ಅಗ್ನಿರಾಜನ ಪ್ರಕರಣ
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ
ಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.
ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.
ಅಂಬಿಕಾತನಯದತ್ತರ “ ಬೆಳಗು” – ಶ್ರೀ ಅರವಿಂದರ “ ಚಿನ್ಮಯದ ಆತ್ಮದೀಪ ”
– ಪುಟ್ಟು ಕುಲಕರ್ಣಿ,ಕುಮಟಾ
ವರಕವಿ ಅಂಬಿಕಾತನಯದತ್ತರು , ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾಡಿದ ಭಾಷಣದಲ್ಲಿ ಒಂದು ಸಾಲು ಹೀಗಿದೆ, ‘ ನನ್ನ “ಬೆಳಗು” ಮತ್ತು “ಹಕ್ಕಿ ಹಾರುತಿದೆ” ಕವನಗಳನ್ನು ಮುಗ್ಧ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಲಾಗುತ್ತಿದೆ. ಆದರೆ ಅದನ್ನು ಕಲಿಸುತ್ತಿರುವ ಶಿಕ್ಷಕರು ಆ ವಿದ್ಯಾರ್ಥಿಗಳಿಗಿಂತ ಮುಗ್ಧರಾಗಿದ್ದಾರೆ….. “ . ಈ ಸಾಲುಗಳನ್ನು ಓದಿದಾಗ , ಇಲ್ಲಿಯವರೆಗೂ “ಬೆಳಗು” ಕವನದ ಬಗೆಗೆ ಬಂದ ವಿಶ್ಲೇಷಣೆಗಳ ಕುರಿತು ಕವಿಗೆ ತೃಪ್ತಿ ಇಲ್ಲವೆಂದು ತೋರುತ್ತಿದೆ. ಹಾಗಾದರೆ ಈ “ಬೆಳಗು” ಮತ್ತು “ಹಕ್ಕಿ ಹಾರುತಿದೆ ನೋಡಿದಿರಾ” ಕವನಗಳನ್ನು ಬೇರೊಂದು ಆಯಾಮದಿಂದ ವಿಶ್ಲೇಷನೆ ಮಾಡಬೇಕೆ? ಹಾಗಿದ್ದಲ್ಲಿ ಅದಕ್ಕೆ ಇರುವ ಮಾನಕಗಳೇನು? ಯಾವ ಅಥವಾ ಯಾರ ಪ್ರಭಾವದಲ್ಲಿ ಈ ಕವನಗಳು ರೂಪಿತಗೊಂಡಿವೆ? ಬೌದ್ಧಿಕ ಹಂತದ ಶಬ್ದಜಾಲದ ಹೊರತಾಗಿಯೂ , ಪ್ರಜ್ಞಾ ವಲಯದ ಆಚೆಯಲ್ಲಿ ಸಾಗಿ ಅನಂತಾನಂತದ ಜೊತೆಗೆ ಜೋಡಣೆಯಾಗಬಲ್ಲ ಅನೂಹ್ಯವಾದದು ಏನಾದರೂ ಇಲ್ಲಿ ಹೇಳಲ್ಪಡುತ್ತಿದೆಯೋ?
ಇಲ್ಲಿರುವ ಶಬ್ದಮಾಧುರ್ಯದ ಆಚೆ ಇರುವ “ ಏನನ್ನೋ” ಕವಿ ಈ “ಬೆಳಗು” ಕವನದಲ್ಲಿ ಅಡಗಿಸಿದ್ದಾನೆ. ಈ “ಬೆಳಗು” ಕೇವಲ ನಾಮಪದವೋ, ಕ್ರಿಯಾಪದವೋ ಅಥವಾ ವಿಶೇಷಣವೋ ಅಥವಾ ಎಲ್ಲವೂ ಆಗಿ ಅರ್ಥಗರ್ಭಿತವಾಗಿದೆಯೋ?
“ಬೆಳಗು” ನಾಮಪದವಾಗಿ ಉಷೆಯ ಕಾಲವೆಂದು ಸರ್ವವಿದಿತ. ಆದರೆ ಅದೇ ಬೆಳಗು ಕ್ರಿಯಾಪದವಾಗಿ ಹೊಳೆ, ಆರತಿಯೆತ್ತು ಎನ್ನುವ ಅರ್ಥವನ್ನೂ ಹೇಳುತ್ತಿದೆ. ಹೊಳೆಯುವ , ಮಿನುಗುವ ವಿಶೇಷಣದಲ್ಲೂ ಸಹಿತ ಮಿಂಚುತ್ತಿದೆ. ಹಾಗಾದರೆ ಇಲ್ಲಿರುವ ಬೆಳಗು ಯಾವುದು? ಚುಮುಚುಮು ಬೆಳಗೇ? ಪೆರ್ವೆಳಗೆ ? ಬಳ್ಳಿವೆಳಗೆ ? ಬೆರಕೆವೆಳಗೆ? ಬೆಳ್ವೆಳಗೆ? ಹೀಗೆ ಹತ್ತಾರು ಹಂತದ ಪ್ರಶ್ನೆಗಳನ್ನು ನಿಲ್ಲಿಸುತ್ತಿದೆ. ಬೆಳಗೊಂದಿಸು ಎನ್ನುವದಕ್ಕೆ ಕಾಂತಿಗೊಳಿಸು ಎನ್ನುವ ಅರ್ಥವೂ ಇದೆ ಈ ಎಲ್ಲ ಹಂತದ ಸ್ವಾನುಭವವನ್ನು ಆ ಉಷೆಯ ಸಮಯದ ತೋಷದಲ್ಲಿ ಕಂಡೇ ಅನುಭವಿಸಬೇಕು. ಯಾವ ಶಬ್ದದದಲ್ಲಿ ಹೇಳಿದರೂ ಆ ಅನುಭಾವ ಸಿಕ್ಕಲಾರದು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
– ನಾಗರಾಜ್ ಹೆತ್ತೂರು
ಕಾರ್ಯಾಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ ರಾಜ್ಯ ಸಮಿತಿ
ವಿಷಯ: ಅಕಾಡೆಮಿ ಪ್ರಶಸ್ತಿ ಮೌಲ್ಯವನ್ನು ಉಳಿಸಲು ಮತ್ತು ವಾಪಾಸು ಮಾಡಿದ ಪ್ರಶಸ್ತಿಗಳನ್ನು ಆಯಾ ಸಾಲಿನ ಪ್ರಶಸ್ತಿ ವಂಚಿತ ಪ್ರತಿಭಾವಂತರಿಗೆ ನೀಡಲು ಒತ್ತಾಯ
ನಮ್ಮೆಲ್ಲರ ಪ್ರೀತಿಯ ಸಾಹಿತಿಗಳೂ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿಪಟ್ಟಣಶೆಟ್ಟಿ ಅವರಿಗೆ ನಮಸ್ಕಾರಗಳು. ತಾವು ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಅಕಾಡೆಮಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ಇತರೆ ಎಲ್ಲಾ ಅಕಾಡೆಮಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಕೆಲವು ತಿಂಗಳಿಂದ ದೇಶದಲ್ಲಿ ಸಹಿಷ್ಣುತೆ-ಅಸಹಿಷ್ಣುತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮೊಳಗಿನ ಪ್ರಮುಖ ಚಿಂತಕರಾದ ಕಲಬುರ್ಗಿ ಅವರ ಹತ್ಯೆ ನಂತರ ರಾಜ್ಯದಲ್ಲಿ ಈ ಕುರಿತು ದೊಡ್ಡ ಜನಾಭಿಪ್ರಾಯ ರೂಪಿತವಾಗಿದ್ದು ಕೆಲವು ಸಾಹಿತಿಗಳು ಪ್ರಶಸ್ತಿ ವಾಪಾಸ್ ನೀಡುವ ಮೂಲಕ ಪ್ರತಿಭಟನಾತ್ಮಕ ನಡೆ ಇಟ್ಟಿದ್ದಾರೆ. ಈಚೆಗೆ ಅಕಾಡೆಮಿ ಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಕಿರಿಯ ಸಾಹಿತಿಯೊಬ್ಬರು ಪ್ರಶಸ್ತಿ ಬಹಿಷ್ಕರಿಸಿ, ನಿಮಗೆ ಮತ್ತು ಮಾಧ್ಯಮಗಳಲ್ಲಿ ಪತ್ರ ಬರೆದಿದ್ದನ್ನು ಗಮನಿಸಿದ್ದೇವೆ. ಅವರ ಪ್ರತಿಭಟನೆ ಹಕ್ಕನ್ನು ಗೌರವಿಸುತ್ತೇವೆ. ಕಲಬುರ್ಗಿ ಸೇರಿದಂತೆ ದೇಶದಲ್ಲಿ ನಡೆದ ಸಾಹಿತಿಗಳ ಅವರ ಹತ್ಯೆಯನ್ನು ಖಂಡಿಸುತ್ತೇವೆ ಮತ್ತು ಈ ಸಂಬಂಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ ಎಂಬುದನ್ನು ನಿಮಗೆ ನೆನಪಿಸುತ್ತಲೇ ಪ್ರಶಸ್ತಿ ವಾಪಾಸತಿ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದು ಈ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಅಕಾಡೆಮಿ ಕೆಲವು ಸ್ಪಷ್ಟೀಕರಣ ನೀಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.
ಕಳೆದುಹೋಗುತ್ತಿರುವ ದಲಿತ ಚಿಂತನೆ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ದಲಿತ ಸಾಹಿತ್ಯವಲಯ ಒಂದಿಷ್ಟು ಹೆಚ್ಚೇ ಎನ್ನುವಷ್ಟು ಮುನಿಸಿಕೊಂಡಿದೆ. ಅದಕ್ಕೆಂದೇ ಕಳೆದ ಆರು ವರ್ಷಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುತ್ತಿರುವರು. ಸಾಹಿತ್ಯದ ಮುಖ್ಯವಾಹಿನಿಯಲ್ಲಿ ನಮಗೆ ಪ್ರವೇಶ ದೊರೆಯುತ್ತಿಲ್ಲ, ಪ್ರಶಸ್ತಿ-ಪುರಸ್ಕಾರ-ಗೌರವಗಳಿಂದ ನಾವು ವಂಚಿತರು, ದಲಿತ ಸಾಹಿತ್ಯ ಮತ್ತು ಬರಹಗಾರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಕನ್ನಡದ ದಲಿತ ಸಾಹಿತ್ಯವಲಯ ತನ್ನ ಅಸ್ಮಿತೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ನಿಜಕ್ಕೂ ಕನ್ನಡದ ಒಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆತಂಕ ತಂದೊಡ್ಡುತ್ತಿರುವ ಬೆಳವಣಿಗೆಯಿದು. ದಲಿತ ಸಾಹಿತ್ಯ ಈಗ ಕನ್ನಡ ಸಾಹಿತ್ಯದ ಬಹುಮುಖ್ಯ ಭಾಗ ಎನ್ನುವ ಮನ್ನಣೆಗೆ ಪಾತ್ರವಾಗಿದೆ. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಇತಿಹಾಸವನ್ನು ನೋಡುವುದು ಅಧ್ಯಯನ ಹಾಗೂ ಸಂಶೋಧನೆಯ ದೃಷ್ಟಿಯಿಂದ ಅಸಾಧ್ಯದ ಸಂಗತಿ. ಹಾಗೆ ನೋಡುವುದು ಕೂಡ ಸಲ್ಲದು. ಹಾಗೊಂದು ವೇಳೆ ದಲಿತ ಸಾಹಿತ್ಯವನ್ನು ಹೊರಗಿಟ್ಟು ನೋಡಿದಲ್ಲಿ ಕನ್ನಡ ಸಾಹಿತ್ಯದ ಒಟ್ಟು ಚಿತ್ರಣ ನಮಗೆ ದಕ್ಕಲಾರದು. ಇಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಸಹ ಕನ್ನಡದ ಬಹುಮುಖ್ಯ ಬರಹಗಾರರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಲಿತ ಬರಹಗಾರರು ನೀಡಿದ ಕೊಡುಗೆ ತುಂಬ ಮೌಲಿಕವಾದದ್ದು. ಇವತ್ತು ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಅನೇಕ ದಲಿತ ಲೇಖಕರ ಸಾಹಿತ್ಯವನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ದಲಿತೇತರ ಬರಹಗಾರರು ಇಲ್ಲಿರುವರು. ಕಾರಂತರ ‘ಚೋಮನ ದುಡಿ’ಯಷ್ಟೇ ಮಹಾದೇವರ ‘ಕುಸುಮ ಬಾಲೆ’ ಸಹ ಅಸಂಖ್ಯಾತ ಓದುಗರ ಓದಿನ ವ್ಯಾಪ್ತಿಗೆ ದಕ್ಕಿದೆ. ಅನೇಕ ದಲಿತ ಲೇಖಕರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿರುವರು. ದಲಿತ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುತ್ತಿಲ್ಲ ಎನ್ನುವ ಆಪಾದನೆಯಿಂದ ಕಳಚಿಕೊಳ್ಳುವ ಪ್ರಯತ್ನವಾಗಿ 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಹೀಗಿದ್ದೂ ದಲಿತ ಸಾಹಿತ್ಯವಲಯ ಮುನಿಸಿಕೊಂಡಿದೆ.
ಆಳ್ವಾಸ್ ನುಡಿಸಿರಿ : ನಮ್ಮ ಸಮೃದ್ಧ ಸಾಂಸ್ಕೃತಿಕ ಜೀವನದ ಅನಾವರಣ
– ಡಾ.ಎಂ.ಮೋಹನ್ ಆಳ್ವ
(ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಸವದತ್ತಿ ತಾಲೂಕುಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ಈ ಘಟಕಗಳ ಕಾರ್ಯಕ್ರಮದಲ್ಲಿ ಡಾ.ಎಂ.ಮೋಹನ್ ಆಳ್ವರು ಆಳ್ವಾಸ್ ನುಡಿಸಿರಿಯ ಉದ್ದೇಶ, ಪ್ರಾಮುಖ್ಯತೆಗಳನ್ನು ಜನರೊಡನೆ ಮನಃಪೂರ್ವಕವಾಗಿ ಹಂಚಿಕೊಂಡರು. ಅವರ ಮನದಾಳದ ಮಾತುಗಳು ಹೀಗಿದ್ದವು )
ಭಾರತ ಎಲ್ಲಾ ವಿಧದಿಂದಲೂ ಸಂಪದ್ಭರಿತವಾದ ದೇಶ. ಈ ದೇಶದ ಸಾಂಸ್ಕೃತಿಕ ಹಿನ್ನೆಲೆ ಈ ಮಾತಿನಿಂದ ಹೊರತಾದುದಲ್ಲ. ಸಾಂಸ್ಕೃತಿಕವಾಗಿ ಅತ್ಯಂತ ಸಮೃದ್ಧವಾದ ದೇಶ ನಮ್ಮದು. ನಮಗಿರುವ ಸಾಂಸ್ಕೃತಿಕ ಹಿನ್ನೆಲೆ ಬೇರಾವ ದೇಶಕ್ಕೂ ಇಲ್ಲ. ಆದರೆ ಇಂದು ಈ ಎಲ್ಲಾ ಚಟುವಟಿಕೆಗಳ ಭಾರತೀಯರಾದ ನಮ್ಮಿಂದ ಎಲ್ಲೋ ದೂರ ಸರಿಯುತ್ತಿವೆ. ನಮ್ಮಿಂದ ಮರೆಯಾಗುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸಿ, ಆದರಿಸುವ ಕಾರ್ಯ ನಮ್ಮಿಂದಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಆರಂಭಿಸಿರುವ ಸಾಂಸ್ಕೃತಿಕ ಉತ್ಸವಗಳೇ `ಆಳ್ವಾಸ್ ನುಡಿಸಿರಿ’ ಹಾಗೂ `ಆಳ್ವಾಸ್ ವಿರಾಸತ್’ ಕಾರ್ಯಕ್ರಮಗಳು.
ಆಳ್ವಾಸ್ ನುಡಿಸಿರಿ ಕನ್ನಡ ಭಾಷೆಯ ಕುರಿತಾದ ರಾಷ್ಟ್ರೀಯ ನಾಡು-ನುಡಿಯ ಉತ್ಸವ. ಇದು ಆರಂಭವಾಗಿ 12 ವರ್ಷ ಸಂದಿವೆ. ಇನ್ನು ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ. ವಿರಾಸತ್ ಆರಂಭವಾಗಿ 22 ವರ್ಷ ಕಳೆದಿವೆ. ದೇಶ-ವಿದೇಶಗಳಲ್ಲಿರುವ ಕಲಾ ರಸಿಕರನ್ನು ಒಂದುಗೂಡಿಸುವ ಕಾರ್ಯ ಇದಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು ಅತೀ ಮುಖ್ಯ
ನಾವು ಈ ಕಾರ್ಯಕ್ರಮಗಳನ್ನು ಮಾಡುವಾಗ ಸಾಕಷ್ಟು ಹಣ ಖರ್ಚಾಗುತ್ತದೆ. ನೀವು ವ್ಯರ್ಥ ಹಣ ಪೋಲು ಮಾಡುತ್ತೀರಿ ಎನ್ನುವವರೂ ಇದ್ದಾರೆ. ಆದರೆ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಾಪಾಡುವಾಗ ಇದು ಅನಿವಾರ್ಯ ಹಾಗೂ ಅವಶ್ಯಕ. ಇಂದು ಅನೇಕ ಜಾಗತಿಕ ಸವಾಲುಗಳು ನಮ್ಮೆದುರಿಗಿವೆ. ವಿದ್ಯಾರ್ಥಿಗಳು ಅವನ್ನು ಎದುರಿಸಲು ಯಾವಾಗಲೂ ತಯಾರಾಗಿರಬೇಕು. ಹಾಗಿರುವಾಗ ಕೇವಲ ಶೈಕ್ಷಣಿಕವಾಗಿ ಬಲವಾಗಿದ್ದರೆ ಸಾಲದು; ಮಾನಸಿಕವಾಗಿ, ಬೌದ್ದಿಕವಾಗಿ ಆ ಸವಾಲುಗಳನ್ನೆದುರಿಸುವ ಪ್ರೌಢಿಮೆ ನಮ್ಮ ಮಕ್ಕಳಿಗಿರಬೇಕು. ಮಸ್ಯೆಗಳಿಗೆ ಪರಿಹಾರ ಹುಡುಕುವ, ಕಾಲಕ್ಕೆ ತಕ್ಕಂತೆ ಬದಲಾಗುವ ಮಾನಸಿಕ ಸ್ಥಿತಿ ಇರಲೇಬೇಕು. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ಇರಬೇಕಾದುದು ಅತಿ ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಮಹತ್ವದ್ದೆನಿಸುತ್ತವೆ. ನಮ್ಮ ಸಸ್ಥೆಯಲ್ಲಿರುವ 22,000 ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವ ಕಾರ್ಯ ನಡೆದೇ ಇರುತ್ತದೆ. ನಮ್ಮ ವಿದ್ಯಾರ್ಥಿಗಳು ಎಲ್ಲ ರೀತಿಯಿಂದಲೂ ಸದೃಢರಾಗಿರಬೇಕೆಂಬ ಇರಾದೆ ನಮ್ಮದು. ಮತ್ತಷ್ಟು ಓದು 
ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಸೆಕ್ಯುಲರ್ ಸಮೂಹ ಸನ್ನಿ
– ರಾಕೇಶ್ ಶೆಟ್ಟಿ
ದೇಶದಲ್ಲಿ ಪ್ರಶಸ್ತಿ ಹಿಂತಿರುಗಿಸುವಿಕೆಯ ಪರ್ವ ಭರ್ಜರಿಯಾಗಿ ಶುರುವಾಗಿದೆ.ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಚಂಪಾ ಅವರಿಂದ ರಾಜ್ಯದಲ್ಲಿ ಶುರುವಾಗಿದ್ದು ಈಗ ನಯನತಾರಾ ಸೆಹಗಲ್ ಅವರು ಹಿಂದಿರುಗಿಸುವ ಮೂಲಕ ಸಾಮೂಹಿಕ ಸನ್ನಿಯಂತೆ ಹರಡಲಾರಂಭಿಸಿದೆ.ಇವರೆಲ್ಲಾ ನೀಡುತ್ತಿರುವ ಕಾರಣ “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ.ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ.ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ,ಮೋದಿಯ ಮೌನವನ್ನು ವಿರೋಧಿಸಿ,’ ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿದ್ದಾರೆ.
ನಿಜಕ್ಕೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ? ಊಹೂಂ.ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು.2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ.ಆಗ ಜನರು ಈ ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ,ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ,ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸುತ್ತಿಲ್ಲ.ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ. ಮತ್ತಷ್ಟು ಓದು 
ಬುದ್ಧಿಜೀವಿಗಳ ಪ್ರಶಸ್ತಿದಾಹ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎಂಬ ಪ್ರಹಸನ
– ವಿನಾಯಕ ಹಂಪಿಹೊಳಿ
ವಸಾಹತುಪೂರ್ವ ಭಾರತದಲ್ಲಿ ಕ್ರಿಯಾಜ್ಞಾನವೇ ತುಂಬಿಕೊಂಡಿದ್ದ ಕಾಲವದು. ಆಗ ಒಬ್ಬ ಜ್ಞಾನಿಗೆ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರದ ಪರಿಸ್ಥಿತಿ. ಕಾರಣ ಕ್ರಿಯಾಜ್ಞಾನಿಗೆ ಸರ್ಟಿಫಿಕೇಟ್ ಅಗತ್ಯತೆ ಬೀಳುವದಿಲ್ಲ. ಉದಾಹರಣೆಗೆ ಹಿಂದೆ ಒಬ್ಬಾನೊಬ್ಬ ಬಂದು ತಾನು ಸಾಕ್ಷಾತ್ ಜಕಣಾಚಾರಿಯಿಂದ ಶಿಲ್ಪಶಾಸ್ತ್ರ ಕಲಿತು ಬಂದಿದ್ದೇನೆ ಎಂದು ಹಳ್ಳಿಗರ ಮುಂದೆ ಹೇಳಿಕೊಂಡರೆ, ಜನರು ಅದಕ್ಕೆ ಸಾಕ್ಷಿಯಾಗಿ ಪ್ರಮಾಣಪತ್ರವನ್ನೇನೂ ಕೇಳುತ್ತಿರಲಿಲ್ಲ. ಬದಲಿಗೆ, ಬೇಲೂರಿನ ಸೂಕ್ಷ್ಮಕೆತ್ತನೆಯ ಮಾದರಿಯಲ್ಲಿಯೇ ಈತ ಒಂದು ಕಲ್ಲನ್ನು ಕೆತ್ತಿ ಕೊಟ್ಟರಾಯಿತು, ಜನರು ನಂಬುತ್ತಿದ್ದರು. ಕಾರಣ, ಕ್ರಿಯಾಜ್ಞಾನದಲ್ಲಿ ಏನು ಕಲಿತೆ, ಎಷ್ಟು ಕಲಿತೆ ಎಂಬುದಷ್ಟೇ ಮುಖ್ಯವಾಗುತ್ತದೆಯೇ ಹೊರತು ಯಾರಿಂದ ಕಲಿತೆ, ಎಲ್ಲಿ ಕಲಿತೆ, ಎಷ್ಟು ವರ್ಷ ಕಲಿತೆ, ಇವೆಲ್ಲ ಮುಖ್ಯವಾಗುವದಿಲ್ಲ. ಹೀಗಾಗಿ ಏಕಲವ್ಯನಂಥ ಸ್ವಂತ ಬಲದಿಂದ ಕಲಿತವರೂ ನಮಗೆ ಸಂಪ್ರದಾಯಗಳಲ್ಲಿ ಕಾಣ ಸಿಗುತ್ತಾರೆ.
ಹೀಗಾಗಿ ಹಿಂದಿನ ನಾಟಿ ವೈದ್ಯರಲ್ಲಿ, ಧನುರ್ವೇದಿ ಪಂಡಿತರಲ್ಲಿ ಯಾರೂ ಪ್ರಮಾಣಪತ್ರವನ್ನು ಅಪೇಕ್ಷಿಸುತ್ತಿರಲಿಲ್ಲ. ಬಂದ ರೋಗವು ವಾಸಿಯಾಗುವಂತೆ ಮಾಡುವದೊಂದೇ ಅವರ ವಿದ್ಯೆಯನ್ನು ದೃಢೀಕರಿಸುವ ವಿಷಯವಾಗಿತ್ತು. ಹೆಚ್ಚು ಹೆಚ್ಚು ಕುಶಲ ಜ್ಞಾನಿಗಳನ್ನು ಸೃಷ್ಟಿಸುವ ಗುರುಕುಲಗಳು ಹೆಚ್ಚು ಪ್ರಸಿದ್ಧವಾಗುತ್ತಿದ್ದವು. ವೇದಪಂಡಿತನಿಂದ ಹಿಡಿದು ಕುಂಬಾರ, ಕಮ್ಮಾರರ ತನಕ ಎಲ್ಲ ಕ್ರಿಯಾಜ್ಞಾನಿಗಳ ಜ್ಞಾನವನ್ನು ಅವರ ಕ್ರಿಯೆಗಳಿಂದಲೇ ಅಳೆಯಲಾಗುತ್ತಿತ್ತು. ಹೀಗಾಗಿ ಪ್ರಮಾಣಪತ್ರವಾಗಲೀ, ಸರ್ಟಿಫಿಕೇಟ್ ಆಗಲೀ ಅಗತ್ಯವೇ ಇರಲಿಲ್ಲ. ಏಕೆಂದರೆ ನಾನು ಇಂಥಿಂಥ ಜ್ಞಾನವನ್ನು ಪಡೆದುಕೊಂಡು ಬಂದಿದ್ದೇನೆ ಎಂದು ಒಬ್ಬ ಸುಳ್ಳು ಹೇಳಿದರೂ ಆ ಸುಳ್ಳನ್ನು ಬಹಳ ದಿನ ಮುಚ್ಚಿಟ್ಟುಕೊಳ್ಳಲು ಆಗುತ್ತಲೂ ಇರಲಿಲ್ಲ.
ಒಬ್ಬನಿಗೆ ತನ್ನ ಕ್ರಿಯಾಜ್ಞಾನದಲ್ಲಿನ ವಿಶೇಷತೆಯನ್ನು ಮನಗಂಡು ಆತನಿಗೆ ವಿಶೇಷ ಉಪಾಧಿಗಳಿಂದ ಬಿರುದುಗಳಿಂದ ಸನ್ಮಾನಿಸುವದೂ ಆಗಿನ ಸಂಪ್ರದಾಯವಾಗಿತ್ತು. ಕೆಲವೊಮ್ಮೆ ರಾಜರು ಇಂಥ ಬಿರುದುಗಳನ್ನು ನೀಡುತ್ತಿದ್ದರೆ, ಇನ್ನು ಕೆಲವೊಮ್ಮೆ ಜನರೇ ಆತನನ್ನು ವಿಶೇಷ ಬಿರುದಿನಿಂದ ಗುರುತಿಸುತ್ತಿದ್ದರು. ಆ ರೀತಿಯ ಬಿರುದುಗಳು ಅವರ ಕ್ರಿಯೆಯನ್ನು ಮೆಚ್ಚಲೆಂದೇ ಹುಟ್ಟಿಕೊಳ್ಳುತ್ತಿದ್ದವೇ ಹೊರತು, ಅಂಥದೊಂದು ಬಿರುದನ್ನು ಮೊದಲೇ ರೆಡಿ ಮಾಡಿಟ್ಟು ಇದಕ್ಕಾಗಿ ನೀವೆಲ್ಲ ಸ್ಪರ್ಧೆಯನ್ನು ಮಾಡಿ ಎಂಬ ಪರಿಪಾಠವಿರಲಿಲ್ಲ. ಶಸ್ತ್ರಾಭ್ಯಾಸದ ಅಥವಾ ಶಾಸ್ತ್ರಾಭ್ಯಾಸದ ಪಂದ್ಯಗಳನ್ನೇರ್ಪಡಿಸಿ ಗೆದ್ದವರಿಗೆ ಬಹುಮಾನಗಳನ್ನು ನೀಡುವ ಪದ್ಧತಿ ಇದ್ದರೂ, ಹಾಗೆ ಗೆದ್ದವರು ಬಂಗಾರವನ್ನೋ, ರಾಜಕುಮಾರಿಯರನ್ನೋ ಗಳಿಸಿಕೊಳ್ಳುತ್ತಿದ್ದರೇ ಹೊರತು ಅದಕ್ಕಿಂತ ವಿಶೇಷವಾದ ಬಿರುದು ಅಥವಾ ಉಪಾಧಿಗಳೇನೂ ಲಭಿಸುತ್ತಿರಲಿಲ್ಲ. ಆದರೆ ಒಂದಾನೊಂದು ಉಪಾಧಿಯನ್ನು ಬಿರುದನ್ನು ಒಬ್ಬ ಗಳಿಸಬೇಕಾದರೆ ಆತನ ಕ್ರಿಯಾಜ್ಞಾನವು ಜನರ ಮನಮುಟ್ಟುವ ಕೆಲಸ ಮಾಡಿರಲೇಬೇಕಾಗುತ್ತಿತ್ತು.
ಪ್ರಶಸ್ತಿಯ ಮಾನ ಕಳೆದ ಅಕಾಡೆಮಿ
– ರಾಕೇಶ್ ಶೆಟ್ಟಿ
ಕೆಲವು ವ್ಯಕ್ತಿಗಳು ಪ್ರಶಸ್ತಿಗಳನ್ನು ಮೀರಿ ಬೆಳೆದಿರುತ್ತಾರೆ.ಅವರ ವ್ಯಕ್ತಿತ್ವದ ಮುಂದೆ ಪ್ರಶಸ್ತಿಯೂ ಕುಬ್ಜವೆನಿಸುತ್ತದೆ. ಮಹಾತ್ಮ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಥವಾ ನೇತಾಜಿ ಸುಭಾಷ್ ಅವರಿಗೆ ಭಾರತ ರತ್ನವನ್ನು ಕೊಟ್ಟರೇ,ಪ್ರಶಸ್ತಿಗಳೇ ಕುಬ್ಜವಾಗಿ ಬಿಡುತ್ತವೆ.ಇನ್ನೊಂದಿಷ್ಟು ವ್ಯಕ್ತಿತ್ವಗಳು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸುತ್ತವೆ.ಡಿ.ವಿ.ಜಿ,ಕುವೆಂಪು,ಕಾರಂತರಂತಹ ಶ್ರೇಷ್ಟ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿಗೆ ಭಾಜನಾರಾಗಿ ‘ಪ್ರಶಸ್ತಿ’ಗೆ ಮೆರುಗು ತಂದವರು.
೨೦೧೩ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಪಟ್ಟಿ ನೋಡಿದರೇ,ಈ ಹಿಂದೆ ಪ್ರಶಸ್ತಿ ಸ್ವೀಕರಿಸಿದ ಮಹಾನ್ ಚೇತನಗಳಿಗೇ ಅವಮಾನ ಮಾಡುವಂತಿದೆ. “ಶ್ರೀರಾಮ ಅಪ್ಪನಿಗೆ ಹುಟ್ಟಿದವನಲ್ಲ;ಕುಂತಿ ಮಕ್ಕಳನ್ನು ಹೆತ್ತಿದ್ದು ಕೂಡಾ ವ್ಯಭಿಚಾರದಿಂದ; ಭಗವದ್ಗೀತೆಯನ್ನು ಸುಡಬೇಕು;ಒಕ್ಕಲಿಗರಿಗೆ ಸಾಮಾಜಿಕ ಪ್ರಜ್ಞೆಯಿಲ್ಲ” ಹೀಗೆ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ,ಒಂದು ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವಂತಹ ಬೇಜವಬ್ದಾರಿ ಹೇಳಿಕೆಗಳನ್ನು ಒಂದು ವರ್ಷದಿಂದೀಚೆಗೆ ನೀಡುತ್ತ ಬಂದಿರುವ ಪ್ರೊ.ಭಗವಾನ್ ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರವೂ ಸಹ ಇಂತ ಶಾಂತಿ ಭಂಗ ತರುವ ಹೇಳಿಕೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದಂತಿದೆ.ಅಷ್ಟಕ್ಕೂ ಭಗವಾನ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕೃತಿಗಳಿಂದ ಹೆಸರು ಮಾಡಿದವರಲ್ಲ ಬದಲಿಗೆ ‘ಬೈಗುಳ’ಗಳಿಂದ ಚಾಲ್ತಿಗೆ ಬಂದವರು.ಭಗವಾನರ ಬಡಬಡಿಕೆಗಳನ್ನೇ ವೈಚಾರಿಕತೆ ಎಂದು ಬಿಂಬಿಸುವುದು ರಾಜ್ಯದ ವೈಚಾರಿಕ ಪರಂಪರೆಗೂ ಅವಮಾನ.
ಕಾರಂತರೆಂದರೆ ಯಾರಂತ ತಿಳಿದಿರಿ?
– ರೋಹಿತ್ ಚಕ್ರತೀರ್ಥ
“ಬೋಸ್ ಐನ್‍ಸ್ಟೈನ್ ಸ್ಟಾಟಿಸ್ಟಿಕ್ಸ್” ಎಂಬ ಅದ್ಭುತ ಸಂಗತಿಯನ್ನು ಭೌತಶಾಸ್ತ್ರಕ್ಕೆ ಕೊಟ್ಟ ಸತ್ಯೇಂದ್ರನಾಥ ಬೋಸ್‍ರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂಬ ಶಿಫಾರಸು ಹೋಗಿತ್ತು. ಆದರೆ ಅಂತಿಮಕ್ಷಣದಲ್ಲಿ ಅವರಿಗೆ ಆ ಪ್ರಶಸ್ತಿ ಕೈತಪ್ಪಿತು. “ಈ ಮನುಷ್ಯ ಕೇವಲ ಭೌತಶಾಸ್ತ್ರಜ್ಞನಲ್ಲ. ಕವಿ, ಸಂಗೀತಗಾರ, ಅನುವಾದಕ, ಹೋರಾಟಗಾರ, ಕಲಾವಿದ ಎಲ್ಲವೂ ಆಗಿದ್ದಾರೆ. ಇವರಿಗೆ ವೃತ್ತಿನಿಷ್ಠೆ ಇದೆಯೆಂದು ನಂಬುವುದು ಹೇಗೆ?” ಎಂದು ಪ್ರಶಸ್ತಿ ಸಮಿತಿ ಕೇಳಿತ್ತಂತೆ! ಅಕ್ಟೋಬರ್ ಎರಡನೆ ವಾರ ಎಂದರೆ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗುವ ಸಮಯ. ದುರಂತವೋ ಗೌರವವೋ ಕಾಕತಾಳೀಯವೋ, ಅದೇ ವಾರದ ಮೂರನೇ ದಿನ – ಅಂದರೆ ಅಕ್ಟೋಬರ್ 10ರಂದು ನಮ್ಮ ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಜನ್ಮದಿನವೂ ಕೂಡ. ಬಹುಶಃ ಕಾರಂತರ ಹೆಸರು ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಶಿಫಾರಸುಗೊಂಡಿದ್ದರೆ ಅವರಿಗೂ ಆ ಪುರಸ್ಕಾರ ಸಿಗುತ್ತಿದ್ದದ್ದು ಸಂಶಯ. ಬದುಕಿನಲ್ಲಿ ಏನೇನೆಲ್ಲಾ ಆಗಿ ಸಾಧನೆ ಮಾಡಿದ ಈ ವ್ಯಕ್ತಿಗೆ ಬರೆಯುವುದಕ್ಕೆ ಸಮಯವೇ ಸಿಕ್ಕಿರಲಿಕ್ಕಿಲ್ಲ ಎಂದು ಸಮಿತಿಯವರು ಹೆಸರನ್ನು ತಿರಸ್ಕರಿಸುತ್ತಿದ್ದರೋ ಏನೋ.
ಕಾರಂತರನ್ನು ಏನೆಂದು ಕರೆಯುವುದು? ಹೆಮ್ಮರವೆಂದೇ? ವಿಶಾಲ ಸಾಗರವೆಂದೇ? ಹಿಮಾಲಯವೆಂದೇ? ಔನ್ನತ್ಯವಷ್ಟೇ ಹಿರಿಮೆಯಾಗಿ ನಿಂತಿರುವ ಗೌರೀಶಂಕರ ಕಾರಂತರ ಜ್ಞಾನದ ಆಳಕ್ಕೆ, ವಿಸ್ತಾರಕ್ಕೆ ಸಾಟಿಯಾಗುವುದಿಲ್ಲ. ಹಿಂದೂ ಸಾಗರದಂತಹ ಸಮುದ್ರರಾಜನಿಗೆ ಕಾರಂತರ ಮಾನವೀಯತೆಯ ಎತ್ತರವನ್ನು ಸರಿಗಟ್ಟಲು ಸಾಧ್ಯವಾದೀತೇ? ಕಾರಂತರ ಅಜ್ಜ ಚಿನ್ನದ ಕಸುಬು ಕಲಿತ ರಸವೈದ್ಯರಾಗಿದ್ದರಂತೆ. ಅಪ್ಪ ಶೇಷ ಕಾರಂತರು ಕಲಿತದ್ದು ಎಲ್ಲಿ, ಎಷ್ಟು ಇವೆಲ್ಲ ನಿಗೂಢ. ಆದರೆ ಲೋಕಜ್ಞಾನದಿಂದ ಬಂದದ್ದನ್ನು ಮೇಷ್ಟ್ರಾಗಿ ಶಾಲೆಯಲ್ಲಿ ಹಂಚುತ್ತಿದ್ದರು. ಒಂಬತ್ತು ಮಕ್ಕಳ ಹಿರಿಸಂಸಾರದಲ್ಲಿ ಶಿವರಾಮ ನಾಲ್ಕನೆಯವನು. ಸಂಸಾರ ದೊಡ್ಡದಾಯಿತು; ದುಡಿವ ಕೈ ಸಾಲದಾಯಿತೆಂದು ಶೇಷ ಕಾರಂತರು ಮಾಸ್ತರಿಕೆ ಕೈಬಿಟ್ಟು ಜವಳಿ ವ್ಯಾಪಾರಕ್ಕೆ ಇಳಿದರು. ಅಕ್ಷರಾಭ್ಯಾಸದ ಜೊತೆಗೆ ಈ ತಂದೆ ತನ್ನ ಹೋರಾಟದ ಕೆಚ್ಚು, ಧೈರ್ಯಗಳನ್ನೂ ಮಕ್ಕಳಲ್ಲಿ ಆಗಲೇ ತುಂಬಿಸಿರಬೇಕು. ಶಿವರಾಮ ಹದಿನೆಂಟು ತುಂಬುವ ಹೊತ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ. ಗಾಂಧೀಜಿಯ ಅಸಹಕಾರ ಚಳುವಳಿ ಕಾವು ಪಡೆಯುತ್ತಿದ್ದ ಸಮಯ. ಹುಡುಗನ ನೆತ್ತರು ಧಿಮಧಿಮನೆ ಕುಣಿದಿರಬೇಕು. ಹೋರಾಟಕ್ಕೆ ಇಳಿದ. ಮಂಗಳೂರು, ಕೋಟದ ನಡುವೆ ಉಠ್‍ಭೈಸ್ ಮಾಡಿದ.
ಮತ್ತಷ್ಟು ಓದು 
ನಿಮಗೆ ನಮಸ್ಕಾರ
– ತೇಜಸ್ವಿನಿ ಹೆಗಡೆ,ಬೆಂಗಳೂರು
ಕೆ.ಎಸ್.ನರಸಿಂಹ ಸ್ವಾಮಿಯವರ ಕವನಗಳ ಕಡೆ ನನ್ನ ಗಮನ ಮೊತ್ತ ಮೊದಲ ಬಾರಿ ಹೋಗಿದ್ದು ನಾನು ಹೈಸ್ಕೂಲ್‍ನಲ್ಲಿದ್ದಾಗ. ಅವರ ಪ್ರಥಮ ಕವನ ಸಂಕಲನವಾದ `ಮೈಸೂರು ಮಲ್ಲಿಗೆ’ಯ ಕವಿತೆಗಳನ್ನು ಬಳಸಿಕೊಂಡು, ಅದೇ ಸಂಕಲನದ ಶೀರ್ಷಿಕೆ ಹಾಗೂ ಸುಮಧುರ ಸಂಗೀತದೊಂದಿಗೆ ಹೊರಬಂದ ಜನಪ್ರಿಯ ಕನ್ನಡ ಚಲಚಿತ್ರವನ್ನು ನೋಡಿದ ಮೇಲೇ! ಆವರೆಗೂ ಈ ಕವಿಯ ಹೆಸರು ಕೇಳಿದ್ದೆನಾದರೂ, ಹೆಚ್ಚು ಓದಿರಲಿಲ್ಲ. `ಮೈಸೂರು ಮಲ್ಲಿಗೆ’ ಕನ್ನಡ ಚಲನಚಿತ್ರದಲ್ಲಿ `ದೀಪವು ನಿನ್ನದೆ ಗಾಳಿಯೂ ನಿನ್ನದೇ ಆರದಿರಲಿ ಬೆಳಕು…’ ಅನ್ನೋ ಹಾಡನ್ನು ಸುಧಾರಾಣಿ ಕಣ್ತುಂಬಿಕೊಂಡು ಹಾಡಿದ್ದು ಕಂಡು ನನ್ನ ಕಣ್ಣೂ ಒದ್ದೆಯಾಗಿತ್ತು. ಚಿತ್ರದಲ್ಲಿ ಬರುವ ಘಟನೆಯ ತೀವ್ರತೆಗೂ ಮೀರಿ ಕೆ.ಎಸ್.ಎನ್ ಅವರ ಆ ಹಾಡು ನನ್ನ ಎದೆ ತಟ್ಟಿ, ಬೇರಾವುದೋ ಘಟ್ಟಕ್ಕೆ ಕೊಂಡೊಯ್ದು, ಮುಂದೆ ಅವರ ಇನ್ನಷ್ಟು ಕವಿತೆಗಳ ಓದುವಿಕೆಗೆ ಕಾರಣವಾಗಿತ್ತು. ಹಾಗಿತ್ತು ಆ ಕವಿತೆಯ ಸಾಹಿತ್ಯದ ಶಕ್ತಿ! ಚಲನಚಿತ್ರದಲ್ಲಿ ಒಂದು ಸೀಮಿತ ಘಟನೆಗಷ್ಟೇ ಈ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದರಿಂದಾಗಿ ಒಂದು ನಿರ್ಧಿಷ್ಟ ಪರಿಮಿತಿಯ ಅರ್ಥ ಪಡೆದುಕೊಂಡ ಈ ಅದ್ಭುತ ಕವಿತೆಯನ್ನು ಯಾವೆಲ್ಲಾ ಆಯಾಮದಲ್ಲಿ ಅರ್ಥೈಸಿಕೊಳ್ಳಬಹುದು, ಈ ಕವಿತೆಯ ಒಳಾರ್ಥ ಅದೆಷ್ಟು ತೀವ್ರವಾಗಿದೆ ಎಂಬುದನ್ನೆಲ್ಲಾ ಚಿಂತಿಸಿದಾಗ ಹೊಳೆದ ಅರ್ಥಗಳು ಇಲ್ಲಿವೆ. ನಾನಿಲ್ಲಿ ಅವರ ಎರಡು ಸುಂದರ ಕವಿತೆಗಳನ್ನು ವಿಶ್ಲೇಷಿಸುವ ದೊಡ್ಡ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಇದು ನನ್ನ ಸೀಮಿತ ಪರಿಮಿತಿಗೆ ದಕ್ಕಿದ್ದು ಎಂಬುದನ್ನೂ ಮೊದಲೇ ಹೇಳಿಬಿಡುತ್ತಿರುವೆ.
ಕೆ.ಎಸ್.ನ ಅವರ ಹುಟ್ಟು, ವಿದ್ಯಾಭ್ಯಾಸ, ವೃತ್ತಿ, ಪ್ರವೃತ್ತಿ, ಅವರ ಸಂಕಲನಗಳ ವಿವರಣೆ, ಅವರ ಅಸೀಮ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳು, ಪ್ರಶಸ್ತಿಗಳು ಎಲ್ಲವೂ ಸವಿವರವಾಗಿ ಎಲ್ಲೆಡೆ ಲಭ್ಯವಿವೆ. ಅವರ `ಮೈಸೂರು ಮಲ್ಲಿಗೆ’, `ಉಂಗುರ’, `ದೀಪದ ಮಲ್ಲಿ’ ಇತ್ಯಾದಿ ಸಂಕಲನಗಳಲ್ಲಿರುವ ಕವಿತೆಗಳೆಲ್ಲಾ ಭಾವಗೀತೆಗಳಾಗಿದ್ದು, ನವೋದಯ ಶೈಲಿಯಲ್ಲಿವೆ. `ತೆರೆದ ಬಾಗಿಲು’ ಸಂಕಲನದಿಂದ ಅವರು ನವ್ಯ ಶೈಲಿಗೆ ಹೊರಳಿದ್ದನ್ನು ಗುರುತಿಸಬಹುದಾಗಿದೆ. ಅವರೇ ಹೇಳಿಕೊಂಡಂತೆ ಅವರು ಬರೆದದ್ದರಲ್ಲಿ ಹೆಚ್ಚಿನವು ದಾಂಪತ್ಯ ಗೀತೆಗಳು. ಅವರನ್ನು ಪ್ರೇಮ ಕವಿ, ಒಲವಿನ ಕವಿ ಎಂದೆಲ್ಲಾ ಹೊಗಳಿದರೂ, ಅವರದ್ದು ದಾಂಪತ್ಯದ ಚೌಕಟ್ಟಿನೊಳರಳಿದ ಪ್ರೇಮದ ಲಾಲಿತ್ಯ ಎನ್ನಬಹುದು. ಜನಪದದ ಸೊಗಡು, ಅಲ್ಲಿಯ ಮಣ್ಣಿನ ಕಂಪು, ಪುಟ್ಟ ಗಂಡ-ಹೆಂಡಿರ ಬೆಚ್ಚನೆಯ ಪ್ರೀತಿ, ವಿರಹ, ಶಾನುಭೋಗರ ಮಗಳ ಚೆಲುವು ಆಹಾ ಎಲ್ಲವೂ ಸೊಗಸು, ಸುಂದರ, ಆಹ್ಲಾದಕರ! ಅವರ ಆ ಕವಿತೆಗಳನ್ನೋದುವಾಗ ಆಗುವ ರಸಾನುಭೂತಿ ಅನಿರ್ವಚನೀಯ! ಹಾಗಾಗಿಯೇ ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನ ಅತಿ ಹೆಚ್ಚು ಜನಪ್ರಿಯತೆ ಪಡೆಯಿತು, ಈಗಲೂ ಜನರ ಮನೆ-ಮನಗಳಲ್ಲಿ ಹಾಡಾಗಿದೆ.




