ಪ್ರತ್ಯೇಕ ಪಂಕ್ತಿ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು
– ರಾಕೇಶ್ ಶೆಟ್ಟಿ
ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…! ಅಂತ ವರ್ಷದ ಹಿಂದೆ ಮಡೆಸ್ನಾನ ಅನ್ನುವ ವಿಕೃತಿಯನ್ನು ವಿರೋಧಿಸಿ ಬರೆದಿದ್ದು ನಿಜವಾಗಿದೆ.ನಿನ್ನೆ ಮತ್ತೆ ಕುಕ್ಕೆಯಲ್ಲಿ ಮಡೆಸ್ನಾನ ಸಾಂಗೋಪಾಂಗವಾಗಿ ನೆರವೇರಿದೆ.ತಾವು ತಿಂದು ಬಿಡುವ ಎಂಜಲ ಮೇಲೆ ಮನುಷ್ಯರು ಹೊರಳಾಡುತ್ತಾರೆ ಅಂತ ಗೊತ್ತಿದ್ದು ಉಣ್ಣುವ ರೋಗಗ್ರಸ್ತ ಅಹಂ ಮನಸ್ಸುಗಳು ಮತ್ತು ಇನ್ನೊಬ್ಬರ ಎಂಜಲೆಲೆಯೇ ಪರಮ ಪವಿತ್ರ ಅನ್ನುವ ಮೂಢರು ಎಂಜಲೆಲೆಯ ಸ್ನಾನದಲ್ಲಿ ಮಿಂದು ಪುನೀತರಾಗಿದ್ದಾರೆ.
ಇನ್ನೊಂದೆಡೆ “ನಾವೆಲ್ಲ ಹಿಂದೂ,ನಾವೆಲ್ಲ ಒಂದು” ಅನ್ನುವವರೆಲ್ಲ ಸದ್ದಿಲ್ಲದೆ ಹಿಂದೆಯೇ ನಿಂತು ಎಂಜಲೆಲೆಯ ಮೇಲೆ ದೇವರ ಹೆಸರಿನ ನಂಬಿಕೆ(ಹೆದರಿಕೆ?)ಯಲ್ಲಿ ಜಾಗೃತರಲ್ಲದವರನ್ನು ಉರುಳಾಡಿಸಿ ಕೃತಾರ್ತರಾಗಿದ್ದಾರೆ.ಅಲ್ಲಿಗೆ “ನಾವೆಲ್ಲ ಹಿಂದೂ – ನಾವಿನ್ನೂ ಹಿಂದು” ಎನ್ನಲಡ್ಡಿಯಿಲ್ಲ ಅಲ್ಲವೇ?





