ಇದು ವಿಮರ್ಶೆಯಲ್ಲ ನನ್ನನಿಸಿಕೆ…
-ಕೆ.ಗುರುಪ್ರಸಾದ್
ಇತ್ತೀಚೆಗೆ ಒಂದು ವಿಷಯದ ಬಗ್ಗೆ ನಾ ಮೆಚ್ಚುವ ಇಬ್ಬರು ಲೇಖಕರ ಆರ್ಟಿಕಲ್ ಓದಿದೆ. ಒಂದು ಪ್ರತಾಪ್ ಸಿಂಹ ಅವರ ” ಮೇನಕೆ ಬಂದು ಕುಣಿಯುವವರೆಗೆ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇಯೇ ಆಯಿತು ” ಇನ್ನೊಂದು ಚಕ್ರವರ್ತಿ ಸೂಲಿಬೆಲೆಯವರ ” ಎರಡು ರಾಷ್ಟ್ರೀಯ ಪಕ್ಷ ಎಷ್ಟೊಂದು ಅಂತರ “. ಮೊದಲೇ ಹೇಳಿದಂತೆ ಎರಡೂ ಕರ್ನಾಟಕದಲ್ಲಿನ ಬಿಜೆಪಿಯ ಸೋಲಿನ ಕುರಿತಾಗೇ ಇರೋದು. ಪ್ರತಾಪ್ ಸಿಂಹ ಅವರು ಯಾವ ರೀತಿ ಸೋಲನುಭವಿಸಿತು ಅನ್ನೋದನ್ನ ವಿಶ್ಲೇಷಣೆ ಮಾಡಿದ್ದರೆ, ಸೂಲಿಬೆಲೆಯವರು ಎರಡು ಪಕ್ಷಗಳ ನಡುವಿನ ವ್ಯತ್ಯಾಸವನ್ನ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಈ ಎರಡು ಲೇಖನಗಳನ್ನ ಓದಿದ ನಂತರ ನನಗೆ ನನ್ನ ಅನಿಸಿಕೆಯನ್ನು ಹೇಳೋ ಮನಸಾಯಿತು ಹಾಗಾಗಿ ಈ ಸಣ್ಣ ಲೇಖನ…ಮೊದಲೇ ಶೀರ್ಷಿಕೆಯ ರೂಪದಲ್ಲಿ ಹೇಳಿದ್ದೇನೆ, ಇದು ವಿಮರ್ಶೆಯಲ್ಲ ಯಾಕೆಂದರೆ ಇಬ್ಬರೂ ತಮ್ಮ ಬರಹಗಳಿಂದ ಜನರ ಮಂತ್ರಮುಗ್ಧರನ್ನಾಗಿಸಿದವರು. ಅವರ ಕುರಿತಾಗಿ ವಿಮರ್ಶೆ ಮಾಡುವ ಯೋಗ್ಯತೆ ಎಳ್ಳಷ್ಟೂ ನನ್ನಲ್ಲಿಲ್ಲ ಅನ್ನೋದು ನನ್ನ ಧೃಡವಾದ ನಂಬಿಕೆ. ಹಾಗಾಗಿ ಇಲ್ಲಿರೋದು ಅದೇ ವಿಷಯದ ಕುರಿತಾದ ನನ್ನ ಅನಿಸಿಕೆ ಅಷ್ಟೇ..
ಮೊದಲಿಗೆ ಪ್ರತಾಪ್ ಸಿಂಹರ ಲೇಖನವನ್ನ ನೋಡೋದಾದ್ರೆ… ಬಿಜೆಪಿಯ ಸೋಲಿನ ಕುರಿತಾದ ಪ್ರತಾಪ್ ಅವರ ಅನಾಲಿಸಿಸ್ ಸೂಪರ್… ಎರಡು ಮಾತಿಲ್ಲದೆ ಒಪ್ಪಿಕೊಳ್ಳಬಹುದಾದ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಧಿಕಾರದ ಮೆಟ್ಟಲೇರುವ ಹೊತ್ತಲ್ಲಿ ಆದ ಸಣ್ಣ ಸಣ್ಣ ತಪ್ಪುಗಳು ಮುಂದೆ ಯಾವ ರೀತಿ ಯುಡಿಯೂರಪ್ಪ ಅವರನ್ನ ಕಾಡತೊಡಗಿತು, ಯಾವ ರೀತಿ ಹೈಕಮಾಂಡ್ ನ ನಡೆಗಳು ಯಡಿಯೂರಪ್ಪ ಅವರನ್ನ ತಪ್ಪು ದಾರಿ ಹಿಡಿಯುವಂತೆ ಪ್ರೇರೇಪಿಸಿತು ಅನ್ನೋದರ ಸ್ಪಷ್ಟ ಚಿತ್ರಣ ಕೊಡುತ್ತಾ ಹೋಗುತ್ತಾರೆ. ಆಪರೇಶನ್ ಕಮಲ, ರೆಡ್ಡಿಗಳ ದರ್ಪ, ಸುಷ್ಮಾರವರ ಮಾತುಗಳು, ಅನಂತ್ ಕುಮಾರರ ಒಳಸಂಚು ಹೀಗೆ…ಏಕಾಂಗಿತನವನ್ನ ಅನುಭವಿಸಿದ ಯಡಿಯೂರಪ್ಪನವರು ಎಡವಿದರು ಅಂದರು. ಇದೆಲ್ಲವನ್ನೂ ಒಪ್ಪೋಣ ಆದರೆ ಸ್ವಲ್ಪ ಹಿಂದಿನದನ್ನು ಮೆಲುಕು ಹಾಕಿದರೆ ಇದೇ ಪ್ರತಾಪ್ ಸಿಂಹ ಅವರು ಯಡಿಯೂರಪ್ಪ ಅವರನ್ನ ತಮ್ಮ ಎರಡು ಮೂರು ಲೇಖನದಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು…( ೨೦೦೮ ರ ಲೇಖನಗಳು.. ಅವರ ಬ್ಲಾಗ್ ನಲ್ಲಿ ಈಗಲೂ ಲಭ್ಯವಿದೆ) ವರ್ಗಾವಣೆಯ ಕುರಿತಾಗಿ, ನಿವೃತ್ತಿ ವಯಸ್ಸನ್ನು ಏರಿಸಿದ್ದುದರ ಕುರಿತಾಗಿ ಹೀಗೆ ಹಲವು ವಿಷಯಗಳಲ್ಲಿ ನೇರವಾಗಿ ದೋಷಾರೋಪಣೆ ಮಾಡಿದ್ದ ಪ್ರತಾಪರಿಗೆ ಈಗ ಯುಡಿಯೂರಪ್ಪನವರ ತಪ್ಪುಗಳು ಕೂಡ ಬಿಜೆಪಿಯ ಸೋಲಿಗೆ ಒಂದು ಕಾರಣ ಅಂತನ್ನಿಸದೇ ಇರೋದು ನನಗೇಕೋ ಸರಿ ಅನ್ನಿಸಲಿಲ್ಲ. ಯಡಿಯೂರಪ್ಪನವರ ಪುತ್ರ ಪ್ರೇಮದ ಬಗ್ಗೆ ಟೀಕಿಸಿದ್ದ ಪ್ರತಾಪರು ಯಾಕೋ ಇಲ್ಲಿ ಅದನ್ನ ಉಲ್ಲೇಖಿಸಲಿಲ್ಲ. ಬಿಜೆಪಿಯಿಂದ ಹೊರ ಬಂದ ಮೇಲೆ ಯಡಿಯೂರಪ್ಪನವರ ನಡೆಯ ಬಗೆಗೆ ಯಾವುದೇ ರೀತಿಯ ಮಾತುಗಳನ್ನಾಡದೇ “ಬಿಜೆಪಿ” ಯಡಿಯೂರಪ್ಪನವರ ಬಳಿ ಹೋಗಿ ಅವರನ್ನ ಕರೆತರುವ ಪ್ರಯತ್ನ ಮಾಡಬೇಕು ಅಂದರು.
ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ
– ಸಂತೋಶ್ ತಮ್ಮಯ್ಯ
ಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.
ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.





