ಕುಲಾಂತರಿ ಚರ್ಚೆ: ಇನ್ನೊಂದು ಮುಖ
– ಪ್ರಸನ್ನ ಆಡುವಳ್ಳಿ,ಧಾರವಾಡ
ಕುಲಾಂತರಿಗಳ ಬಗ್ಗೆ “ಕನ್ನಡಪ್ರಭ” ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.
ವಿಜ್ನಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ನಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ ದೇಶದ ಪ್ರತಿಷ್ಟಿತ ಆರು ವಿಜ್ನಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ನಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ನಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?
ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!





