ವಿಷಯದ ವಿವರಗಳಿಗೆ ದಾಟಿರಿ

Posts tagged ‘ಗಣಿತ’

20
ಜುಲೈ

ಅನಂತದಿಂದ ಸೊನ್ನೆಯವರೆಗೆ: ಸಂಖ್ಯೆಗಳ ಸಂಕ್ಷಿಪ್ತ ಚರಿತ್ರೆ

– ರೋಹಿತ್ ಚಕ್ರತೀರ್ಥ

zeroಒಂದಾನೊಂದು ಕಾಲ ಇತ್ತು. ಮನುಷ್ಯ ಪ್ರಾಣಿಜಗತ್ತಿನ ಉಳಿದ ಜೀವರಾಶಿಗಿಂತ ಕೊಂಚ ಭಿನ್ನನಾಗಿ, ಚತುಷ್ಪಾದಗಳ ಅವಲಂಬನೆಯಿಂದ ಹೊರಬಂದು, ಎರಡು ಕಾಲಿನಲ್ಲಿ ನಿಂತು ಬ್ಯಾಲೆನ್ಸ್ ಮಾಡುತ್ತ ನಡೆಯಲು ತೊಡಗಿದ್ದ ಕಾಲ. ಹಾಗೆ ಓಲಾಡುತ್ತ ಡ್ಯಾನ್ಸ್ ಮಾಡುತ್ತ ಕೊನೆಗೊಂದು ದಿನ ದೃಢವಾಗಿ ನಿಲ್ಲಬಲ್ಲ ತಾಕತ್ತು ಗಳಿಸಿಕೊಂಡವನಿಗೆ ದೃಷ್ಟಿ ಹೋದದ್ದು ಆಕಾಶದತ್ತ. ರಾತ್ರಿ ಹೊತ್ತಲ್ಲಿ ಅಲ್ಲಿ ಮಿನುಗುವ ಚುಕ್ಕಿಗಳೆಷ್ಟು! ಸಂಜೆಯಾದರೆ ಹಾರುವ ಹಕ್ಕಿಗಳೆಷ್ಟು! ಬೇಸಗೆಯಲ್ಲಿ ತೇಲುವ ಬಿಳಿ ಮೋಡಗಳೆಷ್ಟು! ಮಳೆಗಾಲದಲ್ಲಿ ಫಳಾರನೆ ಹೊಳೆದು ಮರೆಯಾಗುವ ಮಿಂಚುಗಳೆಷ್ಟು! ಇವುಗಳನ್ನೆಲ್ಲ ನೋಡುತ್ತಿದ್ದವನಿಗೆ ಅವುಗಳೆಲ್ಲ ಎಷ್ಟು ಎಷ್ಟು ಎಷ್ಟು ಎನ್ನಿಸುತ್ತ ಆಶ್ಚರ್ಯವಾಗುತ್ತಿತ್ತೇ ಹೊರತು ನಿಜವಾಗಿಯೂ ಎಷ್ಟಿವೆ ಎಂಬ ಅಂದಾಜು ಮಾತ್ರ ಸಿಕ್ಕಿರಲಿಲ್ಲ. ಯಾಕೆಂದರೆ ಆ ಕಾಲದ ಮನುಷ್ಯನಿಗೆ “ಲೆಕ್ಕ ಮಾಡುವುದು” ಎಂಬ ಪರಿಕಲ್ಪನೆಯೇ ಹುಟ್ಟಿರಲಿಲ್ಲ! ಹೀಗೆಯೇ ದಿನಗಳು ಸರಿಯುತ್ತಿದ್ದಾಗ ಆ ಆದಿಮಾನವ ಒಂದು ವಿಚಿತ್ರ ಕಂಡ. ಆಕಾಶದಲ್ಲಿ ಚಂದ್ರ ರೊಟ್ಟಿಯಂತೆ ದುಂಡಗಿದ್ದವನು ದಿನ ಹೋದಂತೆ ಕರಗುತ್ತಾ ಕರಗುತ್ತಾ ಹೋಗಿ ಒಂದು ದಿನ ಮಾಯವಾಗಿಬಿಡುತ್ತಾನೆ. ಅಂದು ಕಾಡೆಲ್ಲ ಗಾಢಾಂಧಕಾರ! ಕಾರ್ಗತ್ತಲೆ! ಅದರ ಮರುದಿನದ ರಾತ್ರಿ ಸಣ್ಣಗೆ ಬೆಳ್ಳಿಯ ಸರಿಗೆಯಂತೆ ಮತ್ತೆ ಮೂಡಿದವನು ಚಾಪೆ ಬಿಡಿಸಿದಂತೆ ದೊಡ್ಡವನಾಗುತ್ತಾ ಬಂದು ಕೊನೆಗೊಂದು ದಿನ ಪೂರ್ಣಾವತಾರಿಯಾಗುತ್ತಾನೆ. ಅಂದು ಕಾಡೆಲ್ಲ ಬೆಳ್ಳಂಬೆಳಕು! ತರುಲತೆಗಳ ನಡುವಲ್ಲಿ ತೂರಿಕೊಂಡಾದರೂ ಬಂದು ನೆಲಮುಟ್ಟುವ ಹಾಲು ಬೆಳುದಿಂಗಳು! ಹೀಗೆ ಚಂದ್ರ ಉರುಟಾಗುವುದಕ್ಕೂ ಪೂರ್ತಿಯಾಗಿ ಕಾಣೆಯಾಗುವುದಕ್ಕೂ ನಡುವಿನ ಅವಧಿ ಕರಾರುವಾಕ್ಕಾಗಿ ಒಂದೇ ರೀತಿ ಇದೆ ಎನ್ನುವುದು ಮನುಷ್ಯನಿಗೆ ನಿಧಾನವಾಗಿ ತಿಳಿಯುತ್ತ ಹೋಯಿತು. ಬದುಕೆಲ್ಲ ಕಾಡಲ್ಲೇ ಕಳೆದುಹೋಗುತ್ತಿದ್ದುದರಿಂದ, ಚಂದ್ರನ ಇಂಥ ಬದಲಾವಣೆಗಳನ್ನು ಗುರುತು ಮಾಡಿಟ್ಟುಕೊಳ್ಳುವುದು ಅವನಿಗೆ ಮುಖ್ಯವೂ ಆಗಿತ್ತು. ಚಂದ್ರ ಮಾಯವಾಗುವ ದಿನವನ್ನು ಅವನು ಅಮವಾಸ್ಯೆ ಎಂದು ಕರೆದ. ಪೂರ್ತಿಯಾಗಿ ಬೆಳಗುವ ದಿನವನ್ನು ಹುಣ್ಣಿಮೆ ಎಂದ. ಅಮವಾಸ್ಯೆಗಳಂದು ಕಾಡಿನಲ್ಲಿ ಅಲೆದಾಡುವುದನ್ನು ತಪ್ಪಿಸಿಕೊಂಡ. ಹುಣ್ಣಿಮೆಯ ಬೆಳಕಲ್ಲಿ ಗುಂಪು ಸೇರಿ ಕುಣಿಯುತ್ತ ಹಾಡು ಹಾಡುವ, ಊಟ ಬೇಯಿಸುವ ಕಾರ್ಯಕ್ರಮಗಳನ್ನು ಇಟ್ಟುಕೊಂಡ. ನಾವಿಂದು ಸಂಸ್ಕೃತಿ ಎಂದು ಕರೆಯುವ ಎಲ್ಲವೂ ಹೀಗೆ ನಿಧಾನವಾಗಿ ಕಣ್ಣುಬಿಟ್ಟವು. ಮತ್ತಷ್ಟು ಓದು »

19
ಆಕ್ಟೋ

ನಕ್ಷತ್ರಗಳ ಭವಿಷ್ಯಕಾರನ ಆಸಕ್ತಿ-ಅನಾಸಕ್ತಿಗಳು

– ರೋಹಿತ್ ಚಕ್ರತೀರ್ಥ

ಡಾ.ಸುಬ್ರಹ್ಮಣ್ಯನ್ ಚಂದ್ರಶೇಖರಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ, ಭಾರತ ಕಂಡ ಅಪರೂಪದ ವಿಜ್ಞಾನಿ. ಸರ್ ಸಿ.ವಿ. ರಾಮನ್ ಅವರ ಅತ್ಯಂತ ನಿಕಟ ಸಂಬಂಧಿಯಾಗಿಯೂ ಚಂದ್ರ ಅಂತಹ ಸಂಬಂಧಗಳನ್ನು ತನ್ನ ಉತ್ಥಾನಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಆದರ್ಶ ವಿಜ್ಞಾನಿ ಎನ್ನುವುದಕ್ಕೆ ಎಲ್ಲ ವಿಧದಲ್ಲೂ ಅರ್ಹನಾಗಿದ್ದ ಮೆಲುನುಡಿಯ ಕಠಿಣ ದುಡಿಮೆಯ ಅಪಾರ ಬುದ್ಧಿಮತ್ತೆಯ ಈ ನೊಬೆಲ್ ಪುರಸ್ಕೃತ ಪಂಡಿತ ಖಾಸಗಿಯಾಗಿ ಹೇಗಿದ್ದರು? ಅವರ ಬದುಕಿನ ಒಂದಷ್ಟು ಸೀಳುನೋಟಗಳು ಇಲ್ಲಿವೆ. ಅಕ್ಟೋಬರ್ 19, ಚಂದ್ರರ ಬರ್ತ್‍ಡೇ.

ಹೆಚ್ಚಾಗಿ ವಿಜ್ಞಾನಿಗಳು ಎಂದರೆ ಒಂದೇ ಲೆಕ್ಕವನ್ನು ವರ್ಷಾನುಗಟ್ಟಲೆ ಯೋಚಿಸುವ, ಒಂದು ಪ್ರಯೋಗದ ಬೆನ್ನು ಬಿದ್ದು ಹಲವಾರು ದಶಕಗಳ ಬದುಕನ್ನು ತೇಯುವ ತಪಸ್ವಿಗಳು ಎನ್ನುವ ಕಲ್ಪನೆ ಇರುತ್ತದೆ. ನಮ್ಮ ಸುತ್ತಲಿನ ಅನೇಕ ವಿಜ್ಞಾನಿಗಳು ಅದಕ್ಕೆ ಪುಷ್ಟಿ ನೀಡುತ್ತಾರೆ ಎಂದೂ ಹೇಳಬಹುದು. ವಿಜ್ಞಾನಿಗಳಿಗೆ ಅದರ ಹೊರಗೂ ಒಂದು ಬದುಕು ಇರುತ್ತದೆ, ಅವರಿಗೆ ಬೇರೆ ವಿಷಯಗಳಲ್ಲೂ ಆಸಕ್ತಿ ಇದ್ದಿರಬಹುದು ಎನ್ನುವ ಯೋಚನೆ ಬರುವಂತೆ ಅವರ ಬದುಕು ಇರುವುದಿಲ್ಲ. ಇದ್ದರೂ ಅದು ಸಾರ್ವಜನಿಕರಿಗೆ ಅಷ್ಟೊಂದು ತೆರೆದಿರುವುದಿಲ್ಲ. ಹೀಗಾಗಿ, ವಿಜ್ಞಾನಿಗಳ ಬಗ್ಗೆ ನಾವು ಸಾಮಾನ್ಯರು ಅನೇಕ ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳುತ್ತೇವೆ. ಭಾರತದಲ್ಲಿ ಹುಟ್ಟಿಬೆಳೆದ ವಿಶ್ವಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸುಬ್ರಹ್ಮಣ್ಯನ್ ಚಂದ್ರಶೇಖರ ಅವರ ಬಗ್ಗೆಯೂ ಇಂತಹದೊಂದು ಕಲ್ಪನೆ ಬೆಳೆಯಲು ಎಲ್ಲ ಸಾಧ್ಯತೆಗಳೂ ಇವೆ! ಯಾಕೆಂದರೆ ಚಂದ್ರ (ಅವರನ್ನು ಉಳಿದೆಲ್ಲರೂ ಕರೆಯುತ್ತಿದ್ದದ್ದು ಹಾಗೆಯೇ. ಅವರಿಗೂ ಆ ಸಂಕ್ಷಿಪ್ತನಾಮ ಇಷ್ಟ) ತನ್ನ ವೈಯಕ್ತಿಕ ಜೀವನದ ಬಗ್ಗೆ ಹೊರಗೆ ಹೇಳಿಕೊಂಡದ್ದು ಕಡಿಮೆ. ಖಾಸಗಿ ಬದುಕಿನ ಬಗ್ಗೆ ಎಲ್ಲೂ ಹೇಳೇ ಇಲ್ಲ ಎನ್ನಬೇಕು! ಆದರೂ ಅವರ ಕೆಲ ಬರಹಗಳನ್ನು, ಕೆಲವೇ ನಿಮಿಷಗಳಿಗೆ ಮೊಟಕಾದ ಒಂದೆರಡು ಸಂದರ್ಶನಗಳನ್ನು ನೋಡಿದಾಗ, ಈ ಮನುಷ್ಯನಿಗೆ ವಿಜ್ಞಾನದ ಹೊರಗೆಯೂ ಕೆಲವೊಂದು ಆಸಕ್ತಿಗಳು ಇದ್ದವು ಎನ್ನುವುದು ತಿಳಿಯುತ್ತದೆ.

ಮತ್ತಷ್ಟು ಓದು »