ನಾಯಕರಿಗೊಂದು ದಿಕ್ಸೂಚಿ…
– ಮಧುಚಂದ್ರ ಭದ್ರಾವತಿ
ಸ್ವತಂತ್ರ ಪೂರ್ವದ ಹಿಂದೆ ನಡೆದ ಘಟನೆ,
ಮುಂಬೈ ನಗರದ ರೈಲ್ವೆ ನಿಲ್ದಾಣ, ಬೆಂಗಳೂರಿನಿಂದ ರೈಲು ಬಂದು ನಿಂತಿತ್ತು. ಮೈಸೂರಿನ ದಿವಾನರಾದ ಮಾಧವರಾಯರು ಕಾರ್ಯನಿಮಿತ್ತವಾಗಿ ದೆಹಲಿಗೆ ಹೊರಟಿದ್ದರು. ಮುಂಬೈ ರೈಲ್ವೆ ನಿಲ್ದಾಣದಲ್ಲಿ ದೆಹಲಿಗೆ ಹೋಗಲು ರೈಲನ್ನು ಬದಲಿಸಬೇಕಿತ್ತು. ದೆಹಲಿಗೆ ಹೊರಡುವ ರೈಲು ಇನ್ನು ಬಂದಿರಲಿಲ್ಲ ಸುಮಾರು ೫ ಘಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ಆಗ ಮೈಸೂರಿನ ದಿವಾನರು ಬದಲಿ ರೈಲು ಬರುವ ಒಳಗೆ ಪೇಟೆ ಸುತ್ತಿ ಬರುವ ಯೋಚನೆ ಮಾಡಿ ಹೊರಟು ಹೋದರು.
ಮೈಸೂರಿನ ದಿವಾನರ ಪ್ರಯಾಣವನ್ನು ಪತ್ರಿಕೆಯ ಮೂಲಕ ಅರಿತಿದ್ದ, ಸುಮಾರು ೮೨ ವರ್ಷದ ವ್ಯಕ್ತಿಯೊಬ್ಬರು ದಿವಾನರನ್ನು ಕಾಣಲು ಬಂದರು. ಅವರಿಗೆ ದಿವಾನರು ಇಲ್ಲದಿರುವುದು ಅವರ ಆಪ್ತಕಾರ್ಯದರ್ಶಿಯಿಂದ ತಿಳಿಯಿತು. ಅ ೮೨ ವರ್ಷದ ವ್ಯಕ್ತಿಯನ್ನು ಗುರುತಿಸಿದ ದಿವಾನರ ಆಪ್ತಕಾರ್ಯದರ್ಶಿ ಅವರನ್ನು ದಿವಾನರ ಬೋಗಿಯೊಳಗೆ ಕುಳಿತು ಕೊಳ್ಳಲು ಮನವಿ ಮಾಡಿದರು.
” ದಿವಾನರು ಇಲ್ಲದಾಗ ಅವರ ಕೋಣೆಯನ್ನು ಪ್ರವೇಶಿಸುವುದು ಉಚಿತವಲ್ಲ ” ಎಂದು ಹೇಳಿ ನಯವಾಗಿ ತಿರಸ್ಕರಿಸಿದರು ಅ ಹಿರಿಯರು.
ದಿವಾನರು ದೆಹಲಿಗೆ ಹೊರಡುವ ಮುನ್ನ ಆಂಗ್ಲರ ನೀತಿಯನ್ನು ದಿಕ್ಕರಿಸಿದ ಮೈಸೂರಿನ ಜನತೆ , ಅಂಗ್ಲರ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು. ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಅಂಚೆ ಕಛೇರಿಗೆ ಬೆಂಕಿ ಹಚ್ಚಿದ್ದರು , ರೈಲ್ವೆ ಕಂಬಿ ಕಿತ್ತರು , ಪ್ರತಿಭಟನೆ ಇನ್ನಷ್ಟು ಉಗ್ರವಾಯಿತು. ಅಗ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡು ಹಾರಿಸಿದರು, ಹಲವಾರು ನಾಗರೀಕರು ಪ್ರಾಣ ತೆತ್ತರು.





