’ಟಿಪ್ಪು’ ಹೆಸರಿನಲ್ಲಿ ’ಕೈ’ ರಾಜಕೀಯ?
– ಅಶ್ವಿನ್ ಎಸ್. ಅಮೀನ್
ಬಹುಶಃ ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು ಇತರ ಧರ್ಮೀಯರಿಗೆ ಕೊಡುವ ಸವಲತ್ತುಗಳು,ಸೌಕರ್ಯಗಳು ಇತರ ಯಾವ ದೇಶದಲ್ಲೂ ಇರಲಿಕ್ಕಿಲ್ಲ.. ನಮ್ಮ ರಾಜಕೀಯ ವ್ಯವಸ್ಥೆಯೇ ಅಂತಹುದು. ನಮ್ಮ ರಾಷ್ಟ್ರಪಿತರು ಬುನಾದಿ ಹಾಕಿದ ಈ ಸಂಸ್ಕೃತಿ ಇಂದಿನವರೆಗೂ ನಿಂತಿಲ್ಲ.. ಈಗ ಇಂತಹದೇ ಒಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವುದು ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ.
ಭಾರತದಲ್ಲಿರುವ ಒಂದು ಪ್ರತ್ಯೇಕ ಮುಸ್ಲಿಂ ವಿದ್ಯಾಲಯ ಅಲಿಘಡ. ಈಗ ಕೇಂದ್ರ ಸರ್ಕಾರ ಇನ್ನೊಂದು ಪ್ರತ್ಯೇಕ ಮುಸ್ಲಿಂ ವಿವಿ ಯನ್ನು ಕರ್ನಾಟಕದ ಶ್ರೀರಂಗಪಟ್ಟಣ ದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.ಈಗಾಗಲೇ ಒಂದು ಪ್ರತ್ಯೇಕ ವಿವಿ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ವಿವಿ ಯಾಕೆ? ಅದರಲ್ಲೂ ಧರ್ಮದ ಆಧಾರದ ಮೇಲೆ ವಿವಿ ವಿಂಗಡಣೆ ಸರಿಯೇ? ವಿಶ್ವವಿದ್ಯಾಲಯಗಳಿಗೆ ಧರ್ಮದ ಲೇಪ ಯಾಕೆ ಬೇಕು? ಭಾರತದಲ್ಲಿರುವ ಅಷ್ಟೂ ವಿವಿಗಳಲ್ಲಿ ಮುಸ್ಲಿಮರು ಓದಲಾರರೇ? ವಿವಿಗಳಲ್ಲಿ ಮುಸ್ಲಿಮರಿಗೆ ಅಂತಹ ತೊಂದರೆಗಳಿವೆಯೇ? ಹಾಗೆ ಹೀಗೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮಗೆ ಸಿಗುವ ಉತ್ತರ “ಹಾಗೇನೂ ಇಲ್ಲ, ಎಲ್ಲವೂ ಸರಿಯಾಗಿದೆ..” ಹಾಗಿದ್ದಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ಉದ್ಧೇಶ ರಾಜಕೀಯ ತಂತ್ರ ಅನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಮುಸ್ಲಿಮರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಕೊಟ್ಟರೆ ಏನಾಗುತ್ತದೆ ಅನ್ನುವುದು ಅಲಿಘಡ ವಿವಿಯಲ್ಲೇ ಗೊತ್ತಾಗಿದೆ. ಅಲ್ಲಿ ಹುಟ್ಟಿಕೊಂಡ ‘ಸಿಮಿ’ ಸಂಘಟನೆ ದೇಶವ್ಯಾಪಿ ಬೆಳೆದು ದೇಶ ವಿರೋಧಿ ಭಯೋತ್ಪಾದನಾ ಸಂಘಟನೆಯಾಗಿ ಮಾರ್ಪಟ್ಟು ದೇಶದಾದ್ಯಂತ ವಿದ್ವಂಸಕ ಹಾಗು ದೇಶ ದ್ರೋಹಿ ಕೃತ್ಯಗಳನ್ನು ನಡೆಸಿ ಇಂದು ಆ ಸಂಘಟನೆಯನ್ನು ನಿಷೇಧಿಸಿದ್ದಾರೆ ಅಂದರೆ ಅದರ ಭಯಂಕರತೆಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಕೇಂದ್ರ ಸರಕಾರ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿ ಮತ್ತೊಂದು ವಿವಿಗೆ ಕೈ ಹಾಕಿರುವುದು ನಮ್ಮ ದೇಶದ ದುರದೃಷ್ಟವೆನ್ನಬೇಕು.





