ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

4
ಫೆಬ್ರ

ಇದು ಕನ್ನಡಕ್ಕಾದ ಅವಮಾನವಲ್ಲವೇ?

ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ  ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್  ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!

ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?

ಯಾವುದೇ ರಾಜಕೀಯ ಪಕ್ಷ,ಸಂಘಟನೆ, ಪಂಥಕ್ಕೆ ಸೇರದ ಒಬ್ಬ ಸಾಮನ್ಯ ಕನ್ನಡಿಗನ ಕಣ್ಣಿಗೆ ಚಿಮೂ ಅವರು,ಕನ್ನಡದ ಪ್ರಖ್ಯಾತ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕರಾಗಿ ಮಾತ್ರ ಕಾಣಬಲ್ಲರು.

ಇಂತ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವುದು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಪ್ರಾಚೀನ ಕರ್ನಾಟಕದ ಬಗ್ಗೆ ಅವರ ಒಲವನ್ನ,ನಿಷ್ಠೆಯನ್ನ,ತುಡಿತವನ್ನ ಮತ್ತು ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸವನ್ನ ಕಡೆಗಣಿಸಿದಂತೆ ಅವಮಾನಿಸಿದಂತಲ್ಲವೇ? ಕನ್ನಡಕ್ಕಾಗಿ ಕೆಲಸ ಮಾಡಿದವರನ್ನ ಕಡೆಗಣಿಸುವುದು ಕನ್ನಡಿಗರನ್ನ,ಕರ್ನಾಟಕವನ್ನ ಕಡೆಗಣಿಸಿದಂತೆ-ಅವಮಾನಿಸಿದಂತೆಯೇ ಸರಿ. ಮತ್ತಷ್ಟು ಓದು »

4
ಫೆಬ್ರ

ಮಕ್ಕಳೇ, ಕಿಂದರಿಜೋಗಿ ಇಂಟರ್ ನೆಟ್ ನಲ್ಲಿದ್ದಾನೆ

* ಚುಕ್ಕಿಚಂದಿರ

ಇವನು ತುತ್ತೂರಿ ಊದುವ ಕಿಂದರಿಜೋಗಿಯಲ್ಲ. ನಿಮಗೆ ತುತ್ತೂರಿ ಊದಲು, ಚಿತ್ರ ಬಿಡಿಸಲು, ಕತೆಕವನ ಬರೆಯಲು, ಮಕ್ಕಳ ಸೃಜನಾತ್ಮಕತೆ ಬೆಳೆಸಲು ಹೇಳಿಕೊಡುತ್ತಾನೆ. ಒಂದು ಲೆಕ್ಕದಲ್ಲಿ ಇವನು ಮಕ್ಕಳಿಗೆ ಇಂಟರ್ ನೆಟ್ ಮಾಮ. ಮಕ್ಕಳಿಗೆ ಬೇಕಾದ್ದು ಇಂದು ಇಂಟರ್ ನೆಟ್ ನಲ್ಲಿ ಕಡಿಮೆಯಿದೆ. ಅವರ ಸೃಜನಶೀಲತೆ ಬೆಳೆಸಲು ಪೂರಕವಾದ ವೆಬ್ ಸೈಟ್, ಬ್ಲಾಗ್ ಗಳು ಕನ್ನಡದಲ್ಲಿ ಬೆರಳೆಣಿಕೆಯಷ್ಟಿವೆ ಅಷ್ಟೇ. ಚಂದಮಾಮ, ಬಾಲವನ.. ಮತ್ತೊಂದಿಷ್ಟು ಬ್ಲಾಗ್ ಗಳಿವೆ ಅಷ್ಟೇ.

ಹೆಚ್ಚು ಮಕ್ಕಳಿಗೆ ಇಷ್ಟವಾಗುವ ಹೊಸ ಮಕ್ಕಳ ವೆಬ್ ಸೈಟ್ ಇನ್ನೊಂದಿದೆ. ಅದು ಕಿಂದರಿಜೋಗಿ ಅಂತ. “ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ” ಎಂದು ಕಿಂದರಿಜೋಗಿ ಹೇಳುತ್ತಾನೆ.

ಕಿಂದರಿಜೋಗಿ ಮಕ್ಕಳ ಎಲ್ಲ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಾನೆ ಅಂತ ವೆಬ್ ಸೈಟ್ ನೋಡಿದಾಗಲೇ ಅರಿವಾಗುತ್ತದೆ. ಅಲ್ಲಿ ಓದಿ ಕಲಿ, ಕಥೆ, ಕವನ, ಗಣಿತ, ಚಿತ್ರಕಥೆ, ನಾಟಕ, ನೋಡಿ ನಲಿ, ಪ್ರಯೋಗ, ಭೂಮಿ ಮೇಲೆ, ಮಕ್ಕಳ ಸುದ್ದಿ, ಮಾಡಿ ತಿಳಿ, ವಿಜ್ಞಾನ, ವ್ಯಂಗ್ಯಚಿತ್ರಗಳು, ಸಂಗೀತ ಎಲ್ಲವೂ ಇದೆ.

ಒಂದಿಷ್ಟು ಸ್ಯಾಂಪಲ್ ನೋಡಿ
ಇಲ್ಲಿ……………………
ಮತ್ತಷ್ಟು ಓದು »

1
ಫೆಬ್ರ

ಪೇಜಾವರ ಶ್ರೀಗಳಿಗೆ ದಲಿತರ ಮನೆ(ನ) ಇನ್ನೂ ಹತ್ತಿರವಿಲ್ಲವೇ?

ಸಾತ್ವಿಕ್ ಎನ್.ವಿ

ಉಡುಪಿಯಲ್ಲೊಂದು ಪ್ರಸಿದ್ಧ ಕಾಲೇಜು. ಪ್ರತಿವರ್ಷವೂ ಹೊಸದಾಗಿ ಬರುವ ವಿದ್ಯಾರ್ಥಿಗಳ ಜೊತೆ ಆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸ್ವಾಮೀಜಿಯವರೊಂದಿಗೆ ಸಂವಾದ ಕಾರ್ಯಕ್ರಮ. ಒಂದು ವರ್ಷವೂ ತಪ್ಪದೇ ಯತಿಗಳಿಗೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆ ‘ಸ್ವಾಮೀಜಿ ಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ ಯಾಕಿಲ್ಲ’ ಅಂತ. ‘ಅದು ನಮ್ಮ ಮಠದ ಸಂಪ್ರದಾಯ ಕ್ರಮ. ಅಲ್ಲದೇ ಯಾವುದೇ ಬ್ರಾಹ್ಮಣರು ‘ಅನ್ಯ’ರೊಂದಿಗಿನ ಸಹಪಂಕ್ತಿ ಭೋಜನ ಅಷ್ಟಾಗಿ ಇಷ್ಟಪಡುವುದಿಲ್ಲ’ ಎಂಬ ರೆಡಿಮೇಡ್ ಉತ್ತರ ಸ್ವಾಮೀಜಿಗಳಿಂದ. ಮರುಪ್ರಶ್ನೆ ಕೇಳಲು ಹೊರಟ ವಿದ್ಯಾರ್ಥಿಗೆ ಪಕ್ಕದಲ್ಲಿರುವ ಮೇಷ್ಟ್ರುಗಳ ಬಿರುಸುನೋಟ ರೆಡ್ ಸಿಗ್ನಲ್ ಆಗಿರುತ್ತದೆ. ಅಲ್ಲಿಗೆ ಸಂವಾದ ಕಾರ್ಯಕ್ರಮ ಮುಗಿಯುತ್ತದೆ.
ಈ ಪ್ರಸಂಗ ನೆನಪಾದದ್ದು ಪೇಜಾವರ ಶ್ರೀಗಳ ದಲಿತ ಕಾಲೋನಿಗಳ ಭೇಟಿಯನ್ನು ಪತ್ರಿಕೆಯಲ್ಲಿ ನೋಡಿದ ಸಂದರ್ಭದಲ್ಲಿ. ಸ್ವಾಮೀಜಿಯವರು ಅಲ್ಲಿನ ದಲಿತರಿಗೆ ವೈಷ್ಣವ ದೀಕ್ಷೆಯನ್ನು ನೀಡುವ ಮೂಲಕ ಜನರನ್ನು ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಪ್ರಕ್ರಿಯೆ ನಮ್ಮಲ್ಲಿ ಸಾಮಾನ್ಯವಾದ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವು- ಈವರಗೆ ದಲಿತರು ಉತ್ತಮ ವ್ಯಕ್ತಿಗಳಾಗಿರಲಿಲ್ಲವೇ? ಸಹಪಂಕ್ತಿ ಭೋಜನಕ್ಕೆ ಒಪ್ಪದ ಮನಸ್ಸುಗಳು ಮುಂದೆ  ದಲಿತರನ್ನು ಅಥವಾ ಇತರೆ ವೈಷ್ಣವ ದೀಕ್ಷೆ ಪಡೆದ ವ್ಯಕ್ತಿಗಳನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ?

ಮತ್ತಷ್ಟು ಓದು »

1
ಫೆಬ್ರ

ಹೀಗೆಲ್ಲಾ ಉಂಟು!

ವಾಣಿ ಶೆಟ್ಟಿ, ಬೆಂಗಳೂರು

ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ ಆಟೋದಲ್ಲೇ ಹೊರಟಿದ್ದೆ. .(ನನ್ನಂತಹ ಇನ್ನೊಂದು ೪ ಜನರಿದ್ದರೆ ಆಟೋದವರ ಹೊಟ್ಟೆಪಾಡು ಬಹು ಸುಲಭ !)ಕೋರಮಂಗಲ (ಮೊನ್ನೆ ಮೊನ್ನೆ ಗೊತ್ತಾಗಿದ್ದು ಹೆಸರು )ದಲ್ಲೊಂದು ಸಿಗ್ನಲ್ ಬಿತ್ತು.ಇಳಿಯಲಿರುವ ಸ್ಟಾಪ್ ಮುಂದಿತ್ತು.ನಾನು ವಾಹನದಲ್ಲಿ ಕೂತ ಪಯಣಿಗರ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಭಿಕ್ಷುಕರು ,ಮಾರಾಟಗಾರರನ್ನು ನೋಡುತ್ತಿದ್ದೆ .ಆಗ ನನ್ನ ದೃಷ್ಟಿ ಬಿತ್ತು ನೋಡಿ, ಸಿಗ್ನಲ್ ಕೆಳಗೆ ನಿಂತ ಬೈಕ್ ಸವಾರನ ಜೊತೆ ಜಗಳ ಆಡುತ್ತಿದ್ದ ಒಬ್ಬ ಹಿಜಡಾ ಮೇಲೆ. ನಮ್ಮ ಉಡುಪಿ ,ಕುಂದಾಪುರದ ಕಡೆ ಇವರು ಬೆರಳೆಣಿಕೆಯಷ್ಟು ಇರಬಹುದು ..ಆದ್ರೆ ನಾನಂತೂ ನೋಡಿದ್ದೇ ಇಲ್ಲ, t .v ಲೆಲ್ಲಾ ನೋಡಿದ್ದಾಗ ಭಯಮಿಶ್ರಿತ ಕುತೂಹಲ ಇದ್ದೆ ಇತ್ತು .ನಾ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದುದು ಅವಳಿಗೆ ಅದು ಹ್ಯಾಗೆ ಗೊತ್ತಾಯ್ತೋ, ಸ್ಮೈಲ್ ಕೊಡುತ್ತಲೇ ಬಂದುಬಿಟ್ಟಳಲ್ಲ ನಮ್ಮ ಆಟೋದ ಕಡೆ !ನನ್ನ ಫ್ರೆಂಡ್ ಹೇಳಿದ್ದು ನೆನಪಾಯ್ತು ,ಅವರು ಹುಡುಗೀರ ಹತ್ತಿರ ಏನೂ ಕೇಳಲ್ಲ ಅಂತ. !ಸುಳ್ಳೇ ಸುಳ್ಳು ಕ್ಯಾರೆ ಅನ್ನದೆ ಆಟೋ ಹತ್ತಿ ನನ್ನ ಪಕ್ಕ ಕುಳಿತು ಕೈ ಚಾಚಿದಳು.. ಅಬ್ಬಾಎಂದೂ ನಂಬದ ದೇವರು ಕೂಡ ನೆನಪಿಗೆ ಬಂದುಬಿಟ್ಟ ! ಆಟೋದವರಿಗೆ ಕೊಡಲು ಕೈಯಲ್ಲೇ ಇದ್ದ ನೂರರ ನೋಟನ್ನೇ ನಡುಗುವ ಕೈಯಿಂದ ಕೊಟ್ಟುಬಿಟ್ಟೆ.ಅವಳು ಅದನ್ನು ತೆಗೆದುಕೊಂಡು ತನ್ನಲ್ಲಿದ್ದ ಐವತ್ತರ ನೋಟನ್ನು ಅದು ಹೇಗೋ ತಲೆಗೆ ಸುತ್ತು ಹಾಕಿ (ನಾ ನೋಡಲಿಲ್ಲ) ಕೊಟ್ಟು ಬಿಟ್ಟಳಪ್ಪ.ನಾ ತೊದಲುತ್ತ ಬೇಡ ಬೇಡ ಅಂದಿರಬೇಕುಸ್ವರ ಹೊರಗೆ ಬಂದಿದ್ದು ಅನುಮಾನ !ಅವಳು ಬೇಡ ಅನ್ನೋಲ್ಲ, ಒಳ್ಳೆದಾಗುತ್ತೆ ಅಂತ ನನ್ನ ತಲೆ ಮುಟ್ಟಿ ಕೆಳಗಿಳಿದು ಹೋಗಿಬಿಟ್ಟಳು .ಅಲ್ಲಿ ತನಕ ನಾ ಉಸಿರಾಡಿದ್ದರೆ ಕೇಳಿ !……..ಆಗ ಬಾಯಿ ತೆರೆದ ಆಟೋದವನು, “ಮ್ಯಾಡಂ ಅವರನ್ನು ಹಾಗೆಲ್ಲ ನೋಡಬಾರದು ಅಂತ..ನಮಸ್ಕಾರ !ಮೊದಲೇ ಹೇಳಿದ್ದರೆ ಏನಾಗ್ತಿತ್ತೋ !?! ..ಈಗ ಹೋಗೋವಾಗ ಎಲ್ಲಾದರೂ ಅವರನ್ನು ನೋಡಿದರೆ ಕೈಯ್ಯಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಕೂಡ ಅಲ್ಲಾಡದೆ ಅದನ್ನೇ ನೋಡುತ್ತಿರುತ್ತೇನೆ!
ಹ್ಮ್.. ಇದೊಂದು ಮಾಯಾನಗರೀನೆ ಹೌದು ಕಣ್ರೀ. ಇದು ಕೊಟ್ಟ ಪಾಡು , ನಾ ಪಟ್ಟ ಬವಣೆ ಎಷ್ಟೆಲ್ಲಾ ಅಂತ ಗೊತ್ತಾ..ಬರೆಯ ಹೋದರೆ ಕಾದಂಬರಿನೇ ಆದೀತು !3  ಸ್ಟಾಪ್ ಹಿಂದೆ ಹೋದರೆ ಸಿಗೋ ಸಿಲ್ಕ್ ಬೋರ್ಡ್ ಗೆ ಹೋಗಲು ಗೊತ್ತಿಲ್ಲದೇ btm ನಿಂದ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಸಿಲ್ಕ್ ಬೋರ್ಡ್ಗೆ ಹೋದ ಪರಮ ಬುದ್ದಿವಂತೆ ನಾನು !.ಒಬ್ಬ ಆಸಾಮಿನ ಕೇಳಿದ್ದೆ,ಸಿಲ್ಕ್ ಬೋರ್ಡ್ಗೆ ಹೋಗಬೇಕಾದ್ರೆ ಹ್ಯಾಗ್ ಹೋಗ್ಬೇಕು ಅಂತ ! ಪಾಪ ,ಗೊತ್ತಿಲ್ಲ ಅನ್ನೋಕೆ ನಾಚಿಕೆ ಆಗಿರಬೇಕು !ನೆಕ್ಸ್ಟ್ ಸ್ಟಾಪ್ಗೆ ಹೋಗಿ ಯಾರ್ನಾದ್ರೂ ಕೇಳಿ ಅಂದ .ಅದಕ್ಕೆ ಅಲ್ಲಿ ತನಕ ಯಾಕೆ ಹೋಗ್ಬೇಕು ??ಮೆಜೆಸ್ಟಿಕ್ ನಲ್ಲಿ ಎಲ್ಲ ಬಸ್ಸು ಸಿಗತ್ತೆ ಅಂತ ಅಲ್ಲಿಗೆ ಹೋಗೋಕೆ ಬಸ್ ಸ್ಸ್ಟ್ಯಾಂಡ್ ನಲ್ಲಿ ನಿಂತರೆ ಬರೋ ಬಸ್ಸುಗಳ ಮೇಲಿದ್ದ ಹೆಸರು ಕೆಂ..ನಿ (!!?!!)ಆಮೇಲೆ ಬಂದ ಬಸ್ಸುಗಳ ಮೇಲೆ ಬರೆದಿತ್ತು ಕೆಂಪೇಗೌಡ ಬಸ್ ನಿಲ್ದಾಣ ಅಂತ !ಓಹೋ ಗೊತ್ತಾಯ್ತು ಗೊತ್ತಾಯ್ತು !ಅಲ್ಲಾ.ನಮ್ಮ ಕಡೆ ಕಂಡಕ್ಟರುಗಳು ಕಿರುಚುತ್ತಾರಪ್ಪ ಪ್ರಸ್ತುತ ನಿಲ್ದಾಣ ಮತ್ತೆ ಹೋಗಲಿರೋ ನಿಲ್ದಾಣದ ಹೆಸರನ್ನು ..ಇವರೆಲ್ಲ ಯಾಕೆ ಹಿಂಗೆ ?!ಛೆ ಸರಿಯಿಲ್ಲಪ್ಪ ಬೆಂಗಳೂರು !ಆಮೇಲೆ ಫ್ರೆಂಡ್ ಮೂಲಕ ಮೆಜೆಸ್ಟಿಕ್ ಮತ್ತೆ ಕೆಂ..ನಿ ಎರಡೂ ಒಂದೇ ಅಂತ ಗೊತ್ತಾದಾಗ ನಗು ಬಂತು ..ಸಂಜೆ ಸಿಲ್ಕ್ ಬೋರ್ಡ್ ಅನ್ನೋದು ನಾನಿದ್ದ ಸ್ಟಾಪಿನ ೩ ಸ್ಟಾಪ್ ಹಿಂದೇನೆ ಅಂತ ಗೊತ್ತಾದಾಗ ನಗು ,ಅಳು ಎರಡೂ ಬಂತು ! ಮತ್ತಷ್ಟು ಓದು »

28
ಜನ

ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ರಾಕೇಶ್ ಶೆಟ್ಟಿ

“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.

ಅವ್ರು ಹೇಳಿದ್ ಮಾತ್ಗಳನ್ನ ಒಮ್ಮೆ ಕೂತು ಯೋಚಿಸಿ ನೋಡಿದೆ.ಹೌದಲ್ಲ! ನಮ್ಮ ಚಿತ್ರರಂಗದವರು ‘ಓಂ’ ಚಿತ್ರ ಗೆದ್ದಾದ ಮೇಲೆ ದಶಕಗಳ ಕಾಲ ಮಚ್ಚು,ಲಾಂಗು ಹಿಡಿದು ಟಿ.ಎಂ.ಸಿಗಟ್ಲೆ  ರಕ್ತ ಚೆಲ್ಲಾಡಿ,ಮಧ್ಯೆ ‘ತವರಿನ’ ನೆನಪಾಗಿ  ತೊಟ್ಟಿಲು,ಬಟ್ಟಲು,ಬಿಂದಿಗೆ,ಚೊಂಬು ಎಲ್ಲ ತಂದು,ಕಡೆಗೆ ‘ಮುಂಗಾರು ಮಳೆ’ ಬಂದ್ ಮೇಲೆ ಪ್ರವಾಹದ ರೀತಿಯಲ್ಲಿ ಪ್ರೀತಿಯ ಮಳೆ ಸುರಿಸುತ್ತಾ,ಒಂದ್ಸರಿ ತಮಿಳು ಸಿನೆಮ, ಇನ್ನೊಂದ್ಸರಿ ತೆಲುಗು ಸಿನೆಮ,ಟೈಮ್ ಸಿಕ್ಕಾಗ ಮಲಯಾಳಂ,ಹಿಂದಿ ಸಿನೆಮಾಗಳನ್ನ ನೋಡಿ ಆ ರೀಲುಗಳನ್ನ ಇಲ್ಲಿಗ್ ತಗಂಡ್ ಬಂದು,ಅದನ್ನ ಇಲ್ಲಿ ಬಿಚ್ಚಿ ಅದೇ ಕತೆಗೆ ಕನ್ನಡದ ಬಣ್ಣ (ಅದನ್ನು ಸರಿಯಾಗ್ ಬಳಿಯೋದಿಲ್ಲ ಎಷ್ಟೋ ಜನ,ಅದು ಇರ್ಲಿ ಬಿಡಿ) ಬಳಿದು ಮೇಲ್ಗಡೆ ಆ ಸ್ಟಾರು,ಈ ಸ್ಟಾರು ಅಂತ ಹೆಸ್ರಾಕಂಡು ರಿಲೀಸ್ ಮಾಡ್ತಾರೆ.ಜನ ಬಂದ್ ನೋಡ್ತಾರಾ?,ಎಲ್ಲೋ ನಮ್ಮಂತ ಕನ್ನಡ ಚಿತ್ರಗಳನ್ನ ಮಾತ್ರ ನೋಡೋ ಮಂದಿ ವಿಧಿಯಿಲ್ಲದೇ ಬಂದು ನೋಡ್ತಾರೆ.ಉಳಿದವರು ‘ಬನ್ರೋ,ಆ ಸಿನೆಮ ಬಂದೈತೆ ನೋಡನ’ ಅಂದ್ರೆ ‘ಹೇಯ್,ಹೋಗಲೇ ಅದನ್ನ ಆ ಭಾಷೆಯಲ್ಲೇ ನೋಡಿವ್ನಿ.ಯಾವ್ದಾದ್ರು ಇವರೇ ಮಾಡಿರೋ ಕತೆಯಿದ್ರೆ ಹೇಳು ಬತ್ತಿನಿ ನೋಡಕೆ’ ಅಂತಾರೆ. ಮತ್ತಷ್ಟು ಓದು »

21
ಜನ

25ರ ಲಹರಿಯಲ್ಲಿ

ಪ್ರವೀಣಚಂದ್ರ, ಪುತ್ತೂರು

ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಲೆಕ್ಕ ಮಾಡಿ ನೋಡಿದೆ. 25ಕ್ಕಿಂತ ಕಡಿಮೆಯಾಗುವುದೇ ಇಲ್ಲ. ಮತ್ತೆ ಮತ್ತೆ ಲೆಕ್ಕ ಮಾಡಿ ಅದೇ ಉತ್ತರ ಬಂದಾಗ ಒಂದಿಷ್ಟು ಖುಷಿ ಮತ್ತು ದಿಗಿಲು ಜೊತೆಯಾಯಿತು.

ಮುಂಜಾನೆ ಎದ್ದಾಗಲೇ 4 ಮೆಸೆಜ್‌ಗಳು ಬರ್ತ್‌ಡೇ ವಿಷ್‌ ಮಾಡಲು ಕಾಯುತ್ತಿದ್ದವು. ಸ್ವಲ್ಪ ಸಮಯವಾದಾಗ ಮತ್ತೆ ಒಬ್ಬರು ಮೆಸೆಜ್‌ ಮಾಡಿದರು. ಸ್ವಲ್ಪ ಹೊತ್ತಾದಾಗ ಗೆಳೆಯ ಸೂರ್ಯ ಕಾಲ್‌ ಮಾಡಿ ವಿಷ್‌ ಮಾಡಿದ. ಮೊಬೈಲ್‌ನ ಬ್ರೌಸರ್‌ ಆನ್‌ ಮಾಡಿ ನೋಡಿದಾಗ ಸುಮಾರು ಬರ್ತ್‌ಡೇ ವಿಷ್‌ಗಳು ಬಂದಿದ್ದವು. ಆಫೀಸ್‌ಗೆ ಹೋಗಿ ನೋಡಿದಾಗ ಫೇಸ್‌ಬುಕ್‌ನಲ್ಲಿ 19 ಜನ, ಆರ್ಕುಟ್‌ನಲ್ಲಿ 32 ಜನ ಬರ್ತ್‌ಡೇ ವಿಷ್‌ ಮಾಡಿ ನನಗೆ 25 ವರ್ಷ ಮುಗೀತು ಅಂತ ಕನ್‌ಫರ್ಮ್‌ ಮಾಡಿದ್ರು. ಅದರಲ್ಲಿ ನನ್ನ ಆತ್ಮೀಯ ಸ್ನೇಹಿತರು, ನನಗಿಂತ ಹಿರಿಯರು, ಕಿರಿಯರು, ಜೀವನದಲ್ಲಿ ಬಹಳಷ್ಟು ಸಾಧಿಸಿದವರೂ ಎಲ್ಲರೂ ಇದ್ದರು. ಯಾಕೋ ತುಂಬಾ ಖುಷಿಯಾಗಿಬಿಟ್ಟಿತು. ಅಮ್ಮನಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಇಲ್ಲಿ ನೀನು ಇರುತ್ತಿದ್ದರೆ ಪಾಯಸ ಮಾಡಬಹುದಿತ್ತು ಅಂತ ಹೇಳಿ ಅವಳೂ ಕನ್‌ಫರ್ಮ್‌ ಮಾಡಿ ಬಿಟ್ಟಳು. ಅಣ್ಣನಿಗೆ ಕಾಲ್‌ ಮಾಡಲಿಲ್ಲ. ಯಾಕೆಂದರೆ ಕಳೆದ 5ರಂದು ಆತನ ಬರ್ತ್‌ಡೇ ಮುಗಿದಿತ್ತು. ಆತನಿಗೆ ವಿಷ್‌ ಮಾಡಲು ಮರೆತಿದ್ದೆ.

ಆಫೀಸ್‌ನಲ್ಲಿ ಕೀಬೋರ್ಡ್‌ನ ಮೇಲೆ ನನಗೊಂದು ವಿಶಿಷ್ಠ ಗಿಫ್ಟ್‌ ಕಾದಿತ್ತು. ಚಂದದ ದೊಡ್ಡ ಪ್ಲಾಸ್ಟಿಕ್‌ ಕವರ್‌, ಅದರೊಳಗೆ ಎ4 ಸೈಜ್‌ ಕಾಗದದಲ್ಲಿ ಹ್ಯಾಪಿಬರ್ತ್‌ ಡೇ ಅಂತ ಪ್ರಿಂಟ್‌, ಒಳಗಡೆ ಅಚ್ಚರಿಯ ಉಡುಗರೆಗಳು. ಅಂದ್ರೆ ಇಂಕ್‌ ಖಾಲಿಯಾಗಿರುವ ಪೆನ್ನು ಇತ್ಯಾದಿ. ಅವರು ಅಂತಹ ವಿಶಿಷ್ಠ ಗಿಫ್ಟ್‌ ನೀಡಲು ಕಾರಣ ಅವರ ಬರ್ತ್‌ಡೇಗೆ ನಾನೂ ಹಾಗೇ ಮಾಡಿದ್ದೆ. ಅಂದ್ರೆ ಪುಟ್ಟ ಕಾಗದದಲ್ಲಿ ಹ್ಯಾಪಿ ಬರ್ತ್‌ಡೇ ಅಂತ ಬರೆದು `ನಿನ್ನ ಜನ್ಮದಲ್ಲಿ ಇಂತಹ ಗಿಫ್ಟ್‌ ಯಾರಾದರೂ ಕೊಟ್ಟಿದ್ದಾರಾ? ಅಂತ ಕೊಚ್ಚಿಕೊಂಡಿದ್ದೆ. ಅವರು ಅಷ್ಟೇ ನನ್ನ ಜೀವನದಲ್ಲಿ ನನಗೆ ಯಾರೂ ನೀಡದಂತಹ ವಿಶಿಷ್ಠ ಗಿಫ್ಟ್‌ ನೀಡಿ ನನ್ನನ್ನು ಆಶ್ಚರ್ಯಗೊಳಿಸಿದ್ದರು. ಮತ್ತಷ್ಟು ಓದು »

20
ಜನ

ಬೇಕಾಗಿದ್ದಾರೆ!

ಹೇಮ ಪವಾರ್

ಮದುವೆ ಆಗೋದು ಅಂತ ತೀರ್ಮಾನಿಸಿ ಬಿಟ್ಟಿದೀನಿ! ಬಂದ ’ಗಂಡು’ (ಗುಂಡು?) ಗಳನ್ನೆಲ್ಲ,
ಸ್ಟೀಲ್ ಬಿಂದಿಗೆ, ಹಿತ್ತಾಳೆ ಹಂಡೆ, ತೊಳೆದ ಕೆಂಡ, ನರಸಿಂಹರಾಜು ಮುಖ, ಅಂಬರೀಷ್
ಸೊಂಟ ಅಂತೆಲ್ಲ ಹೆಸರಿಟ್ಟು ರಿಜೆಕ್ಟ್ ಮಾಡ್ತಿದ್ದವಳು ಈಗ ಇದ್ದಕ್ಕಿದ್ದಂತೆ ಮದುವೆ
ಆಗೋದು ಅಂತ ತೀರ್ಮಾನಿಸಿ ಬಿಟ್ಟಿದ್ದೀನಿ. ಬುದ್ದನಿಗೆ ಬೋಧಿವೃಕ್ಷದ ಕೆಳಗಡೆ ಆದ ಹಾಗೆ
ನನಗೂ ನಮ್ಮ ಅಡುಗೆಮನೆಲಿ ಗ್ನಾನೋದಯ ಆಗಿ ಹೋಗಿದೆ. ನನ್ನಮ್ಮ ತನ್ನ ಪುಣ್ಯದ
ಅಕೌಂಟನ್ನು ಕ್ರೆಡಿಟ್ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಹೊರಟು ಇಂದಿಗೆ ವಾರವಾಯಿತು.
ನಂಬುವ ಮಾತೇ ಅಲ್ಲ ಆದರೂ ನನ್ನಂತ ನಾನೇ ಈ ಒಂದು ವಾರವೂ ನನ್ನ ಬೆಳಗಿನ ತಿಂಡಿಯನ್ನು
ಬಲಿಕೊಟ್ಟಿದ್ದೇನೆ. ಈಗೊಂದು ವಾರದಿಂದ ಎದ್ದು ತಿಂಡಿ ಮಾಡಿಕೊಂಡು ತಿನ್ನುವುದಿರಲಿ,
ಯಾರಾದರೂ ಮಾಡಿಟ್ಟಿದ್ದರೂ ತಿನ್ನಲು ಸಮಯವಿಲ್ಲದಷ್ಟು ಲೇಟಾಗಿ ಹೋಗಿ, ಅರ್ಧಗಂಟೆ
ತಡವಾಗಿ ಆಫೀಸ್ ಸೇರಿ ಕಂಪ್ಯೂಟರ್ ನೊಳಗೆ ಕಳೆದು ಹೋದರೆ, ಮತ್ತೆ ತಿಂಡಿ
ತಿಂದಿಲ್ಲವೆಂದು ನೆನಪಾಗುವುದು ಊಟದ ಸಮಯಕ್ಕೆ. ಯಾವುದೇ ಡಯಟ್ಟಿನ ಸಹಾಯವಿಲ್ಲದೆ
ಅನಾಮತ್ತು ೨ ಕೆಜಿ ತೂಕ ಇಳಿಸಿಬಿಟ್ಟಿದ್ದೇನೆ.ಮುಂದೆ ಹೀಗಾಗಬಾರೆದೆಂಬ
ಮುನ್ನೆಚ್ಚರಿಕೆಗಾಗಿಯೇ ಚೆನ್ನಾಗಿ ಅಡುಗೆ ಬಲ್ಲ ಹುಡುಗನನ್ನು ಹುಡುಕಿ
ಮದುವೆಯಾಗಿಬಿಡಬೇಕೆಂದಿದ್ದೇನೆ. ಹೀಗೆಂದ ತಕ್ಷಣ ನನ್ನನ್ನು ಸಮಾನತೆ, ಸ್ತ್ರೀವಾದಿ
ಎಂದೆಲ್ಲ ಬ್ರಾಂಡ್ ಮಾಡಿಬಿಡಬೇಡಿ. ಚೆನ್ನಾಗಿ ಅಡುಗೆ ಬರುವ ಯಾವ ಹುಡುಗನೂ ನನ್ನ ಕೈಯ
ಅಡಿಗೆಯನ್ನು ತುಂಬಾ ದಿನ ಸಹಿಸಿಕೊಳ್ಳಲಾರನೆಂಬ ಕಾನ್ಫಿಡೆನ್ಸ್ ನಿಂದ ಈ
ಮಾತನ್ನು ಹೇಳುತ್ತಿದ್ದೇನೆ.

ಅಡುಗೆಮನೆ ಅನ್ನೋದು ಹುಡುಗಿಯರಿಗೆ ಅದೇಕೆ ಬ್ರಾಂಡ್ ಮಾಡಿದ್ದಾರೋ, ಏನೇ ಇದ್ದರೂ ನಾನು
ಮತ್ತು ಅಡುಗೆ ಎರೆಡೂ ವಿರುದ್ದ ಪದಗಳು. ಕಷ್ಟಪಟ್ಟು ವಾಂಗಿಭಾತ್ ಮಾಡುವುದನ್ನು
ಕಲಿತು, ಮನೆಗೆ ಬಂದ ಅತಿಥಿಗಳಿಗೆ ಒಮ್ಮೆ ಕೊಟ್ಟರೆ, ಪುಳಿಯೋಗರೆಗೆ ಸ್ವಲ್ಪ ಹುಳಿ
ಕಡಿಮೆ ಹಾಕಬೇಕಿತ್ತು ಎಂದಾಗ, ಅವರನ್ನೇ ಹುಣಸೇಹಣ್ಣಿನಂತೆ ಕಿವುಚಿಬಿಡುವ
ಮನಸ್ಸಾಗಿತ್ತು. ಅಪ್ಪನಿಗೆ ಅಮ್ಮ ಮನೆಯಲ್ಲಿ ಇಲ್ಲದಾಗ ಕಾಫಿ ಮಾಡಿಕೊಡಲೋ ಅಥವಾ ಟೀ
ಕುಡೀತೀರ ಎಂದು ಕೇಳಿದರೆ, ಯಾವುದನ್ನಾದರೂ ಮಾಡು ಮಗಳೇ ನೀ ಮಾಡಿದರೆ ಎರೆಡು ಒಂದೇ ತರ
ಇರುತ್ತೆ ಎಂದಂದು ನಗುತ್ತಾರೆ. ನಾನು ಮಾಡಿದ ಚಪಾತಿ ಯಾವಾಗಲೂ ಆಸ್ಟ್ರೇಲಿಯ ಮ್ಯಾಪ್
ತರಹ ಇರುತ್ತದೆಂದು ಅಕ್ಕನ ಪುಟ್ಟ ಮಗಳು ಹಿಯ್ಯಾಳಿಸುತ್ತಾಳೆ. ಅಲ್ಲರೀ ಆಸ್ಟ್ರೇಲಿಯ
ಮ್ಯಾಪ್ ಆದರೇನು ಇಂಡಿಯಾ ಮ್ಯಾಪ್ ಆದರೇನು ಮುರಿದೇ ತಾನೆ ತಿನ್ನುವುದು. ಹೊಟ್ಟೆ ಒಳಗೆ
ಏನು ಶೇಪ್ ಸಮೇತ ಹೋಗತ್ತ? ಬುದ್ದಿಇಲ್ಲ ಜನಕ್ಕೆ. ನನ್ನ ಹೊಸ ಪ್ರಯತ್ನವನ್ನು ಯಾರ
ಕೈಲದಾರೂ ಹೊಗಳಿಸಬೇಕೆಂದು ಮೊನ್ನೆ ಪಕ್ಕದ ಮನೆಯ ಹುಡುಗನಿಗೆ ನಾನು ಮಾಡಿದ್ದ
ತಿಂಡಿಯನ್ನು ಕಪ್ ನಲ್ಲಿ ಹಾಕಿಕೊಟ್ಟೆ, ’ಚೂರು ಸಪ್ಪೆ ಇತ್ತು ಅಕ್ಕ, ಪಾಯಸದಲ್ಲೆಲ್ಲೂ
ಬೇಳೆ ಕಾಣಲಿಲ್ಲ, ಆದರೂ ಚೆನ್ನಾಗಿದೆ’ ಎಂದುಬಿಟ್ಟ, ನನಗೆ ನಖಶಿಖ ಅಂತ ಉರಿದು
ಹೋಯಿತು, ನಾನು ಮಾಡಿದ್ದಿದ್ದು ಜಾಮೂನು, ಅದು ಗುಂಡಗೆ ಉಳಿಯದೇ ತನ್ನ ಶೇಪ್
ಕಳೆದುಕೊಂಡು ಪಾಕದಲ್ಲಿ ಕರಗಿ ಹೋಗಿತ್ತಷ್ಟೇ!! ಮತ್ತಷ್ಟು ಓದು »

12
ಜನ

ನೆನಪುಗಳ ಮಾತೆ ಮಧುರ.. ನಿಮಗೂ ಹಾಗೇನಾ?

ಚೇತನ್ ಕೋಡುವಳ್ಳಿ

ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.

ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.

ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ. ಮತ್ತಷ್ಟು ಓದು »

11
ಜನ

ಓಶೋ ಕಂಡಂತೆ ಗಾಂಧಿ!

ಸುಪ್ರೀತ್, ಬೆಂಗಳೂರು

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.

ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.

ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.

***

… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ. ಮತ್ತಷ್ಟು ಓದು »

7
ಜನ

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

ವಸಂತ ಶೆಟ್ಟಿ

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ”  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು. ಮತ್ತಷ್ಟು ಓದು »