ಇನ್ಮುಂದೆ ಕೆಡುಕಿ ಫ್ರೈಡ್ ಚಿಕನ್ ಜೊತೆಗೆ ಶಾರ್ಪಿಕ್ ಬಾಟಲ್ ಸಂಪೂರ್ಣ ಉಚಿತ!
– ಪ್ರವೀಣ್ ಕುಮಾರ್ ಮಾವಿನಕಾಡು
ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರಗಳ ತಯಾರಿಕೆಯಲ್ಲಿ ತೀವ್ರ ನಿರ್ಲಕ್ಷ್ಯ ಕಂಡುಬರುತ್ತಿದ್ದು,ಮ್ಯಾಗಿಯಲ್ಲಿ ಸೀಸ,ಹಾಲಿನ ಪುಡಿಯಲ್ಲಿ ಡಿಟರ್ಜೆಂಟ್ ಪತ್ತೆಯಾದಂತೆ ಫ್ರೈಡ್ ಚಿಕನ್ ನಲ್ಲಿ ಸಾಮಾನ್ಯವಾಗಿ ಚರಂಡಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಕಂಡುಬಂದಿವೆ.
ಘಟನೆಯ ವಿವರ: ಇತ್ತೀಚಿಗೆ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸರಪಣಿಯ ಚಿಕನ್ಪುರ್ ಜಿಲ್ಲೆಯ ಔಟ್ ಲೆಟ್ ಒಂದರಲ್ಲಿ ಫ್ರೈಡ್ ಚಿಕನ್‌ಗೆ ಆರ್ಡರ್ ಮಾಡಿ ಬಾಯಲ್ಲಿ ನೀರೂರಿಸುತ್ತಾ ಕುಳಿತಿದ್ದ ಗ್ರಾಹಕರೊಬ್ಬರು ತಮಗೆ ಸರ್ವ್ ಮಾಡಿದ ಚಿಕನ್ ಜೊತೆ ಬ್ಯಾಕ್ಟೀರಿಯಾಗಳು ಇರುವುದನ್ನು ತಿಳಿದು ಹೌಹಾರಿದ್ದಾರೆ.ಈ ಬಗ್ಗೆ ಮಳಿಗೆಯ ಸಿಬ್ಬಂದಿಗೆ ತಿಳಿಸಿದಾಗ ಅದು ಹೊರಗಿನಿಂದ ತಾವೇ ತಂದುಕೊಂಡ ಆಹಾರ ಎಂದು ವಾದ ಮಾಡಿದ್ದಾರೆ.ಆದರೆ ದೂರು ಸ್ವೀಕರಿಸಲು ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಈ ಬಗ್ಗೆ ಪುರಾವೆ ಲಭಿಸಿದ್ದು,ಬ್ಯಾಕ್ಟೀರಿಯಾಗಳಿದ್ದ ಮಾಂಸದ ತುಂಡುಗಳನ್ನು ಹೆಚ್ಚುವರಿ ಪರೀಕ್ಷೆಗೆ ಕಳುಹಿಸಲಾಗಿತ್ತು.ಪ್ರಯೋಗಾಲಯದ ವರದಿಯಲ್ಲಿ ಚಿಕನ್ ನಲ್ಲಿ ಬ್ಯಾಕ್ಟೀರಿಯಾಗಳು ಇರುವುದು ಧೃಢಪಟ್ಟಿದೆ!
ಪರಿಹಾರಭಾಗ್ಯದ ಆಸೆಗೆ ಪ್ರಾಣ ಕಳೆದುಕೊಂಡ ಶಾಸಕ
– ಪ್ರವೀಣ್ ಕುಮಾರ್ ಮಾವಿನಕಾಡು
ಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುವುದು ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ!ಶೂನ್ಯ ವೇಳೆಯಲ್ಲಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮದ್ಯದಲ್ಲಿಯೇ ಅಸುನೀಗಿದ್ದಾನೆ.
ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು ಇತರ ಶಾಸಕರು ರಾಜ್ಯ ಹೆದ್ದಾರಿಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.ರೈತ ಸಂಘಟನೆಗಳ ರಾಜ್ಯ ಮುಖಂಡರು ಬಂದು ಪರಿಹಾರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಶಾಸಕರು,ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಒಯ್ಯಲೂ ಅವಕಾಶ ನೀಡದೇ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು.
ಮೂಢನಂಬಿಕೆ ನಿಷೇಧ ಕಾಯ್ದೆ ಮಂಡನೆಗೆ ಆಷಾಢಮಾಸ ಅಡ್ಡಿ!
– ಪ್ರವೀಣ್ ಕುಮಾರ್ ಮಾವಿನಕಾಡು
ಆಷಾಢಮಾಸ ಯಾವುದೇ ಶುಭ ಕಾರ್ಯಗಳಿಗೆ ಸೂಕ್ತವಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ “ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ”ವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ವಿಧೇಯಕವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವ ಕುರಿತಂತೆ ಮೂಢ ನಂಬಿಕೆ ವಿರೋಧೀ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಾವು ಈಗಾಗಲೇ ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು ಅವರೂ ಸಹ ಈ ಬಾರಿ ಅಧಿಕ ಆಷಾಢ ಬಂದಿರುವುದರಿಂದ ವಿಧೇಯಕ ಮಂಡನೆ ಬೇಡ ಎಂದು ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಹಾಗೊಂದು ವೇಳೆ ಆಷಾಢದಲ್ಲೇ ವಿಧೇಯಕ ಮಂಡಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಮತ್ತು ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಗಳಾಗುವ ಸಂಭವವಿದೆ.ಹಾಗೇನಾದರೂ ಆದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷಾಂತರ ಮಾಡಿ,ಹಲವು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಿ,ಇದುವರೆಗೆ ಮಾಡಿದ ರಾಜಕೀಯವೆಲ್ಲವೂ ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ಈ ವಿಧೇಯಕವನ್ನು ಮಂಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮತ್ತಷ್ಟು ಓದು 




