ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?
– ರಾಕೇಶ್ ಶೆಟ್ಟಿ
ಮಂಗಳೂರು ಹೋಂ-ಸ್ಟೇ ಮೇಲೆ ದಾಳಿ ಮಾಡಿದವರನ್ನು ‘ಆಧುನಿಕ ದುಶ್ಯಾಸನರು’ ಅಂದಾಗ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೈ ಮುಟ್ಟುವುದು,ಹೊಡೆಯುವುದು ಇಂತ ವಿಕೃತಿ ಮಾಡುವವರನ್ನು ದುಶ್ಯಾಸನರೆಂದರೆ ತಪ್ಪಿಲ್ಲ ಅನ್ನಿಸುತ್ತದೆ ಅನ್ನಿಸಲೇಬೇಕು.ಆದರೆ “ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?”.ಹಾಗಂತ ದೃತರಾಷ್ಟ್ರ,ದುರ್ಯೋಧನರ ನೆಪವೊಡ್ಡಿ ದುಶ್ಯಾಸನರ ನಡವಳಿಕೆಯನ್ನು ಬೆಂಬಲಿಸಬೇಕಿಲ್ಲ,ಬೆಂಬಲಿಸುವುದು ಆರೋಗ್ಯವಂತ ಸಮಾಜದ ಲಕ್ಷಣವೂ ಅಲ್ಲ. ಅಂದು ಮಹಾಭಾರತದ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಂತೆ ಅಪ್ಪಣೆ ಕೊಟ್ಟಿದ್ದು ದುರ್ಯೋಧನ ಮತ್ತು ಅದನ್ನ ಕೇಳಿಯೂ ತೆಪ್ಪಗೆ ಕೂತಿದ್ದು ಅಪ್ಪ ಅನ್ನಿಸಿಕೊಂಡ ಧೃತರಾಷ್ಟ್ರ ಅಲ್ಲವೇ? ಆಗಲೂ ಈಗಿನಂತೆ ಎಲ್ಲ ಗೊತ್ತಿದ್ದೂ ನಮ್ಮ ಸೆಕ್ಯುಲರ್ಗಳಂತೆ ಕಂಡು ಕಾಣದಂತಿದ್ದವರು ಉಳಿದೆಲ್ಲರು.ಒಬ್ಬ ಶ್ರೀ ಕೃಷ್ಣನನ್ನು ಬಿಟ್ಟು..! ಇಂದಿನ ಭಾರತದಲ್ಲಿ ದುಶ್ಯಾಸನರನ್ನೇನೋ ಮಾಧ್ಯಮಗಳು ತೋರಿಸಿವೆ.ಆದರೆ ಧೃತರಾಷ್ಟ್ರ,ದುರ್ಯೋಧನರೆಲ್ಲಿ? ದುಶ್ಯಾಸನ ಅನ್ನುವವನ ಹೆಸರು ಈ ಪರಿ (ಕು)ಖ್ಯಾತಿ ಪಡೆಯಲು ಕಾರಣ ವಸ್ತ್ರಾಪಹರಣ ಮಾಡಲು ಹೇಳಿದ ಅವನಣ್ಣ ದುರ್ಯೋಧನನಲ್ಲವೇ? ದುರ್ಯೋಧನ,ದುಶ್ಯಾಸನರಿಗೆ ಮೌನ ಸಮ್ಮತಿ ಕೊಟ್ಟ ದ್ರುತರಾಷ್ಟ್ರನು ಸೇರಿ ಇಡಿ ಕುರು ಸಭೆಯಲ್ಲವೇ? ಹಾಗಿದ್ದರೆ ಕರಾವಳಿಯ ಮಹಾಭಾರತದಲ್ಲಿ ದುಶ್ಯಾಸನರ ಸೃಷ್ಟಿಗೆ ಕಾರಣವಾದ ದುರ್ಯೋಧನ ಯಾರು?
ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ….
-ಡಾ. ಅಶೋಕ್ ಕೆ.ಆರ್
ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?
ಅಂತರ್ಜಾಲದ ಪರಿಣಾಮವಾಗಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸುಲಭವಾಗಿದೆ. ಫೇಸ್ ಬುಕ್ಕಿನಲ್ಲಿ, ವಿವಿಧ ಬ್ಲಾಗುಗಳಲ್ಲಿ, ಹೊಸ ದಿಗಂತದಂತಹ ಪತ್ರಿಕೆಗಳಲ್ಲಿ ಪಡೀಲಿನ ಘಟನೆಯ ಬಗ್ಗೆ ಬಹುತೇಕ ವಿದ್ಯಾವಂತರೇ ಬರೆಯುತ್ತಿರುವ ಲೇಖನ, ಕಮೆಂಟುಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೋಷವಿದೆಯೇನೋ ಎಂಬ ಅನುಮಾನ ಕಾಡುತ್ತದೆ. “ಮಂಡ್ಯದಲ್ಲಿ ‘ಹಿಂದೂ’ ಹೆಣ್ಣುಮಗಳನ್ನು ನಾಲ್ವರು ‘ಮುಸ್ಲಿಮರು’ ಚಲಿಸುವ ರೈಲಿನಿಂದ ಹೊರತಳ್ಳಿದುದನ್ನು ಯಾಕೆ ದೊಡ್ಡ ಸುದ್ದಿ ಮಾಡಲಿಲ್ಲ? ಅಸ್ಸಾಮಿನಲ್ಲಿ ಬೋಡೋ ಹಿಂದೂಗಳನ್ನು ಬಾಂಗ್ಲಾ ಮುಸ್ಲಿಮರು ಶೋಷಿಸುತ್ತಿರುವುದ್ಯಾಕೆ?” ಎಂಬಂಥಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ!





