ದಿನೇಶ್ ಅಮಿನ್ ಮಟ್ಟು ಅವರಿಗೊಂದು ಬಹಿರಂಗ ಪತ್ರ
– ಡಾ.ಟಿ.ಎನ್ ವಾಸುದೇವ ಮೂರ್ತಿ
ನಿಂದಂತಿ ತುಣ್ಹೀಮಾಸೀನಙï ನಿಂದಂತಿ ಬಹುಭಾಣೀನಙï |
ಮಿತಭಾಣಿನಂ ಪಿ ನಿಂದಂತಿ ನತ್ಥಿ ಲೋಕೇ ಅನಿಂದಿತೋ ||
(ಧಮ್ಮಪದ, ಕೋಧವಗ್ಗ 227)
(ಲೋಕದ ಜನ ಸುಮ್ಮನಿರುವವರನ್ನೂ ನಿಂದಿಸುವರು, ಹೆಚ್ಚು ಮಾತನಾಡುವವರನ್ನೂ ನಿಂದಿಸುವರು, ಮಿತಭಾಷಿಗಳನ್ನೂ ನಿಂದಿಸುವರು ಲೋಕದ ಜನರಿಂದ ನಿಂದನೆಗೆ ಒಳಗಾಗದವರೇ ಇಲ್ಲ)
ಮುಖವಿಲ್ಲದವರ ನಿಂದನೆಯ ಮಾತುಗಳಿಂದ ವಿಚಲಿತರಾಗಿರುವ ದಿನೇಶ್ ಅಮಿನ್ ಮಟ್ಟು ಅವರು ‘ನಿಲುಮೆ’ ಜಾಲತಾಣದ ಮೇಲೆ ದೂರು ನೀಡಿರುವುದಲ್ಲದೆ ಅದನ್ನು ಮುಚ್ಚಿಸಲು ಮುಂದಾಗಿರುವುದು ದುರದೃಷ್ಟಕರ. ಅವರ ಈ ಅಸಹನೆ ‘ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ನಾಚಿದರೆಂತಯ್ಯ’ ಎಂಬ ಅಕ್ಕನ ಮಾತುಗಳನ್ನು ನೆನಪಿಸುತ್ತದೆ.
ದಿನೇಶ್ ಅಮೀನ್ ಮಟ್ಟು “ಪತ್ರಿಕೋದ್ಯಮವು ಜಾಹಿರಾತಿನ ಹಂಗಿಗೊಳಗಾಗಿರುವುದರಿಂದ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳು ಭರವಸೆಯ ಅಭಿವ್ಯಕ್ತಿ ಮಾಧ್ಯಮವಾಗಬಲ್ಲದು” ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ.
ಆದರೆ ಸಾಮಾಜಿಕ ಜಾಲತಾಣ ವೃತ್ತಿಪರ ಪತ್ರಿಕೋದ್ಯಮಕ್ಕೆ ಪರ್ಯಾಯವಾಗಬಲ್ಲದೇ ಎಂಬ ಪ್ರಶ್ನೆ ಇನ್ನೂ ಬಗೆಹರಿಯದೆ ಅದೊಂದು ಚರ್ಚೆಯ ವಿಷಯವಾಗಿದೆ. ಸದ್ಯಕ್ಕೆ ಮುಖವಿಲ್ಲದವರಿಂದ ತಮಗಾದ ತೇಜೋವಧೆಯನ್ನು ಮರೆಮಾಚಿ, ತಾವು ನೀಡಿರುವ ಪೊಲೀಸ್ ದೂರಿನ ಸಮರ್ಥನೆಗೆ ಒಂದು ಗುರಾಣಿಯಂತೆ ಅವರು ಸದರಿ ಅಭಿಪ್ರಾಯವನ್ನು ಪ್ರಚಾರ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಅಷ್ಟಕ್ಕೂ ಅದೇನೂ ತೇಜೋವಧೆಯಲ್ಲ, ವಿವೇಕಾನಂದರ ಕುರಿತು ಅವರು ಬರೆದದ್ದು ಅನ್ಯ ಲೇಖಕನೊಬ್ಬನ ಅನುವಾದಿತ ಸಾಲುಗಳೇ ವಿನಾ ಅದೇನೂ ಅವರ ವ್ಯಕ್ತಿಗತ ಅಭಿಪ್ರಾಯವಲ್ಲ ಎಂಬ ಅರಿವಿರದ ಓದುಗರು ಮಾಡುವ ಬುಡವಿರದ ಆರೋಪಗಳನ್ನು ತೇಜೋವಧೆ ಎಂದೇಕೆ ಭಾವಿಸಬೇಕು? “ಒಂದು ಜಾಲತಾಣವನ್ನು ವಾಮಮಾರ್ಗದಿಂದಲೇ ಹೊಸಕಬಲ್ಲೆನಾದರೂ ನೇರವಾಗಿಯೇ ಅದರ ವಿರುದ್ಧ ಧ್ವನಿಯೆತ್ತಿದ್ದೇನೆ” ಎಂಬರ್ಥದ ಅವರ ಮಾತುಗಳಲ್ಲಿ ಅವರ ಪ್ರಾಮಾಣಿಕತೆ ಮತ್ತು ಸಾಚಾತನ ವಾಚ್ಯವಾಗಿ ಪ್ರದರ್ಶಿತವಾಗುತ್ತಿದ್ದರೂ ಆ ಮಾತುಗಳ ಹಿಂದೆ ಕ್ರೌರ್ಯವೇ ಇಣುಕುತ್ತಿರುವಂತೆ ಕಾಣಿಸುತ್ತದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ “ನಿನ್ನ ಅಭಿಪ್ರಾಯದೊಂದಿಗೆ ನನ್ನ ಸಹಮತವಿಲ್ಲದಿದ್ದರೂ ನಿನ್ನ ಅಭಿಪ್ರಾಯವನ್ನು ಹತ್ತಿಕ್ಕುವ ಶಕ್ತಿಗಳ ವಿರುದ್ಧ ಪ್ರಾಣವನ್ನೇ ಪಣವಿತ್ತು ಹೋರಾಡುತ್ತೇನೆ” ಎಂಬ ವೋಲ್ಟೈರ್‍ನ ಮಾತುಗಳನ್ನು ಕಲಿಸುವ ಹಿರಿಯರು ಇಂತಹ ಕಠಿಣಕ್ರಮಕ್ಕೆ ಮುಂದಾಗುವಂತೆ ಪ್ರೇರೇಪಿಸಿರುವ ಬೆಳವಣಿಗೆಗಳನ್ನು ಕಂಡು ದಿಗಿಲಾಗುತ್ತದೆ.





