ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು
-ಮು.ಅ ಶ್ರೀರಂಗ,ಬೆಂಗಳೂರು
ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ ಯಜಮಾನನ ತಂದೆಯದೋ ತಾಯಿಯದೋ ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು. ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು 
ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು
– ಎ.ವಿ.ಜಿ ರಾವ್
ವಿಜ್ಞಾನ ವಿಧಾನದಲ್ಲಿ (ಸೈಂಟಿಫಿಕ್ ಮೆತಡ್) ತರಬೇತಿ ನೀಡುವುದು, ವೈಜ್ಞಾನಿಕ ಮನೋಧರ್ಮ (ಸೈಂಟಿಫಿಕ್ ಆಟಿಟ್ಯೂಡ್) ಬೆಳೆಸುವುದು, ವೈಜ್ಞಾನಿಕ ಪ್ರವೃತ್ತಿ (ಸೈಂಟಿಫಿಸಿಟಿ) ಬೆಳೆಸುವುದು, ಮೂಢನಂಬಿಕೆಗಳನ್ನು ತೊಡೆದು ಹಾಕುವುದು – ಇವೆಲ್ಲ ಪದಪುಂಜಗಳ ಬಳಕೆ ಇಂದು ಫ್ಯಾಷನ್ ಆಗಿದ್ದರೂ ಅವುಗಳ ಅರ್ಥ ಅನೇಕರಿಗೆ ಮನೋಗತವಾಗಿಲ್ಲ ಎಂಬುದು ನನ್ನ ಅನಿಸಿಕೆ. ವೈಜ್ಞಾನಿಕ ಮನೋಧರ್ಮವನ್ನು ಜನಸಾಮಾನ್ಯರಲ್ಲಿ ಬೆಳೆಸುವ ಕಾಯಕದಲ್ಲಿ ಪ್ರಾಮಾಣಿ ‘ವೈಜ್ನಾನಿಕ’, ‘ಅವೈಜ್ಞಾನಿಕ’ – ಈ ಪದಗಳನ್ನು ಅನುಕ್ರಮವಾಗಿ ಹೊಗಳಿಕೆಯ ಮತ್ತು ತೆಗಳಿಕೆಯ ಪದಗಳಾಗಿ ಬಳಸುತ್ತಿರುವವರಿಗಂತೂ ಖಂಡಿತ ಆಗಿಲ್ಲ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೂ ಶಿಕ್ಷಕರಿಗೂ ಇವುಗಳ ಸ್ಪಷ್ಟ ಪರಿಕಲ್ಪನೆ ಇದ್ದರೆ ವಸ್ತುಸ್ಥಿತಿಯಲ್ಲಿ ಕೊಂಚ ಸುಧಾರಣೆ ಆದೀತು.
ಅತಿ ಸಂಕ್ಷಿಪ್ತವಾಗಿ ಇವನ್ನು ಇಂತು ವ್ಯಾಖ್ಯಾನಿಸ ಬಹುದು – ವಸ್ತುಪ್ರಪಂಚದ ಆಗುಹೋಗುಗಳ ನಿರ್ಧಾರಕ ನಿಯಮಗಳನ್ನು ಆವಿಷ್ಕರಿಸುವುದು ಪ್ರಧಾನ ಗುರಿಯಾಗಿರುವ ನಿಸರ್ಗವಿಜ್ಞಾನಗಳಲ್ಲಿ ಜ್ಞಾನ್ವೇಷಣೆಗೆ ಅನುಸರಿಸುವ ವಿಶಿಷ್ಟ ವಿಧಾನವೇ ವಿಜ್ಞಾನ ವಿಧಾನ (ಇದನ್ನು ವಿಜ್ಞಾನ ಮಾರ್ಗ, ವೈಜ್ಞಾನಿಕ ವಿಧಾನ ಎಂದು ಉಲ್ಲೇಖಿಸುವುದೂ ಉಂಟು). ಈ ವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ತಳೆದಿರಲೇಬೇಕಾದ ಮನೋಭಾವವೇ ವೈಜ್ಞಾನಿಕ ಮನೋಧರ್ಮ. ವಿಜ್ಞಾನ ವಿಧಾನವೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ವಿಧಾನ ಎಂಬ ಅಚಲ ವಿಶ್ವಾಸದಿಂದ ಎಂಥ ಅಡ್ಡಿಆತಂಕಗಳು ಎದುರಾದರೂ ವೈಜ್ಞಾನಿಕ ಮನೋಧರ್ಮವನ್ನು ಕೈಬಿಡದೆಯೇ ಮುಂದುವರಿಯುವ ಪ್ರವೃತ್ತಿಯೇ ವೈಜ್ಞಾನಿಕ ಪ್ರವೃತ್ತಿ.
ಮೂಢನಂಬಿಕೆಗಳು ಅಂಧಾನುಕರಣೆಯೇ ?
-ರಾವ್ ಎವಿಜಿ
ಮೂಢನಂಬಿಕೆ ಎಂದರೇನು? ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಲು ಕಾರಣವಾದದ್ದು ಹಾಲಿ ಅಸ್ತಿತ್ವದಲ್ಲಿ ಇರುವ ಕೆಲವು ಮತೀಯ ಆಚರಣೆಗಳ ಪರ-ವಿರೋಧ ವಾದಗಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನ ಸೆಳೆದ ಪತ್ರಿಕೆಗಳಲ್ಲಿ ವರದಿ ಆದ ಮತೀಯ ಆಚರಣೆಗಳು ಇವು:
(೧) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಲು ಹಿಂದಿನಿಂದ ಆಚರಣೆಯಲ್ಲಿ ಇರುವ ‘ಬ್ರಾಹ್ಮಣರು ಉಂಡೆದ್ದ ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ ಪದ್ಧತಿ’
(೨) ಗುಲ್ಬರ್ಗ ಜಿಲ್ಲೆಯಲ್ಲಿ ಆಚರಣೆಯಲ್ಲಿ ಇರುವ ‘ಸೂರ್ಯಗ್ರಹಣ ಕಾಲದಲ್ಲಿ ಸುಮಾರು ೬ ತಾಸು ಕಾಲ ಮಕ್ಕಳನ್ನು ಆಂಗವೈಕಲ್ಯದ ನಿವಾರಣೆಗಾಗಿ ಕುತ್ತಿಗೆಯ ತನಕ ಭೂಮಿಯಲ್ಲಿ ಹುಗಿದಿರಇಸುವ ಪದ್ಧತಿ’
(೩) ಮಹಾರಾಷ್ಟ್ರದ ಶೋಲಾಪುರದಲ್ಲಿ ಆಚರಣೆಯಲ್ಲಿ ಇರುವ ‘ಸುಮಾರು ೫೦ ಅಡಿ ಎತ್ತರದಿಂದ ಹಸುಗೂಸುಗಳನ್ನು ಕೆಳಗೆ ಬಿಗಯಾಗಿ ಎಳದು ಹಿಡಿದುಕೊಂಡಿರುವ ಬೆಡ್ ಶೀಟಿಗೆ ಎತ್ತಿ ಹಾಕುವ ಪದ್ಧತಿ’
(೪) ತಮಿಳುನಾಡಿನಲ್ಲಿ ಆಚರಣೆಯಲ್ಲಿ ಇರುವ ‘ಗಲ್ಲದ ಮೂಲಕ ಚೂಪಾದ ದಬ್ಬಳದಂಥ ಸಾಧನಗಳನ್ನು, ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಆವೇಶದಿಂದ ಕುಣಿಯುವ ಕಾವಡಿ ಆಟಮ್ ಪದ್ಧತಿ’
(೫) ಭಾರತದ ಗಡಿಗೆ ತಾಗಿಕೊಂಡಿರುವ ನೇಪಾಳದ ಹಳ್ಳಿಯೊಂದರಲ್ಲಿ ೫ ವರ್ಷಕ್ಕೊಮ್ಮೆ ಜರಗುವ ಹಿಂದೂ ಹಬ್ಬದಲ್ಲಿ ಸುಮಾರು ೨೫೦೦೦೦ ಕ್ಕೂ ಅಧಿಕ ಪ್ರಾಣಿಗಳನ್ನು (ವಿಶೇಷತಃ ಎಮ್ಮೆಗಳನ್ನು) ಬಲಿ ಕೊಡುವ ಪದ್ಧತಿ
(೬) ಒರಿಸ್ಸಾದ ಕೆಲವೆಡೆ ಆಚರಣೆಯಲ್ಲಿ ಇರುವ ‘ಪುಟ್ಟ ಬಾಲಕರನ್ನು ನಾಯಿಯೊಂದಿಗೆ ಮದುವೆ ಮಾಡುವ ಪದ್ಧತಿ’
(೭) ಚಾಮರಾಜನಗರ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಷಷ್ಠಿಯಂದು ಆಚರಿಸುವ ‘ಹುತ್ತಕ್ಕೆ ಪೂಜೆ ಸಲ್ಲಿಸಿ ಅದರ ಮೇಲೆ ಒಂದು ಕೋಳಿಮೊಟ್ಟೆ ಇಟ್ಟು (ಸಾಮಾನ್ಯವಾಗಿ ಹೆಂಗಸರು) ಕೋಳಿಯ ಕತ್ತು ಕೊಯ್ದು ಬಿಸಿರಕ್ತ ಸುರಿಯುವ ಪದ್ಧತಿ’
ಇಲ್ಲಿ ನಮೂದಿಸಿರುವ ಪ್ರತೀ ಆಚರಣೆಯನ್ನು ಸಮರ್ಥಿಸಿಕೊಳ್ಳಲು ‘ಅನಾದಿಕಾಲದಿಂದಲೂ ಆಚರಣೆಯಲ್ಲಿದೆ’, ‘ಆಚರಣೆಯಿಂದ ಅನೇಕರಿಗೆ ಒಳ್ಳೆಯದಾಗಿದೆ’, ‘ಅನೇಕರಿಗೆ ರೋಗ ವಾಸಿ ಆಗಿದೆ’ ‘ನಮಗೆ ಮನಶ್ಶಾಂತಿ ದೊರೆತಿದೆ’, ‘ಇತರರಿಗೆ ತೊಂದರೆ ಕೊಡುವುದಿಲ್ಲ’ ಮುಂತಾದ ವಾದಗಳನ್ನು ಮುಂದಿಡುತ್ತಾರೆ. ಇವುಗಳನ್ನು ‘ಆಧ್ಯಾತ್ಮಿಕ ಪ್ರತೀಕಗಳಾಗಿ’ ಏಕೆ ಪರಿಗಣಿಸ ಬೇಕು ಅನ್ನುವುದನ್ನು ವಿವರಿಸುವುದೂ ಉಂಟು. ಇವು ‘ಅಮಾನವೀಯ’, ‘ಅನಾಗರೀಕ’. ‘ವೈದಿಕ ಸಂಪ್ರದಾಯವಾದಿಗಳು ಅರ್ಥಾತ್ ಬ್ರಾಹ್ಮಣ ವರ್ಗದವರು ಹಿಂದುಳಿದವರನ್ನೂ ದಲಿತರನ್ನೂ ಶೋಷಿಸಲೋಸುಗವೇ ಹುಟ್ಟುಹಾಕಿ ಪೋಷಿಸಿಕೊಂಡು ಬಂದಿರುವ ಮೂಢನಂಬಿಕೆಗಳು’ ಎಂದೆಲ್ಲ ವಿರೋಧಿಸುವವರೂ ಇದ್ದಾರೆ. ಇರುವ ಅಸಂಖ್ಯ ಸ್ವಘೋಷಿತ ಮತ್ತು ಪರಂಪರಾಗತ ಮಠಾಧಿಪತಿಗಳ ಪೈಕಿ ಬಹುತೇಕರು ಈ ಕುರಿತು ‘ದಿವ್ಯಮೌನ’ ತಳೆದಿದ್ದಾರೆ, ಕೆಲವರು ‘ಇವೆಲ್ಲ ನಂಬಿಕೆಯ ಪ್ರಶ್ನೆಗಳು, ಬಲು ಹಿಂದಿನಿಂದ ಪರಂಪರಾಗತ ನಂಬಿಕೆಯನ್ನು ಪ್ರಶ್ನಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ’, ಆತ್ಮಸಂತೋಷಕ್ಕಾಗಿ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಸರಿಯೇ?’ ಅನ್ನುವುದರ ಮೂಲಕ ಈ ಆಚರಣೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ. ಮತ್ತಷ್ಟು ಓದು 




