ಕೊಳವೆಬಾವಿ ಅವಾಂತರ-ಕೊನೆ ಹೇಗೆ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.
ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.
ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.
ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್‍ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!





