ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

29
ಜೂನ್

ಸರ್ಕಾರಿ ಇಂಗ್ಲಿಶ್ ಶಾಲೆ – ಬೇಲಿಯೇ ಎದ್ದು ಹೊಲವ ಮೇಯ್ದೊಡೆ ಕಾಯುವರಾರು ?

 –ವಸಂತ್ ಶೆಟ್ಟಿ
ಜನರ ಅಪೇಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರಿಂದ ಬೇಡಿಕೆ ಬಂದ್ರೆ ಆರನೇ ತರಗತಿಯಿಂದ ಎಲ್ಲೆಡೆ ಇಂಗ್ಲಿಶ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಸರ್ಕಾರ ತಯಾರಾಗಿದೆ ಅನ್ನುವ ಹೇಳಿಕೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲೆ ಸಚಿವರಾದ ಕಾಗೇರಿಯವರು ಹೇಳಿದ್ದು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಕಂಡೆ. ಬೇಲಿಯೇ ಎದ್ದು ಹೊಲವ ಮೇಯೊದು ಅಂದ್ರೆ ಇದೇನಾ ಅನ್ನಿಸ್ತಾ ಇತ್ತು. ಒಂದೆಡೆ ಪಾಲಿಕೆ ವ್ಯಾಪ್ತಿಯ ಕನ್ನಡ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ಕೊಡಿಸಿ ತಮ್ಮ ಜನ್ಮ ಪಾವನವಾಯ್ತು ಅನ್ನುವ ಸಚಿವರೊಬ್ಬರು, ಇನ್ನೊಂದೆಡೆ ಜನರ ಅಪೇಕ್ಷೆ ಈಡೇರಿಸಲು ಎಲ್ಲೆಡೆ ಇಂಗ್ಲಿಶ್ ಶಾಲೆಗಳನ್ನು ತೆರೆಯುವುದಾಗಿ ಹೇಳುವ ಈ ಸಚಿವರು. ಇವರ ಹೊಣೆಗಾರಿಕೆ ಇಲ್ಲದ ಈ ನಡೆಗಳು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಗಟ್ಟಿಯಾದ ಸಮಾಧಿಯೊಂದನ್ನು ಸದ್ದಿಲ್ಲದೇ ಕಟ್ಟುತ್ತಿವೆ ಅನ್ನಬಹುದು.
ಇದೇ ಸಂದರ್ಭದಲ್ಲಿ ತಾಯ್ನುಡಿ ಶಿಕ್ಷಣದ ಬದಲು ಇಂಗ್ಲಿಶ್ ಬೇಕೆನ್ನುವವರ ವಾದವಾದರೂ ಏನು ಅಂದರೆ ನನಗೆ ಕಾಣುವುದು ಕೆಳಗಿನ ಕೆಲವು ಮಾತುಗಳು. ಅವುಗಳಿಗೆ ನನ್ನ ಅನಿಸಿಕೆ ಏನು ಅನ್ನುವುದನ್ನು ಈ ಸಂದರ್ಭದಲ್ಲಿ ಬರೆದಿರುವೆ.
ಕನ್ನಡ ಮಾಧ್ಯಮ ಬೇಕು ಅನ್ನುವವರದ್ದು ಬೂಟಾಟಿಕೆ. ಕನ್ನಡ ಮಾಧ್ಯಮ ಬೇಕು ಅನ್ನುವ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸುವುದು ಇಂಗ್ಲಿಶ್ ಮಾಧ್ಯಮದ ಸಿ.ಬಿ.ಎಸ್.ಈ/ಐ.ಸಿ.ಎಸ್.ಈ ಶಾಲೆಗಳಿಗೆ, ಆದರೆ ಸಾಮಾನ್ಯ ಜನರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿಯಬೇಕು ಅನ್ನುವುದನ್ನು ಪಾಲಕರ ನಿರ್ಧಾರಕ್ಕೆ ಬಿಡಿ.   ಮತ್ತಷ್ಟು ಓದು »
27
ಜೂನ್

ಪ್ರಜಾಪ್ರಭುತ್ವ ಭಾರತದಲ್ಲಿ ಗಾಂಧಿತ್ವದ ಮೌಲ್ಯಗಳು

– ಅರಹೊಳೆ ಸದಾಶಿವರಾಯರು

ಪ್ರತೀ ವರ್ಷವೂ ನಾವು ಗಣರಾಜ್ಯದಿನ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಹಾಗೂ ಗಾಂಧೀಜಿ ಪುಣ್ಯತಿಥಿಗಳನ್ನು ಆಚರಿಸುತ್ತೇವೆ-ಒಂದು ರೀತಿಯ ಅನಿವಾರ್ಯತೆಯಿಂದ ಆಚರಿಸಿದಂತೆ. ಈ ಸಂದರ್ಭಗಳಲ್ಲಿ ಮಾತ್ರ ನಮಗೆ, ಗಾಂಧೀಜಿಯವರ ತತ್ವ-ಚಿಂತನೆಗಳು ಪ್ರವಾಹೋಪಾದಿಯಲ್ಲಿ ನೆನಪಾಗುತ್ತವೆ ಮತ್ತು ಆ ಕ್ಷಣದಲ್ಲಿಯೇ ಅವುಗಳು ಮರೆತೂ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಚಿಂತನೆಗೊಡ್ಡಿಕೊಂಡಾಗ, ಒಂದು ರೀತಿಯ ಖೇದಾಶ್ಚರ್ಯಗಳು ಹುಟ್ಟುತ್ತವೆ.

ಪರಿಮಿತಿಯರಿತಾಶೆ, ಪರವಶತೆಯಳಿದ ಸುಖ

ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ

ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ

ವರಗಳೀ ನಾಲ್ಕೆ ವರ-ಮಂಕುತಿಮ್ಮ

ಪರಿಮಿತವಾದ ಆಸೆ ಇರಬೇಕು, ವ್ಯಾಮೋಹ ತೊರೆದ ಸುಖವಿರಬೇಕು, ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ, ಸತ್ಯವನ್ನು ಪ್ರೀತಿಸುವ ಬುದ್ದಿ ಇರಬೇಕು.ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಇದರ ಉದ್ಧರಣೆಯೊಂದಿಗೆ ನಾನು ಇಂದು ಪ್ರಸ್ತುತ ಪಡಿಸಲಿರುವ ವಿಚಾರಧಾರೆಗೆ ಮೊದಲಂಕಿತ ಇಡುತ್ತಿದ್ದೇನೆ. ಮತ್ತಷ್ಟು ಓದು »

27
ಜೂನ್

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

– ಸಂತೋಷ್ ಕುಮಾರ್ ಪಿ.ಕೆ, ಶಂಕರಘಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗುತ್ತಿರುವುದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚಳುವಳಿಯಾಗಲಿ, ಸಾಮಾಜಿಕ ಚಳುವಳಿಯಾಗಲೀ ಎರಡೂ ಸಹ ಅಷ್ಟೇ ಪ್ರಮುಖವಾದವು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶ ಜಾತಿಯನ್ನು ನಾಶಮಾಡಲು ಅಂತರಜಾತಿವಿವಾಹಿತರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆ ಜೊತೆಗೆ ಭೌದ್ಧಿಕ ಚಳುವಳಿಯೂ ಸಹ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಅಂತಹ ಚಳುವಳಿಯ ಕುರುಹಾಗಿ ಹಲವಾರು ಲೇಖನಗಳು ಮಾದ್ಯಮಗಳಲ್ಲಿ ಬರುತ್ತಿವೆ. ಹಾಗೆ ಬಂದಂತಹ ಒಂದು ಲೇಖನದ ವಿಮರ್ಶೆಯನ್ನು ಇಲ್ಲಿ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಪ್ರಯತ್ನ ಏಕೆಂದರೆ ಕಳೆದ ೬೦, ೭೦ ವರ್ಷಗಳಿಂದಲೂ ಇಂತಹ ಚಳುವಳಿ ಸಮಾವೇಶ ನಡೆಯುತ್ತಿದ್ದರೂ ಜಾತಿ, ಶೋಷಣೆ, ಅನ್ಯಾಯ ದಿನೆದಿನೇ ಹೆಚ್ಚಾಗುತ್ತಿವೆ. ಕೇವಲ ಹಳೆಯ ಹಲಸಲು ವಿಚಾರಗಳನ್ನೇ ಪುನರಾವರ್ತಿಸುವ ಬದಲು ಸಮಸ್ಯೆ ಎಲ್ಲಿಂದ ಉಗಮವಾಗುತ್ತಿದೆ ಎಂಬುದನ್ನು ತುರ್ತಾಗಿ ಅರಿಯಬೇಕಾಗಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಇದುವರೆಗೂ ನಾವು ಕೇಳಿಕೊಂಡು ಬಂದಂತಹ ವಿಚಾರಗಳನ್ನು ಹಾಗೂ ಇಂದು ಹೇಳುತ್ತಿರು ವ ವಿಚಾರಗಳನ್ನು ಜೊತೆಗೆ ನಮ್ಮನ್ನು ನಾವೇ ಪುನರಾವಲೋಕಿಸುವ ಸಂದರ್ಭ ಇಂದು ನಮ್ಮ ಮುಂದಿದೆ.

ಎಸ್. ಕೆ ಭಗವಾನ್ ದಿನಾಂಕ 3 ಜೂನ್ 2011 ರಂದು ಪ್ರಜಾವಾಣಿಯಲ್ಲಿ  ಬರೆದ ಅವರ ಲೇಖನದ ಒಟ್ಟಾರೆ ವಾದ ಈ ರೀತಿಯಾಗಿತ್ತು,  ಜಾತಿಯನ್ನು ಇದುವರೆಗೂ ದೂರಿದ್ದು ಸಾಕು, ಇನ್ನು ಅದನ್ನು ನಾಶ ಮಾಡಲೇಬೇಕು. ಜಾತಿ ನಾಶವಾದರೆ ಹಲವಾರು ಸವಲತ್ತುಗಳು ಸಹ ಸುಮುದಾಯಗಳಿಗೆ ದೊರೆಯುತ್ತವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಹಾಗೆ ಹೇಳುವ ಮುನ್ನ ಕೆಳಕಾಣಿಸಿರುವ ಪ್ರಶ್ನೆಗಳಿಗೆ ಯಾರಾದರೂ ಉತ್ತರಿಸಲೇಬೇಕು. ಮತ್ತಷ್ಟು ಓದು »

27
ಜೂನ್

ಹೆಸರಲ್ಲಿ ಏನಿದೆ?!

– ಹೇಮಾ ಪವಾರ್, ಬೆಂಗಳೂರು

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು  ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು.

ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು.

ಮತ್ತಷ್ಟು ಓದು »

26
ಜೂನ್

ಗೌಡಪ್ಪನ ದುಬೈ ಪ್ರವಾಸ : ಜನಾರ್ಧನ ಹೋಟೆಲ್ ಜಾಮೂನು – ಮಸಾಲೆ ದೋಸೆ!

ಮಂಜುನಾಥ್ ಹೊಳೆನರಸೀಪುರ

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು!  ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ ” ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ” ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ…’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು.  ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!

ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ.  ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು.  ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು.  ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ!  ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ.  ಮತ್ತಷ್ಟು ಓದು »

25
ಜೂನ್

ಅಲ್ಲಿ ಆಲ್ಫಾ ಅಂತಿದೆ ನೋಡಿ, ಮೊದಲ ಪ್ರಯತ್ನಕ್ಕೆ ಸಹಕಾರ ನೀಡಿ

– ಕಾಲಂ 9

ಗೂಗಲ್ ಸಂಸ್ಥೆಯು ಇತ್ತೀಚಿಗೆ ತನ್ನ ಭಾಶಾಂತರ ಸೇವೆಯ ಕನ್ನಡ ಅವತರಣಿಕೆಯ ಆಲ್ಫಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಯಾಂತ್ರೀಕೃತ ಭಾಶಾಂತರಕ್ಕೆ ಇದು ಮೊದಲ ಪ್ರಯತ್ನ. ಆದರೆ ಇದು ಕನ್ನಡದ ಕೊಲೆ ಎಂದು ಉದಯವಾಣಿಯು ‘ವಾಷಿಂಗ್ಟನ್‍ನಿಂದ’ ವರದಿ ಮಾಡಿದ್ದಾರೆ.

ಉದಯವಾಣಿಯ ವಾಷಿಂಗ್ಟನ್ ವರದಿಗಾರರಲ್ಲಿ ನನ್ನ ಮನವಿ: ನೀವು ಪುಕ್ಕಟೆ ಪ್ರಯತ್ನಕ್ಕೆ ಸಿಟ್ಟಾಗುವ ಮೊದಲು ಸಾಧ್ಯವಾದರೆ ಮೌಂಟೆನ್ ವ್ಯೂ ನಲ್ಲಿರುವ ಗೂಗಲ್ ಕಛೇರಿಗೆ ಒಮ್ಮೆ ಹೋಗಿ ಭಾಷಾಂತರ ಪ್ರಾಜೆಕ್ಟ್ ಬಗ್ಗೆ ಸ್ವಲ್ಪ ಕೇಳಿ. ಅಥವಾ translate.google.com ಪುಟದ ಕೊನೆಗಿರುವ About Google Transate ಕೊಂಡಿಯನ್ನೊಮ್ಮೆ ಬಳಸಿ ಅದರ ಬಗ್ಗೆ ಸ್ವಲ್ಪ ಓದಿ. ಮೊದಲನೆಯದಾಗಿ ಇದೂ ಇನ್ನೂ ಆಲ್ಫಾ ಆವೃತ್ತಿ. ಇನ್ನೂ ಬೀಟ ಆವೃತ್ತಿಯ ನಂತರ ಸೇವೆಯು ಸಾಧಾರಣ ಬಳಕೆಗೆ ಲಭ್ಯವಾಗುತ್ತದೆ. ಆಲ್ಫಾ ಆವೃತ್ತಿಯ ಬಗ್ಗೆ ಗೂಗಲಿಸಿದರೆ ನಿಮಗೆ ಹಾಗೆಂದರೇನೆಂಬುದು ತಿಳಿಯುತ್ತದೆ. ಮತ್ತಷ್ಟು ಓದು »

25
ಜೂನ್

ಆಧುನಿಕ ಬೇತಾಳನೂ ವಿಕ್ರಮಾದಿತ್ಯನೂ ಮತ್ತು ಕಾಲೇಜು ಹುಡುಗರು…

ಸಾತ್ವಿಕ್ ಎನ್ ವಿ

ಯಥಾ ಪ್ರಕಾರ ಹಠಬಿಡದೇ ಸೆಪ್ಟೆಂಬರ್ ಮಾರ್ಚ್ ಸೆಪ್ಟೆಂಬರ್ ಎಕ್ಸಮ್ ಬರೆಯೋ ರಿಪಿಟರ್ ವಿದ್ಯಾರ್ಥಿ ಥರಾ ವಿಕ್ರಮ ರಾಜನು ಮರದಲ್ಲಿದ್ದ ಬೇತಾಳವನ್ನು ಪ್ರೈಮರಿ ಶಾಲೆಯ ಮಕ್ಕಳ ಮಣ ಭಾರದ ಪುಸ್ತಕದ ಚೀಲದಂತೆ ಹೆಗಲಿಗೇರಿಸಿ ನಡೆಯುತ್ತಿದ್ದನು. ವಶೀಲಿ ಗೊತ್ತಿಲ್ಲದ ಸರ್ಕಾರಿ ನೌಕರನಂತೆ ದುಡಿಯುವುದನ್ನು ನೋಡಿ ಬೇತಾಳನಿಗೆ ಅಯ್ಯೋ ಪಾಪ ಎನಿಸಿ ‘ ವಿಕ್ರಮ ಮಹಾರಾಜ ನಿನ್ನ ಕರ್ತವ್ಯ ಪ್ರಜ್ಞೆ ಮೆಚ್ಚಿದ್ದೇನೆ. ದಾರಿಸಾಗಲು ಕಥೆಯೊಂದನ್ನು ಹೇಳುತ್ತೇನೆ. ಮೊಬೈಲ್ ಅಲ್ಲಿ ಮಾತಾಡುತ್ತಾ ಸಾಗೋ ಪ್ರೇಮಿಯ ಹಾಗೆ ನಿನಗೆ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ’ ಎಂದಿತು. ವ್ರತ ನಿಷ್ಠನಾದ ವಿಕ್ರಮ ಮಾತಾಡದೇ ಇದ್ದರೂ ಹುಡುಗಿಯರ ಮೌನವನ್ನೇ ಒಪ್ಪಿಗೆ ಎಂದು ಭಾವಿಸುವ ಪ್ರಿಯಕರನಂತೆ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.

ಪುಣ್ಯ ಭರತ ಭೂಮಿಯಲ್ಲಿ ಕನ್ನಡನಾಡು ಎಂಬ ರಾಜ್ಯ. ಅಂತಿಪ್ಪ ರಾಜ್ಯದಲ್ಲಿ ತಂಗಳೂರು ವಿಶ್ವವಿದ್ಯಾನಿಲಯವೆಂಬ ವಿದ್ಯಾದೇಗುಲವಿತ್ತು. ಅಲ್ಲಿ ಉತ್ತಮ ದರ್ಜೆಯ ವಿದ್ಯಾಭ್ಯಾಸ ಸಿಗುತ್ತಿದ್ದ ಕಾರ್‍ಅಣ ಇಡೀ ದೇಶದಲ್ಲಿಯೇ ಪ್ರಸಿದ್ಧವಾಗಿತ್ತು. ಅಂಥ ವಿ ವಿ ಗೆ ಸುಭಗನೆಂಬ ವಿದ್ಯಾರ್ಥಿ ಕಲಿಯಲು ಸೇರಿದನು. ಕ್ರೀಡೆ, ಸಾಹಿತ್ಯ, ವಿಷಯಗಳಲ್ಲಿ ಒಳ್ಳೆಯ ಆಸಕ್ತಿ ಇತ್ತು. ಉತ್ತಮ ವಿದ್ಯಾರ್ಥಿಯಾದ ಈತನು ಬೇರೆ ವಿದ್ಯಾರ್ಥಿಗಳಿಗೆ ಅಸೂಯೆ ಮೂಡಿಸುವಷ್ಟು ಮಟ್ಟಿಗೆ ಬೆಳೆದನು. ವಿಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕೂಡಿದ್ದ ಇತನಿಗೆ ತನ್ನ ಸಮಾಜದ ಕೊಳಕುತನಗಳನ್ನು ಕಿತ್ತುಹಾಕಬೇಕೆಂಬ ತುಡಿತ. ಎಳೆ ವಯಸ್ಸು ಹುರಿಗಟ್ಟಿದ ದೇಹ, ಕನಸು ಬಿತ್ತುವ ಉಪನ್ಯಾಸಕರು ಇನ್ನೇನೂ ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು. ಮತ್ತಷ್ಟು ಓದು »

24
ಜೂನ್

ಜೀವನ ಬಂಡೆ ಕಲ್ಲಾ?

ಸುಬ್ರಹ್ಮಣ್ಯ ಬಿ ಎಸ್

ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ…

ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು. ನಿಯಮ ಇಷ್ಟೇ , ಪ್ರಶ್ನೆ ( ಸರಿಯಾಗಿ ಹೇಳಬೇಕೆಂದರೆ ಪದ ) ಓದಿದಾಗ ಮೊದಲಬಾರಿಗೆ ಅದೇನು ಹೊಳೆಯುತ್ತದೋ ಹೇಳಿ ಬಿಡಬೇಕಿತ್ತು.

ಮೊದಲನೆಯದು “ಪ್ರೀತಿ “- ಮನಸ್ಸಿನಲ್ಲಿ ಪಟ ಪಟ ಸದ್ದು ಮಾಡ್ತಾ ಜೋಡಿ ಹಕ್ಕಿಗಳು ಕಣ್ಮುಂದೆ ಬಂದ್ಬಿಡೋದೇ…? ಹೌದು ಇನ್ನೇನು , ಅಪ್ಪ ಅಮ್ಮಂದಿರ , ಸಂಸಾರ ,ಬಂಧುಬಳಗದ ವಿರೋಧ ಇಲ್ದಿದ್ರೆ ಪ್ರೀತಿ ಜೋಡಿ ಹಕ್ಕಿನೇ ತಾನೇ? ಸ್ವಚ್ಚಂದ ಆಗಸದಲ್ಲಿ ಪಟ ಪಟ ರೆಕ್ಕೆ ಬಿಚ್ಚಿ ಹಾರಿ ಇಬ್ಬರೇ ಕಾಲ ಕಳೀಬಹುದಲ್ವಾ?

ಎರಡನೆಯದು “ಜೀವನ” -ಅದ್ಯಾಕೋ ದೊಡ್ಡ ಬಂಡೆ ಕಲ್ಲುಗಳು ಕಣ್ಮುಂದೆ ಬರಬೇಕೆ? ಯಾಕೆ ಬಂತು? ನಾನೇನು ಬಂಡೆಕಲ್ಲುಗಳ ಕೆಲಸ ಮಾಡೋನಲ್ಲ.. ಚಿಕ್ಕ ಕಲ್ಲೆತ್ತಿ ಹೊಡೆದಿದ್ದೂ ಕಮ್ಮಿನೇ , ಮತ್ಯಾಕೆ? ಬಸ್ಸಿನೊಳಗೆ ಕುಳಿತ ನನಗೆ ಆ ರಾತ್ರಿಯ ಕತ್ತಲಲ್ಲಿ ಸುತ್ತ ಮುತ್ತ ಬಂಡೆಗಳೇನು ಕಾಣಿಸೋ ಹಾಗಿರಲಿಲ್ಲ..ಹಾಗಂತ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ,ಜೀವಿಸಲು ಶ್ರಮಪಟ್ಟು ಜೀವನವೆಂದರೆ ಕಠಿಣ ಅನ್ನೋವಷ್ಟು ವಯಸ್ಸಾಗಲಿ ,ಸಾಧನೆಯಾಗಲಿ ಮಾಡಿಲ್ಲ. ಜುಜುಬಿ ಇಪ್ಪತ್ನಾಲ್ಕಕ್ಕೆ ಜೀವನ ಅಂದಾಗ ಬಂಡೆ ಕಲ್ಲು ಕಣ್ಣೆದುರಿಗೆ ಬಂದ್ರೆ ಸ್ವಲ್ಪ ಯೋಚನೆ ಮಾಡದಿದ್ದರೆ ಹೇಗೆ ? ಮತ್ತಷ್ಟು ಓದು »

23
ಜೂನ್

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ಸಂತೋಷ್ ಕುಮಾರ್ ಪಿ.ಕೆ

ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು ಸನ್ನದ್ದರಾಗಿರುವುದು ಬಹುಟೀಕೆಗೆ ಒಳಗಾಗಿದೆ. ಇದು ಮೇಲ್ನೋಟಕ್ಕೆ ಕೇವಲ ಆಣೆ ಪ್ರಮಾಣದ ಸಮಸ್ಯೆಯಂತೆ ಕಂಡರೂ ಸಹ ಆ ಸಮಸ್ಯೆಯ ಆಳ ಅಗಲ ನಾವು ಊಹಿಸಲು ಸಾಧ್ಯವಿರದ ಮಟ್ಟಿಗೆ ಇದೆ. ಬಹುತೇಕ ಚಿಂತಕರು, ಲೇಖಕರು ಹಾಗೂ ವಿದ್ವಾಂಸರನ್ನೊಳಗೊಂಡು ಆ ಆಣೆ ಮಾಡುವ ಪ್ರವೃತ್ತಿಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ, ಇಲ್ಲಿ ಕೇವಲ ಆಣೆ ಪ್ರಮಾಣದ ವಿಚಾರವನ್ನುವಿವಮರ್ಶಿಸಿದರೆ ಒಂದೊ, ರಾಜಕಾರಣಿಗಳ ಮೇಲೆ ಕೋಪ ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೆ ಅಂತಹ ಪ್ರೃತ್ತಿಯೇ ಕೆಟ್ಟದೆಒಳ್ಳೆಯದೋ ಎಂಬ ನಿರಪಯುಕ್ತ ಚರ್ಚೆಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ಆಣೆ ಮಾಡುವ ಪ್ರವೃತ್ತಿಯನ್ನು ಪ್ರಶ್ನೆಮಾಡುವ ನೆಪದಲ್ಲಿ ನಮ್ಮ ರಾಜ್ಯಾಂಗದ ಅಥವಾ ಸೆಕ್ಯುಲರಿಸಂ ಸಮಸ್ಯೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಣೆ ಮಾಡುವುದರಲ್ಲಿ ತಪ್ಪೇನಿದೆ ಎಂಬುದನ್ನು ನೋಡುವಾ ಅಥವಾ ಆಣೆ ಮಾಡುವುದು ನಮಗೇಕೆ ತಪ್ಪಾಗಿ ಗೋಚರಿಸುತ್ತಿದೆ ಎಂಬುದನ್ನು ಅವಲೋಕಿಸುವ. ಮತ್ತಷ್ಟು ಓದು »

22
ಜೂನ್

ಮಂಜುನಾಥನ ದಯೆ ಇರಲಿ!!!

 ಅರೆಹೊಳೆ ಸದಾಶಿವ ರಾವ್

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ,

ನಿನಗೊಂದು  ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದೀತು ಎಂದು ನಾವು ಅಂದುಕೊಂಡಿರಲಿಲ್ಲ. ಒಂದು ನಂಬುಗೆ ಇದೆ. ಅದೆಂದರೆ, ನಿನ್ನ ಬಳಿ  ಯಾವುದೇ ಭಕ್ತ ಬಂದು, ತನ್ಮಯತೆಂದ ಏನಾದರೂ ಕೇಳಿಕೊಂಡರೆ, ಕಷ್ಟ ಪರಿಹಾರವಾಗಿ, ಕೋರಿಕೆ ನೆರವೇರುತ್ತದೆ ಎಂದು. ಆದರೆ ತಪ್ಪು ಮಾಡಿದವರನ್ನು ನೀನೇ ನೋಡಿಕೊಳ್ಳುತ್ತಿ ಎಂದು ಒಮ್ಮೆ ಬಾಮಾತಿನಲ್ಲಿ ಹೇಳಿದರೂ, ಮತ್ತೆ ಅದನ್ನು ಹಿಂಪಡೆಯಲು ನಿನ್ನ ಬಳಿಯೇ ಬರಬೇಕಾಗುತ್ತದೆ. ವಿಷಯವನ್ನು ನಿನ್ನ ಮಡಿಲಿಗೆ ಹಾಕಿ ಬಿಟ್ಟರೆ, ಫಲಾಫಲ ನಿನ್ನ ಇಚ್ಛೆಯಂತೆ ನಡೆಯುತ್ತದೆ ಮತ್ತು ಇದು ಇಡೀ ಕುಟುಂಬಕ್ಕೇ ಅನ್ವುಸುತ್ತದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ. ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ.

ಗೌಡರ ವಂಶ ಇರಬಹುದು, ಯಡ್ಯೂರಪ್ಪನವರ ವಂಶವಿರಬಹುದು, ಎಲ್ಲರ ಮೇಲೂ ನಾವು ವಿಶ್ವಾಸ ಇಟ್ಟು, ದೇಶದ ಪರಮಾಧಿಕಾರಗಳ ವಿವಿಧ ಹಂತಗಳನ್ನು ನೀಡಿದವರು. ಆದರೆ ಅವರೆಲ್ಲಾ ಅಧಿಕಾರ ಸಿಕ್ಕ ನಂತರ, ಈ ಎಲ್ಲದೂ ತಮಗೆ ಕಟ್ಟಿಟ್ಟದ್ದು ಎಂಬಂತೆ ವರ್ತಿಸಿದ್ದು ಮಾತ್ರ ನಿಜ. ಎಲ್ಲರೂ ಅವರವರ ಮಟ್ಟಿಗೆ ರಾಜ್ಯದ ಬೊಕ್ಕಸದಿಂದ ಸಾಧ್ಯವಾದಷ್ಟೂ ಎತ್ತಿದವರೇ ಎಂದು ಇಬ್ಬರೂ ಆರೋಪಿಸಿಕೊಳ್ಳುತ್ತಿದ್ದಾರೆ. ಸತ್ಯ ಏನು ಎನ್ನುವುದು ರಾಜ್ಯದ ಎಲ್ಲರಿಗೂ ಗೊತ್ತಿದೆ. ಯಡ್ಯೂರಪ್ಪ ಮತ್ತು ಕುಮಾರ ಸ್ವಾಮಿ-ಇಬ್ಬರೂ ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಮೆಂದವರೇ ಎಂಬುದೇ ಈ ಸತ್ಯ!(ನಿನಗೆ ಗೊತ್ತಿಲ್ಲದ್ದೇನಲ್ಲ ಬಿಡು) ಮತ್ತಷ್ಟು ಓದು »