ಮಾಸ್ತರರಿದ್ದರು. ಒಬ್ಬರ ದುಡಿಮೆ, ಅಂದಿನಕಾಲಕ್ಕೆ ಸಂಬಳವೂ ಅಷ್ಟೆಲ್ಲಾ ಇರಲಿಲ್ಲ. ನಾಲ್ಕು ಮಕ್ಕಳು ಇರುವ ಆರುಮಂದಿಯ ಕುಟುಂಬ. ಮಾಸ್ತರರ ಅಮ್ಮನ ಮುದುಕಿಯೊಬ್ಬಳೂ ಸೇರಿದಂತೇ ಲೆಕ್ಕಹಾಕಿದರೆ ಏಳುಮಂದಿ. ಎಲ್ಲಾ ನಡೆಯಬೇಕಲ್ಲ? ಅಗೆಲ್ಲಾ ಊರ ಜನರೊಟ್ಟಿಗೆ ಸಾದಾ ಸೀದಾ ಇದ್ದ ಮಾಸ್ತರರು ಎಲ್ಲರೊಂದಿಗೂ ಬೆರೆತು ಜನಪ್ರಿಯರಾಗಿದ್ದರು. ಮಾಸ್ತರಿಗೆ ವರ್ಗವಾಯ್ತು, ಬೇರೇ ಊರಿಗೆ ತೆರಳಿದರು, ಮಕ್ಕಳು ಬೆಳೆದವು. ಈಗ ಮಾಸ್ತರರ ಮಕ್ಕಳು ಎಮ್.ಎನ್.ಸಿ ಕಂಪನಿಯಲ್ಲಿ ಕೆಲಸಮಾಡುತ್ತಾರೆ, ಮಾಸ್ತರರಿಗೆ ನಿವೃತ್ತಿಯಾದರೂ ಆಗ ಸಿಕ್ಕ ಹಣದಲ್ಲಿ ಮನೆ ಕಟ್ಟಿದ್ದಾರೆ, ಮಕ್ಕಳು ಅಪ್ಪನಿಗೆ ಕಾರು ಕೊಡಿಸಿದ್ದಾರೆ! ಅಂತೂ ಮಾಸ್ತರರು ಈಗ ಬಡತನ ಎಂಬ ಮಟ್ಟದಲ್ಲಿಲ್ಲ. ಅದಕ್ಕೆ ತಕ್ಕಹಾಗೇ ಮಾಸ್ತರರು ಯಾರೊಡನೆಯೂ ಬೆರೆಯುವುದೂ ಇಲ್ಲ; ತಮ್ಮ ಸರ್ಕಲ್ಲೇ ಬೇರೆ ಎನ್ನುವ ತಂತ್ರಾಂಶ ತಂತ್ರಂಜ್ಞರಂತೇ ಮಾಸ್ತರರಿಗೆ! ’ಅಲ್ಪನಿಗೆ ಐಶ್ವರ್ಯ ಬಂದರೆ ತಿಂಗಳಬೆಳಕಲ್ಲೂ ಕೊಡೆ ಹಿಡಿದನಂತೆ’ ಎಂಬ ಗಾದೆ ಇದೆಯಲ್ಲಾ ಅದೇ ರೀತಿ ಮಾಸ್ತರು ೨ ಫರ್ಲಾಂಗು ದೂರ ಹೋಗುವುದಾದರೂ ಕಾರು ಬೇಕೇ ಬೇಕು. ಬೆಳೆದುನಿಂತ ಮಗಳನ್ನು ಸಾಮಾನ್ಯದ ಯಾರಿಗೂ ಮದುವೆಮಾಡಲು ಸಿದ್ಧರಿಲ್ಲ. ಅಮೇರಿಕಾದಲ್ಲಿರುವ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.
ಸಂಸ್ಕೃತಿ ಸಂಕಥನ – 26 – ಭಾರತೀಯರ ನೈತಿಕ ಸ್ವರೂಪ
-ರಮಾನಂದ ಐನಕೈ
ನೈತಿಕತೆ ಅಂದರೆ ಏನು? ಜಗತ್ತಿನ ಎಲ್ಲಾ ಸಂಸ್ಕೃತಿಗಳ ನೈತಿಕ ಪ್ರಜ್ಞೆ ಒಂದೇ ತೆರನಾಗಿದೆಯೇ? ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು ಸ್ಪಷ್ಟವಾಗದಿದ್ದರೆ ನಾವು ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಲು ತೊಡಕಾಗುತ್ತದೆ.
ಯುರೋಪಿಯನ್ನರ ನೈತಿಕ ಪ್ರಜ್ಞೆಗೂ ಭಾರತೀಯರ ನೈತಿಕಪ್ರಜ್ಞೆಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಶ್ಚಾತ್ಯರು ನೈತಿಕತೆಯನ್ನು ಗ್ರಹಿಸುವ ರೀತಿಯೇ ಬೇರೆ, ನಾವು ನಿರ್ಣಯಿಸುವ ರೀತಿಯೇ ಬೇರೆ. ಭಾರತೀಯ ಪುರಾಣಗಳು ನೈತಿಕತೆಯ ಬುನಾದಿ ಅನ್ನುತ್ತೇವೆ. ನಮ್ಮ ಸಂಸ್ಕೃತಿಯಲ್ಲಿರುವಷ್ಟು ನೀತಿ ಬೇರೆಲ್ಲೂ ಇಲ್ಲ ಅನ್ನುತ್ತೇವೆ. ರಾಮ, ಕೃಷ್ಣ, ಬುದ್ಧ, ಬಸವ, ಸೀತಾ, ತಾರಾ, ಮಂಡೋದರಿ ಮುಂತಾಗಿ ನೈತಿಕ ಆದರ್ಶದ ಮಾಡೆಲ್ಗಳೇ ನಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಸಿಗುತ್ತವೆ. ಇಷ್ಟಾಗಿಯೂ ಐರೋಪ್ಯರು ಭಾರತೀಯರನ್ನೇಕೆ ಅನೈತಿಕರು ಅಂದರು?
ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ ಅರ್ಥವಾಗಲಿಲ್ಲ. ಇಡೀ ಭಾರತೀಯ ಸಂಸ್ಕೃತಿಗೆ ನೈತಿಕ ತಳಪಾಯವೇ ಇಲ್ಲ ಎಂದು ನಿರ್ಣಯಿಸಿದರು. ಭಾರತೀಯರಿಗೆ ಮೊರಲ್ ಹಾಗೂ ಎಥಿಕ್ಸ್ನ ಕಲ್ಪನೆಯೇ ಇಲ್ಲ. ನಾಗರಿಕತೆಯಿಂದ ಬಹಳ ಹಿಂದುಳಿದಿದ್ದಾರೆ. ಇದೊಂದು ಪತನಗೊಂಡ ಸಂಸ್ಕೃತಿ. ಇಲ್ಲಿನ ಮೂತರ್ಿಪೂಜೆ, ಜಾತಿಪದ್ಧತಿ, ಸಾಮಾಜಿಕ ಆಚರಣೆಗಳೆಲ್ಲವೂ ಅವರಿಗೆ ಅನೈತಿಕ ಆಚರಣೆಗಳಂತೆ ಕಂಡವು. ಭಾರತೀಯರು ಅಪ್ರಾಮಾಣಿಕರು, ಸುಳ್ಳು ಹೇಳುವವರು ಹಾಗೂ ಮೋಸಗಾರರು ಎಂಬುದಾಗಿ ವಣರ್ಿಸಿದರು. ಭಾರತೀಯ ಸಂಸ್ಕೃತಿ ಭ್ರಷ್ಟಗೊಂಡಿದೆ ಎಂದು ವ್ಯಾಖ್ಯಾ ನಿಸಿದರು. ಆದ್ದರಿಂದ ಭಾರತದ ಪುನರುದ್ಧಾರಕ್ಕೆ ಕೈಹಾಕಿದರು. ಈ ಕಾರಣಕ್ಕಾಗೇ ಹಲವು ಕಾನೂನು ಗಳನ್ನು ಮಾಡಿದರು. ಭಾರತದ ಜಾತಿ ವ್ಯವಸ್ಥೆಯನ್ನಂತೂ ಎಥಿಕಲ್ ಭ್ರಷ್ಟಾಚಾರದ ಮೂರ್ತರೂಪ ಎಂದರು. ಭಾರತೀಯರ ಎಥಿಕ್ಸೇ ಅನೈತಿಕವೆಂದು ಜರಿದ ಬಗ್ಗೆ ಸಹಸ್ರ ಉದಾಹರಣೆಗಳಿವೆ.
ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ….ಹೂ
-ಸುಗುಣ ಮಹೇಶ್
ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ
(ಆತ್ಮೀಯ ಓದುಗರೆ, ನಮಸ್ಕಾರ.ಸಾಹಿತ್ಯಾಸಕ್ತರಾದ ನಿಮ್ಮೆದುರಲ್ಲಿ ಪ್ರಚಲಿತವಿದ್ಯಮಾನಗಳಿಗೂ ಸ್ಪಂದಿಸುತ್ತಾ ನಾನು ಬಡಿಸುವುದು ’ಅಭಿಗಾರ’ –ಅದು ಪ್ರತೀ ಗುರುವಾರ. ಅಭಿಗಾರ ಎಂದರೆ ಹೆಚ್ಚಿನದಾಗಿ ತುಪ್ಪ ಅಥವಾ ತುಪ್ಪಹಾಕಿದ ಪಾಯಸದ ಗುಟುಕು. ಬಾಳೆಲೆಯ ಬಲಕೆಳಕೊನೆಯಲ್ಲಿ ಬಡಿಸುವ ಅಭಿಗಾರ ಊಟದ ಆರಂಭಕ್ಕೆ ಅನುಕೂಲಕಲ್ಪಿಸುವಂಥದ್ದು. ಗಾರುಬಿದ್ದ ಅನ್ನನಾಳದಲ್ಲಿ ಆಹಾರ ಸರಾಗವಾಗಿ ಇಳಿಯುವದಕ್ಕಾಗಿಯೂ, ಹೊಟ್ಟೆಯೊಳಗಿನ ವಾಯು ಶಮನಕ್ಕಾಗಿಯೂ, ಮೊದಲು ಧಾವಿಸಿ ಜಠರದಲ್ಲಿ ಆಹಾರ ಸ್ವೀಕರಿಸಲು ಬೇಕಾದ ಪೂರ್ವತಯಾರಿ ಮಾಡುವುದೇ ಈ ಅಭಿಗಾರ! ಈ ವಾರ ಮಾತ್ರ ದಿನಮೊದಲಾಗಿ ಅಂದರೆ ಇವತ್ತೇ ನನ್ನ ಆರಂಭಿಕ ಲೇಖನ ಪ್ರಕಟಮಾಡುತ್ತಿದ್ದೇನೆ-ಹೋಳೀ ಹಬ್ಬದ ನಿಮಿತ್ತ. ತಮ್ಮೆಲ್ಲರಿಗೂ ಸ್ವಾಗತವನ್ನು ಬಯಸಿ ವಂದನೆಗಳನ್ನೂ ಸಲ್ಲಿಸಿ ಅಭಿಗಾರಬಡಿಸುತ್ತಿದ್ದೇನೆ, ನಮಸ್ಕಾರಗಳು)
ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ.
ಬಿಜೆಪಿಯ ಕಮಾಂಡಿಂಗ್ ಲೀಡರ್ಗೊಂದು ಪತ್ರ
-ಅರವಿಂದ್
ನಿಮ್ಮ ಹುಟ್ಟು ಹಬ್ಬಕ್ಕೆ ಕರ್ನಾಟಕದ ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಜೀವನದ ಸಂಜೆಯಲ್ಲಿ ೭೦ ವರ್ಷಗಳನ್ನು ದಾಟಿಹೊರಟಿರುವಿರಿ. ನಿಮ್ಮ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದೇ. ಮುಖ್ಯಮಂತ್ರಿಯಾಗಿದ್ದಾಗಲೂ ನೀವು ಇಷ್ಟು ವಿಜೃಂಭಣೆಯಿಂದ ಆಚರಿಸಿಕೊಳ್ಳದ ಹುಟ್ಟುಹಬ್ಬ, ಅಧಿಕಾರ ಕಳೆದುಕೊಂಡ ನಂತರ ಆಚರಿಸಿಕೊಂಡದ್ದು ನಿಮ್ಮ ವ್ಯೆರಿಗಳಿಗೆ ಒಂದು ಕಡೆ ನೋವಾದರೆ, ಮತ್ತೊಂದಿಷ್ಟು ಸಂತೋಷ ಸಾರ್. ನೋವು ಯಾಕೆಂದರೆ ನೀವು ೭೦ವರ್ಷವಾದರೂ ಇನ್ನು ಅಧಿಕಾರದ ಆಸೆ ಹೋಗದೇ ಇರೋದು. ಸಂತೋಷ ಏಕೆಂದರೆ ನೀವು ನಿಮ್ಮ ಪ್ರತಿ ಕೆಲಸಗಳಲ್ಲೂ ಅಪವಾದಕ್ಕೀಡಾಗೋದು.
ಒಮ್ಮೆ ಮನಬಿಚ್ಚಿ ಮಾತಾಡಿ ಸಾರ್, ನನ್ನ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಕೆ ಸಾಧ್ಯವಾದ್ರೆ ಉತ್ತರಿಸಿ. ಆಗದಿದ್ರೆ ಬಿಡಿ, ನಾವು ನಿಮ್ಮನ್ನು ಒಪ್ಪಿಕೊಂಡಿರುವ ತಪ್ಪಿಗೆ ಈ ಪ್ರಶ್ನೆಗಳ ಪ್ರಶ್ನೆಯೊಳಗೇ ಅಪ್ಪಿಕೊಂಡಿರ್ತೀವಿ.
ಸಂಸ್ಕೃತಿ ಸಂಕಥನ – 25 – ಆನಂದದ ಮಾರ್ಗ ಅಧ್ಯಾತ್ಮ
-ರಮಾನಂದ ಐನಕೈ
ಭಾರತೀಯರ ಅಧ್ಯಾತ್ಮ ಒಂದು ಅದ್ಭುತ ವಿಜ್ಞಾನ. ಭಾರತೀಯ ಪ್ರಗತಿಪರ ಚಿಂತಕರು ಹಾಗೂ ಮನೋಭಾವದವರೆಲ್ಲ ಸಂಪ್ರದಾಯಕ್ಕೆ ಸಂಬಂಧಪಟ್ಟ ಸಂಗತಿಗಳನ್ನೆಲ್ಲ ಮೌಢ್ಯ ಎಂದು ಪರಿಗಣಿಸುತ್ತಾರೆ. ಅಚಿದರೆ ಅವರ ಪ್ರಕಾರ ಬ್ರಿಟಿಶ್ ವಸಾಹತುಶಾಹಿಯ ನಂತರವೇ ಈ ದೇಶದಲ್ಲಿ ಆಧುನಿಕತೆ ಬಂದಿದೆ. ನಾಗರಿಕತೆ ಬೆಳೆದಿದೆ. ಮನುಷ್ಯನ ಚಿಂತನಾಕ್ರಮ ಬದಲಾಗಿದೆ ಇತ್ಯಾದಿ ಇತ್ಯಾದಿ. ಹಾಗಾದರೆ ಕಳೆದ ಮೂರು ಸಾವಿರ ವರ್ಷಗಳಿಂದ ನಮ್ಮ ಪೂರ್ವಜರು ಏನು ಮಾಡಿದರು? ಏನನ್ನೂ ಮಾಡಿಲ್ಲವೇ? ಹಾಗಿದ್ದರೆ ಭಾರತೀಯ ಸಂಸ್ಕೃತಿ ಹೇಗೆ ಉಳಿದುಕೊಂಡು ಬಂತು? ಪಾಶ್ಚಾತ್ಯರಿಗೆ ಈ ಸಂಸ್ಕೃತಿಯ ಕುರಿತು ಏಕಿಷ್ಟು ಕುತೂಹಲ? ಇಂತಹ ನೂರಾರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಅವರಲ್ಲಿಲ್ಲ. ಹೆಚ್ಚೆಂದರೆ ಮೊಂಡುವಾದ ಮಾಡಬಹುದು ಅಷ್ಟೆ. ನಮ್ಮ ಪೂರ್ವಜರು ಸುಮ್ಮನೆ ಆಯಸ್ಸು ಕಳೆಯುತ್ತ ಬಂದಿಲ್ಲ. ಮನುಷ್ಯನ ಆನಂದ ಹಾಗೂ ಆರೋಗ್ಯದ ಬಗ್ಗೆ ಆಳವಾದ ಚಿಂತನೆ ಮಾಡಿದ್ದಾರೆ. ಇದಕ್ಕಾಗಿ ಸಾವಿರಾರು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಅದೇ ಅಧ್ಯಾತ್ಮ.
ಲಿಂಗಭೇದವಿಲ್ಲ, ವರ್ಣಭೇದವಿಲ್ಲ, ಬಡವ -ಶ್ರೀಮಂತ ಎಂಬ ತರತಮವಿಲ್ಲ. ಎಲ್ಲರೂ ಈ ಮಾರ್ಗದಲ್ಲಿ ಹೋಗಬಹುದು. ಆ ಮೂಲಕ ಆನಂದ ಪಡೆಯಬಹುದು. ಆನಂದ ಎಂದರೇನು? ಅದು ಎಲ್ಲಿ ಸಿಗುತ್ತದೆ? ಹೇಗೆ ಸಿಗುತ್ತದೆ? ಯಾರಿಗೂ ಗೊತ್ತಿಲ್ಲ. ಆದರೆ ಆನಂದವನ್ನು ಪಡೆಯಬಹುದು. ಅಧ್ಯಾತ್ಮದ ದಾರಿಯ ಮೂಲಕ ಪ್ರತಿಯೊಬ್ಬನೂ ಆನಂದ ಪಡೆಯಬಹುದು. ಅಧ್ಯಾತ್ಮ ಇಂತಹ ಸಹಸ್ರ ದಾರಿಗಳನ್ನು ನಮ್ಮೆದುರು ತೆರೆದಿಟ್ಟಿದೆ. ಅಧ್ಯಾತ್ಮದ ಮೂಲಕ ಆನಂದ ಪಡೆಯಬಹುದು. ಆರೋಗ್ಯ ಪಡೆಯಬಹುದು, ನಮ್ಮೊಳಗಿನ ಜ್ಞಾನವನ್ನು ಉದ್ದೀಪನಗೊಳಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಭಾರತೀಯ ಸಮಾಜದ ಮಾನಸಿಕ ಭದ್ರತೆಯೇ ಈ ಅಧ್ಯಾತ್ಮದ ತಳದಲ್ಲಿದೆ.
ಸಂಸ್ಕೃತಿ ಸಂಕಥನ – 24 – ಗತ ಕಥೆಯ ಚರಿತ್ರೆ
-ರಮಾನಂದ ಐನಕೈ
ನಾವು ದಿನನಿತ್ಯ ಒಂದಲ್ಲೊಂದು ಸಂದರ್ಭ ದಲ್ಲಿ ಉಲ್ಲೇಖಿಸುವ ಚರಿತ್ರೆ ಅಥವಾ ಹಿಸ್ಟರಿ ಅಂದರೆ ಏನು? ನಾವು ಪಠ್ಯಗಳ ಮೂಲಕ ಚರಿತ್ರೆಯ ಅಭ್ಯಾಸ ಮಾಡುವಾಗ ಹಲವು ವ್ಯಾಖ್ಯೆಗಳನ್ನು ಕಂಠಪಾಠ ಮಾಡಿದ್ದೇವೆ. ಚರಿತ್ರೆ ಅಂದರೆ ಒಂದು ವಿಜ್ಞಾನ. ಏಕೆಂದರೆ ಗತಕಾಲದ ಬಗ್ಗೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಿ ಸೆರೆಹಿಡಿದ ವಾಸ್ತವವೇ ಹಿಸ್ಟರಿ. ಚರಿತ್ರೆ ಅಂದರೆ ಗತಕಾಲದ ರಾಜಕೀಯ. ಚರಿತ್ರೆ ಅಂದರೆ ಗತಕಾಲದ ಸಮಾಜವಿಜ್ಞಾನ. ಹೀಗೆ ಚರಿತ್ರೆಯನ್ನು ಒಂದು ವಸ್ತುನಿಷ್ಠ ವಿಷಯ ಎಂಬಂತೆ ಬಿಂಬಿಸಿಕೊಂಡು ಬಂದಿದ್ದೇವೆ.
ಈಗ ಆಧುನಿಕ ಯುಗದ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲ ಗತಕಾಲಕ್ಕೂ ಚರಿತ್ರೆ ಯನ್ನು ಕಟ್ಟಲಾಗುತ್ತಿದೆ. ಚರಿತ್ರೆಗೆ ಸಿಲುಕದ ಗತಕಾಲವನ್ನು ಅವಾಸ್ತವಿಕ ಅಥವಾ ಮೌಢ್ಯ ಎಂದು ಗೇಲಿ ಮಾಡುತ್ತೇವೆ. ಎಲ್ಲ ಗತಕಾಲವೂ ಏಕೆ ಚರಿತ್ರೆ ಯಾಗಲೇಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಚರಿತ್ರೆ ಅಂದರೆ ಏನು? ಇದು ಯಾವಾಗ ಹುಟ್ಟಿತು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
ಹೀಗೊಂದು ವೇದೋಕ್ತ ವಿವಾಹ
-ಕ.ವೆಂ.ನಾಗರಾಜ್
ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನ ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.
ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -“ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ”. ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.
ಮತ್ತಷ್ಟು ಓದು 
ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !
-ವಿ.ಆರ್. ಭಟ್
ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ ಕರೆದು ಅರ್ಜುನ ಪಾಶುಪತಾಸ್ತ್ರವನ್ನೇ ಪಡೆದರೆ ರಾವಣ ಆತ್ಮ ಲಿಂಗವನ್ನೇ ಪಡೆದಿದ್ದ ಎಂಬುದು ಈ ನೆಲದ ಕಥೆ. ಇಂತಹ ನಮ್ಮ ಬೋಲೇನಾಥ ಯಾ ಬೋಳೇ ಶಂಕರ ಪುರಾಣದ ಭಾಗವತದ ಕಥಾಭಾಗಗಳಲ್ಲಿ ರಕ್ಕಸರಿಗೆ ವರಗಳನ್ನು ಕರುಣಿಸಿ ಸಂದಿಗ್ಧದಲ್ಲಿ ಸಿಲುಕಿಕೊಳ್ಳುವುದನ್ನೂ ಕೂಡ ಕಾಣಬಹುದಾಗಿದೆ. ಭೂತಗಣಗಳಿಗೆ, ರಕ್ಕಸರಿಗೆ ಪ್ರಿಯ ದೈವ ಶಿವನೇ ಆದರೂ ಪರೋಕ್ಷ ಅವರುಗಳ ನಿಯಂತ್ರಣಕ್ಕೂ ಆತ ಕಾರಣನಾಗಿದ್ದಾನೆ.
ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |…..
ಒಂದು ಚೊಂಬು ನೀರನ್ನು ನಿಷ್ಕಲ್ಮಶ ಹೃದಯದಿಂದ ಲಿಂಗರೂಪೀ ಶಿವನಮೇಲೆ ಎರಚಿದರೆ ಆತ ಸಂತೃಪ್ತ! ಸರಳತೆಯಲ್ಲಿ ಅತಿ ಸರಳ ಪೂಜೆ ಶಿವನ ಪೂಜೆ. ಇದೇ ಶಿವ ಕ್ರುದ್ಧನಾದರೆ ಮಾತ್ರ ಆಡುವುದು ತಾಂಡವ ! ಶಿವತಾಂಡವದ ಡಮರು ನಿನಾದಕ್ಕೆ ಸಮಸ್ತಲೋಕಗಳೂ ಅಂಜುತ್ತವೆ ಎಂಬುದು ಪ್ರತೀತಿ. ನರ್ತನದಲ್ಲಿಯೂ ಈತನದೇ ಮೊದಲಸ್ಥಾನವಾದ್ದರಿಂದ ನಟರಾಜ ಎಂಬ ಹೆಸರಿನಿಂದಲೂ ಪೂಜಿಸಲ್ಪಡುತ್ತಾನೆ.
ಹರಃ ಪಾಪಾನಿ ಹರತಾತ್ ಶಿವೋ ಧತ್ತಾಂ ಸದಾ ಶಿವಂ
-ಸುಗುಣಾ ಮಹೇಶ್
ಇತ್ತೀಚೆಗೆ ಮಗನಿಗೆ ಶಿವರಾತ್ರಿ ಹಬ್ಬವಿದೆ ಉಪವಾಸ ಜಾಗರಣೆ ಎಲ್ಲಾ ಮಾಡುತ್ತಾರೆ. ಊರಲ್ಲಿ ಇದ್ದಿದ್ದರೆ ನಾವೂ ಸಹ ಆಚರಿಸಬಹುದಿತ್ತು ಆದರೆ ಕುವೈತಿನಲ್ಲಿ ಇದ್ದೀವಿ ಕೆಲಸದ ದಿನ ಬೇರೆ ಉಪವಾಸವಂತೂ ಮಾಡುತ್ತೇವೆ, ಜಾಗರಣೆ ಕಷ್ಟವೇನೋ ಎಂದು ಹೇಳಿದಾಗ ಮಗ ಶಿವನ ಬಗ್ಗೆ ಏನಾದರು ಇದ್ದರೆ ಹೇಳು ಎಂದ ಅವನಿಗಾಗಿ ಈ ಲೇಖನ ಬರೆದೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಲಿದ್ದೇನೆ….







