ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

27
ಮೇ

ಬಯಸಿದ್ದೆಲ್ಲ ನಮಗೇ ಸಿಗಬೇಕೆಂಬ ಹಠವಾದರೂ ಏಕೆ…???

– ಅಮಿತಾ ರವಿಕಿರಣ್

ಉಷಾ ಕಟ್ಟೆಮನೆ ಅವರ ಬ್ಲಾಗು ಓದುತ್ತಿದ್ದೆ …ಪ್ರೆಮಿಸಿದವನ ಕಣ್ಣು ಕಿತ್ತ ಘಟನೆಯೊಂದರ ಕುರಿತಾದ ಬರಹವದು….ಅದನ್ನು ಓದುತ್ತ ಓದುತ್ತ ಹಸಿರಾದ ನೆನಪೊಂದನ್ನು ಅಕ್ಷರದಲ್ಲಿ ಬಂಧಿಸಿಡುವ ಪ್ರಯತ್ನ ಮಾಡುತ್ತಿರುವೆ…

ನಾನು  ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ದಿನಗಳವು…ನನ್ನೂರಿಂದ  ವಿಶ್ವವಿದ್ಯಾಲಯ ಸುಮಾರು ೭೪ ಕಿ ಮಿ ದೂರ..ದಿನ ಬೆಳಿಗ್ಗೆ ೮ ಕ್ಕೆ ನಾನು ಮನೆಯಿಂದ ಹೊರಡುತ್ತಿದ್ದೆ ..ಆ ಸಮಯದಲ್ಲಿ ಲಭ್ಯವಿದ್ದ ಬಸ್ಸುಗಳಲ್ಲಿ ವಿದ್ಯಾರ್ಥಿಗಳೇ ತುಂಬಿರುತ್ತಿದ್ದರು…ನಾ ಮುಂದು ನೀ ಮುಂದು ಎಂದು ಸೀಟು ಹಿಡಿಯೋದು…ಕಿಟಕಿಯಿಂದಲೇ ಕರ್ಚೀಪು ಎಸೆಯೋದು..ಹೇಗೋ ಒಂದು ಸೀಟು ಗಿಟ್ಟಿಸಿ ಕುಳಿತುಕೊಂಡರೆ ಹುಬ್ಬಳ್ಳಿ ತನಕ ಯಾವುದೊ ರಗಳೆ ಇಲ್ಲ….
ನಂತರ ಪುಟ್ಟ ಕಾಡು..ಬಿದಿರುಮೆಳೆ..ಬಾಚಣಿಕಿ ಡ್ಯಾಮ್ ..ಗಳನ್ನು ದಾಟಿದ ನಂತರ ಸಿಗುವುದು ತಡಸ್ ಎಂಬ ಪುಟ್ಟ ಊರು ..ಅಲ್ಲೊಂದಿಷ್ಟು ವಿದ್ಯಾರ್ಥಿಗಳು ತುಂಬುತ್ತಿದ್ದರು …ಬಸ್ಸು ತುಂಬಿದ ಗರ್ಭಿಣಿಯಂತೆ..ಅಲ್ಲೇ ಸಿಗುತ್ತಿದ್ದಳಾಕೆ…ಕೃಷ್ಣನ ತಾಯಿಯ ಹೆಸರವಳದು…ಸ್ನೇಹಿತೆ ಅಂತ ಹೇಳಲಾರೆ…ಸುಮ್ಮನೆ ನಗುತ್ತಿದ್ದಳು..ಅಥವಾ ದೂರದಿಂದಲೇ ಕೈ ಬೀಸುತ್ತಿದ್ದಳು..ಆಕೆಗೆ ಯಾವತ್ತು ಸೀಟ್ ಸಿಗುತ್ತಿರಲಿಲ್ಲ…ನಿಂತ ವಿದ್ಯಾರ್ಥಿಗಳ ಬ್ಯಾಗು,ಪುಸ್ತಕ ಕುಳಿತವರ ಮಡಿಲಲ್ಲಿ ಆರಾಂ ಮಾಡುತ್ತಿದ್ದವು…ಹಾಗೆ…ಪ್ರತಿ ದಿನ ಅಲ್ಲದಿದ್ದರೂ..ಹೆಚ್ಚಿನ ಸಂಧರ್ಭದಲ್ಲಿ ಆಕೆ ಮತ್ತು ನಾನು ಬಸ್ ನಲ್ಲಿ ಭೇಟಿ ಆಗುತ್ತಿದ್ದೆವು…
ಚಂದದ ಹುಡುಗಿ…ಆಕೆಗೂ ಕನಸುಗಳಿದ್ದವು..ಮಧ್ಯಮವರ್ಗದ ಎಲ್ಲಾ ಹುಡುಗಿಯರಿಗೆ ಇರೋ  ಹಂಗೆ ಆಕೆಗೂ ಬಾನು ಮುಟ್ಟೋ ಕನಸಿತ್ತು…ಗಂಡ ಮನೇ ಮಕ್ಕಳ ಬಗ್ಗೆ ಸುಂದರ ಕಲ್ಪನೆಗಳಿದ್ದವು.ಇದೆಲ್ಲ ಇದ್ದ ಮೇಲೆ….ಹದಿವಯಸ್ಸಿಗೆ ಈ ಜಾಯಮಾನದಲ್ಲಿ ಕಂಪಲ್ಸರಿ ಅನ್ನೋ ಒಂದು ಅಫ್ಫೆರೂ ಇತ್ತು…ಹಾಗಂತ ಅವಳೇನು ನನ್ ಬಳಿ ಹೇಳಿರಲಿಲ್ಲ…ಗೆಳತಿಯರ ತಮಾಷೆ…,ಆಕೆಯ ಸುಖಾಸುಮ್ಮನೆ ನಗು..ಕಣ್ಣಂಚಿನ ತಿರುಚು .ಮೌನದಲ್ಲಿ ಮಾತು…ಇವೆಲ್ಲ ಅದಕ್ಕೆ ಪೂರಕವಾಗಿದ್ದವು…ಅದೇನು ಅಪರಾಧ ಅಲ್ಲ ಬಿಡಿ….
ಆದಿನ ಬೆಳಿಗ್ಗೆ ಕಪ್ಪು ಬಣ್ಣದ ಉಡುಗೆಯಲ್ಲಿ ಚಂದ ಕಾಣುತ್ತಿದ್ದಳು …ಅದೇ ಹೂ ನಗು…ಹಾಯ್ !ಅನ್ನೋ ರೀತಿಯ ಒಂದು ಕೈ ಬೀಸೋ ಮೂಲಕ ಮಾತಿಲ್ಲದೆ ಮಾತಾಡಿದ್ದಳು ಹುಡುಗಿ….ಹುಬ್ಬಳ್ಳಿ ಬಂತು ಸೀಟು ಹಿಡಿಯುವಾಗ ಇರೋ ಅವಸರದ ಮೂರು ಪಟ್ಟು ಅವಸರ ಇಳಿಯುವಾಗ…ಮತ್ತೆ ಬೇರೆ ಬಸ್ಸ ಹಿಡಿಬೇಕಲ್ಲ..”ಕ್ಲಾಸಸ್ ತಪ್ಪುತ್ತೆ..”ಇವತ್ತು ಮುಗೀತು ಮತ್ತೆ ಗೈರು ನಾ ಕ್ಲಾಸ್ ಗೆ..ಅಂತ..ಎಲ್ಲರು ಮಾತಾಡ್ತಾ ದೂದಡಿ ಕೊಂಡು ಇಳಿದು ಹೋಗಿದ್ದೆವು ಎಂದಿನಂತೆ… ಮತ್ತಷ್ಟು ಓದು »
26
ಮೇ

ಒಂದು ತುತ್ತು ಅನ್ನ… ಎರಡು ತೊಟ್ಟು ಕಣ್ಣೀರು…!

-ರವಿ ಮೂರ್ನಾಡು

ಮದುವೆಗೆ ಗೆಳತಿಯ ಆಮಂತ್ರಣ  ಬಂದಿತ್ತು.ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ತಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣಿಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೆ ಇವೆ…..ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇದೆ….! ಹೆಜ್ಜೆಗಳು ಮೂಡುತ್ತಲೇ ಇವೇ…

ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ.ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ. ಜೋಳಿಗೆ  ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.

ಹಾಗೇ ದ.ರಾ.ಬೆಂದ್ರೆ, ಎಂ.ಟಿ.ವಾಸುದೇವನ್‍ ನಾಯರ‍್, ಪ್ರೇಮ್‍ಚಂದ್‍., ಜಿ.ಎಸ್‍. ಶಿವರುದ್ರಪ್ಪ.. ಇತ್ಯಾದಿ…! ಅದರಲ್ಲಿ ವಾಸುದೇವನ್‍ ನಾಯರರ  ಒಂದು ಕಥೆ ಹಸಿವಿನ  ಕ್ಷಣಗಳನ್ನು ಕದಕಿದಂತಾಯಿತು. ಕಥೆ ” ಕರ್ಕಟಕ ಮಾಸ”. ಕೇರಳದಲ್ಲಿ ” ಕಕ್ಕಡ ಮಾಸಂ” ಅಂತ ಕರೀತಾರೆ.ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಅಂತ ಪ್ರತೀತಿ.ಜ಼ಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್‍ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾಧ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ. ಮತ್ತಷ್ಟು ಓದು »

26
ಮೇ

ಉಗ್ರರ ಉಪದ್ರವಕ್ಕೆ ಪರಿಹಾರವಿಲ್ಲವೇ?

– ಮುರಳೀಧರ ದೇವ್

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಏನಾಗಿದೆ? ಒಂದಾದ ಮೇಲೆ ಒಂದರಂತೆ ಹಗರಣಗಳು, ಅವಾಂತರಗಳು, ಒಟ್ಟಿನಲ್ಲಿ ಇಡೀ ಭಾರತ ದೇಶ ವಿಶ್ವಡೆದುರು ತಲೆ ತಗ್ಗಿಸುವ ಹಾಗೆ ಆಗಿದೆ. ಕಾಮನ್ ವೆಲ್ತ್  ಕ್ರೀಡೆಯ ಹಗರಣದಿಂದ ಸರ್ಕಾರದ ಮಹತ್ವದ ಹುದ್ದೆಗಳಲ್ಲಿರುವವರೆಲ್ಲರೂ ಭಾಗಿಗಳು ಅಂತ ಕಾಣ್ಸುತ್ತೆ. ಈಗ ಕೇಂದ್ರದ ಮತ್ತೊಂದು ಅವಾಂತರ, ಇತ್ತೀಚೆಗೆ ಕೇಂದ್ರೀಯ ತನಿಖಾ ದಳ ಪಾಕಿಸ್ತಾನಕ್ಕೆ ರವಾನಿಸಿದ ಪಟ್ಟಿಯಲ್ಲಿ ಕೆಲವರು ಭಾರತದ ಜೈಲಿನಲ್ಲಿ ಇದ್ದಾರೆ.  ಅಲ್ಲದೇ ಆ ಪಟ್ಟಿಯಲ್ಲಿರುವವರನ್ನು ತನಿಖಾದಳವೆ ವಿಚಾರಣೆ ನಡೆಸಿದೆ ಹಾಗಿದ್ದೂ ಇಂತಹ ಲೋಪ ಆಗೋಕೆ ಹೇಗೆ ಸಾಧ್ಯ? ಕಡೆ ಪಕ್ಷ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಾಗಲಾದ್ರೂ ಪಟ್ಟಿಯನ್ನು ಸರಿಯಾಗಿ ಪರಿಶೀಲನೆ ಮಾಡೋಕೆ ಆಗೋಲ್ವಾ? ತನಿಖಾ ಸಂಸ್ಥೆಗಳ ನಡುವೆ ಅಷ್ಟೂ ಸಮನ್ವಯ ಸಾಧಿಸೋಕೆ ಆಗೋಲ್ವಾ? ಇತ್ತೀಚಿನ ಬೆಳವಣಿಗೆಗಳಿಂದ ಭಾರತ ವಿಶ್ವ ಸಮುದಾಯದೆದುರು ಅಪರಾಧಿ ಸ್ಥಾನದಲ್ಲಿ ನಿಲ್ಲುವ ಹಾಗೆ ಆಗಿದೆ.

ಈಗ ಪಾಕಿಸ್ತಾನ ಇದೆ ಅಂಶಗಳನ್ನು ಮುಂದಿಟ್ಟುಕೊಂಡು ತನ್ನಲ್ಲಿ ಯಾವುದೇ ಭಯೋತ್ಪಾದಕರಿಲ್ಲ ಅವರೆಲ್ಲ ಭಾರತದಲ್ಲೇ ಇದ್ದಾರೆ ಅಂತ ಹೊಸ ವಾದ ಮುಂದಿಟ್ಟರು ಆಶ್ಚರ್ಯವಿಲ್ಲ. ಅಲ್ಲದೇ ಈಗ ಹಿಡಿದಿರುವ ಉಗ್ರರಿಂದ ಸರ್ಕಾರ ಕಡೆದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ, ಮುಂಬೈ ನಗರವನ್ನು ನಡುಗಿಸಿದ ಉಗ್ರಗಾಮಿಗಳಿಗೆ ನಮ್ಮ ಜೈಲುಗಳಲ್ಲಿ ಭಾರಿ ಅತಿಥಿ ಸತ್ಕಾರಗಳು ನಡೀತಾ ಇವೆ. ಇದನ್ನೆಲ್ಲ ನೋಡಿ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳು ತಾವೇ ಶರಣಾಗಿ ಬಂದರು  ಪಾಕಿಸ್ತಾನಕ್ಕಿಂತ ಹೆಚ್ಚಿನ ಅನುಕೂಲಗಳು ಇಲ್ಲೇ ಸಿಗುತ್ತವೆ. ಅಲ್ಲ ಆಡಳಿತ ನಡೆಸುವ ಪಕ್ಷಕ್ಕೆ ಉಗ್ರಗಾಮಿಗಳಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡೋಕೆ ನಾಚಿಕೆ ಆಗೋಲ್ವಾ? ಹೀಗೆ ಭಾರತದ ಮೇಲೆ ದಾಳಿ ಮಾಡುವ ಉಗ್ರರನ್ನು ಎಷ್ಟು ದಿನ ಅಂತ ತೆರಿಗೆದಾರರ ಹಣದಿಂದ ಸಾಕಬೇಕು.

ಮತ್ತಷ್ಟು ಓದು »

23
ಮೇ

ನರೇ೦ದ್ರ ಮೋದಿ ಎ೦ಬ ಭಾರತದ ಚಲಾವಣೆಯ ನಾಣ್ಯ !!

ರಾಘವೇಂದ್ರ ನಾವಡ ಕೆ ಎಸ್

ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.. ಎಲ್ಲರೂ ಮಹಾತ್ಮರಾದರೆ ಅತ೦ತ್ರರಾಗೋರ್ಯಾರು? ಎ೦ಬ ಉಡಾಪೆಯ ಮಾತೊ೦ದಿದೆ! ಸೂಕ್ತ ಸಮಯದಲ್ಲಿ ಸುಪ್ತವಾಗಿ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ಜನ ಕಲ್ಯಾಣಕ್ಕಾಗಿ ಚಿ೦ತಿಸುವವರೆಲ್ಲಾ ಮಹಾತ್ಮರೇ ಆಗುತ್ತಾರೆ!

ಈ ಪ್ರಸ್ತುತ ಲೇಖನಕ್ಕೆ ಮತ್ತೊಮ್ಮೆ ನರೇ೦ದ್ರ ಮೋದಿಯೇ ಕಥಾವಸ್ತು! ನಿನ್ನೆ ನನ್ನ ಆತ್ಮೀಯ ಪ್ರಸ್ಕಾ ಕಳುಹಿಸಿದ ಮೊಬೈಲ್ ಸ೦ದೇಶವೇ ಮತ್ತೊಮ್ಮೆ  ನನ್ನ ಲೇಖನಕ್ಕೆ ಆಧಾರವಾಗಿದೆ. ಮೋದಿ ಸರ್ಕಾರದ ಮತ್ತೊ೦ದು ಸಾಧನೆಯನ್ನೇ ಈ ಲೇಖನದಲ್ಲಿ  ಬಿ೦ಬಿಸುತ್ತಿದ್ದೇನೆ. ಈ ಹಿ೦ದೆ ನರೇ೦ದ್ರ ಮೋದಿಯವರ ಬಗ್ಗೆ  ಇಷ್ಟಕ್ಕೂನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು? ಎ೦ಬ ಲೇಖನದಲ್ಲಿ ಗುಜರಾತ್ ಯಶೋಗಾಥೆಯನ್ನು ಸಾದ್ಯ೦ತವಾಗಿ ವಿವರಿಸುವ ಪ್ರಯತ್ನ ಮಾಡಿದೆ.

ಕಣ್ಣಿಗೆ ಕ೦ಡ, ಕೇಳಿ ತಿಳಿದ ಒಳ್ಳೆಯ ವಿಚಾರಗಳ ಬಗ್ಗೆ ಹಾಗೂ ಒಳ್ಳೆಯ ವ್ಯಕ್ತಿಗಳ ಬಗ್ಗೆ ನಾನು ಯಾವಾಗಲೂ ಪ್ರಚಾರ ಮಾಡುತ್ತಲೇ ಇರುತ್ತೇನೆ! ನನ್ನ ಇ೦ಥ ಸ೦ತಸಕ್ಕೆ ಕಾರಣ ಏನೆ೦ದು ಕೇಳುವಿರೇ? ಹಾಗಾದರೆ ಕೇಳಿ: ಗುಜರಾತ್ ಸರ್ಕಾರವನ್ನು “ಪ್ರಪ೦ಚದ ಎರಡನೇ ಅತ್ಯುತ್ತಮ ರಾಜ್ಯ ಸರ್ಕಾರ“ ವೆ೦ದು ವಿಶ್ವಸ೦ಸ್ಥೆಯ ಅ೦ತರಾಷ್ಟ್ರೀಯ ವ್ಯವಹಾರಗಳ ಕಾರ್ಯಲಯ ಘೋಷಿಸಿದೆ! ಇದಕ್ಕಿ೦ತಾ ಮತ್ತೊ೦ದು ಸ೦ತಸದ ಸ೦ಗತಿ ಭಾರತೀಯರಾದ ನಮಗೆ ಪ್ರಸ್ತುತ ಬೇರೇನಿದೆ? ನರೇ೦ದ್ರ ಮೋದಿ ಈಗ ಭಾರತದ ಚಲಾವಣೆಯ ನಾಣ್ಯ!!   ಜನತೆ ರಾಜಕೀಯದ ಬಗ್ಗೆ ಚರ್ಚಿಸುವಾಗ ಮೋದಿ ಯವರ  ಬಗ್ಗೆ ಅವರು ಗುಜರಾತಿನಲ್ಲಿ ಆರ೦ಭಿಸಿರುವ “ಅಭಿವೃಧ್ಧಿಯ ಶಕೆ“ ಯ ಬಗ್ಗೆ ಪ್ರಸ್ತಾಪವೆತ್ತದೆ ಇರಲಾರರು! ಮತ್ತಷ್ಟು ಓದು »
23
ಮೇ

ಅಮರನಾಥ ಯಾತ್ರೆಯ ಪ್ರಾರಂಭ

ಶ್ರೀಹರ್ಷ ಸಾಲಿಮಠ

ಅಮರನಾಥ ಯಾತ್ರೆ ಮತ್ತೆ ಶುರುವಾಗಿದೆ. ಅಲ್ಲಿ ಇಲ್ಲಿ ರಿಸರ್ಚು ಮಾಡುವವರಿಗಿಂತ ಹೋಗಿಬಂದವನ ಬಾಯಲ್ಲೇ ಕೇಳಿದರೆ ವಿವರವಾದ ಐಡಿಯಾ ಸಿಗುತ್ತದೆ! ವಾಟ್ ಎನ್ ಐಡಿಯಾ ಸರ್‍ ಜಿ!

ಅಮರನಾಥಕ್ಕೆ ಹೋಗುವವರು ಮೊದಲು ಪರವಾನಗಿ ಪಡೆಯಬೇಕು. ಪರವಾನಗಿ ಜೆ&ಕೆ (ಜಮ್ಮು ಕಾಶ್ಮೀರ) ಬ್ಯಾಂಕ್ ನಲ್ಲಿ ದೊರೆಯುತ್ತದೆ. ಕರುನಾಡಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕಿದೆ. ಬೆಂಗಳೂರಲ್ಲಿ ಅವೆನ್ಯೂ ರಸ್ತೆಯ ಕೊನೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿ ಜಮ್ಮು ಕಾಶ್ಮೀರ ಬ್ಯಾಂಕಿದೆ. ದಿನಕ್ಕೆ ಪರಿಮಿತ ಜನರಿಗೆ ಮಾತ್ರ ಪರವಾನಗಿ ಕೊಡುತ್ತಾರೆ. ಇವತ್ತು ಪರವಾನಗಿ ಪಡೆದರೆ ಜುಲೈಗೆ ಸಿಗಬಹುದು. ಪರವಾನಗಿ ಸಿಕ್ಕ ದಿನವೇ ಗುಹೆಯ ಬಳಿ ಹೋಗಬೇಕೆಂದು ಹೇಳುತ್ತಾರಾದರೂ ಅಮರನಾಥದಲ್ಲಿ ಅಷ್ಟು ಕಟ್ಟುನಿಟ್ಟಿನ ನಿಯಮವಿರಲಿಲ್ಲ.
ಯಾತ್ರೆಗೆ ಹೊರಡಲು ಮದ್ಯಮವರ್ಗದವರಿಗೆ ರೈಲು ಒಳ್ಳೆಯ ಮಾರ್ಗ. ಪುಣೆಯಿಂದ ಜಮ್ಮುವಿಗೆ ನೇರ ರೈಲು ಇದೆ. ಇಲ್ಲವೇ ಹುಬ್ಬಳ್ಳಿ ಅಥವಾ ಬೆಂಗಳೂರಿನಿಂದ ಹೊಸದೆಹಲಿ ತಲುಪಿ ಹಳೆ ದೆಹಲಿ ರೇಲ್ವೇ ನಿಲ್ದಾಣದಿಂದ ಜಮ್ಮು ತಲುಪಬಹುದು (ಹೊಸ ದೆಹಲಿ ಯಿಂದ ಹಳೆದೆಹಲಿ ರೇಲ್ವೇ ನಿಲ್ದಾಣಕ್ಕೆ ಹೋಗಬೇಕು). ದೆಹಲಿಯಿಂದ ಜಮ್ಮು ಸುಮಾರು ಹದಿನೈದು ತಾಸುಗಳ ರೈಲು ಪಯಣ. ಸರ್ಕುಲಾರ್‍ ಟಿಕೆಟ್ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತದೆ.
ಜಮ್ಮು ಕಾಶ್ಮೀರದಲ್ಲಿ ಆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳನ್ನು ಹೊರತುಪಡಿಸಿ ಬೇರೆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳು ಕೆಲಸ ಮಾಡುವುದಿಲ್ಲ. ಎಲ್ಲ ರಾಜ್ಯದ ಎಲ್ಲ ಪೋಸ್ಟ್ ಪೇಡ್ ನೆಟ್ವರ್ಕ್‌ಗಳು ಕೆಲಸ ಮಾಡುತ್ತವಾದರೂ ಬಿ ಎಸ್ ಎನ್ ಎಲ್ ಪೋಸ್ಟ್ ಪೇಡ್ ಉತ್ತಮವಾದದ್ದು. ಮತ್ತಷ್ಟು ಓದು »

19
ಮೇ

ಕಲೆಯ ಉಳಿವಿಗೆ ಕಲಾವಿದನೂ ಜವಾಬ್ದಾರ!

-ಅರೆಹೊಳೆ ಸದಾಶಿವರಾವ್

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಶ್ರೀಕುಂಬ್ಳೆ ಸುಂದರ ರಾವ್ ಅವರು ಮಾತಾಡುತ್ತಾ ಯಕ್ಷಗಾನದ ಉಳಿವಿಗೆ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಹೇಳುತ್ತಿದ್ದರು. ಮುಖ್ಯವಾಗಿ ಇಂದು ಮಂದಾರ್ತಿ, ಕಟೀಲುಗಳಂತಹ ಹರಕೆಯ ಆಟಗಳ ಅತಿಯಾದ ಬೇಡಿಕೆ ಇರುವ ಮೇಳಗಳು, ತಮ್ಮ ‘ವೀಳ್ಯ’ದಲ್ಲಿ ಕೇವಲ ಐದು ನೂರು ರೂಪಾಯಿಗಳನ್ನು ಹೆಚ್ಚುವರಿಯಾಗಿ ಸೇವೆ ಮಾಡಿಸುವವರಿಂದ ಪಡೆದು, ಅದನ್ನು ಮಕ್ಕಳಿಗೆ ಯಕ್ಷಶಿಕ್ಷಣಕ್ಕೆ ಬಳಸಬಹುದು ಎಂಬ ಸಲಹೆಯನ್ನು ಅವರಿತ್ತರು. ಇದು ನಿಜಕ್ಕೂ ಸ್ವಾಗತಾರ್ಹ ಸಲಹೆ ಮತ್ತು ಸಂಬಂಧಿಸಿದವರು ಈ ಬಗ್ಗೆ ಹೆಜ್ಜೆ ಇಡಬಹುದು ಎಂದು ಆಶಿಸೋಣ.

ಇಂದು ಯಕ್ಷಗಾನವನ್ನು ನೋಡುವವರ ಸಂಖ್ಯೆ ಮತ್ತು ಆ ಕಲೆಗೆ ಸಿಗುತ್ತಿರುವ ಗೌರವ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕನಷ್ಟೇ ಕಲಾವಿದನೂ ಜವಾಬ್ದಾರಿಯನ್ನು ಅರಿತು ನಡೆಯುವ ಅನಿವಾರ್ಯತೆ ಇದೆ. ಎಲ್ಲೆಡೆಯಲ್ಲಿಯೂ ಪ್ರೇಕ್ಷಕ ಬದಲಾಗಬೇಕು ಎಂಬ ಮಾತುಗಳೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹಾಗಾದರೆ ಕಲಾವಿದ ಎಷ್ಟರ ಮಟ್ಟಿಗೂ ಜವಾಬ್ದಾರನೇ ಅಲ್ಲವೇ ಎಂಬ ಪ್ರಶ್ನೆ ಏಳುವುದೂ ಸಹಜ. ನನ್ನ ಒಂದೆರಡು ಅನುಭವಗಳನ್ನು ಇಲ್ಲಿ ವಿವರಿಸಬೇಕೆನ್ನುತ್ತದೆ.

ಇತ್ತೀಚೆಗೆ ನಾನು ನನ್ನ ಊರಿನಲ್ಲಿ ಒಂದು ವಿಶಿಷ್ಠ ಮತ್ತು ಕಲಾತ್ಮಕ ಯಕ್ಷಗಾನ ಪ್ರದರ್ಶನವೊಂದನ್ನು ಏರ್ಪಡಿಸುವ ಯೋಜನೆ ಹಾಕಿಕೊಂಡೆ. ಅದರಂತೆ ಕೆಲವು ಖ್ಯಾತ ಕಲಾವಿದರನ್ನು ಸಂಪರ್ಕಿಸಿ, ಯಕ್ಷಗಾನದ ವ್ಯವಸ್ಥೆ ಮಾಡುವಂತೆ ಒಬ್ಬ ಸಂಘಟಕನಲ್ಲಿ ಕೇಳಿಕೊಂಡೆ. ಅದರಂತೆ ಅವರು ಕೆಲವರನ್ನು ಸಂಪರ್ಕಿಸಿ ದಿನಾಂಕ, ಸ್ಥಳ ಎಲ್ಲಾ ತಿಳಿಸಿ, ನಿಗದಿ ಪಡಿಸಿಕೊಂಡು, ಕೊನೆಗೂ ಭಾಗವಹಿಸುವ ಕಲಾವಿದರ ಪಟ್ಟಿ ನೀಡಿದರು. ನಾವದನ್ನು ಹಾಗೆಯೇ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದೆವು, ಪ್ರಚಾರವನ್ನೂ ನೀಡಿದೆವು. ಕೊನೆಗೆ ಪ್ರದರ್ಶನಕ್ಕೆ ಇನ್ನೆರಡು ದಿನ ಇದೆ ಎನ್ನುವಾಗ, ಒಬ್ಬೊಬ್ಬರೇ ಕಲಾವಿದರು ತಮಗೆ ಬgಲಾಗುವುದಿಲ್ಲ ಎಂದರು. ಒಬ್ಬ ಕಲಾವಿದನಂತೂ, ಪ್ರದರ್ಶನದ ದಿನ ಮಧ್ಯಾಹ್ನ ಕೇವಲ ಒಂದು ಎಸ್‌ಎಂಎಸ್ ಕಳಿಸಿ ತನಗೆ ಬರಲಾಗದು ಎಂದು, ಮರಳಿ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸಲಿಲ್ಲ. ಮತ್ತೊಬ್ಬರು ರಾತ್ರಿ ಹನ್ನೆರಡರ ನಂತರ ತಮಗಿರುವ ವೇಷಕ್ಕೆ ಸರಿಯಾಗಿ ಹತ್ತು ಘಂಟೆಗೆ ಬರುತ್ತೇನೆ ಎಂದವರೂ, ಹತ್ತರ ನಂತರ ಫೋನಿಗೇ ಸಿಗಲಿಲ್ಲ!. ಕೊನೆಗೂ ಸಂಘಟಿಸಿದವರೂ ಖುದ್ದು ಕಲಾವಿದರಾಗಿದ್ದರಿಂದ ಎರಡೆರಡು ವೇಷಗಳನ್ನು ಅವರೇ ಮಾಡಿ ಪ್ರದರ್ಶನ ಪೂರೈಸಿದರು!. ಆಮಂತ್ರಣ ಪತ್ರಿಕೆ ನೋಡಿ ಬಂದವರೆಲ್ಲರೂ ಜನರನ್ನು ಸೇರಿಸಲು ಇದು ಸಂಘಟಕರು (ನಾನು) ಮಾಡಿದ ಮೋಸ ಎಂಬಂತೆ ಬೈದು ಮರಳಿದರು. ಸದ್ಯಕ್ಕೆ ಇದು ಬಯಲಾಟವಾಗಿದ್ದರಿಂದ ನಾನು ಉಳಿದುಕೊಂಡೆ. ಮತ್ತಷ್ಟು ಓದು »

18
ಮೇ

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

ಡಾ|| ಬಿ.ಆರ್. ಸತ್ಯನಾರಾಯಣ 

ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ ‘ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ’ ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.

ಬೆಂಗಳೂರಿನ ಸ್ಥಳನಾಮಗಳ ಬಗ್ಗೆ ಈಗಾಗಲೇ ಹಲವಾರು ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ. ’ಬೆಂಗಳೂರು’ ಎಂಬ ಸ್ಥಳನಾಮದ ಬಗೆಗೆ ನಡೆದ ಅಧ್ಯಯನಗಳು ಅಸಂಖ್ಯಾತ. ಬೆಂಗಳೂರು ಪದದ ಪ್ರಾಚೀನರೂಪಗಳು ಯಾವ ಶಾಸನದಲ್ಲಾಗಲೀ, ಸಾಹಿತ್ಯಕೃತಿಯಲ್ಲಾಗಲೀ ಉಲ್ಲೇಖಗೊಂಡಿಲ್ಲ. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿಯೂ ’ಬೆಂಗಳೂರು’ ಎಂದು ಸ್ಪಷ್ಟವಾಗಿಯೇ ಇದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು… ಇತ್ಯಾದಿ ಹಲವಾರು ನಿಷ್ಪತ್ತಿಗಳಲ್ಲಿ, ಊಹೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಬಿಡಬೇಕು ಎಂಬುದೇ ಬಹುದೊಡ್ಡ ಸಮಸ್ಯೆಂಇಇಗಿದೆ.
ಸಾಮಾನ್ಯವಾದ ಐತಿಹಾಸಿಕ ಆಕರಗಳನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ನೋಡಲೆತ್ನಿಸಿದಾಗ ದೊರೆತಿದ್ದು, ಕೆನೆತ್ ಅಂಡರ್‌ಸನ್ ಉಲ್ಲೇಖಿಸಿರುವ ವಿಷಯ. ’ಇಲ್ಲಿಯ ಜನ ಹೆಚ್ಚಾಗಿ ತಿನ್ನುವ, ರುಚಿಕಟ್ಟಾದ ಹಾಗೂ ತರಾವರಿ ಕಾಳುಗಳಿಂದಲೇ ಈ ಹೆಸರು ಬಂದಿದೆಯೆಂದು ಇಲ್ಲಿನ ಜನ ನಂಬಿದ್ದಾರೆ’ ಎಂಬುದನ್ನು ಅಂಡರ್‌ಸನ್ ದಾಖಲಿಸಿದ್ದಾನೆ. ಬೇಯಿಸಿ ತಿನ್ನಬಹುದಾದ ಕಾಳುಗಳ ದೆಸೆಯಿಂದಿಲೇ ಬೆಂಗಳೂರು ಹೆಸರು ರೂಪಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು, ಅಷ್ಟೆ.
ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು, ಬದಲಾಗುವುದು, ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು. ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು, ಸಂಸ್ಕೃತೀಕರಣಗುಳ್ಳುತ್ತಿದ್ದವು. ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು. ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು. ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು. ಕೆಲವು ಉದಾಹರಣೆಗಳ ಮೂಲಕ ಈ ಬದಲಾಗುವ ಪ್ರವೃತ್ತಿಯನ್ನು ಹೆಚ್ಚು ಮನನ ಮಾಡಿಕೊಳ್ಳಬಹುದು. ಮತ್ತಷ್ಟು ಓದು »
13
ಮೇ

ಶಾಪ ವಿಮೋಚನೆಯಾಗದ ಅಹಲ್ಯೆಯರು…

– ರೂಪ ರಾವ್,ಬೆಂಗಳೂರು

ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು.
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ  ವೇದಿಕೆಯಮೇಲೆ ತರೋಣ

“ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು .” ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ,ಮಾಡಬಾರದೆನಿಸಿತು.
“ಮೇಡಂ ನಾ………….ನು …………ಈ ಪಾರ್ಟ್ ಮಾಡಲ್ಲ. ………” ಹಿಂಜರಿಕೆಯಿಂದಲೇ ನುಡಿದೆ.

“ಯಾಕೆ ಗೀತಾ “? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ

“ಮೇಡಂ iam not happy with Ahalya’s charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ  ಅಹಲ್ಯಾ ಹೆಸರು ಸೇರಿದೆ ಅಂತ?”
“ಯಾಕಮ್ಮಾ”? ಮತ್ತೆ ಪ್ರಶ್ನೆ ಎಸೆದರು.
” ಹಾಗಲ್ಲ ಮೇಡಂ ಗಂಡ ಇರದಿದ್ದಾಗ  ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೇ.

“ಸರಿ.ಆಯ್ತು,ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು.ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ತಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. “ಮೇಡ್ಂ ಒಂದೇ ಸಲಕ್ಕೆ ಒಪ್ಪಿ, ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.
ಮತ್ತಷ್ಟು ಓದು »

10
ಮೇ

‘ಕಾಪ’ ಪಂಚಾಯಿತಿ!

– ಪ್ರಶಾಂತ್ ಯಾಳವಾರಮಠ

ಸುನೀತಾ(21) ಮತ್ತು ‘ಜಸ್ಸಾ’ ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಭಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!

ಮತ್ತಷ್ಟು ಓದು »

7
ಮೇ

ಕಳ್ಳಹೊಳೆ ಮತ್ತು ಹೇಮಾವತಿ

– ಹಂಸಾನಂದಿ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು – ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು.

ಮತ್ತಷ್ಟು ಓದು »