ಸಂಕ್ರಮಣದ ಹಾದಿಯಲ್ಲಿ ನಿಲುಮೆ…
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು… ”
ದಾರಿ
-ಪ್ರೇಮಶೇಖರ
ಆ ದಾರಿ ತನ್ನನ್ನು ಊರೊಂದರೊಳಕ್ಕೆ ಕರೆದೊಯ್ಯುತ್ತದೆ ಎಂದವಳು ಊಹಿಸಿರಲೇ ಇಲ್ಲ. ಇದೂ ಒಂದು ದಾರಿ, ಒಂದಲ್ಲಾ ಒಂದು ದಾರಿ ಹಿಡಿದು ನಡೆಯಲೇಬೇಕಲ್ಲಾ ಅಂದುಕೊಂಡು ಈ ದಾರಿ ಹಿಡಿದು ಬಂದಿದ್ದಳು.
ಕೆಂಪುಮಣ್ಣಿನ ಹಾದಿ. ಇಕ್ಕೆಲಗಳಲ್ಲಿ ಹಚ್ಚಹಸಿರ ತಂಪಿನ ನಡುವೆ ಹಳ್ಳದಲ್ಲಿಳಿದು ದಿಣ್ಣೆಯೇರಿ ಬಳುಕಿ ಬಳುಕಿ ಸಾಗಿತ್ತು. ಕಾಲಿಟ್ಟಾಗ ಆಕರ್ಷಕ ಅನಿಸಿದ್ದೇನೋ ನಿಜ. ಆದರೆ ಎಷ್ಟು ಹೊತ್ತು ನಡೆದರೂ ಅದು ಮುಗಿಯುವುದೇ ಇಲ್ಲವೇನೋ ಅನ್ನುವಂತೆ ಕಂಡಾಗ ಆತಂಕಗೊಂಡಳು. ಅದರೊಟ್ಟಿಗೆ, ಒಂದು ನರಪಿಳ್ಳೆಯೂ ಎದುರಾಗದಾಗ ಎದೆಯಲ್ಲಿ ಭಯ ಬುಗ್ಗೆಯಾಗಿ ಉಕ್ಕತೊಡಗಿತು. ಇದು ನನಗೊಬ್ಬಳಿಗೇ ಮೀಸಲಾದ ದಾರಿಯೇನೋ ಎಂದವಳಿಗೆ ಅನುಮಾನ ಬರುವಷ್ಟರಲ್ಲಿ ದಾರಿ ಫಕ್ಕನೆ ಎಡಕ್ಕೆ ಹೊರಳಿತ್ತು. ಆಗ ಕಂಡಿತು ಆ ಊರು. ಅದನ್ನು ಕಾಣುತ್ತಿದ್ದಂತೇ ಅವಳು ಗಕ್ಕನೆ ನಿಂತುಬಿಟ್ಟಳು.
ಊರಿಗೆ ಹರದಾರಿ ದೂರವಿರುವಾಗಲೇ ಹೊಸಬರೆದುರು ಅಟ್ಟಹಾಸದಿಂದ ಎಗರಾಡುವ ನಾಯಿಗಳೊಂದೂ ಈ ಊರಲ್ಲಿಲ್ಲವಲ್ಲ! ಗ್ರಾಮಸಿಂಹಗಳಿಲ್ಲದ ಊರೂ ಉಂಟೇ? ಅವಳಿಗೆ ಅಚ್ಚರಿ. ಮೂಗಿನ ಮೇಲೆ ಬೆರಳಿಟ್ಟುಕೊಂಡು ನಾಲ್ಕು ಹೆಜ್ಜೆ ಸರಿಸಿದವಳು ಮತ್ತಷ್ಟು ಅಚ್ಚರಿಗೊಳಗಾದಳು. ಬೀದಿಯಲ್ಲಿ ಜನರೇ ಇಲ್ಲ! ಹೊತ್ತು ಮಾರುದ್ದ ಏರಿ ಬಿಸಿಲು ಚುರುಗುಟ್ಟುತ್ತಿದ್ದರೂ ಈ ಊರ ಜನರ ನಿದ್ದೆ ಇನ್ನೂ ಕಳೆದಿಲ್ಲವೇ? ಎಂಥಾ ಜನರಪ್ಪ! ಎಂಥಾ ಊರಪ್ಪ!
ಕುತೂಹಲದಿಂದ ಎದುರಾದ ಮೊದಲ ಮನೆಯತ್ತ ನೋಡಿದರೆ ಅದರ ಬಾಗಿಲು ತೆರೆದಿದೆ! ಹಾಗೇ ಮುಂದೆ ನೋಟ ಹೊರಳಿಸಿದರೆ ಎಲ್ಲ ಮನೆಗಳ ಬಾಗಿಲುಗಳೂ ತೆರೆದಿವೆ! ಇದೇನು ಸೋಜಿಗ ಎಂದುಕೊಳ್ಳುತ್ತಾ ಮೊದಲ ಮನೆಯ ಬಾಗಿಲು ಸಮೀಪಿಸಿದಳು. ಮೂರು ಮೆಟ್ಟಲುಗಳನ್ನು ಅನುಮಾನದಿಂದಲೇ ಏರಿದಳು. ಹೊಸ್ತಿಲಲ್ಲಿ ನಿಂತು ಒಳಗಿಣುಕಿದಳು.







