ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪರಿಸರ’

23
ಆಗಸ್ಟ್

ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ…!

– ಸುಜಿತ್ ಕುಮಾರ್

ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ  ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ  ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ  ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.

ಮತ್ತಷ್ಟು ಓದು »

22
ಜೂನ್

ರಸಪ್ರಶ್ನೆಯಲ್ಲಿ ರೈಲು ಹಳಿಗಳಿಲ್ಲದ ಜಿಲ್ಲೆ ಯಾವುದು ಎಂದು ಕೇಳುತಿದ್ದಾಗಲೇ ಧೂರ್ತರಲ್ಲಿ ತಂತ್ರಗಾರಿಕೆಯೊಂದು ಹುಟ್ಟುತ್ತಿತ್ತು..

– ಶಿಲ್ಪಾ ನೂರೆರ

ಅಭಿವೃದ್ಧಿಗೆ ಮಾನದಂಡಗಳೇನು? ಅಷ್ಟಕ್ಕೂ ಅಭಿವೃದ್ಧಿ ಎಂದರೇನು? ಇರುವುದನ್ನೆಲ್ಲಾ ಗುಡಿಸಿ ಎಸೆದು ಮತ್ತೊಂದನ್ನು ಕಟ್ಟುವುದು ಅಭಿವೃದ್ಧಿಯೇ? ಸಹಜವಾದುದನ್ನು ನಾಶಮಾಡಿ ಕೃತಕವಾದದ್ದನ್ನು ಸೃಷ್ಟಿಸುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಹಾಗಾದರೆ ಸಹಜವಾದುದನ್ನು, ಈ ಮೊದಲೇ ನೆಲೆಯಾದವುಗಳಿಗೆ ನಾನಾ ಕಿರೀಟಗಳನ್ನು ಕೊಟ್ಟು ಹೊಗಳಿ ಹೊನ್ನಶೂಲಕ್ಕೇಕೆ ಏರಿಸುವಿರಿ?- ಇಂಥ ಅನೇಕ ಪ್ರಶ್ನೆಗಳು ಹುಟ್ಟುವುದು ವ್ಯಾಖ್ಯಾನಕಾರರಿಗೆ, ವಿಶ್ಲೇಷಕರಿಗೆ, ಸಮಾಜಶಾಸ್ತ್ರಜ್ಞರಿಗೆ ಮತ್ತು ಅಭಿವೃದ್ಧಿ ನಿರೀಕ್ಷಿಸುವವರಿಗೆ ಹೊರತು ಅಭಿವೃದ್ಧಿಯನ್ನು ಕೈಗೊಳ್ಳುವವರಿಗಲ್ಲ! ಅಭಿವೃದ್ಧಿಗೆ ಸುಸ್ಥಿರ, ಸಮಗ್ರ ಇತ್ಯಾದಿ ವಿಶೇಷಣಗಳನ್ನು ಕೊಟ್ಟುಕೊಂಡವರೂ ಕೂಡ ಅವರೇ. ಹಾಗಾಗಿ ಅಭಿವೃದ್ಧಿ ಎಂಬುದು ತನ್ನ ಗುರಿಯನ್ನು ಇನ್ನೂ ಮುಟ್ಟದೆ ಅಡ್ಡಾದಿಡ್ಡಿ ಓಡುತ್ತಲೇ ಇದೆ. ಇಂದಿಗೂ ಅಭಿವೃದ್ಧಿ ರಾಜಕೀಯದ ಪ್ರಮುಖ ದಾಳವಾಗಿ ಬಳಕೆಯಾಗುತ್ತಲೇ ಇದೆ. ಹೊರನೋಟಕ್ಕೆ ಆಕರ್ಷಕವಾಗಿ, ಜನರ ಆಶಾಕಿರಣವಾಗಿ ನರ್ತನ ಮಾಡುತ್ತ ಬರುವ ಅಭಿವೃದ್ಧಿ ಯೋಜನೆಗಳು ಇನ್ನೂ ಏಕೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿಲ್ಲ ಎನ್ನುವುದರ ಹಿಂದೆ ಇಂಥಾ ವ್ಯಾಖ್ಯಾನಗಳ ಕ್ಲೀಷೆಗಳಿವೆ. ಮತ್ತಷ್ಟು ಓದು »

17
ಆಕ್ಟೋ

ಪರಿಸರ ಶಿಕ್ಷಣ: ಸಾಧನೆ ಮತ್ತು ಸವಾಲುಗಳು

– ಕಲ್ಗುಂಡಿ ನವೀನ್
ಬೆಂಗಳೂರು
ದೂರವಾಣಿ: 944 89 05214

curriculumಇಂದು ಪರಿಸರ, ಪರಿಸರ ಮಾಲೀನ್ಯ ಎಂದರೆ ಅದನ್ನು ವಿವರಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ ಎಂದರೆ ಪರಿಸರ ಕುರಿತಾದ ಸಕಾರಾತ್ಮಕ ನಿಲುವು. ಹಿಂದೆ ಪರಿಸರ ಎಂಜಿನಿಯರ್‍ ಒಬ್ಬರು ಹೇಳುತ್ತಿದ್ದರು: “..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು” ಎಂದು! ಇಂದು ಆ ಸ್ಥಿತಿ ಖಂಡಿತಾ ಇಲ್ಲ.  ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಆ ಜಾಗೃತಿ ಮೂಡಿರುವುದು ಗಮನಾರ್ಹ ಮತ್ತು ಸಂತೋಷದಾಯಕ ಅಂಶ. ಮತ್ತಷ್ಟು ಓದು »

2
ಮೇ

ಮರವನ್ನು ಮರೆತರೆ ಬರ ಬಾರದ್ದು ಬಂದೀತು!

fresh_nature-1280x720

– ರೋಹಿತ್ ಚಕ್ರತೀರ್ಥ

ಅವೊತ್ತು ಶುಕ್ರವಾರ. ಆಫೀಸಿನಿಂದ ಹೊರಟು ನಗರದ ಮುಖ್ಯರಸ್ತೆಯೊಂದಕ್ಕೆ ಬಂದು ಸೇರಿದಾಗ, ಆ ಸಾಗರದಲ್ಲಾಗಲೇ ಸಾವಿರಾರು ದೋಣಿಗಳು ಹುಟ್ಟುಹಾಕಲಿಕ್ಕೂ ಜಾಗ ಸಿಗದಂತೆ ತುಂಬಿಕೊಂಡಿದ್ದವು. ಯಾಕೆ ಇಷ್ಟೊಂದು ಟ್ರಾಫಿಕ್‍ಜಾಮ್ ಆಗಿದೆ ಎಂದು ಬಾತುಕೋಳಿಗಳಂತೆ ಕತ್ತು ಎತ್ತರಿಸಿ ನಿರುಕಿಸುತ್ತಿದ್ದವರಿಗೆ ದೂರದಲ್ಲಿ ಮಳೆಯ ರಭಸಕ್ಕೆ ಮರವೊಂದು ಮಾರ್ಗಶಾಯಿಯಾಗಿರುವುದು ಕಾಣಿಸಿತು. ಹತ್ತಾರು ಅಡಿಗಳ ರೆಂಬೆಕೊಂಬೆಗಳನ್ನು ದಶದಿಕ್ಕುಗಳಿಗೂ ಚಾಚಿ ಇಷ್ಟುದಿನ ರಸ್ತೆಯ ಬದಿಯಲ್ಲಿ ಗತ್ತಿನಿಂದ ನಿಂತು ನಮಗೆಲ್ಲ ಹಾಯ್ ಹೇಳುತ್ತ ಕೈಬೀಸುತ್ತಿದ್ದ ಈ ಮರ, ಇವೊತ್ತು ಹೃದಯಾಘಾತವಾದಂತೆ ಮಳೆಯ ಹೊಡೆತಕ್ಕೆ ನೆಲಕ್ಕೆ ಬಿದ್ದಿದೆಯಲ್ಲ ಅಂದುಕೊಂಡೆ. ಮರದ ಶವ ಬಿದ್ದಲ್ಲಿ ಹತ್ತಾರು ಅಧಿಕಾರಿಗಳು ನಿಂತು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದರು. ಅದರ ಕೈಕಾಲುಗಳನ್ನು ಆದಷ್ಟು ಬೇಗ ಕತ್ತರಿಸಿ ಎಲ್ಲಿಗಾದರೂ ಸಾಗಿಸಿಬಿಟ್ಟರೆ ಸಾಕು ಎಂಬ ಧಾವಂತ ಅವರ ಮುಖಗಳಲ್ಲಿ ಕುಣಿದಾಡುತ್ತಿತ್ತು. ಗ್ಯಾಂಗ್ರಿನ್ ಆದ ಕಾಲು ಕತ್ತರಿಸುವ ನಿರ್ಭಾವುಕ ವೈದ್ಯನಂತೆ, ನಾಲ್ಕು ಜನ ಕೆಲಸಗಾರರು ಶಕ್ತಿಮೀರಿ ಬಲಪ್ರಯೋಗಿಸಿ ಅದರ ದೇಹವಿಚ್ಛೇದನದಲ್ಲಿ ನಿರತರಾಗಿದ್ದರು. ಶೋಕೇಸಿನ ಹಲವಾರು ಶೋಪೀಸುಗಳ ನಡುವೆ ಕೈಮೇಲೆತ್ತಿ ನಗುವ ಪುಟ್ಟ ಬುದ್ಧನ ಮೂರ್ತಿಯಂತೆ; ಈ ನಗರದ ಸಾಫ್ಟ್‍ವೇರ್ ತಜ್ಞರು ಬರೆಯುವ ಧೀರ್ಘ ಪ್ರೋಗ್ರಾಮಿನ ಒಂದೇ ಒಂದು ಪುಟ್ಟ ಸಾಲಿನಂತೆ, ಅಥವಾ ಬೀದಿಬದಿಯಲ್ಲಿ ಹುಡುಗ ಮಾರುವ ನೂರಾರು ಪೋಸ್ಟರುಗಳ ನಡುವೆ ತಣ್ಣಗೆ ನಗುತ್ತ ಕೂತ ಹೃತಿಕ್ ರೋಷನ್ನಿನಂತೆ ಇಷ್ಟುದಿನ ಧ್ಯಾನಾಸಕ್ತನಾಗಿ ನಿಂತಿದ್ದ ವೃಕ್ಷ ಇನ್ನು ಅಲ್ಲಿ ಇರುವುದಿಲ್ಲವಲ್ಲ ಅಂತ ಸಂಕಟವಾಯಿತು. ಅದನ್ನು ತುಂಡುತುಂಡಾಗಿ ಕತ್ತರಿಸಿ ತೆಗೆದು ಸ್ಥಳಾವಕಾಶ ಮಾಡಿಕೊಡುತ್ತಲೇ ಅಸಹನೆಯಿಂದ ಕುದಿಯುತ್ತಿದ್ದ ಸವಾರರು ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು. ಅಣೆಕಟ್ಟಿನ ಬಾಗಿಲು ತೆರೆದಾಗ ಹೊರಹಾರುವ ನೀರಿನ ಧಾರೆಯಂತೆ ಬೈಕು-ಕಾರುಗಳು ಧಿಮ್ಮನೆ ಚಿಮ್ಮಿದವು. ಮತ್ತಷ್ಟು ಓದು »

10
ಮಾರ್ಚ್

ಪಕ್ಷಿಗಳಿಗೆ ಒಂದು ಬೊಗಸೆ ನೀರು ಕೊಡಿ.ಪ್ಲೀಸ್…!

19
ನವೆಂ

ನಾನು ನೇತ್ರಾವತಿ

– ಭರತೇಶ ಅಲಸಂಡೆಮಜಲು

ನೇತ್ರಾವತಿನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ಅದೇ ನಿಮ್ಮ ನೇತ್ರಾವತಿ ನಾನು.

ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ … ಹೀಗೆ…ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ…

ಮತ್ತಷ್ಟು ಓದು »

8
ಮಾರ್ಚ್

ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ

– ರಾಘವೇಂದ್ರ ಅಡಿಗ ಎಚ್ಚೆನ್

ಸಾಲು ಮರದ ತಿಮ್ಮಕ್ಕಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು. ಬಡತನದ  ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅದು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ  ಮಹಿಳೆಗೆ ಇದೀಗ ನೂರರ ವಸಂತ.

ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು “ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.

ಮತ್ತಷ್ಟು ಓದು »

10
ಆಗಸ್ಟ್

ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?

-ಸುಂದರ ರಾವ್

ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ “ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ” ಎಂಬ ಸುದ್ದಿಗಳು ಪ್ರಕಟವಾದವು. “ವಂಶ” ಪತ್ರಿಕೆಯ ಮಿತ್ರರನ್ನು “ನಮ ಒರ ಪೋದು ತೂದು ಬರ್ಕನ?” (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.

ಮತ್ತಷ್ಟು ಓದು »

1
ಜೂನ್

ಮನೆಮಗಳಿಗೊಂದು ಗಿಡ ನೆಡುವ ಧರ್ ಹರಾ ನಮಗೂ ಆದರ್ಶವಾಗಲಿ…

– ಚಿತ್ರ ಸಂತೋಷ್

ಹೆಣ್ಣುಮಗಳಿಗಾಗಿ ಗಿಡಗಳನ್ನು ನೆಡುವ ಬಿಹಾರದ ಧರ್‌ಹರಾ ಗ್ರಾಮದ ‘ವಿಶಿಷ್ಟ ಸಂಸ್ಕೃತಿ’ಯನ್ನು ನೋಡಿ ಅಮೆರಿಕಾವೇ ನಿಬ್ಬೆರಗಾಗಿತ್ತು. ಅಮೆರಿಕ ರಾಯಭಾರಿ ಮೆಲನ್ನೆ ವರ್ರ್ ಈ ಗ್ರಾಮವನ್ನು ಮನತುಂಬಾ ಕೊಂಡಾಡಿ, ಈ ಗ್ರಾಮ ವಿಶ್ವಕ್ಕೆ ಮಾದರಿ ಎಂದಿದ್ದರು. ಆದರೆ, ನಮ್ಮದೇ ನೆಲದ ಇಂಥದ್ದೊಂದು ಅಪೂರ್ವ ಸಂಸ್ಕೃತಿಯನ್ನು ನಮ್ಮನೆಯ ಸಂಸ್ಕೃತಿಯನ್ನಾಗಿ ಬೆಳೆಸುವ ‘ಕರ್ತವ್ಯ’ವನ್ನು ನಾವಿನ್ನೂ ಮಾಡೇ ಇಲ್ಲ!

ಬಿಟಿಯಾಕೀ ಜನ್ಮ್ ಹೋನಾ, ಹಮಾರೆ ಲಿಯೇ ತೋ ಬಹುತ್ ಖುಷಿಕೀ ಬಾತ್ ಹೈ. ಬಿಟಿಯಾ ಹಮಾರೆ ಲಿಯೇ ಬೋಜ್ ನಹೀ ಹೈ,  ಉನ್ಕೋ ಬಿ ಪಡಾಯೆತೋ ಓಬಿ ಸಾಕ್ಷರ್ ಬನಾಯೇಂಗೆ, ಶಾದಿಬೀ ಕರೇಂಗೆ. ಕ್ಯಾಂಕೀ ಬಿಟಿಯಾ ಧೋ ಘರ್ ಕೀ ಚಿರಾಗ್ ಹೈ….(ನಮಗೆ ಹೆಣ್ಣು  ಮಕ್ಕಳು ಹುಟ್ಟುವುದೆಂದರೆ ಅದೊಂದು ಸಂಭ್ರಮ, ಹೆಮ್ಮೆ. ಹೆಣ್ಣು ಮಕ್ಕಳು ನಮಗೆ ಹೊರೆಯಲ್ಲ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡ್ತೀವಿ. ಮದುವೆ ಮಾಡ್ತೀವಿ. ಏಕೆಂದರೆ ಹೆಣ್ಣು ಮಕ್ಕಳು ಎರಡು ಕುಟುಂಬಗಳ ಬಾಂಧವ್ಯವನ್ನು ಬೆಸೆಯುವ ಕೊಂಡಿ)

ಥತ್! ಇದ್ಯಾವುದೋ ಭಾಷಣಕಾರನ ಬೊಗಳೆ ಮಾತುಗಳು ಎಂದೆನಿಸಬಹುದು. ಆದರೆ, ನಿಮ್ಮ ಊಹೆ ಖಂಡಿತಾ ತಪ್ಪು. ಇದು ಕ್ಷಣ ಕ್ಷಣದ ಬದುಕನ್ನೂ ಕೂಲಿ-ನಾಲಿ ಮೂಲಕ ಕಂಡುಕೊಳ್ಳುವ ಜನಸಾಮಾನ್ಯರ ಮಾತು. ಇವರಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಹಬ್ಬದ ಸಂಭ್ರಮ. ನಮ್ಮ ಮನೆಮಗಳು ಹುಟ್ಟಿದರೆ, ಅವಳ ಬದುಕು ಅವಳೇ ಕಟ್ಟಿಕೊಳ್ಳುತ್ತಾಳೆ ಅನ್ನೋ ಗಟ್ಟಿ ನಂಬಿಕೆ ಅವರದು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುವುದು ಅಥವಾ ಹೆಣ್ಣು ಮಗಳ ಮದುವೆಗಾಗಿ ಲಕ್ಷಾಂತರ ರೂಪಾಯಿ ಸಾಲಮಾಡಿ ಜೀವನಡೀ ಸಾಲ ತೀರಿಸಲು ಪರದಾಡುವುದು…ಇದೆಲ್ಲಾ ಈ ಊರಿನಲ್ಲಿ ಇನ್ನೂ “ಅಪರಿಚಿತ” ಸುದ್ದಿಗಳು. ಇದ್ಯಾವ ಸಂಸ್ಕೃತಿ, ಇದ್ಯಾವ ಊರು? ಅಂತೀರಾ…

ಮತ್ತಷ್ಟು ಓದು »

15
ಮೇ

ನನಗೂ ಸ್ವಲ್ಪ ಕೊಡಿ…

– ಚೇತನ್ ಕೋಡುವಳ್ಳಿ

ಮಾರ್ಚ್ ತಿಂಗಳ ಎಲ್ಲ ವೀಕೆಂಡಲ್ಲೂ ಊರಿಗೆ ಹೋಗಿದ್ದೆ. ಊರಲ್ಲಿ ಮಳೆಗಾಗಿ ಕಾಯ್ತಿದ್ರು. ಈಸಲನಾದ್ರೂ ಚೆನ್ನಾಗಿ ಮಳೆ ಬಂದು ಕಾಫಿ ಚೆನ್ನಾಗಿ ಹೂ ಬಿಡ್ಲಿ ಅಂತಿದ್ರು. ನಾನೂ ಹೋದಾಗಲೆಲ್ಲ ಮಳೆಗೆ ಕಾಯ್ತಿದ್ದೆ, ಜೊತೆಗೆ ಕಾಫಿಯ ಹೂವಿಗೆ ಸಹ. ಹೂವಿನಿದ ತುಂಬಿಕಂಗೊಳಿಸುವ ತೋಟವನ್ನ ನೋಡೋದೇ ಕಣ್ಣಿಗೆ ಹಬ್ಬ, ಎಲ್ಲಿ ಕಣ್ಣು  ಹಾಯಿಸಿದರೂ  ಬಿಳೀಹೂಗಳದ್ದೇ  ರಾಶಿ,  ಅಲ್ಲದೆ ಆ ಹೂವಿನ ಘಮಲು, ಆಹಾ ಏನು ಪರಿಮಳ, ದಿನಾ ಪೂರ್ತಿ ಅಲ್ಲೇಕುಳಿತಿರೋಣ ಎಂದನ್ನಿಸುತ್ತದೆ.೨ ವರ್ಷ ಆ ಸೌಭಾಗ್ಯ ಸಿಕ್ಕಿರ್ಲಿಲ್ಲ  ಯಾಕಂದ್ರೆ ಹೂವು ಆಗಿದ್ದು ವಾರದ ಮಧ್ಯದಲ್ಲಿ 😦 ವೀಕೆಂಡ್ ಬರೋ ಹೊತ್ತಿಗೆ ಎಲ್ಲ ಹೂವು ಉದುರಿ ಹೋಗಿರ್ತಿತ್ತು.

ಒಂದಿನ  ಮೋಡ ಆದ ಹಾಗೆ ಆಗ್ತಿತ್ತು, ದೂರದ ಗಿರಿಯಲ್ಲಿ ಕಪ್ಪನೆಯ ಮೋಡ, ಸ್ವಲ್ಪ ಹೊತ್ತಾದಮೇಲೆ ಮಳೆ. ಇತ್ತ ಕಡೆ ಗಾಳಿ ಬೀಸುತ್ತಿತ್ತು, ಮಳೆಯೂ ಬರುತ್ತಿರುವ ಹಾಗನ್ನಿಸುತ್ತಿತ್ತು. ಎಲ್ಲೋದೂರದ ಆಸೆ, ಇನ್ನೇನು ಕಾಲು ಘಂಟೆಯಲ್ಲಿ ಇಲ್ಲಿಗೆ ಬರತ್ತೆ, ಹೋಗಿ ನೆನೆಯಬಹುದು ಅಂತ.ಆಮೇಲೆ ಮಳೆ ಬಂದ್ರೆ ೩-೪ ದಿನ ಆದ್ಮೇಲೆ ಚಿಗುರು ಬಿಟ್ಟು ಹೂವು ಆಗೋ  ಹೊತ್ತಿಗೆ  ೧ ವಾರಆಗತ್ತೆ, ಮುಂದಿನ ವಾರ ಬರಬಹುದು ಅಂತ ದೂರದ ಆಸೆ. ದೂರದಲ್ಲಿ ಜೋರಾಗಿಸುರಿಯುತ್ತಿದ್ದ ಮಳೆ ಗಾಳಿ ಬೀಸುತ್ತಿದ್ದಂತೆ ಇತ್ತ ಕಡೆ ಬರ್ತಾ ಇತ್ತು. ಅಲ್ಲೇ ಕಣದಲಿ  ನಿಂತುನೋಡುತ್ತಿದ್ದ ನನಗೆ, ಪಕ್ಕದ ಊರಲ್ಲಿ ಹನಿಗಳು ಬಿದ್ದಾಗ ಆದ ಸಂತಸ ಅಷ್ಟಿಷ್ಟಲ್ಲ. ಆದರೆ ಸ್ವಲ್ಪಹೊತ್ತಾದ ಮೇಲೆ ಅಲ್ಲಿ ಬೀಳುವುದೂ ಕಡಿಮೆಯಾಯ್ತು. ಕಾಯುತ್ತಿದ್ದ ನಾನು ಸಪ್ಪೆ  ಮೊರೆಹಾಕಿಕೊಂಡು ಮನೆ ಒಳಗೆ ಹೋದೆ.

ಬೆಂಗಳೂರಿಗೆ ಬಂದ ಮಾರನೇ ದಿನ ಅಮ್ಮ ಫೋನ್ ಮಾಡಿ ಮಳೆ ಬಂತು ಅಂದಾಗ ಮೊದಲಿಗೆ ಸ್ವಲ್ಪ ದುಃಖ ಆದರೆ ಮರುಕ್ಷಣವೇ ಖುಷಿ. ಮುಂದಿನ ವಾರ ಹೇಗಿದ್ದರೂ ಯುಗಾದಿಗೆ ಊರಿಗೆಹೋಗಬೇಕು ಆಗ ಇಡೀ ತೋಟ ಸುತ್ತಾಡಿ  ಅಲ್ಲಿಯ ಸೊಬಗನ್ನು, ಜೊತೆಗೆ ಸುವಾಸನೆಯನ್ನೂ ಸವಿಯಬಹುದಲ್ಲ ಎಂದೆನಿಸಿತು.

ಮತ್ತಷ್ಟು ಓದು »