ಅತ್ಯಾಚಾರ: ಹುಯಿಲೆಬ್ಬಿಸುವುದೇಕೆ?
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಕಳೆದ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. 2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?
ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.





