ಸಕಲ ಬೈಗುಳಕ್ಕೂ ಅರ್ಹರಿವರು, ಸರ್ವರಿಂದಲೂ ಧೂಷಿತರು
– ಭಾಸ್ಕರ್ ಎಸ್.ಎನ್
ನೀವು ಎಂದಾದರೂ, ಯಾರ ಮೇಲಾದರೂ ನಿಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದೀರಾ? ಅದೂ ಸಹಾ ವಾಚಾಮಗೋಚರ..!
Interesting question..!
ಒಬ್ಬ ವ್ಯಕ್ತಿಯನ್ನು ಮನಸೋ ಇಚ್ಚೆ ಬೈಯಲು ಬೇಕಾದ ಅರ್ಹತೆಗಳೇನು? ಬೈಯಲಿರುವ ವ್ಯಕ್ತಿ ಬೈಸಿಕೊಳ್ಳುವ ವ್ಯಕ್ತಿಗಿಂದ ಅಧಿಕಾರದಲ್ಲಾಗಲೀ, ಅರ್ಹತೆಯಲ್ಲಾಗಲೀ, ಹುದ್ದೆಯಲ್ಲಾಗಲಿ..ಮೇಲ್ಮಟ್ಟದಲ್ಲಿದ್ದಾನೆಂಬ ಏಕ ಮಾತ್ರ ಕಾರಣಕ್ಕೆ ಆತ ಈ ಅರ್ಹತೆ ಗಳಿಸಿರುತ್ತಾನೆ ಎಂಬುದು ಎಷ್ಟರ ಮಟ್ಟಿಗೆ ಒಪ್ಪಿಗೆಗೆ ಅರ್ಹ. ಉನ್ನತ ಮಟ್ಟದಲ್ಲಿದ್ದ ಮಾತ್ರಕ್ಕೇ ಯಾರನ್ನಾದರೂ ಹೇಗಾದರೂ ಧೂಷಿಸುವ ಅರ್ಹತೆಯನ್ನು ಒಬ್ಬ ವ್ಯಕ್ತಿ ಗಳಿಸಿಕೊಳ್ಳುತ್ತಾನೆಯೇ? ಅಥವಾ ಹೀಗೆ ವರ್ತಿಸಿದರೆ ಮಾತ್ರ ಆ ಹುದ್ದೆಗೆ, ಅಧಿಕಾರಕ್ಕೆ ಆತ ಅರ್ಹನೇ?
ಖಂಡಿತ ಇಲ್ಲ. ಕಾನೂನಿನ ಚೌಕಟ್ಟಿಗೆ ಬಂದು ಹೇಳುವುದಾದರೆ, ಯಾವುದೇ ಹುದ್ದೆ, ಅಥವಾ ಯಾವುದೇ ಅಧಿಕಾರ ಹೊಂದಿರುವ ಒಬ್ಬ ವ್ಯಕ್ತಿ ತನ್ನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಮಾತ್ರ ಅರ್ಹ. ಆತ ಯಾವುದೇ ಹುದ್ದೆಯಲ್ಲಿರಲಿ ಅಥವಾ ಎಷ್ಟೇ ಅಧಿಕಾರವನ್ನು ಹೊಂದಿರಲಿ ಮತ್ತೊಬ್ಬ ವ್ಯಕ್ತಿಯನ್ನು ಮಾತಿನ ಮೂಲಕ ಧೂಷಿಸಿವ, ನಿಂದಿಸುವ ಅಥವಾ ಅವಾಛ್ಯ ಶಬ್ದಗಳಿಂದ ತೆಗಳುವುದು ಅಪರಾಧ. ಇದು ಕಾನೂನಿನ ವಿಷಯವಾಯಿತು. ಎಲ್ಲಾ ಕಾಲದಲ್ಲೂ ಎಲ್ಲಾ ಸಂಧರ್ಭಗಳಲ್ಲೂ ಕಾನೂನಿನ ಅನಿವಾರ್ಯತೆ ಅಥವಾ ಅವಶ್ಯಕತೆ ಬರುವುದಿಲ್ಲ ಅಲ್ಲವೇ?





